Tag: Consumers

  • ಉತ್ತರ ಕನ್ನಡದ ಬ್ಯಾಂಕ್‍ಗಳಲ್ಲಿ ಕೊಳೆಯುತ್ತಿವೆ ನಾಲ್ಕೂವರೆ ಕೋಟಿ ರೂ.ಗಳ ಹತ್ತು ರೂ. ನಾಣ್ಯ

    ಉತ್ತರ ಕನ್ನಡದ ಬ್ಯಾಂಕ್‍ಗಳಲ್ಲಿ ಕೊಳೆಯುತ್ತಿವೆ ನಾಲ್ಕೂವರೆ ಕೋಟಿ ರೂ.ಗಳ ಹತ್ತು ರೂ. ನಾಣ್ಯ

    ಕಾರವಾರ: ಹತ್ತು ರೂ. ನಾಣ್ಯದ ಕುರಿತ ಅಪ ಪ್ರಚಾರದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಬ್ಯಾಂಕ್‍ಗಳಲ್ಲಿ ನಾಲ್ಕೂವರೆ ಕೋಟಿ ರೂ. ಮೊತ್ತದ ಹತ್ತು ರೂಪಾಯಿ ಮುಖಬೆಲೆಯ ನಾಣ್ಯಗಳು ಚಲಾವಣೆಯಾಗದೇ ಉಳಿದಿವೆ.

    ಹತ್ತು ರೂ. ನಾಣ್ಯವನ್ನು ಆರ್ ಬಿಐ ರದ್ದುಪಡಿಸಿದೆ ಎಂಬ ಸುಳ್ಳು ವದಂತಿಯಿಂದಾಗಿ ಗ್ರಾಹಕರು ಇವುಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಸುಳ್ಳು ಸುದ್ದಿಯಿಂದಾಗಿ ಜಿಲ್ಲೆಯ ವಿವಿಧ ಬ್ಯಾಂಕ್ ಗಳಲ್ಲಿ ಕೂಡಲ್ಪಟ್ಟ 10 ರೂ. ನಾಣ್ಯ ಜಿಲ್ಲೆಯ ವಿವಿಧ ಕರೆನ್ಸಿ ಚೆಸ್ಟ್ ಗಳಲ್ಲಿ (ಹಣ ಪೂರೈಸುವ ಬ್ಯಾಂಕ್ ಗಳು)ನಾಲ್ಕೂವರೆ ಕೋಟಿ ರೂ. ಮೊತ್ತದ 10 ರೂ. ನಾಣ್ಯಗಳು ಸಂಗ್ರಹಗೊಂಡು ಕೊಳೆಯುತ್ತಿದೆ.

    ರಿಸವ್ ಬ್ಯಾಂಕ್ ಗೂ ಬೇಡವಾದ ಹತ್ತುರೂ ನಾಣ್ಯ!
    ಜಿಲ್ಲೆಯ ವಿವಿಧ ಬ್ಯಾಂಕ್‍ಗಳಲ್ಲಿ ಸಂಗ್ರಹವಾದ ನಾಲ್ಕೂವರೆ ಕೋಟಿ ರೂ. ಮೊತ್ತದ ಹಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಪಡೆಯಲು ಸಿದ್ಧವಿಲ್ಲ. ಇತ್ತ ಮಾರುಕಟ್ಟೆಗೆ ಬಿಡಲು ಜನರು ಈ ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಕಳೆದ ವರ್ಷ ನೋಟ್ ಬ್ಯಾನ್ ಸಂದರ್ಭದಲ್ಲಿ ಹತ್ತು ರೂ. ನಾಣ್ಯ ಸಹ ಬ್ಯಾನ್ ಆಗಿದೆ ಎಂಬ ಸುಳ್ಳು ವದಂತಿಯಿಂದಾಗಿ ಜಿಲ್ಲೆಯ ಗ್ರಾಹಕರು ಅನುಮಾನದಿಂದ ನೋಡುವಂತಾಗಿದೆ. ಸರ್ಕಾರ ನಾಣ್ಯವನ್ನು ರದ್ದುಪಡಿಸಿಲ್ಲ ಎಂದು ಅಧಿಕೃತ ಪ್ರಕಟಣೆ ನೀಡಿದರೂ, ಜನ ಮಾತ್ರ ನಂಬುತ್ತಿಲ್ಲ. ತಮ್ಮ ಬಳಿ ಇದ್ದ ನಾಣ್ಯವನ್ನು ಸಹ ಬ್ಯಾಂಕ್‍ಗೆ ಜಮಾವಣೆ ಮಾಡಿದ್ದಾರೆ.

    ಇದೆಲ್ಲದರ ಮಧ್ಯೆ ನಕಲಿ ನಾಣ್ಯಗಳು ಚಲಾವಣೆಯಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡಿ, ಹತ್ತು ರೂ. ನಾಣ್ಯ ಸಂಪೂರ್ಣವಾಗಿ ಅಘೋಷಿತ ರದ್ದಾಗಿದೆ. ಜಿಲ್ಲೆಯ ವಿವಿಧ ಕರೆನ್ಸಿ ಚೆಸ್ಟ್ ಗಳಲ್ಲಿ 4.5ಕೋಟಿ ರೂ. ಜಮಾವಣೆಯಾಗಿದೆ ಎನ್ನುತ್ತದೆ ಲೀಡ್ ಬ್ಯಾಂಕ್. ಆರ್ ಬಿಐ ಸಹ ಬ್ಯಾಂಕ್ ನಿಂದ ಈ ಕಾಯಿನ್‍ಗಳನ್ನು ತೆಗೆದಯಕೊಳ್ಳದೆ ಮರು ಚಲಾವಣೆ ಮಾಡಿ ಎಂದು ಹೇಳುತ್ತದೆ. ಆದರೆ ಗ್ರಾಹಕರು ಬ್ಯಾಂಕ್‍ನಿಂದ ಈ ನ್ಯಾಣ್ಯಗಳನ್ನು ಪಡೆಯುತ್ತಿಲ್ಲ. ಹೀಗಾಗಿ ಖಜಾನೆಯಲ್ಲಿಯೇ ಉಳಿಯುವಂತಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಎಸ್.ಪಿಂಜಾರಾ ಬೇಸರ ವ್ಯಕ್ತಪಡಿಸಿದ್ದಾರೆ.

    10-20 ರೂ. ನೋಟಿಗೂ ಬಂತು ಬರ
    ಹತ್ತು ಮತ್ತು ಇಪ್ಪತ್ತು ರೂ. ನೋಟುಗಳಿಗೆ ಜಿಲ್ಲೆಯಲ್ಲಿ ಬೇಡಿಕೆ ಹೆಚ್ಚಿದೆ. ಹೋಟೆಲ್, ಅಂಗಡಿ ಮುಂಗಟ್ಟಿನಲ್ಲಿ ಗ್ರಾಹಕರಿಗೆ ಚಿಲ್ಲರೆ ನೀಡಲು ದೊಡ್ಡ ಕೊರತೆ ಎದುರಾಗಿದ್ದು, ವ್ಯಾಪಾರಸ್ಥರು ಪರದಾಡುವಂತಾಗಿದೆ.

    ಜಿಲ್ಲೆಯ ಬ್ಯಾಂಕ್‍ಗಳಿಗೂ ಈ ನೋಟುಗಳ ಸರಬರಾಜು ಇಳಿಮುಖವಾಗಿದ್ದು, ನಾಲ್ಕು ತಿಂಗಳಿಗೊಮ್ಮೆ ಆರ್ ಬಿಐನಿಂದ ಬ್ಯಾಂಕ್‍ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಈ ವೇಳೆ ದೊಡ್ಡ ಮೊತ್ತದ ನೋಟುಗಳು ಅಧಿಕ ಸರಬರಾಜಾಗುತ್ತಿವೆ. ನಂತರ ಚಿಕ್ಕ ಮೊತ್ತದ ನೋಟುಗಳು ಸರಬರಾಜಾಗುತ್ತಿವೆ. ಕಳೆದ ದೀಪಾಳಿಯಲ್ಲಿ ಜಿಲ್ಲೆಗೆ 40 ಲಕ್ಷ ರೂ.ನಷ್ಟು ಮೊತ್ತದ ಸಣ್ಣ ಮುಖಬೆಲೆಯ ನೋಟುಗಳು ಪೂರೈಕೆಗೊಂಡಿದ್ದವು. ನಂತರ ಈ ನೋಟುಗಳ ಪೂರೈಕೆಯಾಗಿಲ್ಲ ಎಂಬುದು ಬ್ಯಾಂಕ್ ಮೂಲದ ಮಾಹಿತಿ.

  • ರಾತ್ರೋ ರಾತ್ರಿ ಖಾಲಿ ಮಾಡಲು ಯತ್ನಿಸಿದ ಕಂಪನಿ- ನ್ಯಾಯ ಸಿಗೋವರೆಗೆ ಬಿಡಲ್ಲ ಎಂದ ಗ್ರಾಹಕರು

    ರಾತ್ರೋ ರಾತ್ರಿ ಖಾಲಿ ಮಾಡಲು ಯತ್ನಿಸಿದ ಕಂಪನಿ- ನ್ಯಾಯ ಸಿಗೋವರೆಗೆ ಬಿಡಲ್ಲ ಎಂದ ಗ್ರಾಹಕರು

    ನೆಲಮಂಗಲ: ಜನರಿಂದ ಅಕ್ರಮವಾಗಿ ಹಣ ಪಡೆದು ಕಾರುಗಳನ್ನು ನೀಡಿ ವ್ಯವಹಾರ ನಡೆಸುತ್ತಿದ್ದ ಯೆಲ್ಲೋ ಎಕ್ಸ್ ಪ್ರೆಸ್ ಕಂಪನಿಯನ್ನು ಸಿಐಡಿ ಅಧಿಕಾರಿಗಳು ಸೀಜ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಆದರೆ ಕಂಪನಿ ಇದ್ದಕ್ಕಿದ್ದಂತೆ ರಾತ್ರೋ ರಾತ್ರಿ ಖಾಲಿ ಮಾಡಲು ಯತ್ನಿಸಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಜಕ್ಕಸಂದ್ರದಲ್ಲಿ ಯೆಲ್ಲೋ ಎಕ್ಸ್ ಪ್ರೆಸ್ ಕಂಪನಿಯ ಕಚೇರಿ ಇದೆ. ಆದರೆ ರಾತ್ರೋ ರಾತ್ರಿ ಕಂಪನಿ ವಸ್ತುಗಳನ್ನು ಸಾಗಾಟ ಮಾಡಲು ಯತ್ನಿಸಿದೆ. ಇದನ್ನು ಕಂಡ ಗ್ರಾಹಕರು ನಮಗೆ ನ್ಯಾಯ ಸಿಗುವವರೆಗೂ ನಾವು ಬಿಡುವುದಿಲ್ಲ ಎಂದು ತಡೆದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಹೂಡಿಕೆದಾರರು ಇಂದು ಬೆಳಗ್ಗೆ ಕಂಪನಿ ಮುಂದೆ ಜಮಾಯಿಸಿ ಆತಂಕ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರೋ ರಾತ್ರಿ ಕಂಪನಿಯ ಪೀಠೋಪಕರಣಗಳನ್ನು ಸಾಗಿಸುವ ಅಗತ್ಯವೇನಿತ್ತು ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ. ಅಲ್ಲದೆ ತನಿಖೆ ಹಂತದಲ್ಲಿ ಈ ರೀತಿಯ ಬೆಳವಣಿಗೆ ಕಂಡು, ಕಾರು ಖರೀದಿಸಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರು ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

  • ನೀವು ತಿನ್ನುವ ಬಟಾಣಿ ಆರೋಗ್ಯಕ್ಕೆ ತರಬಹುದು ಕುತ್ತು!

    ನೀವು ತಿನ್ನುವ ಬಟಾಣಿ ಆರೋಗ್ಯಕ್ಕೆ ತರಬಹುದು ಕುತ್ತು!

    ಚಿಕ್ಕೋಡಿ(ಬೆಳಗಾವಿ): ಬಟಾಣಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಪಲಾವ್, ಪಲ್ಯ, ಫ್ರೈಡ್ ರೈಸ್ ಹೀಗೆ ನಾನಾ ವಿಧದ ಅಡುಗೆಗೆ ಬಳಸುತ್ತೇವೆ. ಆದರೆ ಅದೇ ಬಟಾಣಿ ಇದೀಗ ಕೆಮಿಕಲ್‍ಮಯವಾಗಿ ಪರಿವರ್ತನೆಯಾಗಿದ್ದು, ಆರೋಗ್ಯಕ್ಕೆ ಕುತ್ತು ತರುತ್ತಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಾಗೂ ಚಿಕ್ಕೋಡಿ ಭಾಗದಲ್ಲಿ ಪ್ರತಿನಿತ್ಯ ಇಂಥ ವಿಷಪೂರಿತ ತರಕಾರಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಲಬೆರಕೆ ದಂಧೆ ಈಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ. ಗ್ರಾಮೀಣ ಜನರಿಗೂ ಈಗ ಮೋಸದ ದಂಧೆ ಕಾಡಲು ಆರಂಭಿಸಿದೆ. ಹಸಿ ತರಕಾರಿ ಕಾಳುಗಳು ಹಚ್ಚ ಹಸಿರಾಗಿ, ಅಂದವಾಗಿ ಕಾಣಲು ಕೆಮಿಕಲ್ ಬಣ್ಣ ಬಳಿದು ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಬಟಾಣಿ ಪ್ರಮುಖ. ಇಂತಹ ದಂಧೆಯನ್ನು ‘ಪಬ್ಲಿಕ್ ಟಿವಿ’ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿದೆ.

    ಹಚ್ಚ ಹಸಿರಾಗಿ ಕಾಣುವ ಬಟಾಣಿ ಕಾಳುಗಳು ನೈಸರ್ಗಿಕವಲ್ಲ. ಇದಕ್ಕೆ ಕೆಮಿಕಲ್ ಮಿಶ್ರಿತ ಬಣ್ಣವನ್ನ ಬಳಸಿ ಫುಲ್ ಕಲರ್‍ಫುಲ್ ಮಾಡುತ್ತಾರೆ. ಹಸಿರಾಗಿ ಕಾಣಲು ಹೀಗೆ ವಿಷಪೂರಿತ ಬಣ್ಣ ಬಳಿಯಲಾಗುತ್ತದೆ. ಕಲರ್ ನೋಡಿದ ಗ್ರಾಮೀಣ ಭಾಗದ ಜನತೆ ಮೋಸ ಹೋಗಿ ಕೊಂಡುಕೊಳ್ಳುತ್ತಿದ್ದು, ತಮ್ಮ ಆರೋಗ್ಯಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಕೆಮಿಕಲ್ ಮಿಶ್ರಣ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ನಿದ್ರಾ ಸ್ಥಿತಿಯಲ್ಲಿದ್ದಾರೆ.

    ಈ ದಂಧೆಕೋರರು ಪಟ್ಟಣ ಪ್ರದೇಶಗಳಿಗೆ ಆಗಮಿಸುವ ಗ್ರಾಮೀಣ ಜನರನ್ನು ಟಾರ್ಗೆಟ್ ಮಾಡಿಕೊಂಡು, ಪಟ್ಟಣಗಳ ಸಂತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ. ಸಂತೆಗೆ ಹೆಚ್ಚು ಗ್ರಾಮೀಣ ಪ್ರದೇಶದ ಜನ ಬರುತ್ತಾರೆ. ಬಣ್ಣಕ್ಕೆ ಮಾರು ಹೋಗಿ ಇಂತಹ ಕೆಮಿಕಲ್ ಮಿಶ್ರಿತ ತರಕಾರಿಯನ್ನು ಖರೀದಿ ಮಾಡುತ್ತಿದ್ದಾರೆ. ಹಳ್ಳಿ ಜನರಿಗೆ ಇದ್ಯಾವುದರ ಅರಿವಿಲ್ಲದೆ ಖರೀದಿ ಮಾಡುತ್ತಿದ್ದರೆ, ನಗರದ ವಿದ್ಯಾವಂತರು ಸಹ ಇಂತಹ ಕಲರ್‍ಫುಲ್ ಬಟಾಣಿಗಳಿಗೆ ಮಾರು ಹೋಗುತ್ತಿದ್ದಾರೆ.

    ಮೊದಲು ಬೆಂಗಳೂರು ಸೇರಿದಂತೆ ಮಹಾ ನಗರಗಳ ಜನರನ್ನು ಟಾರ್ಗೆಟ್ ಮಾಡಿ ಈ ದಂಧೆ ನಡೆಯುತ್ತಿತ್ತು. ಆದರೆ ಇದೀಗ ಗ್ರಾಮೀಣ ಭಾಗಕ್ಕೂ ಈ ದಂಧೆ ಒಕ್ಕರಿಸಿದ್ದು, ತಾಜಾ ತರಕಾರಿ ಸೇವಿಸುತ್ತಿದ್ದ ಗ್ರಾಮೀಣ ಜನ ಕೂಡ ಈಗ ವಿಷಪೂರಿತ ತರಕಾರಿ ಸೇವನೆ ಮಾಡುವಂತಾಗಿದೆ.

    ಇಂತಹ ವಿಷಪೂರಿತ ಬಣ್ಣದ ಸೇವನೆಯಿಂದ ಕ್ಯಾನ್ಸರ್ ನಂತ ಮಾರಕ ರೋಗಗಳು ಬರುವ ಸಾಧ್ಯತೆ ಹೆಚ್ಚು. ಆದರೂ ಈ ದಂಧೆ ರಾಜರೋಷವಾಗಿ ಪ್ರತಿನಿತ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ದಂಧೆ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಬಟಾಣಿಗೆ ಬಳಸುವ ಕೆಮಿಕಲ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಈ ಬಗ್ಗೆ ನಮ್ಮ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ. ಜನ ಸಹ ಈ ಕುರಿತು ಜಾಗೃತವಾಗಬೇಕು. ಇಲಾಖೆಯಿಂದ ಸಹ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

  • ಆಭರಣ ಪ್ರಿಯರಿಗೆ ಶಾಕ್ – ಮತ್ತೆ ಏರಿಕೆಯಾದ ಬಂಗಾರದ ಬೆಲೆ

    ಆಭರಣ ಪ್ರಿಯರಿಗೆ ಶಾಕ್ – ಮತ್ತೆ ಏರಿಕೆಯಾದ ಬಂಗಾರದ ಬೆಲೆ

    ಬೆಂಗಳೂರು: ಆಭರಣ ಪ್ರಿಯರು ಇನ್ನೂ ಮುಂದೆ ಚಿನ್ನವನ್ನು ಖರೀದಿಸುವಾಗ ಯೋಚಿಸಬೇಕಾದ ಸಮಯ ಬಂದಿದೆ. ಯಾಕೆಂದರೆ ಬಂಗಾರದ ಬೆಲೆ ಮತ್ತೆ ಏರಿಕೆಯಾಗಿದೆ.

    ದೇಶದಲ್ಲಿ ಚಿನ್ನದ ಬೆಲೆ ಮತ್ತೆ ಮತ್ತೆ ಬೆಲೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಒಂದೇ ದಿನಕ್ಕೆ 22 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನಕ್ಕೆ 1,790 ರೂ ಹೆಚ್ಚಳವಾಗಿದ್ದರೆ, 24 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನಕ್ಕೆ 1,800 ರೂ. ಏರಿಕೆಯಾಗಿದೆ. ಅಂದರೆ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 40,790 ರೂ. ಆದರೆ 24 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನ 44,790 ರೂಪಾಯಿ ಆಗಿದೆ.

    ಫೆಬ್ರವರಿ 20ರಂದು 22 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನಕ್ಕೆ 39,090ರೂ. ಇತ್ತು. ಆದರೆ ಇಂದು 40,790 ರೂ. ಗೆ ಏರಿಕೆಯಾಗಿದೆ. ಹಾಗೇ 24 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನಕ್ಕೆ 42,990 ರೂ ಇದ್ದ ಬಂಗಾರ, ಇವತ್ತು 44,790 ರೂ.ಗೆ ಜಿಗಿದಿದೆ.

  • ಗ್ರಾಹಕರೇ ಗಮನಿಸಿ – ಮಾರ್ಚ್‍ನಲ್ಲಿ 6 ದಿನ ತೆರೆಯಲ್ಲ ಬ್ಯಾಂಕ್ ಬಾಗಿಲು

    ಗ್ರಾಹಕರೇ ಗಮನಿಸಿ – ಮಾರ್ಚ್‍ನಲ್ಲಿ 6 ದಿನ ತೆರೆಯಲ್ಲ ಬ್ಯಾಂಕ್ ಬಾಗಿಲು

    ಬೆಂಗಳೂರು: ಮಾರ್ಚ್ ತಿಂಗಳಲ್ಲಿ 6 ದಿನಗಳ ಕಾಲ ಬಾಂಕ್‍ಗಳ ಬಾಗಿಲು ಮುಚ್ಚಲಿದೆ. ಹೊಸ ಪಿಂಚಣಿ ಯೋಜನೆ ರದ್ಧತಿ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‍ಗಳ ನೌಕರರ ಸಂಘಟನೆಗಳು ಮುಷ್ಕರಕ್ಕೆ ಕರೆಕೊಟ್ಟಿದ್ದು, ಇದರ ಪರಿಣಾಮವನ್ನು ಗ್ರಾಹಕರು ಎದುರಿಸಬೇಕಾಗಿದೆ.

    ಹೌದು. ಮಾರ್ಚ್ 11ರಿಂದ 13ರವರೆಗೆ ಮೂರು ದಿನಗಳ ಕಾಲ ಮುಷ್ಕರ ನಡೆಸಲು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‍ಗಳ ನೌಕರರ ಸಂಘಟನೆಗಳು ನಿರ್ಧರಿಸಿವೆ. ಅಂದರೆ ಮಾರ್ಚ್ ತಿಂಗಳ ಎರಡನೇ ವಾರದ ಬುಧವಾರ, ಗುರುವಾರ ಹಾಗೂ ಶುಕ್ರವಾರ ಮುಷ್ಕರ ನಡೆಯಲಿದೆ. ಇದರಿಂದ ಈ ದಿನಗಳಲ್ಲಿ ಯಾವುದೇ ಬ್ಯಾಂಕ್ ವ್ಯವಹಾರಗಳು ನಡೆಯಲ್ಲ.

    ಅಲ್ಲದೇ ಮಾರ್ಚ್ ಎರಡನೇ ವಾರ ಹೋಳಿ ಹಬ್ಬವಿದ್ದು, ಈ ಮುಷ್ಕರ ನಡೆಯುವುದರಿಂದ ನಗದು ಮೂಲಕ ವ್ಯವಹರಿಸುವ ಸಾರ್ವಜನಿಕರು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಮಾರ್ಚ್ 8 ಭಾನುವಾರ, ಮಾರ್ಚ್ 10 ಹೋಳಿ ಹುಣ್ಣಿಮೆ ಹಬ್ಬ ಅಂತ ಸರ್ಕಾರಿ ರಜೆಯಿರುತ್ತದೆ. ಇನ್ನು ಮಾರ್ಚ್ 11ರಿಂದ 13ರವರೆಗೂ ಬ್ಯಾಂಕ್ ನೌಕರರು ಮುಷ್ಕರ ನಡೆಯಲಿದೆ. ಆ ಬಳಿಕ ಮಾ. 14ರಂದು ಎರಡನೇ ಶನಿವಾರ, ಮಾ. 15 ಭಾನುವಾರ ಅಂತ ರಜೆ ಇರುತ್ತೆ. ಹೀಗಾಗಿ ಮಾರ್ಚ್ ಎರಡನೇ ವಾರ ಸರಣಿಯಾಗಿ 6 ದಿನಗಳ ಕಾಲ ಬ್ಯಾಂಕ್‍ಗಳ ಬಾಗಿಲು ಮುಚ್ಚಲಿದ್ದು, ಯಾವುದೇ ಬ್ಯಾಂಕ್ ವ್ಯವಹಾರಗಳು ನಡೆಯುವುದು ಕಷ್ಟ ಎನ್ನಲಾಗುತ್ತಿದೆ.

    ಇದರಿಂದ ದಿನನಿತ್ಯದ ವ್ಯವಹಾರಗಳಿಗೆ ಬ್ಯಾಂಕ್‍ಗಳನ್ನು ಅವಲಂಬಿಸಿರುವವರು ಪರಾದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದ್ದು, ಬ್ಯಾಂಕ್‍ಗಳ ಮೂಲಕ ವಿವಿಧ ಶುಲ್ಕ ಪಾವತಿ, ಡಿಡಿ ಮೂಲಕ ಹಣ ವರ್ಗಾವಣೆ ಹೀಗೆ ಇತರೆ ಬ್ಯಾಂಕ್ ಕೆಲಸಗಳನ್ನು ಗ್ರಾಹಕರು ಮಾ. 7ರ ಅಂತ್ಯದ ವೇಳೆ ಪೂರ್ಣಗೊಳಿಸಿಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.

  • ಚೆಲ್ಲುವ ಪ್ರತಿ 10 ಗ್ರಾಂ. ಆಹಾರಕ್ಕೂ 100 ರೂ. ದಂಡ- ಕೊಡಗಿನ ರೆಸಾರ್ಟ್‍ನಲ್ಲಿ ನಿಯಮ

    ಚೆಲ್ಲುವ ಪ್ರತಿ 10 ಗ್ರಾಂ. ಆಹಾರಕ್ಕೂ 100 ರೂ. ದಂಡ- ಕೊಡಗಿನ ರೆಸಾರ್ಟ್‍ನಲ್ಲಿ ನಿಯಮ

    – ಮಾಜಿ ಸಿಎಂ ಎಚ್‍ಡಿಕೆ, ಸಿದ್ದರಾಮಯ್ಯನವರಿಗೂ ನಿಯಮ ಅನ್ವಯ

    ಮಡಿಕೇರಿ: ಗ್ರಾಹಕರು ಅನ್ನ ಚೆಲ್ಲದಂತೆ ಕೊಡಗಿನ ಪ್ರತಿಷ್ಠಿತ ರೆಸಾರ್ಟ್ ನಿಯಮ ರೂಪಿಸಿದ್ದು, ಭಾರೀ ಮೊತ್ತದ ದಂಡವನ್ನು ವಿಧಿಸುತ್ತಿದೆ.

    ಮಡಿಕೇರಿ ಹೊರವಲಯದಲ್ಲಿರುವ ‘ಇಬ್ಬನಿ’ ರೆಸಾರ್ಟ್ ಈ ನಿಯಮ ಅಳವಡಿಸಿಕೊಂಡಡಿದೆ. ಗ್ರಾಹಕರು ಮತ್ತು ತನ್ನ ಸಿಬ್ಬಂದಿಗೆ ಈ ನಿಯಮ ಕಡ್ಡಾಯಗೊಳಿಸಿದೆ. ಹತ್ತು ಗ್ರಾಂ. ಆಹಾರ ಚೆಲ್ಲಿದರೆ ಅದರ ಹತ್ತುಪಟ್ಟು ಅಂದರೆ ನೂರು ರೂಪಾಯಿ ದಂಡ ವಿಧಿಸುತ್ತದೆ. ಈ ನಿಯಮ ಪಾಲಿಸುವ ಗ್ರಾಹಕರು ಮಾತ್ರ ಇಲ್ಲಿ ರೂಮ್ ಬುಕ್ ಮಾಡಿಕೊಳ್ಳಬಹುದು. ಇದನ್ನು ಪಾಲಿಸದಿದ್ದಲ್ಲಿ ರೂಮ್ ಕೊಡುವುದಿಲ್ಲ. ಗ್ರಾಹಕರು ಎಷ್ಟು ಬೇಕೋ ಅಷ್ಟು ಆಹಾರ ಹಾಕಿಕೊಂಡು ತಿನ್ನಬಹುದು. ಯಾವುದೇ ತಕರಾರು ಇಲ್ಲ. ಆದರೆ ತಿನ್ನುತ್ತೇವೆ ಎಂದು ಪ್ಲೇಟಿಗೆ ಹಾಕಿಕೊಂಡು ತಿನ್ನದೇ ಬಿಸಾಡುವಂತಿಲ್ಲ. ಹೀಗೆ ಮಾಡಿದಲ್ಲಿ ದಂಡ ಬೀಳುವುದು ಖಚಿತ.

    ಒಂದು ವೇಳೆ ಬಿಸಾಡಿದರೆ ಅಲ್ಲೇ ಇರುವ ರೆಸಾರ್ಟ್ ಸಿಬ್ಬಂದಿ ತಕ್ಷಣವೇ ಅದನ್ನು ಸಂಗ್ರಹಿಸಿಕೊಂಡು ತೂಕ ಮಾಡುತ್ತಾರೆ. ನೀವು ಎಷ್ಟು ಆಹಾರ ಚೆಲ್ಲುತ್ತೀರೋ ಅದರ ಹತ್ತುಪಟ್ಟು ದಂಡವನ್ನು ಕಟ್ಟಿಸಿಕೊಳ್ಳುತ್ತಾರೆ. ಆದರೆ ದಂಡವನ್ನು ಮಾತ್ರ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಸಂಗ್ರಹವಾದ ದಂಡದ ದುಡ್ಡನ್ನು ಫೀಡ್ ಎ ಚೈಲ್ಡ್ ಹೆಸರಿನಲ್ಲಿ ಬೀಗ ಹಾಕಿದ ಒಂದು ಬಾಕ್ಸ್ ಇರಿಸಿದೆ.

    ಆಹಾರ ಬಿಸಾಡಿದವರು ಆ ಬಾಕ್ಸ್‍ಗೆ ಹತ್ತು ಗ್ರಾಂ. ಆಹಾರಕ್ಕೆ ನೂರು ರೂಪಾಯಿಯಂತೆ ಎಷ್ಟು ಆಹಾರ ಎಸೆಯುತ್ತಾರೋ ಅಷ್ಟು ಹಣವನ್ನು ಹಾಕಲೇಬೇಕು. ದಂಡದ ರೂಪದಲ್ಲಿ ಒಂದು ವರ್ಷಗಳ ಕಾಲ ಸಂಗ್ರಹವಾದ ಹಣವನ್ನು ಅನಾಥಾಶ್ರಮಗಳಲ್ಲಿ ವಾಸವಿರುವ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಕೊಡಿಸಲು ಉಪಯೋಗಿಸಲಾಗುತ್ತದೆ. ಇನ್ನೂ ವೇಸ್ಟ್ ಎಂದು ಸಂಗ್ರಹಿಸಲಾದ ಆಹಾರವನ್ನು ರೆಸಾರ್ಟ್ ಆವರಣದಲ್ಲಿ ಸಿಗುವ ಎಲೆಯೊಂದಿಗೆ ಕರಗಿಸಿ ಗೊಬ್ಬರವಾಗಿ ಪರಿವರ್ತಿಸುತ್ತದೆ.

    ಈ ಗೊಬ್ಬರದಿಂದಲೇ ಮತ್ತೆ ತರಕಾರಿ ಸೊಪ್ಪುಗಳನ್ನು ಬೆಳೆಯುತ್ತಿದೆ. ಇಲ್ಲಿ ಬೆಳೆಯುವ ಸೊಪ್ಪು ತರಕಾರಿಗಳಿಗೆ ಈ ಗೊಬ್ಬರ ಹೊರತ್ತುಪಡಿಸಿ ಮತ್ತಾವುದೇ ರಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದಿಲ್ಲ. ಈ ಹಿಂದೆ ರೆಸಾರ್ಟ್‍ಗೆ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೂ ಭೇಟಿ ನೀಡಿ ವಾಸ್ತವ್ಯ ಹೂಡಿದ್ದಾರೆ. ಇವರೆಲ್ಲರಿಗೂ ಇದೇ ನಿಯಮ ಅನ್ವಯಿಸಿದೆ.

  • ಇನ್ಮುಂದೆ ಹೋಟೆಲ್ ತಿಂಡಿ ದುಬಾರಿ

    ಇನ್ಮುಂದೆ ಹೋಟೆಲ್ ತಿಂಡಿ ದುಬಾರಿ

    ಬೆಂಗಳೂರು: ಕಳೆದ ಎರಡು ತಿಂಗಳುಗಳಿಂದ ಈರುಳ್ಳಿ, ತರಕಾರಿ, ದವಸ-ಧಾನ್ಯಗಳು, ಗ್ಯಾಸ್, ಹಾಲಿನ ದರ ಏರಿಕೆಯಾಗಿತ್ತು. ಆದರೆ ಈಗ ಹೋಟೆಲ್ ಊಟ-ತಿಂಡಿ ದರ ಕೂಡ ಸಹ ದುಬಾರಿಯಾಗಿದ್ದು, ಗ್ರಾಹಕರಿಗೆ ಹೋಟೆಲ್ ಮಾಲೀಕರು ಶಾಕ್ ನೀಡಿದ್ದಾರೆ.

    ಕೆಲವೇ ದಿನಗಳಲ್ಲಿ ಹೋಟೆಲ್ ಊಟ-ತಿಂಡಿಗಳ ಬೆಲೆಗಳಲ್ಲಿ ಶೇ. 5 ರಿಂದ 10ರಷ್ಟು ಹೆಚ್ಚಳ ಮಾಡಲು ಬೃಹತ್ ಬೆಂಗಳೂರು ಹೋಟೆಲ್ ಸಂಘ ನಿರ್ಧರಿಸಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರುವ ರಾಜ್ಯದ ಜನತೆಗೆ ಇದು ಬರೆಯೆಳೆದಂತಾಗಿದೆ. ಹಾಲು, ಎಣ್ಣೆ, ಮೊಸರು, ಬೆಳೆ ಕಾಳುಗಳ ಬೆಲೆ ಏರಿಕೆಯಾಗಿರುವುದರಿಂದ ಹೋಟೆಲ್ ಊಟ-ತಿಂಡಿಗಳ ಬೆಲೆ ಏರಿಕೆ ಅನಿವಾರ್ಯ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.

    ಬೆಂಗಳೂರಿನಲ್ಲಿ 17,000 ಹೋಟೆಲ್‍ಗಳಿವೆ. ಇವುಗಳಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಮಟ್ಟದ ಮೂರು ರೀತಿಯ ಹೋಟೆಲ್‍ಗಳು ಸೇರಿದೆ. ಸಣ್ಣ ಮತ್ತು ಮಾಧ್ಯಮ ಗಾತ್ರದ ಹೋಟೆಲ್‍ಗಳಲ್ಲಿ ಇಂದಿನಿಂದಲೇ ಕಾಫಿ, ಟೀ ದರ ಹೆಚ್ಚಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಈ ಹೆಚ್ಚಳ ಜಾರಿಗೆ ಬರಲಿದೆಯಂತೆ. ಈ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಸ್ಟ್ರೀಟ್ ಫುಡ್ ತಿನ್ನೋ ಮುನ್ನ ಎಚ್ಚರ! – ಇದು ಕಿಲ್ಲರ್ ಫುಡ್‍ನ ಡರ್ಟಿ ಕಹಾನಿ

    ಸ್ಟ್ರೀಟ್ ಫುಡ್ ತಿನ್ನೋ ಮುನ್ನ ಎಚ್ಚರ! – ಇದು ಕಿಲ್ಲರ್ ಫುಡ್‍ನ ಡರ್ಟಿ ಕಹಾನಿ

    ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯದು ಯಾವಾಗಲೂ ಬ್ಯುಸಿ ಶೆಡ್ಯೂಲ್. ಹೀಗಾಗಿ ಸ್ಟ್ರೀಟ್ ಫುಡ್‍ಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರ ಹಾರ್ಟ್ ಫೇವರೆಟ್ ಈ ಸ್ಟ್ರೀಟ್ ಫುಡ್‍ಗಳ ಆರ್ಭಟ ನಗರದ ಗಲ್ಲಿಗಲ್ಲಿಯಲ್ಲೂ ಜೋರಾಗಿದೆ. ಅಗ್ಗದ ದರ, ಟೇಸ್ಟಿ ಸ್ಟ್ರೀಟ್ ಫುಡ್‍ಗಳು ಇದೀಗ ಕಿಲ್ಲರ್ ಫುಡ್ ಆಗಿ ಕೆಲವೆಡೆ ಬದಲಾಗುತ್ತಿದೆ. ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಈ ಡರ್ಟಿ ಸ್ಟ್ರೀಟ್ ಫುಡ್ ಸೀಕ್ರೆಟ್ ಬಟಾಬಯಲು ಮಾಡಿದೆ.

    ಸಂಜೆ ಹೊತ್ತಲ್ಲಿ ಸ್ಟ್ರೀಟ್‍ನಲ್ಲಿ ನಿಂತ್ಕೊಂಡು ಗೋಬಿ ಮಂಚೂರಿನೋ, ಸ್ಪೈಸಿ ತಿಂಡಿ ಮೆಲ್ಲೋಣ ಎಂದು ಹೋಗುವವರು ಹೆಚ್ಚು. ಇತ್ತ ಗರಿ ಗರಿ ದೋಸೆ, ಇಡ್ಲಿ, ಬೊಂಡಾ ಇದಕ್ಕೆಲ್ಲಾ ಕಾಂಬಿನೇಷನ್ ಆಗಿ ಚಿಕನ್, ಮಟನ್ ಇದ್ದರೆ ಸಂಜೆ ಹೋದವರು ಅದನ್ನೆಲ್ಲಾ ತಿಂದು ಬರುವಷ್ಟರಲ್ಲಿ ಕತ್ತಲಾಗಿರುತ್ತೆ. ಆ ರೇಂಜ್‍ಗೆ ಸ್ಟ್ರೀಟ್ ಫುಡ್ ನಮ್ಮನ್ನು ಆಕರ್ಷಿಸುತ್ತೆ. ಈ ತಿಂಡಿಗಳು ಅಗ್ಗದ ದರದಲ್ಲೂ ಸಿಗುತ್ತೆ. ಜೊತೆಗೆ ಟೇಸ್ಟ್ ಕೂಡ ಸಖತ್ ಆಗಿರುತ್ತೆ ಎಂದು ಜನ ಸ್ಟ್ರೀಟ್ ಫುಡ್‍ಗಳ ಸೆಂಟರ್ ಮುಂದೆ ಕ್ಯೂ ನಿಲ್ತಾರೆ. ಆದರೆ ಈ ಸ್ಟ್ರೀಟ್‍ಫುಡ್ ಜನರ ಪಾಲಿಗೆ ಕಿಲ್ಲರ್ ಫುಡ್ ಆಗಿದೆ. ಇದೆಲ್ಲಾ ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಗರದ ಜೆಸಿ ರಸ್ತೆ, ಲಾಲ್‍ಬಾಗ್- ನ್ಯಾಷನಲ್ ಕಾಲೇಜು ಸಮೀಪದ ವಿವಿ ಪುರಂ ಫುಡ್ ಸ್ಟ್ರೀಟ್ ಇಡೀ ಬೆಂಗಳೂರಲ್ಲಿ ತುಂಬಾನೇ ಫೇಮಸ್. ಬೆಳಗ್ಗೆ, ಮಧ್ಯಾಹ್ನ ತಡರಾತ್ರಿಯಾದರೂ ಇಲ್ಲಿ ಫುಡ್ ಸಿಗುತ್ತೆ. ಸಂಜೆಯಂತೂ ಇಲ್ಲಿ ಕಾಲಿಡೋಕು ಜಾಗ ಇರಲ್ಲ. ಆದರೆ ಈ ಏರಿಯಾದಲ್ಲಿ ಸಿಗುವ ಕೆಲ ಹೋಟೆಲ್‍ನ ಡರ್ಟಿ ಸೀನ್ ನೋಡಿದರೆ ವಾಕರಿಕೆ ಬರತ್ತೆ.

    ದೋಸೆ ಹೊಯ್ಯುವ ಹೆಂಚು ತೊಳೆದು ಎಷ್ಟು ಕಾಲವಾಗಿದ್ಯೋ ಏನೋ? ಇಡ್ಲಿ ಬೇಯಿಸುವ ಪಾತ್ರೆ ನೋಡಿದರೆ ಜನ್ಮದಲ್ಲಿ ಇಡ್ಲಿ ತಿನ್ನೋದೆ ಬೇಡ ಅನಿಸಿಬಿಡುತ್ತೆ. ಇಡ್ಲಿಗೆ ನೊಣ ಫ್ರೀ ಎನ್ನುವಂತೆ ಬೇಯಿಸಿಟ್ಟ ಇಡ್ಲಿ ಪಕ್ಕ ಕಸದ ಬುಟ್ಟಿಯ ಮುಂದೆ ನೊಣಗಳು ಹಾರಾಡುತ್ತಿರುತ್ತೆ. ಇಲ್ಲಿ ಸ್ವಚ್ಛತೆಗೆ ಮೂರುಕಾಸಿನ ಬೆಲೆ ಇಲ್ಲ. ಅಲ್ಲದೆ ನೀವು ತಿಂದ ಪಾತ್ರೆಗಳನ್ನ ಅವರು ತೊಳೆಯೋದು ನೋಡಿದ್ರೆ ಸುಸ್ತಾಗಿ ಹೋಗ್ತಿರಾ. ನೆಟ್ಟಗೆ ಲೋಟ ತಟ್ಟೆಯನ್ನು ತೊಳೆಯದೇ ಹಾಗೆಯೇ ತಿಂಡಿಗಳನ್ನು ಬಡಿಸಿ ಕೊಡ್ತಾರೆ.

    ಇತ್ತ ಮೆಜೆಸ್ಟಿಕ್ ಬಸ್ ಹಾಗೂ ರೈಲು ನಿಲ್ದಾಣದ ಫುಡ್ ಸ್ಟಾಲ್ ಕಥೆಯಂತೂ ಕೇಳೋದೇ ಬೇಡ. ರೋಡ್‍ನಲ್ಲೇ ಕಿಚನ್, ಡರ್ಟಿ ಫುಡ್‍ನ ದುನಿಯಾ ಇದು. ರಸ್ತೆಯಲ್ಲೆ ತಿಂಡಿ ಲಟ್ಟಿಸುತ್ತಾರೆ, ಬಾಣಲೆ ಇಟ್ಟು ಬೇಯಿಸ್ತಾರೆ. ಕಡೆಗೆ ಧೂಳು ಮುತ್ತಿದ್ದ ಮೇಲೆ ತಿಂಡಿಗಳನ್ನು ಮಾರುತ್ತಾರೆ. ತಿಂಡಿ ಮೇಲೆ ನೋಣವೆಲ್ಲ ಕೂರುತ್ತಿದೆ ಎಂದು ಪ್ರಶ್ನಿಸಿದರೆ ವ್ಯಾಪಾರಿಗಳು ಮಾತ್ರ ಏನೂ ಪ್ರತಿಕ್ರಿಯೆ ಕೊಡದೆ ಬಾಯಿ ಮುಚ್ಚಿ ಇರುತ್ತಾರೆ.

    ಹಾಗೆಯೇ ವಿಜಯನಗರ ಸ್ಟ್ರೀಟ್ ಫುಡ್ ಬಳಿ ಸಣ್ಣ ಚರಂಡಿ ಇದೆ. ಅಲ್ಲೇ ಇಡ್ಲಿ ಇಟ್ಟು, ಇಡ್ಲಿ ತೆಗೆಯುವುದಕ್ಕೆ ಬಳಸೋ ನೀರು ನೋಡಿದರೆ ಅಸಹ್ಯ ಎನಿಸುತ್ತೆ. ಕುಡಿಯುವ ನೀರಿನ ಜಾಗ ಹಾಗೂ ಕೈತೊಳೆಯೊ ಜಾಗಕ್ಕೆ ಏನೂ ವ್ಯತ್ಯಾಸವಿಲ್ಲ. ಹೀಗಿರುವ ಸ್ಥಳದಲ್ಲಿ ತಿಂಡಿ ತಿಂದರೆ ಕಾಯಿಲೆ ಗ್ಯಾರೆಂಟಿ.

    ನಾನ್‍ವೆಜ್ ತಿಂಡಿಗಳಿಗೆ ಫೇಮಸ್ ಆಗಿರುವ ಶಿವಾಜಿನಗರದಲ್ಲಿ ಸ್ವಚ್ಛತೆ ನೋಡಿದರೆ ದಂಗಾಗುತ್ತೀರ. ನೇತು ಹಾಕಿರೋ ಪ್ರಾಣಿಗಳ ದೇಹದಂತೆ ಇಲ್ಲಿ ಊಟದ ಸ್ವಚ್ಛತೆಯೂ ಜೋತು ಬಿದ್ದಿದೆ.

    ಈ ಸ್ಟ್ರೀಟ್ ಫುಡ್ ತಯಾರಕರು ಕಡ್ಡಾಯವಾಗಿ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳಬೇಕು. ಇಲ್ಲವಾದರೆ ಉಗುರಿನಲ್ಲಿರೋ ಫಂಗಸ್ ದೇಹ ಸೇರಿ ಕರುಳುಬೇನೆ ಶುರುವಾಗುತ್ತದೆ. ಜೊತೆಗೆ ಪದೇ ಪದೇ ಕಾಯಿಲೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಸ್ವಚ್ಛತೆಯ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತೆ. ಹೀಗಾಗಿ ಕಡಿಮೆ ಬೆಲೆಗೆ, ಬಿಸಿ ಬಿಸಿ ಸಿಗುತ್ತೆ ಎಂದು ಸ್ಟ್ರೀಟ್ ಫುಡ್ ಮೊರೆ ಹೋಗೋ ಮುನ್ನ ಎಚ್ಚರದಿಂದಿರಿ. ಸ್ವಚ್ಛತೆ ಇಲ್ಲದ ಕಡೆ ಆಹಾರ ತಿಂದು ಆರೋಗ್ಯ ಕೆಡಿಸಿಕೊಳ್ಳಬೇಡಿ.

  • ಮತ್ತೆ ಏರಿಕೆಯಾಯ್ತು ನುಗ್ಗೆಕಾಯಿ ದರ – ಕೆಜಿಗೆ 500 ರಿಂದ 600 ರೂ.

    ಮತ್ತೆ ಏರಿಕೆಯಾಯ್ತು ನುಗ್ಗೆಕಾಯಿ ದರ – ಕೆಜಿಗೆ 500 ರಿಂದ 600 ರೂ.

    ಬೆಂಗಳೂರು: ಇಷ್ಟು ದಿನ ಈರುಳ್ಳಿ ಬೆಲೆಯಿಂದ ಕಂಗಾಲಾಗಿದ್ದ ಗ್ರಾಹಕರು ಈಗ ನುಗ್ಗುಕಾಯಿ ಬೆಲೆ ಕೇಳಿ ಶಾಕ್ ಆಗಿದ್ದಾರೆ.

    ಏಕಾಏಕಿ ನಗರದಲ್ಲಿ ನುಗ್ಗೆಕಾಯಿ ದರ ಹೆಚ್ಚಳವಾಗಿದೆ. ಒಂದು ಕೆಜಿ ನುಗ್ಗೆಕಾಯಿಗೆ ಬರೋಬ್ಬರಿ 500 ರಿಂದ 600 ರೂಪಾಯಿ ತನಕ ಏರಿಕೆಯಾಗಿದೆ. ನುಗ್ಗೆಕಾಯಿ ದರ ಏರಿಕೆಯಿಂದ ಸಾಂಬರ್ ಗೆ ನುಗ್ಗೇಕಾಯಿ ಇಲ್ಲದೆ ಹೇಗೆ ಅಡುಗೆ ಮಾಡೋದು ಅಂತ ಗ್ರಾಹಕರು ತಲೆ ಬಿಸಿ ಮಾಡಿಕೊಂಡಿದ್ದಾರೆ.

    ರಾಜ್ಯಕ್ಕೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶದಿಂದ ನುಗ್ಗೆಕಾಯಿಯನ್ನ ಅಮದು ಮಾಡಿಕೊಳ್ಳಲಾಗ್ತಿತ್ತು. ಆದರೆ ಈ ಬಾರಿ ನೆರೆ ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಾಗಿರುವ ಹಿನ್ನಲೆ ನುಗ್ಗೆ ಮರಗಳು ಬಿದ್ದು ಹೋಗಿವೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ನುಗ್ಗೇಕಾಯಿ ಪೂರೈಕೆ ಆಗುತ್ತಿಲ್ಲ.

    ಇದರ ಪರಿಣಾಮ ನುಗ್ಗೆಕಾಯಿ ದರ ಏರಿಕೆಯಾಗಿದೆ. ಇತ್ತೀಚೆಗೆ ಈರುಳ್ಳಿ ಬೆಲೆ ಗಗನಕ್ಕೆ ಏರಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಈಗ ಗ್ರಾಹಕರಿಗೆ ನುಗ್ಗೆಕಾಯಿ ಬೆಲೆ ಕೇಳಿ ಶಾಕ್ ಆಗಿದೆ. ಹೀಗೆ ದಿನ ಕಳೆದಂತೆ ಒಂದೊಂದೆ ತರಕಾರಿಗಳ ಬೆಲೆ ಏರಿಕೆಯಾದರೆ ಹೇಗಪ್ಪಾ ಅಡುಗೆ ಮಾಡೋದು ಎಂದು ಗ್ರಾಹಕರು ತಲೆ ಕೆಡಿಸಿಕೊಂಡಿದ್ದಾರೆ.

  • 500 ರೂ. ಫುಡ್ ಆರ್ಡರ್ ಮಾಡಿದ್ರೆ 1 ಕೆ.ಜಿ ಈರುಳ್ಳಿ ಉಚಿತ

    500 ರೂ. ಫುಡ್ ಆರ್ಡರ್ ಮಾಡಿದ್ರೆ 1 ಕೆ.ಜಿ ಈರುಳ್ಳಿ ಉಚಿತ

    ಬಾಗಲಕೋಟೆ: ವ್ಯಾಪಾರ ವೃದ್ಧಿಗೆ ಉಚಿತ ಈರುಳ್ಳಿ ಅಸ್ತ್ರ ಪ್ರಯೋಗಿಸಿದ ಬಾಗಲಕೋಟೆಯ ಹೋಟೆಲ್‍ವೊಂದು ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ. 500 ರೂ. ಫುಡ್ ಆರ್ಡರ್ ಮಾಡಿದರೆ 1 ಕೆಜಿ ಈರುಳ್ಳಿ ಉಚಿತವೆಂದು ಗ್ರಾಹಕರನ್ನು ಸೆಳೆಯುವ ಹೊಸ ಪ್ರಯತ್ನಕ್ಕೆ ಕೈಹಾಕಿದೆ.

    ಗಗನಕ್ಕೇರಿದ ಈರುಳ್ಳಿ ಬೆಲೆಯಿಂದ ಜನರು ಕಂಗಾಲಾಗಿದ್ದಾರೆ. ಹೀಗಾಗಿ ಹೋಟೆಲ್ ಪಕ್ವಾನ್‍ನಲ್ಲಿ ಗ್ರಾಹಕರಿಗೆ ಈರುಳ್ಳಿ ಕೊಡುಗೆ ನೀಡಲಾಗುತ್ತಿದೆ. ಮನೆ ಮನೆಗೆ ಆಹಾರ ಪೂರೈಕೆ ಮಾಡುವ ಪಕ್ವಾನ್ ಹೋಟೆಲ್, ವ್ಯಾಪಾರ ವೃದ್ಧಿಗೆ ಈ ಪ್ಲಾನ್ ಮಾಡಿದೆ. 500 ರೂ. ಫುಡ್ ಆರ್ಡರ್ ಮಾಡಿದರೆ 1 ಕೆಜಿ ಈರುಳ್ಳಿ ಉಚಿತ ಎಂಬ ಆಫರ್ ನೀಡುತ್ತಿದೆ.

    ಪಕ್ವಾನ್ ಹೋಟೆಲ್‍ನಲ್ಲಿ 500 ರೂ. ಅಥವಾ ಅದಕ್ಕಿಂತ ಹೆಚ್ಚು ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಮನೆಗೆ ಆಹಾರದ ಜೊತೆ ಈರುಳ್ಳಿ ಪ್ಯಾಕೇಟ್ ಸಹ ಹೊಟೇಲ್ ಸಿಬ್ಬಂದಿ ತಲುಪಿಸುತ್ತಾರೆ. ಇದರ ಜೊತೆಗೆ ಹೋಟೆಲ್‍ಗೆ ಬಂದವರಿಗೆ ಒಂದು ಉಚಿತ ಸಸಿ ಗಿಫ್ಟ್ ಕೂಡ ಕೊಡುತ್ತಾ ಸಿಬ್ಬಂದಿ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.