Tag: Congress Party woman worker

  • ‘ಮೋದಿ, ಶಾ ಕಳ್ಳರು, ಡಿಕೆಶಿ ಕಣ್ಣೀರಿಗೆ ಕಾರಣವಾದವ್ರ ಮನೆಯಲ್ಲಿ ಕಣ್ಣೀರಿನ ಹೊಳೆ ಹರಿಯುತ್ತೆ’

    ‘ಮೋದಿ, ಶಾ ಕಳ್ಳರು, ಡಿಕೆಶಿ ಕಣ್ಣೀರಿಗೆ ಕಾರಣವಾದವ್ರ ಮನೆಯಲ್ಲಿ ಕಣ್ಣೀರಿನ ಹೊಳೆ ಹರಿಯುತ್ತೆ’

    – ಡಿಕೆಶಿ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ
    – ಪ್ರತಿಭಟನೆಯಲ್ಲಿ ‘ಕೈ’ ಕಾರ್ಯಕರ್ತೆ ಹೇಳಿಕೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ದೊಡ್ಡ ಕಳ್ಳರು. ಡಿ.ಕೆ.ಶಿವಕುಮಾರ್ ಅವರು ಕಣ್ಣೀರು ಹಾಕುವಂತೆ ಮಾಡಿದವರ ಮನೆಯಲ್ಲಿ ಕಣ್ಣೀರಿನ ಹೊಳೆ ಹರಿಯುತ್ತದೆ. ಯಾರನ್ನೂ ನಾನು ಬಿಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತೆ ಮೈಸೂರಿನ ಮಾಲಾಶ್ರೀ ಹೇಳಿದ್ದಾರೆ.

    ಡಿಕೆ ಶಿವಕುಮಾರ್ ಬಂಧನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಾನು ಮೈಸೂರು ಚಾಮುಂಡೇಶ್ವರಿ. ಹನ್ನೇರಡು ದೇವತೆಗಳನ್ನು ಹೊತ್ತಿದ್ದೇನೆ. ಅದರಲ್ಲಿ ಐದು ಜನ ಹೆಣ್ಣು ದೇವರು, ಐದು ಗಂಡು ದೇವರು. ಡಿ.ಕೆ.ಶಿವಕುಮಾರ್ ಅವರು ನನ್ನ ಜೊತೆಗೆ ಬೆಳೆದಿರುವವರು. ನಾನು ಕೆ.ಆರ್ ಪೇಟೆ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿದ್ದೆ. ಕಾಂಗ್ರೆಸ್ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಮಾಡಿರುವ ಅನ್ಯಾಯದ ವಿರುದ್ಧ ಹೋರಾಡಲು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇನೆ ಎಂದರು.

    ನಾನು ಎಲ್ಲ ಕಡೆಯೂ ಇರುತ್ತೇನೆ. ಈಗ ಹೇಳುತ್ತಿರುವವಳು ಚಾಮುಂಡಿ. ಮೈಸೂರು ಬಿಟ್ಟು ಈಗ ಇಲ್ಲಿಗೆ ಬಂದಿದ್ದೇನೆ. ಈ ಹಿಂದೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಸಾಧ್ಯವಿಲ್ಲ ಅಂತ ಬಿಜೆಪಿಯವರು ಹೇಳಿದ್ದರು. ಆದರೆ ನಾನು ಎರಡೇ ತಿಂಗಳಲ್ಲಿ ಅವರನ್ನ ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದೆ. ಇನ್ನು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲು ಕಾರಣವಾದವನ್ನ ಬಿಡುತ್ತೇನಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ನನ್ನ ಕ್ಷೇತ್ರದಲ್ಲಿ ಉಳಿಸಿಕೊಳ್ಳಲಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದವರ ಮನೆಯಲ್ಲಿ ಹೆಣ ಕಡೆಯುತ್ತೇನೆ. ನಾನು ಯಾರು ಅಂತ ತೋರಿಸುತ್ತೇನೆ. ನನ್ನ ಹತ್ತಿರ ಏಳು ದೇವರಿದ್ದಾರೆ. ನಾನು ಶನಿ ಮಹಾತ್ಮ ಎಂದು ಗುಡುಗಿದರು.

    ಪ್ರಧಾನಿ ಮೋದಿ ಹಾಗೂ ಅಮಿತಾ ಶಾ ಅವರು ನನ್ನ ಬಳಿಗೆ ಬಂದಿದ್ದರು. ರಾಜ್ಯದಲ್ಲಿ ನಮ್ಮ ಸರ್ಕಾರ ಎರಡು ಬಾರಿ ಬಿದ್ದಿದೆ. ಹೀಗಾಗಿ ನಮಗೆ ನಿನ್ನ ಅನುಗ್ರಹ ಬೇಕು ಅಂತ ಕೇಳಿಕೊಂಡಿದ್ದರು. ಆದರೆ ನಾನು ಒಪ್ಪಲಿಲ್ಲ. ಈಗ ಅಧಿಕಾರ ಸಾಧಿಸಿದ್ದಾರೆ. ಅದು ಕೇವಲ ಒಂದು ವರ್ಷ ಕೂಡ ಉಳಿಯಲ್ಲ ಎಂದು ಭವಿಷ್ಯ ನುಡಿದರು.

    ಪ್ರತಿಭಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಕನ್ನಡಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನಾಕಾರರು ಡಿಕೆ ಶಿವಕುಮಾರ್ ಅವರ ಪರ ಜೈಕಾರ ಕೂಗಿದರು. ಜೊತೆಗೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.