Tag: compaign

  • ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್

    ಸ್ವತಂತ್ರ ಭಾರತದ ಮೊದಲ ಉಗ್ರ `ಹಿಂದೂ’: ಕಮಲ್ ಹಾಸನ್

    ಚೆನ್ನೈ: ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ `ಹಿಂದೂ’ ಆಗಿದ್ದ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಮೇ 19ರಂದು ಅರವಕುರುಚ್ಚಿ ವಿಧಾನಸಭಾ ಉಪಚುನಾವಣೆ ನಡೆಯಲಿದ್ದು, ಮಕ್ಕಳ್ ನೀದಿಮೈಯ್ಯಂ ಪಕ್ಷದ ಪರವಾಗಿ ಉಪಚುನಾವಣೆ ರ‍್ಯಾಲಿಯಲ್ಲಿ ಭಾಗಿಯಾಗಿ ಈ ಹೇಳಿಕೆ ನೀಡಿದ್ದಾರೆ. ಅರವಕುರುಚ್ಚಿ ವಿಧಾನಸಭಾ ಉಪಚುನಾವಣೆಗೆ ತಮ್ಮ ಎಂಎನ್‍ಎಂ ಪಕ್ಷದ ಅಭ್ಯರ್ಥಿಯ ಪ್ರಚಾರದ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ವಿವಾದವನ್ನು ಸೃಷ್ಟಿಸಿದ್ದಾರೆ.

    ಮುಸ್ಲಿಂ ಪ್ರಾಬಲ್ಯ ಹೊಂದಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಮಾತು ಹೇಳುತ್ತಿಲ್ಲ. ಗಾಂಧಿ ಪ್ರತಿಮೆಯ ಮುಂದೆ ನಿಂತು ಈ ಮಾತು ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಆಗಿದ್ದನು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು ಹೇಳಿದ್ದಾರೆ.

    ತಮಿಳುನಾಡಿನಲ್ಲಿ ಬಾಬ್ರಿ ಮಸೀದ್ ಬಗ್ಗೆ ಮೊದಲು ಧ್ವನಿ ಎತ್ತಿದ್ದು ನಾನು. ಅಲ್ಲದೆ ಒಳ್ಳೆಯ ಹೃದಯವಿರುವ ಮುಸಲ್ಮಾನರು ಎಂದಿಗೂ ಭಯೋತ್ಪಾದನೆಗೆ ಬೆಂಬಲ ನೀಡಲ್ಲ. ಈ ಬಗ್ಗೆ ಅವರು ಅವರ ಶ್ರೇಷ್ಠ ಗ್ರಂಥವನ್ನು ಮುಟ್ಟಿ ಹೇಳುತ್ತಾರೆ. ತ್ರಿವರ್ಣ ಧ್ವಜವೇ ಎಲ್ಲಕ್ಕಿಂತ ಶ್ರೇಷ್ಠವಾದದ್ದು. ಆದರೆ ತ್ರಿವರ್ಣದಲ್ಲಿ ಕೇವಲ ಒಂದು ಬಣ್ಣ ಉಳಿದ ಬಣ್ಣಗಳ ಮೇಲೆ ತನ್ನ ಹಿಡಿತವನ್ನು ಸಾಧಿಸುವಂತೆ ಆಗಬಾರದು. ಒಂದು ವೇಳೆ ಈ ರೀತಿಯಾದಲ್ಲಿ ನಾವು ಅದನ್ನು ತಡೆಯಬೇಕು. ದೇಶವನ್ನು ಒಡೆಯಲು ಪ್ರಯತ್ನಿಸುವ ಗುಂಪನ್ನು ಅಥವಾ ವ್ಯಕ್ತಿಯನ್ನು ಅಧಿಕಾರದಿಂದ ಇಳಿಸಬೇಕು ಎಂದರು.

    ಕಮಲ್‍ಹಾಸನ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ 40 ಮಂದಿ ಸಿಆರ್ ಪಿಎಫ್ ಯೋಧರು ಹುತಾತ್ಮರಾದಾಗ ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ, ಅಲ್ಲಿ ಜನಮತಗಣನೆ ನಡೆಯಲಿ ಎಂದು ಆಗ್ರಹಿಸುವ ಮೂಲಕ ವಿವಾದ ಸೃಷ್ಟಿಸಿದ್ದರು. ಬಳಿಕ ಎಲ್ಲ ರಾಜಕಾರಣಿಗಳಂತೆ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು.

  • ಮಗನನ್ನ ಎಂಪಿ ಮಾಡುವ ಬದಲು ಸೈನಿಕ ಆಗು ಎನ್ನಬೇಕಿತ್ತು: ಸಿಎಂ ವಿರುದ್ಧ ಸುಮಲತಾ ಗರಂ

    ಮಗನನ್ನ ಎಂಪಿ ಮಾಡುವ ಬದಲು ಸೈನಿಕ ಆಗು ಎನ್ನಬೇಕಿತ್ತು: ಸಿಎಂ ವಿರುದ್ಧ ಸುಮಲತಾ ಗರಂ

    ಮಂಡ್ಯ: ನಮ್ಮ ದೇಶ ಕಾಯುವ ವೀರ ಯೋಧರು ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಅಂತ ಹೇಳಿಕೆ ನೀಡಿ ಬಳಿಕ ನಾನು ಆ ಅರ್ಥದಲ್ಲಿ ಹೇಳಿಲ್ಲ, ನಾನು ದೇಶಭಕ್ತ ಅಂತ ಸಿಎಂ ಹೇಳ್ತಾರೆ. ಅವರಿಗೆ ಅಷ್ಟೊಂದು ದೇಶಭಕ್ತಿ ಇದ್ದಿದ್ದರೆ ಮಗನನ್ನು ಎಂಪಿ ಮಾಡೋ ಬದಲು ಸೈನಿಕ ಆಗು ಎನ್ನಬೇಕಿತ್ತು ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಮಂಡ್ಯದ ಹಲಗೂರಿನಲ್ಲಿ ಪ್ರಚಾರ ನಡೆಸುತ್ತಾ ಜನರನ್ನುದ್ದೇಶಿಸಿ ಮಾತನಾಡಿ, ನಡೆಯುತ್ತಿರುವ ಚುನಾವಣೆ ಇತಿಹಾಸ ಎನ್ನಬಹುದು. ಆದ್ರೆ ಒಳ್ಳೆ ವಿಚಾರಕ್ಕೆ ಇದು ಇತಿಹಾಸವಲ್ಲ. ಬೇರೆ ಬೇರೆ ರೀತಿಯ ಇತಿಹಾಸವನ್ನ ಇಲ್ಲಿ ನೋಡ್ತಿದ್ದೀವಿ. ಹೆಣ್ಣಮಕ್ಕಳ ಬಗ್ಗೆ ನಮ್ಮ ವಿರೋಧವಿರುವ ಪಕ್ಷದವರು ಆಡಿದ ಕೀಳು ಮಾತುಗಳನ್ನ ನೋಡ್ತಿದ್ದೀವಿ. ಕಳೆದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ರೈತರ ಬಗ್ಗೆ ಕಾಳಜಿಯಿಲ್ಲದೆ ಬರಿ ಸುಳ್ಳು ಆಶ್ವಾಸನೆ ನೀಡಿದ್ದಾರೆ. ನಮ್ಮ ದೇಶ ಕಾಯುವ ಯೋಧರು ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದವರು ಅಂತ ಸಿಎಂ ಹೇಳಿದ್ದಾರೆ. ಬಳಿಕ ತಾವು ಆ ಅರ್ಥದಲ್ಲಿ ಮಾತನಾಡಿಲ್ಲ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ. ತಾವೂ ದೇಶಭಕ್ತ ಅನ್ನುವ ಅವರು ತಮ್ಮ ಮಗನನ್ನು ಎಂಪಿ ಮಾಡುವ ಬದಲು ಸೈನಿಕ ಆಗು ಅಂತ ಹೇಳಬೇಕಿತ್ತು ಎಂದು ಟಾಂಗ್ ಕೊಟ್ಟರು.

    ಮುಖ್ಯಮಂತ್ರಿಗಳ ಬಾಯಲ್ಲಿ ತುಚ್ಛವಾದ ಮಾತುಗಳು ಬರುತ್ತಿದೆ. ಯಾರ ಬಗ್ಗೆ ಇವರಿಗೆ ಗೌರವವಿದೆ? ಮಹಿಳೆಯರ ಬಗ್ಗೆ ಗೌರವವಿಲ್ಲ, ರೈತರ ಬಗ್ಗೆ ಕಾಳಜಿಯಿಲ್ಲ, ಯೋಧರ ಬಗ್ಗೆ ಲಘುವಾದ ಮಾತುಗಳನ್ನು ಆಡುತ್ತಾರೆ. ಯೋಧರ ಬಗ್ಗೆ ಸಮಾಜದಲ್ಲಿ ಎಂಥ ಗೌರವವಿದೆ, ಇವರಿಗೇನಾದ್ರು ಗೊತ್ತಿದ್ಯ? ಒಬ್ಬಳೇ ಒಬ್ಬಳು ಹೆಣ್ಣು ಮಗಳು ಇಡೀ ವ್ಯವಸ್ಥೆಯನ್ನ ಎದುರು ಹಾಕಿಕೊಂಡು ನಿಂತಿದ್ದೀನಿ. ನನಗೊಂದು ಅವಕಾಶ ಕೊಡಿ, ಜನರಿಗಾಗಿ ಕೆಲಸ ಮಾಡುತ್ತೇನೆ ಅಂತ ಮತದಾರರಲ್ಲಿ ಮನವಿ ಮಾಡಿಕೊಂಡರು.

  • ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ದರ್ಶನ್ ಪ್ರಚಾರ

    ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ದರ್ಶನ್ ಪ್ರಚಾರ

    ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕಿಳಿದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವತಃ ತಾವೇ ಬೈಕ್ ಓಡಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಇಂದು ಮಳವಳ್ಳಿ ತಾಲೂಕಿನಲ್ಲಿ ಡಿ ಬಾಸ್ ಸುಮಲತಾ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ರಾಮಂದೂರು ಗ್ರಾಮಕ್ಕೆ ತೆರಳಿದ್ದು, ಅವರ ಅಭಿಮಾನಿಗಳು ಪ್ರೀತಿಯಿಂದ ದರ್ಶನ್‍ರನ್ನು ಸ್ವಾಗತಿಸಿ ಬೈಕ್ ಓಡಿಸುವಂತೆ ಕೋರಿದ್ದಾರೆ. ಆದ್ದರಿಂದ ಫ್ಯಾನ್ಸ್ ಬಲವಂತಕ್ಕೆ ಮನಸೋತ ದಚ್ಚು ಸ್ವತಃ ತಾವೇ ಬೈಕ್ ಓಡಿಸಿ ಅವರನ್ನು ಖುಷಿಪಡಿಸಿದರು.

    ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್‍ನಲ್ಲಿ ಹಿಂದೆ ಒಬ್ಬ ಅಭಿಮಾನಿಯನ್ನು ಕೂರಿಸಿಕೊಂಡು, ದರ್ಶನ್ ಊರೊಳಗೆ ಒಂದು ರೌಂಡ್ ಹೋಗಿ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಕೂಡ ಡಿ ಬಾಸ್‍ಗೆ ಸಾಥ್ ನೀಡಿದ್ದು, ಅವರ ಬೈಕ್ ಹಿಂದೆಯೇ ತಾವು ಹೋಗಿ ಅಭಿಮಾನ ಮೆರೆದರು.

    ಗುರುವಾರದಂದು ಕೆಆರ್ ಪೇಟೆ ಸೋಮನಹಳ್ಳಿಯಲ್ಲಿ ಪ್ರಚಾರಕ್ಕೆ ತೆರಳಿದ್ದ ವೇಳೆ ಅಭಿಮಾನಿ ಚಂದ್ರು ಅವರ ಮನೆಗೆ ಡಿ ಬಾಸ್‍ ಆಗಮಿಸಿದ್ದರು. ಆಗ ಅಲ್ಲಿದ್ದ ಹಸುವಿನ ಹಾಲು ಕರೆದು ಅಭಿಮಾನಿಗಳ ಮನ ಗೆದ್ದಿದ್ದರು. ಈಗ ಅಭಿಮಾನಿಗಳಿಗಾಗಿ ಬೈಕ್ ರೈಡ್ ಮಾಡಿ ಮತ್ತೊಮ್ಮೆ ದಚ್ಚು ಎಲ್ಲರ ಗಮನ ಸೆಳೆದಿದ್ದಾರೆ.

  • ವಯನಾಡಿನಲ್ಲಿ ಪದ್ಮಾವತಿ ಹವಾ – ರಾಹುಲ್ ಗೆಲುವಿಗೆ ಸಾರಥಿಯಾಗಿ ನಿಂತ ರಮ್ಯಾ!

    ವಯನಾಡಿನಲ್ಲಿ ಪದ್ಮಾವತಿ ಹವಾ – ರಾಹುಲ್ ಗೆಲುವಿಗೆ ಸಾರಥಿಯಾಗಿ ನಿಂತ ರಮ್ಯಾ!

    ಬೆಂಗಳೂರು: ರಾಜ್ಯದಲ್ಲಿ ಯಾವೊಬ್ಬ ಕಾಂಗ್ರೆಸ್ ಅಭ್ಯರ್ಥಿ ಪರವೂ ಪ್ರಚಾರಕ್ಕೆ ಬಾರದ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರು, ಸದ್ಯ ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರ ಪ್ರಚಾರ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

    ಮಂಡ್ಯದ ಮಾಜಿ ಸಂಸದೆ, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದ ರಮ್ಯಾ 2018ರ ವಿಧಾನಸಭಾ ಚುನಾವಣೆಯ ವೇಳೆ ಪ್ರಚಾರಕ್ಕೆ ಬಂದಿರಲಿಲ್ಲ. ಹೀಗಾಗಿ ಈ ಬಾರಿ ಪ್ರಚಾರಕ್ಕೆ ಬರುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಚುನಾವಣೆಯ ದಿನಾಂಕ ಹತ್ತಿರ ಬಂದರೂ ರಮ್ಯಾ ಮಾತ್ರ ರಾಜ್ಯದ ಕಡೆ ತಲೆ ಹಾಕಿಲ್ಲ. ಹೀಗಾಗಿ ರಮ್ಯಾ ಈಗ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ರಮ್ಯಾ ಈಗ ಕೇರಳದಲ್ಲಿ ರಾಹುಲ್ ಪರ ಪ್ರಚಾರ ನಡೆಸುತ್ತಿದ್ದಾರೆ.

    ರಮ್ಯಾ ಈಗ ವಯನಾಡಿನಲ್ಲಿ ಸೋಷಿಯಲ್ ಮೀಡಿಯಾ ಟೀಮ್ ಜೊತೆ ಫುಲ್ ಬ್ಯುಸಿಯಾಗಿದ್ದಾರೆ. ಲೋಕಸಭಾ ಚುನಾವಣೆಗೆ ವಯನಾಡಿನಿಂದ ರಾಹುಲ್ ಗಾಂಧಿ ಅವರು ಸ್ಪರ್ಧಿಸುತ್ತಿರುವ ಹಿನ್ನೆಲೆ ರಾಹುಲ್ ಗೆಲುವಿಗೆ ಸಾರಥಿಯಾಗಿ ಸದ್ಯ ರಮ್ಯಾ ಅವರು ನಿಂತಿದ್ದಾರೆ.

    ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಟೀಂ ಜೊತೆ ವಯನಾಡಿನಲ್ಲಿ ಠಿಕಾಣಿ ಹೂಡಿರುವ ರಮ್ಯಾ, ಟೀಂ ಜೊತೆ ಮೀಟಿಂಗ್ ಮೇಲೆ ಮೀಟಿಂಗ್, ಚರ್ಚೆ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಲೋಕಸಮರದ ಹಿನ್ನೆಲೆ ವಯನಾಡಿನಲ್ಲಿ ರಾಹುಲ್ ಅಲೆ ಎಬ್ಬಿಸಲು ರಮ್ಯಾ ಸಜ್ಜಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಾರ್ಚ್ 18 ರಂದು ಬೆಂಗಳೂರಿನ ನವ ಉದ್ಯಮಿಗಳ ಜೊತೆ ಮಾನ್ಯತಾ ಟೆಕ್ ಪಾರ್ಕಿನಲ್ಲಿ ರಾಹುಲ್ ಜೊತೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು.

  • ಪ್ರಚಾರದ ವೇಳೆ ಹಸುವಿನ ಹಾಲು ಕರೆದ `ಯಜಮಾನ’

    ಪ್ರಚಾರದ ವೇಳೆ ಹಸುವಿನ ಹಾಲು ಕರೆದ `ಯಜಮಾನ’

    ಮಂಡ್ಯ: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕಿಳಿದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೆಆರ್ ಪೇಟೆ ಸೋಮನಹಳ್ಳಿಯಲ್ಲಿ ಹಸುವಿನ ಹಾಲು ಕರೆಯುವ ಮೂಲಕ ನೆರೆದವರ ಗಮನ ಸೆಳೆದಿದ್ದಾರೆ.

    ಪ್ರಚಾರದ ವೇಳೆ ಅಭಿಮಾನಿ ಚಂದ್ರು ಅವರ ಮನೆಗೆ ಡಿ ಬಸ್ ಆಗಮಿಸಿದ್ದರು. ಈ ವೇಳೆ ಅಲ್ಲಿದ್ದ ಹಸುವಿನ ಹಾಲು ಕರೆದು ಅಭಿಮಾನಿಗಳ ಮನ ಗೆದ್ದಿದ್ದಾರೆ. ದಚ್ಚು ಸ್ವಲ್ಪವು ಮುಜುಗರ ಮಾಡಿಕೊಳ್ಳದೇ ಜನರ ನಡುವೆ ಖುಷಿಯಿಂದ ಹಸುವಿನ ಹಾಲು ಕರೆದು ಅವರು ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋದನ್ನ ಸಾಬೀತು ಮಾಡಿದರು.

    ಈ ಅಪರೂಪ ದೃಶ್ಯ ನೋಡಲು ಅಭಿಮಾನಿಗಳು ತಾ ಮುಂದು ನಾ ಮುಂದು ಎಂದು ಮುಗಿಬಿದ್ದಿದ್ದು, ದರ್ಶನ್ ಅವರು ಹಸುವಿನ ಕಾಲು ಕರೆಯುತ್ತಿರುವುದನ್ನು ನೋಡಿದ್ದಾರೆ. ಅದರಲ್ಲೂ ಕೆಲವರು ಈ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡು ಡಿ ಬಾಸ್‍ಗೆ ಜೈಕಾರ ಹಾಕಿದರು.

  • ಮೊದ್ಲು ನೀರು ಕೊಡಿ, ನಂತ್ರ ವೋಟು ಕೇಳಿ- ಮೈತ್ರಿ ನಾಯಕರಿಗೆ ಮಹಿಳೆಯರು ಕ್ಲಾಸ್

    ಮೊದ್ಲು ನೀರು ಕೊಡಿ, ನಂತ್ರ ವೋಟು ಕೇಳಿ- ಮೈತ್ರಿ ನಾಯಕರಿಗೆ ಮಹಿಳೆಯರು ಕ್ಲಾಸ್

    ಮೈಸೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿ.ಟಿ. ಹರೀಶ್ ಗೌಡ ಅವರು ಮೈತ್ರಿ ಅಭ್ಯರ್ಥಿ ಪರವಾಗಿ ಚಾಮುಂಡೇಶ್ವರಿ ಕ್ಷೇತ್ರದ ಆರ್.ಆರ್.ನಗರದಲ್ಲಿ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿನ ಮಹಿಳೆಯರು ಮೊದಲು ನೀರು ಕೊಡಿ, ನಂತರ ವೋಟು ಕೇಳಿ ಎಂದು ಮೈತ್ರಿ ನಾಯಕರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇಂದು ಆರ್.ಆರ್.ನಗರದಲ್ಲಿ ಮೈಸೂರು-ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಅವರ ಪರವಾಗಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿ.ಟಿ. ಹರೀಶ್ ಗೌಡ ಪ್ರಚಾರಕ್ಕೆ ಇಳಿದಿದ್ದಾರೆ. ಈ ವೇಳೆ ಅಲ್ಲಿನ ಮಹಿಳೆಯರು ಪ್ರಚಾರಕ್ಕೆ ಅಡ್ಡಿಪಡಿಸಿ ಮೊದಲು ನೀರು ಕೊಡಿ, ನಂತರ ವೋಟು ಕೇಳಿ ಎಂದು ತಾಕೀತು ಮಾಡಿದ್ದಾರೆ. ಅಲ್ಲದೆ ಈ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಆದ್ರೆ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ನೀವು ನಮ್ಮ ಸಮಸ್ಯೆ ಬಗೆಹರಿಸಿ, ಆ ಮೇಲೆ ವೋಟು ಕೇಳೋದಕ್ಕೆ ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಹರೀಶ್ ಗೌಡ, ನನಗೆ ಸಮಸ್ಯೆ ತಿಳಿದಿದೆ. ಸೆಪ್ಟೆಂಬರ್‍ವರೆಗೆ ಕಾಲಾವಕಾಶ ಕೊಡಲು ಹೇಳಿದ್ದಾರೆ. ಅಲ್ಲದೆ ಇನ್ನೂ ಎರಡು ವರ್ಷದಲ್ಲಿ ಉಂಡವಾಡಿ ಯೋಜನೆ ಆದ್ರೆ ದಿನದ 24 ಗಂಟೆ ನೀರು ಸಿಗುತ್ತದೆ. ಸೆಪ್ಟೆಂಬರ್‍ವರೆಗೆ ಸಮಯ ಕೊಟ್ಟರೆ ಅರ್ಧ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಇದೀಗ ಚುನಾವಣಾ ನೀತಿ ಸಂಹಿತೆ ಇದೆ. ಅಧಿಕಾರಿಗಳನ್ನು ಕರೆದುಕೊಂಡು ಬರಲು ಸಾಧ್ಯವಿಲ್ಲ ಎಂದು ಸಮಾಜಾಯಿಸಿ ನೀಡಿ, ನಿಮಗಿರುವ ರಸ್ತೆ, ನೀರಿನ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಮಹಿಳೆಯರಿಗೆ ಆಶ್ವಾಸನೆ ನೀಡಿ ಪ್ರಚಾರವನ್ನು ಮುಂದುವರಿಸಿದರು.

  • ಪ್ರಚಾರದ ವೇಳೆ ‘ಗೋ ಬ್ಯಾಕ್ ನಿಖಿಲ್’ ಘೋಷಣೆ ಕೂಗಿದ ಡಿ ಬಾಸ್ ಅಭಿಮಾನಿಗಳು

    ಪ್ರಚಾರದ ವೇಳೆ ‘ಗೋ ಬ್ಯಾಕ್ ನಿಖಿಲ್’ ಘೋಷಣೆ ಕೂಗಿದ ಡಿ ಬಾಸ್ ಅಭಿಮಾನಿಗಳು

    ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಹೇಳಿ ಗೋ ಬ್ಯಾಕ್ ನಿಖಿಲ್ ಎಂದು ಘೋಷಣೆ ಕೂಗಿದ್ದಾರೆ.

    ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಕೊಪ್ಪಲು ಗ್ರಾಮಕ್ಕೆ ಬಂದು ಪ್ರಚಾರ ನಡೆಸುತ್ತಿದ್ದ ವೇಳೆ ನಿಖಿಲ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಸಿಡಿದೆದ್ದಿದ್ದರು. ಈ ವೇಳೆ ನಿಖಿಲ್ ಜೊತೆ ಇದ್ದ ಸಚಿವ ಸಾ.ರಾ ಮಹೇಶ್ ಅವರು ಘೋಷಣೆ ಕೂಗುತ್ತಿದ್ದವರ ಮೇಲೆ ಕ್ರಮ ತಗೆದುಕೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿದರು.

    ಬಳಿಕ ನಿಖಿಲ್ ವಾಹನದ ಹಿಂದೆ ನಿಂತು ಘೋಷಣೆ ಕೂಗುತ್ತಿದ್ದ ಯುವಕರನ್ನ ಪೊಲೀಸರು ಚದುರಿಸಿದ್ದಾರೆ. ಆಗ ದರ್ಶನ್ ಹಾಗೂ ನಿಖಿಲ್ ಅಭಿಮಾನಿಗಳು ಪರ ವಿರೋಧ ಘೋಷಣೆ ಕೂಗಿದ್ದಾರೆ. ಈ ವೇಳೆ, ಯಾರೋ ಒಂದಿಬ್ಬರು ಆ ರೀತಿ ಕೂಗಿದ್ರೆ ಏನಾಗಲ್ಲ ಬಿಡಿ ಅಣ್ಣ. ಇದೇ ತಿಂಗಳ 18 ರಂದು ತೋರಿಸುತ್ತಿರಲ್ಲ. ಗೊತ್ತಾಗುತ್ತೆ ಎಂದು ಹೇಳಿ ತಮ್ಮ ಪ್ರಚಾರ ಕಾರ್ಯವನ್ನು ನಿಖಿಲ್ ಅವರು ಮುಂದುವರಿಸಿದರು.

  • ಕೈ ಅತೃಪ್ತ ನಾಯಕರ ವಿರುದ್ಧ ಸಿಎಂ ಕೆಂಡಾಮಂಡಲ

    ಕೈ ಅತೃಪ್ತ ನಾಯಕರ ವಿರುದ್ಧ ಸಿಎಂ ಕೆಂಡಾಮಂಡಲ

    ಮಂಡ್ಯ: ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ, ಸರ್ಕಾರ ಬೀಳಿಸಲು ಹೊರಟಿದ್ದಾರೆ ಸಿಎಂ ಕುಮಾರಸ್ವಾಮಿ ಕೈ ಅತೃಪ್ತ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.

    ಪುತ್ರನ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಇಲ್ಲಿ ನಮ್ಮನ್ನು ಸೋಲಿಸಿ, ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಬೀಳಿಸಲು ಹೊರಟಿದ್ದಾರೆ. ಸುಮಲತಾ ಅಂಬರೀಶ್ ಅವರ ಜೊತೆಗೆ ಸೇರಿಕೊಂಡು ನನ್ನನ್ನು ಮುಗಿಸಲು ಹೊರಟಿದ್ದಾರೆ. ಅವರು ನಮ್ಮ ಜೊತೆಗೆ ಇದ್ದು ನಮ್ಮಲ್ಲೇ ಬೆಳದಂತವರು. ಈಗ ನಮ್ಮ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಎಂದು ಹೆಸರು ಪ್ರಸ್ತಾಪ ಮಾಡದೇ ಸ್ಥಳೀಯ ಕಾಂಗ್ರೆಸ್ಸಿನ ರೆಬೆಲ್ ನಾಯಕರ ವಿರುದ್ಧ ಸಿಎಂ ಕಿಡಿಕಾರಿದರು.

    ಕಾಂಗ್ರೆಸ್ ಮುಖಂಡ ರಮೇಶ್ ಬಂಡಿಸಿದ್ದೇಗೌಡ, ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಈ ಹಿಂದೆ ಕುಮಾರಸ್ವಾಮಿ ಜೊತೆಯಲ್ಲೇ ಕೆಲಸ ಮಾಡಿದ್ದಾರೆ. ಈಗ ಸಿಎಂ ಪುತ್ರ ಚುನಾವಣೆಗೆ ನಿಂತಿದ್ದರೂ ಈ ನಾಯಕರು ಪ್ರಚಾರಕ್ಕೆ ಈವರೆಗೂ ಬಂದಿಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡು ಸಿಎಂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

  • ಸೇಫ್ಟಿ ಇರಲೆಂದು ಯಶ್‍ಗೆ ನಿಂಬೆಹಣ್ಣು ಕೊಟ್ಟ ಅಭಿಮಾನಿ

    ಸೇಫ್ಟಿ ಇರಲೆಂದು ಯಶ್‍ಗೆ ನಿಂಬೆಹಣ್ಣು ಕೊಟ್ಟ ಅಭಿಮಾನಿ

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇಂದು ಹಳ್ಳಿಕೆರೆಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಅಭಿಮಾನಿಯೋರ್ವ ಯಶ್ ಅವರಿಗೆ ಸೇಫ್ಟಿಗೆ ನಿಂಬೆಹಣ್ಣನ್ನು ನೀಡಿದ್ದಾರೆ.

    ಪ್ರಚಾರದ ವೇಳೆ ಜನರನ್ನುದ್ದೆಶಿಸಿ ಯಶ್ ಮಾತನಾಡುತ್ತಿದ್ದರು. ಈ ವೇಳೆ ಅವರಿಗೆ ಅಭಿಮಾನಿಯೋರ್ವ ನಿಂಬೆಹಣ್ಣು ನೀಡಿದ್ದಾನೆ. ಅದನ್ನು ನೋಡಿ ತಕ್ಷಣ, ಯಾಕೋ ನಿಂಬೆಹಣ್ಣು ಸೇಫ್ಟಿಗಾ? ಎಂದು ಜನರ ಮುಂದೆ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ತೋರಿಸಿದರು. ಬಳಿಕ ಜನರ ಪ್ರೀತಿ ಇರುವವರೆಗೂ ಇದ್ಯಾವುದೂ ಬೇಡ ಬಿಡ್ರೋ ಅಂತ ಹೇಳಿ, ಪ್ರಚಾರ ಕಾರ್ಯ ಮುಂದುವರಿಸಿದರು.

    ನಿಖಿಲ್ ಪ್ರಚಾರದ ಸಮಯದಲ್ಲೂ ಅಭಿಮಾನಿಗಳು ನಿಂಬೆಹಣ್ಣನ್ನು ನೀಡಿದ ಪ್ರಸಂಗ ಇಂದು ನಡೆಯಿತು.

  • ನಿಖಿಲ್‍ಗೆ ಇನ್ನೂ ವಯಸ್ಸಿದೆ, ಅತಿರೇಕದ ವರ್ತನೆ ಸರಿಯಲ್ಲ: ಸುಮಲತಾ

    ನಿಖಿಲ್‍ಗೆ ಇನ್ನೂ ವಯಸ್ಸಿದೆ, ಅತಿರೇಕದ ವರ್ತನೆ ಸರಿಯಲ್ಲ: ಸುಮಲತಾ

    ಮಂಡ್ಯ: ನಟ ಯಶ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಆಡಿದ ಮಾತಿಗೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದು, ನಿಖಿಲ್‍ಗೆ ಇನ್ನೂ ವಯಸ್ಸಿದೆ. ಅವರ ಅತಿರೇಕದ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಕೂಡ ಫಿಲಂ ಇಂಡಸ್ಟ್ರಿಯಲ್ಲಿದ್ದಾರೆ. ಅದೇ ಇಂಡಸ್ಟ್ರಿಯಲ್ಲಿ ಬೆಳೆದಿರೊ ಒಬ್ಬ ನಟನ ಬಗ್ಗೆ ಮಾತಾಡೋದು ಸರಿಯಲ್ಲ. ಹಿರಿಯ ನಟರಿಗೆ ಕಿಂಚಿತ್ತೂ ಗೌರವ ನೀಡದೆ ಮಾತನಾಡಿರುವುದು ಅವರ ಅಹಂಕಾರವನ್ನ ಸೂಚಿಸುತ್ತದೆ. ವೈಯಕ್ತಿಕ ಟೀಕೆ ಬೇಕಾಗಿರಲಿಲ್ಲ. ಹೀಗೆ ನಾವು ಅವರ ಬಗ್ಗೆ ಮಾತನಾಡೋಕೆ ಹೊರಟರೆ ಏನಾಗಬಹುದು. ಅವರಿಗೆ ಇನ್ನೂ ವಯಸ್ಸಿದೆ, ಅತಿರೇಕದ ವರ್ತನೆ ಸರಿಯಲ್ಲ ಎಂದು ಗರಂ ಆದ್ರು.

    ಇಂದು ಶ್ರೀರಂಗಪಟ್ಟಣದ ಕಾಳೇನಹಳ್ಳಿಯಲ್ಲಿ ಸುಮಲತಾ ಅವರು ಪ್ರಚಾರ ನಡೆಸುತ್ತಿದ್ದು, ಜನರ ಬಳಿ ತಮಿಳಿನಲ್ಲೂ ಮಾತನಾಡಿ ಪ್ರಚಾರ ಮಾಡಿದರು. ಇಂದು ಮಧ್ಯಾಹ್ನದ ತನಕ ಶ್ರೀರಂಗಪಟ್ಟಣದಲ್ಲಿ ಪ್ರಚಾರ ಮಾಡ್ತೀವಿ. ಬಳಿಕ ಮಧ್ಯಾಹ್ನದ ಮೇಲೆ ಪಾಂಡವಪುರದಲ್ಲಿ ಪ್ರಚಾರ ಮಾಡ್ತೀವಿ. ಪಾಂಡವಪುರದಲ್ಲಿ ನಟ ದರ್ಶನ್ ಪ್ರಚಾರಕ್ಕೆ ಸೇರಿಕೊಳ್ಳುತ್ತಾರೆ ಎಂದು ತಿಳಿಸಿದರು.

    ಬಳಿಕ ಟಿಎಂ ಹೊಸೂರಿನಲ್ಲಿ ಪ್ರಚಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸಂದೇಶ ಹೋಗ್ಬೇಕಾಗಿದೆ, ಅವರನ್ನ ನಾನು ಬ್ಲೇಮ್ ಮಾಡೋದಿಲ್ಲ. ಅವರಿಗೆ ಏನ್ ಕಷ್ಟ ಇತ್ತೊ ಏನೊ ಎಂದು ತಮ್ಮ ಪ್ರತಿ ಸ್ಪರ್ಧಿ ಟಿಎಂ ಹೊಸೂರಿನ ಸುಮಲತಾ ಅವರ ಬಗ್ಗೆ ಮಾತನಾಡಿದರು.

    ನಿಖಿಲ್ ಹೇಳಿದ್ದೇನು?
    ಪಾಪ ಏಸಿಯಲ್ಲಿ ಕುಳಿತುಕೊಂಡು ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಬಿಸಿಲಿನಲ್ಲಿ ಓಡಾಡೋದು ಕಷ್ಟ ಆಗ್ತಿರಬಹುದೆಂದು ಕುಮಾರಣ್ಣ ಹೇಳಿದ್ದರು. ಅದಕ್ಕೆ ಯಶ್, ದರ್ಶನ್ ಹಾಗೂ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ಒಂದು ಮಾತು ಹೇಳೋಕೆ ಇಷ್ಟಪಡುತ್ತೀನಿ, ದೊಡ್ಡ ಮನುಷ್ಯ ಮಹಾನುಭಾವ ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ನಾವು ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು. ಆಗ ನಮ್ಮ ತಾಯಿ 5 ಸಾವಿರ ರೂಪಾಯಿನಲ್ಲಿ ಮನೆ ನಿಭಾಯಿಸುತ್ತಿದ್ದರು. ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲಾ ಮಾತನಾಡುತ್ತಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್‍ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದರು.