Tag: Condolence

  • ಸಂಚಾರಿ ವಿಜಯ್ ಕನ್ನಡ ಚಿತ್ರರಂಗದ ಭರವಸೆಯ ನಟರಾಗಿದ್ದರು- ಶೆಟ್ಟರ್ ಸಂತಾಪ

    ಸಂಚಾರಿ ವಿಜಯ್ ಕನ್ನಡ ಚಿತ್ರರಂಗದ ಭರವಸೆಯ ನಟರಾಗಿದ್ದರು- ಶೆಟ್ಟರ್ ಸಂತಾಪ

    ಹುಬ್ಬಳ್ಳಿ: ರಂಗಭೂಮಿ ಕಲಾವಿದ, ಪ್ರತಿಭಾವಂತ ನಟ ಸಂಚಾರಿ ವಿಜಯ್ ಅಕಾಲಿಕ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸರಳ ಸಜ್ಜನಿಕೆ ವ್ಯಕ್ತಿತ್ವದ ವಿಜಯ್, ಕನ್ನಡ ಚಿತ್ರರಂಗದ ಭರವಸೆಯ ನಟರಾಗಿದ್ದರು. ರಂಗಭೂಮಿ ಹಿನ್ನಲೆಯುಳ್ಳವರಾಗಿದ್ದರು, ಸಂಚಾರಿ ರಂಗ ತಂಡ ಕಟ್ಟಿಕೊಂಡು ಉತ್ತಮ ನಾಟಕಗಳನ್ನು ಪ್ರದರ್ಶಿಸಿದ್ದರು. ಧಾರವಾಹಿ ಹಾಗೂ ಸಿನಿಮಾ ಅಭಿನಯದ ಮೂಲಕ ಸಹೃದಯರ ಮನ ಗೆದ್ದಿದ್ದರು. ಇದನ್ನೂ ಓದಿ: ಹೋಟೆಲ್‍ನಲ್ಲಿ ಕೆಲಸ ಮಾಡಿ ತಮ್ಮನ ಓದಿಗೆ ಸಹಾಯ ಮಾಡಿದ್ದ ವಿಜಯ್

    ಸಮಾಜದ ನಿರ್ಲಕ್ಷಿತ, ಲೈಂಗಿಕ ಅಲ್ಪಸಂಖ್ಯಾತರ ತಳಮಳಗಳನ್ನು ಸಿನಿಮಾ ಮೂಲಕ ಜನರಿಗೆ ಪರಿಚಯಿಸಿದ ‘ನಾನು ಅವನಲ್ಲ ಅವಳು’ ಚಿತ್ರದ ಮನೋಜ್ಞ ಅಭಿನಯಕ್ಕೆ ಉತ್ತಮ ನಟ ಎಂಬ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಏಕತಾನತೆಯ ಪಾತ್ರಗಳ ಬದಲಾಗಿ ಕಠಿಣ ಹಾಗೂ ಸವಾಲು ಎನಿಸುವ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿ ನಟಿಸುತ್ತಿದ್ದ ವಿಜಯ್, ಪಾತ್ರಗಳಿಗೆ ನ್ಯಾಯ ಒದಗಿಸುತ್ತಿದ್ದರು. ಅವರು ನಟಿಸಿದ ಪಾತ್ರಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ನೆನೆದಿದ್ದಾರೆ.

    ಪ್ರತಿಭಾವಂತ ನಟನ ಅಗಲಿಕೆಯಿಂದ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ವಿಜಯ್ ಆತ್ಮಕ್ಕೆ ಶಾಂತಿ ಲಭಿಸಲಿ, ಅವರ ಕುಟುಂಬ ಬಂಧುಬಳಗ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಚಿವ ಜಗದೀಶ್ ಶೆಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ.

    ಯವಕರು ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಜೀವ ಅಮೂಲ್ಯವಾದುದು. ಅಪಘಾತ, ಸುಂದರ ಜೀವನವನ್ನು ಕಸಿಯುತ್ತದೆ. ನಿರ್ಲಕ್ಷ್ಯ ಸಲ್ಲದು, ಎಂದು ಅವರು ಇದೇ ವೇಳೆ ಎಚ್ಚರಿಸಿದ್ದಾರೆ.

  • ವಿಧಿ ಎಷ್ಟು ಕ್ರೂರಿ – ‘ಖಾಕಿ’ ವೇಳೆ ಚಿರು ಜೊತೆಗಿನ ಅನುಭವ ಹಂಚಿಕೊಂಡ ಲಹರಿ ವೇಲು

    ವಿಧಿ ಎಷ್ಟು ಕ್ರೂರಿ – ‘ಖಾಕಿ’ ವೇಳೆ ಚಿರು ಜೊತೆಗಿನ ಅನುಭವ ಹಂಚಿಕೊಂಡ ಲಹರಿ ವೇಲು

    ಬೆಂಗಳೂರು: ತುಂಬಾ ಹೃದಯವಂತಿಕೆಯಿಂದ ಇದ್ದರು. ವಿಧಿ ಎಷ್ಟು ಕ್ರೂರಿ, ಜೀವನ ಎಂದರೆ ಇಷ್ಟೆನಾ ಎನಿಸುತಿದೆ ಎಂದು ಲಹರಿ ಸಂಸ್ಥೆಯ ಮುಖ್ಯಸ್ಥ ನೋವಿನಿಂದ ಮಾತನಾಡಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, ನನಗೆ ಚಿರಂಜೀವಿ ಸಾವಿನ ಸುದ್ದಿ ಬಂದಾಗ ತಮಾಷೆ ಮಾಡುತ್ತಿದ್ದೀರ ಎಂದು ಕೋಪ ಮಾಡಿಕೊಂಡೆ. ನಂತರ ಮಾಧ್ಯಮ ನೋಡಿದಾಗ ನನಗೂ ಶಾಕ್ ಆಯಿತು. ಇದನ್ನೂ ಈಗಲೂ ನಂಬಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನಿಂದ ಮಾತ್ರವಲ್ಲ ಈಗಾಗಲೇ ನೂರಾರು ಜನರು ನನಗೆ ಫೋನ್ ಮಾಡಿ ಇದು ನಿಜನಾ ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.

    ಎರಡು ತಿಂಗಳ ಹಿಂದೆಯಷ್ಟೆ ಚಿರಂಜೀವಿ ಸರ್ಜಾರ ಅಭಿನಯದ ‘ಖಾಕಿ’ ಸಿನಿಮಾದಲ್ಲಿ ನಾನು ಮಾಡಿದ್ದೆ. ಸುಮಾರು 15 ದಿನಗಳ ಕಾಲ ಅವರ ಜೊತೆ ಒಟ್ಟಿಗೆ ಕೆಲಸ ಮಾಡಿದ್ದೇನೆ. ತುಂಬಾ ಹೃದಯವಂತಿಕೆಯಿಂದ ಇದ್ದರು. ಜೀವನ ಎಂದರೆ ಇಷ್ಟೆನಾ, ವಿಧಿ ಎಷ್ಟು ಕ್ರೂರವಾಗಿದೆ ಎಂದು ನೋವಿನಿಂದ ಮಾತನಾಡಿದರು.

    ‘ಖಾಕಿ’ ಸಿನಿಮಾ ಚಿತ್ರೀಕರಣದ ವೇಳೆ ನೀವು ತುಂಬಾ ಫಿಟ್ ಆಗಿದ್ದೀರ. ನಾನು ಕೂಡ ಜಿಮ್ ಮಾಡುತ್ತಿದ್ದೀನಿ. ಫಿಟ್ ಆಗುತ್ತೇನೆ ಎಂದಿದ್ದರು. ಪ್ರತಿಯೊಬ್ಬರ ಜೊತೆಯೂ ಒಂದೇ ರೀತಿ ಇದ್ದರು. ನಟ ಎಂಬ ಯಾವುದೇ ಅಹಂ ಇರಲಿಲ್ಲ. ಈ ಕೊರೊನಾ ಬಂದು ಎಲ್ಲರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದೆ. ಮೊನ್ನೆ ನಿಸಾರ್ ಅಹಮದ್ ನಮ್ಮನ್ನು ಅಗಲಿ ಹೋದರು. ಈಗ ಚಿರಂಜೀವಿ. ಮೊನ್ನೆ ಮೊನ್ನೆಯವರೆಗೆ ನಮ್ಮ ಜೊತೆ ಇದ್ದವರು ನಿಧನರಾಗುತ್ತಿರುವುದನ್ನು ನೋಡಿ ಶಾಕ್ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಹಾಮಾರಿ ಕೊರೊನಾ ಬಂದ ಸಂದರ್ಭದಲ್ಲಿ ಇಫ್ರಾನ್ ಖಾನ್, ನಂತರ ವಾಜೀದ್ ಖಾನ್, ಈಗ ಚಿರಂಜೀವಿ ಸರ್ಜಾ ಅಗಲಿದ್ದಾರೆ. ಹೀಗಾಗಿ ಈ ಮಾಹಾಮಾರಿ ಕೊರೊನಾ ಬಂದು ಒಬ್ಬೊಬ್ಬರಂತೆ ಕರೆದುಕೊಂಡು ಹೋಗುತ್ತಿದೆ ಎಂದು ಕೊರೊನಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

  • ಸಿದ್ಧಾರ್ಥ್ ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇಯಲ್ಲಿ ಕೆಲಸ ಕೊಟ್ಟಿದ್ದಾರೆ: ಜಗ್ಗೇಶ್

    ಸಿದ್ಧಾರ್ಥ್ ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇಯಲ್ಲಿ ಕೆಲಸ ಕೊಟ್ಟಿದ್ದಾರೆ: ಜಗ್ಗೇಶ್

    ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರು ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇಯಲ್ಲಿ ಕೆಲಸ ಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ನವರಸನಾಯಕ ಜಗ್ಗೇಶ್ ಅವರು ಸಂತಾಪ ಸೂಚಿಸಿದ್ದಾರೆ.

    ಜಗ್ಗೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನನ್ನ ಗುರುಗಳು ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಂದ ಪರಿಚಯವಾದ ಮಹೋದಯ. ನಾನು 2004 ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಹುಡುಕಿ ಬಂದು ಚುನಾವಣೆಗೆ ಸಹಾಯ ಮಾಡಿ ಹೋದರು. ಅನೇಕ ಬಾರಿ ದೂರವಾಣಿ ಕರೆ ಮಾಡಿ ನನ್ನ ವಿನಂತಿಗೆ ನನ್ನ ಅನೇಕ ಹಿಂಬಾಲಕರಿಗೆ ಕಾಫಿ ಡೇ ಅಲ್ಲಿ ಕೆಲಸ ಕೊಟ್ಟವರು. ನನ್ನ ಗುರುಗಳು ಎಸ್.ಎಂ ಕೃಷ್ಣ ಹಾಗೂ ಅವರ ಕುಟುಂಬಕ್ಕೆ ಈ ನೋವು ಅರಗಿಸುವ ಶಕ್ತಿ ರಾಯರು ನೀಡಲಿ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೆ ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ, “ನಮ್ಮ ಮಂಡ್ಯ ಜಿಲ್ಲೆಯವರಾದ ಶ್ರೀ ಎಸ್.ಎಂ.ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ್ ಅವರ ಸಾವು ತೀವ್ರ ಆಘಾತ ತಂದಿದೆ. ಎಸ್.ಎಂ ಕೃಷ್ಣ ಅವರಿಗೂ ಹಾಗೂ ಅವರ ಕುಟುಂಬದವರಿಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಸಿದ್ಧಾರ್ಥ್ ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    ಸೋಮವಾರ ರಾತ್ರಿ ಮಂಗಳೂರು ಕಾಸರಗೋಡು ಹೆದ್ದಾರಿ ಮಧ್ಯೆ ಇರುವ ಜಪ್ಪಿನಮೊಗರು ಎಂಬಲ್ಲಿ ಸೇತುವೆಯಿಂದ ಸಿದ್ಧಾರ್ಥ್ ನದಿಗೆ ಹಾರಿದ್ದರು. ಸುಮಾರು 36 ಗಂಟೆಗಳ ಶೋಧ ಕಾರ್ಯದ ನಂತರ ಇಂದು ಬೆಳಗ್ಗೆ ಸುಮಾರು 6.30ರ ವೇಳೆಗೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಹೋದಾಗ ಮಂಗಳೂರು- ಉಳ್ಳಾಲ ನಡುವೆ ಇರುವ ನೇತ್ರಾವತಿ ನದಿ ಸಮೀಪದ ಹೊಯಿಗೆ ಬಜಾರ್ ಎಂಬ ಪ್ರದೇಶದಲ್ಲಿ ಸಿದ್ಧಾರ್ಥ್ ಶವ ದೊರೆತಿದೆ.

  • ಸಾವಿನ ಮನೆಗೆ ತೆರಳಿ ತನ್ನದೇ ಭಾಷೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಾಂತ್ವಾನ ಹೇಳಿದ ಕಪಿರಾಯ

    ಸಾವಿನ ಮನೆಗೆ ತೆರಳಿ ತನ್ನದೇ ಭಾಷೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಾಂತ್ವಾನ ಹೇಳಿದ ಕಪಿರಾಯ

    ಗದಗ: ಮನುಷ್ಯ ಮರಣಹೊಂದಿದಾಗ ಬಂಧು-ಬಾಂಧವರು, ಮಿತ್ರರು ಬೇಗ ಬರುವುದಿಲ್ಲ. ಆದರೆ ಕೋತಿಯೊಂದು ಸಾವಿನ ಮನೆಗೆ ತೆರಳಿ ತನ್ನದೇ ಭಾಷೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಾಂತ್ವಾನ ಹೇಳಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ.

    ನಾಗನಗೌಡ ಪಾಟೀಲ್(71) ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಕುಟುಂಬದವರು ಅತೀವ ಶೋಕದಲ್ಲಿದ್ದರು. ಅಷ್ಟರಲ್ಲಿ ಕಪಿಯೊಂದು ಮೃತರ ಮನೆಗೆ ಧಾವಿಸಿದೆ. ಅರ್ಚಕರು ಪೂಜೆ ಸಲ್ಲಿಸುವ ವೇಳೆ ಶವದ ಬಳಿ ಸುಮ್ಮನೆ ಕೂತು ಶ್ರದ್ಧಾಂಜಲಿ ಸಲ್ಲಿಸಿದೆ.

    ನಂತರ ಮನೆಯಿಂದ ಹೊರಬಂದು, ಮೃತನ ಹಿರಿಯ ಪುತ್ರ ಮರಿಗೌಡ ಅವರ ಪಕ್ಕದಲ್ಲಿ ಹಾಗೂ ಅವರ ಹೆಗಲೇರಿ ತಲೆಮೇಲೆ ಕೈಯಾಡಿಸಿದೆ. ಅವರ ಕಿವಿಯಲ್ಲಿ ತನ್ನದೆ ಭಾಷೆಯಲ್ಲಿ ಸಾಂತ್ವಾನ ಹೇಳಿದೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರಿದ್ದರೂ ಯಾರೋಬ್ಬರಿಗೂ ತೊಂದರೆ ಮಾಡದೆ, ಕುಟುಂಬದವರಿಗೆ ಪ್ರೀತಿ ಕನಿಕರ ತೋರಿಸಿದೆ.

    ಕಪಿರಾಯನ ವರ್ತನೆ ಸಾರ್ವಜನಿಕರನ್ನು ಒಂದು ವೇಳೆ ನಿಬ್ಬೆರಗಾಗುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳಸಾ ಬಂಡೂರಿ ನೀರಿನ ತೀರ್ಪಿನ ವಿಷಯದಲ್ಲಿ ಅನಂತ ಕುಮಾರ್ ಕೊಡುಗೆ ಅನನ್ಯ: ಎಚ್.ಕೆ ಪಾಟೀಲ್

    ಕಳಸಾ ಬಂಡೂರಿ ನೀರಿನ ತೀರ್ಪಿನ ವಿಷಯದಲ್ಲಿ ಅನಂತ ಕುಮಾರ್ ಕೊಡುಗೆ ಅನನ್ಯ: ಎಚ್.ಕೆ ಪಾಟೀಲ್

    ಗದಗ: ಅನಂತ ಕುಮಾರ್ ಕರ್ನಾಟಕದ ಒಬ್ಬ ಎತ್ತರದ ನಾಯಕ. ಕರ್ನಾಟಕ ಹಿತ ಕಾಪಾಡುವಲ್ಲಿ ಮುತ್ಸದ್ದಿ ನಾಯಕರಾಗಿ ಪಕ್ಷಾತಿತವಾಗಿ ದಿಟ್ಟ ನಿಲುವು ತಾಳುತ್ತಿದ್ದ ಗೆಳೆಯನ ಅಗಲುವಿಕೆ ಸಾಕಷ್ಟು ನೋವುಂಟಾಗಿದೆ ಎಂದು ಮಾಜಿ ಸಚಿವ ಎಚ್.ಕೆ ಪಾಟೀಲ್ ಅನಂತ್ ಕುಮಾರ ನಿಧನಕ್ಕೆ ಕಂಬನಿ ಮಿಡಿದರು.

    ಅನಂತ ಕುಮಾರ್ ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಜೊತೆಗೆ ಸಂಘಟನೆಗೆ ಧುಮುಕಿದವರು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ, ವಿದ್ಯಾರ್ಥಿಗಳ ಒಳಿತಿಗೆ, ವಿದ್ಯಾರ್ಥಿಗಳ ಶಕ್ತಿಗೆ ಚಿಂತನೆ ಮಾಡಿದ ಒಬ್ಬ ಯುವನಾಯಕ. ನನ್ನ ಅವರ ಸಂಪರ್ಕ ಬಹಳ ಗಾಢವಾಗಿತ್ತು. ಸೆನೆಟ್ ಸದಸ್ಯನಾಗುವ ಚುನಾವಣೆಯಲ್ಲಿ ಜೊತೆಗೂಡಿ ಕೆಲಸ ಮಾಡಿದ ನೆನಪು ಅಚ್ಚಳಿಯದಂತಿವೆ. ನಾನು ವಿಧಾನ ಪರಿಷತ್ ಸದಸ್ಯನಿದ್ದಾಗಲೂ ಹಲವಾರು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಹುಬ್ಬಳ್ಳಿಯಲ್ಲಿ ಒಟ್ಟಿಗೆ ಬಹಳಷ್ಟು ಕಾಲ ಕಳೆದಿದ್ದೇವೆ. ಅನಂತ ಕುಮಾರ್ ನಾವು ಉತ್ತಮ ಗೆಳೆಯರಾಗಿದ್ದೇವು ಎಂದು ಎಚ್.ಕೆ ಪಾಟೀಲ್ ಸ್ಮರಿಸಿಕೊಂಡರು.

    ಅನಂತ ಕುಮಾರ್ ವಾಜಪೇಯಿ, ಎಲ್.ಕೆ ಆಡ್ವಾಣಿ ಅವರಿಂದ ಬಹಳ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದರು. ಅನಂತ ಕುಮಾರ್ ಕರ್ನಾಟಕದಲ್ಲಿ ಎಬಿವಿಪಿ ಹಾಗೂ ಬಿಜೆಪಿ ಸಂಘಟನೆ ಮಾಡಲು ಬಹಳ ಯಶಸ್ವಿಯಾದರು. ಕೇಂದ್ರ ಸಚಿವರಾದ ವೇಳೆ ಕರ್ನಾಟಕ ವಿಷಯ ವಿಚಾರಗಳು ಬಂದಾಗ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದರು. ಕೃಷ್ಣ, ಕಾವೇರಿ ವಿವಾದಗಳು, ಸಮಸ್ಯೆಗಳು ಬಂದಾಗ ಸಲೀಸಾಗಿ ಬಗೆಹರಿಸುತ್ತಿದ್ದರು. ಒಗ್ಗಟ್ಟಿನ ನಿಲುವು ಅವರಲ್ಲಿತ್ತು ಕರ್ನಾಟಕ ವಿಷಯದಲ್ಲಿ ಬಹಳ ಮುತುವರ್ಜಿ ತೋರಿಸುತ್ತಿದ್ದರು ಎಂದು ಹೇಳಿದರು.

    ಕಳಸಾ ಬಂಡೂರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟ ಮೇಲೆ ಒಪ್ಪಿಗೆ ರದ್ದಾಗುವ ಪ್ರಸಂಗ ನಿರ್ಮಾಣವಾಗಿತ್ತು. ಆ ವೇಳೆ ಒಪ್ಪಿಗೆ ನೀಡಿದ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿದ ರಾಜಕೀಯ ನಿರ್ಣಯ ತೆಗೆದುಕೊಂಡರು. ಪ್ರತ್ಯತ್ತರವಾಗಿ ಎಸ್.ಎಂ ಕೃಷ್ಣ, ವಾಜಪೇಯಿ ಅವರಿಗೆ ಪತ್ರ ಬರೆದರು. ಕಳಸಾ ಬಂಡೂರಿ ನೀರಿನ ತೀರ್ಪಿನ ವಿಷಯದಲ್ಲಿ ಅನಂತ ಕುಮಾರ್ ಕೊಡುಗೆ ಅನನ್ಯವಾಗಿದೆ. ಅನಂತ ಕುಮಾರ್ ಅವರ ಬಹಳ ಉಜ್ವಲ ಭವಿಷ್ಯ ನೋಡಬೇಕಾಗಿತ್ತು. ಅವರ ಅಕಾಲಿಕೆಯ ಅಗಲುವಿಕೆ ಕರ್ನಾಟಕಕ್ಕೆ ತುಂಬಲಾರದ ಹಾನಿಯಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಎಚ್.ಕೆ ಪಾಟೀಲ್ ಕಂಬನಿ ಮಿಡಿದರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews