Tag: Confidence Vote

  • ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಸಿಎಂ – ಇತ್ತ ಶಾಸಕರೊಂದಿಗೆ ಬಿಎಸ್‍ವೈ ಚರ್ಚೆ

    ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಸಿಎಂ – ಇತ್ತ ಶಾಸಕರೊಂದಿಗೆ ಬಿಎಸ್‍ವೈ ಚರ್ಚೆ

    ಬೆಂಗಳೂರು: ಇಂದಿನ ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಗೆ ಸಮಯ ಕೋರಿದ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ತಮ್ಮ ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ.

    ಸದನದಲ್ಲಿ ಸಿಎಂ ಅವರು ನಾನು ಅಧಿಕಾರದಲ್ಲಿ ಶಾಶ್ವತವಾಗಿ ಕುಳಿತುಕೊಳ್ಳಲು ಬಂದಿಲ್ಲ. ಹಲವು ಶಾಸಕರ ಕೆಲ ನಿರ್ಣಯಗಳಿಂದ ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಆದ್ದರಿಂದ ನಾನು ವಿಶ್ವಾಸ ಮತ ಮಂಡನೆ ಮಾಡಲು ತೀರ್ಮಾನಿಸಿದ್ದೇನೆ. ಇದನ್ನು ಸದನದ ಸದಸ್ಯರ ಗಮನಕ್ಕೆ ತರುತ್ತಿದ್ದೇನೆ. ನಾನು ಎಲ್ಲದಕ್ಕೂ ತಯಾರಾಗಿ ಬಂದಿದ್ದು, ಸದನದ ಮುಖಾಂತರ ಒಂದು ಉತ್ತಮ ನಿರ್ಧಾರ ಮಾಡುವ ಅವಕಾಶ ಕೋರುತ್ತಿದ್ದೇನೆ ಎಂದರು. ಇದೇ ಸದನದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು ಸಿಎಂ ಮಾತನ್ನು ಕೇಳಿದ್ದ ತಕ್ಷಣ ಕಲಾಪದ ಮಧ್ಯೆ ತಮ್ಮ ಕೊಠಡಿಗೆ ಎದ್ದು ಹೋಗಿದ್ದಾರೆ.

    ಕೊಠಡಿಯಲ್ಲಿ ಯಡಿಯೂರಪ್ಪ ಕೆಲ ಬಿಜೆಪಿ ಶಾಸಕರೊಂದಿಗೆ ಚರ್ಚೆ ಮಾಡಿದ್ದಾರೆ. ವಿಶ್ವಾಸ ಮತಕ್ಕೆ ಕೋರಿದ ಹಿನ್ನೆಲೆಯಲ್ಲಿ 14 ದಿನಗಳ ಒಳಗಡೆ ಸ್ಪೀಕರ್ ಯಾವ ದಿನ ಬೇಕಾದರೂ ಅನುಮತಿ ನೀಡಬಹುದು.

    ಸಿಎಂ ವಿಶ್ವಾಸಮತಯಾಚನೆಗೆ ಸಮಯ ಕೇಳುತ್ತಾರೆ ಎಂದು ಬಿಜೆಪಿಯವರು ಊಹಿಸಿರಲಿಲ್ಲ. ಸಿಎಂ ಅವರ ನಿರ್ಧಾರ ಬಿಜೆಪಿ ಅಚ್ಚರಿ ಮೂಡಿಸಿದ್ದು, ಸರ್ಕಾರ ರಕ್ಷಣೆಗೆ ದೋಸ್ತಿ ನಾಯಕರು ಏನು ಪ್ಲಾನ್ ಮಾಡಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಬಿಎಸ್‍ವೈ ಸಿಎಂ ಅವರು ಪ್ಲಾನ್ ಏನು, ನಮ್ಮ ಮುಂದಿನ ನಡೆ ಏನು? ಎಂಬುದರ ಬಗ್ಗೆ ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ.

    ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿ ಮಂಗಳವಾರದವರೆಗೂ ಯಥಾಸ್ಥಿತಿಯಲ್ಲಿ ಇರಬೇಕು ಎಂದು ಆದೇಶ ನೀಡಿದೆ. ಈ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತಿಲ್ಲ, ಜೊತೆಗೆ ಅವರನ್ನು ಅನರ್ಹ ಮಾಡುವಂತಿಲ್ಲ ಎಂದು ಆದೇಶಿಸಿದೆ. ಕೋರ್ಟಿನ ಇಂದಿನ ಆದೇಶದಿಂದ ದೋಸ್ತಿ ಸರ್ಕಾರ ತಾತ್ಕಾಲಿಕವಾಗಿ ಸೇಫ್ ಆಗಿದೆ. ಇತ್ತ ಅನರ್ಹ ಭೀತಿಯಲ್ಲಿದ್ದ ಅತೃಪ್ತರು ಕೂಡ ರಿಲೀಫ್ ಆಗಿದ್ದಾರೆ.

  • ಸರ್ಕಾರ ಪತನಕ್ಕೂ ಮುನ್ನವೇ ಸಿಎಂ ರಾಜೀನಾಮೆ?

    ಸರ್ಕಾರ ಪತನಕ್ಕೂ ಮುನ್ನವೇ ಸಿಎಂ ರಾಜೀನಾಮೆ?

    ಬೆಂಗಳೂರು: ಮೈತ್ರಿ ಸರ್ಕಾರ ಪತನಕ್ಕೂ ಮುನ್ನವೇ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಈಗಾಗಲೇ 14 ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಜೊತೆ ಜೆಡಿಎಸ್ ನಾಯಕರು ರಾಜೀನಾಮೆ ನೀಡಿದ್ದಕ್ಕೆ ಸಿಎಂ ಅಸಮಾಧಾನಗೊಂಡಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

    ಸರ್ಕಾರ ರಚನೆಯಾದಗಿನಿಂದ ಕಾಂಗ್ರೆಸ್ ಬಂಡಾಯ ಶಮನವಾಗಲೇ ಇಲ್ಲ. ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಹಿರಿಯ ನಾಯಕರು ಬಹಿರಂಗವಾಗಿಯೇ ಜೆಡಿಎಸ್ ಜೊತೆ ಹೋಗಿದ್ದಕ್ಕೆ ನಮಗೆ ಸೋಲಾಯ್ತು ಎಂದು ಹೇಳಿದ್ದಾರೆ. ಹೀಗಾಗಿ ವಿಶ್ವಾಸಮತಕ್ಕೂ ಮುನ್ನವೇ ಪದತ್ಯಾಗ ಮಾಡುವುದು ಉತ್ತಮ ಅಂತ ಸಿಎಂ ರಾಜೀನಾಮೆಯ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ 14 ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಭಾನುವಾರವೂ 8 ಜನ ಶಾಸಕರು ರಾಜೀನಾಮೆಗೆ ಮುಂದಾಗುವ ಸಾಧ್ಯತೆಯಿದೆ. ಹೀಗಾಗಿ ವಿಶ್ವಾಸಮತಕ್ಕೆ ಹೋಗುವುದು ಕಷ್ಟ. ಒಂದು ವೇಳೆ ವಿಶ್ವಾಸಮತಕ್ಕೆ ಮುಂದಾದರೆ ಭಾರೀ ಮುಖಭಂಗಕ್ಕೆ ಗುರಿಯಾಗುತ್ತೇನೆ ಎಂಬ ವಿಚಾರವನ್ನು ಹೇಳಿದ್ದಾರೆ.

    ರಾಜೀನಾಮೆ ನೀಡಿರುವ ಶಾಸಕರಲ್ಲಿ ಹೆಚ್ಚಾಗಿ 3ಕ್ಕಿಂತ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದವರೆ ಆಗಿದ್ದಾರೆ. ಅವರೆಲ್ಲರೂ ತಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ ಎನ್ನುವಂತಿದ್ದಾರೆ. ಹೀಗಾಗಿ ಅವರ ಮನವೊಲಿಕೆ ಕಷ್ಟ. ಅಷ್ಟೇ ಅಲ್ಲದೆ ನಾನು ರಾಜ್ಯದಲ್ಲಿ ಇಲ್ಲದ ಸಮಯದಲ್ಲಿ ರಾಜೀನಾಮೆ ಪರ್ವ ನಡೆದಿದ್ದು, ನನ್ನ ಕೈಮೀರಿದೆ ಎನ್ನುವುದು ಸಿಎಂ ಲೆಕ್ಕಾಚಾರವಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತದ ವೇಳೆ ಭಾರೀ ಹಿನ್ನಡೆ ಅನುಭವಿಸಿದ್ದರು. ಈ ಸ್ಥಿತಿ ನನಗೆ ಬರುವುದು ಬೇಡ ಎಂದು ಸಿಎಂ ರಾಜೀನಾಮೆ ನಿರ್ಧಾರಕ್ಕೆ ಕೈಹಾಕಿದ್ದಾರೆ ಎನ್ನಲಾಗುತ್ತಿದೆ.