Tag: consumption

  • ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ – ಐವರು ಸಾವು

    ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ – ಐವರು ಸಾವು

    – ಮಹಿಳೆಯರು ಸೇರಿ ಹಲವಾರು ಆಸ್ಪತ್ರೆಗೆ ದಾಖಲು

    ತಿರುವನಂತಪುರಂ: ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿ ಐವರು ಸಾವನ್ನಪ್ಪಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಾಂಜಿಕೋಡ್‍ನಲ್ಲಿ ನಡೆದಿದೆ.

    ಮೃತ ಐವರನ್ನು ರಾಮನ್ (61), ಅಯ್ಯಪ್ಪನ್ (55), ಅರುಣ್ (22), ಶಿವನ್ (45) ಮತ್ತು ಮೂರ್ತಿ (24) ಎಂದು ಗುರುತಿಸಲಾಗಿದೆ. ಈ ಐವರು ಪಯಾತುಕಾಡು ಪ್ರದೇಶದ ಬುಡಕಟ್ಟು ವಾಸಿಗಳಾಗಿದ್ದಾರೆ. ಮೃತರು ಒಂದೇ ಬುಡಕಟ್ಟು ಕಾಲೊನಿಯಲ್ಲಿ ವಾಸಿಸುತ್ತಿದ್ದರು, ಭಾನುವಾರ ಸಂಜೆ ಒಟ್ಟಿಗೆ ಮದ್ಯ ಸೇವಿಸಿ ಅಂದೇ ರಾತ್ರಿಯಲ್ಲಿ ಕುಸಿದು ಬಿದಿದ್ದಾರೆ.

    ಈ ಐವರಲ್ಲಿ ಒಬ್ಬರು ಭಾನುವಾರ ರಾತ್ರಿಯೇ ನಿಧನರಾಗಿದ್ದರೆ, ಉಳಿದ ನಾಲ್ವರು ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತರು ನಿರಂತರವಾಗಿ ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇವರ ಜೊತೆ ಮದ್ಯ ಸೇವಿಸಿದ ಮಹಿಳೆಯರೂ ಸೇರಿದಂತೆ ಇನ್ನೂ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವರನ್ನು ಪಾಲಕ್ಕಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತರು ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸರು, ಬುಡಕಟ್ಟು ಕಾಲೋನಿಯಲ್ಲಿ ವಾಸಿಸುವ ಜನರೆಲ್ಲರೂ ಒಂದೇ ಮದ್ಯ ಸೇವಿಸಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಇಂದು ಸಂಜೆ ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯ ವರದಿ ಬರಲಿದ್ದು, ಅದರಲ್ಲಿ ಸಾವಿಗೆ ನಿಖರ ಕಾರಣ ಯಾವುದು ಎಂಬುದನ್ನು ಖಚಿತ ಪಡಿಸಿಕೊಂಡು ತಿಳಿಸುತ್ತೇವೆ ಎಂದು ಹೇಳಿದ್ದಾರೆ.

  • ಉ.ಕನ್ನಡ ಜಿಲ್ಲೆಯಾದ್ಯಂತ ತಂಬಾಕು ಉತ್ಪನ್ನ, ಮಾರಾಟ ಹಾಗೂ ಬಳಕೆ ನಿಷೇಧ

    ಉ.ಕನ್ನಡ ಜಿಲ್ಲೆಯಾದ್ಯಂತ ತಂಬಾಕು ಉತ್ಪನ್ನ, ಮಾರಾಟ ಹಾಗೂ ಬಳಕೆ ನಿಷೇಧ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ತಂಬಾಕು ಉತ್ಪನ್ನ, ಮಾರಾಟ ಹಾಗೂ ಬಳಕೆ ಮಾಡುವುದನ್ನು ನಿಷೇಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ.ಅವರು ಆದೇಶ ಹೊರಡಿಸಿದ್ದಾರೆ.

    ಪಾನ್ ಮಸಾಲಾ ಮತ್ತು ಅಡಿಕೆಯಿಂದ ತಯಾರಾದ ಉತ್ಪನ್ನಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಹೊಗೆ ರಹಿತ ತಂಬಾಕು ಉತ್ಪನ್ನಗಳನ್ನು ಮಾರಾಟ ಮತ್ತು ಬಳಕೆ ಮಾಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಕೊರೊನಾ ಹತೋಟಿಗೆ ಬರುವವರೆಗೂ ಈ ನಿಷೇಧ ಜಾರಿಯಲ್ಲಿ ಇರುತ್ತದೆ ಎಂದು ಡಿಸಿ ಅದೇಶ ಮಾಡಿದ್ದಾರೆ.

    ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ, ಸಾಂಕ್ರಾಮಿಕ ರೋಗಗಳ ಕಾಯ್ದೆ-1897, ವಿಪತ್ತು ನಿರ್ವಹಣಾ ಕಾಯ್ದೆ-2005, ಐಪಿಸಿ-1960, ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಲಾಗುವುದು. ಈ ನಿಯಮವನ್ನು ಉಲ್ಲಂಘಿಸಿದರೆ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

  • ಸ್ಯಾನಿಟೈಜರ್ ಸೇವಿಸಿ ತಲೆಮರೆಸಿಕೊಂಡವರಿಗಾಗಿ ಪೊಲೀಸರ ಹುಡುಕಾಟ

    ಸ್ಯಾನಿಟೈಜರ್ ಸೇವಿಸಿ ತಲೆಮರೆಸಿಕೊಂಡವರಿಗಾಗಿ ಪೊಲೀಸರ ಹುಡುಕಾಟ

    ಹುಬ್ಬಳ್ಳಿ: ಸ್ಯಾನಿಟೈಜರ್ ಕುಡಿದು ಅಕ್ಕ-ತಮ್ಮ ಸಾವನ್ನಪ್ಪಿದ ಘಟನೆಯಿಂದ ಹುಬ್ಬಳ್ಳಿಯ ಕಲಘಟಗಿ ಠಾಣೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

    ಕಲಘಟಗಿಯ ಗಂಬ್ಯಾಪುರದಲ್ಲಿ 15 ಜನ ಮದ್ಯವ್ಯಸನಿಗಳು ಸ್ಯಾನಿಟೈಜರ್ ಸೇವಿಸಿದ್ದರು. ಇದೇ ಸ್ಯಾನಿಟೈಜರ್ ಕುಡಿದು ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಅಕ್ಕ ಹಾಗೂ ತಮ್ಮ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

    ಇವರ ಜೊತೆ ಇನ್ನು 13 ಜನರು ಸ್ಯಾನಿಟೈಸರ್ ಸೇವನೆ ಮಾಡಿದ್ದರು ಎನ್ನಲಾಗಿದೆ. ಅದರಲ್ಲಿ ನಾಲ್ವರನ್ನು ಕಲಘಟಗಿ ಇನ್ಸ್ ಪೆಕ್ಟರ್ ವಿಜಯ ಬಿರಾದಾರ ನೇತೃತ್ವದಲ್ಲಿ ವಶಕ್ಕೆ ಪಡೆದು ಚಿಕಿತ್ಸೆಗಾಗಿ ಕಿಮ್ಸ್ ಗೆ ಕಳುಹಿಸಿಕೊಡಲಾಗಿದೆ. ತಲೆಮರೆಸಿಕೊಂಡಿದ್ದ 9 ಜನರಿಗೆ ಹುಡುಕಾಟ ನಡೆಸುತ್ತಿದ್ದಾರೆ.

    ಗ್ರಾಮಕ್ಕೆ ಕಲಬೆರಕೆ ಸ್ಯಾನಿಟೈಸರ್ ತಂದವರನ್ನು ಹುಡುಕಲು ತಂಡ ರಚಿಸಲಾಗಿದ್ದು, ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪೊಲೀಸರು ಜನತೆಗೆ ಧೈರ್ಯ ತುಂಬುತ್ತಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಯ ವಾಹನದ ಮುಖಾಂತರ ಗ್ರಾಮಸ್ಥರು ಯಾರು ಭಯಪಡದೇ ಬಂದು ನಿಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ. ಜೊತೆಗೆ ಯಾರೂ ಸ್ಯಾನಿಟೈಜರ್ ಸೇವಿಸವೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.