ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಾಂತೀಯ ವಿಧಾನಸಭೆ ಚುನಾವಣೆ ಇದೇ ತಿಂಗಳ 15ರಂದು ನಡೆಯಲಿದ್ದು, ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಸ್ಪರ್ಧೆ ಮಾಡುತ್ತಿದ್ದಾರೆ.
ಸಿಂಧ್ ಪ್ರಾಂತ್ಯಕ್ಕೆ ಸೇರಿರುವ ಸುನೀತಾ ಪರ್ಮಾರ್ (31) ಅಲ್ಪಸಂಖ್ಯಾತ ಸಮುದಾಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮೂಲತಃ ಮೇಘರ್ ಸಮುದಾಯಕ್ಕೆ ಸೇರಿರುವ ಸುನಿತಾ ಅವರು, ಹೆಚ್ಚು ಹಿಂದೂ ಸಮುದಾಯದ ಜನಸಂಖ್ಯೆ ಹೊಂದಿರುವ ಥಾರ್ಪಾರ್ಕರ್ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ.
ಈ ಕುರಿತು ಸುನಿತಾ ಅವರು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ಕ್ಷೇತ್ರ ಜನರ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಈ ಹಿಂದಿನ ಸರ್ಕಾರಗಳು ವಿಫಲವಾಗಿದೆ. ಆದ್ದರಿಂದ ಜನರು ಉತ್ತಮ ಜೀವನ ನಡೆಸುವಂತೆ ಮಾಡಲು ಹಾಗೂ ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದಾಗಿ ವರದಿಯಾಗಿದೆ.
ಕಳೆದ ಮಾರ್ಚ್ ನಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮೂಲಕ ಹಿಂದೂ ದಲಿತ ಮಹಿಳೆ ಕೃಷ್ಣ ಕುಮಾರಿ ಎಂಬವರು ಮೊದಲ ಸೆನೆಟರ್ ಆಗಿ ಆಯ್ಕೆ ಆಗಿದ್ದರು.
ಮಂಡ್ಯ: ಸಕ್ಕರೆ ನಾಡಿನ ಗ್ರಾಮೀಣ ಸೊಗಡಿನ ಜನ ರಾಗಿ ಮುದ್ದೆಯನ್ನು ನುಂಗುವುದನ್ನು ಕ್ರೀಡೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಅದ್ದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಭಾನುವಾರ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜನತಾ ಟಾಕೀಸ್ ಮತ್ತು ನಮ್ಮ ಹೈಕ್ಳು ತಂಡ ನೆಲದನಿ ಬಳಗ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಾಟಿ ಕೋಳಿ ಸಾಂಬಾರ್ ನಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆ ಯಾವ ಕ್ರೀಡೆಗೂ ಕಡಿಮೆ ಇಲ್ಲದಂತೆ ನಡೆಯಿತು.
ಮಂಗಲ ಗ್ರಾಮದ ಶ್ರೀ ಮಾರಮ್ಮನ ದೇವಾಲಯದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ 62 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಅತಿ ಹೆಚ್ಚು ಮುದ್ದೆ ತಿಂದವರು ವಿಜಯಶಾಲಿಗಳು ಎಂದು ತೀರ್ಪುಗಾರರು ಸಮಯ ನಿಗದಿಪಡಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಹೀರೇಗೌಡ ಅರ್ಧ ಕೆ.ಜಿ. ತೂಕದ ಆರೂವರೆ ಮುದ್ದೆ ತಿನ್ನುವ ಮೂಲಕ ಸ್ಪರ್ಧೆಯಲ್ಲಿ ಜಯಗಳಿಸಿದರು.
ಸ್ಪರ್ಧೆಯಲ್ಲಿ ಜಯ ಪಡೆದ ಹೀರೇಗೌಡ ಅವರಿಗೆ ಐದು ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಅಂದಹಾಗೇ ಪ್ರಥಮ ಬಹುಮಾನ ಪಡೆದ ಹೀರೇಗೌಡ ಅವರು ರಾಗಿ ಮುದ್ದೆ ನುಂಗುವ ಸ್ಪರ್ಧೆಯಲ್ಲಿ 9 ಬಾರಿ ಪ್ರಥಮ ಬಹುಮಾನ ಪಡೆದಿದ್ದಾರೆ. ಈ ಸ್ಪರ್ಧೆಗೆ ಸೂನಗನಹಳ್ಳಿ ರಾಜು ನಿರ್ದೇಶನದ ಆನೆಬಾಲ ಸಿನಿಮಾ ತಂಡವು ಸಹ ಈ ಸಹಯೋಗ ನೀಡಿದ್ದು, ಆ ಸಿನಿಮಾದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನಟನೆಗೆ ಅವಕಾಶ ಸಹ ಕೊಡಲಾಗುವುದು ಹೇಳಲಾಗಿತ್ತು. ಅದರಂತೆ ಮೊದಲ ಬಹುಮಾನ ವಿಜೇತ ಹೀರೇಗೌಡ ಆನೆಬಾಲ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.
ಇನ್ನು ಸ್ಪರ್ಧೆಯಲ್ಲಿ ಸುರೇಶ್ ಎಂಬವರು ಐದೂವರೆ ಮುದ್ದೆ ತಿಂದು ಮೂರು ಸಾವಿರ ರೂ. ನಗದು ಬಹುಮಾನ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು. ನಾಲ್ಕೂವರೆ ಮುದ್ದೆ ತಿಂದ ರಾಮಮೂರ್ತಿ ಎರಡು ಸಾವಿರ ರೂ. ನಗದು ಬಹುಮಾನ ಪಡೆದು ತೃತೀಯ ಬಹುಮಾನ ಪಡೆದಿದ್ದಾರೆ. ಈ ಮೂವರು ಸೇರಿದಂತೆ ಹೆಚ್ಚು ಮುದ್ದೆ ತಿಂದ ಇನ್ನು ನಾಲ್ಕು ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಈ ವೇಳೆ ಮಾತನಾಡಿದ ಸ್ಪರ್ಧೆ ಆಯೋಜಕರಾದ ಮಂಗಲ ಲಂಕೇಶ್, ಗ್ರಾಮೀಣ ಸೊಗಡಿನ ಕ್ರೀಡೆಗಳ ಪೈಕಿ ರಾಗಿ ಮುದ್ದೆ ತಿನ್ನುವುದು ಸಹ ಒಂದು ಕ್ರೀಡೆಯಾಗಿದ್ದು, ಇಂತಹ ಗ್ರಾಮೀಣ ಸೊಗಡಿನ ರಾಗಿ ಮುದ್ದೆ ನುಂಗುವ ಸ್ಪರ್ಧೆಯನ್ನು ಮತ್ತೆ ಮತ್ತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ ತಮ್ಮ ನೆಚ್ಚಿನ ರಾಗಿ ಮುದ್ದೆ ಸವಿಯಲು ಬೆಂಗಳೂರಿನಿಂದ ರಾಜಧಾನಿ ದೆಹಲಿಗೆ ಬಾಣಸಿಗರನ್ನು ಕರೆದು ಕೊಂಡು ಹೋಗಿದ್ದರು.
ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಶಾಸಕ ತಿಪ್ಪೇಸ್ವಾಮಿ ಅವರು ಸಂಸದ ಶ್ರೀರಾಮುಲು ಅವರ ಸವಾಲಿಗೆ ಪ್ರತಿ ಸವಾಲು ಎಸೆದಿದ್ದಾರೆ.
ತನ್ನ ವಿರುದ್ಧ ಚುನಾವಣೆಯಲ್ಲಿ ನಿಂತು ಸ್ಪರ್ಧೆ ಮಾಡಿ ಗೆದ್ದು ತೋರಿಸಿ ಎಂಬ ಶ್ರೀ ರಾಮುಲು ಅವರ ಸವಾಲನ್ನು ಸ್ವೀಕರಿಸಿ ಮಾತನಾಡಿದ ಶಾಸಕ ತಿಪ್ಪೇಸ್ವಾಮಿ, ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನೀನು ಗಂಡಸಾಗಿದ್ರೆ. ನಾಯಕನೇ ಆಗಿದ್ರೆ. ಇಲ್ಲಿ ಗೆದ್ದು ತೋರಿಸು ನಿಮ್ಮಂತವರಿಗೆ ಇಲ್ಲಿನ ಜನರು ಹೆದರುವುದಿಲ್ಲ. ಇದು ಮದಕರಿನಾಯಕ ಕಟ್ಟಿದ ಜಿಲ್ಲೆ ಎಂದು ಕಟು ಶಬ್ಧಗಳಲ್ಲಿ ಪ್ರತಿ ಸವಾಲು ಹಾಕಿದರು.
ಮೊಳಕಾಲ್ಮೂರು ಕ್ಷೇತ್ರದ ಸ್ವ-ಗ್ರಾಮದಲ್ಲಿ ಬೆಂಬಲಿಗರ ಸಭೆ ಬಳಿಕ ಮಾತನಾಡಿದ ತಿಪ್ಪೇಸ್ವಾಮಿ, ಶತಾಯಗತಾಯ ಶ್ರೀರಾಮುಲು ಅವರಿಗೆ ಈ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸುತ್ತೇನೆ. ಪಕ್ಷದಲ್ಲಿ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ನಾನು ಯಾವ ಪಕ್ಷದವರನ್ನೂ ಟಿಕೆಟ್ ಗಾಗಿ ಸಂಪರ್ಕಿಸಿಲ್ಲ ಎಂದರು.
ಬಳ್ಳಾರಿಯಲ್ಲಿ ಸೋಲಿನ ಭೀತಿಯಿಂದ ಶ್ರೀರಾಮುಲು ವರು ಚಿತ್ರದುರ್ಗಕ್ಕೆ ಬಂದಿದ್ದಾರೆ. ಅಲ್ಲದೇ ತನಗೆ ಟಿಕೆಟ್ ನೀಡುವ ಭರವಸೆ ನೀಡಿ ಮೋಸ ಮಾಡಿದ್ದಾರೆ. ಬಿಜೆಪಿ ಮೋಸ ಮಾಡಿದ ಪಕ್ಷ, ಬಿಜೆಪಿಗೆ ಮತ ಹಾಕಬೇಡಿ. ಅಲ್ಲದೇ ನಾಗೇಂದ್ರ, ಆನಂದ್ ಸಿಂಗ್ ಅವರೆಲ್ಲ ಶ್ರೀರಾಮುಲು ಅವರನ್ನು ಯಾಕೆ ಬಿಟ್ಟು ಹೋದರು ನನಗೆ ತಿಳಿದಿದೆ. ಆದರೆ ಅವರು ಇಲ್ಲಿನ ಕೆಲ ಸ್ಥಳೀಯರ ಮಾತು ಕೇಳಿದ್ದಾರೆ. ಅಂಥವರ ಮಾತಿನಿಂದ ಎಲ್ಲರೂ ಹಾಳಾಗಬೇಕಾಗುತ್ತದೆ. ಪದೇ ಪದೇ ಸೋಲು ಖಚಿತ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ರಾಮುಲು ಅವರು ಹೇಳುತ್ತಾರೆ ಆದ್ರೆ ಅವರದ್ದು, ಮಾತು ಕೊಟ್ಟು ಮೋಸ ಮಾಡಿದ ರಕ್ತ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಕ್ಷೇತ್ರದ ಜನತೆ ನನ್ನೊಂದಿಗೆ ಇದ್ದಾರೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಎಲ್ಲಾ ಸಮುದಾಯದವರೂ ನನ್ನ ಜೊತೆಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನನ್ನ ಕುಟುಂಬಕ್ಕೆ ಅನ್ಯಾಯ ಮಾಡಿದೆ ಎಂದು ತಮ್ಮ ಸಹೋದರನ ಹೆಸರು ಹೇಳದೆ ಶ್ರೀರಾಮುಲು ವಿರುದ್ಧ ಕೆಂಡಾಮಂಡಲರಾದ್ರು. ಇದನ್ನೂ ಓದಿ: ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು
ರಾಮನಗರ: ರಾಜ್ಯ ಚುನಾವಣಾ ದಿನಕಳೆದಂತೆ ರಂಗೇರುತ್ತಿದೆ. ಸಿಎಂ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರ, ಸಿಎಂ ಪುತ್ರ ಯತೀಂದ್ರ ಸ್ಪರ್ಧಿಸಲಿರುವ ವರುಣಾ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಪಟ್ಟಿಗೆ ಚನ್ನಪಟ್ಟಣ ಕ್ಷೇತ್ರ ಸೇರ್ಪಡೆಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ.
ರಾಮನಗರದ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ವೈರಿ ಸಿಪಿ ಯೋಗೇಶ್ವರ್ ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಸ್ವತಃ ತಾವೇ ಕಣಕ್ಕಿಳಿಯೋದಾಗಿ ಚನ್ನಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಘೋಷಿಸಿದ್ದಾರೆ.
ಯೋಗೇಶ್ವರ್ ಕ್ಷೇತ್ರದಲ್ಲೇ ವಿಕಾಸಪರ್ವ ಸಮಾವೇಶ ನಡೆಸಿದ ಜೆಡಿಎಸ್, ತನ್ನ ಬಲ ಏನು ಅನ್ನೋದನ್ನು ಪ್ರದರ್ಶಿಸಿತು. ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ನಮಗೆ ರಾಮನಗರ- ಚನ್ನಪಟ್ಟಣ ಎರಡೂ ಕಣ್ಣಿದ್ದಂತೆ. ಹೀಗಾಗಿ ಎಚ್‍ಡಿಕೆ ಎರಡೂ ಕಡೆ ನಿಲ್ಲುವ ನಿರ್ಣಯ ಮಾಡಿದ್ದಾರೆ. ನಿಮ್ಮೆಲ್ಲರ ಒತ್ತಡಕ್ಕೆ ತಲೆಬಾಗಿ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಎಚ್‍ಡಿಡಿಗೆ ಬೆಂಬಲ ಇಲ್ಲ ಎಂದು ದುರಹಂಕಾರದಲ್ಲಿ ಮಾತನಾಡಿದ್ದಾರೆ ಎಂದು ಯೋಗೇಶ್ವರ್‍ರನ್ನು ಟೀಕಿಸಿದರು. 2013ರ ಚುನಾವಣೆಯಲ್ಲಿ ಜೆಡಿಎಸ್ ಸೋತಿದ್ದು ನಿಮ್ಮಿಂದಾದ ತಪ್ಪಲ್ಲ. ಚುನಾವಣೆಯಲ್ಲಿ ಅತ್ಯಂತ ವಿಶ್ವಾಸಿಗಳಾಗಿದ್ದವರು ಹೇಗೆ ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ ಅಂತಾ ಹಿಂದಿನದ್ದನ್ನು ಕೆದಕಿದರು. ಚನ್ನಪಟ್ಟಣದ ಜನ ನೀರಲ್ಲಾದ್ರೂ ಹಾಕಿ. ಹಾಲಲ್ಲಾದ್ರೂ ಹಾಕಿ. ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ:
* ಒಟ್ಟು ಮತದಾರರ ಸಂಖ್ಯೆ – 2,15,214
* ಒಕ್ಕಲಿಗರ ಸಂಖ್ಯೆ – 1,05,928
* ಎಸ್ಸಿ/ಎಸ್ಟಿ ಮತದಾರರ ಸಂಖ್ಯೆ – 39,259
* ಮುಸ್ಲಿಮರ ಸಂಖ್ಯೆ – 24,991
* ಲಿಂಗಾಯಿತರ ಸಂಖ್ಯೆ – 9435
* ಕುರುಬರ ಸಂಖ್ಯೆ – 7136
* ತಿಗಳರ ಸಂಖ್ಯೆ – 8232
* ಬೆಸ್ತರ ಸಂಖ್ಯೆ – 9792
* ಇತರರು – 10,441
2013ರ ವಿಧಾನಸಭಾ ಚುನಾವಣೆಯಲ್ಲಿ ಯೋಗೇಶ್ವರ್ ಅವರು ಅನಿತಾ ಕುಮಾರಸ್ವಾಮಿ ವಿರುದ್ಧ 6,464 ಮತಗಳ ಅಂತರಿಂದ ಗೆದ್ದಿದ್ದರು. ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಅವರಿಗೆ 80,099 ಮತಗಳು ಬಿದ್ದಿದ್ದರೆ, ಅನಿತಾ ಕುಮಾರಸ್ವಾಮಿ ಅವರಿಗೆ 73,635 ಮತಗಳು ಬಿದ್ದಿತ್ತು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸದತ್ ಅಲಿ ಖಾನ್ ಅವರಿಗೆ 8,134 ಮತಗಳು ಸಿಕ್ಕಿತ್ತು. 2014ರ ಲೋಕಸಭಾ ಚುನಾವಣೆ ವೇಳೆ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೇ ಅಕ್ಟೋಬರ್ ನಲ್ಲಿ ಪಕ್ಷದ ವರಿಷ್ಠರ ನಿರ್ಧಾರದಿಂದ ಬೇಸತ್ತು ನಾನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಯೋಗೇಶ್ವರ್ ತಿಳಿಸಿದ್ದರು.
ನವದೆಹಲಿ: ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದ ಬಳಿಕ ದೇಶ ವಿದೇಶಗಳಲ್ಲಿ ನಡೆಯುವ ಸಣ್ಣ ಘಟನೆಗಳನ್ನು ಎಲ್ಲರೂ ಗಮಸಿಲು ಆರಂಭಿಸಿದ್ದಾರೆ. ಇಂತಹ ಘಟನೆಗಳಲ್ಲಿ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತದೆ. ಇತಂಹದ್ದೇ ವಿಡಿಯೋ ಇಲ್ಲಿದೆ.
`ಐ ಆಮ್ ದಿ ವಿನ್ನರ್’ ಎಂಬ ಟಿವಿ ಕಾರ್ಯಕ್ರಮವೊಂದರ ನಿರೂಪಕರ ಮಧ್ಯೆ ಕ್ಯಾಂಡಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಬ್ಬರು ಕ್ಯಾಂಡಿ ತಿನ್ನಲು ಸಿದ್ಧರಾಗಿದ್ದರು. ಆದರೆ ಸ್ಪರ್ಧೆಯಲ್ಲಿ ಗೆಲುವು ಪಡೆಯಲು ಆ್ಯಂಕರ್ ಕ್ಯಾಂಡಿಯನ್ನು ಒಂದೇ ಬಾರಿಗೆ ಸಣ್ಣ ಉಂಡೆ ಮಾಡಿ ಬಾಯಿಗೆ ತುರುಕಿಕೊಂಡರು.
ಈ ವೇಳೆ ಆ್ಯಂಕರ್ ಸಮಯ ಪ್ರಜ್ಞೆಯನ್ನು ಕಂಡ ಎಲ್ಲರು ಪ್ರಶಂಸೆ ವ್ಯಕ್ತಪಡಿಸಿರು. ಆದರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಮಾತ್ರ ಅಚ್ಚರ್ಯದಿಂದ ನಿಂತು ಬಿಟ್ಟ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ಪರ್ಧೆಯಲ್ಲಿ ಆ್ಯಂಕರ್ ಕ್ರಿಯೇಟಿವಿಟಿ ಹಾಗೂ ಜಾಣ್ಮೆ ನೋಡಿದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತುಮಕೂರು: ಚುನಾವಣೆ ಸಮಿಪಿಸುತ್ತಿದ್ದಂತೆ ಸ್ಪರ್ಧಿಗಳು ಒಬ್ಬರನೊಬ್ಬರು ಹಣಿಯಲು ಆರಂಭಿಸುವುದು ಹೊಸದೇನಲ್ಲ. ತುಮಕೂರಿನಲ್ಲಿ ತುಸು ವಿಶೇಷವಾಗಿ ರಾಜಕಾರಣಿಗಳು ತಮ್ಮ ವಿರೋಧಿಗಳ ಕಾಲು ಎಳೆಯಲು ಪ್ರಯತ್ನಿಸಿದ್ದಾರೆ.
ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ವಿರುದ್ಧ ವಿಡಂಬನಾತ್ಮಕ ಹಾಡು ರಚಿಸಿ ಫೇಸ್ ಬುಕ್ ನಲ್ಲಿ ಅಪಲೋಡ್ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಯೂತ್ ಕಾಂಗ್ರೆಸ್ ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಸುಳ್ಳೇ ಸುಳ್ಳು ಎಂಬ ಹಾಡಿನೊಂದಿಗೆ ಸುರೇಶ್ ಗೌಡರು ಮಾಡಿರುವ ಕೆಲ ತಪ್ಪುಗಳನ್ನು ವಿಡಂಬನಾತ್ಮಕವಾಗಿ ಹೇಳಲಾಗಿದೆ.
ಆಪರೇಷನ್ ಕಮಲದ ವೇಳೆ ಗುಬ್ಬಿ ಜೆಡಿಎಸ್ ಶಾಸಕರಿಗೆ 25 ಕೋಟಿ ಆಫರ್ ಇಟ್ಟಿದ್ದ ಸರದಾರ, ಕಾರು ಡಿಕ್ಕಿ ಮಾಡಿ ವೃದ್ಧನ ಕೊಂದ ಕಿಲ್ಲರ್, ಬೆಂಗಳೂರಲ್ಲಿ ಸ್ವಂತ ಮನೆ ಇದ್ದರೂ ಜಿ-ಕೆಟಗರಿ ಸೈಟ್ ಗಾಗಿ ಹಪಹಪಿಸುವ ಆಸೆಬರುಕ, ತನ್ನ ಕಾರು ಬಿಡದ ಟೋಲ್ ಗೇಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ರೌಡಿ ಶಾಸಕ….. ಹೀಗೆ ವಿಡಂಬನಾತ್ಮಕವಾಗಿ ಹಾಡು ಬರೆಯಲಾಗಿದೆ.
ತಿರುವನಂತಪುರಂ: ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ತಬ್ಬಿಕೊಂಡಿದ್ದಕ್ಕೆ ಮುಖ್ಯಶಿಕ್ಷಕಿ ಪರೀಕ್ಷೆಯನ್ನು ಬರೆಯಲು ಅನುಮತಿ ನೀಡದೇ ಆತನನ್ನು ಅಮಾನತು ಮಾಡಿದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿಯನ್ನು 5 ತಿಂಗಳ ಹಿಂದೆಯೇ ಶಾಲೆಯಿಂದ ಹೊರಹಾಕಲಾಗಿದೆ ಎಂದು ಸೆಂಟ್. ಥಾಮಸ್ ಸೆಂಟ್ರಲ್ ಶಾಲೆಯ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.
ಶಾಲೆಯ ಮೆಟ್ಟಿಲ ಹತ್ತಿರ ವಿದ್ಯಾರ್ಥಿ ಹುಡುಗಿಯನ್ನು ತಬ್ಬಿಕೊಂಡಿದ್ದನು. ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ ಆಕೆಯನ್ನು ಶುಭ ಕೋರಲು ನಾನು ತಬ್ಬಿಕೊಂಡಿದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಆದರೆ ಆತ ಶುಭ ಕೋರಲು ತಬ್ಬಿಕೊಂಡ ಎಂದರೆ 2 ಸೆಕೆಂಡ್ ಗಳಲ್ಲಿ ಮುಗಿಬೇಕಿತ್ತು. ಆದರೆ 5 ನಿಮಿಷಕ್ಕಿಂತ ಹೆಚ್ಚು ಕಾಲ ಆತ ವಿದ್ಯಾರ್ಥಿನಿಯನ್ನು ತಬ್ಬಿಕೊಂಡಿದ್ದನು. ನಂತರ ಶಿಕ್ಷಕರು ಅವರ ಮೇಲೆ ರೇಗಿದ್ದಕ್ಕೆ ಅವರು ದೂರ ಹೋದರು. ಅಷ್ಟೇ ಅಲ್ಲದೇ ಇವರಿಬ್ಬರು ಸಲುಗೆಯಿಂದ ಇರೋ ಫೋಟೋಗಳು 100ಕ್ಕಿಂತ ಹೆಚ್ಚು ಲೈಕ್ಸ್ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು ಎಂದು ಶಾಲಾ ಮುಖ್ಯಶಿಕ್ಷಕಿ ಸೆಬಸ್ಟಿಯನ್ ಟಿ ಜೋಸೆಫ್ ತಿಳಿಸಿದ್ದಾರೆ.
ನಾನು ನನ್ನ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ನಂಬಲಿಕ್ಕೆ ಆಗುತ್ತಿಲ್ಲ. ನನ್ನ ಅಜ್ಜಿ ಮುಂದೆಯೇ ಅವರು ನನಗೆ ಕೆಟ್ಟದಾಗಿ ಕರೆಯುತ್ತಾರೆ. ಅಷ್ಟೇ ಅಲ್ಲದೇ ನಾನೊಬ್ಬ ರೇಪಿಸ್ಟ್, ಕ್ರಿಮಿನಲ್ ಎನ್ನುವಂತೆ ನನ್ನ ಜೊತೆ ವರ್ತಿಸಿದ್ದಾರೆ. ನಾನು ನನ್ನ ಬೋರ್ಡ್ ಪರೀಕ್ಷೆ ಬರೆಯಬೇಕು. ಸಾಮಾಜಿಕ ಜಾಲತಾಣದಲ್ಲಿ ನಾನು ಫೋಟೋ ಅಪ್ಲೋಡ್ ಮಾಡಿದ್ದೆ. ಅದನ್ನು ಉಳಿದವರು ಶೇರ್ ಮಾಡಿದ್ದಾರೆ ಎಂದು ವಿದ್ಯಾರ್ಥಿ ಮಾಧ್ಯಮಕ್ಕೆ ತಿಳಿಸಿದ್ದಾನೆ.
ನಾನು ಸ್ಪರ್ಧೆಯಲ್ಲಿ ಭಾಗವಹಿಸಿದ ಮೇಲೆ ಆತ ನನ್ನನ್ನು ತಬ್ಬಿಕೊಂಡಿದ್ದು ನನಗೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಕೆಲವು ಸೆಕೆಂಡ್ ಗಳ ಕಾಲ ಆತ ನನ್ನನ್ನು ತಬ್ಬಿಕೊಂಡಿದ್ದನು. ಆದರೆ ಶಾಲೆಯವರು ಆತ 5 ನಿಮಿಷಕ್ಕಿಂತ ಹೆಚ್ಚು ಹೊತ್ತು ತಬ್ಬಿಕೊಂಡಿದ್ದನು ಎಂದು ಹೇಳುತ್ತಿದ್ದಾರೆ. ಶಾಲೆಯ ಶಿಕ್ಷಕರು ನಮ್ಮನ್ನು ಕೀಳು ದೃಷ್ಟಿಯಿಂದ ನೋಡುತ್ತಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಕುಟುಂಬದವರಿಗೂ ಅಸಭ್ಯವಾಗಿ ಬೈಯುತ್ತಾರೆ. ಅಷ್ಟೇ ಅಲ್ಲದೇ ನಮಗೆ ಕಿರುಕುಳ ಕೂಡ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.
ಮಂಗಳೂರು: ಈಗಿನ ಯುವ ಜನಾಂಗಕ್ಕೆ ಹಿಪ್-ಹಾಪ್ ಡಾನ್ಸ್‍ಗಳಂದರೆ ಅಚ್ಚು ಮೆಚ್ಚು. ಶಾಸ್ತ್ರೀಯ ನೃತ್ಯ ಪ್ರಕಾರಗಳ ಬಗ್ಗೆ ಆಸಕ್ತಿ ಕಡಿಮೆ. ಹೀಗಾಗಿ ಮಂಗಳೂರಿನ ಭರತನಾಟ್ಯ ಕಲಾವಿದೆಯೊಬ್ಬರು ಸಣ್ಣ ಮಕ್ಕಳಲ್ಲಿಯೇ ಶಾಸ್ತ್ರೀಯ ನೃತ್ಯಗಳತ್ತ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಶಾಲೆಗೆ ತೆರಳಿ ನಾಟ್ಯ ಕಲೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅರಿವು ಮೂಡಿಸುತ್ತಿದ್ದಾರೆ.
ಅಷ್ಟಕ್ಕೂ ಇವರು ಯಾವುದೋ ಸ್ಪರ್ಧೆಯಲ್ಲಿ ಭಾಗವಹಿಸಿರೋ ಸ್ಪರ್ಧಿಯಲ್ಲ. ಬದಲಿಗೆ ಮಕ್ಕಳಿಗೆ ಶಾಸ್ತ್ರೀಯ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುತ್ತಿರುವ ಕಲಾವಿದೆ ರಾಧಿಕಾ ಶೆಟ್ಟಿ. ಮಂಗಳೂರಿನ ಬಿಕರ್ನಕಟ್ಟೆಯ ಸರಕಾರಿ ಶಾಲೆಯಲ್ಲಿ ಈಕೆ ಹೀಗೆ ಅಭಿನಯ ಮಾಡುತ್ತಿದ್ದಾರೆ.
ಮಂಗಳೂರಿನ ಬಿಜೈನಲ್ಲಿರುವ ನೃತ್ಯಾಂಗನ್ ಟ್ರಸ್ಟ್ ನಿರ್ದೇಶಕಿಯಾಗಿರುವ ರಾಧಿಕಾ ಶೆಟ್ಟಿ, ಶಾಸ್ತ್ರೀಯ ಕಲೆಗಳ ಬಗ್ಗೆ ಅರಿವು ಇಲ್ಲದಿರುವುದನ್ನು ಗಮನಿಸಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ತೆರಳಿ ನಾಟ್ಯ ಕಲೆಗಳ ಬಗ್ಗೆ ಪ್ರಚಾರಾಂದೋಲನ ಮಾಡುತ್ತಿದ್ದಾರೆ. ಶಾಲಾ ಮಕ್ಕಳೆಲ್ಲಿದ್ದರಲ್ಲೇ ಭರತನಾಟ್ಯದ ಪ್ರಾತ್ಯಕ್ಷಿಕೆ ನೀಡುವುದರ ಜೊತೆಗೆ ಮುದ್ರೆ, ಆಂಗಿಕ ಅಭಿನಯಗಳ ಅರ್ಥವನ್ನು ಹೇಳಿಕೊಡುತ್ತಿದ್ದಾರೆ. ಆ ಮೂಲಕ ಮಕ್ಕಳಲ್ಲಿ ಶಾಸ್ತ್ರೀಯ ಕಲೆಗಳ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಶಾಸ್ತ್ರೀಯ ಕಲೆಗಳ ಬಗ್ಗೆ ಸಾಮಾನ್ಯವಾಗಿ ಜನಸಾಮಾನ್ಯರಿಗೆ ಅರಿವು ಇರುವುದಿಲ್ಲ. ಹೀಗಾಗಿ ಮಕ್ಕಳಿಂದಲೇ ಈ ನಾಟ್ಯ ಕಲೆಗಳ ಬಗ್ಗೆ ಆಸಕ್ತಿ ಮೂಡಿಸುವ ಕಲಾವಿದೆಯ ಸೇವೆ ನಿಜಕ್ಕೂ ಶ್ಲಾಘನೀಯ.
ಹಾವೇರಿ: ಉತ್ತರ ಕರ್ನಾಟಕದಲ್ಲಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅದರಲ್ಲೂ ದೀಪಾವಳಿ ದಿನ ಹೋರಿ ಬೆದರಿಸುವ ಸ್ಪರ್ಧೆ ಅಂತೂ ಎಲ್ಲರನ್ನೂ ಮೈ ಜುಮ್ಮೆನ್ನುವಂತೆ ಮಾಡುತ್ತೆ.
ನಗರದ ಶ್ರೀ ವೀರಭದ್ರಶ್ವರ ದೇವಸ್ಥಾನ ಬಳಿ ರೈತರು ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯನ್ನ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹೋರಿಗಳಿಗೆ ಬಲೂನು, ರಿಬ್ಬನ್, ಕೊಬ್ಬರಿ, ಮಿಂಚುಬಟ್ಟೆ ಕಟ್ಟಿ ಶೃಂಗಾರಿಸಲಾಗಿರುತ್ತದೆ. ನೋಡುಗರ ಮನಸೂರೆಗೊಳ್ಳುವ ಹಾಗೆ ಶೃಂಗರಿಸಿ ಮೊದಲು ಪ್ರದರ್ಶನ ಮಾಡಲಾಗುತ್ತದೆ.
ಸ್ಪರ್ಧೆಯ ನಿಯಮ: ರಸ್ತೆಯ ಮಧ್ಯೆ ಶೃಂಗರಿಸಲಾದ ಹೋರಿಗಳನ್ನು ಒಂದೊಂದಾಗಿ ಬಿಡಲಾಗುತ್ತದೆ. ಆ ಹೋರಿಯು ತನ್ನ ಕೊರಳಿನಲ್ಲಿರುವ ಕೊಬ್ಬರಿಯ ಮಾಲೆಯನ್ನು ಕಳೆದುಕೊಳ್ಳಬಾರದು. ಕಳೆದುಕೊಂಡರೆ ಆ ಸ್ಪರ್ಧೆಯಲ್ಲಿ ಆ ಹೋರಿ ಸೋತಂತೆ. ಹೆಚ್ಚು ಬಾರಿ ಗೆದ್ದ ಹೋರಿಗೆ ಬಹುಮಾನ ನೀಡಲಾಗುತ್ತದೆ. ಈ ಹೋರಿಗಳನ್ನು ಹಿಡಿಯಲು ನೂರಾರು ಯುವಕರ ದಂಡೇ ಸೇರಿರುತ್ತದೆ. ಹೆಚ್ಚು ಕೊಬ್ಬರಿ ಮಾಲೆಯನ್ನು ಕಿತ್ತುಕೊಂಡವರಿಗೆ ಬಹುಮಾನ ಕೊಡಲಾಗುತ್ತದೆ.
ಸುತ್ತಮುತ್ತಲಿನ ಗ್ರಾಮದ ನೂರಾರು ಹೋರಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ರೈತರು ಎತ್ತುಗಳಿಗೆ ರಿಬ್ಬನ್, ಬಲೂನ್ ಹಾಗೂ ಕೊಬ್ಬರಿ ಕಟ್ಟಿ ಹೋರಿಯನ್ನ ಓಡಲು ಬಿಡುತ್ತಾರೆ. ನೂರಾರು ಯುವಕರ ದಂಡು ಜಿಂಕೆಯಂತೆ ಓಡುವ ಹೋರಿಗಳನ್ನ ಹಿಡಿಯಲು ಮುಂದಾಗುತ್ತಾರೆ. ಹೋರಿಯ ಬಾಲವನ್ನ ಹಿಡಿದು ಓಡುವ ದೃಶ್ಯ ನೋಡಿಗರನ್ನ ಅಯೋ ಪಾಪಾ ಎನ್ನಿವಂತೆ ಮಾಡುತ್ತದೆ. ಮೈ ಮೇಲೆ ಒಮ್ಮೆಲೆ ಜಿಗಿದು ಬರುವ ಹೋರಿಗಳಿಗೆ ಹೆದರಿ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಪ್ರೇಕ್ಷಕರು, ಹೋರಿಗಳನ್ನ ಹಿಡಿದುಕೊಂಡು ಓಡುವ ದೃಶ್ಯಗಳು, ಹೋರಿಯ ಕಾಲಿನ ಕೆಳಗೆ ಸಿಕ್ಕಿಹಾಕಿಕೊಳ್ಳವ ಯುವಕರು, ಹೋರಿಗಳನ್ನ ಹಿಡಿದು ಕೊಬ್ಬರಿ ಮಾಲೆಯನ್ನು ಕಿತ್ತುಕೊಳ್ಳುವ ಯುವಕರು ಹೀಗೆ ಎಲ್ಲಾ ದೃಶ್ಯಗಳು ನೋಡುಗರ ಮೈ ಜುಮ್ಮೆನ್ನುವಂತೆ ಮಾಡುತ್ತದೆ.
ಯಾರ ಕೈಗೂ ಸಿಗದೇ ಅಕಾಡದಿಂದ ಎಲ್ಲರನ್ನೂ ರಂಜಿಸಿ, ಹೆದರಿಸಿ ಮುನ್ನುಗ್ಗಿ ಬಹುಮಾನ ಪಡೆದುಕೊಳ್ಳವ ಹೋರಿಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಹೋರಿ ಓಡಿಸುವ ಸ್ಪರ್ಧೆಗೆ ಆಗಮಿಸಿದ ಎಲ್ಲಾ ಪ್ರೇಕ್ಷಕರು ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಾರೆ.
ಬ್ಯೂನಸ್ ಐರಿಸ್: ಕಾರ್ಯಕ್ರಮ ಒಂದರ ಕೈ ಬಾಗಿಸುವ ಸ್ಪರ್ಧೆಯಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ಮತ್ತೊಬ್ಬ ಸ್ಪರ್ಧಿಯ ಕೈಯನ್ನು ಮುರಿದಿರುವ ಆಘಾತಕಾರಿ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.
ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಇಬ್ಬರು ಮಹಿಳಾ ಸ್ಪರ್ಧಿಗಳು ಸ್ಪರ್ಧಿಸುತ್ತಿರುತ್ತಾರೆ. ಸ್ಪರ್ಧೆ ಜೋರಾಗಿ ನಡೆಯುತ್ತಿರುವಾಗ ಸ್ಪರ್ಧಿಯೊಬ್ಬರ ಕೈ ಮುರಿದಿದ್ದಾರೆ.
ಕೂಡಲೇ ಕೈ ಮುರಿತಕ್ಕೆ ಒಳಗಾದ ಸ್ಪರ್ಧಿಯನ್ನು ಆಸ್ಪತ್ರೆಗೆ ದಾಖಲಾಸಲಾಗಿದೆ. ಈಗ ಕೈ ಮುರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಈ ರೀತಿಯ ಸ್ಪರ್ಧಿಗಳನ್ನು ಆಯೋಜನೆ ಮಾಡಬಾರದು ಎಂದು ಕಮೆಂಟ್ ಮಾಡುತ್ತಿದ್ದಾರೆ.