Tag: Collage Government

  • ಜಾರಕಿಹೊಳಿ ಸಹೋದರರಿಂದ ಸರ್ಕಾರಕ್ಕೆ 4 ಷರತ್ತು!

    ಜಾರಕಿಹೊಳಿ ಸಹೋದರರಿಂದ ಸರ್ಕಾರಕ್ಕೆ 4 ಷರತ್ತು!

    ಬೆಂಗಳೂರು: ಬೆಳಗಾವಿ ವಿಚಾರವಾಗಿ ಮುನಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟು ಹೋಗದಂತೆ ಮಾಡಲು ತಮ್ಮದೇ ಆದ ನಾಲ್ಕು ಷರತ್ತುಗಳನ್ನು ಸಮ್ಮಿಶ್ರ ಸರ್ಕಾರದ ಮುಂದೆ ಇಟ್ಟಿದ್ದಾರಂತೆ.

    ಹೌದು, ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆ ನಡೆಯಿಂದ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಬಿಡುವ ಯೋಚನೆಗೆ ಕೈ ಹಾಕಿರುವುದಾಗಿ ಮಾಹಿತಿ ಲಭಿಸಿದೆ. ಒಂದು ವೇಳೆ ಸಹೋದರರು ಪಕ್ಷದಲ್ಲಿಯೇ ಉಳಿಯಬೇಕಾದರೆ ಅವರ 4 ಷರತ್ತುಗಳನ್ನು ಪೂರೈಸುವಂತೆ ಕೆಪಿಸಿಸಿ ಹಾಗೂ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

    ಅಲ್ಲದೇ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗಲೂ ಸಹೋದರರು ಈ ನಾಲ್ಕು ಷರತ್ತುಗಳನ್ನು ಮುಂದಿಟ್ಟಿರುವುದಾಗಿ ತಿಳಿದು ಬಂದಿದೆ.

    ಷರತ್ತುಗಳು ಏನು?
    1. ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ಯಾರೇ ಆದರೂ ಬೆಳಗಾವಿ ಜಿಲ್ಲೆಯ ಆಂತರಿಕ ರಾಜಕೀಯ ವಿಷಯಕ್ಕೆ ತಲೆ ಹಾಕದಂತೆ ನೋಡಿಕೊಳ್ಳಬೇಕು.
    2. ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ನಿರ್ಣಯವೇ ಅಂತಿಮ. ಪಕ್ಷ ಹಾಗೂ ಸರ್ಕಾರ ಎರಡರ ಹಿತ ಕಾಯುವುದು ನಮ್ಮ ಜವಾಬ್ದಾರಿ. ಆದರೆ ಅದಕ್ಕೆ ಧಕ್ಕೆ ಬರಬಾರದು ಅಂದರೆ ನಾವು ಹೇಳಿದ ಮಾತಿಗೆ ಆದ್ಯತೆ ನೀಡಬೇಕು.
    3. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದ ಶಾಸಕರೊಬ್ಬರಿಗೆ ಸಚಿವ ಸ್ಥಾನ ಕಲ್ಪಿಸಿಕೊಡಬೇಕು.
    4. ನಮ್ಮ ಬೆಂಬಲಿತ ಮೂರರಿಂದ ನಾಲ್ಕು ಜನ ಶಾಸಕರಿಗೆ ಒಳ್ಳೆಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು.

    ಈ ಮೇಲ್ಕಂಡ ಒಟ್ಟು 4 ಷರತ್ತುಗಳನ್ನು ಜಾರಕಿಹೊಳಿ ಸಹೋದರರು ಪ್ರಮುಖವಾಗಿ ಎಐಸಿಸಿ ಹಾಗೂ ಕೆಪಿಸಿಸಿ ನಾಯಕರ ಮುಂದಿಟ್ಟಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಮೊದಲೆರಡು ಷರತ್ತುಗಳಿಗೆ ಅಸ್ತು ಎಂದು, ಬೆಳಗಾವಿ ವಿಷಯದಲ್ಲಿ ಯಾರು ಕೂಡ ಹಸ್ತಕ್ಷೇಪ ಮಾಡಲ್ಲ. ಬೆಳಗಾವಿಯಲ್ಲಿನ ಪಕ್ಷ ಹಾಗೂ ಸರ್ಕಾರದ ಜವಾಬ್ದಾರಿ ನಿಮ್ಮದೆ ಎಂದಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಿದೆ. ಹೀಗಾಗಿ ಜಾತಿವಾರು ಹಾಗೂ ಪ್ರದೇಶವಾರು ಲೆಕ್ಕಾಚಾರದಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಅನ್ಯಾಯವಾಗಿದ್ದರೆ, ಅದನ್ನು ಪರಿಶೀಲಿಸಿ ನ್ಯಾಯ ಒದಗಿಸಲಾಗುವುದು. ಇನ್ನು ನಿಗಮ ಮಂಡಳಿ ವಿಚಾರದಲ್ಲಿ ಅರ್ಹರಿಗೆ 2-3 ಬಾರಿ ಗೆದ್ದವರಿಗೆ ಆದ್ಯತೆ ನೀಡಬೇಕಿದೆ. ಅದರಲ್ಲಿ ನಿಮ್ಮ ಬೆಂಬಲಿಗರು ಇದ್ದರೆ ಕಂಡಿತ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರಂತೆ.

    ಎಐಸಿಸಿ ಹಾಗೂ ಕೆಪಿಸಿಸಿ ಪ್ರಮುಖ ನಾಯಕರು ಜಾರಕಿಹೊಳಿ ಸಹೋದರರು ಮುಂದಿಟ್ಟಿದ್ದ ನಾಲ್ಕು ಷರತ್ತುಗಳ ಪೈಕಿ ಎರಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನುಳಿದ ಷರತ್ತುಗಳಿಗೆ ಸ್ವಲ್ಪ ಸಮಯ ಕಾಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೂರು ದಿನದ ಆಡಳಿತ ಸಂಪೂರ್ಣ ತೃಪ್ತಿ ತಂದಿಲ್ಲ: ಸಿಎಂ ಕುಮಾರಸ್ವಾಮಿ

    ನೂರು ದಿನದ ಆಡಳಿತ ಸಂಪೂರ್ಣ ತೃಪ್ತಿ ತಂದಿಲ್ಲ: ಸಿಎಂ ಕುಮಾರಸ್ವಾಮಿ

    ನವದೆಹಲಿ: ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ನೂರು ದಿನಗಳ ಆಡಳಿತವು ಸಂಪೂರ್ಣವಾಗಿ ತೃಪ್ತಿ ತಂದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

    ಮೈತ್ರಿ ಸರ್ಕಾರದ ನೂರು ದಿನಗಳ ಹಿನ್ನೆಲೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರದ ನೂರು ದಿನಗಳ ಆಡಳಿತ ನನಗೆ ಸಂಪೂರ್ಣವಾಗಿ ತೃಪ್ತಿ ತಂದಿಲ್ಲ. ಸಾಕಷ್ಟು ಸವಾಲುಗಳನ್ನು ದಾಟಿ ಕೆಲ ತೀರ್ಮಾನಗಳನ್ನು ಮಾಡಿದ್ದೇನೆ. ಅಂತಹ ನಿರ್ಣಯಗಳು ಸ್ವಲ್ಪದರ ಮಟ್ಟಿಗೆ ತೃಪ್ತಿ ತಂದಿದೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಜನರ ನೀರಿಕ್ಷೆಯಂತೆ ಬದಲಾವಣೆಯನ್ನು ಮಾಡಿದ್ದೇನೆ ಎನ್ನುವ ನಂಬಿಕೆಯಿದೆ ಎಂದು ತಿಳಿಸಿದರು.

    ಇನ್ನೂ ಸಾಕಷ್ಟು ಕ್ರಿಯಾಯೋಜನೆಗಳು ಬಾಕಿ ಇವೆ. ಶಿಕ್ಷಣ, ಆರೋಗ್ಯ ಹಾಗೂ ವಸತಿ ಸೇರಿದಂತೆ ಇನ್ನೂ ಅನೇಕ ವಲಯಗಳಲ್ಲಿ ಸಾಕಷ್ಟು ಕನಸುಗಳನ್ನು ಹೊಂದಿದ್ದೇನೆ. ಬೆಂಗಳೂರಿನ ಕೆಲ ಸಮಸ್ಯೆಗಳಿಗೆ ಮುಕ್ತಿ ನೀಡಬೇಕಾಗಿದೆ. ನನ್ನ ಮುಂದಿನ ಎಲ್ಲಾ ಕೆಲಸಗಳನ್ನು ಶೀಘ್ರವೇ ತಿಳಿಸುತ್ತೇನೆ ಎಂದರು.

    ಸಚಿವ ಸಂಪುಟ ಸದಸ್ಯರ ಸಹಕಾರ ಸಿಕ್ಕಿದ್ದು, ಜೊತೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕರ ಸಂಪೂರ್ಣ ಸಹಕಾರವೂ ಸಹ ಸಿಕ್ಕಿದೆ. ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ನನಗೆ ಕಾಂಗ್ರೆಸ್ಸಿನ ಹಿರಿಯ ನಾಯಕರ ಸಹಕಾರ ಹೆಚ್ಚು ಸಿಕ್ಕಿದೆ. ಮೈತ್ರಿ ಸರ್ಕಾರದಲ್ಲಿ ಕೆಲ ಭಿನ್ನಾಭಿಪ್ರಾಯಗಳನ್ನು ಕಾಣುವುದು ಸಹಜ. ಒಂದೇ ಪಕ್ಷ ಅಧಿಕಾರ ಇದ್ದಾಗಲೂ ಸಾಕಷ್ಟು ಗೊಂದಲಗಳಿರುತ್ತವೆ. ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲವೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೋದಲ್ಲೆಲ್ಲಾ ಕಣ್ಣೀರು, ಅಭಿವೃದ್ಧಿಗೆ ಎಳ್ಳುನೀರು: ಸಮ್ಮಿಶ್ರ ಸರ್ಕಾರದ ನೂರು ದಿನದ ಸಂಭ್ರಮಕ್ಕೆ ಬಿಜೆಪಿ ವ್ಯಂಗ್ಯ

    ಹೋದಲ್ಲೆಲ್ಲಾ ಕಣ್ಣೀರು, ಅಭಿವೃದ್ಧಿಗೆ ಎಳ್ಳುನೀರು: ಸಮ್ಮಿಶ್ರ ಸರ್ಕಾರದ ನೂರು ದಿನದ ಸಂಭ್ರಮಕ್ಕೆ ಬಿಜೆಪಿ ವ್ಯಂಗ್ಯ

    ಬೆಂಗಳೂರು: ಸಮ್ಮಿಶ್ರ ಸರ್ಕಾರ 100 ದಿನಗಳನ್ನು ಪೂರೈಸಿರುವುದಕ್ಕೆ ರಾಜ್ಯ ಬಿಜೆಪಿಯು ವ್ಯಂಗ್ಯವಾದ ಹೇಳಿಕೆಗಳನ್ನು ನೀಡುವ ಮೂಲಕ ಸಿಎಂ ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿಯೊಂದಿಗೆ ರಚನೆಯಾದ ಸಮ್ಮಿಶ್ರ ಸರ್ಕಾರಕ್ಕೆ ಗುರುವಾರ 100 ದಿನಗಳನ್ನು ಪೂರ್ಣಗೊಳಿಸಿದೆ. ಇದರ ಸಂಭ್ರಮದಲ್ಲಿರುವ ಮೈತ್ರಿ ಪಕ್ಷಗಳಿಗೆ ರಾಜ್ಯ ಬಿಜೆಪಿಯು ವ್ಯಂಗ್ಯವಾಗಿ ಅಭಿನಂದನೆ ಸಲ್ಲಿಸಿ, ಆಡಳಿತಾರೂಢ ಸಿಎಂ ಕುಮಾರಸ್ವಾಮಿ ಸರ್ಕಾರದ ಕಾಲೆಳೆದಿದ್ದಾರೆ.

    ಬಿಜೆಪಿಯು ತನ್ನ ಟ್ವಿಟ್ಟರಿನಲ್ಲಿ, ದಿನಗಳು ನೂರು, ಹೋದಲೆಲ್ಲಾ ಕಣ್ಣೀರು, ಅಭಿವೃದ್ಧಿಗೆ ಎಳ್ಳುನೀರು ಎಂದು ಬರೆದು ಕೊಂಡು ಸಮ್ಮಿಶ್ರ ಸರ್ಕಾರವನ್ನು ಕವನದ ರೂಪದಲ್ಲಿ ಕಿಚಾಯಿಸಿದೆ. ಅಪವಿತ್ರ ಮೈತ್ರಿಯಲ್ಲಿ ತೀವ್ರ ಭಿನ್ನಮತದ ನಡುವೆಯೂ ನಿಮ್ಮ ಸರ್ಕಾರ 100 ದಿನಗಳನ್ನು ಪೂರೈಸಿರುವುದಕ್ಕೆ ಅಭಿನಂದನೆಗಳು. ಇನ್ನಾದರೂ ನಿಮ್ಮ ಸರ್ಕಾರ ಟೇಕ್ ಆಫ್ ಆಗಲಿ, ಸ್ಥಗಿತಗೊಂಡಿರುವ ರಾಜ್ಯದ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಗಲಿ ಎಂದು ಬರೆದುಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಡಬಿಡಂಗಿ ಸರ್ಕಾರ ಬೀಳುತ್ತೆ, ಜನಾದೇಶ ಪಡೆದ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಅನಂತ್ ಕುಮಾರ್

    ಎಡಬಿಡಂಗಿ ಸರ್ಕಾರ ಬೀಳುತ್ತೆ, ಜನಾದೇಶ ಪಡೆದ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಅನಂತ್ ಕುಮಾರ್

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು ಶುದ್ಧ ಎಡಬಿಡಂಗಿ ಸರ್ಕಾರವಾಗಿದ್ದು, ಇನ್ನೂ ಸ್ವಲ್ಪ ದಿನಗಳಲ್ಲೇ ಅಧಿಕಾರಕಳೆದುಕೊಂಡು ಜನಾದೇಶ ಪಡೆದಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಂದು ಕೇಂದ್ರ ರಾಸಾಯನಿಕ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.

    ನಗರದ ಬಸವನಗುಡಿಯ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಒಂದು ಅಪವಿತ್ರ ಮೈತ್ರಿಯಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದಗಿನಿಂದಲೂ ಶೀತಲ ಸಮರ ನಡೆಯುತ್ತಲೇ ಇದೇ. ಈ ಎಡಬಿಡಂಗಿ ಸರ್ಕಾರದ ನಾಯಕರುಗಳು ಚುನಾವಣಾ ಪೂರ್ವದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಕೆಸರೆರಚಾಟ ನಡೆಸಿದ್ದರು. ಇದರಿಂದಾಗಿ ಇಬ್ಬರೂ ಒಟ್ಟಿಗೆ ಉಳಿಯಲು ಸಾಧ್ಯವಿಲ್ಲ. ಕುಮಾರಸ್ವಾಮಿಯವರ ಸರ್ಕಾರ ಬಾಲಗ್ರಹಪೀಡಿತ ಸರ್ಕಾರವಾಗಿದೆ. ಹೀಗಾಗಿ ಈ ಸರ್ಕಾರ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ಸರ್ಕಾರ ಬಿದ್ದ ಕೂಡಲೇ ಹೊಸ ಸಮೀಕರಣ ಆಗುತ್ತದೆ. ಆಗ ಜನಾದೇಶ ಪಡೆದ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈ ವೇಳೆ ಬಿಬಿಎಂಪಿ ಹೊಸ ತೆರಿಗೆ ಕುರಿತು ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೇರಲು ಹೊರಟಿರುವ ಹೊಸ ತೆರಿಗೆ ಸರಿಯಲ್ಲ. ಮೊದಲು ತಮ್ಮ ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಲಿ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 3 ಸಾವಿರ ಕೋಟಿ ರೂಪಾಯಿ ಉಳಿಕೆಯಾಗುತ್ತದೆ. ಕೇವಲ 40 ಕೋಟಿ ರೂಪಾಯಿ ತೆರಿಗೆ ಸಂಗ್ರಹಕ್ಕೆ ಜನಸಾಮಾನ್ಯರಿಗೆ ಹೊರೆ ಹಾಕುವುದು ಸರಿಯಲ್ಲ ಎಂದು ಹೇಳಿದರು.

    ತೆಲಂಗಾಣದಿಂದ ಕರ್ನಾಟಕದ ಶಿವರಾಮಪುರದಲ್ಲಿ ಅತಿಕ್ರಮಣ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿರಾಜ್ಯವು ತನ್ನದೆಯಾದ ಗಡಿಯನ್ನು ಹೊಂದಿದ್ದು, ಅದರ ನೆಲ, ಜಲ ಹಾಗೂ ನಾಡುನುಡಿಯನ್ನು ಕಾಯ್ದುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ತೆಲಂಗಾಣದ ಕ್ರಮ ಸರಿಯಲ್ಲ. ಕೂಡಲೇ ಸಿಎಂ ಕುಮಾರಸ್ವಾಮಿಯವರು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಜೊತೆ ಈ ಬಗ್ಗೆ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡುವ ಮೊದಲು ಅನಂತ್ ಕುಮಾರ್ ಮನೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಹಾಗೂ ಇನ್ನೂ ಅನೇಕ ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೇ ತಾರಾರವರು ಅನಂತ್ ಕುಮಾರ್ ರವರಿಗೆ ರಾಖಿ ಕಟ್ಟುವ ಮೂಲಕ ಶುಭ ಹಾರೈಸಿದರು. ಅಲ್ಲದೇ ಅಣ್ಣ-ತಂಗಿಯ ವಿಶೇಷವಾದ ದಿನದಂದು ಎಲ್ಲರೂ ಪರಸ್ಪರ ರಕ್ಷಿಸಿಕೊಂಡು, ಭಾರತ ಮಾತೆ ಹಾಗೂ ಪ್ರಕೃತಿ ಮಾತೆಯನ್ನು ರಕ್ಷಣೆ ಮಾಡಬೇಕೆಂದು ಸಚಿವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈತ್ರಿಯಲ್ಲಿ ಅಭಿವೃದ್ಧಿ ಕಷ್ಟ, ಸಮನ್ವಯ ಸಮಿತಿಗೆ ಬರಬೇಡಿ ಎನ್ನಲು ಯಾರಿಂದಲೂ ಸಾಧ್ಯವಿಲ್ಲ: ಎಚ್.ವಿಶ್ವನಾಥ್

    ಮೈತ್ರಿಯಲ್ಲಿ ಅಭಿವೃದ್ಧಿ ಕಷ್ಟ, ಸಮನ್ವಯ ಸಮಿತಿಗೆ ಬರಬೇಡಿ ಎನ್ನಲು ಯಾರಿಂದಲೂ ಸಾಧ್ಯವಿಲ್ಲ: ಎಚ್.ವಿಶ್ವನಾಥ್

    ಮೈಸೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಬರಬೇಡಿ ಎನ್ನಲು ಯಾರಿಂದಲೂ ಸಾಧ್ಯವಿಲ್ಲವೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಇರುವುದು ಎರಡು ಪಕ್ಷಗಳು, ಒಂದು ಜೆಡಿಎಸ್ ಮತ್ತೊಂದು ಕಾಂಗ್ರೆಸ್. ಎರಡೂ ಪಕ್ಷಗಳ ಸಾಮಾನ್ಯ ಕಾರ್ಯಕ್ರಮಗಳನ್ನು ಸಮನ್ವಯಮಾಡುವ ಸಲುವಾಗಿಯೇ ಸಮಿತಿ ರಚನೆಯಾಗಿದೆ. ಈ ಸಭೆಗೆ ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಇರಲೇಬೇಕು. ಸಭೆಯಲ್ಲಿ ಪ್ರಮುಖವಾಗಿ ನಾನು ಹಾಗೂ ಗುಂಡುರಾವ್ ಇದ್ದರೆ ಮಾತ್ರ ಸಮನ್ವಯ ಸಮಿತಿ ಪೂರ್ಣವಾಗೋದು. ನನ್ನನ್ನು ಸಮಿತಿಗೆ ಬರಬೇಡಿ ಎನ್ನುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೃಷ್ಟಿಯಾಗಿರುವ ಕಾರಣ ಕೂಡಲೇ ಸಮನ್ವಯ ಸಮಿತಿ ಸಭೆಯನ್ನು ಕರೆಯಬೇಕು. ಸಭೆಯಲ್ಲಿ ಪ್ರಮುಖವಾಗಿ ಕೊಡಗು ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಬೇಕು. ಹೀಗಾಗಿ ಸಿದ್ದರಾಮಯ್ಯನವರಿಗೆ ಸಭೆ ಕರೆಯುವಂತೆ ಕೇಳುತ್ತಿದ್ದೇನೆ. ಆದರೆ ಅವರು ಬ್ಯುಸಿಯಾಗಿರುವ ಕಾರಣ ಸಮನ್ವಯ ಸಮಿತಿ ಸಭೆಯನ್ನು ಕರೆಯುತ್ತಿಲ್ಲ ಎಂದು ಹೇಳಿದರು.

    ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಅವರು, ಸತ್ಯವಾಗಿ ಹೇಳಬೇಕೆಂದರೆ ಮೈತ್ರಿ ಸರ್ಕಾರಗಳಲ್ಲಿ ಅಭಿವೃದ್ಧಿ ಕಷ್ಟ. ಎಂದಿದ್ದರೂ ಮೈತ್ರಿ ಸರ್ಕಾರ ಮೈತ್ರಿ ಸರ್ಕಾರವೇ, ಸ್ವತಂತ್ರ ಸರ್ಕಾರ ಸ್ವತಂತ್ರ ಸರ್ಕಾರವೇ ಆಗಿದೆ. ಮೈತ್ರಿ ಸರ್ಕಾರದಲ್ಲಿ ಯಾವಾಗಲೂ ವ್ಯತ್ಯಾಸ ಇದ್ದೇ ಇರುತ್ತದೆ. ಹೀಗಾಗಿ ಅಭಿವೃದ್ಧಿ ಅಸಾಧ್ಯ ಎಂದು ಪ್ರತಿಕ್ರಿಯಿಸಿದರು.

    ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾತನಾಡಿದ ಅವರು, ನೋಡಿ ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮದುವೆ ಆಗಿದೆ. ಹೀಗಾಗಿ ಅವರ ಹೇಳಿಕೆಗಳ ಬಗ್ಗೆ ಹೆಚ್ಚಾಗಿ ಮಾತನಾಡಲು ಆಗುವುದಿಲ್ಲ. ಈ ಮೊದಲು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಅಧಿಕಾರ ನಡೆಸಿದ್ದವು. ಆದರೆ ನಿರೀಕ್ಷೆಗೆ ಮೀರಿದ ಯಾವುದೇ ಕೆಲಸಗಳು ಮೈತ್ರಿ ಕೂಟದಿಂದ ನೆರವೇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಮೈಸೂರಿನಲ್ಲಿ ಜೆಡಿಎಸ್ ಮಹಾನಗರದ ಚುಕ್ಕಾಣಿಯನ್ನು ಹಿಡಿದೇ ಹಿಡಿಯುತ್ತದೆ. ಆಗ ಮೈಸೂರಿನ ಅಭಿವೃದ್ಧಿಯನ್ನು ಮಾಡಿ ತೋರಿಸುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವೇಗೌಡ್ರಿಗೇ ಮೋಸ ಮಾಡ್ದೋರು ಕುಮಾರಸ್ವಾಮಿನ ಬಿಡ್ತರಾ: ಸುರೇಶ್ ಅಂಗಡಿ

    ದೇವೇಗೌಡ್ರಿಗೇ ಮೋಸ ಮಾಡ್ದೋರು ಕುಮಾರಸ್ವಾಮಿನ ಬಿಡ್ತರಾ: ಸುರೇಶ್ ಅಂಗಡಿ

    ಬೆಳಗಾವಿ: ಮಾಜಿ ಪ್ರಧಾನಿ ದೇವೇಗೌಡ ಅವರಿಗೇ ಮೋಸ ಮಾಡಿರುವ ಕಾಂಗ್ರೆಸ್ಸಿನವರು ಇನ್ನು ಕುಮಾರಸ್ವಾಮಿಯವರನ್ನು ಬಿಡುತ್ತಾರೆಯೇ ಎಂದು ಬಿಜೆಪಿ ಸಂಸದ ಸುರೇಶ್ ಅಂಗಡಿ ಪ್ರಶ್ನಿಸಿದ್ದಾರೆ.

    ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಹಾಗೂ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರು ಸಿಎಂ ಸಿದ್ದರಾಮಯ್ಯನರ ಹೇಳಿಕೆ ಕುರಿತು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸುರೇಶ್, ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗುತ್ತೇನೆ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರದಲ್ಲಿ ಹೊಸದಾದ ಅಲೆಯನ್ನು ಎಬ್ಬಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರಿಗೇ ಮೋಸ ಮಾಡಿರುವ ಕಾಂಗ್ರೆಸ್ಸಿನವರು ಇನ್ನು ಕುಮಾರಸ್ವಾಮಿಯವರನ್ನು ಬಿಡುತ್ತಾರಾ. ಇನ್ನು ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ರು.

    ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಹಗ್ಗ-ಜಗ್ಗಾಟ ಪ್ರಾರಂಭವಾಗಿದೆ. ಇವರಿಬ್ಬರ ಕಿತ್ತಾಟದಿಂದ ರಾಜ್ಯದಲ್ಲಿ ಯಾವುದೇ ಕೆಲಸ-ಕಾರ್ಯಗಳು ನಡೆಯುತ್ತಿಲ್ಲ. ಖುದ್ದು ಸಿದ್ದರಾಮಯ್ಯನವರೇ ಚಾಪೆ ಜಗ್ಗುವ ಕೆಲಸ ಮಾಡುತ್ತಿದ್ದಾರೆ. ಎರಡು ಪಕ್ಷಗಳ ಸಮ್ಮಿಶ್ರ ಮ್ಯಾರೇಜ್ ಯಾವಾಗ ಬೇಕಾದರೂ ಡೈವರ್ಸ್ ಆಗಬಹುದು. 15 ದಿನಗೊಳಗಾಗಿ ಈ ಸಮ್ಮಿಶ್ರ ಸರ್ಕಾರ ಪತನವಾಗಿ ನೂತನ ಸರ್ಕಾರಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv