Tag: Concrete Road

  • ಅರಮನೆ ಒಳಗೆ ಜಂಬೂ ಸವಾರಿಗಾಗಿ ಕಾಂಕ್ರೀಟ್ ರಸ್ತೆ

    ಅರಮನೆ ಒಳಗೆ ಜಂಬೂ ಸವಾರಿಗಾಗಿ ಕಾಂಕ್ರೀಟ್ ರಸ್ತೆ

    ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಅತಿ ಸರಳವಾದರೂ ಕೂಡ ಸಂಭ್ರಮದಿಂದ ಮಾಡುವುದಕ್ಕೆ ಅರಮನೆ ಆಡಳಿತ ಮಂಡಳಿ ಸಿದ್ಧವಾಗುತ್ತಿದೆ.

    ಅರಮನೆ ಅಂಗಳಕ್ಕೆ ಅ.2 ರಂದು ಐದು ಆನೆಗಳು ಬರಲಿವೆ. ಆನೆಗಳ ತಾಲೀಮಿಗೆ ಅರಮನೆ ಒಳ ಆವರಣದಲ್ಲೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಿದೆ. ಈ ಮೂಲಕ ಆನೆಯ ತಾಲೀಮು ಹಾಗೂ ಕೋವಿಡ್ ಎಚ್ಚರಿಕೆಯನ್ನು ಸೂಕ್ಷ್ಮವಾಗಿ ನಿಭಾಯಿಸಲು ಸಿದ್ಧತೆ ನಡೆದಿದೆ.

    ಈ ಬಾರಿಯ ದಸರಾ ಜಂಬೂ ಸವಾರಿ ಅರಮನೆ ಒಳಗೆ ಮಾತ್ರ ನಡೆಯಲಿದೆ. ಹೀಗಾಗಿ ಕಾಡಿನಿಂದ ನಾಡಿಗೆ ಬರುವ ಐದು ಆನೆಗಳಿಗೆ ವಾಕಿಂಗ್ ಎಲ್ಲವು ಅರಮನೆ ಆವರಣದಲ್ಲೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ದಸರಾ ಗಜಪಡೆಯ ಆನೆಗಳಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದು, ಸ್ವಚ್ಛತೆ ಹಾಗೂ ಆನೆಗಳ ತಾಲೀಮಿಗೆ ಸಿದ್ಧತೆ ಮಾಡಿಕೊಂಡಿದೆ.

    ಅ.2ರಂದು ಮೈಸೂರು ಅರಮನೆಗೆ ಬರುವ ಗಜಪಡೆಗೆ ವಾಕಿಂಗ್ ಮಾಡಲು ಅನುಕೂಲವಾಗುವಂತೆ ಅರಮನೆ ಒಳಗೆ ಕಾಂಕ್ರೀಟ್ ರಸ್ತೆಯನ್ನ ಮಾಡಿಸಲಾಗಿದೆ. ಈಗಾಗಲೇ ಜೆಸಿಬಿ ಮೂಲಕ ಗಿಡಗಂಟೆಗಳ ಶುಚಿತ್ವ ಕಾರ್ಯ ಮಾಡಲಾಗುತ್ತಿದೆ. ಅರಮನೆ ಅಂಗಳಕ್ಕೆ ಆನೆ ಬರುವ ಮುನ್ನವೇ ಅರಮನೆಯಲ್ಲಿ ಆನೆ ಇರಿಸುವ ಸ್ಥಳ, ಸ್ನಾನ ಮಾಡಿಸುವ ಸ್ಥಳ ಸೇರಿದಂತೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛ ಮಾಡಲಾಗುತ್ತಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಮಣ್ಯ ತಿಳಿಸಿದರು.

    ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಬಳಿಕ ಅರಮನೆಗೆ ಮಾತ್ರ ಸೀಮಿತವಾಗುವ ನಾಡಹಬ್ಬ ದಸರಾ ಕಳೆ ಕಟ್ಟಲು ಅರಮನೆ ಆಡಳಿತ ಮಂಡಳಿ ಸಾಕಷ್ಟು ಕ್ರಮವಹಿಸುತ್ತಿದೆ. ಕೋವಿಡ್‍ನಲ್ಲೂ ಅತಿ ಸರಳ ದಸರಾ ಮಾಡುತ್ತಿರುವ ಸರ್ಕಾರ ಎಲ್ಲಾ ವಿಚಾರಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಎಚ್ಚರವಹಿಸುತ್ತಿದೆ.

  • ಭಾರೀ ವಾಹನಗಳಿಗೂ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ

    ಭಾರೀ ವಾಹನಗಳಿಗೂ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ

    ಹಾಸನ: ರಸ್ತೆ ದುರಸ್ತಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದ ಶಿರಾಡಿ ಘಾಟ್ ಈಗ ಸಂಚಾರಕ್ಕೆ ಮುಕ್ತವಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 75 ರಲ್ಲಿರುವ 26 ಕಿ.ಮೀ. ಶಿರಾಡಿ ಘಾಟ್ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಸಂಚಾರ ಸ್ಥಗಿತಗೊಂಡಿತ್ತು. ಸಚಿವ ಎಚ್.ಡಿ.ರೇವಣ್ಣ ಜುಲೈ 15ರಂದು ವಾಸ್ತುಪ್ರಕಾರವಾಗಿ ಶಿರಾಡಿ ಘಾಟ್ ಉದ್ಘಾಟಿಸಿ, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬೃಹತ್ ವಾಹನಗಳನ್ನು ನಿಷೇಧಿಸಲಾಗಿತ್ತು. ಇದನ್ನು ಓದಿ: ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

    ಶಿರಾಡಿ ಘಾಟ್ ಬೆಂಗಳೂರು-ಮಂಗಳೂರು ನಡುವಿನ ಪ್ರಮುಖ ಹೆದ್ದಾರಿಯಾಗಿದ್ದು, ಲಾರಿ ಹಾಗೂ ಬಸ್ ಸಂಚಾರಕ್ಕೆ ತೊಡಕಾಗಿತ್ತು. ಇದೀಗ ಹಾಸನ-ದಕ್ಷಿಣ ಕನ್ನಡ ಜಿಲ್ಲೆಗಳ ನಡುವಿನ ಗಡಿ ಭಾಗದ 26 ಕಿ.ಮೀ ಕಾಂಕ್ರೀಟ್ ರಸ್ತೆ ಕಾಮಗಾರಿ ಸಂಪೂರ್ಣವಾಗಿದ್ದು, ಎಲ್ಲ ರೀತಿಯ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಇದನ್ನು ಓದಿ: ಶಿರಾಡಿ ಘಾಟ್ ನಲ್ಲಿ ದ್ವಿಚಕ್ರ, ತ್ರಿಚಕ್ರ, ಮಿನಿ ಬಸ್, ಟೆಂಪೋ ಟ್ರಾವಲರ್ಸ್ ಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ- ಖಾದರ್

  • ನವೆಂಬರ್ ನಿಂದ ಏಪ್ರಿಲ್ ವರೆಗೆ ಶಿರಾಡಿ ಘಾಟಿ ರಸ್ತೆ ಬಂದ್

    ನವೆಂಬರ್ ನಿಂದ ಏಪ್ರಿಲ್ ವರೆಗೆ ಶಿರಾಡಿ ಘಾಟಿ ರಸ್ತೆ ಬಂದ್

    ಮಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ನಡೆಸಲು ಸಿದ್ಧತೆ ನಡೆಲಾಗಿದೆ. ಈ ಕುರಿತು ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯ ಮಾಹಿತಿಯನ್ನು ನೀಡಿದ್ದು, ನವೆಂಬರ್ ವೇಳೆಗೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದೆ.

     

    ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕೆಂಪುಹೊಳೆ ಸೇತುವೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆ ಸೇತುವೆ ತನಕ 12.38 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ನಡೆಯಬೇಕಾಗಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಯೋಜನೆಗೆ ಕೇಂದ್ರ ಭೂಸಾರಿಗೆ ಸಚಿವಾಲಯದಿಂದ ಆರ್ಥಿಕ ಅನುಮೋದನೆ ದೊರೆಯಬೇಕಿದ್ದು, ಮುಂದಿನ ವಾರ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಂಕ್ರೀಟ್ ರಸ್ತೆ ನಿರ್ಮಾಣದ ಕೆಲಸ ಆರಂಭಿಸುವ ಮುನ್ನ ನಿರ್ಮಾಣೆ ಬೇಕಾದ ಜಲ್ಲಿ ಕಲ್ಲು, ಕಬ್ಬಿಣ, ಸಿಮೆಂಟ್ ದಾಸ್ತಾನು ಮಾಡಿಕೊಳ್ಳಲಾಗುವುದು, ಈ ಕೆಲಸಕ್ಕೆ ಮಳೆ ಅಡ್ಡಿಯಾಗುವುದಿಲ್ಲ. ಹೀಗಾಗಿ ಅಗತ್ಯಕ್ಕೆ ತಕ್ಕಷ್ಟು ಕಚ್ಚಾ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲಾಗುತ್ತದೆ. ಮಳೆ ಸಂಪೂರ್ಣ ನಿಂತ ಬಳಿಕ ನವೆಂಬರ್ ನಲ್ಲಿ ಕಾಂಕ್ರೀಟ್ ಕಾಮಗಾರಿ ಆರಂಭವಾಗಲಿದೆ ಎಂದು ಆಶ್ವಾಸನೆಯನ್ನು ನೀಡಿದರು.

    ಮುಂದಿನ ಮಳೆಗಾಲ ಆರಂಭಕ್ಕೂ ಮುನ್ನ ಅಂದರೆ, ಏಪ್ರಿಲ್ ವೇಳೆಗೆ ಕಾಮಗಾರಿ ಮುಗಿಸಬೇಕೆಂಬ ಷರತ್ತು ವಿಧಿಸಲಾಗಿದ್ದು, ಗುತ್ತಿಗೆದಾರರಿಗೆ ಕಾರ್ಯಆರಂಭಿಸಲು ಆದೇಶವನ್ನು ನೀಡಲಾಗಿದೆ. ಅಲ್ಲದೇ ಕಾಂಕ್ರೀಂಟ್ ರಸ್ತೆ ನಿರ್ಮಾಣ ನಡೆಯುವ ಸಂದರ್ಭದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗುವುದು ಎಂದು ತಿಳಿಸಿದರು. 2015ರಲ್ಲಿ ನಡೆದ ರಸ್ತೆ ಕಾಮಗಾರಿ ವೇಳೆ ಶಿರಾಡಿ ಘಾಟಿಯಲ್ಲಿ ಏಳು ತಿಂಗಳು ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಏಳು ಪರ್ಯಾಯ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದರು.

    ಶಿರಾಡಿ ಘಾಟಿಯಲ್ಲಿ ಪದೇ ಪದೇ ರಸ್ತೆ ಹಾಳಾಗುತ್ತಿರುವ ಕಾರಣ ಶಾಶ್ವತ ಪರಿಹಾರಕ್ಕಾಗಿ 26 ಕಿ.ಮೀ.ನಲ್ಲೂ ಕಾಂಕ್ರೀಟ್ ರಸ್ತೆ ನಿರ್ಮಿಸಲು ಇಲಾಖೆ ಈ ಯೋಜನೆ ರೂಪಿಸಿದೆ. ಇದರಲ್ಲಿ 13.62 ಕಿ.ಮೀ. ರಸ್ತೆಗೆ 2015ರಲ್ಲೇ ಕಾಂಕ್ರೀಟ್ ಹಾಕಲಾಗಿದೆ. ಹಾಸನದಿಂದ ಬಿ.ಸಿ.ರೋಡ್‍ವರೆಗಿನ 140 ಕಿ.ಮೀ., ಹೆಗ್ಗದ್ದೆಯಿಂದ ಅಡ್ಡಹೊಳೆವರೆಗಿನ 26 ಕಿ.ಮೀ. ರಸ್ತೆ ಮಾತ್ರ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಉಳಿದಿದೆ. ಉಳಿದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿದೆ ಎಂದು ವಿವರಿಸಿದರು.

    ಕಳೆದ ವರ್ಷ ಇದೇ ಕಾಮಗಾರಿಗೆ ಜಿ.ವಿ.ಆರ್. ಇನ್‍ಫ್ರಾ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ನೀಡಿದ್ದ ಗುತ್ತಿಗೆಯನ್ನು ಸಕಾಲಕ್ಕೆ ಕಾಮಗಾರಿ ಆರಂಭಿಸದ ಕಾರಣ ರದ್ದುಪಡಿಸಲಾಗಿತ್ತು. ಟೆಂಡರ್ ರದ್ದಾತಿ ಕುರಿತು ಗುತ್ತಿಗೆದರಾರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಇಲಾಖೆ ಪರವಾಗಿ ಆದೇಶ ನೀಡಿದ ಬಳಿಕ ಮರು ಟೆಂಡರ್ ಪ್ರಕ್ರಿಯೇ ಆರಂಭಿಸಲಾಗಿದೆ. ಈ ಬಾರಿ ಕಾಮಗಾರಿ ವಿಳಂಬವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.