Tag: Consumer Court

  • ನೀರಿನ ಬಾಟಲಿಗೆ 1 ರೂ. ಜಿಎಸ್‌ಟಿ – ರೆಸ್ಟೋರೆಂಟ್‌ಗೆ 8 ಸಾವಿರ ದಂಡ

    ನೀರಿನ ಬಾಟಲಿಗೆ 1 ರೂ. ಜಿಎಸ್‌ಟಿ – ರೆಸ್ಟೋರೆಂಟ್‌ಗೆ 8 ಸಾವಿರ ದಂಡ

    ಭೋಪಾಲ್‌:  ಕುಡಿಯುವ ನೀರಿನ ಬಾಟಲಿಗೆ (Water Bottle) 1 ರೂ. ಜಿಎಸ್‌ಟಿ (GST) ವಿಧಿಸಿದ್ದಕ್ಕೆ ಮಧ್ಯಪ್ರದೇಶದ ಗ್ರಾಹಕ ನ್ಯಾಯಾಲಯ (Consumer Court) ರೆಸ್ಟೋರೆಂಟ್‌ ಒಂದಕ್ಕೆ 8 ಸಾವಿರ ರೂ. ದಂಡ ವಿಧಿಸಿದೆ.

    ಏನಿದು ಕೇಸ್‌?
    ದೂರುದಾರರಾದ ಐಶ್ವರ್ಯಾ ಅವರು 2021ರಲ್ಲಿ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ಊಟಕ್ಕೆ ಎಂದು ತೆರಳಿದ್ದರು. ಊಟದ ವೇಳೆ ಕುಡಿಯುವ ನೀರಿನ ಬಾಟಲ್‌ ಆರ್ಡರ್‌ ಮಾಡಿದ್ದರು.

    ಊಟದ ಬಳಿಕ ರೆಸ್ಟೋರೆಂಟ್‌ ನೀರಿನ ಬಾಟಲ್ ಮೇಲೂ ಜಿಎಸ್‌ಟಿ ಹಾಕಿತ್ತು. ನೀರಿನ ಬಾಟಲಿಗೆ ಎಂಆರ್‌ಪಿ ದರ 20 ರೂ.ನಿಗದಿಯಾಗಿದ್ದರೆ ರೆಸ್ಟೋರೆಂಟ್‌ 1 ರೂ. ಜಿಎಸ್‌ಟಿ ಸೇರಿಸಿ 29 ರೂ. ದರ ವಿಧಿಸಿತ್ತು. ಹೆಚ್ಚುವರಿಯಾಗಿ 9 ರೂ. ಯಾಕೆ ಪಾವತಿಸಬೇಕು ಎಂದು ದೂರುದಾರರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರೆಸ್ಟೋರೆಂಟ್‌ ಸಿಬ್ಬಂದಿ ಯಾವುದೇ ಸರಿಯಾದ ಕಾರಣ ನೀಡದೇ ಬಿಲ್ಲಿಂಗ್ ಕಾನೂನುಬದ್ಧವಾಗಿದೆ ಎಂದು ಹೇಳಿ ಮರುಪಾವತಿ ಮಾಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಭಾರತ ಪ್ರಪಂಚದಾದ್ಯಂತದ ನಿರಾಶ್ರಿತರಿಗೆ ಆಶ್ರಯ ನೀಡುವ ಧರ್ಮಶಾಲೆಯಲ್ಲ – ಸುಪ್ರೀಂ

    court order law

    ನೀರಿನ ಬಾಟಲಿಗೆ ಎಂಆರ್‌ಪಿಗಿಂತಲೂ ಹೆಚ್ಚಿನ ದರವನ್ನು ವಿಧಿಸಿದ ರೆಸ್ಟೋರೆಂಟ್‌ ನಿರ್ಧಾರವನ್ನು ಐಶ್ವರ್ಯಾ ಅವರು ಗ್ರಾಹಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ವಿಚಾರಣೆ ವೇಳೆ ರೆಸ್ಟೋರೆಂಟ್‌ ಪರ ವಕೀಲರು, ಆಸನ, ಎಸಿ ಮತ್ತು ಟೇಬಲ್‌ ಮೇಲಿನ ಸೇವೆಯಂತಹ ಹೆಚ್ಚುವರಿ ಸೇವೆಗಳನ್ನು ನೀಡಿದ್ದಕ್ಕೆ ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ವಿಧಿಸುವುದು ಸಮರ್ಥನೀಯ ಎಂದು ವಾದಿಸಿದ್ದರು.

    ಕೋರ್ಟ್‌ ರೆಸ್ಟೋರೆಂಟ್‌ ವಾದವನ್ನು ತಿರಸ್ಕರಿಸಿತು. ಬಾಟಲಿ ನೀರಿಗೆ ಜಿಎಸ್‌ಟಿಯನ್ನು ಈಗಾಗಲೇ ಎಂಆರ್‌ಪಿಯಲ್ಲಿ ಸೇರಿಸಲಾಗಿದೆ ಎಂದು ತೀರ್ಪು ನೀಡಿತು. ಜಿಎಸ್‌ಟಿಯಾಗಿ ವಿಧಿಸಲಾದ 1 ರೂ.ಗಳನ್ನು ಮರುಪಾವತಿಸುವಂತೆ ರೆಸ್ಟೋರೆಂಟ್‌ಗೆ ಆದೇಶಿಸಿತು. ಇದನ್ನೂ ಓದಿ: Jaffar Express Hijack – ವೀಡಿಯೋ ರಿಲೀಸ್ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ

    ಮಾನಸಿಕ ಯಾತನೆ ಮತ್ತು ಸೇವೆಯ ಕೊರತೆಗಾಗಿ 5,000 ರೂ., ಕಾನೂನು ವೆಚ್ಚಗಳಿಗಾಗಿ 3,000 ರೂ. ಸೇರಿದಂತೆ ಒಟ್ಟು 8,000 ರೂ.ಗಳನ್ನು ಗ್ರಾಹಕರಿಗೆ ಪಾವತಿಸುವಂತೆ ಕೋರ್ಟ್‌ ರೆಸ್ಟೋರೆಂಟ್‌ಗೆ ಸೂಚಿಸಿತು.

  • ಕಣ ಕಣದಲ್ಲಿ ಕೇಸರಿ ಎಂದ ಮೂವರು ಬಾಲಿವುಡ್ ಸ್ಟಾರ್ ನಟರಿಗೆ ನೋಟಿಸ್

    ಕಣ ಕಣದಲ್ಲಿ ಕೇಸರಿ ಎಂದ ಮೂವರು ಬಾಲಿವುಡ್ ಸ್ಟಾರ್ ನಟರಿಗೆ ನೋಟಿಸ್

    ಜೈಪುರ: ಕಣ ಕಣದಲ್ಲಿ ಕೇಸರಿ ಎಂದು ಗುಟ್ಕಾ ಜಾಹೀರಾತು ನೀಡುತ್ತಿದ್ದ ಬಾಲಿವುಡ್ ನಟರಾದ ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ (Ajay Devgn) ಮತ್ತು ಟೈಗರ್ ಶ್ರಾಫ್‌ಗೆ (Tiger Shroff) ಸಂಕಷ್ಟ ಎದುರಾಗಿದೆ. ಗಂಭೀರ ಕಾನೂನು ಪ್ರಕರಣವೊಂದರಲ್ಲಿ ಜೈಪುರ ಜಿಲ್ಲಾ ಗ್ರಾಹಕ ಆಯೋಗ ಸಂಖ್ಯೆ-2 ಮೂವರು ನಟರಿಗೆ ನೋಟಿಸ್ ಜಾರಿ ಮಾಡಿದೆ.

    ಮೂವರು ನಟರ ಜೊತೆಗೆ ಗುಟ್ಕಾ ತಯಾರಿಕಾ ಕಂಪನಿ ಜೆಬಿ ಇಂಡಸ್ಟ್ರೀಸ್‌ಗೆ ಸಹ ಸಮನ್ಸ್ ಕಳುಹಿಸಲಾಗಿದೆ. ಆಯೋಗವು ಎಲ್ಲರೂ ಇದೇ ಮಾರ್ಚ್ 19ರಂದು ಹಾಜರಾಗುವಂತೆ ಸೂಚನೆ ನೀಡಿದೆ.ಇದನ್ನೂ ಓದಿ: ನಾರಿ ಶಕ್ತಿಗೆ ನನ್ನ ನಮನ – ಮಹಿಳೆಯರಿಗೆ ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

    ಗುಟ್ಕಾ ಉತ್ಪನ್ನವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಅದರಲ್ಲಿ ಕೇಸರಿ ಇದೆ ಎಂದು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುವ ಜಾಹೀರಾತು ಪ್ರಕಟಿಸಲಾಗುತ್ತಿದೆ ಎಂದು ಆರೋಪಿಸಿ ಜೈಪುರ ನಿವಾಸಿ ಯೋಗೇಂದ್ರ ಸಿಂಗ್ ಬಡಿಯಾಲ್ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದು, ದೂರಿನ ಅನ್ವಯ ನೋಟಿಸ್ ನೀಡಲಾಗಿದೆ.

    ಮೂವರು ಬಾಲಿವುಡ್ ನಟರು ಈ ಗುಟ್ಕಾ ಬ್ರ‍್ಯಾಂಡ್ ಅನ್ನು ಪ್ರಚಾರ ಮಾಡುತ್ತಿದ್ದು, ಗ್ರಾಹಕರನ್ನು ಖರೀದಿಸುವಂತೆ ಆಕರ್ಷಿಸುತ್ತಿದ್ದಾರೆ. ಗುಟ್ಕಾ ಉತ್ಪನ್ನವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಅದರಲ್ಲಿ ಕೇಸರಿ ಇದೆ ಎಂದು ದಾರಿತಪ್ಪಿಸುತ್ತಿದ್ದಾರೆ. ಈ ದಾರಿತಪ್ಪಿಸುವ ಜಾಹೀರಾತು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಅನ್ನು ಉಲ್ಲಂಘಿಸುತ್ತದೆ ಮತ್ತು ಸಾರ್ವಜನಿಕರನ್ನು ದಾರಿತಪ್ಪಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

    ಈ ಮೂವರು ನಟರು ಬಹಳ ಸಮಯದಿಂದ ಪಾನ್ ಮಸಾಲಾ ಮತ್ತು ಗುಟ್ಕಾ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. “ಟೇಸ್ಟ್ ಆಫ್ ಬಿಗ್ ಬ್ರಾಂಡ್ಸ್” ಎಂಬ ಟ್ಯಾಗ್‌ಲೈನ್ ಅಡಿಯಲ್ಲಿ ಈ ಜಾಹೀರಾತುಗಳು ಇದನ್ನು “ಕೇಸರ್” ಉತ್ಪನ್ನವೆಂದು ಪ್ರಚಾರ ಮಾಡುತ್ತವೆ. ಆದರೆ ವಾಸ್ತವದಲ್ಲಿ ಇದು ಗುಟ್ಕಾ ಉತ್ಪನ್ನಗಳ ಪ್ರಚಾರವಾಗಿದೆ ಎಂದು ಯೋಗೇಂದ್ರ ಸಿಂಗ್ ಹೇಳಿದ್ದಾರೆ.

    ಕಾನೂನು ಪರಿಣಾಮ ಏನಾಗಬಹುದು?
    ಆಯೋಗದಲ್ಲಿ ಆರೋಪ ಸಾಬೀತಾದರೆ, ಈ ಜಾಹೀರಾತುಗಳನ್ನು ನಿಷೇಧಿಸಬಹುದು. ಇದರೊಂದಿಗೆ, ಸೆಲೆಬ್ರಿಟಿಗಳ ಮೇಲೆ ಆರ್ಥಿಕ ದಂಡವನ್ನು ವಿಧಿಸಬಹುದು. ಅದೇ ಸಮಯದಲ್ಲಿ, ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಹ ಸಾಧ್ಯವಿದೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಎರಡು ಬಣಗಳಿವೆ – ಪಕ್ಷದ ವೇದಿಕೆಯಲ್ಲೇ ರಾಹುಲ್ ಗಾಂಧಿ ಅಸಮಾಧಾನ

     

  • 25 ನಿಮಿಷ ಜಾಹೀರಾತು ಪ್ರಕಟಿಸಿ ಸಮಯ ವ್ಯರ್ಥಗೊಳಿಸಿದ್ದಕ್ಕೆ PVR- INOXಗೆ 1.20 ಲಕ್ಷ ದಂಡ – ಬೆಂಗಳೂರು ವ್ಯಕ್ತಿಗೆ ಜಯ

    25 ನಿಮಿಷ ಜಾಹೀರಾತು ಪ್ರಕಟಿಸಿ ಸಮಯ ವ್ಯರ್ಥಗೊಳಿಸಿದ್ದಕ್ಕೆ PVR- INOXಗೆ 1.20 ಲಕ್ಷ ದಂಡ – ಬೆಂಗಳೂರು ವ್ಯಕ್ತಿಗೆ ಜಯ

    ಬೆಂಗಳೂರು: 25 ನಿಮಿಷ ಜಾಹೀರಾತು (Advertisement) ಪ್ರಕಟಿಸಿ ಸಮಯ ವ್ಯರ್ಥ ಮಾಡಿದ್ದಕ್ಕೆ ಪಿವಿಆರ್‌-ಐನಾಕ್ಸ್‌ (PVR- INOX) ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ಸಿನಿಮಾ ಅಭಿಮಾನಿಗೆ ಜಯ ಸಿಕ್ಕಿದೆ.

    ಸಿನಿಮಾ ಅಭಿಮಾನಿಯ ವಾದವನ್ನು ಪುರಸ್ಕರಿಸಿದ ಗ್ರಾಹಕ ನ್ಯಾಯಾಲಯ (Consumer Court) ಸಮಯವನ್ನು ಹಣವೆಂದು ಪರಿಗಣಿಸಿ ದೂರುದಾರರಿಂದ ಉಂಟಾದ ನಷ್ಟವನ್ನು ಸರಿದೂಗಿಸಲು PVR ಸಿನಿಮಾಸ್ ಮತ್ತು INOXಗೆ 1.20 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ಪ್ರಕಟಿಸಿದೆ.

    ಏನಿದು ಪ್ರಕರಣ?
    ಬೆಂಗಳೂರಿನ ಅಭಿಷೇಕ್‌ 2023 ರಲ್ಲಿ ಶ್ಯಾಮ್ ಬಹದ್ದೂರ್ ಸಿನಿಮಾ ವೀಕ್ಷಿಸಲು ಬುಕ್‌ಮೈಶೋ (BookmyShow) ಮೂಲಕ 3 ಟಿಕೆಟ್‌ ಖರೀದಿಸಿದ್ದರು. ಸಂಜೆ 4:05ಕ್ಕೆ ನಿಗದಿಯಾಗಿದ್ದ ಸಿನಿಮಾ ಸಂಜೆ 6:30ಕ್ಕೆ ಮುಗಿಯಬೇಕಿತ್ತು. ಆದರೆ ಸಿನಿಮಾ ಪ್ರದರ್ಶನ 4:05ಕ್ಕೆ ಆರಂಭವಾಗುವ ಬದಲು ಸಂಜೆ 4:30ಕ್ಕೆ ಆರಂಭವಾಗಿದೆ.

     

    ಸುಮಾರು 30 ನಿಮಿಷಗಳ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದರಿಂದ ನಾನು ನಿಗದಿ ಪಡಿಸಿದ ಕೆಲಸಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಇದರಿಂದ ನನಗೆ ನಷ್ಟವಾಗಿದೆ ಎಂದು ಕೋರಿ ಅಭಿಷೇಕ್‌ ದೂರು ನೀಡಿದ್ದರು. ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಅನಗತ್ಯ ಲಾಭ ಪಡೆಯಲು ಪ್ರದರ್ಶನದ ಸಮಯವನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಕೋರ್ಟ್‌ನಲ್ಲಿ ವಾದಿಸಿದ್ದರು.

    ಇಂದಿನ ಕಾಲದಲ್ಲಿ ಸಮಯವನ್ನು ಹಣವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರ ಸಮಯವು ಬಹಳ ಅಮೂಲ್ಯವಾಗಿದೆ. ಇತರರ ಸಮಯ ಮತ್ತು ಹಣದಿಂದ ಲಾಭ ಪಡೆಯುವ ಹಕ್ಕು ಯಾರಿಗೂ ಇಲ್ಲ.  ಸುಮ್ಮನೆ ಕುಳಿತು ಥಿಯೇಟರ್‌ನಲ್ಲಿ ಪ್ರಸಾರವಾಗುವ ಎಲ್ಲವನ್ನೂ 25-30 ನಿಮಿಷಗ ವೀಕ್ಷಿಸುವುದು ಕಡಿಮೆಯಲ್ಲ. ಬಿಗಿಯಾದ ವೇಳಾಪಟ್ಟಿಯೊಂದಿಗೆ ಕಾರ್ಯನಿರತ ಜನರಿಗೆ ಅನಗತ್ಯ ಜಾಹೀರಾತುಗಳನ್ನು ನೋಡುವುದು ಕಷ್ಟ ಎಂದು ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

    court order law

    ಅಂತಿಮವಾಗಿ ಅನ್ಯಾಯದ ವ್ಯಾಪಾರ ಪದ್ಧತಿ ಮತ್ತು ದೂರುದಾರರ ಸಮಯ ವ್ಯರ್ಥ ಮಾಡಿದ್ದಕ್ಕಾಗಿ 20,000 ರೂ., ಮಾನಸಿಕ ಯಾತನೆಗಾಗಿ 8,000 ರೂ. ದಂಡ ಮತ್ತು ಗ್ರಾಹಕ ಕಲ್ಯಾಣ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ಠೇವಣಿ ಇಡುವಂತೆ ನಿರ್ದೇಶಿಸಿದೆ. ಆದೇಶದ ದಿನಾಂಕದಿಂದ 30 ದಿನಗಳಲ್ಲಿ ಮೊತ್ತವನ್ನು ಪಾವತಿಸುವಂತೆ ಗಡುವು ನೀಡಿದೆ.

    ಬುಕ್‌ಮೈಶೋ ಟಿಕೆಟ್ ಬುಕ್ಕಿಂಗ್‌ ವೇದಿಕೆಯಾಗಿರುವುದರಿಂದ ಮತ್ತು ಜಾಹೀರಾತುಗಳ ಸ್ಟ್ರೀಮಿಂಗ್ ಸಮಯದ ಮೇಲೆ ಯಾವುದೇ ನಿಯಂತ್ರಣವನ್ನು ಹೊಂದಿರದ ಕಾರಣ ಈ ಪ್ರಕರಣದಲ್ಲಿ ಬಾಧ್ಯಸ್ಥವಾಗುವುದಿಲ್ಲ ಎಂದು ಹೇಳಿತು.

    ತಮ್ಮ ಪ್ರತಿವಾದದಲ್ಲಿ PVR ಸಿನಿಮಾಸ್ ಮತ್ತು INOX, ಕಾನೂನಿನ ಅಡಿಯಲ್ಲಿ ಜಾಗೃತಿ ಮೂಡಿಸಲು ಕೆಲವು ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು (PSA) ಪ್ರದರ್ಶಿಸಿದ್ದೇವೆ ಎಂದ ಹೇಳಿತ್ತು.

    ಈ ವೇಳೆ ಕೋರ್ಟ್‌ ಸಿನಿಮಾ ಪ್ರಾರಂಭವಾಗುವ 10 ನಿಮಿಷಗಳ ಮೊದಲು ಮತ್ತು ಚಲನಚಿತ್ರ ಪ್ಯಾಕೇಜ್‌ನ ದ್ವಿತೀಯಾರ್ಧದ ಪ್ರಾರಂಭದ ಮೊದಲು ಮಧ್ಯಂತರ ಅವಧಿಯಲ್ಲಿ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಪ್ರದರ್ಶಿಸಬೇಕು ಎಂದು  ಸೂಚಿಸಿದೆ.

     

  • ಮಸಾಲೆ ದೋಸೆ ಜೊತೆ ಸಾಂಬಾರ್ ನೀಡದ ರೆಸ್ಟೋರೆಂಟ್‍ಗೆ 3,500 ರೂ. ದಂಡ!

    ಮಸಾಲೆ ದೋಸೆ ಜೊತೆ ಸಾಂಬಾರ್ ನೀಡದ ರೆಸ್ಟೋರೆಂಟ್‍ಗೆ 3,500 ರೂ. ದಂಡ!

    ಪಾಟ್ನಾ: ಮಸಾಲೆ ದೋಸೆ (Masala Dose) ಜೊತೆ ಸಾಂಬಾರ್ ನೀಡದ ರೆಸ್ಟೋರೆಂಟ್‍ಗೆ ಬಿಹಾರದ ಗ್ರಾಹಕರ ಕೋರ್ಟ್ (Consumer Court) 3,500 ರೂ. ದಂಡ ವಿಧಿಸಿದೆ. ಈ ಘಟನೆಯು 2022ರಲ್ಲಿ ನಡೆದಿದ್ದು 11 ತಿಂಗಳ ವಿಚಾರಣೆ ನಡೆಸಿದ ಬಳಿಕ ಇದೀಗ ಗ್ರಾಹಕರ ಆಯೋಗ ದಂಡ ವಿಧಿಸಿ ತೀರ್ಪು ನೀಡಿದೆ.

    ಏನಿದು ಪ್ರಕರಣ..?: 2022ರ ಆಗಸ್ಟ್ 15ರಂದು ವಕೀಲರೊಬ್ಬರು (Lawyer) ತಮ್ಮ ಹುಟ್ಟುಹಬ್ಬದಂದು ನಮಕ್ ರೆಸ್ಟೋರೆಂಟ್‍ನಲ್ಲಿ (Restorent) ಸ್ಪೆಷಲ್ ಮಸಾಲೆ ದೋಸೆ ಆರ್ಡರ್ ಮಾಡಿದ್ದರು. ಅಂತೆಯೇ 140 ರೂ. ಬಿಲ್ ಕೊಟ್ಟು ಆರ್ಡರ್ ತೆಗೆದುಕೊಂಡು ಹೋಗಿದ್ದಾರೆ. ಆದರೆ ಮನೆಯಲ್ಲಿ ಪಾರ್ಸೆಲ್ ತರೆದು ನೋಡಿದಾಗ ಅದರಲ್ಲಿ ಸಾಂಬಾರ್ ಇಲ್ಲದೇ ಇರುವುದು ಗೊತ್ತಾಯಿತು.

    ಮರುದಿನ ವಕೀಲರು, ರೆಸ್ಟೋರೆಂಟ್‍ಗೆ ತೆರಳಿ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಮಾಲೀಕರು ಉಡಾಫೆಯ ಮಾತುಗಳನ್ನಾಡಿದ್ದಾರೆ. ಕೇವಲ 140 ರೂ. ನಲ್ಲಿ ಇಡೀ ರೆಸ್ಟೋರೆಂಟ್ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಬಾಲನಟಿ ವಂಶಿಕಾ ಹೆಸರಿನಲ್ಲಿ ದೋಖಾ: 14 ದಿನಗಳ ನ್ಯಾಯಾಂಗ ಬಂಧನಕ್ಕೆ ನಿಶಾ

    ಸಿಬ್ಬಂದಿ ಹಾಗೂ ಮಾಲೀಕನ ಮಾತಿನಿಂದ ಸಿಟ್ಟಿಗೆದ್ದ ವಕೀಲರು, ಕಾನೂನು ಮೊರೆ ಹೋಗಲು ನಿರ್ಧರಿಸಿದ್ದಾರೆ. ಗ್ರಾಹಕರ ನಂಬಿಕೆಗೆ ವಂಚನೆ ಆಗಿದೆ ಎಂದು ಗ್ರಾಹಕರ ಕೋರ್ಟ್ ಮೆಟ್ಟಿಲೇರಿದರು. ಅಂತೆಯೇ 11 ತಿಂಗಳು ಕಾನೂನು ಪ್ರಕ್ರಿಯೆಗಳು ನಡೆದಿದ್ದು, ಇದೀಗ ರೆಸ್ಟೋರೆಂಟ್ ಸೇವೆಯಲ್ಲಿ ಸಾಂಬಾರ್ ಕೊಡದೇ ಇದ್ದಿದ್ದು ತಪ್ಪು ಎಂದು ನ್ಯಾಯಾಲಯ ಮನಗಂಡಿದೆ.

    ಗ್ರಾಹಕರ ಆಯೋಗದ ಅಧ್ಯಕ್ಷ ವೇದ್ ಪ್ರಕಾಶ್ ಸಿಂಗ್ ಹಾಗೂ ಸದಸ್ಯ ವರುಣ್ ಕುಮಾರ್ ಅವರಿದ್ದ  ದ್ವಿಸದಸ್ಯ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡು 3,500 ರೂ. ದಂಡ ಹಾಗೂ ಪ್ರಕರಣದ ವೇಳೆ ಮಾನಸಿಕ ಹಾಗೂ ದೈಹಿಕ ಒತ್ತಡದ ನೀಡಿರುವುಕ್ಕೆ ಪರಿಹಾರವಾಗಿ 2,000 ರೂ. ಗಳನ್ನು ಪಾವತಿಸುವಂತೆ ಆದೇಶಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೊಮ್ಯಾಟೊಗೆ ಶಾಕ್ – ಲೇಟ್ ಮಾಡಿ ಆರ್ಡರ್ ಕ್ಯಾನ್ಸಲ್ ಆದ್ರೆ ದಂಡದ ಜೊತೆ ಊಟನೂ ಫ್ರೀ ಕೊಡ್ಬೇಕು

    ಜೊಮ್ಯಾಟೊಗೆ ಶಾಕ್ – ಲೇಟ್ ಮಾಡಿ ಆರ್ಡರ್ ಕ್ಯಾನ್ಸಲ್ ಆದ್ರೆ ದಂಡದ ಜೊತೆ ಊಟನೂ ಫ್ರೀ ಕೊಡ್ಬೇಕು

    ನವದೆಹಲಿ: ಗ್ರಾಹಕರಿಗೆ ನಿಗದಿತ ಸಮಯಕ್ಕೆ ಆಹಾರ ಪೂರೈಕೆ ಮಾಡದೇ ಆರ್ಡರ್ ರದ್ದಾದರೆ ದಂಡ ಪಾವತಿಸುವ ಜೊತೆಗೆ ಊಟವನ್ನೂ ಉಚಿತವಾಗಿ ನೀಡಬೇಕಾಗುತ್ತದೆ ಎಂದು ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎಸ್‌ಸಿಡಿಆರ್‌ಸಿ) ಜೊಮ್ಯಾಟೊ ಕಂಪನಿಗೆ ಆದೇಶಿಸಿದೆ.

    `ಸಕಾಲಕ್ಕೆ ಊಟ ಪೂರೈಕೆ ಇಲ್ಲವೇ ಉಚಿತ’ (ಆನ್‌ಟೈಮ್ ಆರ್ ಫ್ರೀ) ಆಯ್ಕೆಯಡಿ ಆಹಾರ ಪೂರೈಸದ ಕಾರಣಕ್ಕೆ ಗ್ರಾಹಕರೊಬ್ಬರಿಗೆ ಪರಿಹಾರ ರೂಪದಲ್ಲಿ 10 ಸಾವಿರ ರೂಪಾಯಿ ದಂಡ ಮತ್ತು ಉಚಿತ ಊಟ ನೀಡುವಂತೆ ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎಸ್‌ಸಿಡಿಆರ್‌ಸಿ) ಜೊಮ್ಯಾಟೊಗೆ ಆದೇಶಿಸಿದೆ. ಇದನ್ನೂ ಓದಿ: ಬಾಯ್ಕಟ್‍ಗೆ ಕರೆ ಬೆನ್ನಲ್ಲೇ ಕ್ಷಮೆಯಾಚಿಸಿದ Zomato

    ಜಾಹಿರಾತುಗಳಲ್ಲಿನ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೇ ಅಂತಹ ಜಾಹೀರಾತು ಅಥವಾ ಪ್ರಚಾರ ಪ್ರಕಟಣೆಗಳನ್ನು ನೀಡಬಾರದು ಎಂದು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ರಾಜ್ ಶೇಖರ್ ಅತ್ರಿ ಮತ್ತು ಸದಸ್ಯ ನ್ಯಾಯಮೂರ್ತಿ ರಾಜೇಶ್ ಕೆ ಆರ್ಯ ಅವರಿದ್ದ ಪೀಠ ಹೇಳಿದೆ. ಇದನ್ನೂ ಓದಿ: ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್‍ಗೆ ಕರೆ

    ಸೇವೆ ಒದಗಿಸುವಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಪ್ರಕ್ರಿಯೆಗಾಗಿ ಹಾಗೂ ಅರ್ಜಿದಾರರರು ಅಪಾರ ದೈಹಿಕ ಮತ್ತು ಮಾನಸಿಕ ಸಂಕಟ ಅನುಭವಿಸುವಂತೆ ಮಾಡಿದ್ದಕ್ಕಾಗಿ ಪ್ರತಿವಾದಿಗಳು ಪರಿಹಾರ ನೀಡಲು ಜವಾಬ್ದಾರರಾಗಿರುತ್ತಾರೆ ಎಂದು ಆಯೋಗ ಹೇಳಿದೆ. ಆಹಾರ ಪೂರೈಕೆ ಬರೀ ತಡವಾಗಿಲ್ಲ. ಬದಲಿಗೆ ಸಂಪೂರ್ಣ ರದ್ದಾಗಿದೆ ಎಂಬ ಅಂಶವನ್ನು ಆಯೋಗ ಪರಿಗಣಿಸಿತು.

    ಮೇಲ್ಮನವಿದಾರರು ಜೊಮ್ಯಾಟೊದಲ್ಲಿ ಆಹಾರಕ್ಕಾಗಿ ಆರ್ಡರ್ ಮಾಡಿದ್ದರು. ಸಕಾಲಕ್ಕೆ ಊಟ ರವಾನೆ ಇಲ್ಲವೇ ಉಚಿತ’ ಆಯ್ಕೆಯಡಿ ಹೆಚ್ಚುವರಿಯಾಗಿ 10 ಹಣ ಪಾವತಿಸಿದರು. ಆದರೆ ಆಹಾರ ಅರ್ಜಿದಾರರಿಗೆ ತಲುಪದೆ ಕಡೆಗೆ ರದ್ದಾಗಿತ್ತು. ಆದ ಕಾರಣ ಆಯೋಗ ದಂಡದೊಂದಿಗೆ ಉಚಿತ ಊಟ ನೀಡುವಂತೆ ಆದೇಶಿಸಿತು.

    Live Tv
    [brid partner=56869869 player=32851 video=960834 autoplay=true]

  • ಸೂಕ್ತ ಜೋಡಿ ಹುಡುಕಿ ಕೊಡದ್ದಕ್ಕೆ ಮ್ಯಾಟ್ರಿಮೋನಿಯಲ್ ಸಂಸ್ಥೆಗೆ ಬಿತ್ತು ದಂಡ

    ಸೂಕ್ತ ಜೋಡಿ ಹುಡುಕಿ ಕೊಡದ್ದಕ್ಕೆ ಮ್ಯಾಟ್ರಿಮೋನಿಯಲ್ ಸಂಸ್ಥೆಗೆ ಬಿತ್ತು ದಂಡ

    ಚಂಡೀಗಢ: ನೀಡಿದ ಭರವಸೆಯನ್ನು ಈಡೇರಿಸದ್ದಕ್ಕೆ ಮ್ಯಾಟ್ರಿಮೋನಿಯಲ್ ಜಾಲತಾಣಕ್ಕೆ ಗ್ರಾಹಕರ ನ್ಯಾಯಾಲಯವು ದಂಡ ವಿಧಿಸಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸೂಚಿಸಿದೆ.

    ಮೊಹಾಲಿಯ ಜಿಲ್ಲಾ ಗ್ರಾಹಕ ನ್ಯಾಯಾಲಯವು ಈ ಆದೇಶ ಹೊರಡಿಸಿದ್ದು, ಮ್ಯಾಟ್ರಿಮೋನಿ ಜಾಲತಾಣ ತನ್ನ ಭರವಸೆಯನ್ನು ಈಡೇರಿಸಿಲ್ಲ ಎಂದು ವೈದ್ಯೆ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಆಲಿಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಸಂತ್ರಸ್ತರು ನೀಡಿದ ನೋಂದಣಿ ಶುಲ್ಕ 50 ಸಾವಿರ ರೂ.ಗೆ ಶೇ.9ರಷ್ಟು ಬಡ್ಡಿ ಸೇರಿಸಿ ನೀಡುವಂತೆ ತಿಳಿಸಿದೆ. ಅಲ್ಲದೆ 12 ಸಾವಿರ ರೂ. ಮಾನಸಿಕ ಕಿರುಕುಳ ಹಾಗೂ ದಾವೆ ವೆಚ್ಚವನ್ನು ನೀಡುವಂತೆ ಕೋರ್ಟ್ ತಿಳಿಸಿದೆ.

    ವರದಿಯ ಪ್ರಕಾರ ಸುರಿಂದರ್ ಪಾಲ್ ಸಿಂಗ್ ಚಹಲ್ ಅವರು 2017ರಲ್ಲಿ ತಮ್ಮ ಮಗಳಿಗೆ ವರನನ್ನು ಕೋರಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದರು. ನಂತರ ಮ್ಯಾಟ್ರಿಮೋನಿಯಲ್ ಸೈಟ್‍ನವರು ಚಹಲ್ ಅವರನ್ನು ಸಂಪರ್ಕಿಸಿ ಹರ್ಯಾಣ ನಾಗರಿಕ ವೈದ್ಯಕೀಯ ಸೇವೆಯಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಜೋಡಿ ಹುಡುಕಿಕೊಡುವುದಾಗಿ ಭರವಸೆ ನೀಡಿದೆ.

    ಏಜೆನ್ಸಿಯ ಭರವಸೆಯಿಂದಾಗಿ ಸಂತ್ರಸ್ತೆ ವೈವಾಹಿಕ ಸೈಟ್‍ನಲ್ಲಿ ನೋಂದಾಯಿಸಲು ನಿರ್ಧರಿಸಿದ್ದಾರೆ. ನಂತರ ರಾಯಲ್ ಮೆಂಬರ್ ಶಿಪ್‍ಗಾಗಿ ನೀವು 50 ಸಾವಿರ ರೂ. ಪಾವತಿಸಬೇಕು ಎಂದು ಏಜೆನ್ಸಿ ಕೇಳಿದೆ. ಆ ಹಣವನ್ನೂ ಪಾವತಿಸಿ ನೋಂದಾಯಿಸಿಕೊಂಡಿದ್ದಾರೆ.

    ಯುವತಿಯು ಪಟ್ಟಿಯಲ್ಲಿ ಡಾಕ್ಟರ್ ಗೆ ಆದ್ಯತೆ ನೀಡಿದ್ದಾಳೆ. ಅಲ್ಲದೆ ಜಾಟ್ ಸಮುದಾಯದವರಾಗಿರಬೇಕು ಎಂದು ಸಹ ನೋಂದಣಿ ಸಂದರ್ಭದಲ್ಲಿ ಉಲ್ಲೇಖಿಸಿದ್ದಾಳೆ. ಒಂಬತ್ತು ತಿಂಗಳಲ್ಲಿ ಸೂಕ್ತ ಜೋಡಿಯನ್ನು ಹುಡುಕಿಕೊಡುವುದಾಗಿ ಕಂಪನಿ ಭರವಸೆ ನೀಡಿದೆ.

    ನಂತರ ಮ್ಯಾಟ್ರಿಮೋನಿಯಲ್ ಸೈಟ್‍ನಿಂದ 18 ಪ್ರೊಫೈಲ್‍ಗಳನ್ನು ಅಪ್‍ಲೋಡ್ ಮಾಡಿದ್ದಾರೆ. ಆದರೆ ಹುಡುಗಿಗೆ ಯಾವುದೇ ಹುಡುಗನ ಪ್ರೊಫೈಲ್ ಹೊಂದಿಕೆಯಾಗಿಲ್ಲ. ಏಜೆನ್ಸಿಯ ಅಸಮರ್ಥತೆಯಿಂದ ಬೇಸರಗೊಂಡ ಚಹಲ್ ಒಪ್ಪಂದವನ್ನು ಮುರಿದು ಬಡ್ಡಿಯೊಂದಿಗೆ ತನ್ನ 50 ಸಾವಿರ ರೂ. ನೋಂದಣಿ ಹಣವನ್ನು ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ.

    ಆದರೆ ಏಜೆನ್ಸಿಯು ನಿಮ್ಮ ಅಗತ್ಯಕ್ಕನುಗುಣವಾಗಿ ಪ್ರೊಫೈಲ್ ಕಳುಹಿಸಲಾಗಿದೆ. ನಾವು ಹಣವನ್ನು ಮರುಪಾವತಿಸುವುದಿಲ್ಲ ಎಂದು ವಾದಿಸಿದೆ. ಹೊಂದಾಣಿಕೆ ಇರುವ ಪ್ರೊಫೈಲ್‍ಗಳನ್ನು ಮಾತ್ರ ನಾವು ಕಳುಹಿಸುತ್ತೇವೆ ಶೇ.100ರಷ್ಟು ಹೊಂದುವ ಪ್ರೊಫೈಲ್‍ಗಳು ಸಿಗುವುದಿಲ್ಲ ಎಂದು ಸಹ ಸಂಸ್ಥೆ ತಿಳಿಸಿದೆ.

    ನಂತರ ಚಹಲ್ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ಗ್ರಾಹಕರ ನ್ಯಾಯಾಲಯ, ಇವೆಲ್ಲ ಅಸಂಬದ್ಧ ಪ್ರೊಫೈಲ್‍ಗಳು, ಇವು ದೂರುದಾರರಿಗೆ ವ್ಯರ್ಥ. ದೂರುದಾರರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿರುವುದು ಮಾತ್ರವಲ್ಲದೆ, ಅವರಿಗೆ ತೀವ್ರ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೂ ಕಾರಣವಾಗಿದೆ. ಏಜೆನ್ಸಿಯು ತಮ್ಮ ವೃತ್ತಿಪರ ಸೇವೆಯಲ್ಲಿ ವಿಫಲವಾಗಿದೆ. ಹುಡುಗಿಗೆ ಸೂಕ್ತ ಜೋಡಿಯನ್ನು ಹುಡುಕಿಕೊಡದಿರುವುದರಿಂದ ಆಕೆಯ ಮದುವೆಯ ವಿಳಂಬಕ್ಕೆ ಕಾರಣವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

    ನಂತರ ನ್ಯಾಯಾಲಯವು ಸೆಪ್ಟೆಂಬರ್ 26,2017ರಿಂದ ಬಡ್ಡಿ ಸಮೇತ ಗ್ರಾಹಕರ ಹಣವನ್ನು ಮರುಪಾವತಿಸುವಂತೆ ಮ್ಯಾಟ್ರಿಮೋನಿಯಲ್ ಸೈಟ್‍ಗೆ ನಿರ್ದೇಶಿಸಿದೆ. ಮಾನಸಿಕ ಕಿರುಕುಳ ನೀಡಿದ್ದಕ್ಕೆ 7 ಸಾವಿರ ರೂ., ದಾವೆ ವೆಚ್ಚವಾಗಿ 5 ಸಾವಿರ ರೂ. ಪರಿಹಾರ ನೀಡುವಂತೆಯೂ ಇದೇ ವೇಳೆ ಸೂಚಿಸಿದೆ.

  • ಇಲ್ಲಿ ಕುಡಿಯುವ ನೀರಿಗೂ ಪೆಟ್ರೋಲ್‍ಗಿಂತ ಹೆಚ್ಚು ರೇಟು- ರೆಸ್ಟೋರೆಂಟ್‍ನಿಂದ ಹಗಲು ದರೋಡೆ

    ಇಲ್ಲಿ ಕುಡಿಯುವ ನೀರಿಗೂ ಪೆಟ್ರೋಲ್‍ಗಿಂತ ಹೆಚ್ಚು ರೇಟು- ರೆಸ್ಟೋರೆಂಟ್‍ನಿಂದ ಹಗಲು ದರೋಡೆ

    ಬೆಂಗಳೂರು: ನಗರದಲ್ಲಿಯ ರೆಸ್ಟೋರೆಂಟ್‍ನಲ್ಲಿ ಕುಡಿಯುವ ನೀರಿನ ಬೆಲೆ ಪೆಟ್ರೋಲ್‍ಗಿಂತಲೂ ಹೆಚ್ಚಿದೆ. ಈ ರೆಸ್ಟೋರೆಂಟ್‍ನಲ್ಲಿ 1 ಲೀಟರ್ ಕುಡಿಯುವ ನೀರಿಗೆ ಬರೋಬ್ಬರಿ 99 ರೂ. ಪಡೆಯಲಾಗುತ್ತದೆ.

    ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡ್‍ನಲ್ಲಿರೋ ದಿ ಓಪನ್ ಬಾಕ್ಸ್ ರೆಸ್ಟೋರೆಂಟ್‍ನಲ್ಲಿ 1 ಲೀಟರ್ ಕುಡಿಯುವ ನೀರಿಗೆ ಜಿಎಸ್‍ಟಿ ಸರ್ವಿಸ್ ಟ್ಯಾಕ್ಸ್ ಸೇರಿಸಿ ಬರೋಬ್ಬರಿ 116 ರೂಪಾಯಿ ಪಡೆಯಲಾಗುತ್ತಿದೆ. ರೆಸ್ಟೋರಂಟ್‍ಗೆ ಊಟ ಮಾಡಲು ಹೋಗಿದ್ದ ಗ್ರಾಹಕ ತೇಜಸ್ ಅನ್ನೋರು ವಾಟರ್ ಬಾಟಲ್ ಆರ್ಡರ್ ಮಾಡಿದ್ರು. ಆದ್ರೆ ರೆಸ್ಟೋರೆಂಟ್‍ನೋರು 19 ರೂಪಾಯಿಯ ಬಾಟಲ್‍ಗೆ 99 ರೂಪಾಯಿ ಬಿಲ್ ಹಾಕಿದ್ದಾರೆ.

     

    ಇದರಿಂದ ಅಚ್ಚರಿಗೊಂಡ ತೇಜಸ್ ಒಂದು ಬಾಟಲ್ 99 ರೂ. ಬೆಲೆ ಹಾಕೋದು ಎಂದು ರೆಸ್ಟೋರೆಂಟ್ ಸಿಬ್ಬಂದಿಯನ್ನ ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಮದ್ಯ ಕೂಡಾ ಎಂಆರ್‍ಪಿಗಿಂತ ಜಾಸ್ತಿ ರೇಟ್‍ಗೆ ಕೊಡ್ತೀವಲ್ಲಾ ಅದೇ ರೀತಿ ಇದೂ ಕೂಡಾ ರೇಟ್ ಜಾಸ್ತಿ ಹಾಕಿದ್ದೇವೆ. ನಾವು ಎಲ್ಲವನ್ನೂ ಲೀಗಲ್ ಆಗಿಯೇ ಮಾಡುತ್ತಿದ್ದೇವೆ. ನಮ್ಮ ಬಳಿ ಕೋರ್ಟ್ ಆರ್ಡರ್ ಕೂಡಾ ಇದೆ ಅಂತ ಅವಾಜ್ ಹಾಕಿದ್ದಾರೆ.

    ತೇಜಸ್ ಇದೀಗ ಗ್ರಾಹಕರ ನ್ಯಾಯಾಲಯದಲ್ಲಿ ದೂರು ನೀಡಲು ಮುಂದಾಗಿದ್ದಾರೆ.