Tag: Conditional Bail

  • ಮಾಡಾಳ್ ವಿರೂಪಾಕ್ಷಪ್ಪಗೆ ರಿಲೀಫ್ – ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರು

    ಮಾಡಾಳ್ ವಿರೂಪಾಕ್ಷಪ್ಪಗೆ ರಿಲೀಫ್ – ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರು

    ಬೆಂಗಳೂರು: ಕೆಎಸ್‌ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ರಿಲೀಫ್ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ವಿರೂಪಾಕ್ಷಪ್ಪಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ಪ್ರಕರಣದ ತುರ್ತು ವಿಚಾರಣೆ ನಡೆಸಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಸೋಮವಾರ ಹೈಕೋರ್ಟ್‌ಗೆ ವಿರೂಪಾಕ್ಷಪ್ಪ ಮನವಿ ಮಾಡಿಕೊಂಡಿದ್ದರು. ತಕ್ಷಣ ವಿಚಾರಣೆ ನಡೆಸಲು ಒಪ್ಪದ ಕೋರ್ಟ್ ಮಂಗಳವಾರಕ್ಕೆ ಮುಂದೂಡಿತ್ತು. ಅದರಂತೆ ಇಂದು ಹೈಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅರ್ಜಿ ವಿಚಾರಣೆ ನಡೆಸಿದರು. ವಿರೂಪಾಕ್ಷಪ್ಪ ಪರವಾಗಿ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿದರು. ಮಧ್ಯಂತರ ನಿರೀಕ್ಷಣಾ ಜಾಮೀನಿಗಾಗಿ ಮನವಿ ಮಾಡಿದರು.

    5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಭದ್ರತೆಯ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿತು. ಅಲ್ಲದೇ ಇದೇ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.

    48 ಗಂಟೆಗಳ ಒಳಗೆ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಸೂಚಿಸಿದೆ. ಹೀಗಾಗಿ ವಿರೂಪಾಕ್ಷಪ್ಪ ಗುರುವಾರ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

  • ‘ರಾಖಿ ಕಟ್ಟಿಸ್ಕೊಂಡು ರಕ್ಷಣೆ ಮಾಡೋದಾಗಿ ಮಾತು ಕೊಟ್ಟು ಬಾ’ – ಆರೋಪಿಗೆ 7 ಷರತ್ತು ವಿಧಿಸಿ ಜಾಮೀನು ಮಂಜೂರು

    ‘ರಾಖಿ ಕಟ್ಟಿಸ್ಕೊಂಡು ರಕ್ಷಣೆ ಮಾಡೋದಾಗಿ ಮಾತು ಕೊಟ್ಟು ಬಾ’ – ಆರೋಪಿಗೆ 7 ಷರತ್ತು ವಿಧಿಸಿ ಜಾಮೀನು ಮಂಜೂರು

    – ಲೈಂಗಿಕ ಹಲ್ಲೆಗೆ ಯತ್ನಿಸಿ ಜೈಲು ಸೇರಿದ್ದ ಆರೋಪಿ
    – ಹೈಕೋರ್ಟ್ ಏಕಸದಸ್ಯ ಪೀಠದಿಂದ ಜಾಮೀನು

    ಭೋಪಾಲ್: ದೂರು ಕೊಟ್ಟ ಮಹಿಳೆಯ ಮನೆಗೆ ಹೋಗಿ ರಾಖಿ ಕಟ್ಟಿಸಿಕೊಂಡು ಇನ್ನು ಮುಂದೆ ಸೋದರನಂತೆ ನೋಡಿಕೊಳ್ಳುವುದಾಗಿ ಮಾತುಕೊಟ್ಟು ಬರುವಂತೆ ಸೂಚಿಸಿ ಮಧ್ಯಪ್ರದೇಶ ಹೈಕೋರ್ಟ್ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದೆ.

    ಮಹಿಳೆ ಮೇಲೆ ಲೈಂಗಿಕ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಾಧೀಶ ರೋಹಿತ್ ಆರ್ಯ ಅವರಿದ್ದ ಏಕ ಸದಸ್ಯ ಪೀಠದಲ್ಲಿ ನಡೆದಿತ್ತು. ವಿಚಾರಣೆ ಪೂರ್ಣಗೊಳಿಸಿದ್ದ ಜಡ್ಜ್ 50 ಸಾವಿರ ರೂ. ವೈಯಕ್ತಿಕ ಬಾಂಡ್ ಮತ್ತು 7 ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.

    ಷರತ್ತು ಏನು?
    ಜಾಮೀನು ಪಡೆದ ಆರೋಪಿ ಪತ್ನಿಯೊಂದಿಗೆ ರಕ್ಷಾ ಬಂಧನದ ದಿನದಂದು ರಾಖಿ ಬ್ಯಾಂಡ್ ಜೊತೆಗೆ ಸ್ವೀಟ್ ತೆಗೆದುಕೊಂಡು ದೂರು ಕೊಟ್ಟ ಮಹಿಳೆಯ ಮನೆಗೆ ಭೇಟಿ ನೀಡಬೇಕು. ನಂತರ ಮಹಿಳೆಯ ಕೈಯಲ್ಲಿ ರಾಖಿ ಬ್ಯಾಂಡ್ ಕಟ್ಟಿಸಿಕೊಳ್ಳಬೇಕು. ಇನ್ಮುಂದೆ ಜೀವನ ಪೂರ್ತಿ ಮಹಿಳೆಯನ್ನು ಸಹೋದರನಂತೆ ರಕ್ಷಣೆಯಿಂದ ನೋಡಿಕೊಳ್ಳವುದಾಗಿ ಮಾತುಕೊಡಬೇಕು.

    ಸಾಮಾನ್ಯವಾಗಿ ರಾಖಿ ಕಟ್ಟಿದ ಸಂದರ್ಭದಲ್ಲಿ ಸಹೋದರಿಯರಿಗೆ ಸಹೋದರರು ಉಡುಗೊರೆ ಕೊಡಬೇಕು. ಹೀಗಾಗಿ ಮಹಿಳೆಗೆ 11 ಸಾವಿರ ಕೊಟ್ಟು ಆಶೀರ್ವಾದ ಕೇಳಬೇಕು. ಜೊತೆಗೆ ಬಟ್ಟೆ ಮತ್ತು ಸಿಹಿತಿಂಡಿಗಳನ್ನು ಖರೀದಿಸಲು 5,000 ರೂಪಾಯಿಯನ್ನು ಮಹಿಳೆಯ ಮಗನಿಗೆ ನೀಡಬೇಕು.

    ಅಷ್ಟೇ ಅಲ್ಲದೇ ಆರೋಪಿ ಮಹಿಳೆಗೆ ಹೋಗಿ ರಾಖಿ ಕಟ್ಟಿದ್ದು, ಮಗನಿಗೆ ಹಣ ಕೊಟ್ಟಿರುವುದು ಮತ್ತು ರಶೀದಿಗಳ ಫೋಟೋವನ್ನು ಇಟ್ಟುಕೊಳ್ಳಬೇಕು. ಅದನ್ನು ವಕೀಲರ ಮೂಲಕ ಹೈ ಕೋರ್ಟ್ ಗೆ ಸಲ್ಲಿಸಬೇಕು. ಆರೋಪಿ ಆದೇಶಗಳ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು. ಅಲ್ಲದೇ ಜಾಮೀನು ಪಡೆದವ ತನ್ನ ಸಂಪೂರ್ಣ ವಸತಿ ವಿವರಗಳನ್ನು ಲಿಖಿತ ರೂಪದಲ್ಲಿ ನೀಡಬೇಕು.

    ಏನಿದು ಪ್ರಕರಣ?
    ಆರೋಪಿ ಪಕ್ಕದ ಮನೆಯ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಲೈಂಗಿಕ ಹಲ್ಲೆಗೆ ಯತ್ನಿಸಿದ್ದ. ಉಜ್ಜೈನ್ ಜಿಲ್ಲೆಯ ಬತ್ಪಚಲನ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಆದ್ದರಿಂದ ಐಪಿಸಿ ಸೆಕ್ಷನ್ ಕಾಯ್ದೆಯ ಅಡಿಯಲ್ಲಿ ಆರೋಪಿಯನ್ನು ಜೂನ್‍ನಲ್ಲಿ ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿ ಬಳಿಕ ಆತ ಜೈಲು ಸೇರಿದ್ದ.