Tag: Container

  • ಜನರೇಟರ್ ವಾಹನಕ್ಕೆ ಕಂಟೈನರ್ ಡಿಕ್ಕಿ- ಇಬ್ಬರ ಸಾವು, ಇಬ್ಬರಿಗೆ ಗಂಭೀರ ಗಾಯ

    ಜನರೇಟರ್ ವಾಹನಕ್ಕೆ ಕಂಟೈನರ್ ಡಿಕ್ಕಿ- ಇಬ್ಬರ ಸಾವು, ಇಬ್ಬರಿಗೆ ಗಂಭೀರ ಗಾಯ

    ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಜನರೇಟರ್ ವಾಹನಕ್ಕೆ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.

    ಮೂಹಿಗರ್ ಪಟ್ರ(39) ಹಾಗೂ ವಿವೇಕ್ ಮೃತಪಟ್ಟ ವ್ಯಕ್ತಿಗಳು. ಉಮರ್ ಹಾಗೂ ಸೂರಜ್ ಎಂಬವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿ ಹಾಗೂ ಗಾಯಾಳುಗಳು ಅಸ್ಸಾಂ ಮೂಲದವರು. ಅತ್ತಿಬೆಲೆ ಆನೇಕಲ್ ಮುಖ್ಯರಸ್ತೆಯ ಬದಿಯಲ್ಲಿ ಗೇಲ್ ಗ್ಯಾಸ್ ಲೈನ್ ಕಂಪನಿ ಭೂಮಿ ಅಡಿಯಲ್ಲಿ ನಾಲ್ವರು ಪೈಪ್ ಲೈನ್ ನಿರ್ಮಿಸುತ್ತಿದ್ದರು.

    ಈ ವೇಳೆ ನಿಲ್ಲಿಸಿಕೊಂಡಿದ್ದ ಜನರೇಟರ್ ವಾಹನಕ್ಕೆ ಪಾನಮತ್ತನಾಗಿದ್ದ ಕಂಟೈನರ್ ಚಾಲಕ ಅತ್ತಿಬೆಲೆ ಕಡೆಯಿಂದ ಬರುತ್ತಿದ್ದಾಗ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನುಳಿದ ಮೂವರು ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿವೇಕ್ ಎಂಬವರು ಮೃತಪಟ್ಟಿದ್ದಾರೆ.

    ಕ್ಯಾಂಟರ್ ಚಾಲಕನನ್ನು ಅತ್ತಿಬೆಲೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫ್ಲೈಓವರ್ ನಲ್ಲಿ ಕಂಟೇನರ್ ಪಲ್ಟಿ – ಕೂದಲೆಳೆ ಅಂತರದಲ್ಲಿ ಪಾರಾದ ಕಾರು ಪ್ರಯಾಣಿಕರು!

    ಫ್ಲೈಓವರ್ ನಲ್ಲಿ ಕಂಟೇನರ್ ಪಲ್ಟಿ – ಕೂದಲೆಳೆ ಅಂತರದಲ್ಲಿ ಪಾರಾದ ಕಾರು ಪ್ರಯಾಣಿಕರು!

    ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಕಂಟೇನರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ವೇಳೆ ಪಕ್ಕದಲ್ಲೇ ಚಲಿಸುತ್ತಿದ್ದ ಕಾರಿನ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

    ಯಶವಂತಪುರ ಫ್ಲೈ ಓವರ್ ಮೇಲೆ ಮಧ್ಯಾಹ್ನ 2.20ರ ವೇಳೆಗೆ ಈ ಘಟನೆ ನಡೆದಿದ್ದು, ಮಲ್ಲೇಶ್ವರಂ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಂಟೈನರ್ ವೇಗವಾಗಿ ಬಂದು ನಿಯಂತ್ರಣ ತಪ್ಪಿ ನಡುರಸ್ತೆಯಲ್ಲೇ ಉರುಳಿ ಬಿದ್ದಿದೆ. ಈ ವೇಳೆ ಇನ್ನೋವಾ ಕಾರೊಂದು ಕಂಟೇನರ್ ಪಕ್ಕದಲ್ಲೇ ಚಲಿಸುತ್ತಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಆಪಾಯದಿಂದ ಪಾರಾಗಿದ್ದಾರೆ.

    ಯಶವಂತಪುರ ಫ್ಲೈಓವರ್ ಮೇಲೆ ಸಣ್ಣ ತಿರುವು ಇದ್ದು ಮಲ್ಲೇಶ್ವರಂ ಕಡೆಯಿಂದ ಬರುವಾಗ ಎಡಗಡೆಗೆ ತಿರುಗಬೇಕಾಗುತ್ತದೆ. ಆದರೆ ಚಾಲಕ ತಿರುವು ಗಮನಿಸದ ಕಾರಣ ವೇಗವಾಗಿ ಬಂದು ನಿಯಂತ್ರಣಕ್ಕೆ ಸಿಗದೇ ಕಂಟೇನರ್ ಪಲ್ಟಿಯಾಗಿದೆ.

    ಘಟನೆಯಲ್ಲಿ ಕಂಟೇನರ್ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರಿನ ಹಿಂಭಾಗಕ್ಕೆ ಮಾತ್ರ ಹಾನಿಯಾಗಿದೆ. ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಕಂಟೇನರ್ ಪಲ್ಟಿಯಾದ ಪರಿಣಾಮ ಮೇಲ್ಸೇತುವೆ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಯಶವಂತಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಂಟೇನರ್ ವಾಹನ ತೆರವುಗೊಳಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • KSRTC ಬಸ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಂಟೇನರ್ ಪಲ್ಟಿ!

    KSRTC ಬಸ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಂಟೇನರ್ ಪಲ್ಟಿ!

    ಮಡಿಕೇರಿ: ಕೆಎಸ್‍ಆರ್ ಟಿಸಿ ಬಸ್ ಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ಮಗುಚಿಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಮೈಸೂರು-ಮಡಿಕೇರಿ ಹೆದ್ದಾರಿಯ ಬೋಯಿಕೇರಿಯಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ ಮೈಸೂರಿಂದ ಮಡಿಕೇರಿಗೆ ಬರುತ್ತಿತ್ತು. ಈ ವೇಳೆ ವೇಗವಾಗಿ ಬಂದು ಕಂಟೇನರ್ ಬಸ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿಕ್ಕಿಯಾದ ರಭಸಕ್ಕೆ ರಸ್ತೆ ಮಧ್ಯೆಯೇ ಕಂಟೇನರ್ ಪಲ್ಟಿಯಾಗಿದೆ.

    ಇನ್ನು ಘಟನೆ ನಡೆದ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ವಾಹನ ತೆರವಿಗೆ ಕ್ರಮಕೈಗೊಂಡಿದ್ದಾರೆ. ಸದ್ಯ ಈ ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್‍ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಕಂಟೇನರ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನ ಹಿಂಬದಿ ನಜ್ಜುಗುಜ್ಜಾಗಿದೆ.

    ಈ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಕಾರ್, ಕಂಟೇನರ್ ಮುಖಾಮುಖಿ ಡಿಕ್ಕಿ- ಮೂವರು ಸಾವು!

    ಕಾರ್, ಕಂಟೇನರ್ ಮುಖಾಮುಖಿ ಡಿಕ್ಕಿ- ಮೂವರು ಸಾವು!

    ಬೀದರ್: ಕಾರು ಮತ್ತು ಕಂಟೇನರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ನಸುಕಿನ ಜಾವ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಕೌಡಿಯಾಳ ಬಳಿ ಸಂಭವಿಸಿದೆ.

    ರಾಜೇಂದ್ರ ಶಿವಲಿಂಗಪ್ಪಾ ಚಿತಕೋಟೆ(52), ಶ್ರೀಧರ್ ಚಿತಕೋಟೆ(32) ಹಾಗೂ ಸಂತೋಷ್ ಕಾರಮೋರೆ (40) ಮತ ದುರ್ದೈವಿಗಳು. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹೊದಲೂರು ಗ್ರಾಮದವರು ಸಂಬಂಧಿಕರ ಮದುವೆಗೆಂದು ಮಹಾರಾಷ್ಟ್ರಕ್ಕೆ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ಓವರ್ ಟೆಕ್ ಮಾಡಿ ಮುಂದೆ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಈ ಕುರಿತು ಬಸವಕಲ್ಯಾಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೈನರ್ ಗೆ ಗೂಡ್ಸ್ ಲಾರಿ ಡಿಕ್ಕಿ- ಇಬ್ಬರು ಸಜೀವ ದಹನ!

    ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೈನರ್ ಗೆ ಗೂಡ್ಸ್ ಲಾರಿ ಡಿಕ್ಕಿ- ಇಬ್ಬರು ಸಜೀವ ದಹನ!

    ಬೆಂಗಳೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೈನರ್ ವಾಹನಕ್ಕೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಗುರುವಾರ ತಡರಾತ್ರಿ ನಡೆದಿದೆ.

    ಮೃತರು ತಮಿಳುನಾಡು ಮೂಲದವರಾಗಿದ್ದು, ಓರ್ವ ತಂಜಾವೂರಿನ ವೇಲುಮುರುಗನ್(25) ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹೊಸೂರು ಕಡೆಯಿಂದ ಬಂದ ಗೂಡ್ಸ್ ಲಾರಿ ನಿಂತಿದ್ದ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.

    ಕ್ಷಣ ಮಾತ್ರದಲ್ಲಿ ಎರಡು ವಾಹನಗಳಿಗೆ ಬೆಂಕಿ ವ್ಯಾಪಿಸಿದ್ದು, ನೋಡ ನೋಡುತ್ತಿದ್ದಂತೆ ಲಾರಿಯಲ್ಲಿ ಸಿಲುಕಿದ್ದ ಇಬ್ಬರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಕಂಟೈನರ್ ವಾಹನದಲ್ಲಿ ಕೆಮಿಕಲ್ ಸಾಗಾಟ ಮಾಡಲಾಗುತ್ತಿದ್ದು, ದಿಢೀರ್ ಬೆಂಕಿ ಹೊತ್ತಿಕೊಳ್ಳಲು ರಾಸಾಯನಿಕವೇ ಕಾರಣ ಎನ್ನಲಾಗಿದೆ.

    ಸ್ಥಳಕ್ಕೆ ಆಗಮಿಸಿದ ಅತ್ತಿಬೆಲೆ ಪೊಲೀಸರು ಮೃತ ದೇಹಗಳನ್ನು ಹತ್ತಿರದ ಖಾಸಗಿ ಆಸ್ಪತ್ರೆ ಶವಗಾರದಲ್ಲಿ ಇರಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಐಷರಾಮಿ ಬಸ್ಸಿಗೆ ಹಿಂದಿನಿಂದ ಕಂಟೈನರ್ ಡಿಕ್ಕಿ- ಇಬ್ಬರ ದುರ್ಮರಣ, ನಾಲ್ವರಿಗೆ ಗಾಯ

    ಐಷರಾಮಿ ಬಸ್ಸಿಗೆ ಹಿಂದಿನಿಂದ ಕಂಟೈನರ್ ಡಿಕ್ಕಿ- ಇಬ್ಬರ ದುರ್ಮರಣ, ನಾಲ್ವರಿಗೆ ಗಾಯ

    ಮುಂಬೈ: ಕಂಟೈನರ್ ಮತ್ತು ಲಕ್ಸುರಿ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

    ಮುಂಬೈ-ಅಹಮಾದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಧಾನು ಎಂಬ ಪ್ರದೇಶದಲ್ಲಿ ಈ ಘಟನೆ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ.

    ಹೆದ್ದಾರಿಯ ಮೊದಲ ಓಣಿಯಲ್ಲಿ ಬಸ್ ಸಂಚರಿಸುತ್ತಿತ್ತು. ಈ ವೇಳೆ ಬಸ್ಸಿನ ಚಕ್ರದಲ್ಲಿ ವ್ಯತ್ಯಾಸವಾಗುತ್ತಿರುವುದು ಚಾಲಕನ ಗಮನಕ್ಕೆ ಬಂದಿದೆ. ಹೀಗಾಗಿ ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ವೇಳೆ ವೇಗವಾಗಿ ಬರುತ್ತಿದ್ದ ಕಂಟೈನರ್ ಬಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಘಟನೆಯಿಂದಾಗಿ ಬಸ್ ಕ್ಲೀನರ್ ಹಾಗೂ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕಂಟೈನರ್ ನಲ್ಲಿದ್ದವರು ಸೇರಿ ಒಟ್ಟು ನಾಲ್ವರಿಗೆ ಗಾಯಗಳಾಗಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಅಂತ ವರದಿಯಾಗಿದೆ.

    ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಇನ್ನು ಮೃತರ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಟಾಟಾ ಏಸ್ ಗೆ ಕಂಟೈನರ್ ಡಿಕ್ಕಿ: 170 ಕೇಸ್ ಮದ್ಯ ರಸ್ತೆ ಪಾಲು!

    ಟಾಟಾ ಏಸ್ ಗೆ ಕಂಟೈನರ್ ಡಿಕ್ಕಿ: 170 ಕೇಸ್ ಮದ್ಯ ರಸ್ತೆ ಪಾಲು!

    – ಮುಗಿಬಿದ್ದ ಎಣ್ಣೆ ಪ್ರಿಯರು ಮದ್ಯದ ಬಾಕ್ಸ್ ಗಳೊಂದಿಗೆ ಎಸ್ಕೇಪ್

    ತುಮಕೂರು: ಮದ್ಯದ ಬಾಟಲ್ ಗಳನ್ನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನಕ್ಕೆ ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂ. ಬೆಲೆ ಬಾಳುವ ಮದ್ಯ ರಾಷ್ಟ್ರೀಯ ಹೆದ್ದಾರಿ ಪಾಲಾಗಿದೆ.

    ತುಮಕೂರಿನ ಹೊರವಲಯದಲ್ಲಿರುವ ಊರುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಮಂಗಳವಾರ ಸಂಭವಿಸಿದೆ. ವಾಹನ ಅಪಘಾತಕ್ಕೀಡಾಗುತ್ತಿದ್ದಂತೆಯೇ ಸ್ಥಳೀಯರು ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಮುಗಿಬಿದ್ದಿದ್ದಾರೆ.

    ಶಿರಾಗೇಟ್ ಬಳಿ ಇರುವ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಘಟಕದಿಂದ ಮದ್ಯದ ಬಾಟಲುಗಳನ್ನು ಲೋಡ್ ಮಾಡಿಕೊಂಡು ಸಿರಾ ನಗರಕ್ಕೆ ಟಾಟಾ ಏಸ್ ವಾಹನದಲ್ಲಿ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಟಾಟಾ ಏಸ್ ವಾಹನಕ್ಕೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಲಾರಿಯೊಂದು ಊರುಕೆರೆ ಬಳಿ ಡಿಕ್ಕಿ ಹೊಡೆದಿದೆ. ಪರಿಣಾಮ ಮದ್ಯ ತುಂಬಿದ್ದ ಟಾಟಾ ಏಸ್ ವಾಹನ ಮಗುಚಿಬಿದ್ದಿದೆ.

    ಟಾಟಾ ಏಸ್ ವಾಹನ ಮಗುಚಿ ಬಿದ್ದು ಚಾಲಕ ನೋವಿನಿಂದ ನರಳುತ್ತಿದ್ದರೂ ಕೂಡ ಸಹಾಯಕ್ಕೆ ಬಾರದೆ ಜನ ಎಣ್ಣೆ ಕದಿಯಲು ನಾಮುಂದು ತಾಮುಂದು ಎಂದು ಮುಗಿಬಿದ್ದರು. ಕೈಗೆ ಸಿಕ್ಕಷ್ಟು ಮದ್ಯದ ಡಬ್ಬಗಳನ್ನು ಹೊತ್ತು ಪರಾರಿಯಾದರು. ಟಾಟಾ ಏಸ್ ವಾಹನದಲ್ಲಿ 170 ಕೇಸ್ ಮದ್ಯವನ್ನು ತುಮಕೂರಿನಿಂದ ಶಿರಾ ನಗರಕ್ಕೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

    ಅಪಘಾತವಾದ ತಕ್ಷಣ ಕ್ಷಣಾರ್ಧದಲ್ಲಿ ಮುಗಿಬಿದ್ದ ಎಣ್ಣೆ ಪ್ರಿಯರು ಸುಮಾರು 120 ಕೇಸ್ ಗಳಷ್ಟು ಮದ್ಯದ ಡಬ್ಬವನ್ನು ಹೊತ್ತು ಪರಾರಿಯಾಗಿದ್ದಾರೆ. ವಿಚಾರ ತಿಳಿದು ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಬಹುತೇಕ ಮದ್ಯದ ಡಬ್ಬಗಳು ಟಾಟಾ ಎಸ್ ವಾಹನ ವಾಹನದಿಂದ ಖಾಲಿಯಾಗಿದ್ದವು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

    ಸ್ಥಳಕ್ಕೆ ಡಿವೈಎಸ್ಪಿ ನಾಗರಾಜು ಹಾಗೂ ಗ್ರಾಮಾಂತರ ಠಾಣಾ ಸಬ್‍ಇನ್ಸ್ ಪೆಕ್ಟರ್ ಯೋಗಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.