Tag: Condolences

  • ಪಾಕಿಸ್ತಾನದೊಳಗೆ ಸೇರಿದ್ದ ಬಾಲಕಿಯನ್ನು ಕರೆತಂದ ಮಾತೃಹೃದಯಿ ಸುಷ್ಮಾ- ಡಿವಿಎಸ್

    ಪಾಕಿಸ್ತಾನದೊಳಗೆ ಸೇರಿದ್ದ ಬಾಲಕಿಯನ್ನು ಕರೆತಂದ ಮಾತೃಹೃದಯಿ ಸುಷ್ಮಾ- ಡಿವಿಎಸ್

    – ಸುಷ್ಮಾರ ಸಾಧನೆಯನ್ನು ನೆನಪಿಸಿಕೊಂಡು ಸಂತಾಪ

    ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸ ಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡ ಅವರು ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಕ್ಷಕ್ಕೆ ಹಾಗೂ ದೇಶಕ್ಕೆ ನೀಡಿರುವ ಕೊಡುಗೆಯನ್ನು ನೆನೆದು ಸಂತಾಪ ಸೂಚಿಸಿದ್ದಾರೆ.

    ಸುಷ್ಮಾ ಸ್ವರಾಜ್ ಅವರ ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದು, ಎಲ್ಲಾ ರಾಜಕಾರಣಿಗಳು ಹಾಗೂ ದೇಶದ ಜನತೆ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ರಾಜಕಾರಣದಲ್ಲಿ ಸುಷ್ಮಾ ಅವರ ಸಾಧನೆ, ಸಹೋದರಿಯಾಗಿ ತಮ್ಮೊಂದಿಗೆ ಇದ್ದ ನೆನಪುಗಳನ್ನು ನೆನೆದು ಸದಾನಂದ ಗೌಡ ಅವರು ಸರಣಿ ಟ್ವೀಟ್ ಮಾಡಿ ದುಃಖಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನಮ್ಮ ದೇಶ ಕಂಡ ಪ್ರತಿಭಾವಂತ ಮಹಿಳಾ ರಾಜಕಾರಣಿಗಳಲ್ಲಿ ಸುಷ್ಮಾರ ಹೆಸರು ಅಗ್ರ ಸ್ಥಾನದಲ್ಲಿದೆ. ಅವರ ವಾಕ್ ಚಾತುರ್ಯ, ವಿಚಾರ ವಿಮರ್ಶೆ, ಬುದ್ಧಿವಂತಿಕೆ, ದೈವ ಭಕ್ತಿ, ಸರಳ ಜೀವನ, ಎಲ್ಲವೂ ಅನುಕರಣೀಯ. ರಾಜಕೀಯವಾಗಿ ಅನೇಕ ಸ್ಥಾನ ಮಾನ ಪಡೆದ ಅವರು ವಿದೇಶಾಂಗ ಸಚಿವೆಯಾಗಿ ಸಲ್ಲಿಸಿದ ಸೇವೆ ಜನ ಮಾನಸದಲ್ಲಿ ಸ್ಥಿರ ಸ್ಥಾಯಿಯಾಗಿ ನಿಲ್ಲುವಂತದ್ದಾಗಿದೆ.

    ನನ್ನ ರಾಜಕೀಯ ಜೀವನದಲ್ಲಿ ಅವರನ್ನು ತುಂಬಾ ಸಮೀಪದಿಂದ ಬಲ್ಲೆ. ತಾವು ನಂಬಿಕೊಂಡಿದ್ದ ಸಿದ್ಧಾಂತದಲ್ಲಿ ಎಂದಿಗೂ ರಾಜಿ ಮಾಡಿ ಕೊಂಡವರಲ್ಲ. ಸಾಮಾನ್ಯರ ಸಂಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ, ಭಾರತದಿಂದ ತನಗರಿವಿಲ್ಲದೆ ಪಾಕಿಸ್ತಾನಕ್ಕೆ ಹೋಗಿ ಸೇರಿದ್ದ ಕಿವುಡ ಮತ್ತು ಮೂಗ ಬಾಲಕಿ ಗೀತಾಳನ್ನು ಮತ್ತೆ ನಮ್ಮ ದೇಶಕ್ಕೆ ಕರೆ ತರುವಲ್ಲಿ ತೋರಿಸಿದ ಮಾತೃ ಹೃದಯ, ಎಲ್ಲವೂ ನೆನಪಿನಂಗಳದಿಂದ ಎದ್ದು ನಿಲ್ಲುತ್ತಿವೆ.

    ದೇಶ ಕಂಡ ತುರ್ತು ಪರಿಸ್ಥಿತಿಯಲ್ಲಿ ಅವರು ಸಿಡಿದ್ದೆದ್ದ ರೀತಿ, ತಮ್ಮ ಕಿರಿಯ ವಯಸ್ಸಿನಲ್ಲೇ ಹರಿಯಾಣದ ಸಂಪುಟ ದರ್ಜೆ ಸಚಿವರಾಗಿ, ಮೊದಲ ಮಹಿಳಾ ವಕ್ತಾರರಾಗಿ, ದೆಹಲಿಯ ಮುಖ್ಯಮಂತ್ರಿಯಾಗಿ ಎಲ್ಲವೂ ಸಾಧನೆಯ ಪುಟಗಳಲ್ಲಿ ಸೇರಬೇಕಾದವು.

    ಈಗ ಮತ್ತೊಮ್ಮೆ ಅನಂತ ಕುಮಾರ್ ನೆನಪಾಗುತ್ತಿದ್ದಾರೆ. ಸುಷ್ಮಾರವರನ್ನು ಕರ್ನಾಟಕ ರಾಜಕೀಯಕ್ಕೆ ಕರೆತರುವಲ್ಲಿ ತೋರಿಸಿದ ಆಸ್ಥೆ ಅವರನ್ನು ಕನ್ನಡಿಗರ ಇನ್ನಷ್ಟು ಹತ್ತಿರ ಬರುವಂತೆ ಮಾಡಿತು. ನಮ್ಮೆಲ್ಲರ ಸಹೋದರಿಯಾಗಿ ಚಿರಕಾಲ ನಿಲ್ಲುವಂತೆ ಆಯಿತು. ಅಮ್ಮಾ ನಿಮ್ಮ ದೇಹ ಇಲ್ಲಿ ಇಲ್ಲದೇ ಇರಬಹುದು. ನೀವು ಬಿಟ್ಟು ಹೋದ ಆದರ್ಶಗಳು ಮುಂದಿನ ಪೀಳಿಗೆಯ ಜನತೆಗೆ ದಾರಿದೀಪ. ಅಮ್ಮ ಇದೇ ನನ್ನ ನಮನ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಮಂಗಳವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿರುವ ಸುಷ್ಮಾ ಸ್ವರಾಜ್(67) ಅವರ ಪಾರ್ಥಿವ ಶರೀರವನ್ನು ಜನಪತ್ ರಸ್ತೆಯ ಧವನ್ ದೀಪ್ ಕಟ್ಟಡದ ನಿವಾಸದಲ್ಲಿ ಇರಿಸಲಾಗಿದೆ. ಇಂದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಜಂತರ್ ಮಂತರ್‍ನಲ್ಲಿ ನಂತರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2:30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಆ ಬಳಿಕ 3 ಗಂಟೆಗೆ ಲೋಧಿ ರಸ್ತೆಯ ಶವಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

    https://www.youtube.com/watch?v=uGE9Fw-zTrg

  • ಸಿದ್ಧಾರ್ಥ್ ಸಾವು ಆಘಾತ ತಂದಿದೆ- ಹೆಚ್‍ಡಿಕೆ

    ಸಿದ್ಧಾರ್ಥ್ ಸಾವು ಆಘಾತ ತಂದಿದೆ- ಹೆಚ್‍ಡಿಕೆ

    ಬೆಂಗಳೂರು: ಆತ್ಮೀಯ ಗೆಳೆಯನ ಸಾವಿನ ಸುದ್ದಿ ಆಘಾತ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಗೆಳೆಯ, ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ಉದ್ಯಮಿ ಹಾಗೂ ಆತ್ಮೀಯ ಗೆಳೆಯ ಸಿದ್ಧಾರ್ಥ್ ಅವರ ನಿಧನದ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ. ಕಳೆದ 25 ವರ್ಷಗಳ ಸ್ನೇಹಿತ ಸಿದ್ಧಾರ್ಥ್ ಅವರು ಕರ್ನಾಟಕದ ಕಾಫಿ ಉದ್ಯಮವನ್ನು ವಿಶ್ವಕ್ಕೆ ಪರಿಚಯಿಸಿದ್ದರು. ಸಹಸ್ರಾರು ನೌಕರರಿಗೆ ತಮ್ಮ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿದ್ದರು. ಅವರ ನಿಧನದಿಂದ ಕರ್ನಾಟಕ ಶ್ರೇಷ್ಠ ಉದ್ಯಮಿಯೊಬ್ಬರನ್ನು ಕಳೆದುಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಸೋಮವಾರ ರಾತ್ರಿಯಿಂದ ಸಿದ್ಧಾರ್ಥ್ ಕಾಣೆಯಾಗಿದ್ದರು. ಆ ಬಳಿಕ ಅವರ ಪತ್ತೆಗಾಗಿ ಸಾಕಷ್ಟು ಕುಡುಕಾಟ ನಡೆಸಲಾಗಿತ್ತು. ಆದರೆ ಇಂದು ಬೆಳಗ್ಗೆ ಸಿದ್ಧಾರ್ಥ್ ಮೃತದೇಹ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ದೊರಕಿದೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ನದಿಯಲ್ಲಿ ತೇಲಾಡುತ್ತಿದ್ದ ಶವವನ್ನು ಕಂಡು ಅನುಮಾನದಿಂದ ದೋಣಿ ಬದಿಯಲ್ಲಿ ಹಿಡಿದುಕೊಂಡು ದಡ ತಲುಪಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

  • ಆತ್ಮೀಯ ಗೆಳೆಯನ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ – ಸಿದ್ದು ಸಂತಾಪ

    ಆತ್ಮೀಯ ಗೆಳೆಯನ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ – ಸಿದ್ದು ಸಂತಾಪ

    ಬೆಂಗಳೂರು: ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕ ಎಂ. ಸತ್ಯನಾರಾಯಣ (75) ಗುರುವಾರ ರಾತ್ರಿ ವಿಧಿವಶರಾಗಿದ್ದಾರೆ. ಇದಕ್ಕೆ ಸಂತಾಪ ಸೂಚಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅತ್ಮೀಯ ಗೆಳೆಯನ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಸತ್ಯನಾರಾಯಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ದಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

    ಇದಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಶಾಸಕರಾದ ಮುತ್ಸದ್ದಿ ರಾಜಕಾರಣಿ ಎಂ.ಸತ್ಯನಾರಾಯಣ ಅವರ ನಿಧನದಿಂದ ನಾನು ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದವರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

    ಮಾಜಿ ಶಾಸಕರಾದ ಸತ್ಯನಾರಾಯಣ ಅವರು ದೀರ್ಘಕಾಲದ ನನ್ನ ರಾಜಕೀಯ ಸಹಪಾಠಿ. 1977 ರಲ್ಲಿ ಇಬ್ಬರೂ ಏಕಕಾಲದಲ್ಲಿ ರಾಜಕೀಯ ಪ್ರವೇಶ ಮಾಡಿದ್ದೆವು. ಬಹಳ ಸೌಮ್ಯ ಸ್ವಭಾವದ ಸರಳ-ಸಜ್ಜನ ರಾಜಕಾರಣಿ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿಯಷ್ಟೇ ಅಲ್ಲ ರಾಜ್ಯ ರಾಜಕಾರಣ ಹಾಗೂ ಈ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    2008ರಲ್ಲಿ ನಾನೇ ದೂರವಾಣಿ ಕರೆಮಾಡಿ ನೀವು ಚಾಮುಂಡೇಶ್ವರಿಯಿಂದ ಸ್ಪರ್ಧೆಮಾಡಿ ಎಂದು ಹೇಳಿ ಸತ್ಯಣ್ಣನವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೆ. ಈ ಸಂದರ್ಭದಲ್ಲಿ ಅವರಿಗೆ ತಾವು ಚುನಾವಣೆಗೆ ಸ್ಪರ್ಧಿಸುತ್ತೇನೆಂದೆ ತಿಳಿದಿರಲಿಲ್ಲ. 5 ವರ್ಷಗಳ ಕಾಲ ಶಾಸಕರಾಗಿ ಕ್ಷೇತ್ರಕ್ಕೆ ಸಾಕಷ್ಟು ದುಡಿದಿದ್ದರು. ಈಗವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ವಿಶ್ವನಾಥ್, ಸಚಿವರಾದ ಜಿ.ಟಿ.ದೇವೆಗೌಡ ಮತ್ತು ಪುಟ್ಟರಂಗಶೆಟ್ಟಿ ಅವರು ಸತ್ಯನಾರಾಯಣ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮೃತ ಸತ್ಯನಾರಾಯಣ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದರು.

  • ಮಾಜಿ ಸಚಿವ ತಿಪ್ಪೇಸ್ವಾಮಿ, ಸುಮತೀಂದ್ರ ನಾಡಿಗ, ಕರುಣಾನಿಧಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ!

    ಮಾಜಿ ಸಚಿವ ತಿಪ್ಪೇಸ್ವಾಮಿ, ಸುಮತೀಂದ್ರ ನಾಡಿಗ, ಕರುಣಾನಿಧಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ!

    ಬೆಂಗಳೂರು: ಮಾಜಿ ಸಚಿವ ತಿಪ್ಪೇಸ್ವಾಮಿ, ಸುಮತೀಂದ್ರ ನಾಡಿಗರ ಹಾಗೂ ಕರುಣಾನಿಧಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

    ತಿಪ್ಪೇಸ್ವಾಮಿ ಮತ್ತು ಸುಮೀಂದ್ರ ನಾಡಿಗರ ನಿಧನದ ಸುದ್ದಿ ಕೇಳಿ ನನಗೆ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ನಿಧನದ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನ

    ಕರುಣಾನಿಧಿ ಅವರ ನಿಧನಕ್ಕೆ ಸಿಎಂ ಸಂತಾಪ ಸೂಚಿಸಿ, ದೇವೇಗೌಡರು ಪ್ರಧಾನಿ ಆಗೋದಕ್ಕೆ ಕರುಣಾನಿಧಿ ಪ್ರಮುಖ ಪಾತ್ರವಹಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿ ಸಂತಾಪ ಸೂಚಿಸಿದರು. ಇದನ್ನೂ ಓದಿ: ಹಿರಿಯ ಸಾಹಿತಿ ಡಾ. ಸುಮತೀಂದ್ರ ನಾಡಿಗ ನಿಧನ

    ಕರುಣಾನಿಧಿ ದಕ್ಷಿಣ ಭಾರತದ ಪ್ರಮುಖ ಮುತ್ಸದ್ದಿ ರಾಜಕಾರಣಿಯಾಗಿದ್ದು, ಐದು ಬಾರಿ ಸಿಎಂ ಆಗಿ ತಮಿಳುನಾಡಿನ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಕರುಣಾನಿಧಿ ರೈತ ಕುಟುಂಬದಿಂದ ಹುಟ್ಟಿ ಲೇಖಕರಾಗಿ ನಂತರ ರಾಜಕೀಯ ಪ್ರವೇಶ ಮಾಡಿದ್ದರು. ಅವರ ದುಡಿಮೆ ಶ್ರಮ ನಮಗೆಲ್ಲ ಮಾದರಿಯಾಗಿದೆ. ಇದನ್ನೂ ಓದಿ: ತಮಿಳುನಾಡಿನ ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಇನ್ನಿಲ್ಲ

    1996ರ ಸಮ್ಮಿಶ್ರ ಸರ್ಕಾರ ರಚನೆ ಆಗಲು ಕರುಣಾನಿಧಿ ಪ್ರಮುಖ ಪಾತ್ರವಹಿಸಿದ್ದರು. ಕನ್ನಡಿಗ ಪ್ರಧಾನಿಯಾಗಲು ಕರುಣಾನಿಧಿ ಬೆಂಬಲ ನೀಡಿದ್ದರು. ಅವರ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಸಿಎಂ ಸಂತಾಪ ಕೋರಿದ್ದಾರೆ. ಇದನ್ನೂ ಓದಿ: ಬದುಕಿರುವಾಗಲೇ ದಂತಕಥೆಯಂತಿದ್ದ ಕರುಣಾನಿಧಿ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಎಚ್‍ಡಿಕೆ