ಬೆಂಗಳೂರು: ಚಿಂತಾಮಣಿ ತಾಲೂಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ ವಿಷಯ ತಿಳಿದು ಸಿಎಂ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಸಿಎಂ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇತ್ತ ಚಿಂತಾಮಣಿ ಶಾಸಕ ಹಾಗೂ ವಿಧಾನಸಭಾ ಉಪಾಧ್ಯಕ್ಷ ಜೆ.ಕೆ ಕೃಷ್ಣಾರೆಡ್ಡಿ ಅವರು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ತಲಾ 25 ಸಾವಿರ ರೂ. ಹಾಗೂ ಗಾಯಾಳುಗಳಿಗೆ 5 ಸಾವಿರ ರೂ. ಪರಿಹಾರ ಧನ ವಿತರಣೆ ಮಾಡಿದ್ದಾರೆ.
ಚಿಂತಾಮಣಿ ತಾಲ್ಲೂಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 12 ಮಂದಿ ಮೃತಪಟ್ಟಿರುವ ವಿಷಯ ತಿಳಿದು ಮುಖ್ಯಮಂತ್ರಿಗಳು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಅಪಘಾತ ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿರುವ ಮುಖ್ಯಮಂತ್ರಿಗಳು ಅಪಘಾತದಿಂದ ಮೃತ ಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.
— CM of Karnataka (@CMofKarnataka) July 3, 2019
ಮೃತ 12 ಮಂದಿಯಲ್ಲಿ 9 ಮಂದಿ ಮೃತರ ಗುರುತು ಪತ್ತೆಯಾಗಿದ್ದು, ಟಾಟಾ ಮ್ಯಾಜಿಕ್ ಚಾಲಕ ಶಾಬಾಜ್ (19), ಬೈನಹಳ್ಳಿಯ ವೆಂಕಟರಮಣಪ್ಪ (55), ಚಲಮಕೋಟೆ ಗ್ರಾಮದ ಕಿಟ್ಟಣ್ಣ(50), ದಂಡುಪಾಳ್ಯ ನಾರಾಯಣಸ್ವಾಮಿ (63), ಕೋನಪ್ಪಲ್ಲಿಯ ತಿಮ್ಮಯ್ಯ (56), ತಮಿಳುನಾಡು ಮೂಲದವರಾದ ಸಿದ್ದೀಕ್ (40), ರಂಜಿನ (35), ಗುರ್ರವಾರಂಪಲ್ಲಿಯ ಕುಮಾರ್ ಹಾಗೂ ಮುರುಗಮಲ್ಲ ಸುರೇಶ್(40) ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಗಿದ್ದೇನು?:
ಹಿಂದೂ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವಾದ ಮುರುಗಮಲ್ಲದಿಂದ ಖಾಸಗಿ ಬಸ್ ಚಿಂತಾಮಣಿ ಕಡೆಗೆ ಆಗಮಿಸುತ್ತಿತ್ತು. ಚಿಂತಾಮಣಿ ಕಡೆಯಿಂದ ಮುರಗಮಲ್ಲದ ಕಡೆಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಮ್ಯಾಜಿಕ್ ಮುರುಗಮಲ್ಲದ ಕಡೆಗೆ ಸಾಗುತ್ತಿತ್ತು. ಈ ವೇಳೆ ಮುರಗಮಲ್ಲ ಸಮೀಪದಲ್ಲಿ ಖಾಸಗಿ ಬಸ್ ಹಾಗೂ ಟಾಟಾ ಮ್ಯಾಜಿಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಟಾಟಾ ಮ್ಯಾಜಿಕ್‍ನಲ್ಲಿದ್ದ 12 ಮಂದಿ ಮೃತಪಟ್ಟಿದ್ದಾರೆ.
ಖಾಸಗಿ ಬಸ್‍ನಲ್ಲಿದ್ದ 8 ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ಖಾಸಗಿ ಬಸ್ ಚಾಲಕನ ಅತಿವೇಗ, ಅಜಾಗೂರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.





















