Tag: Conductors

  • ಲೇಡಿ ಕಂಡಕ್ಟರ್‍ಗಳಿಗೆ ಡಿಫೆನ್ಸ್ ಟ್ರೈನಿಂಗ್ ನೀಡಲು ಮುಂದಾದ ಬಿಎಂಟಿಸಿ

    ಲೇಡಿ ಕಂಡಕ್ಟರ್‍ಗಳಿಗೆ ಡಿಫೆನ್ಸ್ ಟ್ರೈನಿಂಗ್ ನೀಡಲು ಮುಂದಾದ ಬಿಎಂಟಿಸಿ

    ಬೆಂಗಳೂರು: ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣಾ ತರಬೇತಿ ನೀಡಲು ಬಿಎಂಟಿಸಿ ಮುಂದಾಗಿದೆ. ಇನ್ನು ಮುಂದೆ ಮಾರ್ಷಲ್ ಆರ್ಟ್ಸ್, ಕರಾಟೆಯನ್ನು ಲೇಡಿ ಕಂಡಕ್ಟರ್ ಗಳು ಕಲಿಯಲಿದ್ದಾರೆ.

    ಬಿಎಂಟಿಸಿ ಲೇಡಿ ಕಂಡಕ್ಟರ್ ತಂಟೆಗೆ ಬರೋ ಮುನ್ನ ಹುಷಾರ್ ಆಗಿರಬೇಕು. ಬಸ್‍ಗಳಲ್ಲಿ ಬೇಕಾ ಬಿಟ್ಟಿಯಾಗಿ ವರ್ತಿಸುವ ಮುನ್ನ ಎಚ್ಚರಿಕೆ ವಹಿಸುವುದು ಒಳ್ಳೆಯದು. ಯಾಕೆಂದರೆ ಮಾರ್ಷಲ್ ಆರ್ಟ್ಸ್, ಕರಾಟೆ, ಸಮರ ಕಲೆಗಳಲ್ಲಿ ಬಿಎಂಟಿಸಿಯ ಲೇಡಿ ಕಂಡಕ್ಟರ್  ಎಕ್ಸ್ ಪರ್ಟ್ಸ್ ಆಗಲಿದ್ದಾರೆ.

    ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣೆ ತರಬೇತಿ ನೀಡಲು ಮುಂದಾಗಿದೆ. ಕೆಲಸದ ವೇಳೆ ಹಾಗೂ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳ ಬಗ್ಗೆ ಆಗಾಗ ದೂರು ದಾಖಲಾಗುತ್ತಿತ್ತು. ಮಹಿಳೆಯರ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವ ತರಬೇತಿ ನೀಡಲು ಬಿಎಂಟಿಸಿ ಮುಂದಾಗುತ್ತಿದೆ.

    ಮಹಿಳಾ ಕಂಡಕ್ಟರ್ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಡಿಫೆನ್ಸ್ ಟ್ರೈನಿಂಗ್ ಕರಾಟೆ, ಜೂಡೋ, ಸಮರ ಕಲೆ, ಸ್ವಯಂ ದೃಢೀಕರಣ, ಕಾನೂನು ಜ್ಞಾನ, ಸಾರ್ವಜನಿಕ ಭಾಷಣದ ಬಗ್ಗೆ ತರಬೇತಿಯನ್ನು ನೀಡಲು ಬಿಎಂಟಿಸಿ ಮುಂದಾಗಿದೆ. 21 ದಿನಗಳ ಕೋರ್ಸ್ ಇದಾಗಿದ್ದು, 42 ಗಂಟೆಗಳ ತರಬೇತಿ ಹಾಗೂ 120 ನಿಮಿಷಗಳ ಸೆಷನ್ ನಡೆಸಲಾಗುತ್ತದೆ.

  • ಬಿಎಂಟಿಸಿಯ 18 ಸಿಬ್ಬಂದಿ ವಿರುದ್ಧ ಎಫ್‍ಐಆರ್

    ಬಿಎಂಟಿಸಿಯ 18 ಸಿಬ್ಬಂದಿ ವಿರುದ್ಧ ಎಫ್‍ಐಆರ್

    ಬೆಂಗಳೂರು: ದೀರ್ಘಕಾಲದ ರಜೆ ಮೇಲೆ ತೆರಳಿ ಬಳಿಕ ಕೆಲಸಕ್ಕೆ ವಾಪಾಸಾಗುವಾಗ ನಕಲಿ ವೈದ್ಯಕೀಯ ಸರ್ಟಿಫಿಕೇಟ್ ಸಲ್ಲಿಸಿದ ಸಿಬ್ಬಂದಿ ವಿರುದ್ಧ ಬಿಎಂಟಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ.

    ಸುದೀರ್ಘ ರಜೆಯ ಬಳಿಕ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾದ 18 ಮಂದಿ ಡ್ರೈವರ್, ಕಂಡಕ್ಟರ್ ವಿರುದ್ಧ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿ ಸಿ.ಎಸ್ ಸ್ಮಿತಾ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

    ಬಿಎಂಟಿಸಿಯ ಡಿಪೋಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರು ಮೇಲಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ದೀರ್ಘಕಾಲದ ರಜೆ ಮೇಲೆ ತೆರಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟು ಬಾರಿ ನೋಟೀಸ್ ನೀಡಿದರೂ ಸೇವೆಗೆ ಮರಳದೆ ರಜೆ ಮುಗಿದ ಬಳಿಕ ಅನಾರೋಗ್ಯದ ನೆಪ ಹೇಳಿ ವೈದ್ಯಕೀಯ ಸರ್ಟಿಫಿಕೇಟ್ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

    ಯಾವಾಗ ಇಂತಹ ಪ್ರಕರಣಗಳು ಪುನರಾವರ್ತನೆ ಆಗಲು ಶುರುವಾಯಿತೋ ಇದರಿಂದ ಎಚ್ಚೆತ್ತ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳ ವೈದ್ಯಕೀಯ ಸರ್ಟಿಫಿಕೇಟ್ ನೀಡಿದ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿದಾಗ ಅದು ನಕಲಿ ಪ್ರಮಾಣ ಪತ್ರ ಎನ್ನುವುದು ತಿಳಿದು ಬಂದಿದೆ. ಹೀಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗಿರುವ 18 ಮಂದಿ ಚಾಲಕರ ಹಾಗೂ ನಿರ್ವಾಹಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈ ಮೂಲಕ ಬಿಎಂಟಿಸಿ, ರಜೆ ಮೇಲೆ ತೆರಳುವ ಎಲ್ಲಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.

  • ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಂಡ ಸಿಬ್ಬಂದಿಗೆ ಸಾರಿಗೆ ಇಲಾಖೆಯಿಂದ ಗಿಫ್ಟ್ – ಸುತ್ತೋಲೆಯಲ್ಲಿ ಏನಿದೆ?

    ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಂಡ ಸಿಬ್ಬಂದಿಗೆ ಸಾರಿಗೆ ಇಲಾಖೆಯಿಂದ ಗಿಫ್ಟ್ – ಸುತ್ತೋಲೆಯಲ್ಲಿ ಏನಿದೆ?

    ಬೆಂಗಳೂರು: ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಂಡ ಸಿಬ್ಬಂದಿಗೆ ವಿಶೇಷ ವೇತನ ನೀಡಲು ಕೆಎಸ್‍ಆರ್‍ಟಿಸಿ ಮುಂದಾಗಿದೆ.

    ಎರಡು ಮಕ್ಕಳನ್ನು ಹೊಂದಿದ್ರೆ ಸಿಬ್ಬಂದಿಗೆ ವಾರ್ಷಿಕ ವಿಶೇಷ ವೇತನ ಭಡ್ತಿ ನೀಡುವುದಾಗಿ ಕೆಎಸ್‍ಆರ್‍ಟಿಸಿ ಹೇಳಿದೆ. ವೈದ್ಯರಿಂದ ದೃಢೀಕರಿಸಿದ ದಾಖಲೆ ನೀಡಿದರೆ ಪೂರ್ಣ ಸೇವಾವಧಿಗೆ ನೀಡಲು ಚಿಂತನೆ ನಡೆಸಿದೆ.

    ಈ ಆಫರ್ ಪಡೆಯಬೇಕಾದರೆ ನೌಕರ ಅಥವಾ ಆತನ ಪತ್ನಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ದೃಢೀಕರಣ ಪತ್ರ ನೀಡುವುದು ಕಡ್ಡಾಯವಾಗಿದೆ. ಈ ಮೂಲಕ ಎರಡು ಮಕ್ಕಳು ಸಾಕು ಎನ್ನುವ ಸರ್ಕಾರದ ಯೋಜನೆಗೆ ಸಾರಿಗೆ ನಿಗಮ ಕೈ ಜೋಡಿಸಿದೆ.

    ತರಬೇತಿ ನೌಕರರಿಗೂ ಈ ನಿಯಮ ಅನ್ವಯವಾಗಲಿದ್ದು, -ಕೆಎಸ್‍ಆರ್‍ಟಿಸಿ ಎಂಡಿ ಶಿವಯೋಗಿ ಕಳಸದ್ ಅವರು ಜುಲೈ 27 ರಂದು ಸುತ್ತೋಲೆ ಹೊರಡಿಸಿದ್ದಾರೆ.

    ಸುತ್ತೋಲೆಯಲ್ಲಿ ಏನಿದೆ?
    1 ಅಥವಾ 2 ಜೀವಂತ ಮಕ್ಕಳನ್ನು ಹೊಂದಿದ್ದು, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸಂಸ್ಥೆಯ ನೌಕರರು ಅಥವಾ ಪತಿ/ಪತ್ನಿ, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ದಿನಾಂಕದಂದು ಅವರ ಹುದ್ದೆ ವೇತನ ಶ್ರೇಣಿಯ ವಾರ್ಷಿಕ ಬಡ್ತಿಯನ್ನು ವೈಯಕ್ತಿಕ ವೇತನವನ್ನಾಗಿ ಅವರ ಪೂರ್ಣ ಸೇವಾವಧಿ ಪಡೆಯಲು ಅರ್ಹರಿರುತ್ತಾರೆ.

    ಸರ್ಕಾರಿ ಆದೇಶದ ಅನ್ವಯ ಕುಟುಂಬ ಯೋಜನೆಯಡಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿರುವ ಕುರಿತಂತೆ, ನೌಕರರು(ತರಬೇತಿ ನೌಕರರು ಸೇರಿದಂತೆ) ‘ವಿಶೇಷ ವೇತನ ಬಡ್ತಿ’ಗಾಗಿ ಸಂತಾನ ಹರಣ ಚಿಕಿತ್ಸೆ ಮಾಡಿಸಿದ ದಿನಾಂಕದಿಂದ ಎರಡು ವರ್ಷದೊಳಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ‘ವಿಶೇಷ ವೇತನ ಬಡ್ತಿ’ ಗೆ ಅರ್ಹರಾಗಿರುವುದಿಲ್ಲ ಎಂದು ನಿರ್ಣಯಿಸಲಾಗಿದೆ. ಸಂಬಂಧ ಪಟ್ಟವರು ಈ ಅಂಶವನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳಬೇಕು. ಉಲ್ಲೇಖಿತ ಸುತ್ತೋಲೆಯಲ್ಲಿನ ನಿರ್ದೇಶನಗಳಲ್ಲಿ ಬದಲಾವಣೆಗಳು ಇರುವುದಿಲ್ಲ. ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಜಾರಿಯಲ್ಲಿರುತ್ತದೆ.