Tag: Containment Zone

  • ಕಂಟೈನ್ಮೆಂಟ್ ಝೋನ್ ಹೋಮ್‍ನಲ್ಲಿ ಸ್ನೇಹಿತರೊಂದಿಗೆ ಸೋಂಕಿತ ಪಾರ್ಟಿ

    ಕಂಟೈನ್ಮೆಂಟ್ ಝೋನ್ ಹೋಮ್‍ನಲ್ಲಿ ಸ್ನೇಹಿತರೊಂದಿಗೆ ಸೋಂಕಿತ ಪಾರ್ಟಿ

    ಭೋಪಾಲ್: ಕೋವಿಡ್ ರೋಗಿಯೊಬ್ಬರು ಸ್ನೇಹಿತರೊಂದಿಗೆ ಪಾರ್ಟಿ ಮಾಡಿರುವ ಘಟನೆ ರತ್ಲಾಮ್ ನಗರದ ನಿರಾಲ್ ಕಾಲನಿಯ ಕಂಟೈನ್ಮೆಂಟ್ ಝೋನ್‍ನಲ್ಲಿರುವ ಮನೆಯೊಂದರಲ್ಲಿ ನಡೆದಿದೆ.

    ಕೋವಿಡ್-19 ಪಾಸಿಟಿವ್ ವ್ಯಕ್ತಿ ಮತ್ತು ಅವರ ಸ್ನೇಹಿತರು ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು. (ಎಮ್‍ಸಿಆರ್) ನಗರ ಪಾಲಿಕಾ ನಿಗಮ ಸಿಬ್ಬಂದಿಗೆ ಭಾನುವಾರ ಇದರ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅಲ್ಲಿಗೆ ತಪಾಸಣಾ ತಂಡವನ್ನು ಕಳುಹಿಸಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಎಲ್ಲರನ್ನೂ ಕೋವಿಡ್ ಕೇರ್ ಸೆಂಟರ್‌ ಗೆ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಗೋಪಾಲ್ ಸೋನಿ ತಿಳಿಸಿದರು. ಇದನ್ನೂ ಓದಿ: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್‌ ನಿಧನ

    ಘಟನೆ ಕುರಿತು ಇಂಡಸ್ಟ್ರಿಯಲ್ ಏರಿಯಾ ಪೊಲೀಸ್ ಠಾಣೆಯಿಂದ ಕೋವಿಡ್ ತಡೆಗಟ್ಟುವ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

  • 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ – ಕಂಟೈನ್ಮೆಂಟ್ ಝೋನ್ ಆಯ್ತು ವೃದ್ಧಾಶ್ರಮ

    62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ – ಕಂಟೈನ್ಮೆಂಟ್ ಝೋನ್ ಆಯ್ತು ವೃದ್ಧಾಶ್ರಮ

    ಮುಂಬೈ: 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಮಹಾರಾಷ್ಟ್ರದ ಥಾಣೆ ಜಿಲ್ಲಾಡಳಿತ ವೃದ್ಧಾಶ್ರಮವನ್ನು ಕಂಟೈನ್ಮೆಂಟ್ ಝೋನ್ ಮಾಡಿದೆ.

    ಮಹಾರಾಷ್ಟ್ರದ ಥಾಣೆ ಜಿಲ್ಲೆಯ ‘ಮಾತೋಶ್ರೀ ವೃದ್ಧಾಶ್ರಮ’ದ 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಈ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ. ಪ್ರಸ್ತುತ ಈ 62 ನಿವಾಸಿಗಳನ್ನು ಹತ್ತಿರದ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಆಸ್ಪತ್ರೆಗೆ ದಾಖಲಾದ 62 ರೋಗಿಗಳಲ್ಲಿ 37 ಪುರುಷರು ಮತ್ತು 25 ಮಹಿಳೆಯರು. ಇವರಲ್ಲಿ 41 ಜನರು ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ. ಎಲ್ಲ ರೋಗಿಗಳನ್ನು ನಾವು ಗಮನಿಸುತ್ತಿದ್ದು, ಆಸ್ಪತ್ರೆಯ ವೈದ್ಯಕೀಯ ತಂಡವು ಹಗಲು-ರಾತ್ರಿ ಅವರನ್ನು ನೋಡಿಕೊಳ್ಳುತ್ತಿದೆ. 10 ದಿನಗಳ ಕಾಲ ಇವರನ್ನು ಆಸ್ಪತ್ರೆಯಲ್ಲಿ ಇರಿಸಲಾಗುವುದು. ವೃದ್ಧಾಶ್ರಮದಿಂದ ಇತರ ಐದು ಶಂಕಿತ ಸೋಂಕಿತರನ್ನು ಆಸ್ಪತ್ರೆಯ ಸಾಮಾನ್ಯ ವಾರ್ಡ್‍ಗೆ ದಾಖಲಿಸಲಾಗಿದೆ. 15 ಜನರ ಪರೀಕ್ಷಾ ಮಾದರಿಗಳನ್ನು ಜಿನೋಮ್ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿ ತಿಳಿಸಿದರು. ಇದನ್ನೂ ಓದಿ: ಇಂದು ಕರ್ನಾಟಕದಲ್ಲಿ 257 ಪಾಸಿಟಿವ್, 5 ಸಾವು

    ಸಿವಿಲ್ ಸರ್ಜನ್ ಡಾ ಕೈಲಾಸ್ ಪವಾರ್ ಈ ಕುರಿತು ಮಾತನಾಡಿದ್ದು, ದಾಖಲಾದ ನಾಲ್ವರನ್ನು ಐಸಿಯುನಲ್ಲಿ ಇಡಲಾಗಿದ್ದು, ಆಮ್ಲಜನಕದ ಸಹಾಯದಿಂದ ಅವರು ಬದುಕಿದ್ದಾರೆ. ಈ ನಿವಾಸಿಗಳು ‘ಮಾತೋಶ್ರೀ ವೃದ್ಧಾಶ್ರಮ’ ದವರಾಗಿದ್ದು, 2 ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ವೃದ್ಧಾಶ್ರಮದಲ್ಲಿ 55 ಹಿರಿಯ ನಾಗರಿಕರು, 5 ಜನ ನೌಕರರು ಮತ್ತು ಒಂದೂವರೆ ವರ್ಷದ ಮಗು ಸೇರಿದಂತೆ ಸಿಬ್ಬಂದಿಯ ಎರಡು ಕುಟುಂಬದ ಸದಸ್ಯರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವಾರಾಂತ್ಯದಲ್ಲಿ ಪಾಸಿಟಿವ್ ಬಂದ ಹಿನ್ನೆಲೆ ಅವರೆಲ್ಲರನ್ನು ಥಾಣೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದರು.

    ಜಿಲ್ಲಾಡಳಿತವು ಪ್ರಸ್ತುತ ಭಿವಂಡಿ ತಹಸಿಲ್‍ನ ಸೊರ್ಗಾಂವ್ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದೆ. ಹಿರಿಯ ನಾಗರಿಕರು ವೃದ್ಧಾಶ್ರಮದಲ್ಲಿ ಒಟ್ಟಿಗೆ ಓಡಾಡುವುದು, ತಿನ್ನುವುದು ಮತ್ತು ಹಲವು ಚಟುವಟಿಕೆಗಳನ್ನು ಒಟ್ಟಿಗೆ ನಡೆಸುವುದರಿಂದ ಸೋಂಕು ಇವರಿಗೆ ಬೇಗ ಹರಡಿಕೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: ಗುರುದ್ವಾರದಲ್ಲಿ ಫೋಟೋಶೂಟ್ – ಮಾಡೆಲ್ ವಿರುದ್ಧ ನೆಟ್ಟಿಗರು ಗರಂ 

  • ಪರಿಷ್ಕೃತ ಮಾರ್ಗಸೂಚಿ- 14 ದಿನಗಳ ಬಳಿಕ ಕಂಟೈನ್‍ಮೆಂಟ್ ಝೋನ್ ಯಥಾಸ್ಥಿತಿಗೆ

    ಪರಿಷ್ಕೃತ ಮಾರ್ಗಸೂಚಿ- 14 ದಿನಗಳ ಬಳಿಕ ಕಂಟೈನ್‍ಮೆಂಟ್ ಝೋನ್ ಯಥಾಸ್ಥಿತಿಗೆ

    – ಹ್ಯಾಂಡ್ ಸ್ಟಾಪಿಂಗ್ ಕೈಬಿಟ್ಟ ಬಿಬಿಎಂಪಿ

    ಬೆಂಗಳೂರು: ರಾಜ್ಯ ಸರ್ಕಾರ ಕಂಟೈನ್‍ಮೆಂಟ್ ಝೋನ್ ಕುರಿತಂತೆ ಪರಿಷ್ಕøತ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, 28 ದಿನಗಳಿದ್ದ ಕಂಟೈನ್‍ಮೆಂಟ್ ಝೋನ್ ಅವಧಿಯನ್ನು 14 ದಿನಕ್ಕೆ ಇಳಿಸಿದೆ.

    ಹೊಸ ಮಾರ್ಗಸೂಚಿ ಅನ್ವಯ ಅಪಾರ್ಟ್ ಮೆಂಟ್, ಸ್ಲಂ, ಸ್ವತಂತ್ರವಾಗಿರುವ ಮನೆಯಲ್ಲಿ ಒಂದೊಂದು ಕೊರೊನಾ ಪ್ರಕರಣ ವರದಿಯಾದರೆ ಆ ಪ್ರದೇಶದಲ್ಲಿ ಬ್ಯಾರಿಕೇಡ್ ಆಳವಡಿಸುವ ಅವಶ್ಯಕತೆ ಇಲ್ಲ. ಆದರೆ ಬಫರ್ ಝೋನ್ ಹಾಗೂ ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ವಿಶೇಷ ಕಣ್ಗಾವಲು ತಂಡ ಇರಬೇಕು ಎಂದು ಸೂಚಿಸಿದೆ.

    28 ದಿನಗಳ ಕಾಲ ಕೊರೊನಾ ಪ್ರಕರಣ ಏರಿಯಾದಲ್ಲಿ ಅಥವಾ ಗ್ರಾಮೀಣ ಭಾಗದಲ್ಲಿ ಪತ್ತೆಯಾಗದೆ ಇದ್ದರೆ ಆ ಪ್ರದೇಶವನ್ನು ಕೊರೊನಾ ಫ್ರೀ ಏರಿಯಾ/ ಹಳ್ಳಿ ಎಂದು ಘೋಷಣೆ ಮಾಡಿಕೊಳ್ಳಬಹುದಾಗಿದೆ.

    ಅಪಾರ್ಟ್ ಮೆಂಟ್/ ಫ್ಲ್ಯಾಟ್ ನಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದರೇ ಆ ಫ್ಲೋರನ್ನು ಮಾತ್ರ ಕಂಟೈನ್‍ಮೆಂಟ್ ಎಂದು ಗುರುತಿಸಲಾಗುತ್ತದೆ. ಮನೆಯಾದರೆ ಆ ಮನೆ ಮಾತ್ರ ಕಂಟೈನ್‍ಮೆಂಟ್ ವಲಯ ಹಾಗೂ ಸ್ಲಂ ಆಗಿದ್ದರೆ ಪಾಸಿಟಿವ್ ವ್ಯಕ್ತಿ ವಾಸಿಸುವ ಒಂದು ರಸ್ತೆಯನ್ನು ಕಂಟೈನ್‍ಮೆಂಟ್ ವಲಯ ಎಂದು ಗುರುತಿಸಲು ಸೂಚನೆ ನೀಡಲಾಗಿದೆ. ಯಾವುದೇ ಬ್ಯಾರಿಕೇಡ್ ಆಳವಡಿಸಿ ಸೀಲ್‍ಡೌನ್ ಮಾಡುವ ಅವಶ್ಯಕತೆ ಇಲ್ಲ ಬದಲಾಗಿ ಮನೆಯ ಮುಂದೆ ನೋಟಿಸ್ ಅಂಟಿಸಿ ಅಕ್ಕ ಪಕ್ಕದವರಿಗೆ ಮಾಹಿತಿ ನೀಡಿದರೆ ಸಾಕು ಎಂದು ಸೂಚಿಸಲಾಗಿದೆ. ಇತ್ತ ಸೋಂಕಿತರಿಗೆ ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಇನ್ಮುಂದೆ ಹ್ಯಾಂಡ್ ಸ್ಟಾಪಿಂಗ್ ಮಾಡುವುದನ್ನು ಬಿಬಿಎಂಪಿ ಕೈಬಿಟ್ಟಿದೆ.

    ಸೀಲ್‍ಡೌನ್ ಅವಶ್ಯಕತೆ ಯಾವಾಗ?
    ಒಂದೊಮ್ಮೆ ಒಂದು ಏರಿಯಾದಲ್ಲಿ ಹೆಚ್ಚು ಕೊರೊನಾ ಕೇಸ್ ಗಳು ಕಂಡು ಬಂದರೇ, ಒಬ್ಬನಿಂದ ಅನೇಕ ಜನರಿಗೆ ಹಬ್ಬುವ ಸಾಧ್ಯತೆ ಇರಬಹುದಾದ ಸ್ಥಳಗಳನ್ನು ಬ್ಯಾರಿಕೇಡ್ ಹಾಕಿ ವ್ಯವಸ್ಥಿತವಾಗಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಕ್ಲಸ್ಟರ್ ಏರಿಯಾದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಬೇಕು. ಇಂತಹ ಕೊರೊನಾ ಸ್ಫೋಟವಾಗುವ ಏರಿಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

  • ಇನ್ಮುಂದೆ ಬೆಂಗ್ಳೂರಲ್ಲಿ ಸೀಲ್‍ಡೌನ್ ಇರಲ್ಲ – 3 ಕೇಸ್ ಇದ್ದರಷ್ಟೇ ಸೀಲ್

    ಇನ್ಮುಂದೆ ಬೆಂಗ್ಳೂರಲ್ಲಿ ಸೀಲ್‍ಡೌನ್ ಇರಲ್ಲ – 3 ಕೇಸ್ ಇದ್ದರಷ್ಟೇ ಸೀಲ್

    ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಇನ್ಮುಂದೆ ಸೀಲ್‍ಡೌನ್ ಇರಲ್ಲ. ಬದಲಾಗಿ ಮೂವರು ಪ್ರಕರಣಗಳು ಇದ್ದರಷ್ಟೇ ಸೀಲ್‍ಡೌನ್ ಮಾಡಲಾಗುತ್ತದೆ.

    ಕೊರೊನಾ ಬೆಂಗಳೂರಿನಲ್ಲಿ ಗರಿಷ್ಟ ಮಟ್ಟದಲ್ಲಿದ್ದರೂ ಬಿಬಿಎಂಪಿ ಸೀಲ್‍ಡೌನ್ ಮತ್ತು ಕಂಟೈನ್ಮೆಂಟ್ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಬೆಂಗಳೂರಿನಲ್ಲಿ ಸೀಲ್‍ಡೌನ್ ಬೇಕಾ ಅಥವಾ ಬೇಡ್ವಾ ಎಂದು ಬಿಬಿಎಂಪಿ ಕಮೀಷನರ್ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ. ಬಿಬಿಎಂಪಿಯ ಎಲ್ಲಾ ವಲಯದ ಎಂಜಿನಿಯರ್‌ಗಳೊಂದಿಗೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸೀನ್‍ಡೌನ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

    ಜಿಯೋ ಟ್ಯಾಗ್ ಮೂಲಕವೂ ಪಾಸಿಟಿವ್ ಪ್ರಕರಣಗಳ ಜಾಡು ಪತ್ತೆ ಮಾಡಲಾಗುತ್ತದೆ. ಎಲ್ಲೆಲ್ಲಿ ಕೊರೊನಾ ಪಾಸಿಟಿವ್ ಇದೆ ಎಂದು ಅದರ ಲೊಕೇಶನ್ ಪಡೆಯಲಾಗುತ್ತದೆ. ಆಗ 100 ಮೀಟರ್ ಅಂತರದಲ್ಲಿ ಕೊರೊನಾ ಪಾಸಿಟಿವ್ 3ಕ್ಕಿಂತ ಹೆಚ್ಚು ಇದ್ದರೆ ಮಾತ್ರ ಸೀಲ್‍ಡೌನ್ ಮಾಡಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಸೀಲ್ ಡೌನ್ ಇರಲ್ಲ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

    ನಾಳೆಯಿಂದ ಎಲ್ಲ ಕಡೆ ಬ್ಯಾರಿಕೇಡ್ ಹಾಕುವುದು ನಿಲ್ಲುತ್ತದೆ. ಬ್ಯಾರಿಕೇಡ್, ಕಂಟೈನ್‍ಮೆಂಟ್ ಬದಲು ಪೋಸ್ಟರ್ ಅಂಟಿಸಿ ಜನರಿಗೆ ಜವಾಬ್ದಾರಿ ಮೂಡಿಸಲಾಗುತ್ತಿದೆ. ನಾವೇ ಕೋವಿಡ್ ವಿರುದ್ಧ ಬ್ಯಾರಿಕೇಡ್ ಹಾಕಿ ಜನರಿಗೆ ಭಯದ ವಾತಾವರಣ ಕಲ್ಪಿಸಬಾರದು. ಜೊತೆಗೆ ಈವರೆಗೂ ನಗರದಲ್ಲಿ ಕಂಟೈನ್‍ಮೆಂಟ್‍ಗಾಗಿ ವೆಚ್ಚವಾಗಿರುವ ಮಾಹಿತಿಯೂ ಪಡೆಯಲಾಗುತ್ತದೆ ಎಂದು ಮಂಜುನಾಥ್ ಹೇಳಿದರು.

    ಸೀಲ್‍ಡೌನ್ ಬದಲಾವಣೆಗೆ ಕಾರಣ?
    1. ಸೀಲ್‍ಡೌನ್, ಕಂಟೈನ್‍ಮೆಂಟ್ ಝೋನ್ ಕಿರಿಕ್‍ಗಳಿಂದ ಜನ ರೋಸಿ ಹೋಗಿದ್ದಾರೆ.
    2. ಕೊರೊನಾ ಭಯಕ್ಕಿಂತ ಹೆಚ್ಚಾಗಿ ಈಗ ರೋಗಿಗಳಿಗೆ ಸೀಲ್‍ಡೌನ್ ಮಾಡುವುದರಿಂದ ಅಕ್ಕ-ಪಕ್ಕದ ಮನೆಯವರಿಂದ ಮುಜುಗರ, ಅವಮಾನ ಎದುರಿಸುವ ಆತಂಕದಿಂದ ಬೇಸರಗೊಳ್ಳುತ್ತಿದ್ದಾರೆ.
    3. ಸೀಲ್‍ಡೌನ್‍ಗಳ ಆತಂಕಕ್ಕೆ ಇತ್ತೀಚೆಗೆ ಬೆಂಗಳೂರು ಜನ ಕೊರೊನಾ ಗುಣಲಕ್ಷಣಗಳು ಕಾಣಿಸಿಕೊಂಡರು ಟೆಸ್ಟ್‌ಗೆ ಮುಂದೆ ಬರುತ್ತಿಲ್ಲ ಎನ್ನುವ ಭಾವನೆ ರಿಪೋರ್ಟ್ ಬಿಬಿಎಂಪಿ ಕೈ ಸೇರಿದೆ.


    4. ಬೆಂಗಳೂರಿನಲ್ಲಿ ಕಂಟೈನ್‍ಮೆಂಟ್ ಝೋನ್‍ಗಳು ಇದ್ದರೂ ಸಮರ್ಪಕವಾಗಿ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ.
    5. ಸೀಲ್‍ಡೌನ್ ಆದ ಕೆಲ ಭಾಗದಲ್ಲಿ ಪೊಲೀಸ್ ಭದ್ರತೆ ನಿಯೋಜನೆ ಹಾಗೂ ಅವರಿಗೆ ಮೂಲಭೂತ ವಸ್ತುಗಳನ್ನು ಓದಗಿಸೋದು ಕೇಸ್ ಹೆಚ್ಚದಾದಂತೆ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ.
    6. ಸೀಲ್‍ಡೌನ್ ನೆಪದಲ್ಲಿ ಸಿಕ್ಕಾಪಟ್ಟೆ ದುಡ್ಡು ಸರ್ಕಾರಕ್ಕೆ ಖರ್ಚು ಆಗುತ್ತಿದೆ. ಸುಖಾಸುಮ್ಮನೆ ಸಾವಿರಾರು ರೂಪಾಯಿ ಲೆಕ್ಕದಲ್ಲಿ ಅಧಿಕಾರಿಗಳುಜೇಬಿಗೆ ದುಡ್ಡು ಹೋಗುತ್ತಿದೆ ಎಂಬ ಆರೋಪ.
    7. ಇತ್ತೀಚಿನ ದಿನದಲ್ಲಿ ಬ್ಯಾರಿಕೇಡ್‍ಗಳ ಕೊರತೆಯೂ ಎದುರಾಗಿತ್ತು.

  • ನಾಣ್ಯ ನುಂಗಿ 3 ವರ್ಷದ ಬಾಲಕ ಸಾವು – ಕಂಟೈನ್ಮೆಂಟ್ ವಲಯದಲ್ಲಿ ಮನೆ ಇದ್ದುದ್ದೇ ತಪ್ಪಾಯ್ತು

    ನಾಣ್ಯ ನುಂಗಿ 3 ವರ್ಷದ ಬಾಲಕ ಸಾವು – ಕಂಟೈನ್ಮೆಂಟ್ ವಲಯದಲ್ಲಿ ಮನೆ ಇದ್ದುದ್ದೇ ತಪ್ಪಾಯ್ತು

    ತಿರುವನಂತಪುರಂ: ಆಕಸ್ಮಿಕವಾಗಿ ನಾಣ್ಯವನ್ನು ನುಂಗಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಆದರೆ ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ಅಲುವಾ ಬಳಿಯ ಕೊಡುಂಗಲ್ಲೂರ್‌ನಲ್ಲಿ ಬಾಲಕ ವಾಸಿಸುತ್ತಿದ್ದನು. ಆದರೆ ಕೋವಿಡ್ 19 ನಿಂದಾಗಿ ಬಾಲಕ ವಾಸಿಸುತ್ತಿದ್ದ ಮನೆ ಕಂಟೈನ್ಮೆಂಟ್ ವಲಯದಲ್ಲಿತ್ತು. ಹೀಗಾಗಿ ಕಂಟೈನ್ಮೆಂಟ್ ವಲಯದಿಂದ ಬಂದಿದ್ದರಿಂದ ಆಸ್ಪತ್ರೆಯಲ್ಲಿ ಬಾಲಕನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಆದ್ದರಿಂದ ಚಿಕಿತ್ಸೆ ಸಿಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಲಕ ನಾಣ್ಯವನ್ನು ನುಂಗಿದ್ದಾನೆ. ಸ್ವಲ್ಪ ಸಮಯದ ನಂತರ ಬಾಲಕ ಅಸ್ವಸ್ಥನಾಗಿದ್ದಾನೆ. ತಕ್ಷಣ ಪೋಷಕರು ಮಗುವನ್ನು ಅಲುವಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಕ್ಸ ರೇ ಮಾಡಿದ್ದು, ನಾಣ್ಯವಿರುವ ಬಗ್ಗೆ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.

    ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಮಕ್ಕಳ ಶಸ್ತ್ರಚಿಕಿತ್ಸಕರಿಲ್ಲದ ಕಾರಣ ಬಾಲಕನನ್ನು ದಾಖಲಿಸಿಕೊಂಡಿಲ್ಲ. ಆದ್ದರಿಂದ ಬಾಲಕನನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ ವೈದ್ಯರು ಮಗುವನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಲೆಪ್ಪಿಯದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಅಲ್ಲಿಯೂ ಬಾಲಕನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ವೈದ್ಯರು ಮಗುವಿಗೆ ಹಣ್ಣುಗಳನ್ನು ನೀಡುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ. ಕೊನೆಗೆ ಪೋಷಕರು ಮಗುವನ್ನು ಮತ್ತೆ ತಮ್ಮ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸಂಜೆಯ ವೇಳೆಗೆ ಬಾಲಕನ ಸ್ಥಿತಿ ಗಂಭೀರವಾಗಿದೆ. ಇದರಿಂದ ಗಾಬರಿಯಾದ ಪೋಷಕರು ಮತ್ತೆ ಅಲುವಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗುವುದು. ಕೋವಿಡ್ ಟೆಸ್ಟ್‌ಗೆ ಬಾಲಕನಿಂದ ಸ್ವ್ಯಾಬ್ ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ತಿಳಿದು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ.ಕೆ. ಶೈಲಜಾ. “ನಾಣ್ಯ ನುಂಗಿ ಬಾಲಕ ಮೃತಪಟ್ಟ ಘಟನೆ ಅತ್ಯಂತ ದುರದೃಷ್ಟಕರ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಈ ಪ್ರಕರಣ ಕುರಿತು ಸಮಗ್ರ ವಿಚಾರಣೆಯ ನಂತರ ವರದಿಯನ್ನು ಸಲ್ಲಿಸುವಂತೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಜೊತೆಗೆ ಸಂಬಂಧಿಕರು ಮಾಡುತ್ತಿರುವ ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಕಂಟೈನ್ಮೆಂಟ್ ಪ್ರದೇಶದಲ್ಲೇ ವೈನ್‍ಶಾಪ್ ಓಪನ್- ಪಾನಮತ್ತರಿಂದ ಬೇಸತ್ತ ಸ್ಥಳೀಯರು

    ಕಂಟೈನ್ಮೆಂಟ್ ಪ್ರದೇಶದಲ್ಲೇ ವೈನ್‍ಶಾಪ್ ಓಪನ್- ಪಾನಮತ್ತರಿಂದ ಬೇಸತ್ತ ಸ್ಥಳೀಯರು

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕಂಟೈನ್ಮೆಂಟ್ ಪ್ರದೇಶದಲ್ಲಿ ಎಲ್ಲವೂ ಬಂದ್ ಇದ್ದು, ವೈನ್‍ಶಾಪ್ ಮಾತ್ರ ಓಪನ್ ಮಾಡಲಾಗಿದೆ.

    ಗ್ರಾಮದಲ್ಲಿ ಪಾಸಿಟಿವ್ ಕೇಸ್ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಅನೇಕ ಏರಿಯಾಗಳನ್ನಿ ಸೀಲ್ ಡೌನ್ ಮಾಡಲಾಗಿದೆ. ಕಂಟೈನ್ಮೆಂಟ್ ಪ್ರದೇಶದಲ್ಲಿರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ಜನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

    ಆದರೆ ಕಂಟೈನ್ಮೆಂಟ್ ಪ್ರದೇಶದಲ್ಲಿ ಪ್ರಭಾವಿಯೊಬ್ಬರ ವೈನ್‍ಶಾಪ್ ಮಾತ್ರ ಓಪನ್ ಮಾಡಿದ್ದಾರೆ. ಪಾನಮತ್ತರ ಹಾವಳಿಯಿಂದ ಸ್ಥಳೀಯರು ಬೆಸತ್ತಿದ್ದಾರೆ. ಎಲ್ಲವನ್ನೂ ಬಂದ್ ಮಾಡಿ ವೈನ್‍ಶಾಪ್ ಯಾಕೆ ಓಪನ್ ಅಂತ ಆಕ್ರೋಶ ವ್ಯಕ್ತಪಡಿಸಿದರು.

    ಕಂಟೈನ್ಮೆಂಟ್ ಪ್ರದೇಶದಲ್ಲಿ ವೈನ್‍ಶಾಪ್ ಅಂದರ್ ದರ್ಬಾರ್ ಬಗ್ಗೆ ಸಂಬಂಧಿಸಿದ ಅಬಕಾರಿ ಇಲಾಖೆಯಿಂದ ಕ್ರಮ ಕೈಗೊಳ್ಳಲಿ ಎಂಬುದು ಸ್ಥಳಿಯತ ಆಗ್ರಹವಾಗಿದೆ.

  • ಸಿದ್ದಾಪುರ ಕಾರ್ಪೊರೇಟರ್‌ಗೂ ತಗುಲಿದ ಸೋಂಕು

    ಸಿದ್ದಾಪುರ ಕಾರ್ಪೊರೇಟರ್‌ಗೂ ತಗುಲಿದ ಸೋಂಕು

    ಬೆಂಗಳೂರು: ಮಹಾಮಾರಿ ಕೊರೊನಾ ಗಲ್ಲಿಗಲ್ಲಿಗೂ ಅಟಕಾಯಿಸಿಕೊಳ್ತಿದೆ. ಬೆಂಗಳೂರಿನಲ್ಲಿ ಕಾರ್ಪೊರೇಟರ್ ದೇಹಕ್ಕೂ ವೈರಸ್ ಹೊಕ್ಕಿದೆ.

    ಸಿದ್ದಾಪುರ ವಾರ್ಡ್ ಕಾರ್ಪೊರೇಟರ್ ಮುಜಾಯಿದ್ ಪಾಷಾಗೆ ಸೋಂಕು ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿದ್ದ 39 ವರ್ಷದ ಕಾರ್ಪೊರೇಟರ್ ಮುಜಾಯಿದ್ ಪಾಷಾ ಕಂಟೈನ್ಮೆಂಟ್ ಝೋನ್‍ನಲ್ಲಿ ಓಡಾಡಿದ್ದರು.

    4 ದಿನಗಳಿಂದ ಪುಲಕೇಶಿನಗರದ ತಂಗಿ ಮನೆಯಲ್ಲಿ ವಾಸವಿದ್ದರು. ಕಳೆದ ಒಂದು ವಾರದಿಂದ ಜ್ವರ-ಶೀತದಿಂದ ಬಳಲುತ್ತಿದ್ದ ಕಾರ್ಪೊರೇಟರ್‍ಗೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ದೃಢಪಟ್ಟಿದೆ. ಸದ್ಯಕ್ಕೆ ಕಾರ್ಪೊರೇಟರ್ ಮನೆಯವರನ್ನ ಮತ್ತು ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ಮಾಡಲಾಗಿದೆ.

    4 ದಿನದ ಹಿಂದೆನೆ ಪಾಸಿಟಿವ್ ಅಂತ ಬಂದಿತ್ತು. ಸ್ವತಃ ಕಾರ್ಪೊರೇಟರ್ ಅವರೇ ಆರೋಗ್ಯಾಧಿಕಾರಿಗಳಿಗೆ ಯಾರಿಗೂ ಹೇಳಬೇಡಿ ಅಂದಿದ್ದಾರೆ. ಆದರೆ 4 ದಿನದ ಹಿಂದೆನೆ ಕಾರ್ಪೊರೇಟರ್ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರಂತೆ. ಹೀಗಾಗಿ ವಿಷಯವನ್ನು ಯಾರಿಗೂ ಹೇಳದೇ ಅಧಿಕಾರಿಗಳು ಮುಚ್ಚಿಟಿದ್ದರು. ಆದರೆ 4 ದಿನದ ಹಿಂದೆಯೇ ಆರೋಗ್ಯಾಧಿಕಾರಿಗಳು ಪ್ರೈಮರಿ ಕಾಂಟ್ಯಾಕ್ಟ್ ಅನ್ನು ಕ್ವಾರಂಟೈನ್ ಮಾಡಿದ್ದಾರೆ. ಕಾರ್ಪೊರೇಟರ್ ಪಕ್ಕದ ಮನೆಯವರಿಗೆ ಪಾಸಿಟಿವ್ ಬಂದಿತ್ತಂತೆ ಹೀಗಾಗಿ ಇವರಿಗೆ ಸೊಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ 4 ಜನ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಬೀದರ್‌ನಲ್ಲಿ ಕೊರೊನಾ ಅಟ್ಟಹಾಸ- ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆ

    ಬೀದರ್‌ನಲ್ಲಿ ಕೊರೊನಾ ಅಟ್ಟಹಾಸ- ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆ

    ಬೀದರ್: ಮಹಾಮಾರಿ ಕೊರೊನಾ ದಿನೇ ದಿನೇ ಅಟ್ಟಹಾಸ ಮೆರೆಯುತ್ತಿದ್ದು, ಜಿಲ್ಲೆಯಲ್ಲಿ ಇಂದು ಮತ್ತೆ 8 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ಬಸವಕಲ್ಯಾಣದಲ್ಲಿ 3, ಚಿಟ್ಟಗುಪ್ಪದಲ್ಲಿ 3 ಹಾಗೂ ಬೀದರ್ ನಲ್ಲಿ 2 ಜಿಲ್ಲೆಯಲ್ಲಿ ಇಂದು ಒಟ್ಟು 8 ಜನರಿಗೆ ಕೊರೋನಾ ಪಾಸಿಟಿವ್ ಧೃಡವಾಗಿವೆ. ಬೀದರ್ ಹಾಗೂ ಚಿಟ್ಟಗುಪ್ಪದಲ್ಲಿ ಕಂಟೈನ್ಮೆಟ್ ಝೋನ್ ಸಂಪರ್ಕದಿಂದ ಸೋಂಕು ಧೃಡವಾಗಿದ್ದರೆ, ಮುಂಬೈನಿಂದ ಬಸವಕಲ್ಯಾಣಕ್ಕೆ ಬಂದ ವಲಸೆ ಕಾರ್ಮಿಕರಿಗೆ ಸೋಂಕು ತಗುಲಿದೆ.

    ಇಂದು 8 ಜನರಿಗೆ ಸೋಂಕು ಧೃಡವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆಯಾಗಿದೆ. ಇದರಲ್ಲಿ 397 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 125 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಾಲೇ ಜಿಲ್ಲೆಯಲ್ಲಿ 15 ಜನರನ್ನು ಮಹಾಮಾರಿ ಬಲಿ ತೆಗೆದುಕೊಂಡಿದೆ. ಪ್ರತಿ ದಿನ ತನ್ನ ನಾಗಾಲೋಟವನ್ನು ಮುಂದುವರಿಸಿದ್ದು, ಡೆಡ್ಲಿ ವೈರಸ್‍ಗೆ ಜಿಲ್ಲೆಯ ಜನ ತೀವ್ರ ಆತಂಕಗೊಂಡಿದ್ದಾರೆ.

  • ಜಿಂದಾಲ್ ಕಾರ್ಖಾನೆ ಲಾಕ್‍ಡೌನ್ ಮಾಡೋಕೆ ಆಗಲ್ಲ: ಜಿಲ್ಲಾಧಿಕಾರಿ ನಕುಲ್

    ಜಿಂದಾಲ್ ಕಾರ್ಖಾನೆ ಲಾಕ್‍ಡೌನ್ ಮಾಡೋಕೆ ಆಗಲ್ಲ: ಜಿಲ್ಲಾಧಿಕಾರಿ ನಕುಲ್

    – ಜಿಂದಾಲ್ ದೊಡ್ಡ ಕಂಟೈನ್‍ಮೆಂಟ್ ಝೋನ್ ಆಗಿ ಘೋಷಣೆ
    – ಗಣಿನಾಡಿನಲ್ಲಿ ಕೊರೊನಾಗೆ ಮತ್ತೊಂದು ಬಲಿ

    ಬಳ್ಳಾರಿ: ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆ ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯನ್ನು ಸಂಪೂರ್ಣ ಲಾಕ್‍ಡೌನ್ ಮಾಡಲು ಆಗಲ್ಲವೆಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಜುಬಿಲೆಂಟ್ ಕಾರ್ಖಾನೆ ಸಣ್ಣ ಪ್ರಮಾಣದ ಉತ್ಪಾದನೆ ಹೊಂದಿದೆ. ಅಲ್ಲದೇ ಅದು ಕೇವಲ 1 ಸಾವಿರ ನೌಕರರನ್ನ ಮಾತ್ರ ಹೊಂದಿದೆ. ಹೀಗಾಗಿ, ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ತರಲಾಯಿತು. ಆದರೆ, ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ಸುಮಾರು 30 ಸಾವಿರ ನೌಕರರನ್ನು ಹೊಂದಿದೆ. ಉತ್ಪಾದನಾ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಈ ಕಾರ್ಖಾನೆಯನ್ನ ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಲಾಕ್‍ಡೌನ್ ಮಾಡಲು ಬರುವುದಿಲ್ಲ ಎಂದರು.

    ಕಂಟೈನ್‍ಮೆಂಟ್ ಝೋನ್: ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಈಗ ದೊಡ್ಡ ಕಂಟೈನ್‍ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಹೊರಗಿಂದ ನೌಕರರನ್ನ ಕರೆ ತರುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂದಾಜು 898 ಜನರನ್ನು ಈಗಾಗಲೇ ಜೆಎಸ್‍ಡಬ್ಲ್ಯು ಗುರುತಿಸಿ, ಅವರಿಗೆ ವೇತನ ಸಹಿತ ರಜೆ ನೀಡಿ ಮನೆಗೆ ಕಳಿಸಿಕೊಟ್ಟಿದೆ. ಜೊತೆಗೆ ಸುಮಾರು 1086 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ 246 ಮಂದಿಗೆ ಪಾಸಿಟಿವ್ ಬಂದಿದೆ. ಉಳಿದ 300 ಮಂದಿಯ ತಪಾಸಣೆ ವರದಿ ಇಂದು ಅಥವಾ ನಾಳೆ ಬರಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

    ಮೂರನೇ ಬಲಿ: ಇತ್ತ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ಇಂದು ಮತ್ತೊಂದು ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಆಂಧ್ರಪ್ರದೇಶದ ಆದೋನಿ ಮೂಲದ 62 ವರ್ಷದ ವ್ಯಕ್ತಿ ರೋಗಿ-7,732 ಇಂದು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.

    ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದ ಈ ವ್ಯಕ್ತಿ, ಕಳೆದ ಜೂನ್ 17 ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆ ಮಾಡಲಾಗಿತ್ತು. ವರದಿ ಬಂದ ಬಳಿಕ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿತ್ತು. ನಂತರ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿದ್ದಾರೆಂದು ಡಿ.ಸಿ ನಕುಲ್ ತಿಳಿಸಿದ್ದಾರೆ.

  • ಸಿಲಿಕಾನ್ ಸಿಟಿಯ ಹೊಸ ಏರಿಯಾಗಳಿಗೆ ಕೊರೊನಾ ಲಗ್ಗೆ

    ಸಿಲಿಕಾನ್ ಸಿಟಿಯ ಹೊಸ ಏರಿಯಾಗಳಿಗೆ ಕೊರೊನಾ ಲಗ್ಗೆ

    – ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ 279ಕ್ಕೆ ಏರಿಕೆ
    – ವ್ಯಾಪಾರಿಗಳಿಂದ ಸ್ವಯಂ ನಿರ್ಬಂಧ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಆಸ್ಫೋಟವಾಗುತ್ತಿದ್ದು, ಹೊಸ ಏರಿಯಾಗಳಿಗೆ ಸೋಂಕು ಹಬ್ಬುತ್ತಿದೆ. ಹೀಗಾಗಿ ಸರ್ಕಾರಕ್ಕೆ ಹೊಸ ಸವಾಲುಗಳು ಎದುರಾಗುತ್ತಿವೆ.

    ಸದಾ ಜನಜಂಗುಳಿಯಿಂದ ಕೂಡಿರುವ ಚಿಕ್ಕಪೇಟೆಯಲ್ಲಿ ಇದುವರೆಗೆ 25 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ವ್ಯಾಪಾರಿಗಳೇ ಸ್ವಯಂ ಪ್ರೇರಿತರಾಗಿ ಲಾಕ್‍ಡೌನ್‍ಗೆ ಮುಂದಾಗಿದ್ದಾರೆ. ಎಲೆಕ್ಟ್ರಿಕ್ ಮರ್ಚೆಂಟ್ಸ್, ಜ್ಯುವೆಲ್ಲರಿ ಅಸೋಸಿಯೇಷನ್ ಸೇರಿದಂತೆ ಒಟ್ಟು 8ರಿಂದ 10 ಅಸೋಸಿಯೇಷನ್‍ಗಳು 1 ವಾರಗಳ ಕಾಲ ಸ್ವಯಂ ಪ್ರೇರಿತ ನಿರ್ಬಂಧ ಹೇರಿಕೊಂಡಿವೆ. ಬಟ್ಟೆ ವ್ಯಾಪಾರಿಗಳು ಇದಕ್ಕೆ ಬೆಂಬಲ ನೀಡಿಲ್ಲ.

    ಬೆಂಗಳೂರಿನ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆ 279ಕ್ಕೆ ಹೆಚ್ಚಳವಾಗಿದ್ದು, ಸಿಲಿಕಾನ್ ಸಿಟಿ ಜನತೆಯನ್ನು ಆತಂಕಕ್ಕೆ ದೂಡಿದೆ. ಬೊಮ್ಮನಹಳ್ಳಿಯ 38 ವಲಯ, ದಾಸರಹಳ್ಳಿಯ 9, ಬೆಂಗಳೂರು ಪೂರ್ವದ 45, ಮಹದೇವಪುರದ 31, ರಾಜರಾಜೇಶ್ವರಿ ನಗರದ 12, ಬೆಂಗಳೂರು ದಕ್ಷಿಣದ 81, ಬೆಂಗಳೂರು ಪಶ್ಚಿಮದ 38 ಹಾಗೂ ಯಲಹಂಕದ 17 ವಲಯಗಳನ್ನು ಗುರುತಿಸಲಾಗಿದೆ.

    ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ತನ್ನ ರಣಕೇಕೆಯನ್ನು ಹೆಚ್ಚಿಸಿದ್ದು, ಇಂದು ಬರೋಬ್ಬರಿ ಇಂದು 196 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 1272ಕ್ಕೇರಿದೆ. ನಗರದಲ್ಲಿ ಸಮುದಾಯಕ್ಕೆ ಕೊರೊನಾ ಹರಡಿದೆಯೇ ಎಂಬ ಅನುಮಾನ ಮೂಡಿದ್ದು, ಇಂದು ಕೂಡ ಬೆಂಗಳೂರಿನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 64ಕ್ಕೆ ತಲುಪಿದೆ. ನಗರದಲ್ಲಿ 31 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ರಾಜ್ಯದಲ್ಲಿ ಒಟ್ಟು ಐವರು ಕೊರೊನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 77 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.