Tag: Compactor Purchase

  • ಕಸದಿಂದ ಕೋಟಿ ಲೂಟಿ- ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಿಗೆ ಲೋಕಾಯುಕ್ತ ನೋಟಿಸ್

    ಕಸದಿಂದ ಕೋಟಿ ಲೂಟಿ- ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಿಗೆ ಲೋಕಾಯುಕ್ತ ನೋಟಿಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸ ವಿಲೇವಾರಿ ಸಮಸ್ಯೆ ನಡುವೆ ಬಿಬಿಎಂಪಿ ತ್ಯಾಜ್ಯ ಸಾಗಾಟ ಮಾಡುವ ಕಾಂಪ್ಯಾಕ್ಟರ್ ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.

    ಬೆಂಗಳೂರಿನಲ್ಲಿ ಕಸದಿಂದ ಕೋಟಿ ಕೋಟಿ ಲೂಟಿ ಮಾಡ್ತಾರೆ ಎಂಬ ಆರೋಪವಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ಸಾಗಾಟ ಮಾಡುವ ಕಾಂಪ್ಯಾಕ್ಟರ್ ವಾಹನ ಖರೀದಿ ಹಾಗೂ ನಿರ್ವಹಣೆಯಲ್ಲಾಗಿರುವ ಹಗರಣದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿತ್ತು. ಆದರೆ ತಾತ್ಕಾಲಿಕವಾಗಿ ಈ ಸುದ್ದಿ ತಣ್ಣಗಾಗಿತ್ತಾದರೂ, ಮತ್ತೆ ಈ ಹಗರಣ ಮುನ್ನಲೆಗೆ ಬಂದಿದೆ.

    ಕಾಂಪ್ಯಾಕ್ಟರ್ ಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ, 125 ಕಾಂಪ್ಯಾಕ್ಟರ್ ಲಾರಿಗಳ ನಿರ್ವಹಣೆಯೂ ಕಳಪೆಯಾಗಿರುವುದರ ಬಗ್ಗೆ ಲೋಕಾಯುಕ್ತದಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ದೂರು ಸಲ್ಲಿಸಿದ್ದರು. ಇದಕ್ಕೆ ಪಾಲಿಕೆಗೆ ಎಷ್ಟೇ ವಿವರ ಕೇಳಿದರೂ ಸಮರ್ಪಕ ದಾಖಲೆಯನ್ನು ಲೋಕಾಯುಕ್ತಕ್ಕೆ ಸಲ್ಲಿಸದ ಹಿನ್ನೆಲೆ ಇದೀಗ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ವಿರುದ್ಧ ಶೋಕಾಸ್ ನೋಟಿಸ್ ಜಾರಿಯಾಗಿದೆ.

    ಲೋಕಾಯುಕ್ತರಾದ ವಿಶ್ವನಾಥ್ ಶೆಟ್ಟಿ ಈ ಬಗ್ಗೆ ನೋಟಿಸು ಕಳಿಸಿದ್ದು, ಸರ್ಫರಾಜ್ ಖಾನ್ ಅವರಿಗೆ ಡಿಸೆಂಬರ್ 12ಕ್ಕೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಅಲ್ಲದೆ ಬೆಂಗಳೂರು ನಗರ ಎಸ್‍ಪಿಗೆ, ಈ ಅವ್ಯವಹಾರದ ತನಿಖೆಗೆ ನಿರ್ದೇಶನ ನೀಡಲಾಗಿದೆ.