Tag: Computer Baba

  • ಕಮಲ್‍ನಾಥ್ ಒಪ್ಪಿದ್ರೆ ಬಿಜೆಪಿಯ 4 ಶಾಸಕರು ಕಾಂಗ್ರೆಸ್ ಸೇರ್ಪಡೆ: ಕಂಪ್ಯೂಟರ್ ಬಾಬಾ

    ಕಮಲ್‍ನಾಥ್ ಒಪ್ಪಿದ್ರೆ ಬಿಜೆಪಿಯ 4 ಶಾಸಕರು ಕಾಂಗ್ರೆಸ್ ಸೇರ್ಪಡೆ: ಕಂಪ್ಯೂಟರ್ ಬಾಬಾ

    ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವ ಸರ್ಕಾರವನ್ನು ಬೀಳಿಸಲು ಮುಂದಾದ ರಾಜ್ಯ ಬಿಜೆಪಿ ನಾಯಕರಿಗೆ ಅವರದ್ದೇ ಕಂಪ್ಯೂಟರ್ ಬಾಬಾ ಶಾಕ್ ಕೊಟ್ಟಿದ್ದಾರೆ.

    ಬಿಜೆಪಿಯ ನಾಲ್ಕು ಜನ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಸಮಯ ಬಂದಾಗ ಎಲ್ಲರ ಮುಂದೆ ಹಾಜರು ಪಡೆಸುತ್ತೇನೆ. ಸಿಎಂ ಕಮಲ್‍ನಾಥ್ ಹೇಳಿದರೆ ಅವರ ಮುಂದೆ ಹಾಜರು ಪಡಿಸುತ್ತೇನೆ. ಬಿಜೆಪಿ ಆ ನಾಲ್ಕು ಜನ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಕಂಪ್ಯೂಟರ್ ಬಾಬಾ ಬಾಂಬ್ ಸಿಡಿಸಿದ್ದಾರೆ.

    ಕಂಪ್ಯೂಟರ್ ಬಾಬಾ ಎಂದೇ ಖ್ಯಾತಿಯಾಗಿರುವ ನಾಮದೇವ್ ದಾಸ್ ತ್ಯಾಗಿ ಅವರು ಬಿಜೆಪಿ ಶಿವರಾಜ್‍ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ರಾಜ್ಯ ದರ್ಜೆಯ ಮಂತ್ರಿ ಸ್ಥಾನಮಾನ ಪಡೆದಿದ್ದರು. ನರ್ಮದಾ ನದಿಯ ಸಂರಕ್ಷಣಾ ಸಮಿತಿ ಸದಸ್ಯ ಸ್ಥಾನ ಪಡೆದಿದ್ದ ಕಂಪ್ಯೂಟರ್ ಬಾಬಾ, ನರ್ಮಾನಂದ ಮಹಾರಾಜ್, ಹರಿಹರನಂದ ಮಹಾರಾಜ್, ಭೈಯು ಮಹಾರಾಜ್‍ಜಂದ್ ಹಾಗೂ ಪಂಡಿತ್ ಯೋಗೇಂದ್ರ ಮಹಂತ್ ಅವರಿಗೆ ಮಧ್ಯಪ್ರದೇಶ ಸರ್ಕಾರ ಮಂತ್ರಿ ಸ್ಥಾನವನ್ನು ಕಲ್ಪಿಸಿತ್ತು. ಸದ್ಯ ಕಮಲ್‍ನಾಥ್ ನೇತೃತ್ವದ ಸರ್ಕಾರದಲ್ಲಿ ಕಂಪ್ಯೂಟರ್ ಬಾಬಾ ನರ್ಮದಾ, ಶಿಪ್ರಾ ಹಾಗೂ ಮಂದಾಕಿನಿ ನದಿ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ.

    ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದಲ್ಲಿ ಬಿಜೆಪಿ ಶಾಸಕರಿಬ್ಬರು ಕ್ರಿಮಿನಲ್ ಅಪರಾಧ ತಿದ್ದುಪಡಿ ತರಲು ಬೆಂಬಲ ನೀಡುವ ಮಸೂದೆಯ ಪರ ಮತವನ್ನು ಹಾಕಿ ಶಾಕ್ ನೀಡಿದ್ದರು. ಈ ಬೆನ್ನಲ್ಲೇ ಕಂಪ್ಯೂಟರ್ ಬಾಬಾ ತಮ್ಮದೆ ಪಕ್ಷದ ನಾಯಕರು ನಡೆಸಿದ್ದ ಆಪರೇಷನ್‍ಗೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿಯುವ ಕನಸು ಹೊತ್ತಿದ್ದ ಬಿಜೆಪಿಗೆ ಆಘಾತವಾಗಿದೆ.

    ಕಮಲ್‍ನಾಥ್ ನೇತೃತ್ವದ ಸರ್ಕಾರವು ವಿಶ್ವಾಸಮತ ಕಳೆದುಕೊಳ್ಳಲಿದೆ ಎಂದು ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು ಹೇಳಿದ್ದರು. ಆದರೆ ಈಗ ಎಲ್ಲವೂ ತಲೆ ಕೆಳಗಾಗಿದ್ದು, ಕಾಂಗ್ರೆಸ್ ಮತ್ತೆ ಹೆಚ್ಚಿನ ಸಂಖ್ಯಾಬಲ ಸಿಕ್ಕಂತಾಗಿದೆ. ಸರ್ಕಾರಕ್ಕೆ ಬೆಂಬಲ ನೀಡಿದ ಶಾಸಕರ ಪೈಕಿ ಒಬ್ಬರಾದ ನಾರಾಯಣ್ ತ್ರಿಪಾಠಿ ಅವರು, ಇದು ನನ್ನ ಘರ್ ವಾಪಸಿ ಎಂದು ಬುಧವಾರ ಘೋಷಿಸಿದ್ದರು.

    ಬುಧವಾರವಷ್ಟೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು, ಪಕ್ಷದ ನಂಬರ್ 1 ಮತ್ತು ನಂಬರ್ 2 ವ್ಯಕ್ತಿಗಳಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದಲ್ಲಿ 24 ಗಂಟೆಯ ಒಳಗಡೆ ಕಮಲ್‍ನಾಥ್ ಸರ್ಕಾರ ಬೀಳಲಿದೆ ಎಂದು ಹೇಳಿದ್ದರು.

    ಕಮಲ್‍ನಾಥ್ ಸರ್ಕಾರವನ್ನು ಬೀಳಿಸಲು ನಾವು ಕಾಯುತ್ತಿದ್ದೇವೆ. ಮಧ್ಯಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಅತ್ಯಂತ ಕೆಟ್ಟದಾಗಿದೆ. ಇಲ್ಲಿನ ಸರ್ಕಾರವು ಏಳು ತಿಂಗಳು ಪೂರ್ಣಗೊಳಿಸಿದ್ದೆ ಆಶ್ಚರ್ಯಕರ ಹಾಗೂ ಇಲ್ಲಿಗೆ ಕಮಲ್‍ನಾಥ್ ಆಡಳಿತವನ್ನು ನಿಲ್ಲಿಸಬೇಕಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ನಾವು ಸರ್ಕಾರ ರಚನೆಯ ಆತುರದಲ್ಲಿ ಇರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ನಮಗೆ ಅನುಕೂಲವಾಗಿದೆ ಎಂದು ತಿಳಿಸಿದ್ದರು.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.

  • ಹಠ ಯೋಗಕ್ಕೆ ದಿಗ್ವಿಜಯ್ ಸಿಂಗ್‍ರನ್ನ ಆಹ್ವಾನಿಸಿರಲಿಲ್ಲ: ಕಂಪ್ಯೂಟರ್ ಬಾಬಾ ಯೂಟರ್ನ್

    ಹಠ ಯೋಗಕ್ಕೆ ದಿಗ್ವಿಜಯ್ ಸಿಂಗ್‍ರನ್ನ ಆಹ್ವಾನಿಸಿರಲಿಲ್ಲ: ಕಂಪ್ಯೂಟರ್ ಬಾಬಾ ಯೂಟರ್ನ್

    ಭೋಪಾಲ್: ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರನ್ನು ಹಠ ಯೋಗಕ್ಕೆ ಆಹ್ವಾನಿಸಿರಲಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಕಂಪ್ಯೂಟರ್ ಬಾಬಾ ಯೂಟರ್ನ್ ಹೊಡೆದಿದ್ದಾರೆ.

    ಚುನಾವಣಾ ಆಯೋಗ ನೀಡಿರುವ ನೋಟಿಸ್‍ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವರು, ಹಠ ಯೋಗ ಕ್ಯಾಂಪ್‍ಗೆ ಬರುವಂತೆ ದಿಗ್ವಿಜಯ್ ಸಿಂಗ್ ಅವರಿಗೆ ಆಹ್ವಾನ ನೀಡಿರಲಿಲ್ಲ. ಅವರು ಪತ್ನಿಯ ಸಮೇತ ಬಂದು ಪೂಜೆಯಲ್ಲಿ ಭಾಗವಹಿಸಿದ್ದು ನನಗೆ ತಿಳಿದಿಲ್ಲ. ಅಷ್ಟೇ ಅಲ್ಲದೆ ದಾನಿಗಳಿಂದ ಹಣ ಸಂಗ್ರಹಿಸಿ ಹಠ ಯೋಗ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

    ಕಂಪ್ಯೂಟರ್ ಬಾಬಾ ಅವರ ಮೂಲ ಹೆಸರು ನಾಮ್‍ದಾಸ್ ತ್ಯಾಗಿ. ಅವರು ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌವ್ಹಾನ್ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ ಭೋಪಾಲ್‍ನ ಸಫಿಯಾ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಗೆಲುವಿಗಾಗಿ ಹಠ ಯೋಗ ಕ್ಯಾಂಪ್ ಮಾಡಿದ್ದರು.

    ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಕಂಪ್ಯೂಟರ್ ಬಾಬಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷ ಸರ್ಕಾರ ನಡೆಸಿದರೂ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ. ರಾಮ ಮಂದಿರ ಇಲ್ಲವೆಂದ ಮೇಲೆ ಮೋದಿಯೂ ಇಲ್ಲ ಎಂದು ಹೇಳಿದ್ದರು. ಈ ಸಂಬಂಧ ಬಿಜೆಪಿಯು ಕಂಪ್ಯೂಟರ್ ಬಾಬಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

    ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸಾಧ್ವಿ ಪ್ರಜ್ಞಾಸಿಂಗ್ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಈ ನಾಯಕರ ಮಧ್ಯೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಮಧ್ಯಪ್ರದೇಶದ ಸಾಗರ್, ಭೋಪಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದೆ.

  • ದಿಗ್ವಿಜಯ್ ಸಿಂಗ್ ಪರ ಬಿಜೆಪಿಯ ಮಾಜಿ ಸಚಿವ ಪ್ರಚಾರ

    ದಿಗ್ವಿಜಯ್ ಸಿಂಗ್ ಪರ ಬಿಜೆಪಿಯ ಮಾಜಿ ಸಚಿವ ಪ್ರಚಾರ

    ಭೋಪಾಲ್: ಬಿಜೆಪಿಯ ಮಾಜಿ ಸಚಿವ ಕಂಪ್ಯೂಟರ್ ಬಾಬಾ ಅವರು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪರ ಪ್ರಚಾರ ಮಾಡುತ್ತಿದ್ದಾರೆ.

    ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ದಿಗ್ವಿಜಯ್ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅವರ ಗೆಲುವಿಗಾಗಿ ಕಂಪ್ಯೂಟರ್ ಬಾಬಾ ಅವರು ಹಠ ಯೋಗ ಮಾಡುತ್ತಿದ್ದಾರೆ. ಸಾವಿರಾರು ಸಾಧುಗಳು ಕೂಡ ಹಠ ಯೋಗದಲ್ಲಿ ಭಾಗಿಯಾಗಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಂಪ್ಯೂಟರ್ ಬಾಬಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷ ಸರ್ಕಾರ ನಡೆಸಿದರೂ ರಾಮ ಮಂದಿರ ನಿರ್ಮಾಣ ಮಾಡಲಿಲ್ಲ. ರಾಮ ಮಂದಿನ ಇಲ್ಲವೆಂದಮೇಲೆ ಮೋದಿಯೂ ಇಲ್ಲ ಎಂದು ಹೇಳಿದ್ದಾರೆ.

    ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ದಿಗ್ವಿಜಯ್ ಸಿಂಗ್ ಅವರು ಇಂದು ಕುಟುಂಬ ಸಮೇತ ವಿಶೇಷ ಪೂಜೆ ನೆರವೇರಿಸಿದರು. ಇತ್ತ ಅನೇಕ ಸಾಧುಗಳು ಹಠ ಯೋಗದಲ್ಲಿ ನಿರತರಾಗಿದ್ದಾರೆ.

    ದಿಗ್ವಿಜಯ್ ಸಿಂಗ್ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸಾಧ್ವಿ ಪ್ರಜ್ಞಾಸಿಂಗ್ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಈ ನಾಯಕರ ಮಧ್ಯೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಮಧ್ಯಪ್ರದೇಶದ ಸಾಗರ್, ಭೋಪಾಲ್ ಸೇರಿದಂತೆ 8 ಲೋಕಸಭಾ ಕ್ಷೇತ್ರಗಳ ಮತದಾನವು ಮೇ 12ರಂದು ನಡೆಯಲಿದೆ.