ಬೆಂಗಳೂರು: ನಿನ್ನೆ ಹರಿಹರದಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಮಾತನಾಡಿದ್ದು ತಪ್ಪು. ಸ್ವಾಮೀಜಿಗಳು ಆ ರೀತಿ ಒತ್ತಡ ಹಾಕುವುದು ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಒಂದು ಸಮಾಜ ನಿಮ್ಮ ಕೈ ಬಿಡುತ್ತದೆ ಎಂದು ಸ್ವಾಮೀಜಿ ಹೇಳಬಾರದಿತ್ತು. ಸ್ವಾಮೀಜಿಗಳು ಆ ರೀತಿ ಒತ್ತಡ ಹಾಕುವುದು ಸರಿಯಲ್ಲ. ಸಹಜವಾಗಿ ಯಡಿಯೂರಪ್ಪ ಸ್ವಾಮೀಜಿ ಮಾತಿನಿಂದ ಕೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಯಡಿಯೂರಪ್ಪನವರಿಗೆ ಎರಡೂ ಕಡೆಗಳಿಂದ ಒತ್ತಡವಿದೆ. ಒತ್ತಡದಿಂದಾಗಿಯೇ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಯಡಿಯೂರಪ್ಪ ಸಿಎಂ ಆಗಿ ಇಷ್ಟು ತಿಂಗಳಾಯ್ತು. ಇಲ್ಲಿವರೆಗೆ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ನಡೆಸಿಯೇ ಎಲ್ಲ ಎಂದು ಹೇಳಿದರು.
ಬೆಂಗಳೂರು: ಹಾಡಹಗಲೇ ದುಷ್ಕರ್ಮಿಗಳು ಕಾಂಗ್ರೆಸ್ ಮುಖಂಡನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಡಿಸೆಂಬರ್ 9 ರಂದು ಉಪಚುನಾವಣೆ ಫಲಿತಾಂಶ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಕೈ ಮುಖಂಡ ಸಯ್ಯದ್ ರಿಯಾಜ್ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಸಯ್ಯದ್ ರಿಯಾಜ್ ಹಾಲಿ ಶಿವಾಜಿ ನಗರ ಕ್ಷೇತ್ರದ ಶಾಸಕರಾಗಿರುವ ರಿಜ್ವಾನ್ ಆರ್ಷದ್ ಉಪಚುನಾಣೆಯಲ್ಲಿ ಜಯಗಳಿಸಿದ್ದರಿಂದ ಸಿದ್ದಾಪುರದಲ್ಲಿ ಬೆಂಬಲಿಗರಿಗೆ ಪಾರ್ಟಿ ಆರೆಂಜ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಅಷ್ಟರಲ್ಲಿ ದುಷ್ಕರ್ಮಿಗಳು ಬೈಕಿನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದರು. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಕಾರ್ಯಕ್ಕಾಗಿ ಸಿದ್ದಾಪುರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡ ರಚನೆ ಮಾಡಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಮುಖಂಡ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಸೋಮೇಶ್ವರ ನಗರದಲ್ಲಿ ನಡೆದಿದೆ.
ಸಿದ್ದಾಪುರ ನಿವಾಸಿ ಆಗಿರುವ ಸಯ್ಯದ್ ರಿಯಾಜ್ ಚಿಕ್ಕಪೇಟೆ ಕಾಂಗ್ರೆಸ್ ಕಮಿಟಿ ಕಾಯದರ್ಶಿಯಾಗಿದ್ದಾರೆ. ರಿಯಾಜ್ ಉಪಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಿಜ್ವಾನ್ ಪರ ಕೆಲಸ ಮಾಡಿ ಫಲಿತಾಂಶದ ಬಳಿಕ ಸಿದ್ದಾಪುರದ ಕಚೇರಿಗೆ ಬಂದಿದ್ದರು.
ರಿಜ್ವಾನ್ ಜಯದ ಸಂಭ್ರಮಾಚರಣೆ ಹುಡುಗರ ಬಳಿ ಹಂಚಿಕೊಳ್ಳಲು ರಿಯಾಜ್ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಡಿಯೋ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ರಿಯಾಜ್ ಮೇಲೆ ಮಚ್ಚು-ಲಾಂಗುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಈ ಘಟನೆಯಲ್ಲಿ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿರುವ ರಿಯಾಜ್ ಸೋಮೇಶ್ವರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಸಂಬಂಧ ಪ್ರಕರಣ ದಾಖಲಿಸಿರುವ ಸಿದ್ದಾಪುರ ಪೊಲೀಸರು ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಸಿದ್ದಾರೆ.
ದಾವಣಗೆರೆ: ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡಿದ್ದಾರಾ ಕಾಂಗ್ರೆಸ್ ಮಾಜಿ ಸಚಿವರು ಎನ್ನುವಂತಹ ಪ್ರಶ್ನೆ ಇಲ್ಲಿ ಉದ್ಭವಿಸಿದೆ. ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪ್ರಚಾರಕ್ಕೂ ಸಹ ಬರಲಿಲ್ಲ.
ಇದೇ ತಿಂಗಳ 12ರಂದು ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿದು, ಮನೆ ಮನೆ ಪ್ರಚಾರ ಮುಗಿಯುತ್ತಾ ಬಂದರು ಸಹ ಮಲ್ಲಿಕಾರ್ಜುನ್ ಮಾತ್ರ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಒಂದು ದಿನ ಕೂಡ ಪ್ರಚಾರಕ್ಕೆ ಬರಲಿಲ್ಲ. ಇದರಿಂದ ಪಾಲಿಕೆ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಸೋಲಿಗೆ ಪಾಲಿಕೆ ಸದಸ್ಯರೇ ಕಾರಣ ಎಂದು ಬಹಿರಂಗವಾಗಿ ಎಸ್‍ಎಸ್‍ಎಂ ಅಭಿಮಾನಿಗಳು ಕಿಡಿಕಾರಿದರು. ಅಲ್ಲದೆ ಸ್ವತಃ ಮಲ್ಲಿಕಾರ್ಜುನ್ ಕೂಡ ಜೊತೆಯಲ್ಲಿ ಇದ್ದ ನಮ್ಮ ಮುಖಂಡರೇ ನಮ್ಮನ್ನು ಸೋಲಿಸಿದ್ದು ಎಂದ ಹಲವು ವೇದಿಕೆ ಕಾರ್ಯಕ್ರಮಗಳಲ್ಲಿ ನೋವನ್ನು ಹೊರಹಾಕಿದ್ದರು. ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ನನ್ನ ಮುಖಂಡರೇ ನಮ್ಮನ್ನು ಸೋಲಿಸಿದರು ಎನ್ನುವ ನೋವಿನಿಂದ ಎಸ್‍ಎಸ್ ಮಲ್ಲಿಕಾರ್ಜುನ್ ಹೊರ ಬರುತ್ತಿಲ್ಲ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಮೈಸೂರು: ಬಿಜೆಪಿ ಸೇರುವ ಊಹಾಪೋಹಗಳಿಗೆ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಸಿ.ಎಚ್ ವಿಜಯಶಂಕರ್ ತೆರೆ ಎಳೆದಿದ್ದಾರೆ.
ಮೈಸೂರಿನಲ್ಲಿ ಅರ್ಜುನ ಅವಧೂತರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಮಾಜಿ ಸಂಸದರು, ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಮರಳಿ ಪಕ್ಷಕ್ಕೆ ಸೇರುತ್ತಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವೆ ಎಂದು ತಿಳಿಸಿದ್ದಾರೆ.
ಜಿಲ್ಲೆಗೆ ಹಾಗೂ ರಾಜ್ಯಕ್ಕೆ ನಿಮ್ಮಿಂದ ಅನೇಕ ಕಾರ್ಯಗಳು ಆಗಬೇಕಿದೆ. ಹೀಗಾಗಿ ನೀವು ರಾಜಕೀಯದಲ್ಲಿ ಮುಂದುವರಿಯಬೇಕು ಎಂದು ಅವಧೂತರು ಆಶೀರ್ವಾದ ಮಾಡಿದ್ದಾರೆ. ಅವರ ಸಲಹೆಯಂತೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ. ಅವರ ಹಾರೈಕೆಯಲ್ಲಿ ನಂಬಿಕೆ ಇದೆ ಎಂದ ಹೇಳಿದರು.
ಸಿಎಂ ಯಡಿಯೂರಪ್ಪ ಅವರು ಮೊನ್ನೆಯಷ್ಟೇ ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಇಬ್ಬರ ಮಧ್ಯೆ ಸುದೀರ್ಘ ಚರ್ಚೆ ನಡೆಯಿತು. ಆಗ ಸಿಎಂ, ರಾಜಕೀಯದಲ್ಲಿ ವ್ಯತ್ಯಾಸಗಳು ಆಗುವುದು ಸಹಜ. ಅದನ್ನು ಬಿಟ್ಟು ಪಕ್ಷಕ್ಕೆ ಬನ್ನಿ ಎಂದು ಸಲಹೆ ಕೊಟ್ಟಿದ್ದರು. ಅಷ್ಟೇ ಅಲ್ಲದೆ ನಳಿನ್ ಕುಮಾರ್ ಕಟೀಲ್ ಮೈಸೂರಿಗೆ ಬಂದಿದ್ದಾಗ ಪಕ್ಷಕ್ಕೆ ಬನ್ನಿ ಅಂತ ಆಹ್ವಾನ ನೀಡಿದ್ದರು. ಹೀಗಾಗಿ ಮರಳಿ ಬಿಜೆಪಿಗೆ ಸೇರಲು ಮುಂದಾಗಿದ್ದೇನೆ ಎಂದರು.
ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರು ನಿಭಾಯಿಸುತ್ತೇನೆ. ಹುಣಸೂರು ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ನನ್ನ ಗುರಿ. ಹುಣಸೂರು ಉಪ ಚುನಾವಣೆ ನನ್ನ ಪ್ರತಿಷ್ಠೆಯ ವಿಚಾರವಾಗಿದೆ. ಏಕೆಂದರೆ ಅದು ನನ್ನ ತಾಲೂಕು. ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ನಿಭಾಯಿಸಲು ನನಗೆ ಸಾಧ್ಯವಾಗಲಿಲ್ಲ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಅದೇ ಪರಿಸ್ಥಿತಿ ಇದೆ. ಆದರೆ ಅವರು ಸಮರ್ಥರಿದ್ದಾರೆ. ಅದೆಲ್ಲವನ್ನೂ ಎದುರಿಸುವ ಶಕ್ತಿ ಅವರಿಗಿದೆ. ಪಕ್ಷ ನನಗೆ ಎರಡು ವರ್ಷದಲ್ಲಿ ಯಾವುದೇ ಜವಾಬ್ದಾರಿ ನೀಡಲಿಲ್ಲ. ಚುನಾವಣೆ ಸೋತ ನಂತರ ಮಾತನಾಡಿಸಲಿಲ್ಲ. ಜನರ ಮಧ್ಯೆ ಉಳಿಯಲು ಬಿಜೆಪಿಗೆ ಸೇರುವ ನಿರ್ಧಾರ ತಗೆದುಕೊಂಡಿದ್ದೇನೆ. ಈ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ. ಆ ಕಾಲಘಟ್ಟಕ್ಕೆ ಅದು ಸರಿ ಇತ್ತು. ಈಗ ಈ ನಿರ್ಧಾರ ಸರಿ ಇದೆ ಎಂದು ಸಿ.ಎಚ್. ವಿಜಯಶಂಕರ್ ಸ್ಪಷ್ಟನೆ ನೀಡಿದರು.
ಮೈಸೂರು: ಕಳ್ಳರು ಕಾರನ್ನು ಕದಿಯುವುದನ್ನು ನೋಡಿರುತ್ತೇವೆ. ಆದರೆ ಮೈಸೂರಿನಲ್ಲಿ ಕಳ್ಳರು ಐಷಾರಾಮಿ ಕಾರುಗಳ ಲೋಗೋವನ್ನು ಕದಿಯಲು ಶುರುಮಾಡಿದ್ದಾರೆ.
ಮಾಜಿ ಸಿ.ಎಂ ಸಿದ್ದರಾಮಯ್ಯನವರ ಆಪ್ತ ಹಾಗು ಸ್ಥಳೀಯ ಕಾಂಗ್ರೆಸ್ ಮುಖಂಡ, ಸಿ.ಎನ್ ಮಂಜೇಗೌಡ ಎಂಬುವರಿಗೆ ಸೇರಿದ ಬಿ.ಎಂ.ಡಬ್ಲ್ಯು ಕಾರಿನ ಲೋಗೋ ವನ್ನು ಬೆಳಗ್ಗಿನ ಜಾವ ಬಂದ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಐಷಾರಾಮಿ ಕಾರುಗಳ ಲೋಗೋಗಳನ್ನು ಮಾತ್ರ ಕದಿಯುವ ಕಳ್ಳರು, ಇಂದು ಬೆಳಗ್ಗಿನ ಜಾವ ಮಂಜೇಗೌಡರು ತಮ್ಮ ನಿವಾಸದ ಮುಂದೆ ನಿಲ್ಲಿಸಿದ್ದ ಬಿಳಿ ಬಣ್ಣದ ಬಿ.ಎಂ.ಡಬ್ಲ್ಯು ಕಾರಿನ ಲೋಗೋವನ್ನು ಕಿತ್ತುಕೊಂಡು ಹೋಗಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಇಬ್ಬರು ಈ ಕೃತ್ಯ ಮಾಡಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುವೆಂಪುನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಳ್ಳಾರಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕರೊಬ್ಬರ ಮಗನ ಕಾರು-ಬಾರು ಬಲು ಜೋರಾಗಿದ್ದು, ನಡು ರಸ್ತೆಯಲ್ಲೇ ವ್ಹೀಲಿಂಗ್ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾನೆ.
ಸಂಡೂರು, ಹಗರಿಬೊಮ್ಮನಹಳ್ಳಿಯಲ್ಲಿ ವ್ಹೀಲಿಂಗ್ ಕ್ರೇಜ್ ಮಿತಿಮೀರಿದ್ದು, ರಾಜ್ಯದ ಹಲವೆಡೆಯೂ ಕಾರು-ಬೈಕ್ ವ್ಹೀಲಿಂಗ್ ಮಾಡುವುದನ್ನು ಕೈ ನಾಯಕನ ಮಗ ಹಫೀಜ್ ಶೇಖ್ ಹವ್ಯಾಸವಾಗಿಸಿಕೊಂಡಿದ್ದಾನೆ. ನಡು ರಸ್ತೆಯಲ್ಲಿಯೇ ಮನಬಂದಂತೆ ಗಾಡಿ ಚಲಾಯಿಸಿ, ವ್ಹೀಲಿಂಗ್ ಮಾಡಿದರೂ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ. ವ್ಹೀಲಿಂಗ್ ಮಾಡುವುದು ಕಾನೂನು ಬಾಹಿರವಾಗಿದ್ದರೂ ಈ ಕುರಿತು ಪೊಲೀಸರು ಈವರೆಗೆ ಕ್ರಮ ಕೈಗೊಂಡಿಲ್ಲ.
ಅಪಾಯವನ್ನು ಲೆಕ್ಕಿಸದೆ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ, ಈ ಬಾರಿ ವಿಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿರುವ ಸಿರಾಜ್ ಶೇಖ್ ಮಗ ಹಫೀಜ್ ಶೇಖ್, ವ್ಹೀಲಿಂಗ್ ಮಾಡಿದ್ದಾನೆ. ಹಫೀಜ್ ಶೇಖ್ ಸಹ ಸಂಡೂರು ಪುರಸಭೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದನು. ಆದರೆ ಇದೀಗ ಸಾರ್ವಜನಿಕ ಸ್ಥಳದಲ್ಲಿಯೇ ಅಪಾಯಕಾರಿಯಾಗಿ ಬೈಕ್-ಕಾರ್ ವ್ಹೀಲಿಂಗ್ ಮಾಡುತ್ತಿದ್ದು, ಇವರು ರೋಡಿಗಿಳಿದಾಗ ವಾಹನ ಸವಾರರು ಭಯದಿಂದಲೇ ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ.
ಹಫೀಜ್ ಶೇಖ್ ಮಿತಿ ಮೀರಿದ ವೇಗದಲ್ಲಿ ಬೈಕ್, ಕಾರು ಚಲಾಯಿಸುತ್ತಾನೆ. ಅಲ್ಲದೆ ರಾತ್ರಿ ವೇಳೆ ಡಿವೈಡರ್ ಮೇಲೆ ಕಾರು ಹತ್ತಿಸಿ, ಒನ್ ಸೈಡ್ ಕಾರ್ ವ್ಹೀಲಿಂಗ್ ಮಾಡುತ್ತಾನೆ. ಯಾವ ಕಾಂಪಿಟೇಷನ್‍ಗೂ ಕಮ್ಮಿಯಿಲ್ಲದಂತೆ ಕಾರನ್ನು ಹಾರಿಸುತ್ತಾನೆ. ವ್ಹೀಲಿಂಗ್ ಮಾಡಿದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೆ. ಇದನ್ನು ಕಂಡ ಇತರೆ ಯುವಕರು ಕೂಡ ವ್ಹೀಲಿಂಗ್ ಚಟಕ್ಕೆ ಮುಂದಾಗುತ್ತಿದ್ದಾರೆ.
ವ್ಹೀಲಿಂಗ್ ಮಾತ್ರವಲ್ಲದೆ ಗನ್ ಪ್ರದರ್ಶನ ಮಾಡಿ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇಷ್ಟೆಲ್ಲ ನಡೆದಿದ್ದರು ಸಹ ಬಳ್ಳಾರಿ ಪೊಲೀಸರು ಎಚ್ಚೆತ್ತುಕೊಳ್ಳದಿರುವುದು ಸರ್ವಾಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ನಿವಾಸದಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.
ಪರಮೇಶ್ವರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸ, ಕಚೇರಿ, ಆಪ್ತರ ಮನೆ, ತುಮಕೂರು ನಗರದಲ್ಲಿ ಐಟಿ ಅಧಿಕಾರಿಗಳ ತಂಡ ಗುರುವಾರ ದಾಳಿ ಮಾಡಿತ್ತು. ಈ ಮೂಲಕ ಪರಮೇಶ್ವರ್ ಅವರಿಗೆ ಸಂಬಂಧಿಸಿದ್ದ ಒಟ್ಟು 4.5 ಕೋಟಿ ರೂ. ನಗದು ಅಧಿಕಾರಿಗಳ ಕೈಗೆ ಸಿಕ್ಕಿದೆ. ಪರಮೇಶ್ವರ್ ಅವರ ನಿವಾಸದಲ್ಲಿ ಶೋಧ ನಡೆಸಿದ 15 ಜನ ಅಧಿಕಾರಿಗಳು ಹಣ ಹಾಗೂ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಮನೆಯಿಂದ ತೆರಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಮುಖಂಡ ಪರಮೇಶ್ವರ್ ಅವರ ಸದಾಶಿವನಗರ ನಿವಾಸದಲ್ಲಿಯೇ 70 ಲಕ್ಷ ರೂ. ನಗದು ಪತ್ತೆಯಾಗಿದೆ. ಜೊತೆಗೆ ಆಪ್ತ, ನೆಲಮಂಗಲ ಪುರಸಭೆ ಸದಸ್ಯ ಶಿವಕುಮಾರ್ ನಿವಾಸದಲ್ಲಿ 1.8 ಕೋಟಿ ರೂ. ನಗದು ಐಟಿ ಅಧಿಕಾರಿಗಳಿ ಸಿಕ್ಕಿದೆ. ಐಟಿ ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು, ಇನ್ನೂ ಎರಡು ದಿನ ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಮಾಹಿತಿ ಲಭಿಸಿದೆ.
ಮಾಜಿ ಡಿಸಿಎಂ ಪರಮೇಶ್ವರ್ ಮಾತ್ರವಲ್ಲದೆ, ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ ಆರ್.ಎಲ್. ಜಾಲಪ್ಪ ಅವರಿಗೂ ಐಟಿ ಬಿಸಿ ತಟ್ಟಿದೆ. ಕೋಲಾರ ಹೊರವಲಯದ ಟಮಕ ಬಳಿ ಇರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಕಚೇರಿ, ಗೆಸ್ಟ್ ಹೌಸ್ ಹಾಗೂ ದೇವರಾಜ್ ಅರಸು ವೈದ್ಯಕೀಯ ಸಂಶೋಧನಾ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿದೆ.
ಜಾಲಪ್ಪ ಅವರ ಮಗ ರಾಜೇಂದ್ರ, ಅಳಿಯ ನಾಗರಾಜ್ ಒಡೆತನದ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸೇರಿದಂತೆ 16 ಕಡೆ ರೇಡ್ ಮಾಡಿದೆ. ಬೆಳಗ್ಗೆ 5 ಗಂಟೆಗೇ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿ, ಪ್ರಮುಖ ಕಡತಗಳನ್ನು ಪರಿಶೀಲಿಸಿದ್ದಾರೆ. ಆದರೆ ಉಪ ಚುನಾವಣೆ ಎದುರಾಗುತ್ತಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಜಾಲಪ್ಪ ಅಳಿಯ ನಾಗರಾಜ್ ಪ್ರಬಲ ಆಕಾಂಕ್ಷಿಯಾಗಿದ್ದರು. ಈ ಐಟಿ ರೇಡ್ ಹಿಂದೆ ಅನರ್ಹ ಶಾಸಕ ಸುಧಾಕರ್ ಷಡ್ಯಂತ್ರ ಇದೆ ಅಂತ ನಾಗರಾಜ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ನವದೆಹಲಿ: ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಮುಖಂಡ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬ್ಯಾಂಕಾಕ್ ಪ್ರವಾಸ ಕೈಗೊಂಡು ಅಚ್ಚರಿಸಿ ಮೂಡಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ಕೆಲ ದಿನಗಳ ಹಿಂದಷ್ಟೇ ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆ ಮಾಡಿದೆ. ಈಗಾಗಲೇ ಎಲ್ಲಾ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಎದುರಿಸಲು ಭರ್ಜರಿ ಸಿದ್ಧತೆ ನಡೆದಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ರಾಹುಲ್ ಗಾಂಧಿ ಬ್ಯಾಂಕಾಕ್‍ಗೆ ತೆರಳಿದ್ದಾರೆ.
ಹರ್ಯಾಣ ಕಾಂಗ್ರೆಸ್‍ನ ಮಾಜಿ ರಾಜ್ಯಾಧ್ಯಕ್ಷ ಅಶೋಕ್ ತನ್ವಾರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ನಾನು ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ನನ್ನ ಹೋರಾಟ ವೈಯಕ್ತಿಕವಲ್ಲ, ಬಲದಲಿಗೆ ಈಗಿನ ಪಕ್ಷದ ವ್ಯವಸ್ಥೆ ವಿರುದ್ಧ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಬುಧವಾರ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು.
ಇತ್ತ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಸಹ ಚುನಾವಣಾ ಪ್ರಚಾರದಿಂದ ದೂರ ಉಳಿಯುತ್ತೇನೆ ಎಂದು ಘೋಷಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಅಲ್ಲಿನ ನಾಯಕರ ನಡುವೆ ಭಿನ್ನಮತ ಹೆಚ್ಚಾಗುತ್ತಿರುವಗಲೇ ರಾಹುಲ್ ಗಾಂಧಿ ವಿದೇಶಕ್ಕೆ ಹಾರಿದ್ದಾರೆ.
After long deliberations with party workers and for reasons well known to all Congressman and public, I hereby resign from the primary membership of the @INCIndiapic.twitter.com/qG9dYcV6u2
ಎರಡೂ ರಾಜ್ಯಗಳಲ್ಲಿ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. ಚುನಾವಣಾ ಪ್ರಚಾರಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿರುವಾಗ ವಿದೇಶಕ್ಕೆ ಹೋಗಿದ್ದು ಎಷ್ಟು ಸರಿ? ಈ ರಾಜ್ಯಗಳ ಮುಖಂಡರ ನಡುವೆ ಭಿನ್ನಾಭಿಪ್ರಾಯಗಳು, ಅಸಮಾಧಾನಗಳನ್ನು ಬಗೆಹರಿಸದೇ ದೂರ ಉಳಿದಿದ್ದು ಯಾಕೆ ಎಂಬ ಪ್ರಶ್ನೆಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ ಎನ್ನಲಾಗುತ್ತಿದೆ. ಆದರೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಲು ಸಾಧ್ಯವಾಗದೆ ಪಕ್ಷದ ಮುಖಂಡರು ಮೌನವಾಗಿ ಉಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
– ರೇಣುಕಾಚಾರ್ಯ ನೆಲದ ಮೇಲೆ ಬೋಟ್ ಓಡಿಸ್ತಾರೆ
– ಅನರ್ಹ ಶಾಸಕರ ಬಗ್ಗೆಯೂ ‘ಕೈ’ ಮುಖಂಡ ವ್ಯಂಗ್ಯ
ಬೆಂಗಳೂರು: ಎತ್ತು ಏರಿಗೆ ಇಳಿದರೆ ಕೋಣ ನೀರಿಗೆ ಇಳಿಯಿತಂತೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಾ ಹೋದರೆ ರಾಜ್ಯದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪರಿಹಾರ ಲೆಕ್ಕಾಚಾರ ಸರಿಯಾಗಿ ಕೊಟ್ಟಿಲ್ಲ. ಅದಕ್ಕೆ ಪುನಃ ಸಮೀಕ್ಷೆ ಮಾಡಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ದಯವಿಟ್ಟು ಆ ಭಾಗದ ಜನರ ಕೂಗನ್ನು ಆಲಿಸಿ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರದ ನಡುವೆ ಸಮನ್ವಯತೆ ಭಾರೀ ಚೆನ್ನಾಗಿದೆ. ಸತ್ತರೂ ಮಾತಾಡಬೇಡ ಎಂದು ಹೇಳುತ್ತಾರೆ. ಇದು ಖಾಮೋಷ್.. ಖಾಮೋಷ್ ಸರ್ಕಾರ, ಬೈಠಕ್ ಸರ್ಕಾರ. ಬಿಎಸ್ ಯಡಿಯೂರಪ್ಪ ಸರ್ಕಾರ ಎದ್ದೇಳಲೇ ಇಲ್ಲ ಎಂದು ವ್ಯಂಗ್ಯವಾಡಿದರು.
ಅನರ್ಹ ಶಾಸಕರ ಬಗ್ಗೆ ವ್ಯಂಗ್ಯವಾಡಿದ ಸಿಎಂ ಇಬ್ರಾಹಿಂ, 17 ಜನ ಪತಿವ್ರತರು ಹೋಗಿಬಿಟ್ಟಿದ್ದಾರೆ. ಅವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಹೀಗಾಗಿ ಎಲ್ಲರೂ ಚುನಾವಣೆ ಕಡೆಗೆ ಗಮನ ಹರಿಸುತ್ತಾರೆ. ಇದರಿಂದಾಗಿ ಪ್ರವಾಹ ಸಂತ್ರಸ್ತರ ಕಥೆ ಅಷ್ಟೇ. ಪರಿಹಾರ ವಿತರಣೆ ಆಗುವವರೆಗೆ ಉಪ ಚುನಾವಣೆ ಮುಂದೂಡಬೇಕು. ಇದರಿಂದ ಯಾವುದೇ ತೊಂದರೆ ಆಗಲ್ಲ. ಒಂದು ವೇಳೆ ಉಪ ಚುನಾವಣೆ ನಡೆದು, ಅನರ್ಹರು ಗೆದ್ದು ಬಂದರೆ ಸಚಿವ ಸ್ಥಾನಕ್ಕೆ ಕಿತ್ತಾಡುತ್ತಾರೆ ಎಂದು ಹೇಳಿದರು.
ರಾಜ್ಯದ ನೆರೆ ಪರಿಹಾರದ ಬಗ್ಗೆ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ್ಯ ತೋರಿವೆ.
ಪ್ರವಾಹ ಪರಿಸ್ಥಿತಿಯ ಪರಿಣಾಮಕಾರಿ ವರದಿ ಮಾಡಿದ ಮಾಧ್ಯಮಗಳ ಸಮಿತಿ,
ವಿರೋಧ ಪಕ್ಷದ ನಾಯಕನ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗ ನಾಯಕರಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆದಿದ್ದು, ಅಕ್ಟೋಬರ್ 10 ರೊಳಗೆ ಆಯ್ಕೆ ಪ್ರಕಟಿಸಲಾಗುತ್ತದೆ ಎಂದರು.
ವಿರೋಧ ಪಕ್ಷದ ನಾಯಕನ ಯಾರಾಗಬೇಕು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರದ ಹೆಣ ಹೊರುವುದಕ್ಕೆ ಯಾರಾದರೇನು? ಹೆಣ ಹೊರುವುದಕ್ಕೆ ನಾಲ್ಕು ಜನ ಬೇಕು. ದೆಹಲಿಗೆ ಹೋಗುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ವೀಸಾ ಪಡೆಯಬೇಕು. ಸಿದ್ದರಾಮಯ್ಯ ಅವರು ಅಂತಹ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮುಂದೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತನಾಡುವುದಕ್ಕೆ ಆಗುವುದಿಲ್ಲ. ಕನಿಷ್ಠ ರಾಜ್ಯಪಾಲರ ಮುಂದೆ ಸಮಸ್ಯೆ ಹೇಳಿಕೊಳ್ಳಬಹುದಿತ್ತು. ಇಲ್ಲವೇ ಕೈಸೇ ಹೇ… ಮನ್ ಕಿ ಬಾತ್… ಮಾಡಬಹುದಿತ್ತು ಎಂದು ಲೇವಡಿ ಮಾಡಿದರು.
ನೀರಿನಲ್ಲಿ ಬೋಟ್ ಓಡಿಸುವವರನ್ನ ನೋಡಿದ್ದೇನೆ. ಆದರೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ನೆಲದ ಮೇಲೆ ಬೋಟ್ ಓಡಿಸುತ್ತಾರೆ ಎಂದು ಕಿಚಾಯಿಸಿದರು.
ಬಾಯಿ ಬಿಗಿ ಹಿಡಿದು ಮಾತನಾಡಿ ಅಂತ ರೇಣುಕಾಚಾರ್ಯ ಹೇಳುತ್ತಾರೆ. ಬಾಯಿ ಹಿಡಿಬೇಕೋ, ಸೊಂಡಿಲು ಹಿಡಿಬೇಕೋ ಗೊತ್ತಿಲ್ಲ. ಅವರ ಹೆಸರೇ ರೇಣುಕಾಚಾರ್ಯ. ರೇಣುಕಾ ಪ್ರಸಾದದಿಂದ ಹುಟ್ಟಿದವರು. ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಮುಂದೆ ಕರೆದುಕೊಂಡು ಹೋಗುವ ಸಾಹಸ ಮಾಡಲಿ ಎಂದು ಹೇಳಿದರು.