Tag: Containment Area

  • ಕಂಟೈನ್ಮೆಂಟ್ ಏರಿಯಾಗಳಿಗೆ ಉಚಿತ ಅಗತ್ಯ ವಸ್ತುಗಳ ಪೂರೈಕೆ ಇಲ್ಲ- ಬೀದಿಗಿಳಿದ ಜನರು

    ಕಂಟೈನ್ಮೆಂಟ್ ಏರಿಯಾಗಳಿಗೆ ಉಚಿತ ಅಗತ್ಯ ವಸ್ತುಗಳ ಪೂರೈಕೆ ಇಲ್ಲ- ಬೀದಿಗಿಳಿದ ಜನರು

    ಮಡಿಕೇರಿ: ಕಂಟೈನ್ಮೆಂಟ್ ಏರಿಯಾದಲ್ಲಿ ಇರುವ ಜನರಿಗೆ ಉಚಿತ ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿಲ್ಲ ಎಂದು ಕಂಟೈನ್ಮೆಂಟ್ ಝೋನ್ ಜನರು ಮನೆಯಿಂದ ಹೊರಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯ ಗೌಳಿಬೀದಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈ ಏರಿಯಾವನ್ನು ಸೀಲ್‍ಡೌನ್ ಮಾಡಲಾಗಿದೆ.

    ಏರಿಯಾದಲ್ಲಿರುವ ಬಹುತೇಕ ಜನರು ಕೂಲಿ ಕೆಲಸ ಮಾಡಿ ಅಂದು ದುಡಿದು ಅಂದು ತಿನ್ನುವವರಿದ್ದೇವೆ. ಆದರೆ ಸೀಲ್‍ಡೌನ್ ಮಾಡಿರುವ ಜಿಲ್ಲಾಡಳಿತ ಜನರಿಗೆ ಯಾವುದೇ ಅಗತ್ಯ ವಸ್ತುಗಳನ್ನು ಪೂರೈಸುತ್ತಿಲ್ಲ. ಬದಲಾಗಿ ಹಣಕೊಟ್ಟೆ ಕೊಂಡುಕೊಳ್ಳಿ ಎನ್ನುತ್ತಿದೆ. ಕಂಟೈನ್ಮೆಂಟ್ ಝೋನ್ ಮಾಡಿ ಒಳಗೆ ಕುಳಿತುಕೊಂಡು ಹಣಕೊಟ್ಟು ಕೊಂಡುಕೊಳ್ಳಿ ಎಂದರೆ ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಂಟೈನ್ಮೆಂಟ್ ಏರಿಯಾದಲ್ಲಿ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಆದರೆ ಅಗತ್ಯ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಜನರು ಕೊರೊನಾದ ಯಾವುದೇ ಆತಂಕವಿಲ್ಲದೆ ಮನೆಯಿಂದ ಹೊರಬಂದು ತಮ್ಮ ನೋವು ತೋಡಿಕೊಂಡರು. ಜಿಲ್ಲಾಡಳಿತ ಕಂಟೈನ್ಮೆಂಟ್ ಏರಿಯಾದಲ್ಲಿರುವ ಎಲ್ಲಾ ಕುಟುಂಬಗಳಿಗೂ ಅಗತ್ಯ ವಸ್ತುಗಳ ಪೂರೈಕೆ ಮಾಡಲಿ. ಇಲ್ಲವೆ ಕಂಟೈನ್ಮೆಂಟ್ ಝೋನ್ ತೆರವುಗೊಳಿಸಿ ನಮ್ಮ ದುಡಿಮೆಗಾದರೂ ಅವಕಾಶ ನೀಡಲಿ ಎಂದು ಒತ್ತಾಯಿಸಿದರು.

  • ಹುಬ್ಬಳ್ಳಿ-ಧಾರವಾಡದಲ್ಲಿ ಪಾರ್ಸಲ್ ಸೇವೆ ಪ್ರಾರಂಭಿಸಿದ ಇಂದಿರಾ ಕ್ಯಾಂಟಿನ್

    ಹುಬ್ಬಳ್ಳಿ-ಧಾರವಾಡದಲ್ಲಿ ಪಾರ್ಸಲ್ ಸೇವೆ ಪ್ರಾರಂಭಿಸಿದ ಇಂದಿರಾ ಕ್ಯಾಂಟಿನ್

    ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಭೀತಿಯಿಂದ ಲಾಕ್‍ಡೌನ್ ಘೋಷಣೆಯಾಗಿದ್ದ ದಿನದಿಂದ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಬಂದ್ ಆಗಿದ್ದ ಇಂದಿರಾ ಕ್ಯಾಂಟೀನ್‍ಗಳು ಈಗ ಪಾರ್ಸಲ್ ಸೌಲಭ್ಯ ಆರಂಭಿಸಿದೆ.

    ಹುಬ್ಬಳ್ಳಿಯಲ್ಲಿ ಮೂರು ಹಾಗೂ ಧಾರವಾಡದಲ್ಲಿ ಎರಡು ಇಂದಿರಾ ಕ್ಯಾಂಟಿನ್‍ಗೆ ಪಾರ್ಸಲ್ ಸೌಲಭ್ಯ ಆರಂಭಿಸಲು ಅನುಮತಿ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ಏಳು ಮತ್ತು ಧಾರವಾಡದಲ್ಲಿ ಎರಡು ಇಂದಿರಾ ಕ್ಯಾಂಟೀನ್‍ಗಳಿದ್ದು, ಮೊದಲ ಹಂತದಲ್ಲಿ ಐದು ಕ್ಯಾಂಟೀನ್‍ಗಳನ್ನು ಆರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ ಕಿಮ್ಸ್, ಉಣಕಲ್ ಮತ್ತು ಹೊಸ ಬಸ್ ನಿಲ್ದಾಣ, ಧಾರವಾಡದಲ್ಲಿ ಬಸ್ ನಿಲ್ದಾಣ ಹಾಗೂ ಮಿನಿ ವಿಧಾನಸೌಧದ ಆವರಣದಲ್ಲಿರುವ ಕ್ಯಾಂಟೀನ್‍ಗಳನ್ನು ಆರಂಭಿಸಲಾಗಿದೆ.

    ಲಾಕ್‍ಡೌನ್‍ನಲ್ಲೂ ನಗರಗಳ ಸ್ವಚ್ಛತೆಗೆ ಶ್ರಮಿಸುತ್ತಿರುವ ಮಹಾನಗರ ಪಾಲಿಕೆಯ 2,800 ಪೌರ ಕಾರ್ಮಿಕರಿಗೆ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕ್ಯಾಂಟೀನ್‍ನಲ್ಲಿ ನಿತ್ಯ ಆಹಾರ ತಯಾರಿಸಲಾಗುತ್ತಿತ್ತು. ಈ ಕಾರ್ಯ ಕೂಡ ಮುಂದುವರಿಯಲಿದೆ.

    ಕ್ಯಾಂಟೀನ್ ಆರಂಭವಾಗುವುದು ಬಹಳಷ್ಟು ಜನಕ್ಕೆ ಗೊತ್ತಿರದೇ ಇದ್ದರೂ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ಕಿಮ್ಸ್ ನಲ್ಲಿರುವ ಜನರಿಗೆ ಸಾಕಷ್ಟು ಅನುಕೂಲವಾಯಿತು. ಬೆಳಿಗ್ಗೆ 7 ಗಂಟೆಯಿಂದ 9ರ ತನಕ ಮತ್ತು ಮಧ್ಯಾಹ್ನ 12ರಿಂದ 2:30 ಗಂಟೆ ತನಕ ಪಾರ್ಸಲ್ ಕೊಡುತ್ತೇವೆ ಎಂದು ಕ್ಯಾಂಟೀನ್‍ಗಳ ಗುತ್ತಿಗೆದಾರ ಮನೋಹರ ಮೋರೆ ತಿಳಿಸಿದರು.

    ಹಳೇ ಹುಬ್ಬಳ್ಳಿ ಮತ್ತು ಬೆಂಗೇರಿ ಭಾಗ ಕಂಟೈನ್‍ಮೆಂಟ್ ಪ್ರದೇಶವಾಗಿರುವ ಕಾರಣ ಅಲ್ಲಿ ಕ್ಯಾಂಟೀನ್‍ಗಳನ್ನು ತೆರೆಯಲು ಅವಕಾಶವಿಲ್ಲ. ಸರ್ಕಾರದ ನಿರ್ದೇಶನದ ಮೇರೆಗೆ ಹಂತಹಂತವಾಗಿ ಉಳಿದ ಕಡೆಯೂ ಆರಂಭಿಸಲಾಗುವುದು. ಬೇಡಿಕೆಗೆ ಅನುಗುಣವಾಗಿ ಆಹಾರ ತಯಾರಿಸಲಾಗುವುದು. ಅಂತರ ಕಾಯ್ದುಕೊಂಡು ಗ್ರಾಹಕರಿಗೆ ಆಹಾರ ನೀಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಗುತ್ತಿಗೆದಾರರು ಹೇಳಿದರು.

    ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಶ್ರಮಿಸುತ್ತಿರುವವರಿಗೆ ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಲಾಕ್‍ಡೌನ್ ಆರಂಭದ ದಿನಗಳಲ್ಲಿ ಹೇಳಿತ್ತು. ಜನಸಂದಣಿ ಹೆಚ್ಚಿದ ಕಾರಣ ಸರ್ಕಾರ ಈ ನಿರ್ಧಾರವನ್ನು ವಾಪಸ್ ಪಡೆದುಕೊಂಡಿತ್ತು. ಬಳಿಕ ಈಗ ಕ್ಯಾಂಟೀನ್‍ಗಳು ಪುನರಾರಂಭವಾಗಿವೆ.