Tag: Commissioner Bhaskar Rao

  • ‘ಹೊಸ ಸಿಸ್ಟಂ ತರಲು ಪವರ್ ಕೊಟ್ಟಿದ್ಯಾರು?’- ಕಮಿಷನರ್ ವಿರುದ್ಧ ಎಚ್‍ಡಿಕೆ ಗರಂ

    ‘ಹೊಸ ಸಿಸ್ಟಂ ತರಲು ಪವರ್ ಕೊಟ್ಟಿದ್ಯಾರು?’- ಕಮಿಷನರ್ ವಿರುದ್ಧ ಎಚ್‍ಡಿಕೆ ಗರಂ

    ರಾಮನಗರ: ಹೊಸದಾಗಿ ಸಿಸ್ಟಂ ತರಲಿಕ್ಕೆ ಯಾರು ಇವರಿಗೆ ಪವರ್ ಕೊಟ್ಟಿದ್ದಾರೆ. ಗೃಹಸಚಿವರು ಇಂತಹ ಅಧಿಕಾರಿಗಳ ಉದ್ಧಟತನವನ್ನು ಸರಿಪಡಿಸಿಕೊಳ್ಳದಿದ್ದರೆ ಧೂಳಿಪಟವಾಗಿ ಹೋಗುತ್ತೀರಾ ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿರುದ್ಧ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕಿಡಿಕಾರಿದ್ದಾರೆ.

    ಚನ್ನಪಟ್ಟಣದ ಸರ್ಕಾರಿ ಪದವಿ ಕಾಲೇಜು ಆವರಣದ ಶತಮಾನೋತ್ಸವ ಭವನದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಅವರು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನೀಡದ ವಿಚಾರವಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದರು.

    ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಹಕ್ಕುಗಳನ್ನು ಕಿತ್ತುಕೊಳ್ಳುವ ಅನಾಗರಿಕ ವರ್ತನೆ ಇದು. ಪೊಲೀಸ್ ಕಮಿಷನರ್ ಇರುವುದು ಯಾಕೆ? ಪ್ರತಿಭಟನೆ ಇರಲಿ, ಸರ್ಕಾರದ ಗಮನ ಸೆಳೆಯುವವರು ಬೀದಿಗೆ ಬಂದಾಗ ಅವರಿಗೆ ರಕ್ಷಣೆ ಕೊಡುವುದು ಇವರ ಕೆಲಸ. ಪ್ರತಿಭಟನೆಯೇ ಮಾಡಬಾರದು ಎಂದು ಇಂತಹ ಕ್ರಮ ತೆಗೆದುಕೊಳ್ಳುವುದನು ಸರ್ಕಾರದ ಮುಖ್ಯಸ್ಥರು ಗಮನಿಸಬೇಕು ಎಂದು ತಿಳಿಸಿದರು.

    ಬಿಸಿಯೂಟದ ಯೋಜನೆ ಖಾಸಗೀಕರಣ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಇದು ಯಾರೋ ನಾಲ್ಕು ಜನ ದುಡ್ಡು ತಿನ್ನೋಕೆ ಅಷ್ಟೇ. ಜನರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಯಾರೋ ಮಧ್ಯವರ್ತಿ ದುಡ್ಡು ತಿನ್ನೋಕೆ ಅವಕಾಶ ಮಾಡಿಕೊಡಬಾರದು. ಈ ಐಡಿಯಾ ಕೊಟ್ಟೋರು ಯಾರು ಇವರಿಗೆ ಎಂದು ಪ್ರಶ್ನಿಸಿದರು.

    ಇದೇ ವೇಳೆ ಕೇಂದ್ರದಿಂದ ಕರ್ನಾಟಕದ ತೆರಿಗೆ ಪಾಲು ಕಡಿತಗೊಳಿಸಿರುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯವನ್ನು ದೇವರೇ ಕಾಪಾಡಬೇಕು. ಈ ಬಾರಿ ರಾಜ್ಯಕ್ಕೆ 9 ರಿಂದ 11 ಸಾವಿರ ಕೋಟಿ ರೂ. ಖೋತಾ ಮಾಡಿದ್ದಾರೆ. 30 ಸಾವಿರ ಕೋಟಿ ರೂ. ಯೋಜನೆಗಳ ಅನುದಾನವನ್ನು ಕಡಿತ ಮಾಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಮಂತ್ರಿ ಮಂಡಲ ರಚನೆ ಮಾಡುವುದೇ ದುಸ್ಸಾಹಸವಾಗಿದ್ದು, ಈ ಪುಣ್ಯಾತ್ಮರು ಅದನ್ನೇ ನೋಡುತ್ತಾರೋ. ರಾಜ್ಯದ ಅಭಿವೃದ್ಧಿ ಬಗ್ಗೆ ನೋಡುತ್ತಾರೋ ಆ ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದರು.

    ಬಿಜೆಪಿ ಸರ್ಕಾರ ತಂದು ಮಂತ್ರಿ ಸ್ಥಾನಕ್ಕಾಗಿ ಇದೀಗ ಜಿದ್ದಿಗೆ ಬಿದ್ದಿರುವ ಶಾಸಕರು ಕಷ್ಟಪಟ್ಟಿದ್ದಾರೆ. ಅದು ಅವರ ಹಣೆ ಬರಹವಾಗಿದ್ದು, ಮಂತ್ರಿಗಳಾಗೋದು, ಬಿಡೋದು ನನಗೆ ಸಂಬಂಧವಿಲ್ಲ ಎಂದರು.

  • ನವೀಕರಣಗೊಂಡಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಕಮಿಷನರ್

    ನವೀಕರಣಗೊಂಡಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಕಮಿಷನರ್

    ಬೆಂಗಳೂರು: ನೂತನವಾಗಿ ನವೀಕರಣಗೊಂಡಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉದ್ಘಾಟಿಸಿದರು.

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಳೆಯದಾಗಿದ್ದ ಸಂಚಾರ ಪೊಲೀಸ್ ಠಾಣೆಯನ್ನು ಟೈಟಾನ್ ಕಂಪನಿಯ ಸಹಭಾಗಿತ್ವದಲ್ಲಿ ಕಾರ್ಪೋರೆಟ್ ಫಂಡ್ ನಿಂದ ಅನುಮತಿ ಪಡೆದು ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡಿದ್ದು ಸುಮಾರು 35 ಲಕ್ಷಗಳ ವೆಚ್ಚದಲ್ಲಿ ನೂತನನವಾಗಿ ಈ ಠಾಣೆಯನ್ನು ನಿರ್ಮಿಸಲಾಗಿದೆ.

    ಈ ವೇಳೆ ಮಾತನಾಡಿದ ಅವರು, ಸಂಚಾರ ಪೊಲೀಸ್ ಆಯುಕ್ತ ರವಿಕಾಂತೇಗೌಡರ ನೇತೃತ್ವದಲ್ಲಿ ಬಹಳ ಚೆನ್ನಾಗಿ ನಿರ್ಮಾಣ ಮಾಡಿ ಭವ್ಯವಾದ ಕಟ್ಟಡದಲ್ಲಿ ನವೀಕರಣಗೊಂಡಿದೆ. ಹೆದ್ದಾರಿಯಲ್ಲಿ ಅಪಘಾತಗಳು ನಡೆದ ಸಂದರ್ಭದಲ್ಲಿ ಪೊಲೀಸ್ ಠಾಣೆ ಎಲ್ಲಿದೆ ಎನ್ನುವುದು ಗೊತ್ತಾಗಬೇಕು ಆ ದೃಷ್ಟಿಯಿಂದ ಠಾಣೆಯನ್ನು ಚೆನ್ನಾಗಿ ನವೀಕರಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹೆದ್ದಾರಿ ಪಕ್ಕದಲ್ಲಿಯೇ ಇರುವಂತಹ ಜಾಗವನ್ನು ನೋಡಿ ಅಲ್ಲಿ ಠಾಣೆಯನ್ನು ಮಾಡಿದಾಗ, ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಇದೊಂದು ಒಳ್ಳೆಯ ಕೆಲಸವನ್ನು ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಮಾಡಿದ್ದಾರೆ ಎಂದು ಹೇಳಿದರು.

    ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಇರುವ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯನ್ನು ಸ್ಪೆಷಲ್ ಸ್ಟೇಷನ್ ಆಗಿ ಬೆಂಗಳೂರು ಸಿಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾವನೆ ಹೋಗಿದೆ. ಈ ಹಿಂದೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯೂ ಸಹ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಇತ್ತು ಬಳಿಕ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಸ್ಪೆಷಲ್ ಸ್ಟೇಷನ್ ಆಯ್ತು. ಮುಂದಿನ ದಿನಗಳಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆಯು ಸಹ ಸ್ಪೆಷಲ್ ಸ್ಟೇಷನ್ ಆಗಿ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿಯ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣವಾಗುತ್ತದೆ ಎಂದು ತಿಳಿಸಿದರು.

  • ಹೊಸ ವರ್ಷ ಆಚರಣೆ ನಿರ್ಬಂಧಕ್ಕೆ ಆಗ್ರಹಿಸಿ ಕಮಿಷನರ್‌ಗೆ  ದೂರು

    ಹೊಸ ವರ್ಷ ಆಚರಣೆ ನಿರ್ಬಂಧಕ್ಕೆ ಆಗ್ರಹಿಸಿ ಕಮಿಷನರ್‌ಗೆ ದೂರು

    ಬೆಂಗಳೂರು: ಬ್ರಿಗೇಡ್ ರೋಡ್, ಎಂಜಿ ರಸ್ತೆಯಲ್ಲಿ ನಡೆಯುವ ಹೊಸ ವರ್ಷ ಆಚರಣೆಗೆ ಅವಕಾಶ ಕೊಡಬಾರದೆಂದು ಆಗ್ರಹಿಸಿ ಹಿಂದೂ ಜಾಗೃತಿ ಸಮಿತಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್‍ಗೆ ದೂರು ನೀಡಿದೆ.

    ಬ್ರಿಗೇಡ್ ರಸ್ತೆಯಲ್ಲಿ ನಡೆಯುವ ಹೊಸ ವರ್ಷ ಆಚರಣೆ ದುರುಪಯೋಗವಾಗುತ್ತಿದೆ. ಹಿಂದೂಗಳ ಹೊಸ ವರ್ಷ ಯುಗಾದಿಯಾಗಿದ್ದು ಡಿಸೆಂಬರ್ 31 ರಂದು ಹೊಸ ವರ್ಷ ಕೇವಲ ಮೋಜು ಮಸ್ತಿಗೆ ಮಾಡಿಕೊಳ್ಳುವ ಪಾರ್ಟಿಯಾಗಿದೆ. ಪೊಲೀಸರು ಪಾರ್ಟಿ ವ್ಯವಸ್ಥೆಯನ್ನ ಗಂಭೀರವಾಗಿ ಪರಿಗಣಿಸಿ ಹೊಸ ವರ್ಷ ಆಚರಣೆಗೆ ಅವಕಾಶ ಕೊಡಬಾರದೆಂದು ಹಿಂದೂ ಜಾಗೃತಿ ಸಮಿತಿಯ ಕಾರ್ಯಧ್ಯಕ್ಷ ಮೋಹನ್ ಕುಮಾರ್ ಆಗ್ರಹಿಸಿದ್ದಾರೆ.

    ಹೊಸ ವರ್ಷ ಆಚರಣೆಯ ಪಾರ್ಟಿ ವೇಳೆ ಗಾಂಜಾ, ಮದ್ಯಪಾನ ಮಾಡಿ ಗಲಾಟೆ ಮಾಡುತ್ತಾರೆ. ಅಹಿತಕರ ಘಟನೆಗೆ ಕಾರಣರಾಗುತ್ತಾರೆ. ಅಷ್ಟೇ ಅಲ್ಲದೇ ಬೆಂಗಳೂರಿನ ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕುವ ಕೇಲಸವಾಗುತ್ತಿದೆ. ಆದ್ದರಿಂದ ಬ್ರಿಗೇಡ್ ರಸ್ತೆ ಹಾಗೂ ಎಂಜಿ ರಸ್ತೆಯಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿ ನಡೆಯುವ ಹೊಸ ಹೊರ್ಷ ಸಂಭ್ರಮಾಚರಣೆಗೆ ಅವಕಾಶ ಕೊಡಬಾರದೆಂದು ಆಗ್ರಹಿಸಿದ್ದಾರೆ.