Tag: collapse

  • ಜನನಿಬೀಡ ಪ್ರದೇಶದಲ್ಲಿದ್ದ ಕಟ್ಟಡ ಕುಸಿತ – ತಪ್ಪಿತು ಭಾರೀ ದುರಂತ

    ಜನನಿಬೀಡ ಪ್ರದೇಶದಲ್ಲಿದ್ದ ಕಟ್ಟಡ ಕುಸಿತ – ತಪ್ಪಿತು ಭಾರೀ ದುರಂತ

    ವಿಜಯಪುರ: ಜನನಿಬೀಡ ಪ್ರದೇಶದಲ್ಲಿದ್ದ ಹಳೇ ಕಟ್ಟಡವೊಂದು ಕುಸಿದ ಪರಿಣಾಮ ಭಾರೀ ಅನಾಹುತವೊಂದು ಕೊದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಜಿಲ್ಲೆಯ ಗಾಂಧಿಚೌಕದಲ್ಲಿ ನಡೆದಿದೆ.

    ಗಾಂಧಿಚೌಕದಲ್ಲಿರುವ ಮಾರ್ಕೆಟ್‍ ನ ಮೇಲ್ಛಾವಣಿ ಕುಸಿದು ಬಿದ್ದಿದೆ. ಎಲ್‍ಬಿಎಸ್ ಮಾರ್ಕೆಟ್ ಕಿರಿದಾಗಿದ್ದು, ಜನನಿಬೀಡ ಪ್ರದೇಶದಲ್ಲಿರುವ ಈ ಕಟ್ಟಡ ಹಳೆಯದಾಗಿತ್ತು. ಬೆಳಗಿನ ಜಾವದಲ್ಲಿ ಈ ಕಟ್ಟಡ ಕುಸಿದಿದೆ.

    ಘಟನೆ ನಡೆದ ವೇಳೆ ಕಟ್ಟಡದಲ್ಲಿ ಕೆಲವೇ ಕೆಲವು ಜನರು ಇದ್ದರು. ಆದ್ದರಿಂದ ಭಾರೀ ಅನಾಹುತ ತಪ್ಪಿದ್ದು, ಕಟ್ಟಡದಲ್ಲಿದ್ದ ಕೆಲವರು ಓಡಿ ಬಂದಿದ್ದಾರೆ. ಅವರಿಗೆಲ್ಲಾ ಸಣ್ಣ-ಪುಟ ಗಾಯಗಳಾಗಿವೆ. ಆದರೆ ಇಷ್ಟೊಂದು ಅನಾಹುತ ಸಂಭವಿಸಿದ್ರೂ, ಸ್ಥಳಕ್ಕೆ ಮಾತ್ರ ಪಾಲಿಕೆ ಅಧಿಕಾರಿಗಳು ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಟ್ಟಡ ಕುಸಿತಕ್ಕೆ 4 ಬಲಿ, 20 ಹೆಚ್ಚು ಕಾರ್ಮಿಕರು ಸಿಲುಕಿರುವ ಸಾಧ್ಯತೆ

    ನಿರ್ಮಾಣ ಹಂತದ ನಾಲ್ಕು ಅಂತಸ್ತಿನ ಕಟ್ಟಡ ಕುಸಿತಕ್ಕೆ 4 ಬಲಿ, 20 ಹೆಚ್ಚು ಕಾರ್ಮಿಕರು ಸಿಲುಕಿರುವ ಸಾಧ್ಯತೆ

    ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಬಹು ಅಂತಸ್ತಿನ ಕಟ್ಟಡ ಕುಸಿತಗೊಂಡು  ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಸರ್ಜಾಪುರ ರಸ್ತೆಯ ಕಸವನಹಳ್ಳಿ ಬಳಿ ಘಟನೆ ನಡೆದಿದೆ.

    ಕಟ್ಟದ ಕುಸಿದ ವೇಳೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 20 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪ್ರಸ್ತುತ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದು, ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆ ಆರಂಭಿಸಿದೆ. ಸ್ಥಳಕ್ಕೆ ಸ್ಥಳಿಯ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದಾರೆ.

    ಕಟ್ಟದ ನಿರ್ಮಾಣದ ವೇಳೆ ಮೂಲ ವಿನ್ಯಾಸವನ್ನ ಬದಲಾಯಿಸಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿರುವ ಸಾಧ್ಯತೆ ಇದೆ. ಅಲ್ಲದೇ ಕಟ್ಟದ ಬೆಸ್ ಮೆಂಟ್ ಸರಿಯಾಗಿ ಅಳವಡಿಸದ ಕಾರಣ ಕಟ್ಟಡ ಈ ಮೊದಲೇ ಒಂದು ಭಾಗದಲ್ಲಿ ಬಾಗಿತ್ತು ಎಂಬ ಮಾಹಿತಿ ಲಭಿಸಿದೆ. ಪ್ರಸ್ತುತ ಈವರೆಗೆ ಅಗ್ನಿಶಾಮಕ ಸಿಬ್ಬಂದಿ 7 ಕಾರ್ಮಿಕರ ರಕ್ಷಣೆ ಮಾಡಿದ್ದು, ಹೆಚ್ಚಿನ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈ ಕಟ್ಟಡ ರಫೀಕ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದ್ದು, ಕಟ್ಟಡ ಕುಸಿತ ಬಳಿಕ ಕಟ್ಟಡ ಮಾಲೀಕ ರಫೀಕ್ ನಾಪತ್ತೆಯಾಗಿದ್ದಾರೆ.

    ಘಟನೆ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಸಂಪತ್ ರಾಜ್ ಅವರು, ಕಟ್ಟಡ ಕುಸಿತ ಕುರಿತು ಮಾಹಿತಿ ಲಭಿಸಿದ ತಕ್ಷಣ ಆಂಬ್ಯುಲೆನ್ಸ್, ರಕ್ಷಣಾ ತಂಡ ಹಾಗೂ ಅಧಿಕಾರಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.

    ಕಟ್ಟಡದ ಅಡಿಯಲ್ಲಿ ಎಷ್ಟು ಜನ ಸಿಲುಕಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಈಗಾಗಲೇ ರಕ್ಷಣೆ ಮಾಡಲಾಗಿರುವ ಕಾರ್ಮಿಕರು ಮಾಹಿತಿ ನೀಡಿದ ಪ್ರಕಾರ 20 ಕಾರ್ಮಿಕರು ಕಟ್ಟದ ಕೆಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಘಟನಾಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಸದ್ಯ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗುವುದು. ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಲಾಗುತ್ತದೆ ಹಾಗೂ ಮೃತರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

  • ಯಾದಗಿರಿಯಲ್ಲಿ ರಾಜ್ಯ ಹೆದ್ದಾರಿಯಾಯ್ತು ಹಳ್ಳ – ಸವಾರರು ಸಾವಿರ ಕಣ್ಣಿಟ್ಟು ವಾಹನ ಓಡಿಸಬೇಕು

    ಯಾದಗಿರಿಯಲ್ಲಿ ರಾಜ್ಯ ಹೆದ್ದಾರಿಯಾಯ್ತು ಹಳ್ಳ – ಸವಾರರು ಸಾವಿರ ಕಣ್ಣಿಟ್ಟು ವಾಹನ ಓಡಿಸಬೇಕು

    ಯಾದಗಿರಿ: ಕೆರೆ ನೀರಿನಿಂದ ಹೆದ್ದಾರಿ ಸೇತುವೆ ಮುಳುಗಿ ವಾಹನ ಸವಾರರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ.

    ಕೊಡಂಗಲ್-ಸಿಂದಗಿಯ, ರಾಜ್ಯ ಹೆದ್ದಾರಿ 16ರ ರಸ್ತೆ ಮೇಲೆ ಕೆರೆ ನೀರು 15 ದಿನಗಳಿಂದ ಪ್ರತಿನಿತ್ಯವು ಜಲಪಾತದಂತೆ ಹರಿಯುತ್ತಿದ್ದು, ಗ್ರಾಮಸ್ಥರು ಹಾಗೂ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ಕೆರೆ ನೀರಿನ ಹರಿವಿನ ರಭಸಕ್ಕೆ ರಾಜ್ಯ ಹೆದ್ದಾರಿ 16ರಲ್ಲಿರುವ ಸೇತುವೆ ಕೊಚ್ಚಿಹೋಗಿದೆ. ಜಲಪಾತದ ರೀತಿಯಲ್ಲಿ ನೀರು ಹರಿಯುತ್ತಿದೆ.

    ಈ ರಸ್ತೆಯಲ್ಲಿ ಪ್ರಯಾಣ ಮಾಡುವವರು ಭಯಪಡುವಂತಾಗಿದೆ. ಹಗಲು ಹೊತ್ತಿನಲ್ಲಿ ಕಷ್ಟಪಟ್ಟು ವಾಹನ ಚಲಾಯಿಸಬಹುದು. ಆದರೆ ರಾತ್ರಿ ಇಲ್ಲಿ ಹೋಗೋದು ಕಷ್ಟ ಆದ್ದರಿಂದ ಅನಾಹುತದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಕಣ್ಣಲ್ಲಿ ಕಣ್ಣಿಟ್ಟು ವಾಹನ ನಡೆಸಬೇಕಾಗಿದೆ, ಹೀಗಾಗಲೇ ಇಲ್ಲಿ ಸಾಕಷ್ಟು ಅಪಘಾತಗಳು ಕೂಡ ಸಂಭವಿಸಿವೆ. ಇಷ್ಟೆಲ್ಲಾ ಆದರೂ ಕೂಡ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ಸೂಚನಾ ಫಲಕ ಕೂಡ ಹಾಕಿಲ್ಲ.

    ಹೀಗಾಗಿ ಇನ್ನಷ್ಟು ಅನಾಹುತಗಳು ಸಂಭವಿಸುವುದಕ್ಕೂ ಮುಂಚೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಕುಸಿಯುತ್ತಿರುವ ಕಟ್ಟಡದ ಮೇಲ್ಛಾವಣಿ – ಆತಂಕದಲ್ಲಿ ಪಾಠ ಕೇಳ್ತಿದ್ದಾರೆ ಶಾಲಾ ಮಕ್ಕಳು

    ಕುಸಿಯುತ್ತಿರುವ ಕಟ್ಟಡದ ಮೇಲ್ಛಾವಣಿ – ಆತಂಕದಲ್ಲಿ ಪಾಠ ಕೇಳ್ತಿದ್ದಾರೆ ಶಾಲಾ ಮಕ್ಕಳು

    ಮೈಸೂರು: ಹೇಳಿಕೊಳ್ಳುವುದಕ್ಕೆ ಸಿಎಂ ಸಿದ್ದರಾಮಯ್ಯ, ಕ್ಯಾಬಿನೆಟ್‍ನ ಪವರ್ ಫುಲ್ ಮಿನಿಸ್ಟರ್ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಲ್ಲರೂ ಮೈಸೂರಿನವರು. ಆದರೆ ನಗರದ ನಂಜನಗೂಡು ಪಟ್ಟಣದಲ್ಲಿ ಸರ್ಕಾರಿ ಶಾಲೆಯೊಂದರ ಕಟ್ಟಡದ ಮೇಲ್ಛಾವಣಿ ಕುಸಿಯುತ್ತಿದ್ದು, ಆತಂಕದಲ್ಲಿಯೇ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.

    ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದ ಶತಮಾನದ ಕಟ್ಟಡ ಈಗ ದುಃಸ್ಥಿತಿ ತಲುಪಿದೆ. ಯಾವುದೇ ಕ್ಷಣದಲ್ಲಾದರೂ ಕುಸಿಯುವ ಹಂತದಲ್ಲಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ನಂಜನಗೂಡಿನ ಬಿಇಓ ಕಚೇರಿಗೆ ಕೂಗಳತೆ ದೂರದಲ್ಲಿರುವ ಈ ಸರ್ಕಾರಿ ಶಾಲೆಯ ಸ್ಥಿತಿ ದುಸ್ತರವಾಗಿದೆ.

    1946 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಮಹಾತ್ಮಗಾಂಧಿ ಭೇಟಿ ನೀಡಿದ ಹಿನ್ನೆಲೆಯನ್ನು ಹೊಂದಿರುವ ಈ ಶಾಲೆಗೆ ಕಾಯಕಲ್ಪ ನೀಡುವುದಕ್ಕೆ ಯಾರೂ ಕೂಡ ಮನಸ್ಸು ಮಾಡುತ್ತಿಲ್ಲ. ಶಾಲೆಯ ಮೇಲ್ಛಾವಣಿ ಕುಸಿದು ಬೀಳುವ ಹಂತದಲ್ಲಿದೆ. ಶಾಲೆಯ ಕಾಂಪೌಂಡ್ ಗೋಡೆ ಯಾವ ಕ್ಷಣದಲ್ಲಾದರೂ ಕುಸಿಯಬಹುದು. ಸುಣ್ಣ ಮಿಶ್ರಿತ ಮಣ್ಣಿನಿಂದ ನಿರ್ಮಿಸಿದ ಶತಮಾನದ ಶಾಲೆಗೆ ಕಾಯಕಲ್ಪ ನೀಡದೆ ಇದ್ದರೆ ನಿಜಕ್ಕೂ ದೊಡ್ಡ ಅನಾಹುತವಾಗಿ ಮಕ್ಕಳ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆ ಇದೆ.

    ಮಕ್ಕಳ ಪ್ರಾಣದ ಜೊತೆ ಶಿಕ್ಷಣ ಇಲಾಖೆ ಚೆಲ್ಲಾಟವಾಡದೆ ಶಾಲೆಯ ಕಟ್ಟಡವನ್ನು ಶೀಘ್ರವಾಗಿ ವ್ಯವಸ್ಥಿತವಾಗಿ ದುರಸ್ತಿ ಮಾಡಬೇಕಿದೆ.

  • ಹೊಸದುರ್ಗ ಬಳಿ ಮೈಸೂರು ಅರಸರ ಕಾಲದ ಸೇತುವೆ ಕುಸಿಯುವ ಭೀತಿ- ವಾಹನ ಸಂಚಾರ ಸ್ಥಗಿತ

    ಹೊಸದುರ್ಗ ಬಳಿ ಮೈಸೂರು ಅರಸರ ಕಾಲದ ಸೇತುವೆ ಕುಸಿಯುವ ಭೀತಿ- ವಾಹನ ಸಂಚಾರ ಸ್ಥಗಿತ

    ಚಿತ್ರದುರ್ಗ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಸೇತುವೆ ಕುಸಿಯುವ ಭೀತಿಯಿಂದ ವಾಹನ ಸಂಚಾರ ನಿರ್ಬಂಧ ಹೇರಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಬಳಿ ವೇದಾವತಿ ನದಿಗೆ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆ ಬೆಂಗಳೂರಿನಿಂದ ಹೊಸದುರ್ಗ ಸಂಪರ್ಕಿಸುವ ಮೈಸೂರು ಅರಸರ ಕಾಲದ ಜಯ ಚಾಮರಾಜೇಂದ್ರ ಸೇತುವೆಯಾಗಿದೆ.

    ಇದು ದಶಕಗಳ ಸೇತುವೆಯಾಗಿದ್ದರಿಂದ ತುಂಬಾ ಹಳೆಯದಾದ ಹಿನ್ನಲೆಯಲ್ಲಿ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣಕ್ಕಾಗಿ ಹಳ್ಳ ತೋಡಿದ್ದಾರೆ. ಆದರೆ ಈಗ ಅತಿಯಾದ ಮಳೆಯಿಂದ ಇಂದು ಮುಂಜಾನೆಯಿಂದ ವೇದಾವತಿಯಲ್ಲಿ ನೀರು ಹರಿಯುತ್ತಿದ್ದು, ಸೇತುವೆ ಅಕ್ಕಪಕ್ಕದ ಮಣ್ಣು ಕುಸಿಯುತ್ತಿದೆ.

    ಇದರಿಂದ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಹೊಸದುರ್ಗ ಪೊಲೀಸರು ಸಂಚಾರ ನಿರ್ಬಂಧಿಸಿ ಬೇರೆ ಮಾರ್ಗವಾಗಿ ಸಂಚರಿಸಲು ವಾಹನಗಳಿಗೆ ಅನುವು ಮಾಡಿಕೊಟ್ಟಿದ್ದಾರೆ.

  • ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದುರ್ಮರಣ

    ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದುರ್ಮರಣ

    ಜೈಪುರ: ಭಾರೀ ಮಳೆ ಹಾಗೂ ಚಂಡಮಾರುತದಿಂದಾಗಿ ಮದುವೆ ಮಂಟಪದ ಗೋಡೆ ಕುಸಿದು 26 ಮಂದಿ ದಾರುಣವಾಗಿ ಸಾವನ್ನಪ್ಪಿರೋ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಇಲ್ಲಿನ ಭರತ್‍ಪುರ ಜಿಲ್ಲೆಯ ಸೆವರ್ ರೋಡ್‍ನ ಅನ್ನಪೂರ್ಣ ಮ್ಯಾರೇಜ್ ಹೋಮ್‍ನಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ, ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 26 ಮಂದಿ ಸಾವನ್ನಪ್ಪಿದ್ದು, 28 ಮಂದಿಗೆ ಗಂಭೀರ ಗಾಯಗಳಾಗಿದೆ.

    ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದಾಗ ಈ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಚಂಡಮಾರುತ ಅಪ್ಪಳಿಸಿದೆ. ಮಳೆಯಿಂದಾಗಿ ಕೆಲವರು ಮಂಟಪದ ಪಕ್ಕದಲ್ಲಿದ್ದ ಶೆಡ್‍ನಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಮಂಟಪದ ಗೋಡೆ ಇದ್ದಕ್ಕಿದ್ದಂತೆ ಶೆಡ್ ಮೇಲೆ ಕುಸಿದು ಬಿದ್ದಿದ್ದು, 26 ಮಂದಿಯನ್ನ ಬಲಿ ಪಡೆದಿದೆ. ಮೃತಪಟ್ಟವರಲ್ಲಿ 11 ಮಂದಿ ಪುರುಷರು, ಏಳು ಮಂದಿ ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಂಟಪದ ಗೋಡೆ ಸುಮಾರು 90 ಅಡಿ ಉದ್ದ ಹಾಗೂ 12-13 ಅಡಿ ಎತ್ತರವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹವಾಮಾನ ಇದ್ದಕ್ಕಿದ್ದಂತೆ ಬದಲಾಗಿ ಬಿರುಗಾಳಿ ಶುರುವಾಗಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.

    ದುರಂತಕ್ಕೆ ಮುಖ್ಯಮಂತ್ರಿ ವಸುಂಧರಾ ರಾಜೆ ವಿಷಾದ ವ್ಯಕ್ತಪಡಿಸಿದ್ದಾರೆ.