Tag: Compromise

  • ರಾಜಿಯಾದ ಮಾತ್ರಕ್ಕೆ ಲೈಂಗಿಕ ಕಿರುಕುಳ ಕೇಸ್‌ ರದ್ದು ಮಾಡಲು ಸಾಧ್ಯವಿಲ್ಲ: ಸುಪ್ರೀಂ

    ರಾಜಿಯಾದ ಮಾತ್ರಕ್ಕೆ ಲೈಂಗಿಕ ಕಿರುಕುಳ ಕೇಸ್‌ ರದ್ದು ಮಾಡಲು ಸಾಧ್ಯವಿಲ್ಲ: ಸುಪ್ರೀಂ

    ನವದೆಹಲಿ: ರಾಜಿಯಾದ (Compromise) ಮಾತ್ರಕ್ಕೆ ಲೈಂಗಿಕ ಕಿರುಕುಳ ಕೇಸ್‌ ರದ್ದು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ (Supreme Court) ಹೇಳಿದೆ.

    ರಾಜಸ್ಥಾನದ (Rajasthan) ಶಿಕ್ಷಕನೊಬ್ಬನ ವಿರುದ್ಧ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ದಾಖಲಾಗಿತ್ತು. ಬಳಿಕ ಶಿಕ್ಷಕ, ಸಂತ್ರಸ್ಥೆಯ ಕುಟುಂಬದ ಜೊತೆ ರಾಜಿಯಾಗಿದ್ದ. ಇದಾದ ನಂತರ ಶಿಕ್ಷಕನಿಗೆ ರಾಜಸ್ಥಾನ ಹೈಕೋರ್ಟ್ ಪ್ರಕರಣ ರದ್ದುಗೊಳಿಸಿ ರಿಲೀಫ್ ನೀಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.‌ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಿದೆ.

    2022ರಲ್ಲಿ ರಾಜಸ್ಥಾನದ ಗಂಗಾಪುರದಲ್ಲಿ ಅಪ್ರಾಪ್ತ ದಲಿತ ಬಾಲಕಿಯೊಬ್ಬಳು ಸರ್ಕಾರಿ ಶಾಲೆಯ ಶಿಕ್ಷಕನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳು. ಈ ಪ್ರಕರಣದಲ್ಲಿ ಪೋಕ್ಸೊ ಕಾಯಿದೆ (POCSO Act) ಮತ್ತು ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಅಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಅಪ್ರಾಪ್ತೆಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿತ್ತು.

    ಆರೋಪಿ ಶಿಕ್ಷಕ ವಿಮಲ್ ಕುಮಾರ್ ಗುಪ್ತಾ ಎಂಬಾತ ಬಾಲಕಿಯ ಕುಟುಂಬದೊಂದಿಗೆ ರಾಜೀ ಮಾಡಿಕೊಂಡು, ಸ್ಟಾಂಪ್ ಪೇಪರ್‌ನಲ್ಲಿ, ತಪ್ಪು ತಿಳುವಳಿಕೆಯಿಂದ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಕರ ವಿರುದ್ಧ ಯಾವುದೇ ಕ್ರಮವನ್ನು ಬಯಸುವುದಿಲ್ಲ ಎಂದು ಬರೆಸಿಕೊಂಡಿದ್ದ. ಇದನ್ನು ಸ್ವೀಕರಿಸಿದ ಪೊಲೀಸರು ವರದಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯವು ಈ ಹೇಳಿಕೆಯನ್ನು ತಿರಸ್ಕರಿಸಿತ್ತು.

    ಬಳಿಕ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದ. ಅದನ್ನು ಒಪ್ಪಿಕೊಂಡು ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಸಾಮಾಜಿಕ ಕಾರ್ಯಕರ್ತ ರಾಮ್‌ಜಿ ಲಾಲ್ ಬೈರ್ವಾ ಅವರು ಈ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್ ಮತ್ತು ನ್ಯಾಯಮೂರ್ತಿ ಪಿ.ವಿ.ಸಂಜಯ್ ಕುಮಾರ್ ಅವರಿದ್ದ ಪೀಠವು ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದೆ.

  • ಗದಗ್‍ನಲ್ಲಿ ಲೋಕ ಅದಾಲತ್ – ಮತ್ತೆ ಒಂದಾದ 5 ಜೋಡಿಗಳು

    ಗದಗ್‍ನಲ್ಲಿ ಲೋಕ ಅದಾಲತ್ – ಮತ್ತೆ ಒಂದಾದ 5 ಜೋಡಿಗಳು

    – 4,950 ಕೇಸ್ ಇತ್ಯರ್ಥ

    ಗದಗ: ಜಿಲ್ಲೆಯಲ್ಲಿ ಭಾನುವಾರ ನಡೆದ ಮೆಗಾ ಲೋಕ ಅದಾಲತ್‍ನಲ್ಲಿ 4,950 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು. ಈ ಬಾರಿಯ ಅದಾಲತ್‍ಗೆ 6,124 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು.

    39 ಮೋಟಾರು ಅಪಘಾತ ಪ್ರಕರಣಗಳು, 123 ಚೆಕ್‍ಬೌನ್ಸ್, 72 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, 257 ಅಸಲು ದಾವೆ, 24 ಭೂಸ್ವಾಧೀನ ದರಖಾಸ್ತು, 4,230 ಇತರೆ ಕ್ರಿಮಿನಲ್, 58 ಎಂಎಂಆರ್‍ಡಿ, 5 ವೈವಾಹಿಕ ಪ್ರಕರಣಗಳು, 14 ವಿದ್ಯುಚ್ಛಕ್ತಿ ಪ್ರಕರಣಗಳು, 1 ಕಾರ್ಮಿಕ ಪ್ರಕರಣ, ಎರಡು ಹಣ ವಸೂಲಾತಿ ಪ್ರಕರಣಗಳನ್ನು ಸೇರಿಸಿ ಒಟ್ಟು 4,823 ಚಾಲ್ತಿ ಪ್ರಕರಣಗಳನ್ನು 9,79,71,050 ಪರಿಹಾರ ಒದಗಿಸುವುದರ ಮೂಲಕ ರಾಜಿ ಸಂಧಾನ ಮಾಡಲಾಯಿತು. ಅದೇ ರೀತಿ, 127 ಬ್ಯಾಂಕ್ ಪ್ರಕರಣಗಳ ವ್ಯಾಜ್ಯಪೂರ್ವ ಪ್ರಕರಣಗಳನ್ನು 1,40,38,435 ರಾಜಿ ಸಂಧಾನ ಮಾಡಲಾಯಿತು. ಹೀಗೆ ಒಟ್ಟು 4,950 ಪ್ರಕರಣಗಳನ್ನು 11,20,09,485 ರೂ.ಗೆ ರಾಜಿ ಸಂಧಾನಗೊಳಿಸಲಾಯಿತು.

    ಸಾವಿರಾರು ಜನರ ಮಧ್ಯೆ ಅಗ್ನಿ ಸಾಕ್ಷಿಯಾಗಿ, ಸಪ್ತಪದಿ ತುಳಿದು ತಾಳಿಕಟ್ಟಿ ಜೀವನ ನಡೆಸುತ್ತಿದ್ದ ಜೋಡಿಗಳು ದೂರವಾಗಿದ್ದರು. ವಿರಹ ವೇದನೆಯಿಂದ ನಾನೊಂದು ತೀರ, ನೀನೊಂದು ತೀರ ಅಂತಿದ್ದ ಜೋಡಿಗಳು ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು. ಈಗ ಕೋರ್ಟ್‍ನಲ್ಲಿ ತಿಳುವಳಿಕೆ ಹೇಳಿ ರಾಜಿ ಮಾಡಿಸಿರುವುದರಿಂದ ಗದಗ ಜಿಲ್ಲೆಯ 5 ಜೋಡಿಗಳು ಮತ್ತೆ ಒಂದಾಗಿದ್ದಾರೆ. ಅವರಿಗೆ ಒಬ್ಬರಿಗೊಬ್ಬರು ಹಾರ ಬದಲಾಯಿಸಿ, ಸಿಹಿ ತಿನಿಸಿದರು. ನೆರೆದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ, ಸಂಬಂಧಿ ಎಲ್ಲರೂ ಪುಷ್ಪ ಎರಚುವ ಮೂಲಕ ಶುಭ ಹಾರೈಸಿದರು. ಜೋಡಿಗಳ ಮತ್ತೆ ನಗುವಿನ ಚೆಲುವು ಚಿಮ್ಮಿ ಒಂದಾದರು.

    ಮೆಗಾ ಲೋಕ್ ಅದಾಲತ್‍ನಲ್ಲಿ ಪ್ರಧಾನ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಮಹಾಲಕ್ಷ್ಮೀ ನೇರಳೆ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ಮಧುಸೂದನ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನರಶಿಂಸಾ ಎಂ.ವಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ, ಜೆಎಂಎಫ್‍ಸಿ ನ್ಯಾಯಾಧೀಶರಾದ ಎಸ್.ಚಿನ್ನಸ್ವಾಮಿ, ಶ್ರೀಕಾಂತ ರವೀಂದ್ರಪ್ಪ, ಅರುಣ ಚೌಗಲೆ, ನಿಖಿತಾ ಎಸ್. ಅಕ್ಕಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲ್ವಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಮತ್ತೂರ, ಉಪಾಧ್ಯಕ್ಷ ವಿ.ವಿ.ಪಾಟೀಲ್, ಜಂಟಿ ಕಾರ್ಯದರ್ಶಿ ಕುಮಾರ್ ಜಿ.ವಿ. ಹಾಗೂ ವಕೀಲರ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಉಪಸ್ಥಿತರಿದ್ದರು. ಎಲ್ಲ ತಾಲೂಕುಗಳ ನ್ಯಾಯಾಧೀಶರು ಹಾಗೂ ವಕೀಲ ವೃಂದದವರು ಕೂಡ ಆಯಾ ತಾಲೂಕು ನ್ಯಾಯಾಲಯಗಳಲ್ಲಿ ನಡೆದ ಲೋಕ್ ಅದಾಲತ್‍ದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ

  • ಕಾರ್ಯಕರ್ತರ ಕಿತ್ತಾಟದ ನಡುವೆಯೂ ಕೋಲಾರ ನಾಯಕರ ಮುನಿಸಿಗೆ ತೇಪೆ ಹಚ್ಚಿ ಡಿಕೆಶಿ ಸಂಧಾನ!

    ಕಾರ್ಯಕರ್ತರ ಕಿತ್ತಾಟದ ನಡುವೆಯೂ ಕೋಲಾರ ನಾಯಕರ ಮುನಿಸಿಗೆ ತೇಪೆ ಹಚ್ಚಿ ಡಿಕೆಶಿ ಸಂಧಾನ!

    – ಕೋಲಾರ ಕಾಂಗ್ರೆಸ್ಸಿನಲ್ಲಿ ನಿಲ್ಲದ ಭಿನ್ನಮತ
    – ಸಂಸದರ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು
    – ಶಿಡ್ಲಘಟ್ಟ ಕಾಂಗ್ರೆಸ್ ಕಚೇರಿಯಲ್ಲಿ ಸಂಧಾನ

    ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕೋಲಾರ ಲೋಕಸಭಾ ಕ್ಷೇತ್ರದ, ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ.

    ಸಂಸದ ಕೆ.ಎಚ್ ಮುನಿಯಪ್ಪರ ಪಕ್ಷ ವಿರೋಧಿ ಚಟುವಟಿಕೆಗಳಿಂದ ಕೆಂಡಾಮಂಡಲರಾಗಿರುವ ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಮುಂದಾಗಿರೋದು ಮಗ್ಗಲು ಮುಳ್ಳಾಗಿದೆ. ವಿರೋಧ ಜಾಸ್ತಿಯಾಗುತ್ತಿರುವುದನ್ನು ಕಂಡ ಕೆ.ಎಚ್ ಮುನಿಯಪ್ಪ ಟ್ರಬಲ್ ಶೂಟರ್ ಡಿಕೆಶಿ ಮುಖಾಂತರ ತೇಪೆ ಹಾಕೋ ಕೆಲಸಕ್ಕೆ ಮುಂದಾಗಿ ಇಂದು ಸಂಧಾನ ಮಾಡಿದ್ದಾರೆ.

    ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ವಿರುದ್ಧ ಮುನಿಸಿಕೊಂಡಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ವಿ. ಮುನಿಯಪ್ಪ ನಡುವಿನ ಮುನಿಸು ದೂರ ಮಾಡಲು ಇಂದು ಡಿಕೆ ಶಿವಕುಮಾರ್ ಮುಂದಾಗಿದ್ದರು. ಶಿಡ್ಲಘಟ್ಟ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮುನಿಯಪ್ಪದ್ವಯರ ನಡುವೆ ಕಾರ್ಯಕರ್ತರ ಸಮ್ಮುಖದಲ್ಲೇ ಭಿನ್ನಮತ ಶಮನಕ್ಕೆ ಮುಂದಾಗಿದ್ರು. ಆದ್ರೆ ಆರಂಭದಲ್ಲೇ ಕೆ.ಎಚ್ ಮುನಿಯಪ್ಪ ವಿರುದ್ಧ ಧಿಕ್ಕಾರಗಳ ಘೋಷಣೆಗಳು ಮೊಳಗಿದವು.

    ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪರ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಬಾರಿ ಕೆ.ಎಚ್ ಮುನಿಯಪ್ಪರಿಗೆ ಬೆಂಬಲಿಸಬಾರದೆಂದು ಕಾರ್ಯಕರ್ತರು ಒತ್ತಾಯಿಸಿದಾಗ ಸಭೆಯಲ್ಲಿ ತಳ್ಳಾಟ ನೂಕಾಟ ನಡೆದು, ಸಚಿವ ಡಿ.ಕೆ.ಶಿವಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ವಿ.ಮುನಿಯಪ್ಪರ ಸಮ್ಮುಖದಲ್ಲೇ ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತು. ಈ ಮಧ್ಯೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವಂತಾಯಿತು.

    ಸಂಸದರ ವಿರುದ್ಧ ಕಿಡಿ:
    ಸಭೆಯಲ್ಲಿ ಮಾತನಾಡಿದ ಶಾಸಕ ವಿ. ಮುನಿಯಪ್ಪ ಕೆ.ಎಚ್ ಮುನಿಯಪ್ಪನವರಿಗೆ 7 ಚುನಾವಣೆಗಳಲ್ಲೂ ನಾವು ದುಡಿದು ರಾಜಕೀಯ ಸ್ಥಾನ ಮಾನ ನೀಡಿದರೆ ನಮಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಕೆ.ಎಚ್ ಮುನಿಯಪ್ಪನವರೇ ನಿಮ್ಮಿಂದ ನಮಗೇನು ಆಗಬೇಕಿಲ್ಲ. ನಾನು ಸಂಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೆರವಾದರು. ಅನುಕೂಲ ಪಡೆದ ಪುಣ್ಯಾತ್ಮ ಕೆ.ಎಚ್ ಮುನಿಯಪ್ಪ ನಮ್ಮ ವಿರೋಧಿಗಳ ಜೊತೆ ಸೇರಿ ಸಂಭ್ರಮಿಸಿದರೆಂದು ಕೆಂಡಾಮಂಡಲರಾದರು. ಕೆ.ಎಚ್ ಮುನಿಯಪ್ಪ ಕುತಂತ್ರ ರಾಜಕಾರಣಿ ಎಂದು ಹಿರಿಯರು ಹೇಳಿದ್ದರು ಆದರೂ ನಾನು ನಂಬಲಿಲ್ಲ. ಮಗುವಿಗೆ ತಾಯಿ ಜನ್ಮ ನೀಡಬೇಕಾದರೆ ಎಷ್ಟು ನೋವು ತಿಂತಾರೋ ಅಷ್ಟೇ ನೋವನ್ನು ನಾನು ಈ ಪುಣ್ಯಾತ್ಮನಿಂದ ತಿಂದಿದ್ದೇನೆ ಎಂದು ನೊಂದು ತಮ್ಮ ಆಕ್ರೋಶವನ್ನು ಹಂಚಿಕೊಂಡರು. ಈ ವೇಳೆ ಕಾರ್ಯಕರ್ತರು ಕೂಡ ವಿ.ಮುನಿಯಪ್ಪರ ಮಾತಿಗೆ ಧ್ವನಿಯಾದರು.

    ರಾಜಕೀಯ ನಿವೃತ್ತಿ ಸವಾಲ್
    ಕೋಲಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಮಾತನಾಡಿ ವಿ. ಮುನಿಯಪ್ಪ ಶಾಸಕರಾಗೋ ಮೊದಲೇ ನಾನು ತಾಲೂಕು ಪಂಚಾಯತಿ ಸದಸ್ಯನಾಗಿದ್ದೆ. ಅವರ ಗೆಲುವಿಗೆ ನಾನು ಶ್ರಮಿಸಿದ್ದೇನೆ. ನಾನು ಮುನಿಯಪ್ಪರ ವಿರುದ್ಧ ಕೆಲಸ ಮಾಡಿಲ್ಲ. ಅವರಿಗೆ ಮತ ಹಾಕಬೇಡಿ ಅಂತ ನಾನೇಳಿರೋದು ಸಾಬೀತಾದರೆ ರಾಜಕೀಯ ನಿವೃತ್ತಿಯಾಗೋದಾಗಿ ಸವಾಲ್ ಹಾಕಿದರು. ಒಕ್ಕಲಿಗ ನಾಯಕರಲ್ಲಿ ವಿ.ಮುನಿಯಪ್ಪ ಕೂಡ ಹಿರಿಯರು ಅವರಿಗೆ ಸಚಿವ ಸ್ಥಾನ ನೀಡುವಂತೆ ನಾನು ಒತ್ತಾಯಿಸಿದ್ದೆ. ನಾನು ಅವರ ಋಣದಲ್ಲಿ ಇದ್ದೇನೆ. ಅವರಿಗೆ ದ್ರೋಹ ಮಾಡೋ ವ್ಯಕ್ತಿ ನಾನಲ್ಲ. ಸುಬ್ರಮಣಿ ಅಂತ ನಾಲ್ಕು ಜನ ಬೆಂಕಿ ಹಾಕೋವರಿಂದ ನಮ್ಮಿಬ್ಬರ ಮಧ್ಯೆ ವೈಮನಸ್ಸು ಮೂಡುವಂತಾಗಿದೆ ಎಂದಾಗ ವೇದಿಕೆಯಲ್ಲಿದ್ದ ಸುಬ್ರಮಣಿ ಕೆ.ಎಚ್ ಮುನಿಯಪ್ಪ ವಿರುದ್ಧ ಎದ್ದು ನಿಂತು ಕೆಂಡಾಮಂಡಲರಾದರು. ಆದರೂ ಕೆ.ಎಚ್ ಮುನಿಯಪ್ಪ ಎಲ್ಲರನ್ನೂ ಸಮಾಧಾನ ಪಡಿಸಿ ಓಲೈಕೆ ಮಾಡಿದ್ದು ವಿಶೇಷವಾಗಿತ್ತು.

    ಡಿಕೆಶಿ ಸಂಧಾನ ಸಫಲ:
    ಸಂಧಾನಕ್ಕೆ ಬಂದಿದ್ದ ಸಚಿವ ಡಿ.ಕೆ.ಶಿವಕುಮಾರ್ ನಾನು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ಹೋರಾಟ ಮಾಡಿಕೊಂಡು ಬಂದವನು. ವರಿಷ್ಠರ ನಿರ್ಧಾರದಿಂದ ಹೊಂದಾಣಿಕೆ ಮಾಡಿಕೊಂಡು ಹೋಗ್ತಿದ್ದೇನೆ. ಇಂತಹದರಲ್ಲಿ ಮುನಿಯಪ್ಪಧ್ವಯರ ಮಧ್ಯೆ ಇರೋ ಮುನಿಸು ಮರೆತು ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು. ಅಲ್ಲದೇ ಚುನಾವಣೆ ಮುಗಿದ ಬಳಿಕ ನಾನು ಕೆ.ಎಚ್ ಮುನಿಯಪ್ಪ ಸೇರಿ ವಿ. ಮುನಿಯಪ್ಪರಿಗೆ ಮಂತ್ರಿ ಮಾಡೋ ಭರವಸೆ ನೀಡೋ ಮೂಲಕ ತೇಪೆ ಹಾಕುವ ಕೆಲಸ ಮಾಡಿದರು.

  • ಜಾರಕಿಹೊಳಿ ಸಹೋದರರ ಸಂಧಾನಕ್ಕೆ ಮುಂದಾದ ಖರ್ಗೆ

    ಜಾರಕಿಹೊಳಿ ಸಹೋದರರ ಸಂಧಾನಕ್ಕೆ ಮುಂದಾದ ಖರ್ಗೆ

    ಬೆಂಗಳೂರು: ಬೆಳಗಾವಿಯ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸಹೋದರರ ಸಮಸ್ಯೆಯನ್ನು ದಮನ ಮಾಡಲು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಾಗಿದ್ದಾರೆ.

    ಈ ಕುರಿತು ಸದಾಶಿವನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯ ಸಮಸ್ಯೆಯಿಂದಾಗಿ ಎದ್ದಿರುವ ಸಮಸ್ಯೆಯನ್ನು ಕುರಿತು ಚರ್ಚಿಸಿ, ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡುತ್ತೇನೆ. ಅಲ್ಲದೇ ಅವರ ಗೊಂದಲ ಏನೆಂಬುದು ಸರಿಯಾಗಿ ನನಗೆ ಗೊತ್ತಿಲ್ಲ. ಅವರ ಜೊತೆ ಮಾತನಾಡಿ ಎಲ್ಲಾ ಬಗೆಹರಿಸುತ್ತೇನೆ. ರಮೇಶ್ ಜಾರಕಿಹೊಳಿಯವರು ಮೊದಲಿನಿಂದಲೂ ಕಾಂಗ್ರೆಸ್ಸಿನಲ್ಲಿಯೇ ಇದ್ದವರು, ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಎಂದು ಹೇಳಿದರು.

    ಬೆಳಗಾವಿಯ ಸಮಸ್ಯೆಯನ್ನು ಮಾಧ್ಯಮಗಳು ವೈಭವಿಕರಿಸಿ ಸೃಷ್ಟಿಸುತ್ತಿವೆ. ಬಿಜೆಪಿಯವರು ಸರ್ಕಾರ ರಚಿಸುವ ಹಗಲು ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv