Tag: Commercial port

  • ರಾಜ್ಯದ ಮೊದಲ ಅತಿದೊಡ್ಡ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ

    ರಾಜ್ಯದ ಮೊದಲ ಅತಿದೊಡ್ಡ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ

    – ಹಣ ಬಿಡುಗಡೆಯಾದ್ರೂ ಕಾಮಗಾರಿ ಪ್ರಾರಂಭಕ್ಕೆ ನೂರೆಂಟು ವಿಘ್ನ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಉದ್ದೇಶಿತ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆಗೆ ಸ್ಥಳೀಯ ಮೀನುಗಾರರ ವಿರೋಧದ ವ್ಯಕ್ತವಾಗಿದೆ. ಇದರಿಂದಾಗಿ ಕಾಮಗಾರಿಗೆ ಚಾಲನೆ ಸಿಗದೇ ಕಗ್ಗಂಟಾಗಿದೆ.

    ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗದಿದ್ದರೆ ಅಭಿವೃದ್ಧಿಗಾಗಿ ಬಂದಿರುವ ಹಣ ವಾಪಸ್ ಕೇಂದ್ರಕ್ಕೆ ಹೋಗಲಿದ್ದು, ಬಂದರು ಇಲಾಖೆ ಈ ವಿಚಾರದಲ್ಲಿ ಇದೀಗ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ. ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ಮಾಡಲು ಸಾಗರಮಾಲಾ ಯೋಜನೆ ಅಡಿ ಕೇಂದ್ರದಿಂದ ಈಗಾಗಲೇ 125 ಕೋಟಿ ರೂ. ಬಿಡುಗಡೆಯಾಗಿದೆ. 2017ರಲ್ಲಿಯೇ ಕೇಂದ್ರದಿಂದ ಹಣ ಬಿಡುಗಡೆಯಾಗಿದ್ದು, ಇನ್ನೂ ವಿಸ್ತರಣೆ ಕಾರ್ಯ ಪ್ರಾರಂಭ ಮಾಡಿಲ್ಲ. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು

    ವಿಸ್ತರಣೆ ಸಂಬಂಧ ಯಾವುದೇ ವಿರೋಧ ವ್ಯಕ್ತವಾಗಬಾರದು ಎನ್ನುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲು ಸಭೆ ನಡೆಸಿ, ಪರಿಸರ ಇಲಾಖೆಯಿಂದ ಅನುಮತಿಯನ್ನೂ ಪಡೆದು, ಇದೀಗ ತಡೆಗೋಡೆ ನಿರ್ಮಾಣ ಕಾರ್ಯ ಮಾಡಲು ಇಲಾಖೆ ಮುಂದಾಗಿದೆ. ಆದರೆ ಸ್ಥಳೀಯ ಮೀನುಗಾರರು ಮಾತ್ರ, ಯೋಜನೆಯಿಂದ ಮೀನುಗಾರಿಕೆ ಮೇಲೆ ಪರಿಣಾಮ ಬೀಳುತ್ತದೆ. ಯಾವುದೇ ಕಾರಣಕ್ಕೂ ಬಂದರು ವಿಸ್ತರಣೆ ಮಾಡಬಾರದು ಎಂದು ಪ್ರತಿಭಟನೆಗೆ ಇಳಿದಿದ್ದು ಕಾಮಗಾರಿ ನಡೆಸದಂತೆ ತಡೆ ಒಡ್ಡಿದ್ದಾರೆ.

    ಮುಂಬೈ ಮೂಲದ ಡಿವಿಪಿ ಇನ್‍ಫ್ರಾ ಲಿಮಿಟೆಡ್ ಕಂಪನಿಗೆ ತಡೆಗೋಡೆ ನಿರ್ಮಾಣ ಕಾರ್ಯದ ಗುತ್ತಿಗೆಯನ್ನು ಬಂದರು ಇಲಾಖೆ ನೀಡಿದೆ. ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯವರು ಸಹ ಕಡಲತೀರಕ್ಕೆ ತಡೆಗೋಡೆ ನಿರ್ಮಾಣ ಕಾರ್ಯ ಪ್ರಾರಂಭಿಸಲು ಸಾಮಗ್ರಿಗಳನ್ನು ತಂದು ಹಾಕಿಕೊಂಡಿದ್ದಾರೆ. ಆದರೆ ಮೀನುಗಾರರ ವಿರೋಧ ಹೆಚ್ಚಾಗಿದ್ದು, ಈಗಾಗಲೇ ಹಣ ಬಿಡುಗಡೆಯಾಗಿ ಎರಡು ವರ್ಷ ಆಗಿರುವುದರಿಂದ ಮತ್ತೆ ಕಾಮಗಾರಿ ತಡವಾದರೆ ಕೇಂದ್ರಕ್ಕೆ ಹಣ ಮರಳಿ ಹೋಗುವ ಸಾಧ್ಯತೆ ಬಹುತೇಕವಾಗಿದೆ. ಒಂದೊಮ್ಮೆ ಕೇಂದ್ರಕ್ಕೆ ಹಣ ವಾಪಸ್ ಹೋದರೆ ಬಂದರು ಇಲಾಖೆಗೆ ಕಪ್ಪು ಚುಕ್ಕೆ ಬೀಳಲಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

    ಈ ನಿಟ್ಟಿನಲ್ಲಿ ಹೇಗಾದರೂ ಮಾಡಿ ಕಾಮಗಾರಿ ಪ್ರಾರಂಭಿಸಲೇ ಬೇಕು ಎಂದು ಅಧಿಕಾರಿಗಳು ನಿರಂತರ ಪ್ರಯತ್ನಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ಸ್ಥಳೀಯ ಮೀನುಗಾರರನ್ನು ಸಹ ಎದುರು ಹಾಕಿಕೊಳ್ಳಲು ಇಚ್ಛೆ ಇಲ್ಲದೇ ಅವರ ಮನವೊಲಿಸುವ ಕಾರ್ಯಕ್ಕೂ ಇದೀಗ ಬಂದರು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಅಂತಿಮವಾಗಿ ಇದು ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

  • ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು

    ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು

    – ಮೂರೇ ವರ್ಷಕ್ಕೆ ಆರು ಬೃಹತ್ ಹಡಗು ಲಂಗರಿಗೆ ಸಿಗಲಿದೆ ಅವಕಾಶ

    ಕಾರವಾರ: ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಕಾರವಾರದ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗೆ ತಯಾರಿ ನಡೆದಿದೆ. ಈ ಯೋಜನೆ ಅಡಿ ಮೂರು ವರ್ಷದ ಅವಧಿಯಲ್ಲೇ ಆರು ಬೃಹತ್ ಗಾತ್ರದ ಹಡಗುಗಳು ಲಂಗುರು ಹಾಕುವ ಅವಕಾಶ ದೊರೆಯಲಿದೆ. ಈ ಮೂಲಕ ಕಾರವಾರ ಬಂದರು ರಾಜ್ಯದ ಅತಿದೊಡ್ಡ ವಾಣಿಜ್ಯ ಬಂದರು ಎಂಬ ಪಟ್ಟಿಗೆ ಸೇರಲಿದೆ.

    ಕೇವಲ 9.5 ಮೀಟರ್ ನಷ್ಟು ಆಳ ಹೊಂದಿರುವ ಬಂದರಿನಲ್ಲಿ ದೊಡ್ಡ ಹಡಗುಗಳು ಲಂಗುರು ಹಾಕಲು ಸದ್ಯಕ್ಕೆ ಇಲ್ಲಿ ಅವಕಾಶವಿಲ್ಲ. ಇದರಿಂದಾಗಿ ವಾರ್ಷಿಕ 10 ಕೋಟಿ ರೂ. ಆದಾಯ ಗಳಿಸಲು ಬಂದರು ಹೆಣಗಾಡುವ ಪರಿಸ್ಥಿತಿ ಇದೆ. ಈ ಕಾರಣಕ್ಕಾಗಿ ಸಾಗರಮಾಲಾ ಯೋಜನೆಯಡಿ ಬಂದರಿನ ಎರಡನೇ ಹಂತ ವಿಸ್ತರಣೆ ನಡೆಸಲು ಉದ್ದೇಶಿಸಲಾಗಿದೆ.

    ಈಗಾಗಲೇ ಬಂದರಿನ ಧಕ್ಕೆಯನ್ನು ಅಲಿಗದ್ದಾ ಕಡೆಗೆ 250 ಮೀ. ವಿಸ್ತರಿಸಲು 61ಕೋಟಿ ರೂ. ಮತ್ತು ಟಾಗೋರ್ ಕಡಲ ತೀರದ ಬಳಿ 880ಮೀ. ಉದ್ದದ ಅಲೆ ತಡೆಗೋಡೆ ನಿರ್ಮಾಣಕ್ಕೆ 125 ಕೋಟಿ ರೂ. ಮಂಜೂರಾಗಿದೆ. ಟೆಂಡರ್ ಮುಗಿದು ಕಾರ್ಯವೂ ಸಿಕ್ಕಿದ್ದು, ಗುತ್ತಿಗೆ ಕಂಪನಿ ಕಾಮಗಾರಿ ಪ್ರಾರಂಭಿಸಲು ಮುಂದಾಗಿದೆ. ಜೊತೆಗೆ ಮೂರು ವರ್ಷದೊಳಗೆ ಕಾಮಗಾರಿ ಮುಗಿಸುವ ಗುರಿ ನೀಡಲಾಗಿದೆ.

    ಈ ಕಾಮಗಾರಿ ಪ್ರಾರಂಭವಾದರೆ ಅಲೆ ತಡೆಗೋಡೆ ನಿರ್ಮಾಣದಿಂದ ಬಂದರಿನಲ್ಲಿ ಹೂಳು ತುಂಬುವುದನ್ನು ನಿಯಂತ್ರಿಸಿ ಆಳ ಹೆಚ್ವಿಸಲು ಅನುಕೂಲವಾಗಲಿದೆ. ದಕ್ಕೆ ನಿರ್ಮಿಸಿದ ನಂತರ ಬಂದರು ಪ್ರದೇಶದಲ್ಲಿ 14 ಮೀ.ನಷ್ಟು ಆಳದವರೆಗೂ ಹೂಳು ತೆಗೆಯುವ ಕೆಲಸ ನಡೆಯಲಿದೆ. ಇದರಿಂದಾಗಿ 250 ಮೀ. ಉದ್ದದ ಬೃಹತ್ ಗಾತ್ರದ ಮೂರು ಹಡಗುಗಳು ಬಂದರಿನಲ್ಲಿ ನಿಲ್ಲಲು ಅವಕಾಶವಾಗಲಿದೆ. ಈ ಯೋಜನೆಯಿಂದಾಗಿ ವಾಣಿಜ್ಯ ಬಂದರಿನ ವಹಿವಾಟು ವೃದ್ಧಿಸುವ ಜೊತೆ ವಾರ್ಷಿಕ 40 ಕೋಟಿ ರೂ.ಗಿಂತ ಅಧಿಕ ಆದಾಯ ಬರುವ ಸಾಧ್ಯತೆಗಳಿವೆ ಎಂದು ಬಂದರು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಟಿ.ಎಸ್ ರಾಠೋಡ್ ಮಾಹಿತಿ ನೀಡಿದ್ದಾರೆ.

    ಕಾಮಗಾರಿಗೆ ಸೂಚನೆ:
    ಬಂದರು 2ನೇ ಹಂತದ ವಿಸ್ತರಣೆಗೆ ಮೂರು ವರ್ಷಗಳ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಕಾರ್ಯಾದೇಶವೂ ಬಂದಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ಮೇಲಾಧಿಕಾರಿಯಿಂದ ಸೂಚನೆ ಬಂದಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಟಿ.ಎಸ್.ರಾಠೋಡ್ ತಿಳಿಸಿದ್ದಾರೆ.

    ಲಾಭ ವೇನು?
    * ಅಲೆ ತಡೆಗೋಡೆ ನಿರ್ಮಾಣದಿಂದ ಎಲ್ಲಾ ಸರಕು ಅಮುದು ರಫ್ತಿಗೆ ಸರ್ವ ಋತು ಬಂದರಾಗಿ ನಿರ್ಮಾಣ.
    * 510ಮೀ.ಉದ್ದದ ಜೆಟ್ಟಿಯಲ್ಲಿ ಮೂರು ಬೃಹದಾಕಾರದ ಹಡಗು ನಿಲ್ದಾಣಕ್ಕೆ ಅವಕಾಶ.
    * ನೌಕಾ ಚಟುವಟಿಕೆ ಪ್ರಮಾಣ ಹೆಚ್ಚಳ, ಸರ್ಕಾರಕ್ಕೆ ಹೆಚ್ವಿನ ಆದಾಯ.
    * ತಡೆಗೋಡೆ ನಿರ್ಮಾಣದಿಂದ ಮೀನುಗಾರರಿಗೆ ಅಲೆಗಳ ಒತ್ತಡ ಕಡಿಮೆಯಾಗಿ ಚಲನ ವಲನಕ್ಕೆ ಅನುಕೂಲ.
    * ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ಸಹಸ್ರಾರು ದೋಣಿಗಳಿಗೆ ರಕ್ಷಣೆ.
    * ಸ್ಥಳೀಯ ಜನರಿಗೆ ಉದ್ಯೋಗ, ಕೈಗಾರಿಕಾ ವಾಣಿಜ್ಯ ಉದ್ಯಮಗಳ ಬೆಳವಣಿಗೆ.
    * ಮತ್ಸೋದ್ಯಮ ಬೆಳವಣಿಗೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆ.
    * ಮೀನುಗಾರಿಕೆಯ ಉತ್ಪನ್ನ,ಮೀನುಗಳು,ಸಿಗಡಿ ಮತ್ತು ಮೀನುಗಾರಿಕಾ ಆಧಾರಿತ ಆಹಾರೋತ್ಪನ್ನಗಳ ಆಯಾತ-ನಿರ್ಯಾತ ನಡೆಸುವ ಅವಕಾಶಗಳು.

    ಮೀನುಗಾರರಿಂದ ತೀರ್ವ ವಿರೋಧ:
    ವಾಣಿಜ್ಯ ಬಂದರು ವಿಸ್ತರಣೆಯನ್ನು ಸ್ಥಳೀಯ ಮೀನುಗಾರರು ತೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮುಂದುವರಿದಿರುವುದು ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆ ಆಗಲಿದೆ ಎಂಬ ವಾದವನ್ನು ಮುಂದಿಟ್ಟಿರುವ ಮೀನುಗಾರರು 43 ಕಿ.ಮೀ. ಉದ್ದದ ಕಡಲತೀರದಲ್ಲಿ 33 ಕಿ.ಮೀ. ನೌಕಾ ನೆಲೆಗೆ ನೀಡಲಾಗಿದೆ. ಮೀನುಗಾರಿಕೆಗೆ ಉಳಿದದ್ದು ಕೇವಲ 3.5 ಕಿ.ಮೀ. ಮಾತ್ರ. 14,500 ಮೀನುಗಾರಿಕಾ ಕುಟುಂಬಗಳು ಕಾರವಾರ ತಾಲೂಕಿನಲ್ಲಿ ಇದ್ದು ಇವರು ಸೀಮಿತ ಕರಾವಳಿ ತೀರಪ್ರದೇಶವನ್ನು ಮಾತ್ರ ಉಪಯೋಗಿಸಿಕೊಳ್ಳುವಂತಾಗುತ್ತದೆ.

    2,125 ಮೀನುಗಾರಿಕಾ ದೋಣಿಗಳಿದ್ದು ಇವರಿಗೆ ಸ್ಥಳವಕಾಶದ ಕೊರತೆ ಆಗಲಿದೆ. ಮೀನುಗಾರಿಕಾ ಉದ್ಯೋಗ ನಷ್ಟವಾಗಲಿದ್ದು ಸಂಪ್ರದಾಯಿಕ ಕೆಲಸ ಕೈ ಬಿಡಬೇಕಾಗಿದೆ. ಮೀನುಗಾರಿಗೆ ನಂಬಿದ ಸಾವಿರಾರು ವ್ಯಾಪಾರಿ ಅವಲಂಬನೆಯ ಮಹಿಳೆಯರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ವಿರೋಧ ವ್ಯಕ್ತವಾಗಿದೆ.