Tag: complaints

  • RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು

    RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್: ಪೊಲೀಸ್ ಆಯುಕ್ತರಿಗೆ ದೂರು

    ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಫ್ಯಾನ್ಸ್ ವಾರ್ ಶುರುವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಅತ್ಯಂತ ಕೀಳುಮಟ್ಟಕ್ಕೆ ಹೋಗಿ ಅಭಿಮಾನದ ಪರಕಾಷ್ಟೇ ಮೆರೆಯುವಂತೆ ಕೆಲಸ ಆಗಿದೆ. ಆರ್.ಸಿ.ಬಿ ಸೋಲಿಗೆ ದೊಡ್ಮನೆ ಸೊಸೆಯನ್ನು ಟಾರ್ಗೆಟ್ ಮಾಡಿರುವ ಕೆಲವರು, ಪುನೀತ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneet Rajkumar) ಅವರನ್ನ ನಿಂದಿಸಿದ್ದಾರೆ ಕೆಲ ಕಿಡಿಗೇಡಿಗಳು.

    ಗಜಪಡೆ (Gajapade) ಹೆಸರಿನ ಪೇಜ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಕೆಟ್ಟದಾಗಿ ನಿಂದನೆ ಮಾಡಲಾಗಿದ್ದು, ನಟ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದೆ ಈ ‘ಗಜಪಡೆ’ ಖಾತೆ. ಅಭಿಮಾನದ ನೆಪದಲ್ಲಿ ಹೆಣ್ಣಿನ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದರಂತೆ ಅನೇಕರು ಈ ಗಜಪಡೆ ಖಾತೆಯನ್ನು ನಿರ್ವಹಿಸುತ್ತಿರುವವರ ಬಗ್ಗೆ ಗರಂ ಆಗಿದ್ದಾರೆ.

    ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಬರೆದ ಕೀಳು ಮಟ್ಟದ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪೊಲೀಸ್ ಕಮಿಷ್ನರ್ (Commissioner) ಭೇಟಿ ಮಾಡಿ ಈಗಾಗಲೇ ದೂರು (Complaints) ಕೂಡ ನೀಡಲಾಗಿದೆ.

    ಸಾಕಷ್ಟು ಬಾರಿ ಈ ಫ್ಯಾನ್ಸ್ ವಾರ್ ಕನ್ನಡದಲ್ಲಿ ನಡೆದಿದೆ. ಅದಕ್ಕೆ ಫುಲ್ ಸ್ಟಾಪ್ ಹಾಕುವಂತೆ ಸ್ವತಃ ದರ್ಶನ್ ಅವರೇ ಈ ಹಿಂದೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ತಮ್ಮ ಅಭಿಮಾನಿಗಳು ಯಾವುದೇ ಕಾರಣಕ್ಕೂ ಬೇರೆಯ ನಟರ ಅಥವಾ ಅಭಿಮಾನಿಗಳನ್ನು ನಿಂದಿಸಬಾರದು ಎಂದು ಮನವಿ ಮಾಡಿದ್ದರು. ಆದರೂ, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಲೇ ಇವೆ.

  • ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲು

    ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲು

    ಬೆಂಗಳೂರು: ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪದ ಮೇರೆಗೆ ಬಿಗ್‍ಬಾಸ್ ವಿನ್ನರ್, ರ‍್ಯಾಪರ್ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.

    ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. ಬಜರಂಗದಳ ಮುಖಂಡ ತೇಜಸ್ ಗೌಡ ಅವರು ಚಂದನ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಎನ್‍ಸಿಆರ್(ಗಂಭೀರವಲ್ಲದ ಪ್ರಕರಣ) ದಾಖಲು ಮಾಡಿದ್ದಾರೆ. ಇದನ್ನೂ ಓದಿ: ಚಂದನ್ ಶೆಟ್ಟಿಗೆ ಬ್ಯಾನ್ ವಾರ್ನಿಂಗ್ ಕೊಟ್ಟ ಎಸ್ಪಿ

    ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ರೀತಿಯಲ್ಲಿ ಜಾನಪದ ಗೀತೆಯನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ ವಿರುದ್ಧ ಕ್ರಮಕೈಗೊಳ್ಳುವಂತೆ ತೇಜಸ್ ಗೌಡ ದೂರು ನೀಡಿದ್ದಾರೆ.

    ಏನಿದು ಪ್ರಕರಣ?
    ಗಣೇಶ ಹಬ್ಬಕ್ಕೆ ‘ಕೋಲು ಮಂಡೆ ಜಂಗಮ ದೇವರು’ ಎಂಬ ಹೊಸ ರ‍್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದರು. ಆದರೆ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ವಿರುದ್ಧ ಕೇಳಿಬಂದಿದೆ. ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

    ಈ ಸಂಬಂಧ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ಚಂದನ್, ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಈ ಹಾಡನ್ನು ಮಾಡಿಲ್ಲ. ಈಗಿನ ಪೀಳಿಗೆಗೆ ನಮ್ಮ ಜಾನಪದ ತಲುಪಲಿ ಅನ್ನೋ ಕಾರಣಕ್ಕೆ ರ್ಯಾಪ್ ಹಾಡಿನ ರೂಪ ಕೊಟ್ಟಿದ್ದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು. ನಂತರ ಚಂದನ್ ಶೆಟ್ಟಿ ವಿಡಿಯೋವನ್ನು ಯೂಟ್ಯೂಬ್ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

  • ಸಚಿವ, ಶಾಸಕರಿಂದಲೇ ಲಾಕ್‍ಡೌನ್ ನಿಯಮ ಉಲ್ಲಂಘನೆ – ರೈತ ಸಂಘದಿಂದ ದೂರು

    ಸಚಿವ, ಶಾಸಕರಿಂದಲೇ ಲಾಕ್‍ಡೌನ್ ನಿಯಮ ಉಲ್ಲಂಘನೆ – ರೈತ ಸಂಘದಿಂದ ದೂರು

    ಚಾಮರಾಜನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಇದೀಗ ಜಿಲ್ಲೆಯಲ್ಲಿ ಸಚಿವ ಮತ್ತು ಶಾಸಕರು ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮತ್ತು ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಇಬ್ಬರು ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ರೈತ ಸಂಘದಿಂದ ಎಸ್‍ಪಿಗೆ ಇವರ ವಿರುದ್ಧ ದೂರು ನೀಡಿದ್ದಾರೆ.

    ದೂರಿನಲ್ಲಿ ಏನಿದೆ?
    ನೂರಾರು ಬೆಂಬಲಿಗರೊಂದಿಗೆ ಬಡಜನರು ನೆಲೆಸಿರುವ ಕಡೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡುವ ನೆಪದಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ರಾಜಕೀಯ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ 144 ಸೆಕ್ಷನ್ ಮತ್ತು ಲಾಕ್‍ಡೌನ್ ಉಲ್ಲಂಘನೆ ಮಾಡಿ, ಮಾಸ್ಕ್ ಇನ್ನಿತರ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಅನುಸರಿಸದೆ ನಿರ್ಲಕ್ಷದಿಂದ ಕೊರೊನಾ ಸೋಂಕು ಹರಡಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಷ್ಟೇ ಅಲ್ಲದೇ ಇಂತಹ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳತ್ತಿರುವ ನಿರಂಜನ್ ಕುಮಾರ್ ಮತ್ತು ಸುರೇಶ್ ಕುಮಾರ್ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಚಾಮರಾಜನಗರ ಜಿಲ್ಲಾ ರೈತ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮನವಿ ಮಾಡಿಕೊಂಡಿದ್ದಾರೆ.

  • ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ

    ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಕ್ಕೆ ಕಿಡ್ನ್ಯಾಪ್ ಮಾಡಿ ಹಲ್ಲೆ

    ಕಲಬುರಗಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ತಾರಕಕ್ಕೆ ಏರಿದ್ದು, ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಪರ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ಕಲಬುರಗಿಯ ರೋಜಾ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಕುಡಾ ಮಾಜಿ ಅಧ್ಯಕ್ಷ ಅಜಗರ್ ಚುಲ್ಬುಲ್ ನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನಿಜ್ ಫಾತಿಮಾ ಸೇರಿ ಹಲವರ ವಿರುದ್ಧ ದೂರು ದಾಖಲಾಗಿದೆ.

    ಚುಲ್ಬುಲ್ ಶಾಸಕಿಯ ನಿರ್ಧಾರದ ವಿರುದ್ಧ ಬಿಜೆಪಿ ಪರ ಕೆಲಸ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಶಾಸಕಿ ಅವರ ಬೆಂಬಲಿಗರು ಶನಿವಾರ ತಡರಾತ್ರಿ ಚುಲ್ಬುಲ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ವೇಳೆ ಮನೆಯಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದೆ. ಅಷ್ಟೇ ಅಲ್ಲದೇ ದುಷ್ಕರ್ಮಿಗಳು ಮನೆಯ ಮುಂಭಾಗದ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂ ಮಾಡಿದ್ದಾರೆ.

    ಈ ಕುರಿತು ಶಾಸಕಿ ಖನಿಜ್ ಫಾತಿಮಾ ಸೇರಿದಂತೆ ಬೆಂಬಲಿಗರ ವಿರುದ್ಧ ರೋಜಾ ಪೊಲೀಸ್ ಠಾಣೆಗೆ ಚುಲ್ಬುಲ್ ದೂರು ನೀಡಿದ್ದಾರೆ.

  • ಮನೆಯಲ್ಲಿದ್ದ ಕಾರು, 13 ಲಕ್ಷ ರೂ. ಕದ್ದಿದ್ದಕ್ಕೆ ಮಗನ ಮೇಲೆ ಹೆತ್ತವರಿಂದ ದೂರು

    ಮನೆಯಲ್ಲಿದ್ದ ಕಾರು, 13 ಲಕ್ಷ ರೂ. ಕದ್ದಿದ್ದಕ್ಕೆ ಮಗನ ಮೇಲೆ ಹೆತ್ತವರಿಂದ ದೂರು

    ನವದೆಹಲಿ: ಮನೆಯಿಂದಲೇ ಕಾರು ಹಾಗೂ ಲಕ್ಷಾಂತರ ರೂ. ಕದ್ದು ಪರಾರಿಯಾಗಿದ್ದಾನೆ ಅಂತ ಸ್ವಂತ ಮಗನ ವಿರುದ್ಧ ದೆಹಲಿಯ ಪೋಷಕರು ದೂರು ನೀಡಿದ್ದಾರೆ.

    18 ವರ್ಷದ ಯುವಕನೊಬ್ಬ ಗೆಳೆಯನಿಗಾಗಿ ಮನೆಯಲ್ಲಿದ್ದ 50 ಸಾವಿರ ರೂ. ಹಣವನ್ನು ಕದ್ದಿದ್ದಾನೆ. ಅಷ್ಟೇ ಅಲ್ಲದೆ ತಾಯಿಯ ಬ್ಯಾಂಕ್ ಖಾತೆಯಿಂದ ಸುಮಾರು 13 ಲಕ್ಷ ರೂ. ಜೊತೆಗೆ ತಂದೆಯ ಕಾರನ್ನು ಕದ್ದು ಪರಾರಿಯಾಗಿದ್ದಾನೆ. ಹಣವನ್ನು ಬಳಸಿಕೊಂಡು ಕೆಟ್ಟ ಚಟಕ್ಕೆ ಬಿದ್ದು ಮಗ ಹಾಳಾಗುತ್ತಿದ್ದಾನೆ. ಕೆಟ್ಟ ಕೆಲಸಕ್ಕೆ ಕಾರು ಹಾಗೂ ದುಡ್ಡನ್ನು ಬಳಸಿಕೊಳ್ಳುತ್ತಿದ್ದಾನೆ ಎಂದು ಡಿ. 19 ರಂದು ಮಗನ ವಿರುದ್ಧವೇ ಹೆತ್ತವರು ಕಳ್ಳತನದ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ಮನೆಯಿಂದ ಹಣವನ್ನು ಕದ್ದು, ಅದರಿಂದ ಮಗ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದಾನೆ ಅಂತ ಅನುಮಾನವಿದೆ ಎಂದು ಪೋಷಕರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಯುವಕನ ಪ್ರೇಯಸಿಯನ್ನು ವಿಚಾರಿಸಿದರೂ ಆತನ ಬಗ್ಗೆ ಯಾವುದೇ ಸುಳಿವು ದೊರಕಿರಲಿಲ್ಲ.

    ಮಂಗಳವಾರ ಯುವಕ ಪೋಷಕರಿಗೆ ಕರೆ ಮಾಡಿ ನನ್ನನ್ನು ಹುಡುಕಬೇಡಿ. ನಾನು ಮತ್ತೆ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾನೆ. ಸದ್ಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಯುವಕನ ಫೋನ್ ಟ್ರಾಕ್ ಮಾಡಿದಾಗ ಜೈಪುರ ಲೋಕೆಶನ್ ಸಿಕ್ಕಿದೆ. ಆದರೆ ಫೋನ್ ಸ್ವಿಚ್ ಆಫ್ ಆಗಿದೆ ಎಂದು ದೆಹಲಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಲೋಕ್ ಕುಮಾರ್ ಎಚ್ಚರಿಕೆಗೂ ಡೋಂಟ್ ಕೇರ್ – ನಡುರಸ್ತೆಯಲ್ಲಿ ಲಾಂಗ್ ಹಿಡಿದು ಪುಡಿ ರೌಡಿ ಅವಾಜ್

    ಅಲೋಕ್ ಕುಮಾರ್ ಎಚ್ಚರಿಕೆಗೂ ಡೋಂಟ್ ಕೇರ್ – ನಡುರಸ್ತೆಯಲ್ಲಿ ಲಾಂಗ್ ಹಿಡಿದು ಪುಡಿ ರೌಡಿ ಅವಾಜ್

    ಬೆಂಗಳೂರು: ನಗರದಲ್ಲಿ ರೌಡಿಗಳನ್ನು ಮಟ್ಟ ಹಾಕಲು ಐಜಿಪಿ ಅಲೋಕ್ ಕುಮಾರ್ ಅವರು ಖಡಕ್ ನಿರ್ಣಯ ಕೈಗೊಂಡು ವಾರ್ನಿಂಗ್ ನೀಡಿದ ಬಳಿಕವೂ ಪುಡಿ ರೌಡಿಯೊಬ್ಬ ನಡುರಸ್ತೆಯಲ್ಲಿ ಲಾಂಗ್ ಹಿಡಿದು ಅವಾಜ್ ಹಾಕಿರುವ ಘಟನೆ ನಗರದ ತಲಗಟ್ಟಪುರದಲ್ಲಿ ನಡೆದಿದೆ.

    ಇಲ್ಲಿನ ಪುಡಿ ರೌಡಿ ಡೋಬಿ ಕಿರಣ ಲಾಂಗ್ ಹಿಡಿದು ಅವಾಜ್ ಹಾಕಿದ್ದು, ಇತನೊಂದಿಗೆ ರೌಡಿ ಶೀಟರ್ ಗಡವ ನಾಗ ಕೂಡ ಸಾಥ್ ನೀಡಿದ್ದಾನೆ. ಈ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿದೆ.

    ದೃಶ್ಯಗಳಲ್ಲಿ ರೌಡಿ ಕಿರಣ್, ನವೀನ್ ಎಂಬಾತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ನವೀನ್ ಹಾಗೂ ಅವರ ತಂದೆ ಇಬ್ಬರನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಮನೆ ಮುಂದೇ ನಿಂತು ಹೊರಗೆ ಬಾ ನಿನ್ನನ್ನು ಬಿಡಲ್ಲ ಎಂದು ಹೇಳಿ ರಾಂಪಾಟ ನಡೆಸಿದ್ದಾನೆ. ಇದೇ ಶನಿವಾರ ರಾತ್ರಿ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ವೈರಲ್ ಆಗುತ್ತಿದಂತೆ ಪೊಲೀಸರ ಗಮನಕ್ಕೆ ಬಂದಿದೆ.

    ವಿಡಿಯೋದಲ್ಲಿ ಸೆರೆಯಾಗಿರುವ ಘಟನೆ ನಮ್ಮ ಗಮನಕ್ಕೆ ಬಂದಿದೆ. ಅವಾಜ್ ಹಾಕಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕುಡಿದ ಅಮಲಿನಲ್ಲಿ ಘಟನೆ ನಡೆದಿದ್ದು, ಅಕ್ಕಪಕ್ಕನ ಮನೆಯ ನಡುವಿನ ಗಲಾಟೆಯ ವೇಳೆ ಈ ರೀತಿ ವರ್ತಿಸಲಾಗಿದೆ. ಆದರ ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸತತ ಮಳೆಯಿಂದ ಕಂಗೆಟ್ಟ ಮಲೆನಾಡಿನ ಜನತೆಗೆ ಭೂಕಂಪದ ಆತಂಕ!

    ಸತತ ಮಳೆಯಿಂದ ಕಂಗೆಟ್ಟ ಮಲೆನಾಡಿನ ಜನತೆಗೆ ಭೂಕಂಪದ ಆತಂಕ!

    ಚಿಕ್ಕಮಗಳೂರು: ಕಳೆದ ಎರಡು ತಿಂಗಳಿನಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಂಗೆಟ್ಟಿದ್ದ ಜನರಲ್ಲಿ ಸದ್ಯ ಭೂಕಂಪದ ಭಯ ಆವರಿಸಿದೆ.

    ಸತತವಾಗಿ ಕಳೆದ ಎರಡು ತಿಂಗಳಿನಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಈ ಭಾಗದಲ್ಲಿ ಭೂಮಿ ಒಳಗಿನಿಂದ ವಿಚಿತ್ರ ಶಬ್ಧಗಳು ಕೇಳಿ ಬರುತ್ತಿದೆ. ಭಾರೀ ಪ್ರಮಾಣದಲ್ಲಿ ಕೇಳಿಬರುತ್ತಿರುವ ಶಬ್ಧದಿಂದ  ಜನರು ಆತಂಕಕ್ಕೀಡಾಗಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಸಮೀಪದ ಮೇಗುಂದಾ ಹೋಬಳಿಯ ಅತ್ತಿಕುಡಿಗೆ, ಬೈರೇದೇವರು, ಬೆತ್ತದಕೊಳಲು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದ ಭೂಮಿಯಲ್ಲಿ ಹಲವು ತಿಂಗಳಿಂದ ವಿಚಿತ್ರವಾದ ಶಬ್ಧ ಕೇಳಿ ಬರುತ್ತಿದೆ. ಇಂದು ಬೆಳಗ್ಗೆ ಕೂಡ 9.40ರ ಸುಮಾರಿಗೆ ಭಾರೀ ಶಬ್ಧವಾಗಿದ್ದು, ಜನ ಆತಂಕದಲ್ಲಿ ಮನೆಯಿಂದ ಹೊರಬಂದಿದ್ದಾರೆ. ಅಲ್ಲದೇ ಭೂಮಿ ಕಂಪಿಸಿದ ಅನುಭವವದೊಂದಿಗೆ ಮನೆಯ ಪಾತ್ರೆಗಳು ಕೂಡ ಕೆಳಗೆ ಬಿದ್ದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಭಾರೀ ಪ್ರಮಾಣದ ಶಬ್ಧದಿಂದ ಆತಂಕಕ್ಕೀಡಾಗಿರುವ ಗ್ರಾಮಸ್ಥರು ಈ ಬಗ್ಗೆ ತಾಲೂಕು ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಗ್ರಾಮಸ್ಥರ ದೂರಿನ ಅನ್ವಯ ಪೊಲೀಸರು ಹಾಗೂ ತಾಲೂಕು ಅಧಿಕಾರಿಗಳು ಈಗಾಗಲೇ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಶಬ್ಧಕ್ಕೆ ಕಾರಣ ತಿಳಿದುಬಂದಿಲ್ಲ.

    ಸದ್ಯ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿರುವ ಗ್ರಾಮಸ್ಥರು ವಿಪತ್ತು ನಿರ್ವಹಣಾ ಇಲಾಖೆಯಿಂದ ಪರಿವೀಕ್ಷಣೆ ನಡೆಸಿ ಈ ಅಸಹಜ ಕ್ರಿಯೆಗೆ ಕಾರಣ ತಿಳಿಸಿ ಜನರ ಆತಂಕವನ್ನು ದೂರ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 425 ರೂ. ಬೆಲೆಯ ಚಪ್ಪಲಿ ಕಳುವಾಗಿದ್ದಕ್ಕೆ ದೂರು!

    425 ರೂ. ಬೆಲೆಯ ಚಪ್ಪಲಿ ಕಳುವಾಗಿದ್ದಕ್ಕೆ ದೂರು!

    ಪುಣೆ: ವ್ಯಕ್ತಿ ಕಾಣೆಯಾಗಿದ್ದಾರೆ, ಚಿನ್ನಾಭರಣ ದೋಚಿದ್ದಾರೆ, ವಾಹನ ಕಳವಾಗಿದೆ, ಹಣ ಕದ್ದಿದ್ದಾರೆ ಎಂಬಂತಹ ಹಲವಾರು ನಾಪತ್ತೆಯಾಗಿರುವ ದೂರುಗಳನ್ನು ಕೇಳಿದ್ದೇವೆ, ಆದರೆ ಪುಣೆಯಲ್ಲಿ ವ್ಯಕ್ತಿಯೊಬ್ಬರು ಚಪ್ಪಲಿ ನಾಪತ್ತೆಯಾಗಿವೆ ಎಂದು ದೂರನ್ನು ದಾಖಲಿಸಿದ್ದಾರೆ.

    ಖಿಡ್ನಿ ತಕಲ್ಕರವಾಡಿ ರಸ್ತೆಯ ಪಾಲಾಶ್ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನ 3 ನೇ ಮಹಡಿಯಲ್ಲಿ ವಾಸವಾಗಿರುವ ವಿಶಾಲ್ ಕಲೇಕರ್(36) ಎಂಬುವರು ತಮ್ಮ ಚಪ್ಪಲಿಗಳನ್ನು ಯಾರೋ ಕದ್ದಿದ್ದಾರೆಂದು ಪುಣೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

    ನಾನು 425 ರೂಪಾಯಿ ನೀಡಿ ಹೊಸ ಕಪ್ಪು ಬಣ್ಣದ ಸ್ಯಾಂಡಲ್ ಗಳನ್ನು ಖರೀದಿಸಿದ್ದೆ. ಅವುಗಳನ್ನು ಮನೆಯ ಹೊರಗಡೆ ಬಿಟ್ಟಿರುವಾಗ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಚಪ್ಪಲಿಯನ್ನು, ಅಕ್ಟೋಬರ್ 3 ರಂದು ಮುಂಜಾನೆ ಸುಮಾರು 3 ರಿಂದ 8 ಗಂಟೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೂರಿದ್ದಾರೆ.

    ಕಲೇಕಾರ್ ಅವರು ನೀಡಿದ ದೂರನ್ನು ಪೊಲೀಸರು ಐಪಿಸಿ ಸೆಕ್ಷನ್ 379(ಸಂಪತ್ತು ಕಳವು) ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕಲೇಕಾರ್ ಗುರುತಿಸಿದ ಅಥವಾ ಅನುಮಾನಿಸಿದ ವ್ಯಕ್ತಿಗಳನ್ನು ವಿಚಾರಿಸಲಾಗಿದ್ದು ಆದರೆ ಯಾರನ್ನು ಬಂಧಿಸಿಲ್ಲ, ಯಾರು ಕದ್ದಿದ್ದಾರೆಂದು ಇದುವರೆಗೂ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ಅಧಿಕಾರಿ ನಾಯ್ಕ್ ಎಸ್‍ಎಂ ಧೋಳೆಯವರು ಈ ತನಿಖೆಯನ್ನು ನಡೆಸುತ್ತಿದ್ದಾರೆ.