ಚಾಮರಾಜನಗರ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಿರುವುರದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗುತ್ತಿದೆ ಎಂದು ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೆಡೆ ಮಹಿಳೆಯರೇ ಕಳ್ಳಭಟ್ಟಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಹೀಗೆ ಬಿಟ್ಟರೆ ಅಪಾಯ ಎದುರಾಗಲಿದ್ದು, ಕಳ್ಳಭಟ್ಟಿ ದಂಧೆಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಮದ್ಯದಂಗಡಿ ಮುಚ್ಚಿರುವುದರಿಂದ ಸರ್ಕಾರಕ್ಕೆ ಬರುವ ಆದಾಯದಲ್ಲಿ ಖೋತಾ ಆಗುತ್ತಿದೆ. ಅಲ್ಲದೆ ಮದ್ಯ ಮಾರಾಟದ ಕಳ್ಳದಂಧೆ ನಡೆಯುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರ ಹಸಿರು ವಲಯದಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ವಾರಕ್ಕೊಮ್ಮೆ ಮದ್ಯದಂಗಡಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಳ್ಳದಾರಿಗಳಲ್ಲಿ ಮದ್ಯ ಮಾರಾಟ ಆಗುತ್ತಿದೆ. ಮದ್ಯದಂಗಡಿಗಳು ಮುಚ್ಚಿದ್ದರೂ ಹೇಗೆ ಮದ್ಯ ಮಾರಾಟ ಆಗುತ್ತಿದೆ. ಒಂದಕ್ಕೆ ಹತ್ತು ಪಟ್ಟು ಹಣ ನೀಡಿ ಜನ ಮದ್ಯ ಸೇವಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾಳಸಂತೆಯಲ್ಲಿ ಲೋಕಲ್ ಮದ್ಯಕ್ಕೂ 500, 600 ರೂಪಾಯಿಗಳಾಗಿದೆ. ಮದ್ಯದಂಗಡಿಗಳನ್ನು ಬಂದ್ ಮಾಡಿದ್ದ ಮೇಲೆ ಕಾಳಸಂತೆಯಲ್ಲಿ ಹೇಗೆ ದೊರೆಯುತ್ತಿದೆ? ಬಂದ್ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಲಾಗಿದೆಯೇ? ನಿಯಮಾನುಸಾರ ಸೀಲ್ ಮಾಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಆಗ್ರಹಿಸಿದ್ದಾರೆ.
ಬೆಂಗಳೂರು: ಭಾನುವಾರ ರಾತ್ರಿ ನಡೆದ ಪಾದರಾಯನಪುರ ಗಲಾಟೆ ಮತ್ತು ಸೋಮವಾರ ಮಾಧ್ಯಮಗಳಿಗೆ ತಾವು ನೀಡಿದ ಹೇಳಿಕೆಗಳಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಟ್ವಿಟ್ಟರ್‍ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಜಮೀರ್ ಅಹ್ಮದ್ ಟ್ವೀಟ್:
ಪಾದರಾಯನಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ ಎಂದು ನನ್ನಿಂದ ಇನ್ನೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ, ತಮ್ಮನ್ನೇ ಉಳಿಸಲು ಬಂದವರ ಮೇಲೆ ಜನ ಹಲ್ಲೆಗೆ ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ. ನಾನು ಯಾರಿಗೂ ನನ್ನ ಅಪ್ಪಣೆ ಪಡೆದು ಚಾಮರಾಜಪೇಟೆಗೆ ಬರಬೇಕು ಎಂದು ಎಲ್ಲಿಯೂ ಹೇಳಿಲ್ಲ, ಹೇಳುವುದು ಇಲ್ಲ. ನನ್ನ ಕ್ಷೇತ್ರವೂ ಇತರ ಕ್ಷೇತ್ರಗಳಂತೆ ಒಂದು ಸಾಮಾನ್ಯ ಕ್ಷೇತ್ರ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದಕ್ಕೆ ಸಾಕಷ್ಟು ನೋವಾಗಿದೆ.
ಲಾಕ್‍ಡೌನ್ ಪ್ರಾರಂಭವಾದ ದಿನದಿಂದ ಹಿಡಿದು ನಿನ್ನೆಯ ಸಂಜೆಯವರೆಗೂ ಹಗಲು ರಾತ್ರಿಯೆನ್ನದೆ ನಾನು ಕ್ಷೇತ್ರದಲ್ಲಿದ್ದು, ಅಧಿಕಾರಿಗಳಿಗೆ ಸ್ಪಂದಿಸಿ, ಜನರು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ನಿಂತು ಯಾವುದೇ ರೀತಿಯ ಗೊಂದಲ ಆಗದಂತೆ ನೋಡಿಕೊಂಡಿದ್ದು ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬೇಕೆಂದು. ಆದರೆ ನಿನ್ನೆಯ ಘಟನೆ ನಡೆಯಬಾರದಿತ್ತು, ನಡೆದಿದೆ. ಅದಕ್ಕೆ ನನ್ನ ವಿಷಾದವಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿ. ಮುಂದೆ ಇಂತಹ ಘಟನೆಗಳು ನನ್ನ ಕ್ಷೇತ್ರ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ನಡೆಯದಂತೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ.
ನನ್ನ ಜನ ಈ ರೀತಿ ವರ್ತಿಸುತ್ತಾರೆ ಎಂದು ನಾನು ಎಂದು ಭಾವಿಸಿರಲಿಲ್ಲ. ಯಾರೋ ಒಂದಷ್ಟು ಜನರ ದುರ್ವರ್ತನೆಗೆ ಇಡೀ ಸಮುದಾಯವನ್ನು ದೂರುವುದು ಕೂಡ ಸರಿಯಲ್ಲ. ಧರ್ಮಾತೀತವಾಗಿ ಕೊರೊನಾ ವಿರುದ್ಧ ದೇಶ ಹೋರಾಡುತ್ತಿದೆ, ಇದು ಒಂದಾಗಬೇಕಾದ ಸಮಯವೇ ಹೊರತು ಸಮಾಜ ಒಡೆಯುವ ಸಮಯವಲ್ಲ. ಮಾಧ್ಯಮದ ಸ್ನೇಹಿತರು ಎಲ್ಲರೂ ಒಟ್ಟಾಗಿ ನನ್ನ ಮೇಲೆ ಮುಗಿಬಿದ್ದಿದ್ದರಿಂದ ಅನಿವಾರ್ಯವಾಗಿ ಉತ್ತರಿಸದೆ ಹೊರನಡೆಯಬೇಕಾಯಿತು. ಘಟನೆಯ ಬಗ್ಗೆ ಮಾಧ್ಯಮ ಮಿತ್ರರಿಗಿದ್ದ ಆಕ್ರೋಶ, ನೋವಿನ ಅರಿವು ನನಗಿದೆ. ಇಂತಹ ಒಂದು ದುರ್ಘಟನೆ ನಡೆದ ನಂತರ ಈ ರೀತಿ ಆಕ್ರೋಶಭರಿತ ಮಾತುಗಳು ಬರುವುದು ಸಹಜ.
ಈ ಘಟನೆ ಸಂಭವಿಸದಂತೆ ಕೈಗೊಳ್ಳಬಹುದಾಗಿದ್ದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಾನು ಆಡಿದ ಮಾತುಗಳಿಗೆ ಬೇರೆಯದೇ ಅರ್ಥ ನೀಡಿ ಕೆಲ ಸಚಿವರು ನನ್ನ ವಿರುದ್ಧ ಏನೇನು ಪದಗಳನ್ನು ಬಳಸಬಹುದೋ ಅವೆಲ್ಲವನ್ನೂ ಬಳಸಿ ನನ್ನನ್ನು ಹಾಡಿ ಹೊಗಳಿದ್ದಾರೆ, ಸಂತೋಷವಾಗಿದೆ. ಅವರಿಗೂ ಧನ್ಯವಾದ. ನಾನು ಏನು ಹೇಳಲು ಬಯಸಿದ್ದೆ ಅದನ್ನು ಹೇಳಲು ಎಲ್ಲಿಯೂ ನನಗೆ ಅವಕಾಶ ಸಿಗಲಿಲ್ಲ. ಹಿಂದೂ ಮುಸ್ಲಿಂ ಇರಲಿ ಎಲ್ಲರೂ ಒಂದಾಗಿ ಬಾಳಬೇಕು, ಎಲ್ಲರೂ ಒಂದೇ ತಾಯಿಯ ಮಕ್ಕಳು. ನಮ್ಮ ದೇಶವನ್ನು, ರಾಜ್ಯವನ್ನು ಕೊರೊನಾದಿಂದ ಕಾಪಾಡಬೇಕು. ಇದಕ್ಕೆ ನನ್ನ ಕ್ಷೇತ್ರದ ಜನರ ಸಂಪೂರ್ಣ ಸಹಕಾರ ದೊರೆಯಲಿದೆ.
ಆ ಒಂದು ಘಟನೆಯಿಂದ ನನ್ನ ಹೆಸರಿಗೆ ಮಸಿ ಬಳಿಯಲು ಎಷ್ಟೇ ಪ್ರಯತ್ನಿಸಿದರೂ ನಾನು ಜನಸೇವೆಯಿಂದ ಹಿಂದೆ ಸರಿಯುವವನಲ್ಲ. ಮಾನವೀಯತೆಯೇ ನನ್ನ ಧರ್ಮ. ಹಣ, ಅಧಿಕಾರ ಯಾವುದೂ ಶಾಶ್ವತವಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ನನ್ನ ಸಹೋದರ, ಸಹೋದರಿಯರಿದ್ದಂತೆ. ಇವರೆಲ್ಲರ ಜೊತೆ ಸದಾ ಇರುತ್ತೇನೆ. ಮುಂದೆ ಇಂಥ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಅಗತ್ಯ ಮುಂಜಾಗ್ರತೆ ವಹಿಸಲಾಗುತ್ತದೆ. ನನ್ನ ಕ್ಷೇತ್ರದ ಜನತೆ ಎಂದಿನಂತೆ ಮುಂದೆಯೂ ಸರ್ಕಾರ, ವೈದ್ಯಕೀಯ ಸಿಬ್ಬಂದಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ ಎಂಬ ಭರವಸೆ ನನಗಿದೆ. ನಮ್ಮೆಲ್ಲರ ಗುರಿ ಕೊರೊನಾ ನಿರ್ಮೂಲನೆಯೊಂದೇ ಆಗಿರಲಿ.
ಗಾಂಧಿನಗರ: ಗುಜರಾತ್‍ನ ಜಮಾಲ್‍ಪುರ-ಖಾದಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲ ಮಂಗಳವಾರ ಸಂಜೆ ಕೋವಿಡ್ -19 ಪರೀಕ್ಷೆ ಮಾಡಿಸಿದ್ದಾರೆ. ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಗುಜರಾತ್ ಮುಖ್ಯಮಂತ್ರಿ ಸೇರಿದಂತೆ ಅನೇಕ ಅಧಿಕಾರಿಗಳು ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ಸದ್ಯಕ್ಕೆ ಶಾಸಕ ಇಮ್ರಾನ್ ಖೇದವಾಲ ಅವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡೆಪ್ಯೂಟಿ ಮುನ್ಸಿಪಲ್ ಕಮಿಷನರ್ ಓಂ ಪ್ರಕಾಶ್ ಮಚ್ರಾ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಗಾಂಧಿನಗರದ ಸಿಎಂ ಕಚೇರಿಯಲ್ಲಿ ಸಿಎಂ ವಿಜಯ್ ರೂಪಾನಿ ಸಭೆ ಕರೆದಿದ್ದರು. ಈ ಸಭೆಯಲ್ಲಿ ಇಮ್ರಾನ್ ಖೇದವಾಲ ಮತ್ತು ಇತರ ಕಾಂಗ್ರೆಸ್ ಶಾಸಕರು ಪಾಲ್ಗೊಂಡಿದ್ದರು. ಸಂಜೆ ವೇಳೆ ಶಾಸಕರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಸಭೆಯಲ್ಲಿ ಉಪಮುಖ್ಯಮಂತ್ರಿ, ಗೃಹ ಸಚಿವರು, ರಾಜ್ಯದ ಆರೋಗ್ಯ ಪ್ರಧಾನ ಕಾರ್ಯದರ್ಶಿ, ಅಹಮದಾಬಾದ್ ಪೊಲೀಸ್ ಆಯುಕ್ತರು, ಪುರಸಭೆ ಆಯುಕ್ತರು ಸೇರಿದಂತೆ ಗುಜರಾತ್ ಸರ್ಕಾರದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
ಈಗ ಇತರ ಇಬ್ಬರು ಕಾಂಗ್ರೆಸ್ ಶಾಸಕರಾದ ಗಯಸುದ್ದೀನ್ ಶೇಖ್ ಮತ್ತು ಶೈಲೇಶ್ ಪರ್ಮಾರ್ ಅವರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ. ಸಿಎಂ ಮನೆಯಲ್ಲಿ ನಡೆದ ಸಭೆಯ ನಂತರ ಖೇದವಾಲ ಪತ್ರಿಕಾಗೋಷ್ಠಿಯನ್ನು ನಡೆಸಿದ್ದರು. ಅಲ್ಲಿ ಅನೇಕ ಪತ್ರಕರ್ತರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
In today's meeting with Congress MLAs (an MLA present in meeting tested positive),CM Vijay Rupani was seated at distance of 15-20 feet&avoided physical contact.Still,after taking directions from medical experts further decision will be taken,tmrw: Ashwini Kumar,Secy to Gujarat CM https://t.co/D7fJjJRRuc
ಈಗಾಗಲೇ ಸಿಎಂ ನಿವಾಸವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಲಾಗುತ್ತಿದ್ದು, ಸಿಎಂ ಕೂಡ ಹೋಮ್ ಕ್ವಾರಂಟೈನ್‍ಲ್ಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ, ಸಿಎಂ ಕಾರ್ಯದರ್ಶಿ ಅಶ್ವಿನಿ ಕುಮಾರ್, ಖೇದವಾಲ ಅವರು ಸಿಎಂ ಅವರಿಂದ 15-20 ಮೀಟರ್ ದೂರದಲ್ಲಿ ಕುಳಿತುಕೊಂಡಿದ್ದರು. ಆದರೂ ವೈದ್ಯರಿಂದ ವೈದ್ಯಕೀಯ ಸಲಹೆ ಪಡೆಯಲಾಗುವುದು. ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು: ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವ ಕೊರೊನ ವೈರಸ್ ಹಾಗೂ ಸರ್ಕಾರದ ಆದೇಶದ ಹಿನ್ನೆಲೆ ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕೂಡ ತಮ್ಮ ಮಗಳ ಮದುವೆಯನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ.
ಇದೇ 19ರಂದು ನಗರದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು. ಈಗಾಗಲೇ 12 ಸಾವಿರಕ್ಕೂ ಅಧಿಕ ಲಗ್ನಪತ್ರಿಕೆಗಳನ್ನು ಸಹ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಹಂಚಿದ್ದಾರೆ. ಆದರೆ ಈಗ ಕೊರೊನಾ ವೈರಸ್ ಭೀತಿ ಹಾಗೂ ಸರ್ಕಾರದ ಆದೇಶದ ಹಿನ್ನೆಲೆ ಸರಳ ಮದುವೆಗೆ ಎರಡು ಕುಟುಂಬದವರು ಮುಂದಾಗಿದ್ದಾರೆ.
ನಗರದಲ್ಲಿ ಮಾತನಾಡಿದ ಶಾಸಕ ರಾಜೇಗೌಡ, ತಮ್ಮ ಮಗಳು ಹಾಗೂ ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್‍ರವರ ಮಗನೊಂದಿಗೆ ನಿಶ್ಚಯವಾಗಿದ್ದ ಮದುವೆಯನ್ನ ಸರಳವಾಗಿ ಬಂಧುಗಳ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಸ್ವಗೃಹ ಬಾಸಾಪುರದ ಕಾಫಿ ತೋಟದಲ್ಲಿ ನಡೆಯಲಿದೆ. ನಿಗದಿಯಾಗಿದ್ದ ದಿನದಂದೇ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು. ರಾಜೇಗೌಡ ಮಗಳು ಡಾ.ಸಂಜನಾ ಮತ್ತು ಅತ್ತಿಕಟ್ಟೆ ಜಗನ್ನಾಥ್ ಪುತ್ರ ವಚನ್‍ಲಕ್ಷ್ಮಣ್ ರವರ ವಿವಾಹ ಮಹೋತ್ಸವ ಇದೇ ಮಾರ್ಚ್ 19ಕ್ಕೆ ನಿಗದಿಯಾಗಿತ್ತು.
ಮದುವೆ ಅಂಗವಾಗಿ ಮಾ. 16ರಂದು ನಡೆಯಬೇಕಾಗಿದ್ದ ದೇವತಾಕಾರ್ಯವನ್ನು ಮಾ 18ರ ಬುಧವಾರ ಹಾಗೂ ವಿವಾಹ ಮಹೋತ್ಸವನ್ನು ಮಾ 19ರ ಗುರುವಾರ ಬಾಸಾಪುರ ಎಸ್ಟೇಟಿನಲ್ಲಿ ಸರಳವಾಗಿ ಬಂಧುಗಳೊಂದಿಗೆ ನಡೆಸಲು ತೀರ್ಮಾನಿಸಿದ್ದಾರೆ. ಮಾ 21ರ ಶನಿವಾರ ಚಿಕ್ಕಮಗಳೂರು ಕ್ಲಬ್‍ನಲ್ಲಿ ಏರ್ಪಡಿಸಿದ್ದ ಆರತಕ್ಷತೆ ಕಾರ್ಯಕ್ರಮವನ್ನು ಕೊರೊನಾ ವೈರಸ್ ಕಾರಣದಿಂದ ಮುಂದೂಡಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಈ ವಿವಾಹವನ್ನು ಸರಳವಾಗಿ ನಡೆಸಲು ನಿಶ್ಚಯಿಸಿದ್ದಾರೆ. ದೊಡ್ಡವರ ಈ ತೀರ್ಮಾನವನ್ನ ವಧುವರರಾದ ಸಂಜನಾ ಹಾಗೂ ವಚನ್‍ಲಕ್ಷ್ಮಣ್ ಕೂಡ ಸ್ವಾಗತಿಸಿದ್ದಾರೆ.
ಚಿಕ್ಕಮಗಳೂರು: ಕಾರಿನಲ್ಲಿ ಆನೆ ದಂತ ಸಾಗಿಸುವಾಗ ಸಿಕ್ಕಿಬಿದ್ದ ಜಿಲ್ಲೆಯ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರ ಆಪ್ತನ ಮನೆ ಮೇಲೆ ದಾಳಿ ಮಾಡಿದಾಗ ಮತ್ತಷ್ಟು ಸ್ಫೋಟಕ ವಸ್ತುಗಳು ಸಿಕ್ಕಿವೆ.
ಶಾಸಕ ರಾಜೇಗೌಡರ ಆಪ್ತ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಐಟಿ ಸೆಲ್ ಮುಖ್ಯಸ್ಥ ಶಬರೀಶ್ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಶೃಂಗೇರಿಯ ಕಾಂಚಿನಗರದ ಶಬರೀಶ್ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ನಕ್ಷತ್ರ ಆಮೆ, ಕಲ್ಲು ಆಮೆ, ಗನ್, ಪಿಸ್ತೂಲ್, ಬುಲೆಟ್‍ಗಳು, ಗಂಧದ ತುಂಡುಗಳು ಹಾಗೂ ಜಿಲೆಟಿನ್ ಕಡ್ಡಿ ಸೇರಿದಂತೆ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಶಬರೀಶ್ ತಂದೆ ರಮೇಶ್, ಮತ್ತೊಬ್ಬ ಆರೋಪಿ ವಿಶ್ವನಾಥ್‍ನನ್ನ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಹೊರವಲಯದಲ್ಲಿ ಕಾರಿನಲ್ಲಿ ಆನೆದಂತ ಸಾಗಿಸುವಾಗ ಶಬರೀಶ್ ಜೊತೆ ಮೂವರು ಸಿಕ್ಕಿಬಿದ್ದಿದ್ದರು. ಈ ಪ್ರಮಾಣದಲ್ಲಿ ತನ್ನ ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದ ಶಬರೀಶ್, ಯಾವುದಾದರೂ ವಿಧ್ವಂಸಕ ಕೃತ್ಯವನ್ನು ಎಸಗಲು ಸಂಚು ರೂಪಿಸಿದ್ದನ ಎಂಬ ಶಂಕೆ ಪೊಲೀಸರನ್ನು ಕಾಡುತ್ತಿದೆ.
ಈಗಾಗಲೇ ಬಂಧನಕ್ಕೊಳಗಾಗಿರೋ ಶಬರೀಶ್, ಯೋಗೀಶ್, ವಿಜಯ್ ಹಾಗೂ ಮಧುಸೂದನ್‍ನನ್ನ ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಶಾಸಕರು ಮೂಗು ತೂರಿಸಬಾರದು, ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮಂಗಳೂರು: ಬೆಂಗಳೂರಿನಲ್ಲಿ ಹಿಂದೂ ನಾಯಕರ ಹತ್ಯೆಗೈಯಲು ಸಂಚು ರೂಪಿಸಿದ್ದು ಯಾರೇ ಆಗಲಿ ಅಂತಹ ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಕೂಡ ಬೆಂಬಲಿಸಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಎಸ್.ಡಿ.ಪಿ.ಐ ನಿಷೇಧಿಸುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ನಿಷೇಧಿಸುವ ಬಗ್ಗೆ ಸರ್ಕಾರ ಹೇಳಬೇಕು. ಪ್ರತಿಪಕ್ಷದಲ್ಲಿದ್ದಾಗ ಅವರೇ ನಿಷೇಧದ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರದ್ದೇ ಸರ್ಕಾರ ಇದೆ. ಹೀಗಾಗಿ ಬೇರೆಯವರ ಬಳಿ ಕೇಳುವುದಕ್ಕೆ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್
ಆರೋಪಕ್ಕೆ ಸಾಕ್ಷ್ಯಾಧಾರ ನೀಡಿ ಜನರಿಗೆ ವಿಶ್ವಾಸ ಬರುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕು. ಸತ್ಯಾಂಶ ಇದ್ದರೆ ಯಾರು ಕೂಡ ಅವರಿಗೆ ಬೆಂಬಲಿಸಲ್ಲ ಎಂದು ಹೇಳಿದರು.
ಬೆಳಗಾವಿ: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಬೆಂಗಳೂರಿನಿಂದ ತಿರುಪತಿವರೆಗೆ ಸದ್ಭಾವನಾ ಪಾದಯಾತ್ರೆಯನ್ನು ಶನಿವಾರ ಬೆಳಗ್ಗೆ ಆರಂಭಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಾಸಕಿ ನಿಂಬಾಳ್ಕರ್ ಅವರು, ಸಶಕ್ತ ವರ್ತಮಾನ, ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥನೆ ನಡಿಗೆ. ನಮ್ಮ ಖಾನಾಪುರಕ್ಕಾಗಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕೆಲವು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಪತಿ, ಪೋಲಿಸ್ ಅಧಿಕಾರಿ ಐಜಿಪಿ ಹೇಮಂತ್ ನಿಂಬಾಳ್ಕರ್ ಸೇರಿದಂತೆ ತಮ್ಮ ಸಹೋದರರಾದ ಮಿಲಿಂದ್ ಮತ್ತು ಸುರೇಶ್ ಅವರೊಂದಿಗೆ ಬೆಂಗಳೂರಿನಿಂದ ತಿರುಪತಿವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಶನಿವಾರ ಬೆಳಗ್ಗೆ ಈ ಸದ್ಭಾವನಾ ಪಾದಯಾತ್ರೆ ಪ್ರಾರಂಭಿಸಿದ ಶಾಸಕಿ ಅಂಜಲಿ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ. ಈ ಮೂಲಕ ತಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ, ಜನತೆಯ ಸುಖ ಶಾಂತಿ, ನೆಮ್ಮದಿಯ ಬದುಕಿಗಾಗಿ ತಿಮ್ಮಪ್ಪನ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲ್ಲಿದ್ದಾರೆ.
ಸಶಕ್ತ ವರ್ತಮಾನಕ್ಕಾಗಿ, ಉಜ್ವಲ ಭವಿಷ್ಯಕ್ಕಾಗಿ ‘ಪ್ರಾರ್ಥನೆ ನಡಿಗೆ’, ನಮ್ಮ ಖಾನಾಪುರಕ್ಕಾಗಿ..
From today; Padyatra with family from Bengaluru to Thirupathi with Prayers to Lord for Progressive Khanapur..🙏 pic.twitter.com/qHpoHNomno
ಬಳ್ಳಾರಿ: ಕಾಂಗ್ರೆಸ್ ಶಾಸಕ ಭೀಮನಾಯ್ಕ್ ಅವರ ಸೋದರ ಅತ್ತೆಯ ಮಗನ ಶವ ಕಾಲುವೆಯಲ್ಲಿ ಪತ್ತೆಯಾಗಿದೆ.
ಹೊಸಪೇಟೆಯ ಮೃತ್ಯುಂಜಯ ನಗರದ ನಿವಾಸಿ ಹಲಗಾ ನಾಯ್ಕ್ ಹಿರಿಯ ಪುತ್ರ 10ನೇ ತರಗತಿಯ ಓದುತ್ತಿದ್ದ ಸುನೀಲ್ (10) ಮೂರು ದಿನದ ಹಿಂದೆ ನಾಪತ್ತೆಯಾಗಿದ್ದು, ಇಂದು ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ಹೊಡೆದು ಬಳ್ಳಾರಿಯ ಇಬ್ರಾಹಿಂಪುರ ಕಾಲುವೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಮೂರು ದಿನಗಳ ಹಿಂದೆ ಟ್ಯೂಷನ್‍ಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟಿದ್ದ ಸುನೀಲ್ ಮನೆಗೆ ವಾಪಸ್ ಬಂದಿರಲಿಲ್ಲ. ಸಂಜೆ ತನಕ ಹುಡುಕಿ ಮಗ ಸಿಗದೆ ಇದ್ದಾಗ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಇದೇ ತಿಂಗಳು 23 ರಂದು ಸಹಪಾಠಿಗಳ ಜೊತೆಯಲ್ಲಿ ಜಗಳವಾಡಿಕೊಂಡಿದ್ದ ಸುನೀಲ್ ಅನ್ನು ಅವರ ಪಾಲಕರು ಥಳಿಸಿದ್ದರು ಎಂದು ಹೇಳಲಾಗಿದೆ.
ಈ ಕ್ಷುಲ್ಲಕ ಕಾರಣಕ್ಕೆ ಹೊಡೆದು ಕೊಲೆ ಮಾಡಿ ಕಾಲುವೆಗೆ ಹಾಕಿದ್ದಾರೆ ಎಂದು ಸುನೀಲ್ ಕುಮಾರ್ ನಾಯ್ಕ್ ಪೋಷಕರು ಆರೋಪ ಮಾಡಿದ್ದಾರೆ. ಈ ಸಂಬಂಧ ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನವೇ ನಾಮಪತ್ರ ಸಲ್ಲಿಕೆ
ಚಂಡೀಗಢ: ಪಕ್ಷವು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮೇಲೆಯೇ ನಾಮಪತ್ರ ಸಲ್ಲಿಸಬೇಕು. ಆದರೆ ಹರ್ಯಾಣದ ಕಾಂಗ್ರೆಸ್ ಶಾಸಕರೊಬ್ಬರು ಪಟ್ಟಿ ಬಿಡುಗಡೆಗೂ ಮುನ್ನವೇ ನಾಮಪತ್ರ ಸಲ್ಲಿಸಿ ‘ಕೈ’ ನಾಯಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಹರ್ಯಾಣ ವಿಧಾನಸಭಾ ಚುನಾವಣೆ ಘೋಷಣೆ ಆಗಿದ್ದು, ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ಈವರೆಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಮೆಹಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ದಂಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಶಾಸಕರ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
#WATCH Congress MLA from Haryana Anand Singh Dangi files nomination before party announced candidate list for upcoming assembly elections; says, " I don't need to ask for a ticket. My ticket is final & can get another, if somebody else wants". #Rohtakpic.twitter.com/SkuiGduuwb
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆನಂದ್ ಸಿಂಗ್ ದಂಗಿ, ಟಿಕೆಟ್ ನೀಡುವಂತೆ ಯಾರನ್ನೂ ಕೇಳುವ ಅಗತ್ಯವಿಲ್ಲ. ನನ್ನ ಟಿಕೆಟ್ ಅಂತಿಮವಾಗಿದೆ. ಬೇರೆಯವರು ಬಯಸಿದರೆ ಇನ್ನೊಂದು ಟಿಕೆಟ್ ಪಡೆಯಬಹುದು ಎಂದು ನಗೆ ಚಟಾಕಿ ಹಾರಿಸಿದರು.
ಆನಂದ್ ಸಿಂಗ್ ದಂಗಿ 1991, 2005, 2009 ಮತ್ತು 2014ರಲ್ಲಿ ಮೆಹಮ್ ವಿಧಾನಸಭಾ ಸ್ಥಾನದಿಂದ ಶಾಸಕರಾಗಿದ್ದಾರೆ. ಮೆಹಮ್ ಕ್ಷೇತ್ರದಲ್ಲಿ ಆನಂದ್ ಸಿಂಗ್ ದಂದಿ ಪ್ರಾಬಲ್ಯವಿದೆ. ಹಗರಣ ಒಂದಲ್ಲಿ ಸಿಲುಕಿದ್ದ ದಂಗಿ ಅವರು 2014ರ ವಿಧಾನಸಭಾ ಚುನಾವಣೆಯಲ್ಲಿ ಚೌತಲಾ ಕುಟುಂಬದ ವಿರುದ್ಧ ಸ್ಪರ್ಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅಲೆಯ ಹೊರತಾಗಿಯೂ, ಅವರು ಗೆಲುವು ಸಾಧಿಸಿದ್ದರು.
ಹರ್ಯಾಣದ ಮಾಜಿ ಸಿಎಂ ಭೂಪೇಂದ್ರ ಸಿಂಗ್ ಹೂಡಾ ಅವರ ಪತ್ನಿ ಆಶಾ ಹೂಡಾ ಮೆಹಮ್ ಕ್ಷೇತ್ರದ ಟಿಕೆಟ್ ಪಡೆಯಲು ಲಾಬಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವಿಚಾರ ತಿಳಿದ ದಂಗಿ ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮುನ್ನವೇ ನಾಮಪತ್ರ ಸಲ್ಲಿಸಿ ಬಿಗ್ ಶಾಕ್ ನೀಡಿದ್ದಾರೆ.
ನವದೆಹಲಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತತ 9 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಇಂದು ಡಿಕೆ ಶಿವಕುಮಾರ್ ತಿಹಾರ್ ಜೈಲು ಸೇರುವ ಹೊತ್ತಲ್ಲೇ, ಇತ್ತ ದೆಹಲಿಯ ಇಡಿ ಕಚೇರಿಯಲ್ಲಿ ಡಿಕೆ ಆಪ್ತೆ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ಆರಂಭವಾಗಿತ್ತು. ಬೆಳಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ನಡೆಯಿತು.
ನಿಮಗೂ ಡಿಕೆಶಿಗೂ ಇರುವ ವ್ಯವಹಾರಿಕ ಸಂಬಂಧ ಏನು? ನಿಮ್ಮ ಹೆಸರಲ್ಲಿ ಡಿಕೆಶಿ ಆಸ್ತಿ ಮಾಡಿದ್ದಾರಾ? ಹೂಡಿಕೆ ಮಾಡಿದ್ದಾರಾ ಎಂಬಿತ್ಯಾದಿ ಪ್ರಶ್ನೆಗಳನ್ನು ನಿರಂತರವಾಗಿ ಕೇಳಿದ್ದಾರೆ ಎನ್ನಲಾಗುತ್ತಿದೆ.
ಡಿಕೆಶಿ ಖಾತೆಯಿಂದ ವರ್ಗಾವಣೆ ಆಗಿದೆ ಎನ್ನಲಾದ 50 ಕೋಟಿ ರೂಪಾಯಿ, ಹರ್ಷ ಶುಗರ್ ಫ್ಯಾಕ್ಟರಿಯಲ್ಲಿ ಹೂಡಿಕೆ ಸಂಬಂಧ ಇಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ರು. ಬಳಿಕ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ವಿಚಾರಣೆಗೆ ಸಹಕರಿಸಿದ್ದೇನೆ ಎಂದು ತಿಳಿಸಿದ್ರು. ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ಲಕ್ಷ್ಮಿ ಹೆಬ್ಬಾಳ್ಕರ್‍ಗೆ ಸಮನ್ಸ್ ಜಾರಿ ಮಾಡಲಾಗಿದೆ.ಜೊತೆಗೆ ಕೆಲವು ದಾಖಲೆಗಳನ್ನು ತರುವಂತೆ ಸೂಚನೆ ನೀಡಿದ್ದಾರೆ.
ಇಡಿ ಕಚೇರಿಯಿಂದ ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ವಿಚಾರಗಳನ್ನು ಕೇಳಿದ್ದಾರೆ. ವಿಚಾರಣೆ ನಡೆಯುತ್ತಿದೆ. ನಾನು ಕೂಡ ಸಮಂಜಸ ಉತ್ತರ ನೀಡಿದ್ದೇನೆ. ಇಡಿ ಅಧಿಕಾರಿಗಳು ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಅವುಗಳನ್ನು ಒದಗಿಸುವುದಾಗಿ ತಿಳಿಸಿದ್ದೇನೆ ಎಂದರು.
ಮತ್ತೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಯಾಗಿದ್ಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಆ ಬಗ್ಗೆ ಮಾಹಿತಿ ಇಲ್ಲ, ಆಮೇಲೆ ತಿಳಿಯುತ್ತೆ. ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸದ್ಯಕ್ಕೆ ಅಧಿಕಾರಿಗಳು ಏನನ್ನೂ ಹೇಳಿಲ್ಲ ಎಂದು ಕಾರಿನ ಬಳಿಗೆ ತೆರಳಿದರು. ಈ ವೇಳೆ ಕಾರಿನಲ್ಲಿ ಕುಳಿತ ಅವರನ್ನು ಮತ್ತೆ ವಿಚಾರಣೆ ವಿಚಾರವಾಗಿ ಪ್ರಶ್ನಿಸಿದಾಗ, ಶುಕ್ರವಾರ ಬರುವಂತೆ ಸೂಚಿಸಿದ್ದಾರೆ ಎಂದು ನಗುತ್ತಲೇ ಉತ್ತರಿಸಿ ಇಡಿ ಕಚೇರಿಯಿಂದ ತೆರಳಿದರು.