Tag: Competition

  • ತಟ್ಟೆಯಲ್ಲಿರುವ ಊಟ ಖಾಲಿ ಮಾಡಿದ್ರೆ ಸಿಗುತ್ತೆ ರಾಯಲ್ ಎನ್‍ಫೀಲ್ಡ್ ಬೈಕ್

    ತಟ್ಟೆಯಲ್ಲಿರುವ ಊಟ ಖಾಲಿ ಮಾಡಿದ್ರೆ ಸಿಗುತ್ತೆ ರಾಯಲ್ ಎನ್‍ಫೀಲ್ಡ್ ಬೈಕ್

    – ಹೋಟೆಲಿನಿಂದ ಹೊಸ ಆಫರ್, ಕಂಡೀಷನ್ಸ್ ಅಪ್ಲೈ

    ಮುಂಬೈ: ಹೋಟೆಲ್ ಗಳು ಗ್ರಾಹಕರನ್ನ ಸೆಳೆಯಲು ನಾನಾ ಮಾರುಕಟ್ಟೆ ತಂತ್ರಗಳನ್ನ ಪ್ರಯೋಗಿಸುತ್ತವೆ. ಇದೀಗ ಪುಣೆಯ ಶಿವರಾಜ್ ಹೋಟೆಲ್ ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ. ಹೋಟೆಲ್ ಪ್ರಕಟಿಸಿರುವ ಜಾಹೀರಾತಿನ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಭರ್ಜರಿ ಊಟಕ್ಕಾಗಿ ಕೆಲ ಹೋಟೆಲ್ ಗಳು ಮಹಾರಾಜ ಥಾಲಿ, ಬಾಹುಬಲಿ ಥಾಲಿ ಹೆಸರಿನ ಆಫರ್ ಗಳನ್ನ ಗ್ರಾಹಕರಿಗೆ ನೀಡುತ್ತವೆ. ಶಿವರಾಜ್ ಹೋಟೆಲ್ ಬುಲೆಟ್ ಥಾಲಿ ಪರಿಚಯಿಸಿದ್ದು, ಇದರಲ್ಲಿ ನೀಡುವ ಎಲ್ಲ ಖಾದ್ಯಗಳು ಒಂದು ಗಂಟೆಯೊಳಗೆ ತಿನ್ನುವ ಗ್ರಾಹಕರಿಗೆ ರಾಯಲ್ ಎನ್ ಫೀಲ್ಡ್ ಬೈಕ್ ಉಚಿತವಾಗಿ ನೀಡಲಾಗುತ್ತದೆ. ಈ ಬುಲೆಟ್ ಥಾಲಿ ಮಾಂಸಾಹಾರ ಸಹ ಒಳಗೊಂಡಿರುತ್ತದೆ. ಈ ಥಾಲಿ ಸಿದ್ಧಪಡಿಸಲು 55 ಬಾಣಸಿಗರು ಕೆಲಸ ಮಾಡುತ್ತಾರೆ.

    ಬುಲೆಟ್ ಥಾಲಿಯಲ್ಲಿ ಏನೆಲ್ಲ ಇರುತ್ತೆ?:
    ನಾಲ್ಕು ಕೆಜಿ ಮಟನ್, ಕರಿದ ಮೀನು, 12 ತರಹದ ವಿವಿಧ ಆಹಾರ ಇರಲಿದೆ. ಇದರಲ್ಲಿ ಪೊಮ್‍ಫ್ರೆಟ್ ಎಂಟು ಪೀಸ್, ಸುರ್ಮಾಯಿ ಎಂಟು ಪೀಸ್, ಚಿಕನ್ ಲೆಗ್ ಪೀಸ್ 8, ಕಿಲ್ಲಾಂಬಿ ಕರ್ರಿ, ಒಂದು ಮಟನ್ ಮಸಲಾ, ಕರಿದ ಹುಂಜ, ಕೋಲಂಬಿ ಬಿರಿಯಾನಿ, ಎಂಟು ರೊಟ್ಟಿ, ಎಂಟು ಚಪಾತಿ, ಒಂದು ಸುಕ್ಕಾ, ಕೋಲಂಬಿ ಕೋಲಿವಾಡಾ, ನೀರಿನ ನಾಲ್ಕು ಬಾಟಲ್, ರಾಯತಾ, ಎಂಟು ಸೋಲ್ಕಡಿ, ಎಂಟು ಹಪ್ಪಳ ಮತ್ತು ಎಂಟು ಮಟನ್ ಅಲಾನಿ ಸೂಪ್

    ಎರಡು ಆಯ್ಕೆಗಳಿವೆ: ಈ ಆಫರ್ ಕುರಿತು ಮಾತನಾಡಿರುವ ಹೋಟೆಲ್ ಮಾಲೀಕ ಅತುಲ್ ವಾಯಕರ್, ಗ್ರಾಹಕರಿಗೆ ಎರಡು ರೀತಿಯ ಆಫರ್ ಗಳನ್ನ ನೀಡಲಾಗುತ್ತದೆ. ಮೊದಲನೆಯದ್ದು 4 ಸಾವಿರ 444 ರೂ.ಬೆಲೆಯ ಬುಲೆಟ್ ಥಾಲಿಯನ್ನ ಇಬ್ಬರು ಜೊತೆಯಾಗಿ ಒಂದು ಗಂಟೆಯೊಳಗೆ ತಿಂದು ಮುಗಿಸಬೇಕು. ಎರಡನೇ ಆಯ್ಕೆ 2 ಸಾವಿರದ ಐದು ನೂರು ಬೆಲೆಯ ಒಂದು ಮಿನಿ ಬುಲೆಟ್ ಥಾಲಿಯನ್ನ ಓರ್ವ ಗಂಟೆಯಲ್ಲಿ ತಿನ್ನಬೇಕು. ಯಾರಾದ್ರೂ ಒಂದು ಗಂಟೆಯೊಳಗೆ ಬುಲೆಟ್ ಥಾಲಿ ಸೇವಿಸಿದ್ರೆ ರಾಯಲ್ ಎನ್‍ಫೀಲ್ಡ್ ಬುಲೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.

    ಹೋಟೆಲ್ ಮುಂಭಾಗಲ್ಲಿ ಆರು ಬುಲೆಟ್ ಬೈಕ್ ಗಳನ್ನ ನಿಲ್ಲಿಸಲಾಗಿದೆ. ಇದರ ಜೊತೆಗೆ ಹೋಟೆಲ್ ನಲ್ಲಿ ಆರು ಬಗೆಯ ಬುಲೆಟ್ ಥಾಲಿಗಳು ಗ್ರಾಹಕರಿಗೆ ಸಿಗಲಿದೆ. ರಾವಣ್ ಥಾಲಿ, ಬುಲೆಟ್ ಥಾಲಿ, ಮಲ್ವಾನಿ ಮಚಲಿ ಥಾಲಿ, ಪೈಲ್ವಾನ್ ಮಟನ್ ಥಾಲಿ, ಬಕಾಸುರ ಚಿಕನ್ ಥಾಲಿ ಮತ್ತು ಸರ್ಕಾರ್ ಮಟನ್ ಥಾಲಿ ಸಿಗಲಿದೆ. ಸೋಲಾಪುರ ಜಿಲ್ಲೆಯ ಸೋಮನಾಥ್ ಕುಟುಂಬದ ಒಬ್ಬರು ಮಾತ್ರ ಬುಲೆಟ್ ಬೈಕ್ ತಮ್ಮದಾಗಿಸಿಕೊಂಡಿದ್ದಾರೆ.

    ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾಲೀಕನ ಈ ಆಫರ್ ಸೂಪರ್ ಹಿಟ್ ಆಗಿ ಹೋಟೆಲ್ ಫುಲ್ ಫೇಮಸ್ ಆಗಿದೆ.

  • ಯಂಗ್ ಶೆಫ್ ಒಲಂಪಿಯಾಡ್ 2020ಕ್ಕೆ 20 ದೇಶಗಳಿಗೆ ಆತಿಥ್ಯ ವಹಿಸಲಿರುವ ಬೆಂಗ್ಳೂರು

    ಯಂಗ್ ಶೆಫ್ ಒಲಂಪಿಯಾಡ್ 2020ಕ್ಕೆ 20 ದೇಶಗಳಿಗೆ ಆತಿಥ್ಯ ವಹಿಸಲಿರುವ ಬೆಂಗ್ಳೂರು

    ಬೆಂಗಳೂರು: ವಿಶ್ವದ ಅತಿ ದೊಡ್ಡ ಅಡುಗೆ ಚಾಂಪಿಯನ್‍ಶಿಪ್ ‘ಯಂಗ್ ಶೆಫ್ ಒಲಂಪಿಯಾಡ್ 2020’ಯ ಆತಿಥ್ಯ ವಹಿಸಲು ಸಿಲಿಕಾನ್ ಸಿಟಿ ಸಿದ್ಧವಾಗಿದೆ.

    ವಿಶ್ವದ 55 ದೇಶದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ 20 ದೇಶದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಅಡುಗೆ ಸ್ಪರ್ಧೆಗಳು ನಡೆಯಲಿದೆ. ಹೋಟಲ್ ಮ್ಯಾನೆಜ್‍ಮೆಂಟ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಸ್ಪರ್ಧೆಯನ್ನ ಆಯೋಜನೆ ಮಾಡಲಾಗುತ್ತೆ.

    ವಿದ್ಯಾರ್ಥಿಗಳು ತಮ್ಮ ಸ್ವಂತಿಕೆ ಬಳಸಿಕೊಂಡು ಹೇಗೆ ಅಡುಗೆ ತಯಾರಿಸುತ್ತಾರೆ ಮತ್ತು ಅದನ್ನ ಹೇಗೆ ಪ್ರಸ್ತುತ ಪಡಿಸುತ್ತಾರೆ ಅನ್ನೋದು ಈ ಸ್ಪರ್ಧೆಯ ಮುಖ್ಯ ವಿಷಯವಾಗಿದೆ. ಫೇಬ್ರವರಿ 1ರಿಂದ ಈ ‘ಯೆಂಗ್ ಶೆಫ್ ಒಲಂಪಿಯಾಡ್ 2020’ರ ಸ್ಪರ್ಧೆಗಳು ಆರಂಭವಾಗಲಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವೇದಿಕೆ ಸಿದ್ದವಾಗಲಿದೆ. ಬೆಂಗಳೂರಿನಲ್ಲಿ ಅಡುಗೆ ಮಾಡಿ ಭೇಷ್ ಎನಿಸಿಕೊಂಡು ಆಯ್ಕಯಾಗುವ ವಿದ್ಯಾರ್ಥಿಗಳಿಗೆ ಕೊಲ್ಕತ್ತಾದಲ್ಲಿ ಫೈನಲ್ ಸ್ಪರ್ಧೆ ನಡೆಯಲಿದೆ.

  • ರಾಸುಗಳಿಗಾಗೇ ರಾಜ್ಯ ಮಟ್ಟದ ಜೋಡೆತ್ತಿನಗಾಡಿ ಸ್ಪರ್ಧೆ

    ರಾಸುಗಳಿಗಾಗೇ ರಾಜ್ಯ ಮಟ್ಟದ ಜೋಡೆತ್ತಿನಗಾಡಿ ಸ್ಪರ್ಧೆ

    ಚಿಕ್ಕಮಗಳೂರು: ವರ್ಷಪೂರ್ತಿ ಹೊಲಗದ್ದೆಗಳಲ್ಲಿ ದುಡಿಯುವ ರಾಸುಗಳಿಗಾಗೇ ಕಾಫಿನಾಡಿನಲ್ಲಿ ಜೋಡಿ ಎತ್ತಿನಗಾಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾಲೂಕಿನ ತೇಗೂರು ಗ್ರಾಮದ ಅರಸು ಗೆಳೆಯರ ಬಳಗ ಹಾಗೂ ಮಾರುತಿ ಯುವಕರ ಸಂಘ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ಮೂಲೆಮೂಲೆಗಳಿಂದ 80ಕ್ಕೂ ಹೆಚ್ಚು ಜೋಡೆತ್ತುಗಳು ಪಾಲ್ಗೊಂಡಿದ್ದವು. ಮಧ್ಯರಾತ್ರಿ 12 ಗಂಟೆಯಾದ್ರು ಸಾವಿರಾರು ಜನ ಎತ್ತಿನಗಾಡಿ ಸ್ಪರ್ಧೆಯನ್ನು ನೋಡಿ ಖುಷಿಪಟ್ಟರು. ಅರಸು ಗೆಳೆಯರ ಬಳಗ 14 ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ.

    ತೇಗೂರು ಗ್ರಾಮದ ಹೊರವಲಯದ ವಿಸ್ತಾರವಾದ ಪ್ರದೇಶದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ, ಹಾಸನ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ಜೋಡೆತ್ತುಗಳು ಸ್ಫರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನಕ್ಕಾಗಿ ಭಾರೀ ಪೈಪೋಟಿ ನೀಡಿದವು. ಮೊದಲ ಸ್ಥಾನ 60 ಸಾವಿರ, ಎರಡನೇ ಸ್ಥಾನ 50, ಮೂರು 40 ಹಾಗೂ ನಾಲ್ಕನೇ ಸ್ಥಾನಕ್ಕೆ 30 ಸಾವಿರ ಹಣ ಹಾಗೂ ಪಾರಿತೋಷಕವನ್ನು ನಿಗದಿ ಮಾಡಲಾಗಿತ್ತು.

    ಸ್ಪರ್ಧೆಗಾಗಿಯೇ ರೈತರು ಎತ್ತುಗಳನ್ನ ಮಕ್ಕಳಂತೆ ಸಾಕಿರುತ್ತಾರೆ. ಮೂರ್ನಾಲ್ಕು ಲಕ್ಷ ಬೆಲೆ ಬಾಳುವ ಎತ್ತುಗಳು ರೈತರಿಗೆ ಕುದುರೆಗಳಿದ್ದಂತೆ. ಹೊಲದಲ್ಲೇ ಭೂಮಿ ಉಳುಮೆಗೂ ಸೈ, ಬಯಲಲ್ಲಿ ಓಡೋದಕ್ಕೂ ಸೈ ಎಂಬಂತೆ ಬೆಳೆಸಿರುತ್ತಾರೆ. ಹೊಲಗದ್ದೆಗಳ ಕೆಲಸ ಕಾರ್ಯ ಮುಗಿದ ಮೇಲೆ ರೈತರು ರಾಸುಗಳನ್ನು ಇಂತಹ ಓಟಗಳಲ್ಲಿ ಭಾಗವಹಿಸಿ ಖುಷಿಪಡ್ತಾರೆ. ಸ್ಪರ್ಧೆಯ 15 ದಿನ ಮೊದಲೇ ಎತ್ತುಗಳಿಗೆ ವಿಶೇಷ ತರಬೇತಿ ಕೊಡುತ್ತಾರೆ. ಜೊತೆಗೆ ಇಂಡಿ, ಬೂಸಾ, ಹಸಿ ಹುಲ್ಲು, ರಾಗಿ ಹುಲ್ಲು, ಮೆಕ್ಕೆಜೋಳ, ಹಾಲು-ಮೊಸರು-ಬೆಣ್ಣೆ-ತುಪ್ಪ, ಮೆಂತೆ ಮುದ್ದೆ ಕೊಟ್ಟು ಚೆನ್ನಾಗಿ ತಯಾರಿ ಮಾಡಿರುತ್ತಾರೆ. ರೈತರಿಗೆ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವುದಕ್ಕಿಂತ ಭಾಗವಹಿಸುವುದೇ ಸಂತಸ.

    ಸ್ಪರ್ಧೆಯ ಮೈದಾನದ ಸುತ್ತಲೂ ಬಂದೋಬಸ್ತ್ ಮಾಡಲಾಗಿತ್ತು. ಏಕೆಂದರೆ ಕುದುರೆಯಂತೆ ಓಡುವ ರಾಸುಗಳು ಹೇಗೆ ಬೇಕೋ ಹಾಗೇ ನುಗ್ಗುವುದರಿಂದ ಪ್ರೇಕ್ಷಕರ ಹಿತದೃಷ್ಠಿಯಿಂದ ಮೈದಾನದ ಸುತ್ತಲೂ ಮರದಿಂದ ಬೇಲಿ ನಿರ್ಮಿಸಲಾಗಿತ್ತು. ಒಮ್ಮೆಲೆ ಎರಡು ಗಾಡಿಗಳು ಓಡಾಡುವುದರಿಂದ ಎ ಹಾಗೂ ಬಿ ಎಂಬ ಎರಡು ರ‍್ಯಾಕ್‌ನಲ್ಲಿ ಎರಡು ಗಾಡಿಗಳನ್ನು ಬಿಡಲಾಗ್ತಿತ್ತು. ನೋಡುಗರಿಗೆ ಅನುಕೂಲವಾಗಲೆಂದು ಎ ಹಾಗೂ ಬಿ ಎರಡೂ ಬದಿಯಲ್ಲೂ ಎರಡು ಎಲ್.ಇ.ಡಿ ವಾಲ್ ಅಳವಡಿಸಲಾಗಿತ್ತು. ಎತ್ತುಗಳು ಓಡುವ ವೇಗ ಕಂಡ ಜನ ಇವು ಎತ್ತೋ ಅಥವಾ ರೇಸ್ ಓಡುವ ಕುದುರೆಗಳೋ ಎಂದು ಶಿಲ್ಲೆ ಹೊಡೆದು ಕೇಕೆ ಹಾಕಿ ಕೂಗಾಡಿದರು.

    ಮಲೆನಾಡಲ್ಲಿ ಅಪರೂಪವೆನಿಸಿದ್ದ ಈ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ಐದು ಸಾವಿರಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡರು. ಸ್ಪರ್ಧೆಯಲ್ಲಿ ಎತ್ತುಗಳನ್ನು ಓಡಿಸಿದ ರೈತರು ಖುಷಿ ಪಟ್ಟರು. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸ್ತಿರೋ ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ ಈ ಸ್ಪರ್ಧೆ ಜನಮನ ಸೆಳೆಯಿತು. ಸ್ಥಳೀಯರು ಹಾಗೂ ದೂರದೂರಿನಿಂದ ಬಂದಿದ್ದ ಸ್ಪರ್ಧಾಳುಗಳು ಇಂತಹಾ ಗ್ರಾಮೀಣ ಕ್ರೀಡೆಗಳು ಜೀವಂತವಾಗಿರಲೆಂದು ಬಯಸಿದರು.

  • ಬನವಾಸಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ

    ಬನವಾಸಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಹೋಬಳಿಯ ಭಾಶಿಯಲ್ಲಿ ಕೊಬ್ಬಿದ ಹೋರಿ ಬೆದರಿಸುವ ಸ್ಪರ್ಧೆ ಸಹಸ್ರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದಿದೆ.

    ದೀಪಾವಳಿ ಪ್ರಯುಕ್ತ ಭಾಶಿಯ ಗ್ರಾಮಸ್ಥರ ವತಿಯಿಂದ ನಡೆದ ಈ ಗ್ರಾಮೀಣ ಕ್ರೀಡೆ ನೋಡುಗರ ಮೈ ನವಿರೇಳಿಸಿತು. ರಾಜ್ಯದ ಹಾವೇರಿ, ಹಾನಗಲ, ಸೊರಬಾ, ಶಿಕಾರಿಪುರ, ಶಿರಾಳಕೊಪ್ಪ ಹಾಗೂ ಸ್ಥಳೀಯ ಬನವಾಸಿ ಸುತ್ತಮುತ್ತಲಿನ 300ಕ್ಕೂ ಅಧಿಕ ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಮಾಲೀಕರು ತಮ್ಮ ತಮ್ಮ ಹೋರಿಗಳನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಬಂದಿದ್ದರು.

    ಹೋರಿ ಬೆದರಿಸಿ ಹಿಡಿಯುವುದನ್ನು ನೋಡಲು ಬನವಾಸಿ ಹಾಗೂ ಸುತ್ತಮುತ್ತಲಿನ ಸಹಸ್ರಾರು ಜನರು ಆಗಮಿಸಿದ್ದರು. ರೋಮಾಂಚನಕಾರಿ ದೃಶ್ಯಗಳನ್ನು ನೋಡಿ ಜನ ಕಣ್ತುಂಬಿಕೊಂಡಿದ್ದಾರೆ.

  • ಮಂಜಿನ ನಗರಿ ಜಾತ್ರೆಯಲ್ಲಿ ದೇಶಿ ಬಂಡಿಗಳ ಕಮಾಲ್ – ಕಿಕ್ಕಿರಿದು ಸೇರಿದ ಜನಸ್ತೋಮ

    ಮಂಜಿನ ನಗರಿ ಜಾತ್ರೆಯಲ್ಲಿ ದೇಶಿ ಬಂಡಿಗಳ ಕಮಾಲ್ – ಕಿಕ್ಕಿರಿದು ಸೇರಿದ ಜನಸ್ತೋಮ

    ಮಡಿಕೇರಿ: ಮಂಜಿನ ನಗರಿ ಎಂದೇ ಖ್ಯಾತವಾಗಿರುವ ಕೊಡಗಿನಲ್ಲಿ ಇದೀಗ ಜಾತ್ರಾ ಮಹೋತ್ಸವಗಳ ಕಲರವ ಜೋರಾಗಿದೆ. ಆಧುನಿಕತೆಯ ಅಬ್ಬರದ ನಡುವೆ ಅನ್ನದಾತರ ಅವಿಭಾಜ್ಯ ಅಂಗವಾಗಿರುವ ರಾಸುಗಳ ಪ್ರದರ್ಶನ ಹಾಗೂ ದೇಶಿ ಬಂಡಿಗಳ ಸ್ಪರ್ಧೆಯ ಗಮ್ಮತ್ತು ಮೇಳೈಸುತ್ತಿದೆ.

    ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಗ್ರಾಮ ದೇವತೆ ಬನಶಂಕರಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಜಾತ್ರೆ ಪ್ರಯುಕ್ತ ಮಾದರಿ ಯುವಕ ಸಂಘದಿಂದ ಗ್ರಾಮದಲ್ಲಿ ಜೋಡೆತ್ತುಗಳ ಪ್ರದರ್ಶನ ಹಾಗೂ ದೇಶಿ ಬಂಡಿಗಳ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಅದರ ಜೊತೆಗೆ ಪುರುಷರು, ಮಹಿಳೆಯರಿಗೆ 100, 200 ಹಾಗೂ 400 ಮೀಟರ್ ಓಟ ಸ್ಪರ್ಧೆ, ಮೂರು ಕಾಲಿನ ಓಟ, ಕಬಡ್ಡಿ, ರಂಗೋಲಿ ಸ್ಪರ್ಧೆ, ಶಾಟ್ ಪುಟ್ ಎಸೆತ, ಹಗ್ಗ-ಜಗ್ಗಾಟ ಸೇರಿದಂತೆ ಸಂಗಿತದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

    ಕ್ರೀಡಾಕೂಟದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡು ಸಂತಸ ಪಟ್ಟಿದ್ದಾರೆ. ಹೆಬ್ಬಾಲೆ, ಚಿಕ್ಕಮಗಳೂರು, ಸಾಲಿಗ್ರಾಮ, ಹುಣಸೂರು ಹಳೇಕೋಟೆ ಸೇರಿದಂತೆ 11 ಸ್ಪರ್ಧಾ ಜೊಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅಲ್ಲದೆ ಜಾತ್ರೆಯಲ್ಲಿ 1.5 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆಯಿಂದ 5 ಲಕ್ಷ ರೂಪಾಯಿವರೆಗೆ ಬೆಲೆ ಬಾಳುವ ಒಂಟೆತ್ತನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

    ಪ್ರತಿವರ್ಷವೂ ಗ್ರಾಮದ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ರೈತರು ತಮ್ಮ ಎತ್ತುಗಳನ್ನು ಪ್ರದರ್ಶನ ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆಗೆ ಕರೆತರುತ್ತಾರೆ. ಇಂದಿನ ನವ ಯುಗದ ಅಬ್ಬರದಲ್ಲಿ ಯಂತ್ರೋಪಕರಣಗಳ ಮಧ್ಯೆ ದೇಶಿ ಬಂಡಿಗಳು, ರೈತನ ಜೀವನಾಡಿಗಳಾದ ರಾಸುಗಳು ಕಣ್ಮರೆಯಾಗುತ್ತಿದೆ. ಆದರೆ ಇಂತಹ ಸನ್ನಿವೇಶದಲ್ಲಿ ಊರ ಜಾತ್ರೆಗಳ ಮೂಲಕ ಗ್ರಾಮೀಣ ಕ್ರೀಡೆಯ ಮಹತ್ವ, ದೇಶಿ ರಾಸುಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ತುಂಬಾ ಸಂತೋಷವಾಗುತ್ತೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳು ಸದಾ ಒತ್ತಡದಿಂದಲೇ ಇದ್ದಂತಹ ರೈತಪಿ ವರ್ಗಕ್ಕೂ ಮನರಂಜನೆಯ ಸರದೌತಣವನ್ನ ಉಣಬಡಿಸಿದೆ. ಅಷ್ಟೇ ಅಲ್ಲದೆ ರಾಸುಗಳು ಹಾಗೂ ಗ್ರಾಮೀಣ ಆಟೋಟಗಳ ಪರಿವೇ ಇಲ್ಲದ ಯುವಕ-ಯುವತಿಯರಿಗೆ ಅವುಗಳ ಮಹತ್ವದ ಅರಿವು ಮೂಡಿಸಿದೆ.

  • 1,600 ಕ್ರೀಡಾಪಟುಗಳನ್ನು ಹಿಂದಿಕ್ಕಿ ಕಿರೀಟ ಗೆದ್ದ ಧಾರವಾಡದ ಇನ್ಸ್‌ಪೆಕ್ಟರ್

    1,600 ಕ್ರೀಡಾಪಟುಗಳನ್ನು ಹಿಂದಿಕ್ಕಿ ಕಿರೀಟ ಗೆದ್ದ ಧಾರವಾಡದ ಇನ್ಸ್‌ಪೆಕ್ಟರ್

    ಧಾರವಾಡ: ಧಾರವಾಡದ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹಾಫ್ ಐರಾನ್ ಮ್ಯಾನ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

    ಮುರುಘೇಶ್ ಚನ್ನಣ್ಣವರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದ ಐರಾನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ದೇಶದ 1,600 ಕ್ರೀಡಾಪಟುಗಳು ಭಾಗವಹಿಸಿದ್ದು, ಅವರನ್ನು ಹಿಂದಿಕ್ಕಿ ಮುರುಘೇಶ್ ಹಾಫ್ ಐರಾನ್ ಮ್ಯಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    7 ತಾಸಿನಲ್ಲಿ 1.9 ಕಿ.ಮೀ ಈಜು, 91 ಕಿ.ಮೀ ಸೈಕ್ಲಿಂಗ್ ಹಾಗೂ 21.1 ಕಿ.ಮೀ ರನ್ನಿಂಗ್ ಮಾಡುವ ಮೂಲಕ ಮುರುಘೇಶ್ ಚನ್ನಣ್ಣವರ ಅವರು ರಾಜ್ಯದ ಮೊದಲ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.

    ಮುರುಘೇಶ್ ಚನ್ನಣ್ಣವರ ಈಗಾಗಲೇ ಸೈಕ್ಲಿಂಗ್, ಮ್ಯಾರಾಥಾನ್ ನಲ್ಲಿ 60ಕ್ಕೂ ಹೆಚ್ಚು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಈ ಮೊದಲು ಇವರು 42 ಕಿ.ಮೀ ಮ್ಯಾರಾಥಾನ್, 100 ಕಿ.ಮೀ ಸೈಕ್ಲಿಂಗ್‍ನಲ್ಲಿ ಕೂಡ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

  • ಮಿಸ್ ವರ್ಲ್ಡ್ ಅಮೆರಿಕ – ಫಿನಾಲೆಯಲ್ಲಿ ಕುಸಿದು ಬಿದ್ದ ಭಾರತೀಯ ಮಾಡೆಲ್‍ಗೆ ಸಿಕ್ತು ಆಸ್ಪತ್ರೆಯಲ್ಲಿ ಕಿರೀಟ

    ಮಿಸ್ ವರ್ಲ್ಡ್ ಅಮೆರಿಕ – ಫಿನಾಲೆಯಲ್ಲಿ ಕುಸಿದು ಬಿದ್ದ ಭಾರತೀಯ ಮಾಡೆಲ್‍ಗೆ ಸಿಕ್ತು ಆಸ್ಪತ್ರೆಯಲ್ಲಿ ಕಿರೀಟ

    ವಾಷಿಂಗ್ಟನ್: ಮಿಸ್ ವರ್ಲ್ಡ್ ಅಮೆರಿಕ 2019 ಫಿನಾಲೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಮೂಲದ ಮಾಡೆಲ್‍ಗೆ ಆಯೋಜಕರು ಆಸ್ಪತ್ರೆಗೆ ಹೋಗಿ ಕಿರೀಟ ನೀಡಿದ್ದಾರೆ.

    ಭಾರತೀಯ ಮೂಲದ ಶ್ರೀ ಸೈನಿ ಮಂಗಳವಾರ ಸಂಜೆ ಗೌನ್ ರೌಂಡ್‍ನಲ್ಲಿ ಭಾಗವಹಿಸುವ ಮೊದಲು ಕುಸಿದು ಬಿದ್ದಿದ್ದರು. ಪರಿಣಾಮ ಅವರ ಕಾಲಿಗೆ ಗಂಭೀರವಾಗಿ ಗಾಯಗಳಾಗಿತ್ತು. ಬಳಿಕ ಸೈನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಸೈನಿ ಕುಸಿದು ಬಿದ್ದ ನಂತರ ಅವರ ತಾಯಿ ಏಕ್ತಾ, ಮಗಳ ಇನ್‍ಸ್ಟಾಗ್ರಾಂನಲ್ಲಿ ನಾವು ಆಸ್ಪತ್ರೆಯಲ್ಲಿ ರಾತ್ರಿ 9 ಗಂಟೆಯಿಂದ ಇದ್ದೇವೆ. ವೈದ್ಯರು ಸೈನಿಗೆ ಬೇರೆ ಬೇರೆ ಸ್ಕ್ಯಾನಿಂಗ್‍ಗಳನ್ನು ಮಾಡುತ್ತಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದರು.

    ಸೈನಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಪರ್ಧೆಯಲ್ಲಿ ಆಕೆ ಗೆದ್ದಿದ್ದ ಐದು ಪ್ರಶಸ್ತಿಗಳನ್ನು ಮಿಸ್ ವರ್ಲ್ಡ್ ಅಮೆರಿಕ ಆಯೋಜಕರು ಆಸ್ಪತ್ರೆಗೆ ಭೇಟಿ ನೀಡಿ ಪುರಸ್ಕರಿಸಿದ್ದಾರೆ. ಸೈನಿ ‘ಬ್ಯುಟಿ ವಿತ್ ಎ ಪರ್ಪಸ್ ಅವಾರ್ಡ್’, ‘ಟಾಪ್ ಇನ್‍ಫ್ಲೂಯೆನ್ಸರ್ ಅವಾರ್ಡ್, ‘ಎಂಟರ್ ಪ್ರೆನ್ಯೂರ್ ಚಾಲೆಂಜ್ ಅವಾರ್ಡ್’, ಮೊದಲನೇ ರನ್ನರಪ್ ಟ್ಯಾಲೆಂಟ್ ಅವಾರ್ಡ್, ಹಾಗೂ ‘ಮೊದಲನೇ ರನ್ನರಪ್ ಟಾಪ್ ಮಾಡೆಲ್ ಅವಾರ್ಡ್’ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕಿರೀಟ ಪಡೆಯುತ್ತಿರುವ ಫೋಟೋವನ್ನು ಶೈನಿ ಅಪ್ಲೋಡ್ ಮಾಡಿ ಅದಕ್ಕೆ, ನನ್ನ ಸಹಸ್ಪರ್ಧಿಗಳಿಗೆ ಹಾಗೂ ಅಂಬುಲೆನ್ಸ್ ಕರೆಸಿ ನನ್ನ ಜೀವ ಉಳಿಸಿದವರಿಗೆ ಧನ್ಯವಾದಗಳು. ನಾನು ಆಕಸ್ಮಿಕವಾಗಿ ಏಕೆ ಕುಸಿದು ಬಿದ್ದೆ ಎಂದು ಕಂಡುಹಿಡಿಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಸ್ಪರ್ಧೆಗಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನನ್ನನ್ನು ಹೇಗೆ ಸಿದ್ಧಪಡಿಸಬೇಕೆಂಬುದು ನನಗೆ ತಿಳಿಯಿತು. ಇನ್‍ಸ್ಟಾದಲ್ಲಿ ಶುಭಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

  • ಅಂತರಾಷ್ಟ್ರೀಯ ಮಾಡೆಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕಲಬುರಗಿಯ ಬಾಲಕಿ

    ಅಂತರಾಷ್ಟ್ರೀಯ ಮಾಡೆಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕಲಬುರಗಿಯ ಬಾಲಕಿ

    ಕಲಬುರಗಿ: ಬಿಸಿಲು ನಾಡು ಕಲಬುರಗಿಯ ಬಾಲಕಿ ಮಾಡಲಿಂಗ್ ಮೂಲಕ ದೇಶದ ಗಮನ ಸೆಳೆದಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ಹಾಂಕಾಂಗ್‍ನಲ್ಲಿ ಇತ್ತೀಚೆಗೆ ನಡೆದ ಜೂನಿಯರ್ ಇಂಟರ್ ನ್ಯಾಷನಲ್ ಮಾಡೆಲ್ ಸ್ಪರ್ಧೆಯಲ್ಲಿ, ಕಲಬುರಗಿಯ ಅನನ್ಯ ರೈ ಚಿನ್ನದ ಪದಕ ಗಳಿಸಿದ್ದಾಳೆ. ಭಾರತದ ಪರ ಜೂನಿಯರ್ ಮಾಡೆಲಿಂಗ್‍ನಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಿಂದ ಆಯ್ಕೆಯಾದ ಮಾಡೆಲ್ ಅನನ್ಯ ಆಗಿದ್ದಾಳೆ. ದೇಶದಲ್ಲಿ ಮಿಂಚಿದ್ದ ಅನನ್ಯ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರತಿಭೆಯನ್ನು ಅನಾವರಣಗೊಳಿಸಿ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.

    ಅನನ್ಯ ತಮ್ಮ ತಂದೆ-ತಾಯಿಯ ಏಕೈಕ ಪುತ್ರಿ. ಅನನ್ಯಳ ತಂದೆ ಹೋಟೆಲ್ ಉದ್ಯಮಿ ಆಗಿದ್ದು, ತಾಯಿ ರೂಪಾಕ್ಷಿ ಅವರು ಕಲಬುರಗಿಯ ಜೆಸ್ಕಾಂ ಇಲಾಖೆಯಲ್ಲಿ ಜೆಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನನ್ಯ ಹೈದರಾಬಾದ್‍ನ ನರ್ಸರಿ ಶಾಲೆಯಲ್ಲಿ ಕ್ಯಾಟ್‍ವಾಕ್ ಮಾಡಿ ಬಹುಮಾನ ಗೆದಿದ್ದಳು. ಬಳಿಕ ಅನನ್ಯ ಮಾಡೆಲ್ ಆಗಬೇಕೆಂಬ ಆಸೆಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು.

    ಹೈದರಾಬಾದ್‍ನ ಚೈತನ್ಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅನನ್ಯ 9ನೇ ತರಗತಿ ಓದುತ್ತಿದ್ದಾಳೆ. ಏಪ್ರಿಲ್ 27ರಿಂದ 29ರವರೆಗೆ ಕೇರಳದ ಕ್ಯಾಲಿಕಟ್‍ನಲ್ಲಿ ಜ್ಯೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಅನ್ಯನ ಪ್ರದರ್ಶನ ನೀಡಿ ಹಾಂಕಾಂಗ್‍ನಲ್ಲಿ ನಡೆದ ಸ್ಪರ್ಧಕ್ಕೆ ಆಯ್ಕೆ ಆಗಿದ್ದಳು.

    ಅನನ್ಯ ತಾಯಿ ಸುಮಿತ್ರ ರೈ ಅವರು ತಮ್ಮ ಮಗಳ ಡಯಟ್ ಬಗ್ಗೆ ನಿರ್ಧರಿಸುತ್ತಾರೆ. ಆರೋಗ್ಯ ಮತ್ತು ಸೌಂದರ್ಯವನ್ನು ನೋಡಿಕೊಳ್ಳುವ ಸಲುವಾಗಿ ಅನನ್ಯ ಜಂಕ್ ಫುಡ್ ತಿನ್ನುವುದಿಲ್ಲ. ಸದ್ಯ ಅನನ್ಯ ಈಗ ಲೀ ಬ್ರಾಂಡ್ ಜೀನ್ಸ್ ಹಾಗೂ ಅರುಣ್ ಐಸ್‍ಕ್ರೀಂ ಜಾಹೀರಾತಿಗೆ ಆಯ್ಕೆ ಆಗಿದ್ದಾಳೆ.

  • ಪ್ರವಾಹಕ್ಕೆ ಸೆಡ್ಡು ಹೊಡೆದು ಬೆಳ್ಳಿ ಪದಕ ಗೆದ್ದ ಯುವಕ

    ಪ್ರವಾಹಕ್ಕೆ ಸೆಡ್ಡು ಹೊಡೆದು ಬೆಳ್ಳಿ ಪದಕ ಗೆದ್ದ ಯುವಕ

    ಬೆಂಗಳೂರು: ರಣಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಇಂತಹ ಪ್ರವಾಹದ ಸ್ಥಿತಿಯಲ್ಲಿ ಬೆಳಗಾವಿಯ ಯುವಕನೊಬ್ಬ ಪ್ರವಾಹಕ್ಕೆ ಸೆಡ್ಡು ಹೊಡೆದು ತನ್ನ ಸಾಧನೆಯನ್ನು ಮಾಡಿದ್ದಾರೆ. ಪ್ರವಾಹಕ್ಕೆ ಸೆಡ್ಡು ಹೊಡೆದು ಯುವಕ ಬೆಳ್ಳಿ ಪದಕ ಗೆದಿದ್ದಾರೆ.

    19 ವರ್ಷದ ಯುವಕ ನಿಶಾನ್ ಮೂಲತಃ ಬೆಳಗಾವಿ ಜಿಲ್ಲೆಯ ಮಣ್ಣೂರು ಗ್ರಾಮದವರು. ಕಳೆದ ಎರಡು ವರ್ಷಗಳಿಂದ ಬೆಳಗಾವಿಯ ಎಂ.ಜಿ ಅಕಾಡೆಮಿ ಫಾರ್ ಸ್ಪೋರ್ಟ್ಸ್ ನಲ್ಲಿ ಬಾಕ್ಸಿಂಗ್ ಟ್ರೈನಿಂಗ್ ಪಡೆಯುತ್ತಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನಲ್ಲಿ ನ್ಯಾಷನಲ್ ಲೆವೆಲ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ ಇತ್ತು. ಆದರೆ ಸ್ವಗ್ರಾಮ ಮಣ್ಣೂರಿನಿಂದ ಬೆಳಗಾವಿಗೆ ಬರುವ ರಸ್ತೆಗಳೆಲ್ಲ ಪ್ರವಾಹದಿಂದ ಜಲಾವೃತಗೊಂಡು ರಸ್ತೆಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು.

    ಇಷ್ಟು ವರ್ಷ ಅಭ್ಯಾಸ ಮಾಡಿದ್ದು, ಮೊದಲ ಬಾರಿಗೆ ನ್ಯಾಷನಲ್ ಲೆವೆಲಿನಲ್ಲಿ ಬಾಕ್ಸಿಂಗ್ ಮಾಡುವ ಅವಕಾಶವನ್ನು ಕಳೆದುಕೊಂಡರೆ ಹೇಗೆ ಎನ್ನುವ ಭಯ ನಿಶಾನ್‍ಗೆ ಶುರುವಾಯಿತು. ಒಂದು ಕ್ಷಣವೂ ಹಿಂದು ಮುಂದು ನೋಡದೆ ನಿಶಾನ್ ಲಗ್ಗೆಜ್ ಸಮೇತ ಪ್ರವಾಹದ ನೀರಿನಲ್ಲೇ ಈಜಿಕೊಂಡು ಬೆಳಗಾವಿ ಸೇರಲು ನಿರ್ಧಾರ ಮಾಡಿದ್ದರು. ನಿಶಾನ್‍ನ ಪರಿಶ್ರಮವನ್ನು ನೋಡಿದ್ದ ತಂದೆ ಮನೋಹರ್ ನಾನು ನಿನ್ನ ಜೊತೆ ಬೆಳಗಾವಿಗೆ ಬರುತ್ತೇನೆ ಎಂದು ಮಗನಿಗೆ ಸಾಥ್ ನೀಡಿದರು.

    ಮಣ್ಣೂರಿನಿಂದ ಬೆಳಗಾವಿಗೆ 2.5 ಕಿಮಿ ಅಂತರವಿದ್ದು ಮಳೆಯ ರಣಭೀಕರ ಪ್ರವಾಹದ ನೀರಿನಲ್ಲೇ ಸತತ 45 ನಿಮಿಷ ಈಜಿಕೊಂಡು ಬೆಳಗಾವಿ ತಲುಪಿ ಅಲ್ಲಿಂದ ಬೆಂಗಳೂರಿಗೆ ರೈಲಿನ ಮೂಲಕ ನಿಶಾನ್ ಬಂದಿದ್ದರು. ಪ್ರವಾಹವನ್ನೇ ಲೆಕ್ಕಿಸದ ಛಲಗಾರ ಬಾಕ್ಸರ್ ನಿಶಾನ್ ಲೈಟ್ ಪ್ಲೈ ವೇಟ್ ವಿಭಾಗದಲ್ಲಿ ಫೈನಲ್ ತಲುಪಿ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ಭಾರತದ ಪ್ರತಿನಿಧಿಯಾಗಿ ಬಾಕ್ಸಿಂಗ್‍ನಲ್ಲಿ ಹೆಸರು ಮಾಡಬೇಕು ಎನ್ನುವ ಆಸೆ ಇದೆ ಎಂದು ನಿಶಾನ್ ವ್ಯಕ್ತಪಡಿಸಿದ್ದಾರೆ.

  • 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಗೆದ್ದ 6ರ ಪೋರ

    3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್‌ಮೆಂಟ್‌ ಗೆದ್ದ 6ರ ಪೋರ

    ಮಾಸ್ಕೋ: ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪುಶ್ ಅಪ್ಸ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗಿ ಶಕ್ತಿಯುತವಾಗುತ್ತೆ. ಆದರೆ ರಷ್ಯಾದಲ್ಲಿ 6 ವರ್ಷದ ಬಾಲಕನೊಬ್ಬ ಬ್ರೇಕ್ ಕೊಡದೆ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನ ತನ್ನದಾಗಿಸಿಕೊಂಡಿದ್ದಾನೆ.

    ಹೌದು. ಏನಪ್ಪ 6 ವರ್ಷದ ಪುಟಾಣಿ ಹುಡುಗ 3 ಸಾವಿರ ಪುಶ್ ಅಪ್ಸ್ ಮಾಡಿದ್ದಾನಾ ಅಂತ ಶಾಕ್ ಆಗೋದು ಸಾಮಾನ್ಯ. ಆದರೆ ಆಶ್ಚರ್ಯ ಎನಿಸಿದರು ಇದು ಸತ್ಯ. ರಷ್ಯಾದ ನೋವಿ ರೆದಾಂತ್ ನಿವಾಸಿ ಇಬ್ರಾಹಿಂ ಲ್ಯೋನೋವ್(6) ಬಿಡುವಿಲ್ಲದೇ ಬರೋಬ್ಬರಿ 3,270 ಪುಶ್ ಅಪ್ಸ್ ಮಾಡಿ, ಐಷಾರಾಮಿ  ಅಪಾರ್ಟ್‌ಮೆಂಟ್‌  ಗಳಿಸಿದ್ದಾನೆ. ಸದ್ಯ ಬಾಲಕ ಬ್ರೇಕ್ ಫ್ರೀ ಪುಶ್ ಅಪ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಬಾಲಕನ ಫಿಟ್ನೆಸ್ ಗೆ ಫಿದಾ ಆಗಿಬಿಟ್ಟಿದ್ದಾರೆ.

    ಇಬ್ರಾಹಿಂ ಹಾಗೂ ಆತನ ತಂದೆ ಇಬ್ಬರೂ ಕ್ರೀಡಾ ಕ್ಲಬ್‍ನ ಸದಸ್ಯರಾಗಿದ್ದು, ಈ ಪುಶ್ ಅಪ್ಸ್ ಸ್ಪರ್ಧೆಗಾಗಿಯೇ ಬಹಳಷ್ಟು ಶ್ರಮಿಸಿದ್ದರು ಎನ್ನಲಾಗಿದೆ. ಇಬ್ರಾಹಿಂ ಲ್ಯೋನೋವ್ ತನಗೆ ಬಂದಿದ್ದ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸತತ 3,270 ಪುಶ್ ಅಪ್ಸ್ ಮಾಡಿ ತನ್ನ ಫಿಟ್ನೆಸ್ ನಿಂದಲೇ ಸ್ಥಳೀಯ ಕ್ರೀಡಾ ಸಂಸ್ಥೆಯ ಗಮನ ಸೆಳೆದಿದ್ದಾನೆ. ಬಾಲಕನ ಫಿಟ್ನೆಸ್ ಕಂಡು ಆಶ್ಚರ್ಯಪಟ್ಟ ಕ್ರೀಡಾ ಸಂಸ್ಥೆ ಇಬ್ರಾಹಿಂಗೆ ದೊಡ್ಡ ಐಶಾರಾಮಿ  ಅಪಾರ್ಟ್‌ಮೆಂಟ್‌  ಒಂದನ್ನು ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದೆ.

    ಚಿಕ್ಕ ವಯಸ್ಸಿನಲ್ಲೆ ಈ ರೀತಿ ಅಸಾಮಾನ್ಯ ಸಾಧನೆ ಮಾಡಿರುವ ಬಾಲಕನ ರಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲೆ ನಿರ್ಮಿಸಿದ್ದಾನೆ. ಇನ್ನೂ ಆಚ್ಚರಿಯ ಸಂಗತಿ ಏನೆಂದರೆ ಕೇವಲ ಇಬ್ರಾಹಿಂ ಮಾತ್ರವಲ್ಲ ಇಲ್ಲಿನ ಹಲವು ಮಕ್ಕಳು ಈ ರೀತಿ ಪುಶ್ ಅಪ್ಸ್ ಸ್ಪರ್ಧೆಯಲ್ಲಿ ಗೆದ್ದು ಐಶಾರಾಮಿ ಉಡುಗೊರೆಯನ್ನು ಪಡೆದಿದ್ದಾರೆ.

    2018ರಲ್ಲಿ 5 ವರ್ಷದ ಬಾಲಕನೊಬ್ಬ ಬರೋಬ್ಬರಿ 4,150 ಪುಶ್ ಅಪ್ಸ್ ಮಾಡುವ ಮೂಲಕ ಮರ್ಸಿಡೀಸ್ ಕಾರನ್ನು ಗೆದ್ದಿದ್ದನು. ಈ ವೇಳೆ ರಷ್ಯಾದ ಪ್ರಧಾನಿ ಅವರು ಬಾಲಕನಿಗೆ ಈ ಕಾರಿನ ಕೀಯನ್ನು ಹಸ್ತಾಂತರಿಸಿದ್ದರು.