Tag: congres

  • ಜೆಡಿಎಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಎಚ್‍ಡಿಕೆ

    ಜೆಡಿಎಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದು ಯಾಕೆ: ಸ್ಪಷ್ಟನೆ ಕೊಟ್ಟ ಎಚ್‍ಡಿಕೆ

    ನವದೆಹಲಿ: ಪಕ್ಷದ ಕಚೇರಿಯಲ್ಲಿ ನಡೆದಂತಹ ಕಾರ್ಯಕ್ರಮ ಅದು ನನ್ನ ಕುಟುಂಬದ ಕಾರ್ಯಕ್ರಮವಾಗಿತ್ತು. ಆ ಕುಟುಂಬದ ಕಾರ್ಯಕ್ರಮದಲ್ಲಿ ನನ್ನಲ್ಲಿರುವಂತಹ ನೋವುಗಳನ್ನು ಹೇಳುತ್ತಿರಬೇಕಾದ್ರೆ ಭಾವಾನಾತ್ಮಕವಾಗಿ ಕಣ್ಣೀರು ಹಾಕಿದ್ದು ಸಹಜ. ಅದು ನನ್ನ ಹುಟ್ಟು ಗುಣ ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದ ಮುಖ್ಯಮಂತ್ರಿ ಎನ್ನುವುದಕ್ಕಿಂತಲೂ ಹೆಚ್ಚಾಗಿ, ನಾನೊಬ್ಬ ಮಾನವೀಯತೆಯ ಮನುಷ್ಯನಾಗಿದ್ದೇನೆ. ಇದನ್ನು ಮೊದಲಿನಿಂದಲೂ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಅದರ ಹಿನ್ನೆಲೆಯಲ್ಲಿ ನನ್ನ ಕುಟುಂಬದ ಸದಸ್ಯರ ಜೊತೆ ನನ್ನ ಕೆಲವೊಂದು ನೋವಿನ ಕ್ಷಣಗಳನ್ನು ಹಂಚಿಕೊಳ್ಳುತ್ತಿರಬೇಕಾದ್ರೆ ಕಣ್ಣಲ್ಲಿ ನೀರು ಹಾಕಿರುವುದು ಸಹಜ ಅಂದ್ರು.

    ಆ ಕ್ಯಾಸೆಟ್ ನ ರೀವೈಂಡ್ ಮಾಡಿ ಬೇಕಾದ್ರೆ ನೋಡಿ. ಅಲ್ಲಿ ಕಾಂಗ್ರೆಸ್ ಪಕ್ಷ ನನಗೆ ತೊಂದರೆ ಕೊಟ್ಟಿದೆ. ಕಾಂಗ್ರೆಸ್ ನ ನಾಯಕರು ನನಗೆ ತೊಂದರೆ ಕೊಟ್ಟಿದ್ದಾರೆ ಅಂತ ಎಲ್ಲೂ ಹೇಳಿಲ್ಲ. ನಾನು ಇಷ್ಟೆಲ್ಲಾ ಕಷ್ಟದಲ್ಲಿದ್ದು ಸಾಲಮನ್ನಾ ಮಾಡತಕ್ಕಂತಹ ಒಂದು ದಿಟ್ಟ ನಿರ್ಧಾರ ಮಾಡಿ ಕಾರ್ಯಕ್ರಮಗಳನ್ನು ಕೊಡ್ತಾ ಇದ್ದೇನೆ. ಉತ್ತಮವಾದ ಒಂದು ಕೆಲಸವನ್ನು ಮಾಡಲು ಎಲ್ಲೋ ಒಂದು ಕಡೆ ಪ್ರೋತ್ಸಾಹ ದೊರಕುತ್ತಿಲ್ಲ. ಸಾರ್ವಜನಿಕರ ಬಗ್ಗೆ ನನ್ನಲ್ಲಿರುವ ಕಮಿಟ್‍ಮೆಂಟ್ ಗಳ ಬಗ್ಗೆ ರಾಜ್ಯದ ಜನತೆಯಲ್ಲಿ ಎಲ್ಲೋ ಒಂದು ಕಡೆ ಇನ್ನೂ ವಿಶ್ವಾಸ ಮೂಡುತ್ತಿಲ್ಲ ಎನ್ನುವ ಹಿನ್ನೆಲೆಯಲ್ಲಿ ನಾನು ಭಾವನಾತ್ಮಕವಾಗಿ ಮಾತಾಡಿದ್ದೇನೆ ಅಂತ ಅವರು ಸ್ಪಷ್ಟನೆ ನೀಡಿದ್ರು.

    ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ಬಗ್ಗೆ ಆ ಸಭೆಯಲ್ಲಿ ನಾನು ಚರ್ಚೆ ಮಾಡಿಲ್ಲ. ಆದ್ರೆ ಈ ವಿಚಾರ ಇಂದು ದೇಶದ ಉದ್ದಗಲಕ್ಕೂ ಚರ್ಚೆಯಾಗುತ್ತಿದೆ ಅಂತ ವಿಷಾದ ವ್ತಕ್ತಪಡಿಸಿದ್ರು.

  • ವಿಧಾನಸೌಧದಲ್ಲಿ ದೇವೇಗೌಡರ ಫೋಟೋವನ್ನು ತೆಗೆಸಿದ್ದು ಯಾಕೆ? ಜಾತಿ ಸಮೀಕ್ಷೆ ಇನ್ನೂ ಬಿಡುಗಡೆ ಅಗಿಲ್ಲ ಯಾಕೆ? – ಪಬ್ಲಿಕ್ ಟಿವಿಯಲ್ಲಿ ಸಿಎಂ ಸಂದರ್ಶನ

    ವಿಧಾನಸೌಧದಲ್ಲಿ ದೇವೇಗೌಡರ ಫೋಟೋವನ್ನು ತೆಗೆಸಿದ್ದು ಯಾಕೆ? ಜಾತಿ ಸಮೀಕ್ಷೆ ಇನ್ನೂ ಬಿಡುಗಡೆ ಅಗಿಲ್ಲ ಯಾಕೆ? – ಪಬ್ಲಿಕ್ ಟಿವಿಯಲ್ಲಿ ಸಿಎಂ ಸಂದರ್ಶನ

    ಬೆಂಗಳೂರು: ಈ ಬಾರಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿಲ್ಲ. ಆದ್ದರಿಂದ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಳೆದ ಚುನಾವಣೆಯ ಬಳಿಕ ತಾನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ, ಆದರೆ ಮುಖ್ಯಮಂತ್ರಿಯಾಗಿ ಕಳೆದ 5 ವರ್ಷ ಮಾಡಿದ ಕೆಲಸದ ಬಳಿಕ ಹೇಗೆ ಬಿಟ್ಟುಹೋಗುತ್ತಿರಾ ಎಂದು ಪ್ರಶ್ನಿಸಿದರು. ಈ ಕಾರಣಕ್ಕೆ ನಾನು ನಿರ್ಧಾರ ಬದಲಿಸಿದೆ ಎಂದು ತಿಳಿಸಿದ್ದಾರೆ. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಸಿಎಂ ನೀಡಿದ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

    ಉಪಚುನಾವಣೆಯ ಬಳಿಕ ನೀವು ಅಗ್ರೆಸ್ಸೀವ್ ಆಗಿದ್ದು ಯಾಕೆ?
    ದೇಶದ ಪ್ರಧಾನಿಯೊಬ್ಬರು ರಾಜ್ಯದಲ್ಲಿರುವ ಆಡಳಿತ ಪಕ್ಷದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಆದ್ರೆ ತಮ್ಮ ಕೊಡುಗೆ ಏನು ಎಂಬುವುದನ್ನು ಮಾತನಾಡಿಲ್ಲ. ಕೇಂದ್ರದಲ್ಲಿ ಅಧಿಕಾರ ಪಡೆದು 4 ವರ್ಷಗಳು ಕಳೆದಿದೆ. ಆದರೆ ಇದುವರೆಗೂ ಲೋಕಾಪಾಲರನ್ನು ನೇಮಕ ಮಾಡಿಲ್ಲ. ಯುಪಿಎ ಅಧಿಕಾರ ಅವಧಿಯಲ್ಲಿ ಮಂಡನೆಯಾದ ಮಸೂದೆಯನ್ನು ಇನ್ನು ಜಾರಿಗೆ ತಂದಿಲ್ಲ. ಮೋದಿ ಸಿಎಂ ಆಗಿದ್ದಾಗಲೂ ಲೋಕಾಯುಕ್ತವನ್ನು ನೇಮಕ ಮಾಡಿಲ್ಲ. ಆದರೆ ಸಿದಾರುಪಯ್ಯ ಸರ್ಕಾರ ಎಂದು ಆರೋಪ ಮಾಡುತ್ತಾರೆ. ನೀರವ್ ಮೋದಿ, ವಿಜಯ್ ಮಲ್ಯ, ಲಲಿತ್ ಮೋದಿ, ಕೋತಾರಿ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಆದರೆ ನಮ್ಮ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಾರೆ.

    ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಏಕಾಂಗಿ ಆಗಿದ್ದರಾ?
    ನಾನು ಏಕಾಂಗಿಯಾಗಿಲ್ಲ. ನನ್ನ ಪ್ರಕಾರ ಬಿಎಸ್‍ವೈ ಆರ್‍ಎಸ್‍ಎಸ್ ಹಾಗೂ ಬಿಜೆಪಿ ನಾಯಕರಿಂದ ಏಕಾಂಗಿಯಾಗಿದ್ದಾರೆ. ಇದಕ್ಕೆ ಉದಾಹರಣೆ ವರುಣಾದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ಅವರಿಗೂ ಟಿಕೆಟ್ ನೀಡಲು ಸಾಧ್ಯವಾಗಿಲ್ಲ. ಸಂಸದ ಶ್ರೀರಾಮುಲು ಅವರಿಗೆ ಮಾತ್ರ ಟಿಕೆಟ್ ನೀಡಿದ್ದು ಯಾಕೆ? ಶ್ರೀರಾಮುಲುಗೆ ಕನ್ನಡವೇ ಬರುವುದಿಲ್ಲ, ಅವರ ಮಾತೃ ಭಾಷೆ ತೆಲುಗು ಇರಬಹುದು. ಬಿಜೆಪಿ ನಾಯಕರು ಏನು ಹೇಳಿದರೋ ಗೊತ್ತಿಲ್ಲ. ದಲಿತ ಮತಗಳನ್ನು ಸೆಳೆಯಲು ಶ್ರೀರಾಮುಲುರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

    ಮೋದಿ ಅವರು ರಾಹುಲ್ ವಿರುದ್ಧ ನಮ್ಮ ಸರ್ಕಾರದ ಸಾಧನೆಯ ಬಗ್ಗೆ 15 ನಿಮಿಷ ಭಾಷಣ ಮಾಡುವಂತೆ ಸವಾಲು ಹಾಕುತ್ತಾರೆ. ನಾನು ಮೋದಿಯವರಿಗೆ ಸವಾಲು ಹಾಕುತ್ತೇನೆ. ಬಿಎಸ್‍ವೈ ಅವಧಿ ವೇಳೆ ಸಾಧನೆಯನ್ನು ಮಾತನಾಡಲಿ. ಬಳ್ಳಾರಿಯಲ್ಲಿ ನಡೆದ ಭ್ರಷ್ಟಚಾರ ನಡೆದ ಬಗ್ಗೆ ತಿಳಿಯಲು ಹೋದ ವೇಳೆ ನಮ್ಮ ಮೇಲೆ ರೌಡಿಗಳನ್ನು ಬಿಟ್ಟು ಹೆದರಿಸಲು ಯತ್ನಿಸಿದರು. ಆ ವೇಳೆ ರೆಡ್ಡಿ ದಿನಕ್ಕೆ 10 ಕೋಟಿ ಸಂಪಾದನೆ ಮಾಡುತ್ತಿದ್ದರು. ಅವರನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಎಂದೇ ಸಂತೋಷ್ ಹೆಗಡೆ ವರದಿ ನೀಡಿದ್ದಾರೆ. ಇವರು ನಮ್ಮ ಸರ್ಕಾರದ ಮೇಲೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ ನಾಚಿಕೆಯಾಗಬೇಕು.

    ಆನಂದ್ ಸಿಂಗ್ ಅವರ ಮೇಲೆ ಆರೋಪ ಇದೆಯಲ್ಲ, ಅವರನ್ನು ನೀವು ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ ಅಲ್ಲವೇ?
    ನಾವು ಆನಂದ್ ಸಿಂಗ್ ವಿರುದ್ಧ ಹೋರಾಟ ನಡೆಸಿಲ್ಲ. ನಾವು ಹೋರಾಟ ನಡೆಸಿದ್ದು ರೆಡ್ಡಿ ಸಹೋದರರ ವಿರುದ್ಧ. ಅಲ್ಲಿ ರೆಡ್ಡಿ ಸಹೋದದರು ಆಡಳಿತ ನಡೆಸುತ್ತಿದ್ದರು. ನಮಗೇ ರೋಡ್ ಶೋ ನಡೆಸಲು ಬಿಡಲಿಲ್ಲ. ಎಲ್ಲರಿಗೂ ಹೆದರಿಕೆ ಇತ್ತು. ಯಡಿಯೂರಪ್ಪ ಅವರಿಗೆ ರಾಜಕೀಯದಲ್ಲಿ ಇರಲು ನಾಚಿಕೆ ಆಗಬೇಕು. ರೆಡ್ಡಿ ಸಹೋದರರು ನನ್ನ ಮೇಲೆ ಸವಾಲು ಎಸೆದಿದ್ದರು. ಈ ಕಾರಣಕ್ಕೆ ನಾವು ಪಾದಯಾತ್ರೆ ನಡೆಸಿದ್ದೆವು. ನಾವು ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ. ಆದರೆ ಬಿಜೆಪಿಯಲ್ಲಿ ಇದು ಸಾಧ್ಯವಿಲ್ಲ, ಇದಕ್ಕೆ ಉತ್ತಮ ಉದಾಹರಣೆ ಬಿಜೆಪಿ ಅವರು ಈ ಬಾರಿ ಒಂದು ಟಿಕೆಟ್ ಕೂಡ ಅಲ್ಪಸಂಖ್ಯಾತರಿಗೆ ನೀಡಿಲ್ಲ.

    ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಏಕೆ, ಸಿದ್ದರಾಮಯ್ಯ ಹೆದರಿಕೊಂಡ್ರಾ?
    ನಾನು ಯಾರಿಗೂ ಹೆದರಿಕೊಳ್ಳುವ ಪ್ರಮೇಯ ಇಲ್ಲ. ಈ ಹಿಂದೆ ಮೋದಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಈ ಬಾರಿ ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಅವರು ಮಾಡಿದರೆ ಅದು ರಾಜಕೀಯ ತಂತ್ರ, ನಾನು ಮಾಡಿದರೆ ಮಾತ್ರ ಹೆದರಿಕೆ ಎಂದು ಹೇಳುತ್ತಾರೆ ಅಷ್ಟೇ.

    ಕಾಂಗ್ರೆಸ್ ಸರ್ಕಾರ ಇರುವ ಏಕೈಕ ರಾಜ್ಯ ಕರ್ನಾಟಕ ಒಂದು ರೀತಿ ಎಟಿಎಮ್ ಅಂತ ಬಿಜೆಪಿಯವರು ಹೇಳ್ತಾರೆ?
    ಕಾಂಗ್ರೆಸ್ 133 ವರ್ಷ ಇತಿಹಾಸ ಇರುವ ಹಳೆಯ ಪಕ್ಷ. ಎಂದಿಗೂ ಹಣ ಕಳಿಸಿ ಅಂತ ಹೇಳಿಲ್ಲ. ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ,ಕಾಂಗ್ರೆಸ್ ಪಕ್ಷದಲ್ಲಿ ಅಸೆಟ್ ಯಾರ ಬಳಿ ಜಾಸ್ತಿ ಇದೆ. ನಮ್ಮ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ ಆಗಿದೆ. ಐಟಿ ದಾಳಿ ಮಾಡಿ ನಮ್ಮ ಪಕ್ಷವನ್ನು ಕುಗ್ಗಿಸುವಂತಹ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಅವರ ಬಳಿ ಹೆಚ್ಚು ಆಸ್ತಿ ಇಲ್ವಾ ಅವರ ಮನೆ ಮೇಲೆ ಯಾಕೆ ಐಟಿ ದಾಳಿ ಮಾಡಲ್ಲ. ನಮ್ಮ ಪಕ್ಷದ ನಾಯಕರ ಮೇಲೆ ದಾಳಿ ಮಾಡಿ ಹೆದರಿಸುವ ಕಾರ್ಯ ಮಾಡುತ್ತಿದ್ದಾರೆ. ಚುನಾವಣಾ ಸಮಯದಲ್ಲೇ ಐಟಿ ದಾಳಿ ಮಾಡುತ್ತಿದ್ದಾರೆ. ಇದು ದ್ವೇಷದ ರಾಜಕಾರಣ.

    2+1 ಸೂತ್ರ ಏನು?
    ನಾನು 2 ಕಡೆ ಮತ್ತೆ ನಮ್ಮ ಮಗ ಒಂದು ಕಡೆಯಿಂದ ಸ್ಪರ್ಧಿಸಿರುವುದಕ್ಕೆ ಹೀಗೆ ಹೇಳುತ್ತಾರೆ. ಯಡಿಯೂರಪ್ಪ ಮಗ ಹಾಲಿ ಶಾಸಕ ಗೋವಿಂದ ಕಾರಜೋಳ ಅವರ ಮಗ, ಉದಾಸಿಯವರ ಮಗ, ಶಶಿಕಲಾ ಜೊಲ್ಲೆ ಅವರ ಗಂಡ, ಉಮೇಶ್ ಕತ್ತಿ ಅವರ ತಮ್ಮ, ಯಡಿಯೂರಪ್ಪ ಅವರ ಮಗ ರಾಘವೇಂದ್ರ ಇವರೆಲ್ಲ ಚುನಾವಣೆಗೆ ಸ್ಪರ್ಧಿಸಿಲ್ಲವೇ ಇದಕ್ಕೆ ಸೂತ್ರ ಅವರೇ ಹೇಳಬೇಕು.

    ಸಿದ್ದರಾಮಯ್ಯನವರು ಸಮಾಜವಾದಿಯಾಗಿ ಉಳಿದಿಲ್ಲ ದುಬಾರಿ ಬೆಲೆಯ ವಾಚ್ ಕಟ್ಟುತ್ತಾರೆ?
    ನರೇಂದ್ರ ಮೋದಿಯವರು ಹಾಕೋ ಕೋಟ್ ಬೆಲೆ ಎಷ್ಟು ಅದಕ್ಕೆಲ್ಲಾ ಆದಾಯ ತೆರಿಗೆ ಕಟ್ಟಿದ್ದಾರಾ. ನನ್ನ ಸ್ನೇಹಿತ ವಾಚ್ ಕೊಟ್ಟ ಕಟ್ಟಿಕೊಂಡಿದ್ದೆ. ನನ್ನ ಮೇಲೆ ಆರೋಪ ಮಾಡುವ ದೇವೇಗೌಡರು ಶಾಸಕರಾಗಿದ್ದಾಗ ಎಷ್ಟು ಆಸ್ತಿ ಇತ್ತು ಈಗ ಎಷ್ಟು ಆಸ್ತಿಯಾಗಿದೆ. ಕುಮಾರಸ್ವಾಮಿ ಅವರ ಮಗನ ಬಳಿ ಕಾರು ಇಲ್ಲವೇ?. ನಾನೇ ಯಾರ ಮೇಲೂ ಆರೋಪ ಮಾಡಿಲ್ಲ. ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದೇನೆ.

     

    ಕಳೆದ 5 ವರ್ಷಗಳಲ್ಲಿ ಹಿಂದೂ ಕಾರ್ಯಕರ್ತರ ಕೊಲೆಗಳು ಜಾಸ್ತಿಯಾಗಿದೆ?
    23 ಜನರ ಕೊಲೆ ಆಗಿದೆ ಅದರಲ್ಲಿ 11 ಜನ ಬಿಜೆಪಿ ಕಾರ್ಯಕರ್ತರಲ್ಲ. ಉಳಿದ 12 ಜನ ಆರ್‍ಎಸ್‍ಎಸ್, ಭಜರಂಗ ದಳ, ಶ್ರೀರಾಮ ಸೇನೆಗೆ ಸೇರಿದೋರು. ಕೋಮು ಗಲಭೆಗಳಿಂದ, ಇನ್ನು ಕೆಲವು ಕಾರಣಗಳಿಗೆ ಸತ್ತಿದ್ದಾರೆ. ಬಿಜೆಪಿಯವರು ಹೆಚ್ಚಾಗಿ ಹೇಳುತ್ತಿದ್ದಾರೆ ಅಷ್ಟೆ. ಇದು ಮೊದಲಲ್ಲ ಗಲಭೆ ಏಳಿಸೋದು, ಕೋಮು ಗಲಭೆ ಅನ್ನೋದು ಬಿಜೆಪಿಯವರ ಹಿಂದಿನ ಉದ್ದೇಶ. ಎಲ್ಲಾ ಪ್ರಕರಣಗಳಲ್ಲೂ ದೂರು ದಾಖಲಾಗಿ ಆರೋಪಿಗಳ ಬಂಧನ ಆಗಿದೆ. ಕೆಲವು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಕೂಡ ಆಗಿದೆ.

    ಜೆಡಿಎಸ್ ಮುಗಿಸಬೇಕು ಅಂತ ಹೊರಟಿದ್ದೀರಾ?
    ಯಾರು ಯಾರನ್ನು ಮುಗಿಸಲು ಸಾಧ್ಯ ಇಲ್ಲ. ಜೆಡಿಎಸ್ ಶಕ್ತಿ ಎಷ್ಟಿದೆ ಅಂತ ಹೇಳುತ್ತಿದ್ದೇನೆ ಅಷ್ಟೆ. ಪ್ರತೀ ಜಿಲ್ಲೆಯಲ್ಲಿ ಕಾಂಗ್ರೆಸ್ ಬೇರು ಇದೆ ಬಿಜೆಪಿ, ಜೆಡಿಎಸ್ ಇದೆಯಾ? 8 ಜಿಲ್ಲೆ ಅಲ್ಲಿ ಬಿಜೆಪಿ ಗೆ ಸೀಟ್ ಇಲ್ಲ. ದೇವೇಗೌಡ ಹಿರಿಯ ರಾಜಕಾರಣಿ ನನಗೆ ಕೋಪ ಇಲ್ಲ. ವೈಯಕ್ತಿಕವಾಗಿ ಯಾರನ್ನು ದ್ವೇಷಿಸಲ್ಲ ಈಗಲೂ ಚೆನ್ನಾಗಿದ್ದೀನಿ ಅವರು ಟೀಕೆ ಮಾಡಿದರೆ ಟೀಕೆ ಮಾಡುತ್ತೇನೆ. ಅವರು ನೀಚ ರಾಜಕಾರಣ ಮಾಡುತ್ತಾನೆ ಅಂದಾಗ ನಾನು ಸುಮ್ಮನೇ ಇರಬೇಕೇ?

    ರಾಕೇಶ್ ಇದ್ದಿದ್ದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದರಾ?
    ಖಂಡಿತಾ

    ಅವರಪ್ಪನಾಣೆ ಅಂತ ಹೆಚ್ಚು ಬಳಸುತ್ತೀರ?
    ಅದು ಹಳ್ಳಿ ಭಾಷೆ. ನಮ್ಮ ಹಳ್ಳಿಗಳಲ್ಲಿ ಹಾಗೆ ಬಳಸುತ್ತೇವೆ.

    ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತ ಹೇಳುತ್ತೀರ?
    ಕೆಲವು ಕಡೆ ಒಪ್ಪಂದ ಮಾಡಿಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಬಿಜೆಪಿ ತುಂಬಾ ವೀಕ್ ಅಭ್ಯರ್ಥಿ ಹಾಕಿದೆ ಏನರ್ಥ?

    ಒಕ್ಕಲಿಗರನ್ನು ಎದುರು ಹಾಕಿಕೊಂಡಿದ್ದೀರಾ?
    ನಮ್ಮಲ್ಲಿ ಡಿಕೆ ಶಿವಕುಮಾರ್, ಕೃಷ್ಣಪ್ಪ ಒಕ್ಕಲಿಗ ನಾಯಕರು ಇಲ್ವಾ. ಕೆಂಪೇಗೌಡರ ಜಯಂತಿ ಮಾಡಿದವರು ಯಾರು? ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರು ಇಟ್ಟಿದು ಯಾರು? ದೇವೇಗೌಡರು, ಕುಮಾರ ಸ್ವಾಮಿ ಯಾಕೆ ಮಾಡಲಿಲ್ಲ?

    ವಿಧಾನಸೌಧದಲ್ಲಿ ದೇವೇಗೌಡರ ಫೋಟೋವನ್ನು ನೀವು ತೆಗೆಸಿದ್ದೀರಿ?
    ಸ್ವಚ್ಛ ಮಾಡುವ ಸಮಯದಲ್ಲಿ ಫೋಟೋವನ್ನು ತೆಗೆಯಲಾಗಿತ್ತು. ಬಳಿಕ ಹಾಕಲಾಗಿದೆ.

    ಅತಂತ್ರ ಪರಿಸ್ಥಿತಿ ಬಂದಲ್ಲಿ ಜೆಡಿಎಸ್ ಬಿ ಟೀಂ ಎಂದು ಹೇಳಿ ತಪ್ಪು ಮಾಡಿದ್ದೇನೆ ಅಂತ ಅನಿಸುತ್ತಾ?
    ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಂಪೂರ್ಣ ಬಹುಮತ ಬರಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಾನೇ ಸಿಎಂ ಯಾರು ಏನಾದರು ಹೇಳಿಕೊಳ್ಳಲಿ.

    ಯತೀಂದ್ರ ಅವರನ್ನು ಯಾವಾಗ ಅಧಿಕಾರಕ್ಕೆ ತರಬೇಕು ಅಂತಾ ಅನ್ನಿಸಿತು?
    ನನ್ನ ಕ್ಷೇತ್ರವನ್ನು ರಾಕೇಶ್ ನೋಡಿಕೊಳ್ಳುತ್ತಿದ್ದ. ನಾನು ಹೆಚ್ಚು ಹೋಗುತ್ತಿರಲಿಲ್ಲ. ಅವನು ಸತ್ತು ಹೋದ ಮೇಲೆ ನನಗೆ ಹೋಗಲಿಕ್ಕೆ ಆಗುತ್ತಿರಲಿಲ್ಲ. ಹಾಗಾಗಿ ನೋಡಿಕೊಳ್ಳಪ್ಪ ಎಂದು ಯತೀಂದ್ರಗೆ ಹೇಳಿದೆ. ಮೊದಲ ಮಗ ರಾಕೇಶ್ ಇದ್ದಿದ್ದರೆ ನಾನು ಯೋಚನೆ ಮಾಡುವ ಹಾಗೆ ಇರುತ್ತಿರಲಿಲ್ಲ.

    ಲಿಂಗಾಯತ, ನಾಡ ಧ್ವಜ ವಿಚಾರ ಸಮಸ್ಯೆ ಸೃಷ್ಟಿ ಮಾಡಿತಾ?
    ಹಿರಿಯ ಪತ್ರಕರ್ತರು ಪಾಟಿಲ್ ಪುಟ್ಟಪ್ಪನವರು ನಾಡ ಧ್ವಜ ಬೇಕು ಎಂದು ಅರ್ಜಿ ಕೊಟ್ಟರು. ಅದಕ್ಕಾಗಿ ಒಂದು ಸಮಿತಿ ರಚನೆ ಮಾಡಿದೆವು. ಸಮಿತಿ ವರದಿ ಕೊಟ್ಟಿತು. ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆವು. ಇದು ನಾನಾಗೆ ಶಿಫಾರಸ್ಸು ಮಾಡಿದ್ದಲ್ಲ ಸುಮ್ಮನೆ ಆರೋಪ ಮಾಡುತ್ತಾರೆ. ಯಡಿಯೂರಪ್ಪ ಕಾಲದಲ್ಲೂ ಆಗಿದೆ ಇದು ಹೊಸದಲ್ಲ.

    ಜಾತಿ ಸಮೀಕ್ಷೆ ಇನ್ನೂ ಬಿಡುಗಡೆ ಅಗಿಲ್ಲ ಯಾಕೆ?
    ಇನ್ನು ಪೂರ್ಣ ಆಗಿಲ್ಲ. ಹಿಂದುಳಿದ ವರ್ಗದ ಆಯೋಗದಲ್ಲಿ ಸಾಂವಿಧಾನಿಕ ಸಾಧ್ಯತೆಗಳನ್ನು ನೋಡಬೇಕು. ಸುಪ್ರೀಂ ಆದೇಶ ನೋಡಬೇಕು. ಎಲ್ಲವನ್ನು ನೋಡಿ ವರದಿ ಕೊಡಿ ಎಂದು ಹೇಳಿದ್ದೇನೆ ನೋಡಬೇಕು.

    ಸಿದ್ದರಾಮಯ್ಯನವರು ಹಿಂದು ವಿರೋಧಿನಾ?
    ನಾನು ಹಿಂದು. ಜನರನ್ನು ಪ್ರೀತಿಸುತ್ತೇನೆ. ಯಾವುದೇ ಜಾತಿ ಮತಕ್ಕೆ ಸೇರಿರಲಿ.

    ಕಾಂಗ್ರೆಸ್ ಜೊತೆ ಹೊಂದಿಕೊಳ್ಳಲು ಕಷ್ಟ ಆಯ್ತಾ?
    ಕಾಂಗ್ರೆಸ್ ಅಲ್ಲಿ ಎಲ್ಲರೂ ಗೌರವ, ಪ್ರೀತಿಯಿಂದ ಕಂಡರು ಹೈಕಮಾಂಡ್ ಬೆಂಬಲ ನೀಡಿತು. ಹಾಗಾಗಿ ಕಷ್ಟ ಆಗಲಿಲ್ಲ.

    ಒಂದು ಬಾರಿ ಮುಖ್ಯಮಂತ್ರಿ ಆಗಿದ್ದೀರಿ ಇನ್ನೊಮ್ಮೆ ನಿಮ್ಮನ್ನೇ ಏನಕ್ಕೆ ಮಾಡಬೇಕು?
    ಒಳ್ಳೆ ಕೆಲಸ ಮಾಡುವವರನ್ನು ಮುಂದುವರೆಸುತ್ತಾರೆ.

    ದೇವರಾಜು ಅರಸು ಅವರನ್ನು ಹಿಂದುಳಿದೋರು, ದಲಿತ ವರ್ಗಗಳಿಗೆ ಹೋರಾಟ ಮಾಡಿದರು ಎಂದು ನೆನೆಪಿಸಿಕೊಳ್ಳುತ್ತಾರೆ. ನಿಮ್ಮನ್ನು?
    ಬಡವರು ಹೆಚ್ಚಿರುವುದು ಅಹಿಂದ ವರ್ಗದಲ್ಲಿ ಹಾಗಂತಾ ಬೇರೆ ವರ್ಗಗಳಲ್ಲಿ ಇಲ್ಲಾ ಅಂತ ಅಲ್ಲ. ಅವರಿಗಾಗಿ ಒಳ್ಳೆಯ ಉಪಯುಕ್ತ ಯೋಜನೆಗಳನ್ನು ಕೊಟ್ಟಿದ್ದೇನೆ.

    https://www.youtube.com/watch?v=_ypk54eV3Ig

  • ಖಾರದ ಪುಡಿ ಎರಚಿ, ಲಾಂಗ್ ಬೀಸಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೊಲೆಗೆ ಯತ್ನ

    ಖಾರದ ಪುಡಿ ಎರಚಿ, ಲಾಂಗ್ ಬೀಸಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೊಲೆಗೆ ಯತ್ನ

    ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಸಿನಿಮೀಯ ರೀತಿಯಲ್ಲಿ ಕಾಂಗ್ರೆಸ್ ನ ಪಾಲಿಕೆ ಸದಸ್ಯನ ಹತ್ಯೆಗೆ ಯತ್ನ ನಡೆದಿದೆ.

    ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಹಾನಗರ ಪಾಲಿಕೆಯ 8ನೇ ವಾರ್ಡ್ ಸದಸ್ಯ ಹಂದ್ರಾಳ ಸೀತಾರಾಮ ಅವರ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಹತ್ಯೆ ಮಾಡಲು ಯತ್ನಿಸಲಾಗಿದೆ. ಗುರುವಾರ ರಾತ್ರಿ 7 ಗಂಟೆಯ ವೇಳೆಗೆ ಬಳ್ಳಾರಿಯ ಹಂದ್ರಾಳದಲ್ಲಿನ ಸೀತಾರಾಮ ಮನೆಯ ಮುಂದೆಯೇ ಅವರ ಮೇಲೆ ಹನ್ನೊಂದು ಜನರು ಸೀನಿಮಯ ರೀತಿಯಲ್ಲಿ ದಾಳಿ ನಡೆಸಿ ಹತ್ಯೆಗೆ ಮುಂದಾಗಿದ್ದರು.

    ಆಂಧ್ರದ ಅನಂತಪುರ ಹಾಗೂ ತಾಡಪತ್ರಿಯಿಂದ ಬಂದಿದ್ದ ಹನ್ನೊಂದು ಜನ ಸುಪಾರಿ ಹಂತಕರು ಖಾರದಪುಡಿ ಎರಚಿ, ಲಾಂಗು ಮಚ್ಚುಗಳೊಂದಿಗೆ ಸೀತಾರಾಮ ಅವರ ಮೇಲೆ ದಾಳಿ ನಡೆಸಿದ್ರು.

    ಹತ್ಯೆ ಯತ್ನ ನಡೆಯುತ್ತಿದ್ದಂತೆ ಸೀತಾರಾಮ ಸುತ್ತ ಇದ್ದ ಸ್ಥಳೀಯರು ಮತ್ತು ಮನೆಯಲ್ಲಿದ್ದ ಬೆಂಬಲಿಗರು ಮರಳಿ ಅಟ್ಯಾಕ್ ಮಾಡಿ ಹತ್ಯೆಗೆ ಬಂದವರ ಮೇಲೆಯೇ ತಿರುಗಿಬಿದ್ದಿದ್ದಾರೆ. ಹತ್ಯೆಗೆ ಬಂದ ತಂಡದಲ್ಲಿನ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾಲಿಕೆ ಸದಸ್ಯನ ಹತ್ಯೆಗೆ ಅನಂತಪುರದ ಶಿವುಡು, ಪೆದ್ದಣ್ಣ, ರವಿ ಎನ್ನುವವರು ಸುಪಾರಿ ನೀಡಿದ್ದರು ಎಂದು ತಿಳಿದುಬಂದಿದೆ.

    ಆದ್ರೆ ಈ ಸುಪಾರಿ ಹತ್ಯೆ ಯತ್ನ ನಡೆದಿರುವುದು ಹಳೇ ದ್ವೇಷದಿಂದಲೋ ಅಥವಾ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿರುವುದರಿಂದಲೋ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ನಾನು ಟಿಕೆಟ್ ಆಕ್ಷಾಂಕಿಯಾಗಿದ್ದೆ, ಹಾಗಾಗೇ ಈ ಹತ್ಯೆ ಯತ್ನ ನಡದಿರಬಹುದು ಅಂತಾರೆ ಪಾಲಿಕೆ ಸದಸ್ಯ.

    ಘಟನೆಯ ಕುರಿತು ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೋದಿಯಂತೆ ಭಾಷಣ ಮಾಡಲು ನನಗೆ ಹಲವು ವರ್ಷಗಳು ಬೇಕು: ರಾಹುಲ್ ಗಾಂಧಿ

    ಮೋದಿಯಂತೆ ಭಾಷಣ ಮಾಡಲು ನನಗೆ ಹಲವು ವರ್ಷಗಳು ಬೇಕು: ರಾಹುಲ್ ಗಾಂಧಿ

    ಸೂರತ್: ಪ್ರಧಾನಿ ನರೇಂದ್ರ ಮೋದಿ ಅವರಂತೆ ಭಾಷಣ ಮಾಡಲು ನನಗೆ ಹಲವು ವರ್ಷಗಳು ಬೇಕು. ಆದರೆ ಮೋದಿಗೆ ಭಾಷಣ ಮಾತ್ರ ಬರುತ್ತದೆ ಹೊರತು ಜನರ ಸಮಸ್ಯೆ ಬಗೆಹರಿಸಲು ಬರುವುದಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

    ಸೂರತ್ ನಲ್ಲಿ ನಡೆದ ಉದ್ಯಮ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಚೆನ್ನಾಗಿ ಭಾಷಣ ಮಾತ್ರ ಮಾಡುತ್ತಾರೆ. ಆದರೆ ಅವರು ನಿಮ್ಮ ಮಾತುಗಳನ್ನು ಕೇಳುವುದಿಲ್ಲ. ನಾವು ನಿಮ್ಮ ಮಾತುಗಳನ್ನು ಕೇಳಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇವೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಎಂದರು.

    ನೀವು ಸಮಸ್ಯೆಗಳನ್ನು ಬರೆದುಕೊಟ್ಟರೆ ಅದಕ್ಕೆ ನಾವು ಗಮನ ನೀಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.

     

  • ಮತಗಟ್ಟೆ ಬಳಿ ಕಾಂಗ್ರೆಸ್, ವರ್ತೂರ್ ಪ್ರಕಾಶ್ ಬೆಂಬಲಿಗರಿಂದ ಲಾಂಗು-ಮಚ್ಚು ಪ್ರದರ್ಶನ ಪ್ರಕರಣ: ಕೇಸ್ ಖುಲಾಸೆ

    ಮತಗಟ್ಟೆ ಬಳಿ ಕಾಂಗ್ರೆಸ್, ವರ್ತೂರ್ ಪ್ರಕಾಶ್ ಬೆಂಬಲಿಗರಿಂದ ಲಾಂಗು-ಮಚ್ಚು ಪ್ರದರ್ಶನ ಪ್ರಕರಣ: ಕೇಸ್ ಖುಲಾಸೆ

    ಕೋಲಾರ: 2013ರ ವಿಧಾನಸಭಾ ಚುನಾವಣೆ ವೇಳೆ ಮತಗಟ್ಟೆ ಬಳಿ ಕೋಲಾರ ನಗರದಲ್ಲಿ ಲಾಂಗು ಮಚ್ಚು ಪ್ರದರ್ಶಿಸಿದ ಪ್ರಕರಣವನ್ನ ಖುಲಾಸೆಗೊಳಿಸಿ 1ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

    2013ರ ಮೇ 5ರಂದು ವಿಧಾನಸಭಾ ಚುನಾವಣೆ ವೇಳೆ ಕೋಲಾರದ ಜೂನಿಯರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ವರ್ತೂರ್ ಪ್ರಕಾಶ್ ಬೆಂಬಲಿಗರಿಂದ ಲಾಂಗು, ಮಚ್ಚು ಪ್ರದರ್ಶನ ನಡೆದಿತ್ತು. ಈ ವೇಳೆ ನಗರಸಭಾ ಸದಸ್ಯ ಪ್ರಸಾದ್ ಬಾಬು ಸೇರಿದಂತೆ ಐದು ಜನರ ವಿರುದ್ಧ ಅಂದಿನ ನಗರಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ರು.

    ಪ್ರಕರಣವನ್ನ ಕೈಗೆತ್ತಿಕೊಂಡ ಕೋಲಾರದ 1ನೇ ಜಿಲ್ಲಾ ಸತ್ರ ಮತ್ತು ಹೆಚ್ಚುವರಿ ನ್ಯಾಯಾಲಯದ ಎದುರು ಸಾಕ್ಷ್ಯಾಧಾರಗಳನ್ನ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕೇಸ್ ಖುಲಾಸೆಗೊಳಿಸಿದೆ. ಅಂದು ಯಾವುದೇ ಗಲಾಟೆ ನಡೆದಿಲ್ಲ. ಅದೊಂದು ರಾಜಕೀಯ ಪ್ರೇರಿತ ಗಲಾಟೆ ಎಂದು ಆರೋಪಿತರ ಪರ ಹಿರಿಯ ವಕೀಲ ಮೊಹಮ್ಮದ್ ಹನೀಫ್ ಅವರು ವಾದ ಮಂಡಿಸಿದರು.

    ಪೊಲೀಸರು, ಪ್ರತ್ಯಕ್ಷದರ್ಶಿಗಳು ಸೇರಿದಂತೆ 16 ಸಾಕ್ಷ್ಯಾಧಾರವನ್ನ ಪರಿಗಣಿಸಿದ ನ್ಯಾಯಾಧೀಶ ಎನ್‍ವಿ ವಿಜಯ್ ಅವರು ಮೂರು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಪ್ರಕರಣವನ್ನ ಖುಲಾಸೆಗೊಳಿಸಿದ್ದಾರೆ.

    https://youtu.be/AlaHyfaY038

  • ತವರು ಕ್ಷೇತ್ರಕ್ಕೆ ಬರ್ತಿದ್ದಾರೆ ಸಿದ್ದು – ನೇರ ಎದುರಾಳಿಗಳಾಗ್ತಿದ್ದಾರೆ `ಗುಡ್ ಓಲ್ಡ್ ಫ್ರೆಂಡ್ಸ್’…!

    ತವರು ಕ್ಷೇತ್ರಕ್ಕೆ ಬರ್ತಿದ್ದಾರೆ ಸಿದ್ದು – ನೇರ ಎದುರಾಳಿಗಳಾಗ್ತಿದ್ದಾರೆ `ಗುಡ್ ಓಲ್ಡ್ ಫ್ರೆಂಡ್ಸ್’…!

    ಕೆ.ಪಿ.ನಾಗರಾಜ್
    ಮೈಸೂರು: ರಾಜ್ಯ ರಾಜಕೀಯದಲ್ಲಿ ನೂರಾರು ಉಪಚುನಾವಣೆಗಳು ನಡೆದಿವೆ. ಆಯಾ ಆಯಾ ಜಿಲ್ಲೆ ಮಟ್ಟಿಗೆ ಮತ್ತು ಆ ದಿನಗಳ ಮಟ್ಟಿಗೆ ಮಾತ್ರ ಉಪ ಚುನಾವಣೆಗಳು ದೊಡ್ಡ ಸದ್ದು ಮಾಡಿವೆ. ಆದರೆ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಷ್ಟು ದೊಡ್ಡ ಸದ್ದು, ಗದ್ದಲ, ರೋಚಕತೆ ಸೃಷ್ಟಿಸಿದ ಉಪ ಚುನಾವಣೆ ನಡೆದಿಲ್ಲ. ಅಷ್ಟರ ಮಟ್ಟಿಗೆ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ರಾಜ್ಯ ರಾಜಕೀಯದಲ್ಲಿ ಆ ಕಾಲಕ್ಕೆ ಸಂಚಲನವನ್ನೇ ಸೃಷ್ಟಿಸಿತ್ತು. ಇದಕ್ಕೆಲ್ಲ ಕಾರಣವಾಗಿದ್ದು ಇವತ್ತಿನ ಸಿಎಂ ಸಿದ್ದರಾಮಯ್ಯ.!.

    ಜೆಡಿಎಸ್ ತೊರೆದು ಹೊರ ಬಂದು ಉಪ ಚುನಾವಣೆ ಎದುರಿಸಿದ್ದ ಸಿದ್ದರಾಮಯ್ಯಗೆ ಆ ಚುನಾವಣೆ ಇಡೀ ಜೀವನದ ದೊಡ್ಡ ಅಗ್ನಿಪರೀಕ್ಷೆ. ಅವತ್ತು, ಚಾಮುಂಡೇಶ್ವರಿ ಕ್ಷೇತ್ರದ ಮತದಾರ ಅವರನ್ನು ಕೈ ಹಿಡಿಯದೆ ಇದ್ದಿದ್ದರೆ ಸಿದ್ದರಾಮಯ್ಯ ರಾಜಕೀಯ ಜೀವನಕ್ಕೆ ಎಂಥಹ ಪೆಟ್ಟು ಬೀಳುತ್ತಿತ್ತು ಎಂಬುದು ಊಹೆಗೆ ಸಿಗುವುದಿಲ್ಲ. ಹೀಗೆ, ಜೀವದಾನ ಕೊಟ್ಟಂತಹ ಕ್ಷೇತ್ರವನ್ನು ಸಿದ್ದರಾಮಯ್ಯ ಕ್ಷೇತ್ರ ಪುನರ್ ವಿಂಗಡಣೆಯ ತರುವಾಯ ಬಿಟ್ಟು ಹೊಸದಾಗಿ ಸೃಷ್ಟಿಯಾದ ವರುಣಾ ಕ್ಷೇತ್ರಕ್ಕೆ ಜಿಗಿದರು.

    5 ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿ ಎರಡು ಬಾರಿ ಸೋಲು ಕಂಡಿದ್ದ ಕ್ಷೇತ್ರವನ್ನು ತೊರೆದು ವರುಣಾ ಕ್ಷೇತ್ರಕ್ಕೆ ಹೋದ ಸಿದ್ದರಾಮಯ್ಯ ಅಲ್ಲೂ ಎರಡು ಬಾರಿ ಗೆದ್ದಿದ್ದಾರೆ. ಈಗ, ಸಿದ್ದರಾಮಯ್ಯ ಮತ್ತೆ ತಮ್ಮ ತವರು ಕ್ಷೇತ್ರವಾದ ಚಾಮುಂಡೇಶ್ವರಿಗೆ ಬರಲು ಮುಂದಾಗಿದ್ದಾರೆ. ತಮ್ಮ ಪಾಲಿಗೆ ಬಹಳ ಸೇಫ್ ಆಗಿರುವ ವರುಣಾ ಕ್ಷೇತ್ರವನ್ನು ಮಗ ಡಾ.ಯತೀಂದ್ರ ಅವರಿಗೆ ಬಿಟ್ಟು ತಾವು ಪುನಃ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರಲು ಪ್ಲಾನ್ ಮಾಡುತ್ತಿದ್ದಾರೆ. ಅಲ್ಲದೆ, ಈ ವಿಚಾರವನ್ನು ಅವರೇ ಎಲ್ಲಾ ಕಡೆ ಹೇಳುತ್ತಿದ್ದಾರೆ. ಅಲ್ಲಿಗೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವರ್ಸಸ್ ಜಿ.ಟಿ. ದೇವೇಗೌಡ ಅನ್ನೋದು ಫಿಕ್ಸ್ ಆದಂತೆ ಕಾಣುತ್ತಿದೆ.

    ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡ ಇಬ್ಬರು 1983ರಿಂದ ಜೊತೆಯಾಗಿದ್ದವರು. 2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ಜಿಟಿಡಿ ಜೆಡಿಎಸ್ ನಲ್ಲೇ ಉಳಿದಿದ್ದರು. ಹುಣಸೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಜಿ.ಟಿ. ದೇವೇಗೌಡ, ಬಿಜೆಪಿಯಿಂದ ಅಲ್ಲಿ ಸ್ಪರ್ಧಿಸಿ ಸೋಲು ಕಂಡ ಮೇಲೆ ಕಳೆದ ಚುನಾವಣೆ ವೇಳೆ ಮತ್ತೆ ಜೆಡಿಎಸ್‍ಗೆ ಬಂದು ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇಡೀ ಕ್ಷೇತ್ರವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವಲ್ಲಿ ಜಿಟಿಡಿ ಯಶಸ್ವಿಯಾಗಿದ್ದಾರೆ. ಈ ಆತ್ಮವಿಶ್ವಾಸ ಇರುವ ಕಾರಣಕ್ಕೆ ತಮ್ಮ ವಿರುದ್ಧ ಸಿಎಂ ಸ್ಪರ್ಧಿಸಿದರೂ ನನಗೆ ಭಯವಿಲ್ಲ. ಅವರಿಗೆ ಸ್ವಾಗತ ಕೋರುತ್ತೇನೆ ಅಂತಾ ಸಿಎಂ ಎದುರೇ ಸಾರ್ವಜನಿಕವಾಗಿ ಹೇಳಿದ್ದಾರೆ.

    ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದೆ. ನಂತರದ ಸ್ಥಾನದಲ್ಲಿ ಕುರುಬರು, ನಾಯಕರು, ಲಿಂಗಾಯತರು, ದಲಿತರು ಹಾಗೂ ಇತರೆ ಹಿಂದುಳಿದ ವರ್ಗದವರು ಇದ್ದಾರೆ. ಜಾತಿ ಸಮೀಕರಣ ನೋಡಿದರೆ ಸಿಎಂಗೆ ಚಾಮುಂಡೇಶ್ವರಿ ಕ್ಷೇತ್ರಕ್ಕಿಂತಾ ವರುಣಾ ಕ್ಷೇತ್ರ ಬಹಳ ಸೇಫ್. ಜೊತೆಗೆ, ವರುಣಾ ಕ್ಷೇತ್ರದಲ್ಲಿ ಸಿಎಂಗೆ ಪೈಪೋಟಿ ಕೊಡುವಂತಹ ಅಭ್ಯರ್ಥಿಗಳು ಯಾವುದೇ ಪಕ್ಷದಲ್ಲೂ ಇಲ್ಲ. ಆದರೂ, ಮಗನ ರಾಜಕೀಯ ಹಿತದೃಷ್ಟಿಯಿಂದ ವರುಣಾವನ್ನು ಮಗನಿಗೆ ಬಿಟ್ಟುಕೊಟ್ಟು ತವರು ಕ್ಷೇತ್ರಕ್ಕೆ ಮರಳಿ ತಮ್ಮ ಚುನಾವಣಾ ರಾಜಕೀಯದ ಕೊನೆ ಆಟ ಆಡಲಿದ್ದಾರೆ.

    ಸಿದ್ದರಾಮಯ್ಯ ಪಾಲಿಗೆ ಚಾಮುಂಡೇಶ್ವರಿ ಕ್ಷೇತ್ರ ರಾಜಕೀಯ ಹುಟ್ಟು ಮತ್ತು ರಾಜಕೀಯದ ಪುನರ್ಜನ್ಮ ನೀಡಿದ ಕ್ಷೇತ್ರ. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಚಾಮುಂಡೇಶ್ವರಿ ಕ್ಷೇತ್ರ ಮೊದಲಿನಂತೆ ಸಿದ್ದರಾಮಯ್ಯ ಪಾಲಿಗೆ ಸಾಲೀಸಾಗಿ ಇಲ್ಲ. ಇದು ಅವರಿಗೂ ಕೂಡ ಗೊತ್ತಿದೆ. ಸಿಎಂ ಆಗಿ ಕ್ಷೇತ್ರಕ್ಕೆ ಮಾಡಿದ ಕೆಲಸ, ಇಲ್ಲೇ ಚುನಾವಣೆ ರಾಜಕೀಯ ಶುರುವಾಗಿದ್ದು, ಇಲ್ಲೇ ಗೆಲುವಿನೊಂದಿಗೆ ಚುನಾವಣಾ ರಾಜಕೀಯ ಮುಗಿಸೋದು ನನ್ನ ಆಸೆ ಅನ್ನೋ ಸೆಂಟಿಮೆಂಟ್ ಮಾತು ವರ್ಕ್ ಆಗುತ್ತೆ ಅನ್ನೋದು ಸಿಎಂ ನಂಬಿಕೆ.

    ಇನ್ನು ಜಿ.ಟಿ.ದೇವೇಗೌಡ ಕೂಡ, ನಾನು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಒಕ್ಕಲಿಗರು, ನಾಯಕರು, ಲಿಂಗಾಯತರ ಬೆಂಬಲ ಸಿಗುತ್ತೆ. ಅಲ್ಲದೆ, ಕಾಂಗ್ರೆಸ್ ಒಳಗಿನ ಸಿದ್ದರಾಮಯ್ಯ ವಿರೋಧಿ ಅಲೆಯ ಲಾಭ ಕೂಡ ಆಗುತ್ತೆ. ಸಿದ್ದರಾಮಯ್ಯ ಸೋಲಲೇ ಬೇಕು ಅಂತಾ ಕಮಲ ಪಾಳಯದ ಬೆಂಬಲವೂ ಸಿಗುತ್ತೆ. ಇದರಿಂದ ನನ್ನ ಗೆಲವು ಇನ್ನೂ ಸುಲಭ ಅನ್ನೋ ವಿಶ್ವಾಸದಲ್ಲಿದ್ದಾರೆ. ಯಾರ ವಿಶ್ವಾಸ, ಲೆಕ್ಕಾಚಾರ ಏನೇ ಆಗಿರಲಿ. 2018 ಚುನಾವಣೆಯ ಸ್ಟಾರ್ ಕ್ಷೇತ್ರಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಮೊದಲನೆಯದಂತೂ ಆಗುತ್ತದೆ ಎನ್ನುವುದು ಸುಳ್ಳಲ್ಲ.

  • ಕಮ್ಯುನಿಸ್ಟ್ ವಾದಿ ವೇಣುಗೋಪಾಲ್ ವಿಚಾರಧಾರೆ ರಾಜ್ಯದಲ್ಲಿ ತುಂಬಲು ಬಿಡಲ್ಲ: ಎಬಿವಿಪಿ ಎಚ್ಚರಿಕೆ

    ಕಮ್ಯುನಿಸ್ಟ್ ವಾದಿ ವೇಣುಗೋಪಾಲ್ ವಿಚಾರಧಾರೆ ರಾಜ್ಯದಲ್ಲಿ ತುಂಬಲು ಬಿಡಲ್ಲ: ಎಬಿವಿಪಿ ಎಚ್ಚರಿಕೆ

    ಬೆಂಗಳೂರು: ಎಬಿವಿಪಿ, ಆರ್‍ಎಸ್‍ಎಸ್ ವಿಚಾರಧಾರೆಗಳಿಂದ ಪ್ರೇರಿತವಾಗಿದೆ. ಧೈರ್ಯ ಇದ್ರೆ ನಮ್ಮ ಸಂಘಟನೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮುಟ್ಟಲಿ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಸವಾಲು ಎಸೆದಿದ್ದಾರೆ.

    ವೇಣುಗೋಪಾಲ್ ಅವರು ಆರ್‍ಎಸ್‍ಎಸ್, ಎಬಿವಿಪಿ ವಿದ್ಯಾರ್ಥಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಕಾಲೇಜುಗಳ ಪಟ್ಟಿಯನ್ನು ನೀಡುವಂತೆ ಕಾರ್ಯಕರ್ತರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ವೇಣುಗೋಪಾಲ್ ಕಮ್ಯುನಿಸ್ಟ್ ವಾದಿಯಾಗಿದ್ದು,  ಅವರ ವಿಚಾರಧಾರೆ ರಾಜ್ಯದಲ್ಲಿ ತುಂಬಲು ನಾವು ಬಿಡುವುದಿಲ್ಲ. ಯಾರೋ ಯಾಕೆ ಲಿಸ್ಟ್ ಕೊಡಬೇಕು. ವೇಣುಗೋಪಾಲ್ ಎಬಿವಿಪಿ ಕಚೇರಿಗೆ ಬರಲಿ ನಾವೇ ಪಟ್ಟಿ ನೀಡುತ್ತೇವೆ ಎಂದು ಹೇಳಿದರು.

    ವೇಣುಗೋಪಾಲ್ ಅವರ ಅವರ ಧಮ್ಕಿ ಏನೇ ಇದ್ದರೂ ಕೇರಳದಲ್ಲಿ ಇರಲಿ. ರಾಜ್ಯದಲ್ಲಿ ಹಿಂಸಾತ್ಮಕ ಕೃತ್ಯ ಮಾಡಲು ಕಾಂಗ್ರೆಸ್ ಸಂಚು ರೂಪಿಸಿದ್ದು ಇದಕ್ಕೆ ಎಬಿವಿಪಿ ಹೆದರಲ್ಲ ಎಂದು ವಿನಯ್ ಬಿದರೆ ಖಡಕ್ ಎಚ್ಚರಿಕೆ ನೀಡಿದರು.

    ಇದನ್ನೂ ಓದಿ: ಆರ್‍ಎಸ್‍ಎಸ್, ಎಬಿವಿಪಿ ಪರ ಇರೋ ಕಾಲೇಜುಗಳ ಪಟ್ಟಿ ಕೊಡಿ: ವೇಣುಗೋಪಾಲ್

     

  • ಪಠಾಣ್‍ಕೋಟ್ ಹುತಾತ್ಮ ಯೋಧ ನಿರಂಜನ್‍ಗೆ ರಾಜ್ಯ ಸರ್ಕಾರದಿಂದ ಅವಮಾನ

    ಪಠಾಣ್‍ಕೋಟ್ ಹುತಾತ್ಮ ಯೋಧ ನಿರಂಜನ್‍ಗೆ ರಾಜ್ಯ ಸರ್ಕಾರದಿಂದ ಅವಮಾನ

    ಬೆಂಗಳೂರು: ಕರುನಾಡ ಮಣ್ಣಿನ ವೀರ ಯೋಧ ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಸಮಾಧಿಯಲ್ಲೂ ರಾಜಕೀಯದಾಟ, ರಸ್ತೆಗೆ ಯೋಧನ ಹೆಸರಿಡಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರೇ ಅಡ್ಡ, ಬೆಂಗಳೂರಿನ ವೀರ ಯೋಧನಿಗೆ ಕನ್ನಡ ಮಣ್ಣಿನಲ್ಲೇ ಅವಮಾನ.

    ಹೌದು. ಪಂಜಾಬಿನಲ್ಲಿರುವ ವಾಯುನೆಲೆ ಪಠಾಣ್ ಕೋಟ್‍ನಲ್ಲಿ ಲೆಫ್ಟಿನೆಂಟ್ ನಿರಂಜನ್ ಎದೆಯುಬ್ಬಿಸಿ ಉಗ್ರರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ್ದರು. ಕನ್ನಡ ಮಣ್ಣಿನ ಯೋಧ, ನಮ್ಮ ಬೆಂಗಳೂರಿನ ಹೆಮ್ಮೆಯ ನಿರಂಜನ್ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟರು.

    ಆದರೆ ನಮ್ಮ ನೀಚ ರಾಜಕೀಯ ವ್ಯವಸ್ಥೆ ನಿರಂಜನ್ ಹೆಸರನ್ನು ರಸ್ತೆಗೆ ಇಡುವುದಕ್ಕೆ ರಾಜಕೀಯದಾಟ ಆಡುತ್ತಿದೆ. ದೊಡ್ಡ ಬೊಮ್ಮಸಂದ್ರ ಹೆಬ್ಬಾಗಿಲಿನಿಂದ ವಿದ್ಯಾರಣ್ಯಪುರದ ನಂಜಪ್ಪ ವೃತ್ತದವರೆಗಿನ ಮುಖ್ಯರಸ್ತೆಗೆ ನಿರಂಜನ್ ಹೆಸರು ಇಡೋದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ರು. ಅಂತಿಮ ತೀರ್ಮಾನವೂ ಆಗಿತ್ತು.

    ಈ ಮಧ್ಯೆ ಇದಕ್ಕಿದ್ದ ಹಾಗೆ ಕೃಷಿ ಸಚಿವ ಕೃಷ್ಣಬೈರೇಗೌಡರು ಯೋಧನ ಹೆಸರು ಬೇಡ, ಸ್ವಾತಂತ್ರ್ಯ ಹೋರಾಟಗಾರ ಪೇಟಾ ಸಿದ್ದಪ್ಪನ ಹೆಸರು ಇಡಿ ಎಂದು ಬಿಬಿಎಂಪಿಗೆ ಆದೇಶ ಕೊಟ್ಟು ಪತ್ರ ಬರೆದಿದ್ದಾರೆ. ಅಸಲಿಗೆ ಈ ಹೆಸರಿನ ಸ್ವಾತಂತ್ರ್ಯ ಹೋರಾಟಗಾರರು ಯಾರು ಇಲ್ಲ ಎಂದು ದೊರೆಸ್ವಾಮಿಯೇ ಹೇಳಿದ್ದಾರಂತೆ. ಆದ್ರೆ ಮಿನಿಸ್ಟರ್ ಮಾತನ್ನು ಪಾಲಿಸೋದಕ್ಕೆ ಮೇಯರ್ ಅವರು ಮುಂದಾಗುತ್ತಿದ್ದಾರೆ ಎಂದು ನಿರಂಜನ್ ಸ್ನೇಹಿತ ಶಶಾಂಕ್ ಹೇಳಿದ್ದಾರೆ.

    ಶೌರ್ಯ ಚಕ್ರ ಪ್ರಶಸ್ತಿ ವಾಪಾಸ್:
    ಹರ್ಯಾಣ ಸರ್ಕಾರ ನಿರಂಜನ್ ಅವರ ಹೆಸರಿನಲ್ಲಿ ಆಡಿಟೋರಿಯಂ ಸ್ಥಾಪನೆ ಮಾಡಿದೆ. ಆದರೆ ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಚಿವರಿಗೆ ನಿಜಕ್ಕೂ ಮಾನ ಮರ್ಯಾದೆ ಇಲ್ಲ, ನಿರಂಜನ್ ಹೆತ್ತವರು ಈ ಬೆಳವಣಿಗೆ ನೋಡಿ ಕಣ್ಣೀರಿಡುತ್ತಿದ್ದಾರೆ. ಕೇಂದ್ರ ಸರ್ಕಾರ ನಿರಂಜನ್‍ಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿದೆ. ಆದ್ರೇ ನಮ್ಗೆ ಈಗ ಬೇಸರವಾಗಿದೆ, ಇದನ್ನು ವಾಪಾಸ್ ಮಾಡುವ ಬಗ್ಗೆಯೂ ಯೋಚನೆ ಮಾಡುತ್ತೇವೆ ಅಂತಾ ಶಶಾಂಕ್ ಹೇಳಿದ್ದಾರೆ.

    ನಿರಂಜನ್ ಯಾರು?
    2016ರ ಜನವರಿ 1 ಮತ್ತು 2ರ ನಡುರಾತ್ರಿಯಲ್ಲಿ ಉಗ್ರರು ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದಾಗ, ಎನ್‍ಎಸ್‍ಜಿ ಯೋಧರನ್ನು ಅಲ್ಲಿಗೆ ಕಳುಹಿಸಲಾಯಿತು. ಎನ್‍ಎಸ್‍ಜಿ ತಂಡದಲ್ಲಿ ಕರ್ನಾಟಕದ ನಿರಂಜನ್ ಅವರೂ ಇದ್ದರು. ದಾಳಿ ಎಸಗಿದ್ದ ಉಗ್ರನ ಬಳಿಯಿದ್ದ ಗ್ರೆನೇಡ್ ನಿಷ್ಕ್ರಿಯಗೊಳಿಸಲು ನಿರಂಜನ್ ಮುಂದಾಗಿದ್ದ ವೇಳೆ ಅದು ಸ್ಫೋಟಗೊಂಡಿತ್ತು. ಗ್ರೆನೇಡ್ ಸ್ಫೋಟದಿಂದಾಗಿ ಅವರ ಶ್ವಾಸಕೋಶಗಳು ಒಡೆದಿದ್ದವು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ನಿರಂಜನ್ ಹುತಾತ್ಮರಾಗಿದ್ದರು. ನಿರಂಜನ್ ಅವರು ಅಮೆರಿಕದ ಎಫ್‍ಬಿಐನಿಂದ ತರಬೇತಿ ಪಡೆದಿದ್ದರು. ಪಾಲಕ್ಕಾಡ್ ಜಿಲ್ಲೆಯ ಮುನ್ನರಾರ್ ಕಾಡ್ ಮೂಲದ ನಿರಂಜನ್, ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲೇ. 40 ವರ್ಷದ ಹಿಂದೆಯೇ ಅವರ ಕುಟುಂಬವು ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿತ್ತು.

     

     

     

  • ಕಾಂಗ್ರೆಸ್ ಮುಕ್ತ ಅನ್ನೋ ಬಿಜೆಪಿ ಸಂಸದರಿಂದ ಕೈಗೆ ಮತ!

    ಕಾಂಗ್ರೆಸ್ ಮುಕ್ತ ಅನ್ನೋ ಬಿಜೆಪಿ ಸಂಸದರಿಂದ ಕೈಗೆ ಮತ!

    – ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕೈ ಅಭ್ಯರ್ಥಿಗೆ ಶ್ರೀರಾಮುಲು ಮತ

    ಬಳ್ಳಾರಿ: ಕಾಂಗ್ರೆಸ್ ಮುಕ್ತ ಕರ್ನಾಟಕವೇ ನಮ್ಮ ಮುಂದಿನ ಗುರಿ. ಹೀಗಂತ ಬಿಜೆಪಿ ನಾಯಕರು ಕಂಡ ಕಂಡ ಸಭೆಗಳಲ್ಲಿ ಬೊಬ್ಬೆ ಹಾಕಿ ಭಾಷಣ ಮಾಡ್ತಾರೆ. ಆದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಸಂಸದರು ಮತ ಹಾಕಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೆಂಕಟರಮಣ ಪರವಾಗಿ ಸಂಸದ ಶ್ರೀರಾಮುಲು ಹಾಗೂ ನಾಲ್ಕು ಬಿಜೆಪಿ ಸದಸ್ಯರು ಮತ ಚಲಾವಣೆ ಮಾಡಿದ್ದಾರೆ.

    ಮೇಯರ್, ಉಪಮೇಯರ್ ಸ್ಥಾನಕ್ಕೆ ಬಹುಮತ ಹೊಂದಿರುವ ಕಾಂಗ್ರೆಸ್ಸಿನ ಎರಡು ಗುಂಪುಗಳ ಮಧ್ಯೆ  ಪೈಪೋಟಿ ಎರ್ಪಟಿತ್ತು. ಸಚಿವ ಸಂತೋಷ ಲಾಡ್ ಗುಂಪಿನ ಪರವಾಗಿ ಮೇಯರ್ ಸ್ಥಾನಕ್ಕೆ ವೆಂಕಟರಮಣ, ಉಪಮೇಯರ್ ಸ್ಥಾನಕ್ಕೆ ಉಮಾದೇವಿ ಸ್ಪರ್ಧೆ ನಡೆಸಿದ್ದರು.

    ಮಾಜಿ ಸಚಿವ ದಿವಾಕರಬಾಬು ಗುಂಪಿನಿಂದ ಗಾಜಲು ಶ್ರೀನಿವಾಸ ಹಾಗೂ ಲಕ್ಷ್ಮಿ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಪಕ್ಷದಿಂದ ಮೇಯರ್ ಸ್ಥಾನಕ್ಕೆ ವೆಂಕಟರಮಣ ಪರವಾಗಿ, ಉಪಮೇಯರ್‍ಗೆ ಲಕ್ಷ್ಮಿ ಪರವಾಗಿ ಮತ ಹಾಕುವಂತೆ ವಿಪ್ ಜಾರಿ ಮಾಡಲಾಗಿತ್ತು.

    ದಿವಾಕರ ಬಾಬು ಗುಂಪಿನ ಸದಸ್ಯರು ವಿಪ್ ಸ್ವೀಕರಿಸಿದ್ರೆ. ಸಚಿವ ಸಂತೋಷ ಲಾಡ್ ಗುಂಪಿನ ಸದಸ್ಯರು ವಿಪ್ ಸ್ವೀಕರಿಸದೆ ಚುನಾವಣೆಗೆ ಹಾಜರಾದರು. ಹೀಗಾಗಿ ದಿವಾಕರ ಬಾಬು ಗುಂಪಿನ 16 ಸದಸ್ಯರು ಚುನಾವಣೆಯಿಂದ ದೂರ ಉಳಿದರು. ಇದರಿಂದ ಕೆಲ ಕಾಲ ಪಾಲಿಕೆ ಆವರಣದಲ್ಲಿ ಹೈಡ್ರಾಮಾ ಸಹ ನಡೆಯಿತು.

    ಕೊನೆಗೆ ವೆಂಕಟರಮಣ 24 ಮತ ಪಡೆದು ಮೇಯರ್ ಆದ್ರೆ, ಉಮಾದೇವಿ 20 ಮತಗಳನ್ನು ಪಡೆದು ಉಪ ಮೇಯರ್ ಆಗಿ ಆಯ್ಕೆಯಾದರು. ಚುನಾವಣೆ ನಂತರ ಮಾತನಾಡಿದ ಸಂಸದ ಶ್ರೀರಾಮುಲು, ನಾನು ಬಳ್ಳಾರಿ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಿದ್ದೇನೆಂದು ಸಮಜಾಯಿಸಿ ನೀಡಿದರು.

  • ಅಂಗನವಾಡಿ ಕಾರ್ಯಕರ್ತೆಯರಿಗೆ 7 ಸಾವಿರ ಸಂಬಳ: ಯಾರ ಪಾಲು ಎಷ್ಟು? ಬೇರೆ ರಾಜ್ಯದಲ್ಲಿ ಎಷ್ಟಿದೆ?

    ಅಂಗನವಾಡಿ ಕಾರ್ಯಕರ್ತೆಯರಿಗೆ 7 ಸಾವಿರ ಸಂಬಳ: ಯಾರ ಪಾಲು ಎಷ್ಟು? ಬೇರೆ ರಾಜ್ಯದಲ್ಲಿ ಎಷ್ಟಿದೆ?

    ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಸಂಬಳ ಏರಿಕೆಗೆ ಆಗ್ರಹಿಸಿ ಬೀದಿಯಲ್ಲಿ ನಿಂತು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೆ, ಸರ್ಕಾರ ಸಮಸ್ಯೆಯನ್ನು ಬಗೆ ಹರಿಸುವ ಬದಲು ಕೇಂದ್ರ ಸರ್ಕಾರ ಅನುದಾನ ಕೊಡುತ್ತಿಲ್ಲ ಎನ್ನುವ ವಾದವನ್ನು ಮುಂದಿಟ್ಟಿದೆ.

    ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ನಿಯಮ 69ರ ಅಡಿ ಚರ್ಚೆ ಆರಂಭವಾಯಿತು. ಪ್ರತಿಪಕ್ಷದ ನಾಯಕರು ಸರ್ಕಾರ ನಡೆಯನ್ನು ಟೀಕಿಸಿ ವಾಗ್ದಾಳಿ ನಡೆಸಿದರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತನಾಡಿ ಯುಪಿಎ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಶೇ.90ರಷ್ಟು, ರಾಜ್ಯ ಸರ್ಕಾರ ಶೇ.10 ಗೌರವ ಧನ ಕೊಡುತಿತ್ತು. ಆದರೆ ಕೇಂದ್ರ ಸರ್ಕಾರ ಈಗ ಶೇ. 60, ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 5,200 ರೂ. ಸಹಾಯಧನ ಕೊಡ್ತಿದ್ರೆ, ಕೇಂದ್ರ ಸರ್ಕಾರದ ಪಾಲು 1,800 ರೂ. ಮಾತ್ರ. ಇದರಿಂದಾಗಿ ಒಟ್ಟು 7000 ರೂ ಸಂಬಳ ಸಿಗುತ್ತಿದೆ ಎಂದು ಕೇಂದ್ರದ ವಿರುದ್ಧ ಸಚಿವೆ ಉಮಾಶ್ರೀ ಅಸಮಾಧಾನ ವ್ಯಕ್ತಪಡಿಸಿದರು.

    ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದಿರಾಗಾಂಧಿ ಕಾಲದಲ್ಲಿ ಗೌರವ ಧನ ಕೊಡಲು ಆರಂಭವಾಗಿದ್ದು, ಅಂದಿನಿಂದಲೂ ಕೇಂದ್ರ ಸರ್ಕಾರ ಶೇ.90 ರಷ್ಟು ಗೌರವಧನ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಪಾಲು ಕಡಿತಗೊಳಿಸಿದ ಕಾರಣ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ. ಪ್ರತಿ ವರ್ಷ ನಾವು 500 ರೂ ಹೆಚ್ಚಳ ಮಾಡಿದ್ದೇವೆ. ಆದ್ರೆ 2016-17ರಲ್ಲಿ ಹೆಚ್ಚಳ ಮಾಡಿಲ್ಲ, ಅದು ಕೇಂದ್ರ ಸರ್ಕಾರದ ಕ್ರಮದಿಂದ ಆಗಿಲ್ಲ. ಬರೀ ಮಾತನಾಡಬಹುದು, ಕಾಳಜಿ ತೋರಿಸಬಹುದು.ಆದ್ರೆ ಕೇಂದ್ರ ಸರ್ಕಾರ ಪಾಲು ಕಡಿಮೆ ಮಾಡಿದ್ದು ಯಾಕೆ? ಇದು ಮಹಿಳಾ ಪರ ಕಾಳಜಿನಾ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು

    ಸಿಎಂ ಈ ರೀತಿ ಮಾತನ್ನು ಆಡಿದಾಗ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಸಕ ಸಿಟಿ ರವಿ ಮಾತನಾಡಿ, ಹೆಚ್ಚಿನ ಹಣ ನೀಡಲು ನಿಮಗೇನು ಬಂದಿದೆ? ಗೋವಾ, ತಮಿಳುನಾಡಿನಲ್ಲಿ ಕೊಟ್ಟಿಲ್ವಾ ಎಂದು ಮರು ಪ್ರಶ್ನೆ ಹಾಕಿದರು.

    ಈ ವೇಳೇ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕಾಂಗ್ರೆಸ್ ಶಾಸಕರು ‘ಶೇಮ್ ಶೇಮ್’ ಎಂದು ಘೋಷಣೆ ಕೂಗಿದರೆ, ಸದನದ ಬಾವಿಗಿಳಿದು ಬಿಜೆಪಿ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಬಿಜೆಪಿ ಅವರದ್ದು ಭಂಡತನದ ಪರಮಾವಧಿ ಎಂದು ಸಿಎಂ ಹೇಳುತ್ತಿದ್ದಂತೆ ಪ್ರತಿಭಟನೆ ಜೋರಾಗಿ ಕೊನೆಗೆ ಸ್ಪೀಕರ್ ಸದನವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

    ಹೊರೆಯಾಗಲ್ಲ: ಜಗದೀಶ್ ಶೆಟ್ಟರ್ ಮಾತನಾಡಿ, ಹಿಂದೆ ನಾನು ಸಿಎಂ ಆಗಿದ್ದಾಗ ದಿನಗೂಲಿ ನೌಕರರ ಖಾಯಂ ಮಾಡಿದ್ದೇನೆ. ಕೆಳಹಂತದ ನೌಕರರ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಬೇಕು. ಪೌರ ಕಾರ್ಮಿಕರನ್ನು ಖಾಯಂ ಮಾಡಿ. ಅದಕ್ಕೆ ಸಂಬಂಧಿಸಿದ ಯಾವುದೇ ಬಿಲ್ ತಂದ್ರೂ ಬೆಂಬಲಿಸುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಟ 10,000 ರೂ ವೇತನ ನಿಗದಿ ಪಡಿಸಿ. ಹೆಣ್ಣುಮಕ್ಕಳು ಕಣ್ಣೀರು ಹಾಕಿ ಶಾಪ ಹಾಕಿದ್ರೆ ಸರ್ಕಾರಕ್ಕೆ ಒಳ್ಳೆಯದಾಗುವುದಿಲ್ಲ. ನಿನ್ನೆ ಇಡೀ ರಾತ್ರಿ ಬೀದಿಯಲ್ಲಿ ಮಹಿಳೆಯರು ಮಲಗಿದ್ದಾರೆ. ಸಂಬಳ ಏರಿಕೆ ಮಾಡಿದರೆ ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲ ಎಂದರು.

    ಶೀಘ್ರವೇ ಸ್ಪಂದಿಸಿ: ಯಾವುದೇ ಒಂದು ಸಮುದಾಯದವರು ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲ ಸಮುದಾಯಕ್ಕೆ ಸೇರಿದವರು ಅಂಗನವಾಡಿ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತರ ಮನವಿಗೆ ಸರ್ಕಾರ ಸ್ಪಂದಿಸಲೇಬೇಕು. ಕನಿಷ್ಠ ವೇತನ ಹತ್ತು ಸಾವಿರ ಕೇಳ್ತಿದ್ದಾರೆ ಇದ್ರಲ್ಲಿ ನ್ಯಾಯ ಇದೆ ಎಂದು ಎಚ್‍ಡಿ ಕುಮಾರಸ್ವಾಮಿ ಹೇಳಿದರು.

    ಕಾರ್ಯಕರ್ತೆಯರ ಬೇಡಿಕೆ ಏನು?
    ರಾಜ್ಯದಲ್ಲಿ ಒಟ್ಟು 1.25 ಲಕ್ಷ ಅಂಗನವಾಡಿ ಸಿಬ್ಬಂದಿ ಇದ್ದು, ವೇತನ 7 ಸಾವಿರದಿಂದ 10 ಸಾವಿರ ರೂ. ಹೆಚ್ಚಳ ಮಾಡಬೇಕು. ಸಹಾಯಕಿಯರ ವೇತನ 3,500 ರಿಂದ 7,500 ರೂ. ಹೆಚ್ಚಳ ವಾಗಬೇಕು. ಸಹಾಯಕಿಯರಿಗೆ ಮುಂಬಡ್ತಿ, ಪಿಂಚಣಿ, ಪಿಎಫ್ ಸೌಲಭ್ಯ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ.

    ಪ್ರತಿಭಟನೆ ಯಾಕೆ?
    ಇಲ್ಲಿಯವರೆಗೆ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 6 ಸಾವಿರ ಮತ್ತು ಸಹಾಯಕಿಯರಿಗೆ 3 ಸಾವಿರ ರೂ. ಸಂಬಳ ಸಿಗುತಿತ್ತು. ಈ ವರ್ಷದ ಬಜೆಟ್‍ನಲ್ಲಿ ಸರ್ಕಾರ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಮತ್ತು ಸಹಾಯಕಿಯರಿಗೆ 500 ರೂ. ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಈ ಹೆಚ್ಚಳ ನಮಗೆ ಸಾಲುವುದಿಲ್ಲ. ಹತ್ತಿರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಸರ್ಕಾರಗಳು ಕಾರ್ಯಕರ್ತೆಯರಿಗೆ 10 ಸಾವಿರ ರೂ. ಸಹಾಯಕಿಯರಿಗೆ 7,500 ರೂ. ನೀಡುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರವೂ ನಮಗೆ ಇಷ್ಟೇ ಸಂಬಳ ನೀಡಬೇಕೆಂದು ಆಗ್ರಹಿಸಿ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.