Tag: container ship

  • ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿರೋ ಪುತ್ರನನ್ನು ನೆನೆದು ಕಣ್ಣೀರಿಟ್ಟ ಕೇರಳದ ವೃದ್ಧ ದಂಪತಿ

    ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿರೋ ಪುತ್ರನನ್ನು ನೆನೆದು ಕಣ್ಣೀರಿಟ್ಟ ಕೇರಳದ ವೃದ್ಧ ದಂಪತಿ

    ತಿರುವನಂತಪುರಂ: ಇರಾನ್ (Iran) ವಶಪಡಿಸಿಕೊಂಡಿರುವ, ಯುಎಇಯಿಂದ ಮುಂಬೈಗೆ (Mumbai) ಬರುತ್ತಿದ್ದ ಹಡಗಿನಲ್ಲಿದ್ದ (Container Ship) ತಮ್ಮ ಮಗನ ಸುರಕ್ಷತೆಯ ಬಗ್ಗೆ ಕೇರಳದ (Kerala) ವೃದ್ಧ ದಂಪತಿ ಆತಂಕ ವ್ಯಕ್ತಪಡಿಸಿದ್ದು, ಆತನ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ.

    ಹಾರ್ಮುಜ್ ಜಲಸಂಧಿ ಬಳಿ ಶನಿವಾರ ಇರಾನ್ ಸೇನೆ ಇಸ್ರೇಲ್‍ಗೆ (Israel) ಸಂಬಂಧಿತ ಎಂಎಸ್‍ಸಿ ಏರೀಸ್ ಎಂಬ ಸರಕು ತುಂಬಿದ್ದ ಹಡಗನ್ನು ವಶಪಡಿಸಿಕೊಂಡಿದೆ. ಹಡಗಿನಲ್ಲಿದ್ದ ಸುಮಾರು 17 ಮಂದಿ ಭಾರತೀಯರು ಇರಾನ್ ವಶದಲ್ಲಿದ್ದು, ಇದರಲ್ಲಿ ಕೇರಳ ಮೂಲದ ಶ್ಯಾಮನಾಥ್ ಕೂಡ ಸೇರಿದ್ದಾರೆ. ಇದೀಗ ಶ್ಯಾಮನಾಥ್ ಪೋಷಕರಾದ ವಿಶ್ವನಾಥನ್ ಮತ್ತು ಶ್ಯಾಮಲಾ ಅವರು ಶಿಪ್ಪಿಂಗ್ ಕಂಪನಿಯೊಂದಿಗೆ ಫೋನ್ ಮೂಲಕ ಮಾತನಾಡಿದ್ದು, ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

    ತಮ್ಮ ಮಗನ ಸುರಕ್ಷತೆಯ ಬಗ್ಗೆ ಕಾಳಜಿ ಇದೆ. ವಶಪಡಿಸಿಕೊಂಡ ನಂತರ ಅವರು ಹಡಗಿನಲ್ಲಿರುವ ನಮ್ಮ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಆದರೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ವಿಶ್ವನಾಥನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕೆರಳದ ವೆಲ್ಲಿಪರಂಬಲ್ಲಿಯ ಶ್ಯಾಮನಾಥ್, ಕಳೆದ 10 ವರ್ಷಗಳಿಂದ ಎಂಎಸ್‍ಸಿ ಹಡಗಿನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿಗೆ ಹುಟ್ಟೂರಿಗೆ ಭೇಟಿ ನೀಡಿದ್ದರು. ಸಿಬ್ಬಂದಿಯಲ್ಲಿ ಶ್ಯಾಮನಾಥ್ ಜೊತೆಗೆ ನೆರೆಯ ಪಾಲಕ್ಕಾಡ್ ಮತ್ತು ವಯನಾಡ್ ಜಿಲ್ಲೆಗಳ ಇಬ್ಬರು ವ್ಯಕ್ತಿಗಳೂ ಇದ್ದಾರೆ ಎಂದು ವಿಶ್ವನಾಥನ್ ಹೇಳಿದ್ದಾರೆ.

    ಹಡಗಿನಲ್ಲಿ ಭಾರತೀಯರಲ್ಲದೇ, ಫಿಲಿಪೈನ್ಸ್, ಪಾಕಿಸ್ತಾನ ಮತ್ತು ರಷ್ಯಾದವರು ಕೂಡ ಇದ್ದಾರೆ. ಕೇಂದ್ರದ ಮಧ್ಯಸ್ಥಿಕೆಯಲ್ಲಿ ಅಧಿಕಾರಿಗಳು ತಮ್ಮ ಮಗ ಮತ್ತು ಅವನ ಸಹೋದ್ಯೋಗಿಗಳನ್ನು ಆದಷ್ಟು ಬೇಗ ಸುರಕ್ಷಿತವಾಗಿ ಮರಳಿ ಕರೆತರುವ ಪ್ರಯತ್ನದಲ್ಲಿದ್ದಾರೆ ಎಂಬುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಶ್ಯಾಮನಾಥ್ ಅವರ ತಾಯಿ ಕೂಡ ಮಾಧ್ಯಮದವರೊಂದಿಗೆ ಮಾತನಾಡಲು ಪ್ರಯತ್ನಿಸಿದರು, ಆದರೆ ಮಗನನ್ನು ನೆನೆದು ಗದ್ಗದಿತರಾದರು. ಸದ್ಯ ಹಡಗಿನಲ್ಲಿರುವ ಸಿಬ್ಬಂದಿಯನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಇರಾನ್‍ನ ಅಧಿಕಾರಿಗಳೊಂದಿಗೆ ಭಾರತ ಮಾತುಕತೆ ನಡೆಸಿದೆ. ಇದನ್ನೂ ಓದಿ: ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

  • ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

    ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

    ನವದೆಹಲಿ/ಟೆಹರಾನ್‌: ಮಧ್ಯಪ್ರಾಚ್ಯದಲ್ಲಿ(Middle East) ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಮುಂಬೈಗೆ (Mumbai) ಬರುತ್ತಿದ್ದ ಇಸ್ರೇಲ್‌ ಮಾಲೀಕತ್ವದ ಸರಕು ಸಾಗಾಣೆ ಹಡಗನ್ನು (Container Ship) ಇರಾನ್‌ ವಶಪಡಿಸಿಕೊಂಡಿದೆ.

    ಯುಎಇಯಿಂದ ಸರಕು ತುಂಬಿಸಿಕೊಂಡು ಮುಂಬೈ (Mumbai) ಬಂದರಿಗೆ ಬರುತ್ತಿದ್ದ MCS Aries ಹೆಸರಿನ ಕಂಟೈನರ್‌ ಶಿಪ್‌ ಅನ್ನು Strait of Hormuz ಬಳಿ ವಶಪಡಿದೆ. ವಶಪಡಿಸಿದ ಹಡಗು ಈಗ ಇರಾನ್‌ (Iran) ಜಲ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ ಎಂದು ವರದಿಯಾಗಿದೆ.   ಇದನ್ನೂ ಓದಿ: 2009, 2014, 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? ಗೆದ್ದ ಕಲಿಗಳು ಯಾರು? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

    ಈ ಹಡಗಿನಲ್ಲಿ 17 ಮಂದಿ ಭಾರತೀಯರಿದ್ದು ಇವರ ಬಿಡುಗಡೆ ಸಂಬಂಧ ಭಾರತ ಇರಾನ್‌ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಇಸ್ರೇಲ್‌ ಮೇಲೆ 48 ಗಂಟೆಯ ಒಳಗಡೆ ಇರಾನ್‌ ದಾಳಿ ನಡೆಸಬಹುದು ಎಂಬ ವರದಿಯ ಬೆನ್ನಲ್ಲೇ ಈ ಘಟನೆ ನಡೆದಿದೆ. ಪೋರ್ಚುಗೀಸ್‌ ಧ್ವಜ ಹೊಂದಿದ್ದ ಈ ಹಡಗಿನ ಮೇಲೆ ಇರಾನ್‌ ಸೈನಿಕರು ಹೆಲಿಕಾಪ್ಟರ್‌ನಿಂದ ನೇರವಾಗಿ ಇಳಿದು ದಾಳಿ ಮಾಡಿ ವಶ ಪಡಿಸಿದ್ದಾರೆ. ಈ ಹಡಗು ಇಸ್ರೇಲಿ ಬಿಲಿಯನೇರ್ ಇಯಾಲ್ ಆಫರ್ ಒಡೆತನದ ಲಂಡನ್ ಮೂಲದ ಜೊಡಿಯಾಕ್ ಮಾರಿಟೈಮ್‌ನೊಂದಿಗೆ ಕಂಪನಿಯೊಂದಿಗೆ ಸಂಯೋಜಿತವಾಗಿದೆ. ಈ ಹಡಗು ಏ.15ರ ರಾತ್ರಿ ಮುಂಬೈ ಬಂದರಿಗೆ ಆಗಮಿಸಬೇಕಿತ್ತು. ಇದನ್ನೂ ಓದಿ: ಇರಾನ್‌ ದಾಳಿ ಸಾಧ್ಯತೆ – ಇಸ್ರೇಲ್‌ಗೆ ಯುದ್ಧ ನೌಕೆ ಕಳುಹಿಸಿದ ಅಮೆರಿಕ

    ಸೋವಿಯತ್ ಕಾಲ ಮಿಲ್ ಎಂಐ -17 ಹೆಲಿಕಾಪ್ಟರ್ ಬಳಸಿ ಈ ದಾಳಿ ಮಾಡಿದ್ದು, ಇದನ್ನು ಇರಾನಿನ ರೆವಲ್ಯೂಷನ್‌ ಗಾರ್ಡ್‌ ಮತ್ತು ಇರಾನ್ ಬೆಂಬಲಿತ ಯೆಮೆನ್ ಹೌತಿ ಬಂಡುಕೋರರು ಈ ಹಿಂದೆ ಬಳಸಿದ್ದರು.

    ಇಸ್ರೇಲ್‌ ಎಚ್ಚರಿಕೆ: ಹಡಗನ್ನು ಇರಾನ್‌ ವಶಪಡಿಸಿಕೊಂಡ ಬೆನ್ನಲ್ಲೇ ಇಸ್ರೇಲ್‌ ಸಿಟ್ಟಾಗಿದೆ. ಪರಿಸ್ಥಿತಿಯನ್ನು ಮತ್ತಷ್ಟು ಉಲ್ಭಣಗೊಳಿಸಿದರೆ ಅದರ ಪರಿಣಾಮಗಳನ್ನು ಇರಾನ್‌ ಎದುರಿಸಬೇಕಾಗಬಹುದು ಎಂದು ಇಸ್ರೇಲ್‌ ಸೇನೆ ಎಚ್ಚರಿಕೆ ನೀಡಿದೆ.

    ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್‌ (Israel) ಮೇಲೆ ಇರಾನ್‌ ದಾಳಿ ನಡೆಸಬಹುದು ಎಂದು ಅಮೆರಿಕದ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧಾರಿಸಿ ಶುಕ್ರವಾರ ಮಾಧ್ಯಮಗಳು ವರದಿ ಮಾಡಿದ್ದವು. ಏಪ್ರಿಲ್‌ 1 ರಂದು ಸಿರಿಯಾದಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಮೇಲೆ ಬಾಂಬ್‌ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕಮಾಂಡರ್‌ ಸೇರಿದಂತೆ 7 ಮಂದಿ ಇರಾನ್‌ ಮಿಲಿಟರಿ ಸಲಹೆಗಾರರು ಮೃತಪಟ್ಟಿದ್ದರು. ಈ ಏರ್‌ ಸ್ಟ್ರೈಕ್‌ ಅನ್ನು ಇಸ್ರೇಲ್‌ ಮಾಡಿದೆ ಎಂದು ಇರಾನ್‌ ದೂರಿದರೆ ಇಸ್ರೇಲ್‌ ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಈ ದಾಳಿಗೆ ಪ್ರತೀಕಾರವಾಗಿ ನಾವು ಇಸ್ರೇಲ್‌ ಮೇಲೆ ದಾಳಿ ಮಾಡುತ್ತೇವೆ ಎಂದು ಇರಾನ್‌ ಎಚ್ಚರಿಕೆ ನೀಡಿತ್ತು.

     

  • ಹಡಗು ಡಿಕ್ಕಿಯಾಗಿ ಕುಸಿದ ಸೇತುವೆ- ಬಸ್‌ ನದಿಗೆ ಉರುಳಿ ಇಬ್ಬರ ದುರ್ಮರಣ

    ಹಡಗು ಡಿಕ್ಕಿಯಾಗಿ ಕುಸಿದ ಸೇತುವೆ- ಬಸ್‌ ನದಿಗೆ ಉರುಳಿ ಇಬ್ಬರ ದುರ್ಮರಣ

    ಬೀಜಿಂಗ್:‌ ಕಂಟೈನರ್ ಹಡಗೊಂದು (Container Ship) ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಇಬ್ಬರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.

    ಈ ಘಟನೆಯು ಚೀನಾದ (China) ಹಾಂಗ್ ಕಾಂಗ್‌ನ ವಾಯುವ್ಯಕ್ಕೆ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಗುವಾಂಗ್‌ಝೌದಲ್ಲಿ ಸಂಭವಿಸಿದೆ. ಮುಂಜಾನೆ ಗುವಾಂಗ್‌ಝೌವಿನ ನನ್ಶಾ ಜಿಲ್ಲೆಯ ಲಿಕ್ಸಿನ್ಶಾ ಸೇತುವೆಗೆ ಖಾಲಿ ಕಂಟೈನರ್ ಹಡಗು ಡಿಕ್ಕಿ ಹೊಡೆದು ಸೇತುವೆಯ ಒಂದು ಭಾಗ ಕುಸಿದಿದೆ ಎಂದು ಹೇಳಲಾಗುತ್ತಿದೆ.

    ಘಟನೆಯ ವೇಳೆ ಇದೇ ಸೇತುವೆ ಮೇಲೆ ಬಸ್ಸೊಂದು ಚಲಿಸುತ್ತಿದ್ದು, ನದಿಗೆ ಉರುಳಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿ, ಮೂವರು ನಾಪತ್ತೆಯಾಗಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಅವಘಡದಿಂದಾಗಿ ಐದು ವಾಹನಗಳಿಗೂ ಹಾನಿಯಾಗಿದೆ. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

    ಬೀಜಿಂಗ್ ಮಾಧ್ಯಮಗಳ ಪ್ರಕಾರ, ಅವಘಡಕ್ಕೆ ಸಂಬಂಧಿಸಿದಂತೆ ಹಡಗಿನ ಕ್ಯಾಪ್ಟನ್‌ ನನ್ನು ಬಂಧಿಸಲಾಗಿದೆ. ಅಪಘಾತದ ಕಾರಣ ಮತ್ತು ಸಾವು- ನೋವುಗಳ ಸಂಖ್ಯೆ ಪ್ರಸ್ತುತ ತನಿಖೆಯಲ್ಲಿದೆ. ಕಂಟೈನರ್‌ ಸೇತುವೆಗೆ ಡಿಕ್ಕಿಯಾದ ಸಮಯದಲ್ಲಿ ಬಸ್ ಸೇತುವೆಯ ಮೇಲೆ ಹಾದು ಹೋಗುತ್ತಿದ್ದು, ನದಿಗೆ ಬಿದ್ದಿದೆ. ಹಡಗಿನಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ತಂಡಗಳು ಕಾರ್ಯನಿರ್ವಹಿಸುತ್ತಿವೆ.

    ಸಂಚಾರ ಸ್ಥಗಿತ: ರಕ್ಷಣಾ ತಂಡಗಳು ಘಟನಾ ಸ್ಥಳದಲ್ಲಿವೆ. ಆದರೆ ಇತರ ಸಾವು-ನೋವುಗಳ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಘಟನೆಯ ನಂತರ ಸೇತುವೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ನಿವಾಸಿಗಳಿಗೆ ಪ್ರಯಾಣಿಸಲು ದೋಣಿ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.