Tag: construction

  • ಕಳಪೆ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರ ಬಿಲ್ ತಡೆ ಹಿಡಿಯಿರಿ: ಶ್ರೀಮಂತ್ ಪಾಟೀಲ್

    ಕಳಪೆ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರ ಬಿಲ್ ತಡೆ ಹಿಡಿಯಿರಿ: ಶ್ರೀಮಂತ್ ಪಾಟೀಲ್

    ಚಿಕ್ಕೋಡಿ: ಕಳಪೆ ಮಟ್ಟದ ರಸ್ತೆಗಳನ್ನ ನಿರ್ಮಿಸುವ ಗುತ್ತಿಗೆದಾರರಿಗೆ ರಸ್ತೆ ನಿರ್ಮಾಣದ ಗುತ್ತಿಗೆ ನೀಡದಂತೆ ಕಾಗವಾಡ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಸೂಚನೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡದ ಶಾಸಕರ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ರಸ್ತೆ ಸುಧಾರಣೆ ವಿಷಯದಲ್ಲಿ ಗುತ್ತಿಗೆದಾರರು ಜಾಗೃತೆಯಿಂದ ಗುಣಮಟ್ಟದ ರಸ್ತೆಗಳನ್ನ ನಿರ್ಮಿಸಬೇಕು. ಕಳಪೆ ಕಾಮಗಾರಿ ಆದಲ್ಲಿ ಅಂಥ ಗುತ್ತಿಗೆದಾರರ ಬಿಲ್ ತಡೆ ಹಿಡಿಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಕ್ಷೇತ್ರದಲ್ಲಿನ ರಸ್ತೆ, ನೀರಾವರಿ ಹಾಗೂ ಮತ್ತಿತರ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ:  ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ

    ಈ ಸಮಯದಲ್ಲಿ ಜಿಲ್ಲಾ ಪಂಚಾಯತ್ ಇಲಾಖೆಯ ಅಧಿಕಾರಿಗಳಾದ ವೀರಣ್ಣ ವಾಲಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಎಸ್ ಎಸ್ ಮಕಾಣಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಜೆ ಎ ಹಿರೇಮಠ, ಮಲ್ಲಿಕಾರ್ಜುನ ಮಗದುಮ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ:   ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಮಾಡಿಕೊಂಡು ಬಂದ ವೃದ್ಧೆ

  • ರಾಜ್ಯದಲ್ಲಿ ನೂತನ ಆಮ್ಲಜನಕ ಘಟಕ ನಿರ್ಮಾಣಕ್ಕೆ ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ: ಶೆಟ್ಟರ್

    ರಾಜ್ಯದಲ್ಲಿ ನೂತನ ಆಮ್ಲಜನಕ ಘಟಕ ನಿರ್ಮಾಣಕ್ಕೆ ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ: ಶೆಟ್ಟರ್

    – ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕೆಲವೇ ದಿನಗಳಲ್ಲಿ ಘೋಷಣೆ  

    ಬೆಂಗಳೂರು: ರಾಜ್ಯದಲ್ಲಿ ನೂತನ ಆಮ್ಲಜನಕ ಘಟಕ ನಿರ್ಮಾಣಕ್ಕೆ ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ ದೊರಯಲಿದೆ. ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕೆಲವೇ ದಿನಗಳಲ್ಲಿ ಘೋಷಣೆಯಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ರಾಜ್ಯ ಆಮ್ಲಜನಕ ಸರಬರಾಜು ಮತ್ತು ಉತ್ಪಾದನೆ ಉಸ್ತುವಾರಿ ಶ್ರೀ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೆಲವೊಂದಕ್ಕೆ ವಿನಾಯಿತಿ ನೀಡಿ ಲಾಕ್‍ಡೌನ್ ವಿಸ್ತರಣೆ – ಸಿಎಂ ಬಿಎಸ್‍ವೈ

    ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
    ಆಮ್ಲಜನಕ ಘಟಕ ನಿರ್ಮಾಣ ಪ್ರಾರಂಭಿಸಲು ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ ಪ್ರಸ್ತಾವನೆಯನ್ನು ರಚಿಸಲಾಗಿದ್ದು ಆರ್ಥಿಕ ಇಲಾಖೆಯ ಪರಾಮರ್ಶೆಗೆ ಕಳುಹಿಸಲಾಗಿದೆ. ಆರ್ಥಿಕ ಇಲಾಖೆಯ ಅನುಮತಿಯ ನಂತರ ಇನ್ನು ಕೆಲವೇ ದಿನಗಳಲ್ಲಿ ಆಗಲಿದೆ. ಬೆಂಗಳೂರಿನ ವಿಧಾನಸೌಧದಲ್ಲಿಂದು ರಾಜ್ಯ ಆಮ್ಲಜನಕ ಉತ್ಪಾದನೆ ಮತ್ತು ಸರಬರಾಜು ಸಂಬಂಧವಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ನಂತರ ಮಾತನಾಡಿದರು. ರಾಜ್ಯದಲ್ಲಿ ಆಮ್ಲಜನಕದ ಪರಿಸ್ಥಿತಿ ಸುಧಾರಿಸುತ್ತಿದೆ. ಕೇಂದ್ರ ಸರಕಾರದ ಸಹಕಾರದಿಂದ ಹಾಗೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಆಗುತ್ತಿರುವ ನಿಟ್ಟಿನಲ್ಲಿ ಆಮ್ಲಜನಕದ ಬೇಡಿಕೆ ನಿಧಾನವಾಗಿ ತಗ್ಗುತ್ತಿದೆ. ತಜ್ಞರ ಅಂದಾಜಿನಂತೆ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ರಾಜ್ಯ ವನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿ ಮಾಡುವುದು ನಮ್ಮ ಗುರಿಯಾಗಿದೆ ಎಂದರು.

    ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಹೊಸದಾಗಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಶೇಷ ರಿಯಾಯಿತಿಯ ಪ್ರಸ್ತಾವನೆಯನ್ನು ಕೈಗಾರಿಕಾ ಇಲಾಖೆಯ ವತಿಯಿಂದ ರಚಿಸಲಾಗಿದ್ದು ಆರ್ಥಿಕ ಇಲಾಖೆಯ ಪರಾಮರ್ಶೆಗೆ ಕಳುಹಿಸಿಕೊಡಲಾಗಿದೆ. ಅಲ್ಲದೆ, ಈ ಬಗ್ಗೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚೆಯನ್ನು ನಡೆಸಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ವಿಶೇಷ ವಿಶೇಷ ಸೌಲಭ್ಯದ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ:1200 ರೂಪಾಯಿಗೆ ಡಿಎಪಿ ಗೊಬ್ಬರ – ಜೋಶಿ ಮನವಿಗೆ ಸ್ಪಂದಿಸಿದ ಸರ್ಕಾ

    ಜಿಂದಾಲ್‍ಗೆ ನೋಟೀಸ್:
    ರಾಜ್ಯಕ್ಕೆ ನೀಡಬೇಕಾಗಿದ್ದ ದ್ರವೀಕೃತ ಆಮ್ಲಜನಕವನ್ನು ಜಿಂದಾಲ್ ನಿನ್ನೆ ನೀಡಿರಲಿಲ್ಲ. ಇದರಿಂದ ರಾಜ್ಯದಿಂದ ಲಭ್ಯವಾಗಬೇಕಾಗಿದ್ದ 830 ಎಂ.ಟಿ ಗಳಲ್ಲಿ ನಮಗೆ ದೊರಕಿದ್ದು ಕೇವಲ 386 ಎಂ.ಟಿಗಳಷ್ಟು ಮಾತ್ರ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟು ಈ ಸಂಕಷ್ಟದ ಸಮಯದಲ್ಲಿ ಆಮ್ಲಜನಕ ನೀಡದೇ ಇರುವುದರ ಬಗ್ಗೆ ನಿನ್ನೆ ಜಿಂದಾಲ್ ಗೆ ನೋಟೀಸ್ ನೀಡಲಾಗಿದ್ದು, ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ಇನ್ನು ಮುಂದೆ ಇಂತಹ ಘಟನೆಗಳು ಆಗದ ರೀತಿಯಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

    ರಾಜ್ಯದಲ್ಲಿನ ಆಮ್ಲಜನಕ ಘಟಕಗಳ ಸ್ಥಾಪನೆ:
    ಕೇಂದ್ರ, ರಾಜ್ಯ ಮತ್ತು ಹಲವಾರು ಸಾರ್ವಜನಿಕ ಸಂಸ್ಥೆಗಳು ಘಟಕ ಸ್ಥಾಪನೆಗೆ ಮುಂದಾಗಿವೆ. ಆದರೆ, ಅದರ ಸ್ಥಾಪನೆ ಕಾರ್ಯಗಳನ್ನು ಚುರುಕುಗೊಳಿಸುವುದರತ್ತ ಹೆಚ್ಚಿನ ಗಮನ ಬೇಕಾಗಿದೆ. ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

    ಸರಕಾರಿ ಆಸ್ಪತ್ರೆಗಳನ್ನು ಸ್ವಾವಲಂಬಿನೆ:
    ಸರಕಾರಿ ಆಸ್ಪತ್ರೆಗಳನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿಗೊಳಿಸಬೇಕಾಗಿದೆ. ಹೊರಗಿನಿಂದ ಬರುವ ಆಮ್ಲಜನಕವನ್ನು ನಂಬಿಕೊಳ್ಳುವುದರ ಜೊತೆಯಲ್ಲಿಯೇ ಅವುಗಳು ಸ್ವತಃ ಆಮ್ಲಜನಕ ಉತ್ಪಾದನೆ ಮಾಡಿದಲ್ಲಿ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಸೂಚನೆ ನೀಡಿದರು.

    ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ ಕುಮಾರ್ ಖತ್ರಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಆರೋಗ್ಯ ಇಲಾಖೆ ಜಾವೇದ್ ಆಖ್ತರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಆಕ್ಸಿಜನ್ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಹಿರಿಯ ಐಎಎಸ್ ಅಧಿಕಾರಿ ಮೌನಿಶ್ ಮೌದ್ಗಿಲ್, ಆಕ್ಸಿಜನ್ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ, ಕೆಐಎಡಿಬಿ ಸಿಇಓ ಡಾ ಶಿವಶಂಕರ್, ಡ್ರಗ್ಸ್ ಕಂಟ್ರೋಲರ್ ಅಮರೇಶ್ ತುಬಗಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

  • ಹಿಂದೂ ದೇವಾಲಯ ನಿರ್ಮಾಣಕ್ಕೆ ಕೋಟಿಗಟ್ಟಲೇ ಹಣ ನೀಡಿದ ಪಾಕಿಸ್ತಾನ

    ಹಿಂದೂ ದೇವಾಲಯ ನಿರ್ಮಾಣಕ್ಕೆ ಕೋಟಿಗಟ್ಟಲೇ ಹಣ ನೀಡಿದ ಪಾಕಿಸ್ತಾನ

    ಇಸ್ಲಾಮಬಾದ್: ಹಿಂದೂ ದೇವಾಲಯಗಳ ಮರು ನಿರ್ಮಾಣಕ್ಕಾಗಿ 3.48 ಕೋಟಿ ರೂಪಾಯಿಗಳನ್ನು ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ ಬಿಡುಗಡೆ ಮಾಡಿದೆ.

    ಕಳೆದ ವರ್ಷ ಡಿಸೆಂಬರ್‍ನಲ್ಲಿ ಕೆಲವು ಸ್ಥಳೀಯ ಸಂಘಟನೆಗಳ ಗುಂಪಿನಿಂದ ದೇವಾಲಯಗಳು ಹಾನಿಗೊಳಗಾಗಿದ್ದವು. ಖೈಬರ್ ಪಕ್ತುನ್ಖ್ವಾ ಕರಾಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ಪರಮಹಂಸಜೀ ಮಹಾರಾಜ್ ಅವರ ಸಮಾಧಿಯನ್ನು ಧ್ವಂಸ ಮಾಡಲಾಗಿತ್ತು.

    ಶತಮಾನಗಳಷ್ಟು ಹಳೆಯದಾದ ದೇವಾಲಯ ಮತ್ತು ಅದರ ಪಕ್ಕದ ಸಮಾಧಿ ಮೇಲೆ ನಡೆದ ದಾಳಿಗೆ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರಿಂದ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ದೇವಾಯಲಯ ಪುನರ್ ನಿರ್ಮಾಣ ಮಾಡಬೇಕೆಂದು ಅಲ್ಲಿನ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

    ದೇಗುಲ ನಿರ್ಮಾಣ ಶೀಘ್ರವಾಗಿ ಪೂರ್ಣಗೊಳಿಸುವಂತೆ ನ್ಯಾಯಾಲಯ ಪ್ರಾಂತೀಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈಗ ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ ದೇವಾಲಯ ಮರು ನಿರ್ಮಾಣ ಕಾರ್ಯಕ್ಕಾಗಿ ಔಕಾಫ್ ಇಲಾಖೆಗೆ 3,48,29,000 ಹಣವನ್ನು ನೀಡಿದೆ ಎಂದು ತಿಳಿದು ಬಂದಿದೆ.

  • ನಿರ್ಮಾಣ ಹಂತದ ಫ್ಲೈ ಓವರ್ ಕುಸಿತ – 3 ಕಾರ್ಮಿಕರು ಗಂಭೀರ

    ನಿರ್ಮಾಣ ಹಂತದ ಫ್ಲೈ ಓವರ್ ಕುಸಿತ – 3 ಕಾರ್ಮಿಕರು ಗಂಭೀರ

    ಚಂಡೀಗಢ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದ ಪರಿಣಾಮ ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.

    ಗುರುಗ್ರಾಮ-ದ್ವಾರಕಾ ಎಕ್ಸ್ ಪ್ರೆಸ್ ವೇ ಬಳಿ ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದುಬಿದ್ದಿದೆ. ಮೂವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ದೌಲತಾಬಾದ್ ಬಳಿ ಗುರುಗ್ರಾಮ-ದ್ವಾರಕಾ  ಎಕ್ಸ್ ಪ್ರೆಸ್ ವೇ ನಲ್ಲಿ ಇಂದು ಬೆಳಿಗ್ಗೆ 7:30ರ ಸುಮಾರಿಗೆ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಗೊಂಡಿದ್ದ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗುವುದು. ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಅದು ಸಂಭವಿಸಿದಾಗ ಜಾಗದಲ್ಲಿ ಯಾವುದೇ ಕೆಲಸಗಳು ನಡೆಯುತ್ತಿರಲಿಲ್ಲ ಎಂದು ದ್ವಾರಕಾ ಎಕ್ಸ್‍ಪ್ರೆಸ್‍ವೆ ವೇ ಯೋಜನಾ ನಿರ್ದೇಶಕ ನಿರ್ಮನ್ ಜಂಬುಲ್ಕರ್ ಹೇಳಿದ್ದಾರೆ.

    ಇದು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ನೆರೆಯ ಗುರುಗ್ರಾಮವನ್ನು ಸಂಪರ್ಕಿಸುವ ಪರ್ಯಾಯ ಮಾರ್ಗವಾಗಿದ್ದು, 27.6 ಕಿ.ಮೀ ಉದ್ದದ ದ್ವಾರಕಾ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೆ 9,000 ಕೋಟಿ ರೂ. ವೆಚ್ಚವಾಗಲಿದೆ.

  • ಅಬುಧಾಬಿ ಹಿಂದೂ ದೇವಾಲಯದ ಫೌಂಡೇಶನ್‍ಗೆ ಭಾರತದ ಕಲ್ಲು ಬಳಕೆ

    ಅಬುಧಾಬಿ ಹಿಂದೂ ದೇವಾಲಯದ ಫೌಂಡೇಶನ್‍ಗೆ ಭಾರತದ ಕಲ್ಲು ಬಳಕೆ

    ಅಬುಧಾಬಿ: ಮೊದಲ ಬಾರಿಗೆ ಅಬುಧಾಬಿಯಲ್ಲಿ ಹಿಂದೂ ದೇಗುಲ ನಿರ್ಮಾಣವಾಗುತ್ತಿದ್ದು, ಹಿಂದೂ ದೇಗುಲಕ್ಕೆ ಬೃಹತ್ ಅಡಿಪಾಯ ಹಾಕಲಾಗಿದೆ. ಈ ಅಡಿಪಾಯಕ್ಕೆ ಭಾರತದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗಿದೆ.

    ಬೋಚಾಸನವಾಸಿ ಶ್ರೀ ಅಕ್ಷರ್ ಪುರುಷೋತ್ತಂ ಸ್ವಾಮಿನಾರಾಯಣ್ ಸಂಸ್ಥೆ(ಬಿಎಪಿಎಸ್) 450 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ನಿರ್ಮಾಣ ಮಾಡುತ್ತಿದೆ. ಏಪ್ರಿಲ್ ತಿಂಗಳ ಅಂತ್ಯಕ್ಕೆ ಫೌಂಡೇಷನ್ ಕಾರ್ಯ ಮುಕ್ತಾಯವಾಗುವ ಸಾಧ್ಯತೆಯಿದೆ.

    ಅಬು ಮರೇಖಾ ಪ್ರದೇಶದಲ್ಲಿ 27 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ದೇವಸ್ಥಾನ ಬೃಹತ್ ಅಡಿಪಾಯ ಹಾಕಲಾಗುತ್ತಿದೆ. ನೆಲ ಮಟ್ಟದಿಂದ 4.5 ಮೀಟರ್ ಅಡಿಪಾಯದ ಹಾಕಲಾಗಿದೆ. ಜನವರಿ ತಿಂಗಳಿನಿಂದ ಕೆಲಸ ನಡೆಯುತ್ತಿದೆ. ಸುಮಾರು 4,500 ಕ್ಯೂಬಿಕ್ ಕಾಂಕ್ರೀಟ್ ಹಾಕಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಮತ್ತೆ ಅರ್ಚಕರಿಗಾಗಿ ಕೆಳಗಡೆ ಎರಡು ಸುರಂಗ ನಿರ್ಮಾಣ ಮಾಡಲಾಗುತ್ತದೆ.

    ದೇವಸ್ಥಾನ ನಿರ್ಮಾಣಕ್ಕೆ ಭಾರತದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗಿದೆ. ಸ್ತಂಭಗಳನ್ನು ರಾಜಸ್ಥಾನ ಮತ್ತು ಗುಜರಾತ್‍ನ ಕುಶಲಕರ್ಮಿಗಳು ಕೆತ್ತನೆ ಮಾಡಲಿದ್ದಾರೆ. ಏಪ್ರಿಲ್ ಅಂತ್ಯದ ಒಳಗಾಗಿ ಫೌಂಡೇಷನ್ ಕೆಲಸ ಮುಗಿಯುತ್ತದೆ. ಮೇ ತಿಂಗಳಿನಲ್ಲಿ ಕಲ್ಲಿನ ಕೆಲಸವನ್ನು ಆರಂಭಿಸುತ್ತೇವೆ ಎಂದು ಪ್ರಾಜೆಕ್ಟ್ ಎಂಜಿನಿಯರ್ ಅಶೋಕ್ ಕೊಂಡೆಟೆ ಹೇಳಿದ್ದಾರೆ.

  • ಮನೆ ನಿರ್ಮಾಣಕ್ಕೆ ಬಾಲಕ ಬಲಿ – ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿ

    ಮನೆ ನಿರ್ಮಾಣಕ್ಕೆ ಬಾಲಕ ಬಲಿ – ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿ

    ಹುಬ್ಬಳ್ಳಿ: ಮನೆ ನಿರ್ಮಾಣಕ್ಕೆ ಕುರಿ, ಕೋಳಿ ಬಲಿ ಕೊಡುವುದನ್ನು ಕೇಳಿದ್ದೇವೆ. ಆದರೆ ಈಗ ಮನೆ ನಿರ್ಮಾಣಕ್ಕೆ ಬಾಲಕನನ್ನು ಬಲಿ ಕೊಡಲಾಗಿದೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ.

    ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುಹುಣಸಿ ಗ್ರಾಮದ ಶಿವರುದ್ರಪ್ಪ ಅವರ ಮೇಲೆ ಈ ಆರೋಪ ಕೇಳಿ ಬಂದಿದೆ. ಗ್ರಾಮದ ಬಾಲಕ ಹರೀಶಯ್ಯ ನಾಗಯ್ಯ ಹಿರೇಮಠನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಮಾರ್ಚ್ 16ರಂದು ಮಗ ಅಂಗಡಿಗೆ ಹೋಗಿದ್ದ. ಈ ವೇಳೆ ಬಾಲಕನನ್ನು ಅಪಹರಣ ಮಾಡಿ ಮನೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಗುಂಡಿಯಲ್ಲಿ ಕಟ್ಟಿ ಹಾಕಿ ಮೈಮೇಲೆ ಇಟ್ಟಿಗೆಗಳನ್ನ ಇಟ್ಟಿದ್ದಾರೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.

    ಬಾಲಕ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಸಂಜೆ ಹುಡುಕಾಟ ನಡೆಸಿದ ಬಳಿಕ ಕಟ್ಟಡ ಕಟ್ಟುತ್ತಿದ್ದ ಕಾಮಗಾರಿಯ ಸ್ಥಳದ ಗುಂಡಿಯಲ್ಲಿ ಹರೀಶಯ್ಯ ಪತ್ತೆಯಾಗಿದ್ದಾನೆ. ಬಾಲಕನಿಗೆ ಗಾಯಗಳಾದ ಹಿನ್ನೆಲೆಯಲ್ಲಿ ಮೊದಲು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.

    ಶಿವರುದ್ರಪ್ಪ ಹಾವೇರಿ, ಬಸವಣ್ಣೆವ್ವ ಪ್ರಭಾಕರ ಕರಿಶೆಟ್ಟರ, ಪ್ರವೀಣ ಕರಿಶೆಟ್ಟರ, ಕುಮಾರ ವೀರಭದ್ರಪ್ಪ ಹಾವೇರಿ ಎನ್ನುವವರು ಮಗನನ್ನು ಬಲಿ ಕೊಡಲು ಮುಂದಾಗಿದ್ದರು ಎಂದು ತಂದೆ ನಾಗಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕನ ಪೋಷಕರು ದೂರು ನೀಡಿದ ನಂತರ ಆರೋಪಿಗಳು ಪರಾರಿಯಾಗಿದ್ದು, ಘಟನೆಯ ಕುರಿತು ಹಾನಗಲ್ ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಮ್ಮ ಸ್ವಂತ ಖರ್ಚಿನಲ್ಲಿ ಪಾರ್ಕ್ ನಿರ್ಮಿಸಿದ ಪೊಲೀಸರು

    ತಮ್ಮ ಸ್ವಂತ ಖರ್ಚಿನಲ್ಲಿ ಪಾರ್ಕ್ ನಿರ್ಮಿಸಿದ ಪೊಲೀಸರು

    – ಬಿಡುವಿನ ಸಮಯದಲ್ಲಿ ಪಾಕ್ ನಿರ್ಮಾಣಕ್ಕೆ ಶ್ರಮದಾನ

    ತುಮಕೂರು: ಪೊಲೀಸ್ ಎಂದರೆ ಕೇವಲ ಬಂದೋಬಸ್ತ್, ಕೊಲೆ, ದರೋಡೆ ಪ್ರಕರಣಗಳ ತನಿಖೆ ಈ ರೀತಿಯ ಕೆಲಸದಲ್ಲೇ ಜೀವನ ಕಳೆದು ಹೋಗುತ್ತೆ. ಆದರೆ ಈ ಎಲ್ಲಾ ಒತ್ತಡಗಳ ನಡುವೆ ತುಮಕೂರು ಜಿಲ್ಲೆಯ ಪೊಲೀಸರು ಸ್ವಲ್ಪ ಡಿಫರೆಂಟಾಗಿದ್ದಾರೆ. ಇಲ್ಲಿನ ಕುಣಿಗಲ್ ತಾಲೂಕಿನ ಅಮೃತ್ತೂರು ಠಾಣಾ ಆವರಣದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ.

    ಹೌದು, ಅಮೃತೂರು ಪೊಲೀಸ್ ಠಾಣೆಗೆ ಭೇಟಿ ಕೊಟ್ಟರೆ ಸೀಜಾದ ಬೈಕ್‍ಗಳು, ಅಪಘಾತವಾದ ಕಾರುಗಳ ಬದಲಾಗಿ ಹಚ್ಚ ಹಸಿರಿನ ವಾತಾವರಣ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ತಂಪು ತಂಗಾಳಿ ನಮ್ಮ ಮನ ಮುದಗೊಳಿಸುತ್ತದೆ. ಇಲ್ಲಿನ ಪೊಲೀಸರು ಸ್ವತಃ ತಾವೇ ಶ್ರಮದಾನದ ಮೂಲಕ ಮುದ್ದಾದ ಉದ್ಯಾನವನ ನಿರ್ಮಿಸಿಕೊಂಡು ತಮ್ಮ ಪರಿಸರ ಪ್ರೇಮ ತೋರಿದ್ದಾರೆ.

    ಪ್ರಸ್ತುತ ಕ್ಯಾತಸಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಿಎಸ್‍ಐ ರಾಜು ಈ ಪಾರ್ಕ್ ನಿರ್ಮಾಣಕ್ಕೆ ಕಾರಣಿಕರ್ತರು. ರಾಜು ಅಮೃತ್ತೂರಲ್ಲಿ ಕಾರ್ಯನಿರ್ವಹಿಸುತಿದ್ದ ಸಂದರ್ಭದಲ್ಲಿ ಅವರ ಆಸಕ್ತಿ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಸುಂದವಾದ ಪಾರ್ಕ್ ಕಂಗೊಳಿಸುತಿದೆ. ಈ ಠಾಣೆಯ ಅಧಿಕಾರಿಗಳು ಎಷ್ಟೇ ಒತ್ತಡ ಇದ್ದರೂ ತಮ್ಮ ಕರ್ತವ್ಯದ ನಡುವೆ ಶ್ರಮದಾನದ ಮೂಲಕ ಅತ್ಯಂತ ಸುಂದರವಾದ ಪಾರ್ಕ ಕಟ್ಟಿಕೊಂಡಿದ್ದಾರೆ. ಬಿಡುವಿನ ವೇಳೆ ಬಂದು ಶ್ರದ್ಧೆಯಿಂದ ಶ್ರಮದಾನ ಮಾಡಿ ತಮ್ಮ ಠಾಣೆಯ ಆವರಣ ಹಚ್ಚ ಹಸಿರಿನಂತೆ ಕಂಗೊಳಿಸುವಂತೆ ಮಾಡಿಕೊಂಡಿದ್ದಾರೆ.

    ಸುಮಾರು ಅರ್ಧ ಎಕರೆ ಭೂ ಪ್ರದೇಶದಲ್ಲಿ ಈ ಪಾರ್ಕ್ ನಿರ್ಮಾಣವಾಗಿದ್ದು, ಮಧ್ಯ ಕಲ್ಲಿನ ಮಂಟಪ, ವಿವಿಧ ಹೂವಿನ ಗಿಡಗಳು, ಅಲಂಕಾರಿಕ ಬಳ್ಳಿ, ನೆಲದ ಮೇಲೆ ಹುಲ್ಲಿನ ಹಾಸು, ಹಣ್ಣಿನ ಗಿಡಗಳು ಹೀಗೆ ಸ್ವಚ್ಚ ಸುಂದರವಾಗಿ ಉದ್ಯಾನವನ ಮೂಡಿಬಂದಿದೆ. ಸುತ್ತಲು ವಾಕಿಂಗ್ ಪಾಥ್ ನಿರ್ಮಾಣ ಮಾಡಲಾಗಿದೆ. ಅಮೃತೂರಿನ ಕೆಲ ಸಾರ್ವಜನಿಕರೂ ಕೂಡಾ ಈ ಪಾರ್ಕ್‍ಲ್ಲಿ ಬಂದು ಸುತ್ತಾಡಿ ವಿಶ್ರಾಂತಿ ಪಡೆಯುತ್ತಾರೆ. ಹಾಗೇಯೇ ಪೊಲೀಸರು ಕೂಡಾ ಹಚ್ಚಹಸಿರಿನಿಂದ ಕಂಗೊಳಿಸುವ ಈ ಪಾರ್ಕ್ ನಲ್ಲಿ ಕುಳಿತು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ.

    ಈ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಕೆಲ ಸಾಮಗ್ರಿಗಳನ್ನು ದಾನಿಗಳು ನೀಡಿದ್ದಾರೆ. ಇನ್ನೂ ಕೆಲವನ್ನು ಪೊಲೀಸರೇ ಸ್ವತಃ ತಮ್ಮ ಹಣ ವಿನಿಯೋಗಿಸಿ ಹಸಿರು ಕ್ರಾಂತಿ ಮಾಡಿದ್ದಾರೆ. ಪಿಎಸ್‍ಐ ರಾಜು ಕೇವಲ ಅಮೃತ್ತೂರು ಠಾಣೆ ಅಷ್ಟೆ ಅಲ್ಲಾ ಕೆ.ಬಿ ಕ್ರಾಸ್ ಠಾಣೆ ಎದುರಲ್ಲೂ ಉದ್ಯಾನವನ ನಿರ್ಮಿಸಿದ್ದಾರೆ. ಪ್ರತಿ ಭಾನುವಾರ ಪರೇಡ್ ಮುಗಿದ ಬಳಿಕ ಪಾರ್ಕ್ ನಿರ್ವಹಣೆ ಕೆಲಸ ಮಾಡಲಾಗುತ್ತಿದ್ದು, ಕಳೆ ಕೀಳುವುದು, ಎಲೆಗಳನ್ನು ಕಟ್ ಮಾಡಿ ಸುಂದರಗೊಳಿಸುತ್ತಾರೆ. ಒಟ್ಟಾರೆ ಖಾಕಿಗಳ ಕೈಚಳಕದಲ್ಲಿ ಕಂಗೊಳಿಸುತ್ತಿದ್ದ ಉದ್ಯಾನವನ ಎಲ್ಲರ ಆಕರ್ಷಣಿಯ ಸ್ಥಳವಾಗಿದೆ.

    ಪಿಎಸ್‍ಐ ರಾಜು ಅವರ ಈ ಹಸಿರು ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕೊಡಗಿನಲ್ಲಿ ಮರ ಕಡಿಯುವುದನ್ನು ನಿಲ್ಲಿಸಲು ಸಿಎಂ ಸೂಚನೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕೊಡಗಿನಲ್ಲಿ ಮರ ಕಡಿಯುವುದನ್ನು ನಿಲ್ಲಿಸಲು ಸಿಎಂ ಸೂಚನೆ

    ಬೆಂಗಳೂರು: 800 ಮರಗಳನ್ನು ಕಡಿಯುವುದನ್ನು ನಿಲ್ಲಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

    ರೆಸಾರ್ಟ್ ನಿರ್ಮಾಣ ಮಾಡಲು ಕೊಡಗಿನಲ್ಲಿ ಬರೋಬ್ಬರಿ 800 ಮರಗಳನ್ನು ಕಡಿಯುತ್ತಿರುವ ಬಗ್ಗೆ ಪಬ್ಲಿಕ್ ಟಿವಿ ಇಂದು ಬೆಳಗ್ಗೆಯಿಂದ ನಿರಂತರ ವರದಿ ಪ್ರಸಾರ ಮಾಡಿತ್ತು. ಈ ವರದಿ ನೋಡಿದ ಸಿಎಂ ಕುಮಾರಸ್ವಾಮಿ ಅವರು ಕೂಡಲೇ ಮರ ಕಡಿಯುವುದನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಆಫ್ ಕರ್ನಾಟಕ, “ಕೊಡಗು ಜಿಲ್ಲೆಯಲ್ಲಿ 800 ಮರಗಳನ್ನು ಕಡಿಯುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದೇ ಮರಗಳನ್ನು ಕಡಿಯುವುದನ್ನು ನಿಲ್ಲಿಸಿ, ವರದಿಯನ್ನು ನೀಡುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ” ಎಂದು ಟ್ವೀಟ್ ಮಾಡಿದೆ.

    https://twitter.com/CMofKarnataka/status/1136888802247565312

    ಆಂಧ್ರ ಮೂಲದ ಉದ್ಯಮಿಯೊಬ್ಬರಿಗೆ ರೆಸಾರ್ಟ್ ನಿರ್ಮಾಣ ಮಾಡಲು ಬರೋಬ್ಬರಿ 800 ಮರಗಳನ್ನು ಕಡಿಯುವುದಕ್ಕೆ ಸ್ವತಃ ಅರಣ್ಯ ಇಲಾಖೆ ಒಪ್ಪಿಗೆ ನೀಡಿತ್ತು. ಮಡಿಕೇರಿ ತಾಲೂಕಿನ ಕೆ ನಿಡುಗಣೆಯಲ್ಲಿ ಆಂಧ್ರ ಮೂಲದ ರೆಡ್ಡಿ ಎಂಬವರು 68 ಏಕರೆ ಜಾಗ ಖರೀದಿಸಿದ್ದಾರೆ.

    ಬೃಹತ್ ಮರ, ಬೆಟ್ಟ ಗುಡ್ಡಗಳಿಂದ ಈ ಜಾಗದಲ್ಲಿ 30 ಎಕರೆಯನ್ನು ಅಭಿವೃದ್ಧಿಪಡಿಸಿ ಹೌಸಿಂಗ್ ಬೊರ್ಡ್ ಗೆ ಕೊಡುತ್ತೇವೆ. ಆ 30 ಎಕರೆಯಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಕೊಡಿ ಎಂದು ಜಾಗದ ಮಾಲೀಕ ಅನುಮತಿ ಕೇಳಿದ್ದರು. ಈ ಪ್ರಸ್ತಾಪಕ್ಕೆ ಅನುಮತಿ ನೀಡಿದ ಕೊಗು ಜಿಲ್ಲಾಡಳಿತ ಕನ್ವರ್ಷನ್‍ಗೆ ಅವಕಾಶ ಕೊಟ್ಟಿತ್ತು.

  • ಬೆಂಗಳೂರಲ್ಲಿ ಶವಸಂಸ್ಕಾರಕ್ಕೂ ಕಷ್ಟ ಕಷ್ಟ – 60 ದಿನ ಹರಿಶ್ಚಂದ್ರ ಘಾಟ್ ಬಂದ್

    ಬೆಂಗಳೂರಲ್ಲಿ ಶವಸಂಸ್ಕಾರಕ್ಕೂ ಕಷ್ಟ ಕಷ್ಟ – 60 ದಿನ ಹರಿಶ್ಚಂದ್ರ ಘಾಟ್ ಬಂದ್

    ಬೆಂಗಳೂರು: ರಾಜಧಾನಿಯ ಪ್ರಮುಖ ಚಿತಾಗಾರವಾಗಿರುವ ಹರಿಶ್ಚಂದ್ರ ಘಾಟ್ ಅನ್ನು ಮುಂದಿನ 60 ದಿನಗಳವರೆಗೆ ಬಂದ್ ಮಾಡುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ.

    ನಗರದ ಹಳೆಯ ಹಾಗೂ ಪ್ರಮುಖ ರುದ್ರಭೂಮಿಯಂದೇ ಹರಿಶ್ಚಂದ್ರ ಘಾಟ್ ಪ್ರಖ್ಯಾತಿ ಪಡೆದಿದೆ. ಈ ಚಿತಾಗಾರದಲ್ಲಿರುವ ವಿದ್ಯುತ್ ಚಿತಗಾರದ ಫರ್ನೇಸ್ ಗಳನ್ನು ಮೇಲ್ಧರ್ಜೆಗೇರಿಸುವ ಉದ್ದೇಶದಿಂದ ಬಿಬಿಎಂಪಿ ಬರೊಬ್ಬರಿ 60 ದಿನಗಳ ವರೆಗೆ ಚಿತಾಗಾರವನ್ನು ಬಂದ್ ಮಾಡಲಿದೆ.

    ಬಿಬಿಎಂಪಿ ಮಾಹಿತಿಗಳ ಪ್ರಕಾರ ಮಂಗಳವಾರದಿಂದ ಫೆಬ್ರವರಿ 18 ರವರೆಗೂ ಹರಿಶ್ಚಂದ್ರ ಘಾಟ್ ಸ್ಥಗಿತವಾಗಿರಲಿದೆ. ಈ ನೂತನ ಕಾಮಗಾರಿ ಪೂರ್ಣಗೊಂಡ ಬಳಿಕ ಶವಸಂಸ್ಕಾರಕ್ಕೆಂದು ಬರುವ ಜನ ಗಂಟೆ ಗಟ್ಟಲೇ ಕಾಯುವ ಅವಶ್ಯಕತೆ ಇರುವುದಿಲ್ಲವೆಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ, ಪ್ಲಾಸ್ಟಿಕ್ ಚಂಬು ಹಿಡಿದು ಪ್ರತಿಭಟಿಸಿದ ಗ್ರಾಮಸ್ಥರು

    ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ, ಪ್ಲಾಸ್ಟಿಕ್ ಚಂಬು ಹಿಡಿದು ಪ್ರತಿಭಟಿಸಿದ ಗ್ರಾಮಸ್ಥರು

    ಬಾಗಲಕೋಟೆ: ಶೌಚಾಲಯ ನಿರ್ಮಾಣದ ಸಹಾಯ ಧನಕ್ಕೆ ಆಗ್ರಹಿಸಿ ಬುದ್ನಿ ಪಿಡಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ಲಾಸ್ಟಿಕ್ ಚಂಬು ಹಿಡಿದು ವಿನೂತನ ಪ್ರತಿಭಟನೆ ಮಾಡಿದ್ದಾರೆ.

    ಜಿಲ್ಲಾಡಳಿತ ಶೌಚಾಲಯ ನಿರ್ಮಾಣಕ್ಕಾಗಿ ಸಹಾಯ ಧನವನ್ನು ಬಿಡುಗಡೆ ಮಾಡಿರಲಿಲ್ಲ. ಇದರಿಂದ ರೊಚ್ಚಿಗೆದ್ದ ರಬಕವಿ ಬನಹಟ್ಟಿ ತಾಲೂಕಿನ ಬುದ್ನಿ ಪಿಡಿ ಗ್ರಾಮಸ್ಥರು ಜಿಲ್ಲಾಡಳಿತ ಎದುರು ಪ್ಲಾಸ್ಟಿಕ್ ಚಂಬು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಸಮಸ್ಯೆ ಬಗೆ ಹರಿಸುವವರೆಗೂ ಸ್ಥಳದಿಂದ ತೆರಳುವುದಿಲ್ಲವೆಂದು ಘೇರಾವ್ ಹಾಕಿದ್ದಾರೆ. ಅಲ್ಲದೇ ಸ್ಥಳದಲ್ಲಿಯೇ ಅಡುಗೆಯನ್ನು ತಯಾರಿಸಿ, ಊಟ ಮಾಡಿದ್ದಾರೆ.

    ಈ ಕುರಿತು ಮಾತನಾಡಿದ ಗ್ರಾಮಸ್ಥರು, ಶೌಚಾಲಯ ನಿರ್ಮಾಣಕ್ಕೆ ಇದೂವರೆಗೂ ಜಿಲ್ಲಾಡಳಿತ ಸಹಾಯ ಧನವನ್ನು ಬಿಡುಗಡೆ ಮಾಡುತ್ತಿಲ್ಲ. ಹಲವು ಬಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಾವು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದೇನೆ. ನಮ್ಮ ಸಮಸ್ಯೆ ಬಗೆಹರಿಯುವವರೆಗೂ ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv