Tag: congress chodo

  • ಭಾರತ್‌ ಜೋಡೋ ಯಾತ್ರೆ ಬೆನ್ನಲ್ಲೇ ʻಕಾಂಗ್ರೆಸ್‌ ಛೋಡೋʼ ಅಭಿಯಾನ ಶುರುವಾಗುತ್ತೆ: ಬಿಜೆಪಿ ವ್ಯಂಗ್ಯ

    ಭಾರತ್‌ ಜೋಡೋ ಯಾತ್ರೆ ಬೆನ್ನಲ್ಲೇ ʻಕಾಂಗ್ರೆಸ್‌ ಛೋಡೋʼ ಅಭಿಯಾನ ಶುರುವಾಗುತ್ತೆ: ಬಿಜೆಪಿ ವ್ಯಂಗ್ಯ

    ಬೆಂಗಳೂರು: ದೇಶವನ್ನು ಭೌಗೋಳಿಕವಾಗಿ ವಿಭಜನೆ ಮಾಡಿದ್ದು ಮಾತ್ರವಲ್ಲ, ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಆಧಾರದ ಮೇಲೆ ವಿಭಜನೆ ಮಾಡಿದ ಕಾಂಗ್ರೆಸ್ ಈಗ ಹೊಸ ನಾಟಕ ಮಾಡುತ್ತಿದೆ. ಸೋತು ನೆಲೆ ಕಳೆದುಕೊಂಡು, ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ `ಭಾರತ್ ಜೋಡೋ’ ಹೆಸರಿನಲ್ಲಿ ಯಾತ್ರೆಗೆ ಹೊರಟಿರುವುದು ಈ ಶತಮಾನದ ದೊಡ್ಡ ವ್ಯಂಗ್ಯ ಎಂದು ಬಿಜೆಪಿ ಕುಟುಕಿದೆ.

    ʼಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತ್‌ ಜೋಡೋʼ ಯಾತ್ರೆ ಕೈಗೊಳ್ಳುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಕಾಂಗ್ರೆಸ್‌ ಯಾತ್ರೆ ಕುರಿತು ʼ#ಕಾಂಗ್ರೆಸ್‌ಛೋಡೋʼ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಬಿಜೆಪಿ ಸರಣಿ ಟ್ವೀಟ್‌ ಮೂಲಕ ವ್ಯಂಗ್ಯವಾಡಿದೆ.

    ಟ್ವೀಟ್‌ನಲ್ಲಿ ಏನಿದೆ?
    ಕಾಂಗ್ರೆಸ್‌ ಅಧಿಕಾರದಲ್ಲಿರುವಾಗ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ದೇಶವನ್ನು ಧರ್ಮ, ಜಾತಿ, ಭಾಷೆ ಎಂದು ವಿಭಜಿಸಿತ್ತು. ಅದರ ಪರಿಣಾಮವಾಗಿ ದೇಶದ ಜನತೆ ಅಧಿಕಾರದಿಂದ ಕೆಳಗಿಳಿಸಿದರು. ಈಗ ಅಧಿಕಾರವಿಲ್ಲದ ಹತಾಶೆ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ. ಅದಕ್ಕಾಗಿ ಭಾರತ್‌ ಜೋಡೋ ಎಂದು ಹೊರಟಿದೆ. ಎಷ್ಟೊಂದು ನಾಟಕ ಮಾಡುವಿರಿ?

    ಬಿತ್ತಿದ್ದೇ ಬೆಳೆಯುತ್ತದೆ! ಅಧಿಕಾರದ ಅಮಲಿನಲ್ಲಿ, ಕುಟುಂಬವಾದದ ಭದ್ರ ಕೋಟೆಯಲ್ಲಿ ಕುಳಿತ ಕಾಂಗ್ರೆಸ್ ನಾಯಕರು ಜನರಿಂದ ಬಹುದೂರ ಸಾಗಿದ್ದರು. ಕಾಂಗ್ರೆಸ್ ಜನಸಾಮಾನ್ಯರಿಂದ ದೂರವಾಗಿದೆ ಎಂಬ ಸತ್ಯ ಒಪ್ಪಿಕೊಳ್ಳುವ ಸ್ಥಿತಿ ಈಗ ನಿರ್ಮಾಣವಾಗಿದೆ. ಕಾಂಗ್ರೆಸ್ ಹಾಗೂ ಜನಸಾಮಾನ್ಯರ ನಡುವೆ ದೊಡ್ಡ ಕಂದಕವಿದೆ.

    ಭಾರತ್ ಜೋಡೋ ಹೆಸರಿನಲ್ಲಿ ಕಾಂಗ್ರೆಸ್ ದೇಶದ ಚುನಾವಣಾ ವ್ಯವಸ್ಥೆಯನ್ನು ಗತಕಾಲಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಗೆದ್ದಾಗ ಇವಿಎಂ ಬಗ್ಗೆ ಮೌನ ವಹಿಸುವ ಕಾಂಗ್ರೆಸ್‌ ಪಕ್ಷ, ಸೋತಾಗ ಮಾತ್ರ ತನ್ನ ಕಳಪೆ ಪ್ರದರ್ಶನವನ್ನು ಇವಿಎಂ ಯಂತ್ರದ ಮೇಲೆ ಕಟ್ಟುತ್ತಾರೆ. ಮತಯಂತ್ರವನ್ನು ದೂಷಿಸಿ ಪಕ್ಷ ಪುನಶ್ಚೇತನಗೊಳಿಸಲು ಸಾಧ್ಯವೇ?

    ಪಕ್ಷ ಸಂಕಟದಲ್ಲಿ ಇದ್ದಾಗಲೆಲ್ಲ ವಿದೇಶ ಪ್ರವಾಸ ಮಾಡುತ್ತಿದ್ದ ರಾಹುಲ್ ಗಾಂಧಿ ಈಗ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತ್‌ ಜೋಡೋ ಎಂಬ ಪಾದಯಾತ್ರೆಗೆ ಹೊರಟಿದ್ದಾರೆ. ವಯನಾಡು ತಲುಪುವವರೆಗೆಯಾದರೂ ಈ ಜೋಡಣೆ ಕಾರ್ಯ‌ ನಿರಾತಂಕವಾಗಿ ನಡೆಯುವುದೋ ಅಥವಾ ಮಧ್ಯದಲ್ಲಿ ಇನ್ನೊಂದು ವಿದೇಶ ಪ್ರವಾಸದ ಸಾಧ್ಯತೆ ಇರಬಹುದೋ?

    ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ G23 ನಾಯಕರ ಪಾತ್ರವೇನು? ಕಾಂಗ್ರೆಸ್‌ ಛೋಡೋ ಎಂದಿರುವ ನಾಯಕರು ಭಾರತ್‌ ಜೋಡೋ ಯಾತ್ರೆಗೆ ಬರುವರೇ? ಭಾರತ್‌ ಜೋಡೋ ಕಾರ್ಯಕ್ರಮದ ಬೆನ್ನಲ್ಲೇ ಕಾಂಗ್ರೆಸ್‌ಛೋಡೋ ಅಭಿಯಾನ ಆರಂಭಗೊಳ್ಳಲಿದೆ!

    ಸ್ವಾತಂತ್ರದ ನಂತರದ ಭಾರತವನ್ನು ಅಖಂಡವಾಗಿಸಿದವರಲ್ಲಿ ರಾಷ್ಟ್ರಸೇವಕ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರೂ ಒಬ್ಬರು. ಸರ್ದಾರ್‌ ಅವರನ್ನೇ ಮರೆತ ಕಾಂಗ್ರೆಸ್‌ ಪಕ್ಷ ಭಾರತ್‌ ಜೋಡೋ ಅಭಿಯಾನ ಮಾಡುವುದು ಹಾಸ್ಯಾಸ್ಪದವಲ್ಲವೇ?