Tag: Comedy Artist

  • ಅದ್ಧೂರಿಯಾಗಿ ಜರುಗಿತು ಸಗರನಾಡು ಉತ್ಸವ – ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಿಗೆ ಸನ್ಮಾನ

    ಅದ್ಧೂರಿಯಾಗಿ ಜರುಗಿತು ಸಗರನಾಡು ಉತ್ಸವ – ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಿಗೆ ಸನ್ಮಾನ

    ಯಾದಗಿರಿ: ಜಿಲ್ಲೆಯ ಶಹಾಪುರನಲ್ಲಿ ಸಗರನಾಡು ಉತ್ಸವ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಯಿತು.

    ಚರಬಸವೇಶ್ವರ ಸಂಗೀತ ಸೇವಾ ಸಮಿತಿ ವತಿಯಿಂದ ಶಹಾಪುರದ ಚರಬಸವೇಶ್ವರ ಮಂದಿರದ ಆವರಣದಲ್ಲಿ 22ನೇ ವರ್ಷದ ಸಗರನಾಡು ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗದಗನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪಂಚಾಕ್ಷರಿ ಕಲ್ಯಯ್ಯ ಅಜ್ಜನವರು ಕಾರ್ಯಕ್ರಮ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಕಲ್ಯಯ್ಯ ಅಜ್ಜನವರಿಗೆ ತುಲಾಬಾರ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಕಲ್ಲಯ್ಯ ಅಜ್ಜನವರು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.

    ಈ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದವು. ಹಿರಿಯ ಕಲಾವಿದ ವೈಜ್ಯನಾಥ ಬಿರಾದರ, ಜ್ಯೂನಿಯರ್ ಸಾಧು ಕೋಕಿಲ, ಶಕ್ತಿಕುಮಾರ್, ಕಾಮಿಡಿ ಕಿಲಾಡಿ ಖ್ಯಾತಿಯ ಪ್ರವೀಣ್ ದಸ್ತೆ ಕಾಮಿಡಿ ಝಲಕ್ ನೋಡುಗರಿಗೆ ಸಖತ್ ಮನರಂಜಿಸಿತು. ಬಸವರಾಜ್ ವರವಿ ನೃತ್ಯ ಕಾರ್ಯಕ್ರಮ ನೋಡುಗರಿಗೆ ಖುಷಿ ನೀಡಿತು.

    ಈ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ವಿವಿಧ ಕ್ಷೇತ್ರದ ಸೇವೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಒಟ್ಟಿನಲ್ಲಿ ಸಗರನಾಡು ಉತ್ಸವ ಸಗರನಾಡಿನಲ್ಲಿ ಅದ್ಧೂರಿಯಾಗಿ ಜರುಗಿತು.

  • ಪ್ರಧಾನಿ ಮೋದಿಗೆ ಪ್ರಾಣೇಶ್ ಅಭಿನಂದನೆ

    ಪ್ರಧಾನಿ ಮೋದಿಗೆ ಪ್ರಾಣೇಶ್ ಅಭಿನಂದನೆ

    ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಿದ್ದಕ್ಕೆ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನಾ ಪತ್ರ ಬರೆದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರೇ ಯಾವುದೇ ಸ್ವಾರ್ಥವಿಲ್ಲದೆ ರಾಷ್ಟ್ರದ ಏಳಿಗೆಯ ಪಣತೊಟ್ಟು ಕಾಯ್ದೆ ಜಾರಿ ಮಾಡಿದ್ದೀರಿ. ಇದಕ್ಕಾಗಿ ನಿಮಗೆ ಅಭಿನಂದನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ದೇಶದಲ್ಲಿ ಸಮಾನತೆ, ಮಾನವೀಯ ಮೌಲ್ಯಗಳನ್ನು ನಿರಂತರವಾಗಿ ತಲುಪಿಸಲುವಲ್ಲಿ ಯಶಸ್ವಿಯಾಗಿದ್ದೀರಿ. ಇದೊಂದು ರೀತಿಯ ತಪಸ್ಸು ಎಂದು ಪ್ರಾಣೇಶ್ ಅವರು ಅಭಿನಂದನಾ ಪತ್ರದಲ್ಲಿ ಕೊಂಡಾಡಿದ್ದಾರೆ. ಅಲ್ಲದೆ ಇನ್ನೂ ಬಾಕಿ ಉಳಿದಿರುವ ಕಾನೂನುಗಳನ್ನೂ ಜಾರಿಗೆ ತರಲು ತಮಗೆ ಶಕ್ತಿ, ಆರೋಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    ಪತ್ರದಲ್ಲೇನಿದೆ?
    ನಮ್ಮ ನಾಡು, ದೇಶ ಮಹಾತ್ಮರ, ಸಂತರ, ಯೋಗಿಗಳ ತಪೋಭೂಯಾಗಿದ್ದು, ಇಂತಹ ಪುಣ್ಯಭೂಮಿಯ ಭದ್ರತೆಯ ಬೆಳವಣಿಗೆಗೆ ಸ್ವಾರ್ಥ ದುರಾಸೆಗಳಿಲ್ಲದೆ ಸೇವೆಗೈದು ರಾಷ್ಟ್ರದ ರಕ್ಷಣೆಗೆ ಪಣತೊಟ್ಟು, ದೇಶದ ಐಕ್ಯತೆ, ಭದ್ರತೆಗೆ ಪೌರತ್ವ ತಿದ್ದುಪಡಿ ಕಾಯ್ದೆ 2019 ಜಾರಿಗೆ ತಂದಿದ್ದೀರಿ ನಿಮಗೆ ಅಭಿನಂದನೆಗಳು.

    ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದ ಭದ್ರತೆಗಾಗಿ ಯೋಜನೆ ರೂಪಿಸದೇ ದೇಶ ಬಲಹೀನತೆಯಿಂದ ಕೂಡಿತ್ತು. ಈ ವ್ಯವಸ್ಥೆಯನ್ನು ಸರಿಪಡಿಸಲು ತಮ್ಮ ಅವಿರತ ಪರಿಶ್ರಮದಿಂದ ಭಾರತವು ಪ್ರಪಂಚದಲ್ಲೇ ಭದ್ರತೆಯಲ್ಲಿ ಅಗ್ರಸ್ಥಾನ ಪಡೆಯುವಂತಾಯಿತು. ಜನಸಾಮಾನ್ಯರ ಆಶೋತ್ತರ ಈಡೇರಿಸಲು ಸತತ ಪ್ರಯತ್ನದಿಂದ ಜಮ್ಮು-ಕಾಶ್ಮೀರದ 370ನೇ ವಿಧಿ ಹಾಗೂ 35ಎ ರದ್ದುಗೊಳಿಸುವ ಮೂಲಕ ಡಾ.ಶ್ಯಾಮ್‍ಪ್ರಸಾದ್ ಮುಖರ್ಜಿಯವರ ಆಶಯವನ್ನು ಈಡೇರಿಸಿದ ಕೀರ್ತಿ ತಮಗೆ ಸಲ್ಲುತ್ತದೆ.

    ಈ ದೇಶದ ಕೋಟ್ಯಂತರ ಜನರ ಭಾವನೆಗಳ ಆರಾಧ್ಯ ದೈವವಾಗಿದ್ದ, ಶ್ರೀರಾಮ ಮಂದಿರದ ಕನಸು ಕೂಡ ನಿಮ್ಮ ಸರ್ಕಾರದ ಅವಧಿಯಲ್ಲಿ ಈಡೇರಿದ್ದು ಸಂತಸದ ವಿಷಯವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಅಖಂಡ ಭಾರತದ ಪರಿಕಲ್ಪನೆಗೆ ಸಾಕ್ಷಿಯಾಗಿದೆ. ರಾಜಕೀಯ ದುರುದ್ದೇಶ, ಮತಾಂಧತೆ, ಭಯೋತ್ಪಾದನೆ ರಾಷ್ಟ್ರದ ಶಾಂತಿಗೆ ಭಂಗ ತರಲು ಯತ್ನಿಸಿದ ನೆರೆ ರಾಷ್ಟ್ರಗಳ ಕಿರುಕುಳಗಳಿಗೆ ತಾವು ತಕ್ಕ ಉತ್ತರ ನೀಡಿದ್ದೀರಿ. ಈ ಮೂಲಕ ದೇಶದ ಶಾಂತಿ ಸಹನೆ ಕಾಪಾಡುವುದರ ಜೊತೆಗೆ ದೇಶದ ಸಂಪತ್ತನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗುವಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡಿರುವುದು ಶ್ಲಾಘನೀಯವಾಗಿದೆ.

  • ಚಿತ್ರರಂಗದಿಂದ ಯಾಕೆ ದೂರ ಉಳಿದೆ ಎಂಬುದನ್ನು ನಾಗರಾಜ್ ಕೋಟೆ ಹೇಳ್ತಾರೆ ಓದಿ

    ಚಿತ್ರರಂಗದಿಂದ ಯಾಕೆ ದೂರ ಉಳಿದೆ ಎಂಬುದನ್ನು ನಾಗರಾಜ್ ಕೋಟೆ ಹೇಳ್ತಾರೆ ಓದಿ

    ಬೆಂಗಳೂರು: ನಾಗರಾಜ್ ಕೋಟೆ ಸ್ಯಾಂಡಲ್‍ವುಡ್ ಕಂಡ ಅತ್ಯದ್ಭುತ ಹಾಸ್ಯ ಕಲಾವಿದ. ಹಿರಿತೆರೆಯ ಜೊತೆಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಾಗರಾಜ್ ಕೋಟೆ ಕೆಲ ವರ್ಷಗಳಿಂದ ಸಿನಿಮಾ ಮತ್ತು ಧಾರಾವಾಹಿಗಳಿಂದ ದೂರು ಉಳಿದುಕೊಂಡಿದ್ದರು. ಈಗ ಮತ್ತೊಮ್ಮೆ ಕಮ್ ಬ್ಯಾಕ್ ಮಾಡಲು ತಯಾರಾಗಿರುವ ನಾಗರಾಜ್ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಪ್ರಶ್ನೆ: ಏನು ಮಾಡ್ತಿದ್ದಾರೆ ನಾಗರಾಜ್ ಕೋಟೆ?
    ನಾಗರಾಜ್ ಕೋಟೆ: ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ನಟನೆ ಮಾಡ್ತೀನಿ. ಸೀರಿಯಲ್ ಗಳಲ್ಲಿ ನಟಿಸುವುದನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ. ಬೆಂಗಳೂರಿನ ಗಿರಿನಗರದಲ್ಲಿ ‘ಬಣ್ಣ ಅಭಿನಯ ಶಾಲೆ’ಯನ್ನು ಆರಂಭಿಸಿದ್ದು, ಮಕ್ಕಳು ಸಹ ಬರುತ್ತಿದ್ದಾರೆ. ನನಗೆ ಗೊತ್ತಿರುವಷ್ಟನ್ನು ಮಕ್ಕಳಿಗೆ ಕಲಿಸುವುದರ ಜೊತೆಗೆ ನಾನು ಅವರಿಂದ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ. ಸದ್ಯ ಲೈಫ್ ಸೂಪರ್ ಆಗಿದೆ.

    ಪ್ರಶ್ನೆ: ಯಾಕೆ ಟಿವಿಯಲ್ಲಿ ನಟಿಸುತ್ತಿಲ್ಲ?
    ನಾಗರಾಜ್ ಕೋಟೆ: ಕಾಲ ಬದಲಾಗಿದ್ದು ಹೊಸಬರ ಅಲೆ ನುಗ್ಗುತ್ತಿದೆ. ಹಾಗಾಗಿ ನಮ್ಮಂತವರು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವಂತೆ ಆಗಿದೆ. ನಮ್ಮ ಕಾಲದಲ್ಲಿ ಯಾವ ಚಾನೆಲ್ ಹಾಕಿದ್ರೂ ನಾನು ಕಾಣಿಸಿಕೊಳ್ಳುತ್ತಿದ್ದೆ. ಆದ್ರೆ ಇವಾಗ ಸ್ವಲ್ಪ ಟ್ರೆಂಡ್ ಚೇಂಜ್ ಆಗಿದೆ. ಹಾಗಂತ ಸುಮ್ಮನೇ ಕೂರುವ ಜಾಯಮಾನ ನಮ್ಮದಲ್ಲ. ಹೇಗೆ ನಿಮ್ಮ ಮುಂದೆ ಕಾಣಿಸಿಕೊಳ್ಳಬೇಕು, ಹೇಗೆ ನಿಮ್ಮನ್ನ ತಲುಪಬೇಕು ಅಂತಾ ಪ್ಲಾನ್ ಮಾಡಿದ್ದೇನೆ.

    ಪ್ರಶ್ನೆ: ನಾಗರಾಜ್ ಕೋಟೆಯವರ ಪ್ಲಾನ್ ಏನು?
    ನಾಗರಾಜ್ ಕೋಟೆ: ಹಿಂದೆ ಸಿನಿಮಾ ನೋಡಬೇಕೆಂದ್ರೆ ಚಿತ್ರಮಂದಿರಗಳಿಗೆ ಹೋಗಬೇಕಿತ್ತು. ಮನರಂಜನೆಗಾಗಿ ವೇದಿಕೆಗಳಿಗೆ ಹತ್ರ ಜನರು ಹೋಗಬೇಕಿತ್ತು. ಆದ್ರೆ ಇಂದು ಕಾಲ ಬದಲಾಗಿದ್ದು, ಕೈಯಲ್ಲಿರುವ ಮೊಬೈಲ್ ನಲ್ಲಿ ಇಡೀ ಪ್ರಪಂಚವನ್ನ ನೋಡಬಹುದಾಗಿದೆ. ಈಗ ನಾನು ನಾಗರಾಜ್ ಕೋಟೆ ಎಂಬ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದ್ದು, ನಿಮ್ಮ ಕೈಯಲ್ಲಿರುವ ಮೊಬೈಲ್ ನಲ್ಲಿ ಬರುತ್ತೇನೆ.

    ಪ್ರಶ್ನೆ: ಆರಂಭ ಯಾವಾಗ? ಕಾರ್ಯಕ್ರಮದ ಹೆಸರೇನು?
    ನಾಗರಾಜ್ ಕೋಟೆ: ಏಪ್ರಿಲ್ 18ರಿಂದ ವಿವಿಧ ವಿಚಾರಗಳೊಂದಿಗೆ ‘ಕೋಟೆ ಪಂಚ್’ ಕಾರ್ಯಕ್ರಮದ ಮೂಲಕ ಎಲ್ಲರನ್ನು ನಗಿಸಲು ನಾಗರಾಜ ಕೋಟೆ ಬರಲಿದ್ದಾರೆ.

    ನಾಗರಾಜ್ ಕೋಟೆಯವರ ಹಾಸ್ಯ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ವಿ.ಮನೋಹರ್, ನಟ ಶರತ್ ಲೋಹಿತಾಶ್ವ ಮತ್ತು ನಟಿ ರೂಪಿಕಾ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.