ಬೆಂಗಳೂರು: ಗ್ಯಾರಂಟಿ ಯೋಜನೆ (Guranatee Scheme) ಮಾದರಿಯಲ್ಲಿ ಹೊಸ ಯೋಜನೆ ಜಾರಿಗೆ ಆರೋಗ್ಯ ಇಲಾಖೆ ಪ್ಲ್ಯಾನ್ ಮಾಡ್ತಿದೆ. ಗೃಹ ಆರೋಗ್ಯ ಯೋಜನೆ ಜಾರಿಗೆ ಚಿಂತನೆ ನಡೆದಿದ್ದು, ಮನೆ ಬಾಗಿಲಿಗೆ ವೈದ್ಯರನ್ನ ಕಳುಹಿಸಿ ತಪಾಸಣೆ ಮಾಡಿಸಲು ಚರ್ಚೆ ನಡೆಸಲಾಗುತ್ತಿದೆ. ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿ ಸಾಧಕ-ಬಾಧಕಗಳನ್ನ ಪರಿಶೀಲನೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಕಾಂಗ್ರೆಸ್ ಸರ್ಕಾರ (Congress Government) ರಚನೆ ಆದ ಮೇಲೆ ಭರವಸೆ ನೀಡಿದ್ದ ಐದರಲ್ಲಿ ನಾಲ್ಕು ಗ್ಯಾರಂಟಿಗಳನ್ನ ಜಾರಿ ಮಾಡಿದೆ. ಯುವ ನಿಧಿ ಯೋಜನೆ ಜಾರಿ ಮಾಡಬೇಕಿದೆ. ಈ ಮಧ್ಯೆ ಆರೋಗ್ಯ ಇಲಾಖೆ ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೆ ಹೊಸ ಯೋಜನೆ ಜಾರಿಗೆ ಚಿಂತನೆ ಮಾಡ್ತಿದೆ. ಗೃಹ ಆರೋಗ್ಯ ಯೋಜನೆ ಜಾರಿಗೆ ಪ್ಲ್ಯಾನ್ ಮಾಡ್ತಿದೆ. ಮನೆ ಮನೆಗೆ ವೈದ್ಯರನ್ನ ಕಳುಹಿಸಿ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿದೆ. ಮನೆ ಮನೆಗೆ ತೆರಳಿ ಬಿಪಿ, ಶುಗರ್, ಜ್ವರ, ಸಣ್ಣ ಪುಟ್ಟ ಖಾಯಿಲೆಗಳಿಗೆ ಟ್ರೀಟ್ ಮೆಂಟ್ ನೀಡಿಸಲು ಮುಂದಾಗಿದೆ.
ಈ ಯೋಜನೆ ಜಾರಿ ಮಾಡಲು ಪೂರ್ವ ತಯಾರಿ ನಡೆಯುತ್ತಾ ಇದ್ದು, ಕ್ಯಾಬಿನೆಟ್ ಮುಂದೆ ಪ್ರಸ್ತಾಪ ಆಗಲಿದೆಯಂತೆ. ಕ್ಯಾಬಿನೆಟ್ ನಲ್ಲಿ ಅಪ್ರೂವ್ ಆದ ಬಳಿಕ ಪ್ರಾಯೋಗಿಕವಾಗಿ ಎಂಟು ಜಿಲ್ಲೆಗಳಲ್ಲಿ ಜಾರಿ ಮಾಡಲು ಮುಂದಾಗಿದೆ. ಬೇಕಾಗುವ ಸಿಬ್ಬಂದಿಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ವೈದ್ಯರನ್ನೇ ಬಳಸಿಕೊಳ್ಳಲಿದ್ದಾರಂತೆ. ಬೇಕಾಗುವ ಖರ್ಚು ಮತ್ತು ವೆಚ್ಚಗಳ ಬಗ್ಗೆ ಪರಿಶೀಲನೆ ನಡೆಯುತ್ತಾ ಇದೆ.
ಒಟ್ಟಾರೆ ಗ್ಯಾರಂಟಿ ಯೋಜನೆಗಳ ಮಾದರಿಯಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೆ ಚಿಂತನೆ ನಡೆದಿರೋದು ಒಳ್ಳೆ ವಿಚಾರ. ಆರೋಗ್ಯ ಇಲಾಖೆ ಇದನ್ನ ಜಾರಿ ಮಾಡುತ್ತಾ ಕಾದು ನೋಡಬೇಕಿದೆ.
ಬೆಂಗಳೂರು: ಶಕ್ತಿ ಯೋಜನೆ (Shakti Scheme) ಪ್ರಶ್ನಿಸಿ ಅರ್ಜಿ ಸಲ್ಲಿಸಿದವರಿಗೆ ಹೈಕೋರ್ಟ್ (HighCourt) ತರಾಟೆಗೆ ತೆಗೆದುಕೊಂಡಿದೆ.
ಶಕ್ತಿಯೋಜನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅಲ್ಲದೇ ಆರ್ಥಿಕ ಹೊರೆಯಿಂದ ಇತರರಿಗೆ ತೊಂದರೆ ಆಗುತ್ತೆ ಎಂದು ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ರು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಪೀಠ ಅರ್ಜಿದಾರರಿಗೆ ಬುದ್ಧಿವಾದ ಹೇಳಿದೆ.
ಅರ್ಜಿ ವಿಚಾರಣೆ ವೇಳೆ ಸಾಕಷ್ಟು ಪ್ರಶ್ನೆಗಳನ್ನು ಅರ್ಜಿದಾರರಿಗೆ ಕೇಳಿದೆ. ಶಕ್ತಿ ಯೋಜನೆಯ ಬಗ್ಗೆ ಅಧ್ಯಯನ ಮಾಡಿ ಅರ್ಜಿ ಸಲ್ಲಿಸಿದ್ದೀರಾ…? ಯೋಜನೆ ಆರ್ಥಿಕ ದರ್ಬಲ ವರ್ಗಕ್ಕೆ ಸೌಲಭ್ಯ ನೀಡಿದೆ ಅಲ್ವಾ…? ಶಕ್ತಿ ಯೋಜನೆ ಜಾರಿಗೆ ಮುನ್ನ ಸಂಚಾರ ಸುಗಮವಾಗಿತ್ತಾ? ಈ ಯೋಜನೆ ಬಸ್ ನಲ್ಲಿ ದಟ್ಟಣೆ ಉಂಟಾಗಿದೆಯೇ? ಎಲ್ಲೆಲ್ಲಿ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಭಾರೀ ಮಳೆ; ಧರೆಗುರುಳಿದ ಮರ
ಯಾವ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಇದೆ? ಸಾರ್ವಜನಿಕ ಸಾರಿಗೆಯಲ್ಲಿ ಇಷ್ಟೇ ಜನ ಪ್ರಯಾಣಿಸಬೇಕು ಎಂದು ರೂಲ್ಸ್ ಇದ್ಯಾ? ಮುಂಬೈ ಲೋಕಲ್ ರೈಲುಗಳ ದಟ್ಟಣೆಯ ಬಗ್ಗೆ ನಿಮಗೆ ಅರಿವಿದಿದ್ದಿದ್ರೆ ಅರ್ಜಿ ಸಲ್ಲಿಕೆ ಮಾಡುತ್ತಿರಲಿಲ್ಲ. ಅಧ್ಯಯನ ಮಾಡದೇ ಅರ್ಜಿ ಸಲ್ಲಿಸಿದ್ದೀರಿ ಹೀಗೆ ಹಲವು ಪ್ರಶ್ನೆಗಳನ್ನು ಮಾಡಿ ಅರ್ಜಿಯನ್ನು ಹಿಂಪಡೆಯಲು ನಿಮಗೆ ಅನುಮತಿ ನೀಡ್ತೀನಿ ಅಂತ ಹೈಕೋರ್ಟ್ ಅವಕಾಶವನ್ನು ನೀಡಿದೆ.
ನವದೆಹಲಿ: ಕಾಂಗ್ರೆಸ್ ಸರ್ಕಾರ (Congress Govt) ಉಗ್ರರರನ್ನು ರಕ್ಷಣೆ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮತ್ತೊಂದು ಉಗ್ರಗಾಮಿ ಚಟುವಟಿಕೆ ಬಯಲಾಗಿದೆ. 2008ರ ಸರಣಿ ಸ್ಫೋಟ ನಡೆದಿತ್ತು, ಆರೋಪಿ ಜೈಲಿನಲ್ಲಿದ್ದಾನೆ. ಜಾಹಿದ್ ತರ್ಬೇಜ್ ಮನೆಯಲ್ಲಿ ನಾಲ್ಕು ಜೀವಂತ ಗ್ರಾನೈಡ್ ಸಿಕ್ಕಿವೆ. ಬಂಧಿಸಿದವರ ಬಳಿ ಏಳು ಕಂಟ್ರಿಮೇಡ್ ಬುಲೆಟ್, ಸ್ಯಾಟಲೈಟ್ ಫೋನ್ ಸೆಟ್ ಸಿಕ್ಕಿವೆ ಎಂದರು.
ಬಾಂಬ್ ಸ್ಫೋಟಕ್ಕೆ ಬೇಕಾದ ಸಾಮಗ್ರಿ ಸಿಕ್ಕಿವೆ. ಮೊಹಮ್ಮದ್ ಜುನೈದ್ ಸಾಮಗ್ರಿ ಸರಬರಾಜು ಮಾಡಿದ್ದಾನೆ. ಜುನೈದ್ ಪಾರ್ಸೆಲ್ ಮೂಲಕ ಸಾಮಗ್ರಿ ಕಳುಹಿಸಿದ್ದಾನೆ. ಕರ್ನಾಟಕ ಗೃಹ ಸಚಿವರು ಇವರು ಅಪರಾಧಿಗಳಲ್ಲ ಎಂದಿದ್ದಾರೆ. ತನಿಖೆಯನ್ನು ದಾರಿ ತಪ್ಪಿಸುವ ವರ್ತನೆ ಇದು. ಭಯೋತ್ಪಾದಕರ ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಾನಹಾನಿ ಕೇಸ್‌ನಲ್ಲಿ ಜೈಲು ಶಿಕ್ಷೆ – ಸುಪ್ರೀಂ ಕೋರ್ಟ್‌ನಲ್ಲೂ ರಾಹುಲ್ ಗಾಂಧಿಗೆ ಹಿನ್ನಡೆ
ಲಷ್ಕರ್ ಇ ತೋಯ್ಬಾ ಸಂಘಟನೆ ಲಿಂಕ್ ಇದೆ. ವಿದೇಶಿ ಸಂಘಟನೆಗಳ ಕೈವಾಡ ಇದೆ. ಈ ಕೇಸ್ ಅನ್ನು ಎನ್ ಐಎ ಗೆ ವಹಿಸಬೇಕು. ಎನ್ ಐಎ (NIA) ಇಂದ ಮಾತ್ರ ತನಿಖೆ ಸಾಧ್ಯ. ಸರ್ಕಾರ ಕೇಸ್ ಅನ್ನು ಹಗುರವಾಗಿ ತೆಗೆದುಕೊಳ್ಳಬಾರದು. ದಕ್ಷಿಣ ಭಾರತದ ರಕ್ಷಣೆಯ ದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಬೇಕು. ನಮ್ಮ ಜನರನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಭಜರಂಗದಳದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ. ಕಾರ್ಯಕರ್ತರನ್ನು ಹೆದರಿಸುವಂತ ಕೆಲಸ ಮಾಡುತ್ತಿದೆ. ಆರ್ ಎಸ್ ಎಸ್ ಜಮೀನು ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಎಷ್ಟು ಜನರನ್ನು ಗಡಿ ಪಾಡು ಮಾಡುತ್ತೀರಿ. ನಾನು ಭಗರಂಗದಳ ಕಾರ್ಯಕರ್ತೆ, ಆರ್ ಎಸ್ ಎಸ್ ಕಾರ್ಯಕರ್ತೆ. ನನ್ನನ್ನು ಎಲ್ಲಿಗೆ ಗಡಿಪಾರು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ. ಭಯೋತ್ಪಾದಕರನ್ನು ರಕ್ಷಣೆ ಮಾಡುತ್ತೀರಿ. ಇನ್ನೊಂದು ಕಡೆ ಸಂಘಪರಿವಾರದವರನ್ನು ಟಾರ್ಗೆಟ್ ಮಾಡುತ್ತೀರಿ. 135 ಸೀಟು ಬಂದಿದೆ ಎಂಬ ಅಹಂಕಾರದಿಂದ ಮುಂದುವರಿದರೆ ಜನರು ಪಾಠ ಕಲಿಸುತ್ತಾರೆ ಎಂದು ಶೋಭಾ ಕರಂದ್ಲಾಜೆ ಗರಂ ಆಗಿದ್ದಾರೆ.
ಬೆಳಗಾವಿ: ರಾಜ್ಯದಲ್ಲಿ ಡಿಸಿ, ಸಿಇಓ ಹಾಗೂ ಕಮಿಷನರ್‍ಗಳಿಗೆ ರೇಟ್ ಫಿಕ್ಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ ಪೊಲೀಸ್ ಕಮಿಷನರ್ (Belagavi Police Commissioner) ನೇಮಕವಾಗದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಗಳಿಗೆ, ಸಿಇಓಗಳಿಗೆ, ಕಮಿಷನರ್ ಗಳಿಗೆ ರೇಟ್ ಫಿಕ್ಸ್ ಆಗಿದೆ. ರೇಟ್ ಕುದುರುವವರೆಗೂ ಯಾರು ನೇಮಕ ಆಗಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಸರ್ಕಾರಕ್ಕೆ ನಾಚಿಕೆ ಆಗಬೇಕು. ಇಂತಹ ಪ್ರದೇಶದಲ್ಲಿ ಕಮಿಷನರ್ ನೇಮಕ ಆಗದೇ ಇರೋದು ನಾಚಿಕ ವಿಷಯವಾಗಿದೆ. ಹೀಗಾದ್ರೆ ಕಾನೂನು ಸುವ್ಯವಸ್ಥೆ ಏನಾಗಬಹುದು. ಕಾನೂನು ಸುವ್ಯವಸ್ಥೆ ಕಾಪಾಡೊದು ಹೇಗೆ?. ರಾಜ್ಯದ ಅಭಿವೃದ್ಧಿ, ಶಾಂತಿ ಚಿಂತನೆ ಮಾಡುವುದುದು ಬಿಟ್ಟು ಇಂತಹ ವ್ಯವಹಾರದಲ್ಲಿ ಕುಳಿತಿದೆ. ಜನರ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ, ಲೋಕಸಭೆ ಚುನಾವಣೆ ಈ ರೀತಿ ಮಾಡ್ತಿದ್ದಾರೆ. 5 ವರ್ಷ ಸರ್ಕಾರ ನಡೆಸುತ್ತೇವೆ ಅಂತಾ ವಿಶ್ವಾಸವಿಲ್ಲ, ಈಗಲೇ ತುಂಬಿಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಇಲಾಖೆಗಳಲ್ಲಿನ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಮಗೆ 40% ಸರ್ಕಾರ ಅಂತಾ ಹೇಳಿದರು. ಆದರೆ ಯಾವುದೇ ಪುರಾವೆ ಕೊಡಲಿಲ್ಲ. ಈಗ ಕಾಂಗ್ರೆಸ್ ನದ್ದು 80% ಸರ್ಕಾರವಾಗಿದೆ. ಎಲ್ಲ ಇಲಾಖೆಗಳ ವರ್ಗಾವಣೆ ದಂಧೆ ಅಂಗಡಿಗಳಲ್ಲಿ ಇಟ್ಟುಕೊಂಡಿದ್ದಾರೆ. ಇಂದು ಅಂಗಡಿಗಳ ವ್ಯಾಪಾರವಾಗಿದೆ, ಬಾಗಿಲು ತೆರೆದು ಕುಳಿತಿದ್ದಾರೆ. ಅಂಗಡಿಗಳಲ್ಲಿ ಫಿಕ್ಸ್ ಮಾಡಿದ್ದಾರೆ. ಒಂದೊಂದು ಇಲಾಖೆಗಳಲ್ಲಿ ರೇಟ್ ಫಿಕ್ಸ್ ಮಾಡಿದ್ದಾರೆ. ಇದು ವ್ಯಾಪಾರೀಕರಣ ಆಗುತ್ತಿದೆ ಎಂದರು.
ಸರ್ಕಾರ ರಚನೆ ಆಗಿ ಕೆಲವೇ ದಿನಗಳಲ್ಲಿ ಹತ್ಯೆ ಆಗುತ್ತಿರುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಿರಂತರ ಹತ್ಯೆಗಳು, ಗೋಂಡಾಗಿರಿ ರಾಜಕಾರಣ ದರೋಡೆ ಇವೆಲ್ಲವೂ ನಡೆಯುತ್ತವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಯಾವಾಗ ಕಾಂಗ್ರೆಸ್ ಸರ್ಕಾರ ಬರುತ್ತೊ ಆಗಾಗ್ಗೆ ಇಂತಹ ಪ್ರಕರಣ ವೈಭವಿಕರೀಸುತ್ತೆ, ರಾರಾಜಿಸುತ್ತವೆ. ಇಂತಹ ಕೊಲೆಗಡುಕರು ದಂಗೆಕೋರರು ಕಾಂಗ್ರೆಸ್ ಬೆಂಬಲಿಸ್ತಾರೆ ಎಂದು ಹೇಳಿದರು.
ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ವಿಚಾರಕ್ಕೆ ಸಂಭ್ರಮಾಚರಣೆಯಲ್ಲಿ ಶಾಸಕರು ಗೆದ್ದಾಗ, ಪಕ್ಷದ ರ್ಯಾಲಿಗಳಲ್ಲಿ ಕೂಗಿದ್ರು ಸುಮ್ಮನೆ ಇರುತ್ತಾರೆ. ಅವರ ವಿರುದ್ಧ ದೇಶದ್ರೋಹ ಕೇಸ್ ಹಾಕ್ತಿಲ್ಲ. ನಾವು ಇದನ್ನ ಪ್ರಶ್ನೆ ಮಾಡುತ್ತಿದ್ದೇವೆ. ಕಾಂಗ್ರೆಸ್ ದೇಶವಿರೋಧಿ ಚಟುವಟಿಕೆ ನಡೆಸುವವರ ಪರವಾಗಿ ಇದೆ. ದೇಶಭಕ್ತರ ವಿರುದ್ಧ ಕೇಸ್ ಹಾಕುತ್ತಿದ್ದಾರೆ. ಎಲ್ಲ ವಿಷಯದಲ್ಲೂ ದ್ವೇಷದ ರಾಜಕಾರಣ ನಡೆಯುತ್ತಿದೆ. ಸಿದ್ರಾಮಣ್ಣ ಯಾವಾಗ ಯಾವಾಗ ಮುಖ್ಯಮಂತ್ರಿ ಆಗ್ತಾರೆ. ದ್ವೇಷದ ರಾಜಕಾರಣ ಜಾಸ್ತಿ ಆಗ್ತಿದೆ. ಪೊಲೀಸ್ ಇಲಾಖೆ ಅವರ ಕೈಯಲ್ಲಿ ಇರುವಾಗ ಪೊಲೀಸರಿಗೆ ಹೆಚ್ಚಿನ ಒತ್ತಡ ಇರುತ್ತದೆ. ಹಾಗಾಗಿ ಪಾರದರ್ಶಕವಾಗಿ ತನಿಖೆ ನಡೆಸಲು ಆಗೋದಿಲ್ಲ ಎಂದು ಕಟೀಲ್ ಹೇಳಿದರು.
ವಿರೋಧ ಪಕ್ಷದ ನಾಯಕರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮಲ್ಲಿ ಒಂದು ವ್ಯವಸ್ಥೆ ಇದೆ. ಈಗಾಗಲೇ ವಿಧಾನಸಭೆಯಲ್ಲಿ ಹೋರಾಟ ಮಾಡ್ತಿದ್ದಾರೆ. ನಮ್ಮಲ್ಲಿ ಪದ್ಧತಿಗಳಿವೆ ಅದರ ಆಧಾರದ ಮೇಲೆ ಆಯ್ಕೆ ಆಗುತ್ತದೆ. ಕಾಂಗ್ರೆಸ್ ಗೆ ರಾಷ್ಟ್ರೀಯ ಅಧ್ಯಕ್ಷರನ್ನ ಮಾಡಿರಲಿಲ್ಲ ಕೇವಲ ಟೀಕೆ ಮಾಡ್ತಾರೆ. ರಾಜ್ಯದಲ್ಲೂ 6 ತಿಂಗಳ ನಂತರ ಅಧ್ಯಕ್ಷರಾಗಿ ಡಿಕೆಶಿ ಆಗಿದ್ದಾರೆ. ಅವರ ಪರಿಸ್ಥಿತಿ ಏನಿತ್ತು ಅವಾಗ ಎಂದು ಪ್ರಶ್ನಿಸಿದರು.
ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Govt) ತಾನು ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದು ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರೆಂಟಿಗಳು. ಈಗ ಅದನ್ನ ಜಾರಿಗೆ ತರಲು ಸರ್ಕಾರ ಶತಾಯಗತಾಯ ಪ್ರಯತ್ನ ಪಡುತ್ತಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯನವರ (Siddaramaiah) ಬಹಳ ಮಹತ್ವದ ಘೋಷಣೆಯಾಗಿದ್ದು ಅನ್ನಭಾಗ್ಯ ಯೋಜನೆ (Annabhagya Scheme). ಕಾರ್ಡ್ ಹೊಂದಿದ ಕುಟುಂಬಕ್ಕೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ಜುಲೈನಿಂದ ನೀಡುವುದಾಗಿ ಹೇಳಿದ್ರು.
ರಾಜ್ಯ ಸರ್ಕಾರ ಅಕ್ಕಿ (Rice) ನೀಡಲು ನಾನಾ ಸರ್ಕಸ್ ಮಾಡಿದ್ರು 10 ಕೆ.ಜಿ ಅಕ್ಕಿ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಗೆ ಹಣವನ್ನ ಖಾತೆಗೆ ಹಾಕಲು ಸರ್ಕಾರ ನಿರ್ಧರಿಸಿದ್ದೆ ತಡ ನ್ಯಾಯಬೆಲೆ ವರ್ತಕರು (Fair Price Shop) ನಮಗೆ ಇದರಿಂದ ನಷ್ಟ ಆಗೋದು ಪಕ್ಕ, ನಾವೂ 10 ಕೆಜಿ ಅಕ್ಕಿ ನೀಡಿದ್ರೇ ನಮಗೆ ಕಮಿಷನ್ ಹೆಚ್ಚಾಗಿ ಸಿಗುತ್ತೆ ಅಂತಾ ವೋಟ್ ಹಾಕಿದ್ವಿ. ಈಗ 5 ಕೆಜಿ ಅಕ್ಕಿ ನೀಡಿದ್ರೇ ಕಮಿಷನ್ ಕಟ್ ಆಗುತ್ತೆ. ಇದನ್ನೇ ನಂಬಿಕೊಂಡಿರೋ ನಾವೂ ಹೇಗೆ ಜೀವನ ಮಾಡೋದು ಅಂತಾ ಆತಂಕಗೊಂಡಿದ್ದಾರೆ. ಇದನ್ನೂ ಓದಿ: Annabhagya Scheme: ಜುಲೈ 10 ರೊಳಗೆ ಅಕೌಂಟ್‍ಗೆ ಹಣ?
ಇದೇ ಕಾರಣದಿಂದ ರಾಜ್ಯದ ಒಟ್ಟು 20 ಸಾವಿರಕ್ಕೂ ಅಧಿಕ ಪಡಿತರ ವಿತರಕರು ಇಂದಿನಿಂದ ನ್ಯಾಯಬೆಲೆ ಅಂಗಡಿಯನ್ನ ಬಂದ್ ಮಾಡಿ ರೇಷನ್ ವಿಲೇವಾರಿ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಸರ್ಕಾರ ನಮ್ಮನ್ನು ಕರೆದು ಚರ್ಚೆ ಮಾಡಬೇಕು, ಖಾತೆಗೆ ಹಣ ಹಾಕೋ ಬದಲು 10 ಕೆ.ಜಿಗೆ ಬೇರೆ ದವಸಗಳನ್ನ ನೀಡಿ, ಇಲ್ಲವೇ ಖಾತೆಗೆ ಹಣ ಹಾಕ್ತೀರಾ ನಮಗೆ 10 ಕೆ.ಜಿಯ ಕಮಿಷನ್ ನೀಡಿ ಅನ್ನೋ ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಅಕ್ಕಿ ಸಿಗದೇ ಇದ್ದರೂ ಪರವಾಗಿಲ್ಲ ಹಣ ಹಾಕಿಬಿಡೋಣ ಅಂತಾ ದಿಟ್ಟ ನಿರ್ಧಾರ ಮಾಡಿದ್ದ ಸರ್ಕಾರಕ್ಕೆ ಈಗ ವಿತರಕರ ಬೇಡಿಕೆ ಹೊಸ ತಲೆನೋವಿಗೆ ಕಾರಣವಾಗಿದೆ.
ಬೆಂಗಳೂರು: ಕೊನೆಗೂ ಅನ್ನಭಾಗ್ಯದ (Congress Annabhagya Scheme) ಹಣಭಾಗ್ಯಕ್ಕೆ ಮುಹೂರ್ತ ಕೂಡಿಬಂದಿದೆ. ಇದೇ ಜುಲೈ 9, 10 ಕ್ಕೆ ಅಕೌಂಟ್‍ಗೆ ಹಣ ಹಾಕಲು ಸರ್ಕಾರ ಮುಂದಾಗಿದೆ. ವಿರೋಧ ಪಕ್ಷಗಳ ಪಟ್ಟು ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ (State Government) ಈ ನಿರ್ಧಾರಕ್ಕೆ ಬಂದಿದೆ.
ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ (Congress manifesto) 10 ಕೆ.ಜಿ ಅಕ್ಕಿ ಕೊಡುವ ಭರವಸೆ ನೀಡಿದರು. ಆದರೆ ಕಾಲಕ್ರಮೇಣ ಕೇಂದ್ರ ಸರ್ಕಾರ ತಮ್ಮ ಪಾಲಿನ ಅಕ್ಕಿಯನ್ನಷ್ಟೇ ನೀಡುತ್ತೇವೆ ಎಂದು ಹೇಳಿ ಕೈತೊಳೆದುಕೊಂಡಿತ್ತು. ಈಗ 5 ಕೆ.ಜಿ ಅಕ್ಕಿ ಜೊತೆ 5 ಕೆ.ಜಿಗೆ ಹಣ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.
ಈ ನಡುವೆ ಅಕ್ಕಿ ಹಣ ನೀಡುವುದು ಮತ್ತಷ್ಟು ವಿಳಂಬ ಅನ್ನೋದನ್ನ ಸ್ಪಷ್ಟವಾಗಿ ಹೇಳ್ತಿದೆ. ಸರ್ಕಾರದಿಂದ ಈಗ ಅಕೌಂಟ್‍ಗೆ ಹಣ ಹಾಕಲು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಜುಲೈ 15ರಂದು ಹಣಹಾಕುವ ಚಿಂತನೆಯಲ್ಲಿದ್ದರು. ಇದೀಗ ಜುಲೈ 10ರೊಳಗೆ ಹಣ ಹಾಕುವಂತೆ ಸರ್ಕಾರ ಸೂಚಿಸಿದ್ದು, ಜುಲೈ 9ರಂದೇ ಅಕೌಂಟ್‍ಗೆ ಹಣಹಾಕಲು ಆಹಾರ ಇಲಾಖೆಯಿಂದ ಚಿಂತನೆ ನಡೆಸಲಾಗ್ತಿದೆ ಎಂದು ಹೇಳಲಾಗುತ್ತಿದೆ.
ಅನ್ನ `ಹಣ’ಭಾಗ್ಯ ಸಿದ್ಧತೆ ಹೇಗಿದೆ?: ಜುಲೈ 9 ಅಥವಾ 10ರಂದೇ ಅಕೌಂಟ್‍ಗೆ ಹಣ ಹಾಕುವ ಸಾಧ್ಯತೆಗಳಿದ್ದು, ಜಿಲ್ಲಾವಾರು ಖಾತೆಗೆ ಹಣ ಹಾಕಲು ತಯಾರಿ ನಡೆಸಲಾಗುತ್ತಿದೆ. ಪ್ರತಿನಿತ್ಯ 2 ಜಿಲ್ಲೆ ಆಯ್ಕೆ ಮಾಡಿ ಹಣ ಹಾಕಲು ಚಿಂತನೆ ನಡೆಯುತ್ತಿದೆ. ಇದನ್ನೂ ಓದಿ: ಹನುಮಂತನಿಗೆ ಅಪಮಾನ ಮಾಡಿದ ಆರೋಪ- ಶಪಥ ಮಾಡಿ ನದಿಯಲ್ಲೇ ಕುಳಿತ ಸ್ವಾಮೀಜಿ
ಆರಂಭಿಕ ಹಂತದಲ್ಲಿ ಮೈಸೂರು, ಕೋಲಾರ ಜಿಲ್ಲೆಗಳಿಗೆ ಹಣ ಜಮೆ ಹಾಗೂ ಹಂತ ಹಂತವಾಗಿ ಎರೆಡೆರಡು ಜಿಲ್ಲೆಗಳಿಗೆ ಹಣ ಹಾಕಲು ನಿರ್ಧಾರ ಮಾಡಲಾಗುತ್ತದೆ. 3 ತಿಂಗಳು ಪಡಿತರ ಅಕ್ಕಿ ತೆಗೆದುಕೊಳ್ಳದೇ ಇರೋರಿಗೆ ಅಕ್ಕಿ ಹಣ ಅನುಮಾನವಿದೆ. ಏಪ್ರಿಲ್, ಮೇ, ಜೂನ್‍ನಲ್ಲಿ ಅಕ್ಕಿ ತೆಗೆದುಕೊಳ್ಳದಿದ್ರೆ ಹಣ ನೀಡೋದು ಡೌಟು ಎನ್ನಲಾಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಅವರು ಇದೀಗ ರಾಜ್ಯಸ ರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ಹತ್ತನೇ ನಂಬರಿನ ಹಂಗಿನ ಸರ್ಕಾರ ಎದು ಹ್ಯಾಶ್ ಟ್ಯಾಗ್ ಬಳಸಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿರುವುದು ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರಕಾರವೋ ಅಥವಾ ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರಕಾರಕ್ಕಾ?ಅಥವಾ ಕೈಗೊಂಬೆ ಸರಕಾರಕ್ಕಾ??
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) June 13, 2023
ಟ್ವೀಟ್‍ನಲ್ಲೇನಿದೆ..?: ರಾಜ್ಯದಲ್ಲಿರುವುದು ಸಿದ್ದರಾಮಯ್ಯ (Siddaramaiah) ನವರ ನೇತೃತ್ವದ ಸರ್ಕಾರವೋ ಅಥವಾ ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರ್ಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರ್ಕಾರಕ್ಕಾ? ಅಥವಾ ಕೈಗೊಂಬೆ ಸರ್ಕಾರಕ್ಕಾ? ಪಾಪ.. ಜನರ ವೋಟು ಹಂಗಿನ ಸರ್ಕಾರದ ಪಾಲಾಗಿದೆ. ಸರಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ ಎಂದಿದ್ದಾರೆ.
ಸರ್ಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡಿನ ನಿಲಯದ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು! ನಾನು ಟ್ಯಾಗ್ ಮಾಡಿರುವ ಫೋಟೋ ಆ ದೈನೇಸಿ ಸ್ಥಿತಿಗೆ ಸಾಕ್ಷಿ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ (Randeep Surjewala) ಅವರಿಗೆ ಸರ್ಕಾರದ ಸಭೆಗಳನ್ನು ನಡೆಸುವ ಜವಾಬ್ದಾರಿ, ಅವಕಾಶ ಕೊಟ್ಟವರು ಯಾರು ಎಂದು ಹೆಚ್‍ಡಿಕೆ ಪ್ರಶ್ನಿಸಿದ್ದಾರೆ.
ಸಭೆಯಲ್ಲಿ ಹಿರಿಯ ಸಚಿವರಿದ್ದಾರೆ! ಹಿರಿಯ ಐಎಎಸ್ ಅಧಿಕಾರಿಗಳೂ ಹಾಜರಿದ್ದಾರೆ!! ಅಲ್ಲಿಗೆ ಇದು ಅಧಿಕೃತ ಸಭೆಯೇ ಆಯಿತು. ಆದರೆ, ಅಲ್ಲಿ ಸುರ್ಜೆವಾಲಾ ಸೆಂಟರ್ ಸೀಟಿನಲ್ಲಿದ್ದಾರೆ! ಸಚಿವರು ಸೈಡು ಕುರ್ಚಿಗಳ ಪಾಲಾಗಿದ್ದಾರೆ!! ಇದೇನು ವಿಚಿತ್ರ? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು. 3/3#ಹತ್ತನೇ_ನಂಬರಿನ_ಹಂಗಿನ_ಸರಕಾರ
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) June 13, 2023
ಸಭೆಯಲ್ಲಿ ಹಿರಿಯ ಸಚಿವರಿದ್ದಾರೆ. ಹಿರಿಯ ಐಎಎಸ್ ಅಧಿಕಾರಿಗಳೂ ಹಾಜರಿದ್ದಾರೆ. ಅಲ್ಲಿಗೆ ಇದು ಅಧಿಕೃತ ಸಭೆಯೇ ಆಯಿತು. ಆದರೆ ಅಲ್ಲಿ ಸುರ್ಜೆವಾಲಾ ಸೆಂಟರ್ ಸೀಟಿನಲ್ಲಿದ್ದಾರೆ. ಸಚಿವರು ಸೈಡು ಕುರ್ಚಿಗಳ ಪಾಲಾಗಿದ್ದಾರೆ. ಇದೇನು ವಿಚಿತ್ರ? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಬರೆದು ಹತ್ತನೇ ನಂಬರಿನ ಹಂಗಿನ ಸರ್ಕಾರ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.