Tag: congrerss

  • ರಾಜ್ಯದಲ್ಲೂ ಟೆಂಪಲ್ ರನ್ – ಒಂದೇ ದಿನ ಎರಡು ಮಠಕ್ಕೆ ರಾಹುಲ್ ಭೇಟಿ!

    ರಾಜ್ಯದಲ್ಲೂ ಟೆಂಪಲ್ ರನ್ – ಒಂದೇ ದಿನ ಎರಡು ಮಠಕ್ಕೆ ರಾಹುಲ್ ಭೇಟಿ!

    ಬೆಂಗಳೂರು: ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ದೇವಾಲಯ ಭೇಟಿ ಫಲಪ್ರದವಾದ ಬೆನ್ನಲ್ಲೇ ಇದೇ ತಂತ್ರವನ್ನು ಕರ್ನಾಟಕದಲ್ಲಿ ಮುಂದುವರಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಕರ್ನಾಟಕದಲ್ಲೂ ಹಿಂದುತ್ವದ ಜಪ ಮಾಡಲು ಆರಂಭಿಸಿದೆ.

    ಹೌದು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇವಾಲಯ ಪ್ರವಾಸಕ್ಕೆ ಮುಹೂರ್ತ ನಿಗದಿಯಾಗಿದ್ದು, ಒಂದೇ ದಿನ ಎರಡು ಮಠಕ್ಕೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 10 ರಿಂದ ಮೂರು ದಿನ ರಾಹುಲ್ ಗಾಂಧಿ ಮೊದಲ ಪ್ರವಾಸ ಮಾಡಲಿದ್ದು, ಫೆಬ್ರವರಿ 20ರಿಂದ ರಾಹುಲ್ ಗಾಂಧಿಯ ಎರಡನೇ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡನೇ ಪ್ರವಾಸದ ವೇಳೆ ದೇವಾಲಯ ಭೇಟಿಯ ಪಟ್ಟಿಯನ್ನು ಕೆಪಿಸಿಸಿ ತಯಾರಿಸಿದ್ದು, ಶೃಂಗೇರಿಯ ಶಾರದಾ ಮಠ ಹಾಗೂ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

    ರಾಹುಲ್ ಗಾಂಧಿಯ ಈ ಪ್ರವಾಸದ ವೇಳೆ ರಾಜ್ಯದ ಕೈ ನಾಯಕರು ಸಾಥ್ ನೀಡಲಿದ್ದು ಈ ಮೂಲಕ ಹಿಂದುತ್ವ ವಿಚಾರವನ್ನು ಪ್ರಸ್ತಾಪಿಸಿ ಜನರನ್ನು ಸೆಳೆಯಲು ಮುಂದಾಗುತ್ತಿರುವ ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಮುಂದಾಗಿದೆ.

    ವೇಳಾಪಟ್ಟಿ ಹೀಗಿದೆ:
    ಮೊದಲ ದಿನ ಶಿವಮೊಗ್ಗದಿಂದ ಆರಂಭಿಸಿ  ಭದ್ರಾವತಿ, ತರೀಕೆರೆ, ಕಡೂರು, ಸಖರಾಯಪಟ್ಟಣದ ಮೂಲಕ ಚಿಕ್ಕಮಗಳೂರಿಗೆ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಕಾಫಿ ತೋಟ ಮತ್ತು ಕಾಳುಮೆಣಸು ಬೆಳೆಗಾರರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಆ ದಿನ ಚಿಕ್ಕಮಗಳೂರಿನಲ್ಲಿ ತಂಗಲಿದ್ದಾರೆ.

    ಎರಡನೇ ದಿನ ಬೆಳಗ್ಗೆ ಶೃಂಗೇರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಂಗಳೂರಿನಿಂದ ಕುಂದಾಪುರಕ್ಕೆ ರೋಡ್ ಶೋ ನಡೆಸಲಿದ್ದಾರೆ. ಮಂಗಳೂರು, ಸುರತ್ಕಲ್, ಮೂಲ್ಕಿ, ಕಾಪು, ಉಡುಪಿ, ಬ್ರಹ್ಮವಾರ, ಕೋಟಾ, ಕುಂದಾಪುರಕ್ಕೆ ರೋಡ್ ಶೋ ಮಾಡಲಿದ್ದಾರೆ. ಸಂಜೆ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಅಂದು ಉಡುಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮೂರನೇ ದಿನ ಅರಸೀಕೆರೆ, ತಿಪಟೂರು, ಕೆ.ಬಿ. ಕ್ರಾಸ್, ಗುಬ್ಬಿ, ಮಾರ್ಗವಾಗಿ ತುಮಕೂರುವರೆಗೆ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ.

    https://youtu.be/M25PbskQK0I

  • ಯೂಟರ್ನ್ ಕಾಂಗ್ರೆಸ್: ಚೀನಾ ರಾಯಭಾರಿಯನ್ನು ಭೇಟಿಯಾದ ರಾಹುಲ್

    ಯೂಟರ್ನ್ ಕಾಂಗ್ರೆಸ್: ಚೀನಾ ರಾಯಭಾರಿಯನ್ನು ಭೇಟಿಯಾದ ರಾಹುಲ್

    ನವದೆಹಲಿ: ಚೀನಾ ರಾಯಭಾರಿ ಲುವೋ ಝವೋಹುಯಿಯನ್ನು  ದೆಹಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

    ಶನಿವಾರ ರಾಹುಲ್ ಗಾಂಧಿ ಜೊತೆ `ಪ್ರಸಕ್ತ ಇಂಡೋ-ಚೀನಾ ಸಂಬಂಧ’ಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಚೀನಾ ರಾಯಭಾರಿ ಕಚೇರಿಯ ವೆಬ್‍ಸೈಟ್‍ನಲ್ಲಿ ಪ್ರಕಟವಾಗಿತ್ತು.

    ಉಭಯ ರಾಷ್ಟ್ರಗಳ ನಡುವಿನ ಈಗಿನ ಸಂಬಂಧ ಹದಗೆಟ್ಟಿರೋ ಸಮಯದಲ್ಲಿ ರಾಹುಲ್ ಭೇಟಿಯನ್ನ ಬಿಜೆಪಿ ನಾಯಕರು ಉಗ್ರವಾಗಿ ಟೀಕಿಸಿದ್ದರು. ವಿವಾದ ಜಾಸ್ತಿ ಆಗುತ್ತಿದ್ದಂತೆ ಬೆನ್ನಲ್ಲೇ ರಾಹುಲ್ ಭೇಟಿಯಾಗಿದ್ದಾರೆ ಎನ್ನುವ ಹೇಳಿಕೆಯನ್ನು ಚೀನಾ ರಾಯಭಾರಿ ಕಚೇರಿ ವೆಬ್‍ಸೈಟ್ ಡಿಲೀಟ್ ಮಾಡಿತ್ತು.

    ಬೆಳಗ್ಗೆ ರಾಹುಲ್ ಭೇಟಿಯ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ನಿರಾಕರಿಸಿ ಇದು ಸುಳ್ಳು ಸುದ್ದಿ ಎದ್ದಿದ್ದರು. ಆದರೆ @OfficeOfRG ಖಾತೆಯಿಂದ ರಾಹುಲ್ ಗಾಂಧಿ ಅವರು ಅವರೇ ಭೇಟಿಯಾಗಿದ್ದು ನಿಜ ಎಂದು ಟ್ವೀಟ್ ಪ್ರಕಟವಾಯಿತು.

    ವಿವಾದ ತಣ್ಣಗಾಗಿಸುವ ಸಲುವಾಗಿ ಚೀನಾ ಮಾತ್ರವಲ್ಲ ಭೂತಾನ್ ರಾಯಭಾರಿಯನ್ನೂ ಭೇಟಿಯಾಗಿದ್ದಾಗಿ ಟ್ವಿಟ್ಟರ್‍ನಲ್ಲಿ ಹೇಳಿಕೆ ಬಂತು. ಇದರ ಬೆನ್ನಲ್ಲೇ ಎಐಸಿಸಿ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ಹೊತ್ತಿರುವ ರಮ್ಯಾ ಅವರು ಚೀನಾ ಅತಿಕ್ರಮಣದ ಮಧ್ಯೆಯೂ ಮೋದಿ ಅವರು ಜಿನ್‍ಪಿಂಗ್ ಜೊತೆ ಹಸ್ತಲಾಘವ ಮಾಡಿದ್ದಾರೆ. ಅಂಥದರಲ್ಲಿ ರಾಹುಲ್ ಭೇಟಿಯಲ್ಲಿ ವಿವಾದ ಏನಿದೆ ಪ್ರಶ್ನಿಸಿ ಕಾಂಗ್ರೆಸ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಇದೆಲ್ಲದರ ಮಧ್ಯೆ ಪಾಕ್ ಬಯಸಿದರೆ ಪಿಓಕೆ ಮಾತ್ರವಲ್ಲ ಭಾರತ ಆಕ್ರಮಿತ ಕಾಶ್ಮೀರಕ್ಕೂ ಸೇನೆ ನುಗ್ಗಿಸ್ತೇವೆ ಅಂತ ಚೀನಾ ಮಿಲಿಟರಿ ತಜ್ಞರ ಹೇಳಿಕೆಯನ್ನ ಚೀನಾದ ಸರ್ಕಾರಿ `ಗ್ಲೋಬಲ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

    https://twitter.com/praveen_bajpai/status/884331752587767808

  • ಕಾಂಗ್ರೆಸ್ ಮುಕ್ತ ಭಾರತದ ಬಳಿಕ ಮೋದಿ, ಅಮಿತ್ ಶಾ ಹೊಸ ಟಾರ್ಗೆಟ್ ಇದು

    ಕಾಂಗ್ರೆಸ್ ಮುಕ್ತ ಭಾರತದ ಬಳಿಕ ಮೋದಿ, ಅಮಿತ್ ಶಾ ಹೊಸ ಟಾರ್ಗೆಟ್ ಇದು

    ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತದ ಗುರಿ ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂದೆ ಪ್ರಾದೇಶಿಕ ಪಕ್ಷ ಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ.

    ಪ್ರಾದೇಶಿಕ ಪಕ್ಷ ಮುಕ್ತ ಭಾರತದ ಮೊದಲ ಹೆಜ್ಜೆಯಾಗಿ ಒಡಿಶಾದಲ್ಲಿ ಭುವನೇಶ್ವರದಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಣಿಯನ್ನು ಆಯೋಜನೆ ಮಾಡಲಾಗಿತ್ತು ಎನ್ನುವ ವಿಚಾರ ಈಗ ತಿಳಿದು ಬಂದಿದೆ.

    ‘ನರೇಂದ್ರ ಮೋದಿ, ದಿ ಮ್ಯಾನ್ ದಿ ಟೈಮ್ಸ್’ ಪುಸ್ತಕ ಬರೆದ ನೀಲಾಂಜನ್ ಮುಖ್ಯೋಪಾಧ್ಯಯ್ ಈ ಎಕಾನಮಿಕ್ ಟೈಮ್ಸ್ ನಲ್ಲಿ ಈ ವಿಚಾರದ ಬಗ್ಗೆ ಬರೆದಿದ್ದಾರೆ. ಭುವನೇಶ್ವರದಲ್ಲಿ ಬಿಜೆಪಿ ತಳಮಟ್ಟದಲ್ಲಿ ಹೇಗೆ ಸಂಘಟನೆಗೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಿದೆ ಎಂದು ಅವರು ಬರಹದಲ್ಲಿ ತಿಳಿಸಿದ್ದಾರೆ.

    ಪಿ2ಪಿ ಟಾರ್ಗೆಟ್: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸುವರ್ಣಯುಗ ಆಗುವುದಿಲ್ಲ. ತಳಮಟ್ಟದಲ್ಲಿ ಪಕ್ಷ ಸಂಘಟನೆಯಾಗಬೇಕು. ತಳಮಟ್ಟದಲ್ಲಿ ಪಕ್ಷ ಸಂಘಟನೆಯಾಗಬೇಕಾದರೆ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಪಿ2ಪಿ (ಪಂಚಾಯತ್ ಟು ಪಾರ್ಲಿಮೆಂಟ್) ಗುರಿಯನ್ನು ಹಾಕಿ ಯಶಸ್ವಿಯಾದಾಗ ಮಾತ್ರ ಬಿಜೆಪಿಯ ಸುವರ್ಣಯುಗವಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯಗಳ ನಾಯಕರ ಗಮನಹರಿಸಬೇಕೆಂದು ಅಮಿತ್ ಶಾ ಕಾರ್ಯಕಾರಣಿಯಲ್ಲಿ ಹೇಳಿದ್ದಾರೆ.

    ಪಂಚರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ, ಗೋವಾ, ಮಣಿಪುರದಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಈಗ ಬಿಜೆಪಿ ಪಿ2ಪಿ ಗುರಿಯನ್ನು ಹಾಕಿಕೊಂಡಿದೆ.

    ಒಡಿಶಾ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಈಶಾನ್ಯದ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿ ನೆಲೆ ನಿಂತಿರುವ ಪರಿಣಾಮ ಸರ್ಕಾರದ ಮಸೂದೆಗಳಿಗೆ ಈ ಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಯಲ್ಲಿ ಮುಂದೆ ಅಲ್ಲಿ ನಡೆಯಲಿರುವ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲೂ ಹೆಚ್ಚಿನ ಸ್ಥಾನವನ್ನು ಗಳಿಸಬಹುದು ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

    ಸಂಘಟನೆಯ ವೇಳೆ ಈ ಹಿಂದಿನ ಹಿಂದುತ್ವ ಪ್ರಚಾರ ತಂತ್ರ ಮತ್ತು ಕೇಂದ್ರದ ಅಭಿವೃದ್ಧಿ ವಿಚಾರ, ಬಡವರ ಪರ ಪಕ್ಷ ಇದೆ ಎನ್ನುವುದನ್ನು ಬಿಂಬಿಸಿ ಈ ಎರಡು ವಿಚಾರಗಳ ಮಧ್ಯೆ ಸಮತೋಲನ ಕಾಯ್ದುಕೊಳ್ಳಬೇಕೆಂದು ನಾಯಕರಿಗೆ ತಿಳಿಸಲಾಗಿದೆ ಎಂದು ನೀಲಾಂಜನ್ ಮುಖ್ಯೋಪಾಧ್ಯಯ್ ತಮ್ಮ ಬರಹದಲ್ಲಿ ತಿಳಿಸಿದ್ದಾರೆ.

    ಕರ್ನಾಟಕದಲ್ಲಿ ಆಗುತ್ತಾ?
    ನರೇಂದ್ರ ಮೋದಿ, ಅಮಿತ್ ಶಾ ಅವರ ಅಶ್ವಮೇಧದ ವಿಜಯದ ಕುದುರೆಯ ಆಟ ಕರ್ನಾಟಕದಲ್ಲಿ ನಡೆಯಲ್ಲ. ಈ ಕುದುರೆಯನ್ನು ಕರ್ನಾಟಕದಲ್ಲಿ ಜೆಡಿಎಸ್ ಕಟ್ಟಿಹಾಕುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಎಷ್ಟು ಸ್ಥಾನಗಳನ್ನು ಗೆಲ್ಲಲ್ಲಿದೆ? ಸರ್ಕಾರ ರಚನೆ ಮಾಡುತ್ತಾ? ಅಥವಾ ರಾಷ್ಟ್ರೀಯ ಪಕ್ಷಗಳ ಜೊತೆ ಕೈ ಜೋಡಿಸುತ್ತಾ? ಬಿಜೆಪಿ ಪ್ರಾದೇಶಿಕ ಪಕ್ಷ ಮುಕ್ತ ಭಾರತ ಕರ್ನಾಟಕದಲ್ಲಿ ಆಗುತ್ತಾ ಎನ್ನುವ ಪ್ರಶ್ನೆಗಳಿಗೆ 2018ರ ವಿಧಾನಸಭೆ ಚುನಾವಣೆಯ ಫಲಿತಾಂಶ ಉತ್ತರ ನೀಡಲಿದೆ.

    ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಅನ್ನೋ ಬಿಜೆಪಿ ಸಂಸದರಿಂದ ಕೈಗೆ ಮತ!