Tag: Confidence Vote

  • ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

    ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

    ಲಂಡನ್: ಬ್ರಿಟನ್ ಸಂಸತ್‍ನಲ್ಲಿ ಸೋಮವಾರ ಸಂಜೆ ನಡೆದ ಗೌಪ್ಯ ಮತದಾನದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ವಿಶ್ವಾಸ ಮತ ಗೆಲ್ಲುವ ಮೂಲಕ ತಮ್ಮ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.

    ಸಂಸತ್‍ನಲ್ಲಿ ನಡೆದ ರಹಸ್ಯ ಮತದಾನದಲ್ಲಿ ಬೋರಿಸ್ ಜಾನ್ಸನ್ ಅವರ ಪರ 211 ಮತಗಳು ಚಲಾವಣೆಯಾದರೆ, ವಿರುದ್ಧ 148 ಮತಗಳನ್ನು ಅವರದ್ದೇ ಪಕ್ಷದ (ಕನ್ಸರ್‌ವೇಟಿವ್) ಸಂಸದರು ಹಾಕಿದ್ದಾರೆ. ಇದನ್ನೂ ಓದಿ:  ಭ್ರಷ್ಟಾಚಾರ ಆರೋಪ – ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಂಸೋತ್ ಬಂಧನ

    ಅವಿಶ್ವಾಸ ಮತದಾನ ಪ್ರಕ್ರಿಯೆಲ್ಲಿ ಬೋರಿಸ್ ಜಾನ್ಸನ್ ಅವರು ಗೆಲುವು ಸಾಧಿಸುವ ಮೂಲಕ ಒಂದು ವರ್ಷದ ಮಟ್ಟಿಗೆ ತಮ್ಮ ಪಟ್ಟವನ್ನು ಭದ್ರಪಡಿಸಿಕೊಂಡಿದ್ದು, ಹೀಗಿದ್ದರೂ ಪ್ರಧಾನಿ ಪಟ್ಟ ಉಳಿಸಲು ಇನ್ನೂ ತೂಗುಗತ್ತಿಯಲ್ಲಿ ನಡೆಯಬೇಕಾಗಬಹುದು, ಯಾವ ಕ್ಷಣದಲ್ಲಿ ಬೇಕಾದರೂ ತಮ್ಮ ವಿರುದ್ಧ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಕೋವಿಡ್ ಸಾಂಕ್ರಾಮಿಕ ಲಾಕ್‍ಡೌನ್ ಇದ್ದರೂ ಬೋರಿಸ್ ಜಾನ್ಸನ್ ಮಾತ್ರ ಡೌನಿಂಗ್ ಸ್ಟ್ರೀಟ್‍ನಲ್ಲಿ ಪಾರ್ಟಿ ಮಾಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಔತಣಕೂಟದಲ್ಲಿ ಮದ್ಯ ಸೇವಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಸ್ವಪಕ್ಷದ ಸದಸ್ಯರೇ ಬೋರಿಸ್ ಜಾನ್ಸನ್ ವಿರುದ್ಧ ವಿರೋಧ ವ್ಯಕ್ತಪಡಿಸಿ ರಾಜೀನಾಮೆಗೆ ಆಗ್ರಹಿಸಿದ್ದರು. ವಿವಾದದ ಕುರಿತು ತಾನು ಎರಡೆರಡು ಬಾರಿ ಕ್ಷಮೆಯಾಚಿಸಿದ್ದರೂ ವಿವಾದ ಕಾವು ಹಾಗೇ ಇತ್ತು. ಇದನ್ನೂ ಓದಿ:  ಕಾಂಗ್ರೆಸ್‍ನಲ್ಲಿ ನಲಪಾಡ್ ರೌಡಿಸಂ ಆರೋಪ – ಡಿಕೆಶಿಗೆ ದೂರು

    ಸದ್ಯ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಏರುತ್ತಿರುವ ಬೋರಿಸ್ ಜಾನ್ಸನ್, ಈ ಫಲಿತಾಂಶವನ್ನು ಗುಡ್ ನ್ಯೂಸ್ ಮತ್ತು ನಿರ್ಣಾಯಕ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಒಗ್ಗಟ್ಟಿನಿಂದ ಮುನ್ನಡೆಯಲು ಫಲಿತಾಂಶ ಅವಕಾಶ ಕಲ್ಪಿಸಿದೆ  ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  • ರಾಜಸ್ಥಾನ ಹೈಡ್ರಾಮಾಕ್ಕೆ ತೆರೆ – ವಿಶ್ವಾಸ ಮತ ಗೆದ್ದ ಗೆಹ್ಲೋಟ್

    ರಾಜಸ್ಥಾನ ಹೈಡ್ರಾಮಾಕ್ಕೆ ತೆರೆ – ವಿಶ್ವಾಸ ಮತ ಗೆದ್ದ ಗೆಹ್ಲೋಟ್

    ಜೈಪುರ: ರಾಜಸ್ಥಾನದಲ್ಲಿ ಬೀಳುವ ಹಂತ ತಲುಪಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಮರುಜೀವ ಸಿಕ್ಕಂತಾಗಿದ್ದು, ಇಂದು ನಡೆದ ವಿಶ್ವಾಸ ಮತದಲ್ಲಿ ಸಿಎಂ ಗೆಹ್ಲೋಟ್‌ ಜಯಗಳಿಸಿದ್ದು ಇನ್ನು 6 ತಿಂಗಳು ಯಾವುದೇ ಗೊಂದಲ ಇಲ್ಲದೇ ಸರ್ಕಾರ ಆಡಳಿತ ನಡೆಸಲಿದೆ.

    ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದ ಬಳಿಕ ಕಳೆದ ಕೆಲ ತಿಂಗಳಿಂದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತಂತ್ರವಾಗಿತ್ತು. ಇಂದು ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರದ ಪರ 125 ಶಾಸಕರು ಬೆಂಬಲ ಸೂಚಿಸಿದರೆ ಬಿಜೆಪಿ ಪರ 75 ಶಾಸಕರು ಬೆಂಬಲ ಸೂಚಿಸಿದರು.

    ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬಂಡಾಯದ ಬಳಿಕ ಬಿಜೆಪಿ ಆಪರೇಷನ್ ಕಮಲ ನೆಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಪೈಲಟ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗುವ ಮೂಲಕ ಈ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದರು.

    ಬಂಡಾಯದ ಬಳಿಕ ಎರಡೂ ತಂಡಗಳ ಶಾಸಕರು ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖಾಮುಖಿಯಾಗಿದ್ದರು. ಸಭೆಯಲ್ಲಿ ವಿಶ್ವಾಸ ಮತಯಾಚನೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಇಂದು ಟ್ರಸ್ಟ್‌ ವೋಟ್‌ ನಡೆದಿದ್ದು, ರಾಜಸ್ಥಾನ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ವಿಶ್ವಾಸ ಮತದಲ್ಲಿ ಜಯಗಳಿಸಿದೆ.

    ಈ ಕುರಿತು ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದು, ಈ ಗೆಲುವಿನಿಂದಾಗಿ ಎಲ್ಲ ಊಹಾಪೋಹಗಳಿಗೆ ವಿರಾಮ ಬಿದ್ದಂತಾಗಿದೆ. ನಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಸಮಯಕ್ಕೆ ಸರಿಯಾಗಿ ಈ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತಾರೆಂಬ ಸಂಪೂರ್ಣ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

    ಇಂದು ನಡೆದ ಅಧಿವೇಶನದ ಚರ್ಚೆಯ ಸಮಯದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಬಿಜೆಪಿ ಸರ್ಕಾರ ಬೀಳಿಸುವ ಸಂಚು ರೂಪಿಸಿತ್ತು ಎಂದು ವಾಗ್ದಾಳಿ ನಡೆಸಿದರು. ಸಚಿನ್ ಪೈಲೆಟ್‌ ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ. ಅಮಿತ್ ಶಾ ಪೈಲಟ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂದಿತ್ತು.

    ಈ ಸೋಲು ನಿಮಗೆ, ನಿಮ್ಮ ನಾಯಕರಿಗೆ ಆಘಾತವನ್ನುಂಟು ಮಾಡಿದೆ. ಈ ಪಿತೂರಿಯಲ್ಲಿ ಕೇಂದ್ರದ ಹಲವು ನಾಯಕರು ಸಹ ಭಾಗಿಯಾಗಿದ್ದರು. ನೀವು ಉಪಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತೀರಿ. ಆದರೆ ಈ ಪಿತೂರಿಯನ್ನು ಮಾಡಿದ್ದೇ ನೀವು, ನಿಮ್ಮ ಪಕ್ಷ ಹಾಗೂ ಬಿಜೆಪಿ ಹೈ ಕಮಾಂಡ್ ಎಂದು ಕಾಂಗ್ರೆಸ್ ಟೀಕಿಸಿದೆ.

    ವಿಶ್ವಾಸ ಮತಯಾಚನೆ ವೇಳೆ ಸಚಿನ್ ಪೈಲಟ್ ತಮ್ಮ ಭಾಷಣದುದ್ದಕ್ಕೂ ಒಗ್ಗಟ್ಟಿನ ಜಪ ಮಾಡಿದ್ದು, ಕಾಂಗ್ರೆಸ್‍ನಲ್ಲಿದ್ದ ಆಂತರಿಕ ಸಮಸ್ಯೆಗಳೆಲ್ಲವೂ ಬಗೆಹರಿದಿವೆ. ಆಡಳಿತ ಪಕ್ಷ ಒಗ್ಗಟ್ಟಾಗಿ ನಿಲ್ಲಲಿದೆ. ವಿರೋಧ ಪಕ್ಷ ಇದೆಲ್ಲವನ್ನು ಬಿಟ್ಟು ವಿಶ್ವಾಸ ಮತಯಾಚನೆ ಬಗ್ಗೆ ಗಮನಹರಿಸಲಿ ಎಂದು ಹೇಳಿದರು.

  • ಸಿಎಂ ಬಿಎಸ್‍ವೈ ಬಹುಮತಕ್ಕೆ ಸಜ್ಜು – ಅತೃಪ್ತರ ಅನರ್ಹತೆಯಿಂದ ವಿಶ್ವಾಸ ಸಲೀಸು

    ಸಿಎಂ ಬಿಎಸ್‍ವೈ ಬಹುಮತಕ್ಕೆ ಸಜ್ಜು – ಅತೃಪ್ತರ ಅನರ್ಹತೆಯಿಂದ ವಿಶ್ವಾಸ ಸಲೀಸು

    ಬೆಂಗಳೂರು: ನೂತನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದು, ಗೆಲ್ಲೋದು ಪಕ್ಕಾ ಆಗಿದೆ. ಯಾಕಂದರೆ 17 ಮಂದಿ ಅತೃಪ್ತ ಶಾಸಕರ ಅನರ್ಹತೆಯಿಂದಾಗಿ ಬಿಎಸ್‍ವೈ ಬಹುಮತ ಸಾಬೀತಿಗೆ ಇದ್ದ ಎಲ್ಲಾ ಅಡ್ಡಿ, ಆತಂಕಗಳು ನಿವಾರಣೆಯಾಗಿದೆ.

    ಒಂದು ವೇಳೆ ಅತೃಪ್ತರ ರಾಜೀನಾಮೆ ಅಂಗೀಕಾರವಾಗದೇ ಅಥವಾ ಅನರ್ಹಗೊಳ್ಳದೇ ಇದ್ದಿದ್ದರೆ ಅವರಲ್ಲಿ ಕೆಲವರು ಸದನಕ್ಕೆ ಬಂದು ಮೈತ್ರಿ ಪಾಳಯದಲ್ಲಿ ಗುರುತಿಸಿಕೊಳ್ಳುವ ಭಯ ಬಿಜೆಪಿ ಮುಖಂಡರನ್ನು ಕಾಡಿತ್ತು. ಆದರೆ ಇದೀಗ ಯಾವ ಆತಂಕವಿಲ್ಲದೆ ತಮ್ಮದೇ ಪಕ್ಷದ ಶಾಸಕರ ಮೂಲಕವೇ ಬಿಎಸ್‍ವೈ ಬಹುಮತ ಸಾಬೀತು ಪಡಿಸಲಿದ್ದಾರೆ.

    ಬೆಳಗ್ಗೆ 11 ಗಂಟೆಗೆ ಬಿಎಸ್‍ವೈ ವಿಶ್ವಾಸಮತಯಾಚಿಸಲಿದ್ದಾರೆ. ವಿಶ್ವಾಸ ಗೆದ್ದ ಬಳಿಕ ಧನವಿನಿಯೋಗ ಮಸೂದೆಯೂ ಸದನದಲ್ಲಿ ಮಂಡನೆಯಾಗಲಿದ್ದು, ಮೈತ್ರಿ ಪಕ್ಷಗಳ ತಕರಾರು ಇಲ್ಲದೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ.

    ಸದನದಲ್ಲಿ ಬಹುಮತ ಪಡೆದ ನಂತರ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ರಚನೆಯ ಹಾದಿ ಕೂಡ ಸುಗಮವಾಗಲಿದೆ. ಮೈತ್ರಿ ಪಕ್ಷದಿಂದ ಬಂದವರಿಗೆ ನೀಡಬೇಕಿದ್ದ ಅಷ್ಟೂ ಸಚಿವ ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಹೀಗಾಗಿ ಸ್ಪೀಕರ್ ಆದೇಶ ಬಿಜೆಪಿಯ ವಿಶ್ವಾಸ ಹೆಚ್ಚಿಸಿದೆ.

  • ಕಲಾಪ ಶುರುವಾಗಿ 5 ಗಂಟೆಯ ನಂತರ ಸಿಎಂ ಹಾಜರ್

    ಕಲಾಪ ಶುರುವಾಗಿ 5 ಗಂಟೆಯ ನಂತರ ಸಿಎಂ ಹಾಜರ್

    ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದು 5 ಗಂಟೆಯ ನಂತರ ಸಿಎಂ ಕಲಾಪದಲ್ಲಿ ಭಾಗಿಯಾಗಿದ್ದಾರೆ.

    ಇಂದು ಸಂಜೆ 6 ಗಂಟೆಗೆ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಮುಗಿಸಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಈಗಾಗಲೇ ಸಮಯ ನಿಗದಿ ಮಾಡಿದ್ದಾರೆ. ಆದರೆ ಸಿಎಂ ಮಧ್ಯಾಹ್ನದವರೆಗೆ ವಿಧಾನಸೌಧಕ್ಕೆ ಬಂದಿರಲಿಲ್ಲ.

    ಸ್ಪೀಕರ್ ರಮೇಶ್ ಕುಮಾರ್ ಅವರು ಭೋಜನ ವಿರಾಮ ನೀಡದೇ ಕಲಾಪ ನಡೆಸುತ್ತಿದ್ದರು. ಊಟಕ್ಕೆ ಹೋಗುಗುವರು ಹೋಗಿ. ಆದರೆ ಕಲಾಪ ಮಾತ್ರ ಯಾವುದೇ ಕಾರಣಕ್ಕೆ ಮುಂದೂಡುವುದಿಲ್ಲ ಎಂದು ಹೇಳಿದ್ದರು. ನಿರಂತರ ಚರ್ಚೆ ನಡೆಯುತ್ತಿದ್ದಾಗ ಮಧ್ಯಾಹ್ನ 3.15ರ ವೇಳೆಗೆ ಸಿಎಂ ವಿಧಾನಸೌಧಕ್ಕೆ ಆಗಮಿಸಿದರು.

    ಇಂದು ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಕಲಾಪ ಶುರುವಾದಾಗ ಸಿಎಂ ತಾಜ್ ವೆಸ್ಟೆಂಡ್ ಹೋಟೆಲಿಗೆ ಹೋಗಿದ್ದರು. ಹೀಗಾಗಿ ವೆಸ್ಟೆಂಡ್ ಹೋಟೆಲಿಗೆ ಸದನದಿಂದ ಡಿ.ಕೆ.ಶಿವಕುಮಾರ್ ಆಗಮಿಸಿದ್ದರು. ಸ್ವಲ್ಪ ಸಮಯದವರೆಗೂ ಮಾತನಾಡಿ ಅವರು ಸದನಕ್ಕೆ ಮರಳಿದರು. ನಂತರ ಎಂ.ಬಿ ಪಾಟೀಲ್ ಕೂಡ ಸಿಎಂ ಭೇಟಿ ಮಾಡಿ 15 ನಿಮಿಷದಲ್ಲಿ ವಿಧಾನಸೌಧಕ್ಕೆ ಮರಳಿದ್ದರು.

    ಬೆಳಗ್ಗೆ 10 ಗಂಟೆಗೆ ಸದನ ಆರಂಭಗೊಂಡಾಗ ಬಿಜೆಪಿ ಶಾಸಕರು ಸದನಕ್ಕೆ ಆಗಮಿಸಿದ್ದರೆ, ದೋಸ್ತಿ ಪಕ್ಷದ ಕೇವಲ 4 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು. ಇದನ್ನು ನೋಡಿ ಬಿಜೆಪಿ ಶಾಸಕರು ದೋಸ್ತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಬಿಜೆಪಿಯ ಈಶ್ವರಪ್ಪ ಮಾತನಾಡಿ, ವಿಶ್ವಾಸಮತಯಾಚನೆಗೆ ಸಿಎಂ ಅವರೇ ಇನ್ನೂ ಬಂದಿಲ್ಲ ಎಂದ ಮೇಲೆ ಬೇರೆ ಶಾಸಕರು ಯಾಕೆ ಬರುತ್ತಾರೆ? ಯಥಾ ರಾಜ ತಥಾ ಪ್ರಜಾ ಎನ್ನುವ ಹಾಗಿದೆ ಪರಿಸ್ಥಿತಿ. ನಾನು ಉಳಿದ ವಿಚಾರದ ಬಗ್ಗೆ ಮಾತನಾಡಲ್ಲ. ಈ ಸದನದ ಪಾವಿತ್ರ್ಯತೆಯನ್ನು ಕಾಪಾಡುವುದು ಎಲ್ಲರ ಕರ್ತವ್ಯ. ತಾವು ಸೂಚನೆ ಕೊಟ್ಟ ಸಮಯಕ್ಕೆ ಶಾಸಕರು ಇಲ್ಲಿ ಬಂದು ಕೂರಬೇಕಿತ್ತು. ಅದನ್ನು ಬಿಟ್ಟು ಮಧ್ಯಾಹ್ನ 3, 4 ಗಂಟೆ ಹೊತ್ತಿಗೆ ನಾವೇನು ಮಾತನಾಡಿಲ್ಲ, ನಮಗೆ ಅವಕಾಶ ಕೊಡಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

  • ವಿಶ್ವಾಸಮತ ಮುಂದೂಡಿಕೆಯಾದ್ರೆ ನಾನೇ ಹೊರ ನಡೆಯುತ್ತೇನೆ: ಸಿದ್ದರಾಮಯ್ಯ ಎಚ್ಚರಿಕೆ

    ವಿಶ್ವಾಸಮತ ಮುಂದೂಡಿಕೆಯಾದ್ರೆ ನಾನೇ ಹೊರ ನಡೆಯುತ್ತೇನೆ: ಸಿದ್ದರಾಮಯ್ಯ ಎಚ್ಚರಿಕೆ

    ಬೆಂಗಳೂರು: ಇವತ್ತೇ ವಿಶ್ವಾಸ ಮತ ಸಾಬೀತು ಪಡಿಸೋಣ. ಒಂದು ವೇಳೆ ಇಂದು ವಿಶ್ವಾಸಮತ ಸಾಬೀತು ಮುಂದೂಡಿಕೆಯಾದರೆ ನಾನೇ ಸದನದಿಂದ ಹೊರ ನಡೆಯುತ್ತೇನೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಸಿದ್ದರಾಮಯ್ಯ ಸಿಎಂಗೆ ರವಾನಿಸಿದ್ದಾರೆ.

    ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಡಿಸಿಎಂ ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಮೂಲಕ ಸಿಎಂಗೆ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಸುಪ್ರೀಂ ನಮ್ಮ ಪರವಾಗಿ ಆದೇಶ ನೀಡಿದರೆ ಅದಕ್ಕೆ ನನ್ನದೇನು ತಕರಾರಿಲ್ಲ. ಆದರೆ ಕೋರ್ಟ್ ಆದೇಶ ನಮ್ಮ ಪರವಾಗಿ ಬಾರದೇ ಸುಮ್ಮನೆ ನಾಳೆಗೆ ವಿಶ್ವಾಸಮತ ಸಾಬೀತು ಮಾಡುವುದಕ್ಕೆ ದಿನ ದೂಡಲು ಮುಂದಾದರೆ ನಾನೇ ಸದನದಿಂದ ಹೊರ ನಡೆಯುತ್ತೇನೆ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದಾರೆ.

    ಇಷ್ಟರಲ್ಲೇ ನಾವು ಬಹುಮತ ಸಾಬೀತು ಪಡಿಸಬೇಕಿತ್ತು. ಆದರೆ ಸಿಎಂ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ನಾನು ಸೋಮವಾರ ಬಹುಮತ ಸಾಬೀತು ಮಾಡುತ್ತೇನೆ ಎಂದು ಶುಕ್ರವಾರವೇ ಸದನದಲ್ಲಿ ಸ್ಪಷ್ಟವಾಗಿ ಹೇಳಿದ್ದೆ. ಸಿಎಂ ಒಪ್ಪಿಗೆ ಮೇರೆಗೆ ನಾನು ಸದನದಲ್ಲಿ ಈ ಮಾತನ್ನು ಆಡಿದ್ದೆ. ಸ್ವತಃ ಕುಮಾರಸ್ವಾಮಿಯವರೇ ಸೋಮವಾರ ವಿಶ್ವಾಸ ಮತಯಾಚಿಸುವುದಾಗಿ ತಿಳಿಸಿದ್ದರು. ಆದರೆ ನಿನ್ನೆ ಸಿಎಂ ಉಲ್ಟಾ ಹೊಡೆದು ಬಿಟ್ಟಿದ್ದರೆ. ರಾತ್ರಿಯಿಡೀ ಚರ್ಚೆ ನಡೆದರೂ ಮತ್ತೆ ಮುಂದೂಡಿಕೆಯಾಗಿದ್ದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ತಿಳಿಸಿದ್ದಾರೆ.

    ಮೈತ್ರಿ ಅನಿವಾರ್ಯತೆಗೆ ನಿನ್ನೆ ಸ್ಪೀಕರ್ ಮನವೊಲಿಕೆಗೂ ಮುಂದಾಗಿದ್ದೆ. ಆದರೆ ಶುಕ್ರವಾರ ನಾನು ನುಡಿದ ಮಾತಿನಂತೆ ನಡೆಯದೇ ತಪ್ಪು ಮಾಡಿದ್ದೇನೆ ಎಂದು ಆಪ್ತರ ಬಳಿ ಸಿದ್ದರಾಮಯ್ಯ ಬೇಸರದಿಂದ ಹೇಳಿಕೊಂಡಿದ್ದಾರೆ.

    ಸೋಮವಾರ ರಾತ್ರಿ ನಾನೇ ಸದನಕ್ಕೆ ಮಾತುಕೊಟ್ಟಿದ್ದೇನೆ. ಇಂದು ಈ ಮಾತಿನಂತೆ ನಡೆಯದೇ ಇದ್ದರೆ ನಾನು ತಲೆ ಅಡಿ ಹಾಕಬೇಕಾಗುತ್ತದೆ. ಯಾವ ಕಾರಣಕ್ಕೂ ಇವತ್ತು ಮಾತು ತಪ್ಪಬಾರದು. ಬಹುಮತ ಸಾಬೀತಿಗೆ ಮುಂದಾಗಲೇಬೇಕು ಎಂದು ಖಡಕ್ಕಾಗಿ ಸಿದ್ದರಾಮಯ್ಯ ಹೇಳಿದ್ದಾರೆ.

  • ಕಲಾಪ ಶುರುವಾಗಿದ್ದು ಬೆಳಗ್ಗೆ 11 ಗಂಟೆಗೆ – ಮುಗಿದಿದ್ದು ಮಧ್ಯರಾತ್ರಿ 11.45ಕ್ಕೆ

    ಕಲಾಪ ಶುರುವಾಗಿದ್ದು ಬೆಳಗ್ಗೆ 11 ಗಂಟೆಗೆ – ಮುಗಿದಿದ್ದು ಮಧ್ಯರಾತ್ರಿ 11.45ಕ್ಕೆ

    ಬೆಂಗಳೂರು: ವಿಶ್ವಾಸ ಮತಯಾಚನೆ ನಿರ್ಣಯದ ಮೇಲಿನ ಚರ್ಚೆ ನೆಪದಲ್ಲಿ ದೋಸ್ತಿ ಸರ್ಕಾರ ಅನುಸರಿಸುತ್ತಿರುವ ವಿಳಂಬ ಹಾಗೂ ಕಾಲಹರಣ ತಂತ್ರ ಮುಂದುವರಿದಿದೆ. ಸೋಮವಾರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಾಪ ನಡೆದಿದೆ.

    ವಿಶ್ವಾಸ ಮತಯಾಚನೆ ಮಾಡದೆ ಶುರುವಾದ ಕಲಾಪ ಬರೀ ಗದ್ದಲ, ಗಲಾಟೆಯಲ್ಲೇ ನಡೆದಿದೆ. ಸೋಮವಾರ ಬೆಳಗ್ಗೆ 11.30ಕ್ಕೆ ವಿಶ್ವಾಸಮತದ ಭರವಸೆ, ಮಧ್ಯಾಹ್ನ 12ಕ್ಕೆ ಆಪರೇಷನ್ ಕಮಲ, ಮಧ್ಯಾಹ್ನ 1 ಗಂಟೆ ಐಎಂಎ ಬಿರಿಯಾನಿ ಹೀಗೆ ಹಲವು ವಿಚಾರಗಳ ಚರ್ಚೆ ನಡೆಯುತ್ತಲೇ ಇತ್ತು. ಮಧ್ಯಾಹ್ನ 3.30ಕ್ಕೆ ಕಲಾಪ ಮುಂದೂಡಿಕೆಯ ತಂತ್ರ ಶುರುವಾಗಿದ್ದು, 5 ಗಂಟೆಯಾಗುತ್ತಿದ್ದಂತೆ ಬಿಜೆಪಿಯ ಜೆ.ಸಿ. ಮಾಧುಸ್ವಾಮಿ, ಸಭಾಧ್ಯಕ್ಷರು ನೀಡಿದ ಭರವಸೆಯನ್ನು ಇಂದಾದರೂ ಈಡೇರಿಸಿ ಎಂದು ಮನವಿ ಮಾಡಿದರು.

    ಚರ್ಚೆ ಮಾಡಲು ಸಾಕಷ್ಟು ವಿಷಯಗಳಿವೆ, ಮೊದಲ ಬಾರಿಗೆ ಆಯ್ಕೆಯಾದ ನಮಗೂ ಅವಕಾಶ ಕೊಡಿ ಎಂದು ಪಟ್ಟು ಹಿಡಿದ ಕಾಂಗ್ರೆಸ್-ಜೆಡಿಎಸ್‍ನ ಶಾಸಕರು ಗದ್ದಲ ಎಬ್ಬಿಸಿದ್ದರು. ಅಲ್ಲದೇ ತಮ್ಮ ಆಸನಗಳನ್ನು ಬಿಟ್ಟು, ವಿಧಾನಸಭೆಯ ಸಭಾಂಗಣದ ಮೊದಲ ಆಸನಗಳ ಬಳಿ ಗಲಾಟೆ ಮಾಡತೊಡಗಿದರು. ಇದರಿಂದಾಗಿ ಸದನದಲ್ಲಿ ಕೋಲಾಹಲ ಉಂಟಾಗಿತ್ತು.

    ಈ ವೇಳೆ ಸಭಾಧ್ಯಕ್ಷರ ಕೊಠಡಿಗೆ ತೆರಳಿದ ಸಿಎಂ, ಸಿದ್ದರಾಮಯ್ಯ ಹಾಗೂ ಸಚಿವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವಂತೆ ಮನವಿ ಮಾಡಿದರು. ಆದರೆ ಅದಕ್ಕೆ ಸಭಾಧ್ಯಕ್ಷರು ಒಪ್ಪಲಿಲ್ಲ. ಬದಲಿಗೆ 9 ಗಂಟೆಯ ಒಳಗಡೆ ನಾನೇ ರಾಜೀನಾಮೆ ಕೊಡುತ್ತೇನೆ ಎಂದು ಬೆದರಿಕೆವೊಡ್ಡಿದ್ದರು. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಮತ್ತೆ ಗಲಾಟೆ ಮಾಡಿದರು. ಆಗ ಎದ್ದು ನಿಂತ ಸಿಎಂ, ಮೈತ್ರಿ ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಯಾರೊಬ್ಬರೂ ಅದಕ್ಕೆ ಸೊಪ್ಪು ಹಾಕಲಿಲ್ಲ. ಬಳಿಕ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಎಲ್ಲರನ್ನೂ ಗದರಿ ತಮ್ಮ ಆಸನಗಳಲ್ಲಿ ಕೂರುವಂತೆ ಮಾಡಿದರು.

    ಇಡೀ ರಾಜ್ಯದ ಜನರು ನಮ್ಮ ನಡವಳಿಕೆಗಳನ್ನು ನೋಡುತ್ತಿದ್ದಾರೆ. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ನಾನು ರಾತ್ರಿ 11 ಗಂಟೆಗೆಯವರೆಗೂ ಇಲ್ಲಿಯೇ ಕೂರುತ್ತೇನೆ. ಯಾರು ಬೇಕಾದರೂ ಚರ್ಚೆ ಮಾಡಿ. ಇವತ್ತೇ ವಿಶ್ವಾಸಮತದ ನಿರ್ಣಯದ ಪ್ರಕ್ರಿಯೆಯನ್ನು ಮುಗಿಸೋಣ ಎಂದು ಸ್ಪೀಕರ್ ಹೇಳಿದರು. ಸಿದ್ದರಾಮಯ್ಯನವರು ಎದ್ದು ನಿಂತು ಮಂಗಳವಾರ ಎಲ್ಲದ್ದಕ್ಕೂ ಅಂತ್ಯ ಹಾಡೋಣ ಎಂದಾಗ ಸ್ಪೀಕರ್ ಎಷ್ಟು ಗಂಟೆಯ ಒಳಗಡೆ ಮುಗಿಸುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ ರಾತ್ರಿ 8 ಗಂಟೆ ಎಂದಾಗ ಸ್ಪೀಕರ್ ಇಷ್ಟು ಸಮಯ ನೀಡುವುದಿಲ್ಲ. ಸಂಜೆ 4 ಗಂಟೆಗೆ ಚರ್ಚೆ ಮುಗಿಯಬೇಕು ನಂತರ ಸಿಎಂ ಮಾತನಾಡಿ 6 ಗಂಟೆಗೆ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದು ಹೇಳಿ ಕಲಾಪವನ್ನು ಮುಂದೂಡಿದರು.

    ಒಟ್ಟಿನಲ್ಲಿ ಬೆಳಗ್ಗೆಯೂ ಭಾಷಣ, ಮಧ್ಯಾಹ್ನವೂ ಭಾಷಣ, ಮಧ್ಯರಾತ್ರಿಯವರೆಗೂ ಬರೀ ಭಾಷಣ ನಡೆದಿದ್ದು, ಮಿಡ್‍ನೈಟ್‍ವರೆಗೂ ಬರೀ ಮಾತಿನ ಸಮರದಲ್ಲಿ ಕಲಾಪ ಮುಗಿದು ಹೋಯಿತು.

  • ವಿಶ್ವಾಸಮತ ಯಾಚನೆಗೆ ವಾಜಪೇಯಿ 10 ದಿನ ತೆಗ್ದುಕೊಂಡಿದ್ದರು- ರೇವಣ್ಣ

    ವಿಶ್ವಾಸಮತ ಯಾಚನೆಗೆ ವಾಜಪೇಯಿ 10 ದಿನ ತೆಗ್ದುಕೊಂಡಿದ್ದರು- ರೇವಣ್ಣ

    ಮೈಸೂರು: ಮೂರನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಮೊರೆ ಹೋದ ಸಚಿವ ಹೆಚ್.ಡಿ ರೇವಣ್ಣ ಸರ್ಕಾರ ಉಳಿಸಲು ಸಿಎಂ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

    ದೇವಿಯ ದರ್ಶನದ ಬಳಿಕ ಮಾತನಾಡಿದ ರೇವಣ್ಣ, ನೋಡ್ರಿ.. ಇದೇ ಬಿಜೆಪಿಯ ಈ ಹಿಂದಿನ ಪ್ರಧಾನಿ ವಾಜಪೇಯಿ ಅವರು ವಿಶ್ವಾಸ ಮತ ತೋರಿಸಲು ಹತ್ತು ದಿನ ಸಮಯ ತೆಗೆದು ಕೊಂಡಿದ್ದರು. ಹೀಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪೀಕರ್ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

    ವಿಶ್ವಾಸ ಮತಕ್ಕಾಗಿಯೇ ಮುಖ್ಯಮಂತ್ರಿ ಅವರು ಜುಲೈ 12ರಂದು ಕೇಳಿದರು. ಅಲ್ಲದೆ 12ರಂದು ಮೀಟಿಂಗ್ ಕೂಡ ಕರೆದಿದ್ದು, ಬಿಜೆಪಿಯವರು ಬಂದಿಲ್ಲ. ಜುಲೈ 18ರಂದು ಮತ್ತೆ ವಿಶ್ವಾಸಮತಕ್ಕೆ ಬಂದೆವು. ಆಗ ಸುಪ್ರೀಂಕೋರ್ಟ್ ಕೆಲವು ಡೈರೆಕ್ಷನ್ ನೀಡಿತ್ತು ಎಂದರು.

    ಇಲ್ಲಿ ಯಾರು ಕಾಲ ಹರಣ ಮಾಡುತ್ತಿದ್ದಾರೆ ಎಂದು ಜನ ನೋಡುತ್ತಿದ್ದಾರೆ. ಈ ವಿಚಾರವಾಗಿ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

  • ಕೊನೆ ಕ್ಷಣದಲ್ಲಿ ಸರ್ಕಾರ ಉಳಿಸಲು ಗೌಡರ ಮಾಸ್ಟರ್ ಪ್ಲ್ಯಾನ್

    ಕೊನೆ ಕ್ಷಣದಲ್ಲಿ ಸರ್ಕಾರ ಉಳಿಸಲು ಗೌಡರ ಮಾಸ್ಟರ್ ಪ್ಲ್ಯಾನ್

    ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬಹುಮತದ ಟೆನ್ಶನ್ ಆಗಿದೆ. ಇತ್ತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹೆಜ್ಜೆ ನಿಗೂಢವಾಗಿದ್ದು, ಸರ್ಕಾರ ಉಳಿಸಲು ದೇವೇಗೌಡರು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

    ದೇವೇಗೌಡರು ಬಹುಮತದವರೆಗೂ ಕಾದು ನೋಡಿ ಎಂದಿದ್ದಾರೆ. ಹೀಗಾಗಿ ಜೆಡಿಎಸ್ ಶಾಸಕರಿಗೂ ದೇವೇಗೌಡರ ನಡೆ ಅರ್ಥವಾಗುತ್ತಿಲ್ಲ. ಬುಧವಾರ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಜೊತೆ ದೇವೇಗೌಡ ಅವರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಹೀಗಾಗಿ ಕಾನೂನಿನ ಹೋರಾಟದಲ್ಲೇ ಸರ್ಕಾರ ಉಳಿಸಿಕೊಳ್ಳಲು ದೇವೇಗೌಡರ ರಣತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಏನದು ಮಾಸ್ಟರ್ ಪ್ಲ್ಯಾನ್?
    ಬಹುಮತದ ಚರ್ಚೆಯನ್ನು ಎರಡು ಮೂರು ದಿನ ಎಳೆಯುವುದು. ಈ ವೇಳೆ ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿಪ್ ಗೊಂದಲದ ಬಗ್ಗೆ ನಿವಾರಣೆ ಮಾಡಿಕೊಳ್ಳುವುದು. ಒಂದು ವೇಳೆ ವಿಪ್ ಉಲ್ಲಂಘಿಸಿದ್ದಕ್ಕೆ ಶಾಸಕರನ್ನು ಅನರ್ಹತೆ ಮಾಡಬಹುದು ಎಂದು ತೀರ್ಪು ನೀಡಿದರೆ ಅನರ್ಹತೆ ಅಸ್ತ್ರ ಬಳಸಿ ಕೊನೆ ಕ್ಷಣದಲ್ಲಿ ಸರ್ಕಾರವನ್ನು ರಕ್ಷಿಸಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.

    ಬಹುಮತ ಚರ್ಚೆಯಲ್ಲಿ ಸಿಗಬಹುದಾದ ಸಮಯದಲ್ಲಿ 3-4 ಜನ ಅತೃಪ್ತರನ್ನ ಸಾಧ್ಯವಾದಷ್ಟು ಮನವೊಲಿಸುವುದು. ಬೆಂಗಳೂರಿನ ಶಾಸಕರಾದ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಮತ್ತು ಚಿಕ್ಕಬಳ್ಳಾಪುರದ ಸುಧಾಕರ್ ಅವರ ಮನವೊಲಿಕೆಗೆ ಯತ್ನ ಮಾಡುವುದು. ಒಂದು ವೇಳೆ ಅತೃಪ್ತರ ಪೈಕಿ 3-4 ಜನ ಕೊನೆ ಕ್ಷಣದಲ್ಲಿ ಬೆಂಬಲ ಕೊಟ್ಟರೆ ಸರ್ಕಾರ ಸೇಫ್ ಆಗುತ್ತದೆ.

    ಬಹುಮತದ ಚರ್ಚೆ ವೇಳೆ ಸಿಗಬಹುದಾದ ಸಮಯದಲ್ಲಿ ಸಾಧ್ಯವಾದಷ್ಟು ರಿವರ್ಸ್ ಆಪರೇಷನ್ ಮಾಡುವುದಕ್ಕೆ ಪ್ರಯತ್ನ ಮಾಡುವುದು. 3-4 ಜನ ಬಿಜೆಪಿ ಶಾಸಕರನ್ನು ಸೆಳೆದರೂ ಸರ್ಕಾರ ಸೇಫ್ ಆಗುತ್ತದೆ. ಒಂದು ವೇಳೆ ಸರ್ಕಾರ ಉಳಿಸಿಕೊಳ್ಳಲು ಆಗದೇ ಇದ್ದರೆ ಸರ್ಕಾರ ಬಿದ್ದ ನಂತರ ಬಿಜೆಪಿ ವರಿಷ್ಠರ ಜೊತೆ ಮಾತಾಡಿ ಬಿಜೆಪಿ ಬಾಹ್ಯ ಬೆಂಬಲ ನೀಡಿ ಸರ್ಕಾರದ ಭಾಗವಾಗಿ ಪಕ್ಷವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

    ಒಟ್ಟು 224 ಮಂದಿ ಶಾಸಕರ ಪೈಕಿ 16 ಮಂದಿ ಶಾಸಕರ ರಾಜೀನಾಮೆ ನೀಡಿದ್ದರಿಂದ ಸದನದ ಬಲ 208ಕ್ಕೆ ಕುಸಿದಿದೆ. ಒಟ್ಟು 79 ಕಾಂಗ್ರೆಸ್ ಶಾಸಕರ ಪೈಕಿ 13 ಮಂದಿ ರಾಜೀನಾಮೆ ನೀಡಿದ್ದು, ಸ್ಪೀಕರ್ ಸೇರಿ 66 ಸದಸ್ಯರ ಬಲ ಹೊಂದಿದ್ದಾರೆ. ಮೂರು ಮಂದಿ ಜೆಡಿಎಸ್ ಶಾಸಕರ ರಾಜೀನಾಮೆಯಿಂದ ದಳ ಶಾಸಕರ ಸಂಖ್ಯೆ 34ಕ್ಕೆ ಕುಸಿದಿದೆ. ಇಬ್ಬರು ಪಕ್ಷೇತರರ ಬೆಂಬಲದಿಂದ ಬಿಜೆಪಿ ಬಲ 107ಕ್ಕೆ ಏರಿಕೆಯಾಗಿದ್ದರೆ ಬಿಎಸ್‍ಪಿ ಶಾಸಕ ಎನ್ ಮಹೇಶ್ ವಿಧಾನಸಭೆಯಲ್ಲಿ ಪ್ರತ್ಯೇಕ ಸೀಟ್ ಕೇಳಿದ್ದಾರೆ. 208 ಶಾಸಕರು ಇರುವ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 105 ಶಾಸಕರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ದೋಸ್ತಿಗಳಿಗೆ 99 ಶಾಸಕರ ಬೆಂಬಲವಿದೆ.

  • ಇಂದು ಸ್ಪೀಕರ್ ನಡೆ ಹೇಗಿರಬಹುದು? ಹೇಗೆ ಲೆಕ್ಕಾಚಾರ ಹಾಕಲಾಗುತ್ತೆ?

    ಇಂದು ಸ್ಪೀಕರ್ ನಡೆ ಹೇಗಿರಬಹುದು? ಹೇಗೆ ಲೆಕ್ಕಾಚಾರ ಹಾಕಲಾಗುತ್ತೆ?

    ಬೆಂಗಳೂರು: ರಾಜ್ಯದ ಜನತೆ ಬಹಳ ಕುತೂಹಲದಿಂದ ಕಾಯುತ್ತಿದ್ದ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ಇವತ್ತು ನಡೆಯಲಿದೆ. ಬೆಳಗ್ಗೆ 11 ಗಂಟೆ ಶುರುವಾಗಲಿರುವ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಎಷ್ಟು ಗಂಟೆಗೆ ಮುಗಿಯಬಹುದು ಎನ್ನುವುದು ಗೊತ್ತಿಲ್ಲ. ಆದರೆ ಇಂದು ಸ್ಪೀಕರ್ ಅವರು ಯಾವ ರೀತಿ ಪಾತ್ರ ವಹಿಸುತ್ತಾರೆ ಅನ್ನೋದು ಮಾತ್ರ ಬಹಳ ಕುತೂಹಲಕಾರಿಯಾಗಿದೆ.

    ಕಳೆದ ಒಂದು ವಾರಗಳಿಂದ ಸಮ್ಮಿಶ್ರ ಸರ್ಕಾರ ಉಳಿಸಿದ್ದ ಸ್ಪೀಕರ್ ಏನಾದರೂ ಜಾದು ಮಾಡಿ ಉಳಿಸುತ್ತಾರೆ ಅನ್ನೋ ನಂಬಿಕೆ ಸಹ ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಇದೆ.

    ಇಂದು ಏನು ಮಾಡಬಹುದು?
    ಮೊದಲು ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಸ್ವವಿವರವಾಗಿ ಸದನದ ಮುಂದೆ ಪ್ರಸ್ತಾಪ ಮಾಡಬಹುದು. ಸ್ಪೀಕರ್ ಅವರ ಅಧಿಕಾರದ ಬಗ್ಗೆ ಸುಪ್ರೀಂ ಕೊಟ್ಟಿರುವ ಆದೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬಹುದು. ನಂತರ ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರೀಂ ಕೋರ್ಟ್ ಕಾಲಮಿತಿ ನಿಗದಿ ಮಾಡದ ಕಾರಣ ಅವರ ರಾಜೀನಾಮೆಗೆ ಸ್ಪಷ್ಟನೆ ಕೊಡಬಹುದು ಅಥವಾ ರಾಜೀನಾಮೆ ಅಂಗೀಕರಿಸಲೂಬಹುದು.

    ಅನರ್ಹತೆ ವಿಚಾರವಾಗಿ ಹಳೆಯ ವಿಪ್ ಉಲ್ಲಂಘನೆ ಮಾಡಿದ್ದಕ್ಕೆ ಇಬ್ಬರು ಶಾಸಕರನ್ನು ಅನರ್ಹತೆ ಮಾಡಬಹುದು. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ ವಾಪಸ್ ತೆಗೆದುಕೊಂಡಿರುವ ಪಕ್ಷೇತರರಿಗೆ ಪ್ರತ್ಯೇಕ ಆಸನ ನೀಡುವ ಬಗ್ಗೆ ಚರ್ಚೆ ನಡೆಸಬಹುದು. ಈ ಚರ್ಚೆಯ ನಂತರ ವಿಶ್ವಾಸ ಮತಯಾಚನೆಗೆ ಚಾಲನೆ ನೀಡಬಹುದು.

    ವಿಶ್ವಾಸ ಮತ ಯಾಚನೆಯ ಮೇಲೆ ಶಾಸಕರು ಆಡುವ ಮಾತುಗಳಿಗೆ ಅವಕಾಶ ನೀಡಬಹುದು. ಒಂದು ವೇಳೆ ಸಾಕಷ್ಟು ಶಾಸಕರು ಭಾಷಣಕ್ಕೆ ಮನವಿ ಮಾಡಿದರೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಎರಡು-ಮೂರು ದಿನಗಳ ಕಾಲ ನಡೆಯಬಹುದು. ವಿಶ್ವಾಸ ಮತಯಾಚನೆಯ ವೇಳೆ ಸದಸ್ಯರ ಭಾಷಣ ಒಂದೇ ದಿನಕ್ಕೆ ಅಂತ್ಯವಾದರೆ ಇಂದೇ ವಿಶ್ವಾಸ ಮತಯಾಚನೆಗೆ ಅವಕಾಶ ಮಾಡಿಕೊಡಬಹುದು.

    ಮೊದಲು ವಿಶ್ವಾಸದ ಪರವಾಗಿ ಇರುವ ಸದಸ್ಯರಿಗೆ ಕೈ ಎತ್ತುವಂತೆ ಸೂಚನೆ ಕೊಡಬಹುದು. ಕೈ ಎತ್ತಿದ ಸದಸ್ಯರ ಲೆಕ್ಕ ಮಾಡಿಕೊಂಡು ಅವಿಶ್ವಾಸ ಇರುವ ಸದಸ್ಯರಿಗೆ ಕೈ ಎತ್ತುವಂತೆ ಸೂಚನೆ ಕೊಡಬಹುದು. ಅವಿಶ್ವಾಸ ಇರುವ ಸದಸ್ಯರು ಎತ್ತಿದ್ದ ಕೈಗಳನ್ನು ಎಣಿಸಿಕೊಂಡ ನಂತರ ಸ್ಪೀಕರ್ ವಿಶ್ವಾಸ ಮತಕ್ಕೆ ಎಷ್ಟು ಮತಗಳು ಬಂದಿವೆ, ಎಷ್ಟು ವಿರುದ್ಧವಾಗಿ ಬಂದಿವೆ ಎಂದು ಘೋಷಣೆ ಮಾಡಿ ಫಲಿತಾಂಶ ಪ್ರಕಟಿಸುತ್ತಾರೆ.

  • ಸಿಎಂ ವಿಶ್ವಾಸ ಮತಯಾಚನೆ ಮಾಡಿದ್ರೂ, ಮಾಡದಿದ್ದರೂ ಬಿಜೆಪಿಯಿಂದ ಮಹಾ ಪ್ಲಾನ್

    ಸಿಎಂ ವಿಶ್ವಾಸ ಮತಯಾಚನೆ ಮಾಡಿದ್ರೂ, ಮಾಡದಿದ್ದರೂ ಬಿಜೆಪಿಯಿಂದ ಮಹಾ ಪ್ಲಾನ್

    ಬೆಂಗಳೂರು: ಮೈತ್ರಿ ಸರ್ಕಾರ ಇಂದು ಕೊನೆಯಾಗುತ್ತಾ ಅಥವಾ ಉಳಿದುಕೊಳ್ಳುತ್ತಾ ಗೊತ್ತಿಲ್ಲ. ಆದರೆ ಇಂದಿನ ವಿಧಾನಸಭೆ ಕಲಾಪ ಮಾತ್ರ ಭಾರೀ ಕುತೂಹಲ ಮೂಡಿಸಿದೆ. ಇಂದು ಸಿಎಂ ವಿಶ್ವಾಸ ಮತಯಾಚನೆ ಮಾಡುತ್ತಾರಾ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಈ ನಡುವೆ ಸಿಎಂ ವಿಶ್ವಾಸ ಮತಯಾಚನೆ ಮಾಡಿದರು, ಮಾಡದಿದ್ದರೂ ಬಿಜೆಪಿ ಮಹಾ ಪ್ಲಾನ್ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಒಂದು ವೇಳೆ ಸಿಎಂ ವಿಶ್ವಾಸಮತ ಯಾಚನೆಗೆ ಮುಂದಾಗದಿದ್ದಲ್ಲಿ ಇಂದೇ ವಿಶ್ವಾಸ ಮತಯಾಚಿಸಿ ಇಲ್ಲದಿದ್ದರೆ ಕಲಾಪವನ್ನೇ ನಡೆಸಬೇಡಿ ಎಂದು ಒತ್ತಡ ಹೇರಲು ಬಿಜೆಪಿ ಪ್ಲಾನ್ ಮಾಡಿದೆ. ಅಷ್ಟೇ ಅಲ್ಲದೆ ನಿಮ್ಮ ವಿಶ್ವಾಸ ಮತದ ಸವಾಲನ್ನು ಇಂದೇ ಎದುರಿಸಿ ಎಂದು ಬಿಜೆಪಿ ಪ್ರತಿ ಸವಾಲು ಹಾಕಲಿದೆ. ಜೊತೆಗೆ ಸ್ಪೀಕರ್‌ಗೂ ಇಂದೇ ವಿಶ್ವಾಸಮತ ಯಾಚನೆಗೆ ಅವಕಾಶ ಕೊಡುವಂತೆ ಒತ್ತಾಯಿಸಲು ಬಿಜೆಪಿ ಎಲ್ಲ ತಯಾರಿ ಮಾಡಿಕೊಂಡಿದೆ.

    ಸಿಎಂ ಇಂದೇ ವಿಶ್ವಾಸ ಮತಯಾಚನೆ ಮಾಡಲು ಮುಂದಾಗಿ ಭಾಷಣ ಮಾಡಿದರೆ ಇದಕ್ಕೂ ಬಿಜೆಪಿ ಪ್ಲಾನ್ ರೆಡಿ ಮಾಡಿದೆ. ಸಿಎಂ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಪಕ್ಷದ ಶಾಸಕರು ಸಿಟ್ಟೇಳುವಂತೆ ಪ್ರಚೋದನಕಾರಿ ಭಾಷಣ ಮಾಡಬಹುದು ಅಥವಾ ಬಿಜೆಪಿಯ ಶಾಸಕರು ಗದ್ದಲ ಎಬ್ಬಿಸುವಂತೆ ಭಾಷಣ ಮಾಡಬಹುದು. ಈ ವೇಳೆ ಧ್ವನಿಮತದ ಮೂಲಕ ವಿಶ್ವಾಸ ಮತ ಪ್ರಸ್ತಾವನೆಗೆ ಅಂಗೀಕಾರ ಪಡೆದುಕೊಳ್ಳುವುದು ಸಿಎಂ ಪ್ಲಾನ್ ಎಂದು ಬಿಜೆಪಿ ಊಹಿಸಿದೆ.

    ಇದಕ್ಕೆ ತಕ್ಕ ಪ್ರತಿ ತಂತ್ರವನ್ನೂ ಬಿಜೆಪಿ ಪಾಳಯ ಸಿದ್ಧ ಮಾಡಿಕೊಂಡಿದ್ದು, ಸಿಎಂ ಹೇಗೆ, ಎಷ್ಟೇ ಖಾರವಾಗಿ ಮಾತಾಡಿದರೂ ಬಿಜೆಪಿ ಶಾಸಕರು ಮೌನವಾಗಿಯೇ ಇರುತ್ತಾರಂತೆ. ಸದನದಲ್ಲಿದ್ದೇ ಧ್ವನಿಮತ ಬದಲು ಕೈ ಎತ್ತುವ ಮೂಲಕ ಪ್ರಸ್ತಾವನೆಗೆ ವಿರೋಧಿಸಿ ಸರ್ಕಾರ ಬೀಳಿಸುವುದು ಬಿಜೆಪಿ ಪ್ಲಾನ್ ಆಗಿದೆ. ಸಿಎಂ ವಿಶ್ವಾಸ ಮತ ಯಾಚಿಸದೇ ಕಾರ್ಯಕಲಾಪಗಳಿಗೆ ಹೋದರೆ ಅದಕ್ಕೂ ಬಿಜೆಪಿ ತಂತ್ರ ರೆಡಿ ಮಾಡಿಕೊಂಡಿದ್ದು, ಅಲ್ಪ ಮತಕ್ಕೆ ಕುಸಿದಿರುವ ಮೈತ್ರಿ ಸರ್ಕಾರ ಸದನ ನಡೆಸಲು ಬಿಡದಿರಲು ಸಹ ಬಿಜೆಪಿ ರಣತಂತ್ರ ಹೆಣೆದಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.