Tag: coin

  • ಪೋಷಕರೇ.., ಮಕ್ಕಳ ಕೈಗೆ ನಾಣ್ಯ ಕೊಡುವ ಮುನ್ನ ಎಚ್ಚರ

    ಪೋಷಕರೇ.., ಮಕ್ಕಳ ಕೈಗೆ ನಾಣ್ಯ ಕೊಡುವ ಮುನ್ನ ಎಚ್ಚರ

    ಮಂಡ್ಯ: ನಾಲ್ಕು ವರ್ಷದ ಮಗು 5 ರೂ. ನಾಣ್ಯ ನುಂಗಿದ್ದರಿಂದ ತಂದೆ-ತಾಯಿ ಆತಂಕದಿಂದ ಮಗುವಿನೊಂದಿಗೆ ಆಸ್ಪತ್ರೆಗೆ ದೌಡಾಯಿಸಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ನಡೆದಿದೆ.

    ಅಕ್ಮಲ್ ಮತ್ತು ಶಾಜಿಯಾ ದಂಪತಿಯ ಪುತ್ರ ಮಹಮದ್ ನಾಣ್ಯ ನುಂಗಿದ್ದಾನೆ. ಮಗುವಿನ ಕೈಗೆ ಕೊಟ್ಟಿದ್ದರಿಂದ ಆಟವಾಡುತ್ತಾ ಆತ ನಾಣ್ಯವನ್ನು ನುಂಗಿದ್ದಾನೆ. ಇದನ್ನು ನೋಡಿದ ಪೋಷಕರು ಆತಂಕದಿಂದ ಮಗುವನ್ನು ಅಶ್ವಿನಿ ಕ್ಲೀನಿಕ್‍ನ ಡಾಕ್ಟರ್ ಸಿದ್ದರಾಜು ಬಳಿ ಕರೆ ತಂದಿದ್ದಾರೆ.

    ಮಗುವಿನ ಎಕ್ಸ್ ರೇ ತೆಗೆದು ನೋಡಿದಾಗ ಆತನ ಹೊಟ್ಟೆಯಲ್ಲಿ 5ರೂ. ನಾಣ್ಯವಿರುವುದು ಪತ್ತೆಯಾಗಿದೆ. ಪೋಷಕರಿಗೆ ಸಾಂತ್ವನ ಹೇಳಿದ ವೈದ್ಯರು ಸದ್ಯಕ್ಕೆ ಏನೂ ತೊಂದರೆಯಿಲ್ಲ ಎಂದು ಹೇಳಿ ಎರಡು ದಿನ ಬಿಟ್ಟು ಮತ್ತೆ ಪರೀಕ್ಷೆಗೆ ಬರುವಂತೆ ತಿಳಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ವೈದ್ಯರು, ಮಕ್ಕಳ ಕೈಗೆ ನಾಣ್ಯ ಕೊಡುವುದು ಅಪಾಯಕಾರಿ. ಯಾಕಂದ್ರೆ ಇದನ್ನು ಮಕ್ಕಳು ನುಂಗಿದಾಗ ಕೆಲವೊಮ್ಮೆ ಪ್ರಾಣಕ್ಕೆ ಸಂಚಕಾರವಾಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಮಕ್ಕಳ ಕೈಗೆ ಕಾಯಿನ್ ಕೊಡಬೇಡಿ ಎಂದು ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • 80 ಸಾವಿರ ರೂ. ಮೌಲ್ಯದ ನಾಣ್ಯಗಳೊಂದಿಗೆ ನ್ಯಾಯಾಲಯಕ್ಕೆ ಬಂದ

    80 ಸಾವಿರ ರೂ. ಮೌಲ್ಯದ ನಾಣ್ಯಗಳೊಂದಿಗೆ ನ್ಯಾಯಾಲಯಕ್ಕೆ ಬಂದ

    ಗಾಂಧಿನಗರ: ವ್ಯಕ್ತಿಯೊಬ್ಬ ಬರೋಬ್ಬರಿ 80 ಸಾವಿರ ರೂ. ಮೌಲ್ಯದ ನಾಣ್ಯಗಳನ್ನು ನ್ಯಾಯಾಲಯಕ್ಕೆ ತಂದ ಅಪರೂಪದ ಘಟನೆಯೊಂದು ಗುಜರಾತ ರಾಜ್ಯದ ನಾಡಿಯಾದ್ ನಲ್ಲಿ ನಡೆದಿದೆ.

    ಜಯೇಶ್ ನಾಣ್ಯಗಳನ್ನು ನ್ಯಾಯಾಲಯಕ್ಕೆ ತಂದ ವ್ಯಕ್ತಿ. ಜಯೇಶ್ ಮತ್ತು ಪತ್ನಿ ನಡುವೆ ಹಲವು ದಿನಗಳಿಂದ ವಿಚ್ಚೇಧನ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ನಾಡಿಯಾದ್ ಕೌಟುಂಬಿಕ ನ್ಯಾಯಾಲಯ ಜಯೇಶ್, ಪತ್ನಿಗೆ ಜೀವನಾಂಶವಾಗಿ 1 ಲಕ್ಷದ 6 ಸಾವಿರ ರೂ. ನೀಡಬೇಕೆಂದು ಆದೇಶಿಸಿತ್ತು. ಒಟ್ಟು ಎರಡು ಕಂತುಗಳಲ್ಲಿ ಪತ್ನಿಗೆ ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಅದೇಶವನ್ನು ಹೊರಡಿಸಿತ್ತು. ಮೊದಲ ಕಂತಾಗಿ 26 ಸಾವಿರ ರೂ. ನೀಡಿ ಜಯೇಶ್ ಹಿಂದಿರುಗಿದ್ದರು.

    ಗುರುವಾರ ಒಂದು ಮೂಟೆ ಸಹಿತ ಬಂದ ಜಯೇಶ್ 80 ಸಾವಿರ ರೂ.ಯನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾರೆ. ಕೂಡಲೇ ವಕೀಲರು ಹೀಗೆ ಚಿಲ್ಲರೆಯಲ್ಲಿ ತಂದ್ರೆ ಹೇಗೆ ಅಂತ ಪ್ರಶ್ನಿಸಿದ್ದಕ್ಕೆ, ನಾನೊಬ್ಬ ಸಣ್ಣ ತರಕಾರಿ ವ್ಯಾಪಾರಸ್ಥನಾಗಿದ್ದು ಎಲ್ಲರೂ ನನಗೆ ಚಿಲ್ಲರೆ ಹಣವನ್ನು ನೀಡುತ್ತಾರೆ ಅಂತಾ ಹೇಳಿದ್ದಾರೆ.

     

    ಪ್ರಕರಣ ನ್ಯಾಯಾಲಯಕ್ಕೆ ಸಂಬಂಧಿಸಿದಾಗಿದ್ದರಿಂದ ತಂದ ಚಿಲ್ಲರೆ ಹಣವನ್ನು ಎಣಿಸುವುದು ವಕೀಲರಿಗೆ ಅನಿವಾರ್ಯವಾಗಿತ್ತು. ನಾಣ್ಯಗಳನ್ನು ಎಣಿಕೆ ಮಾಡಲು ವಕೀಲರು ಬರೋಬ್ಬರಿ 3 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಜಯೇಶ್ ಚಲಾಲಿ ಎಂಬ ಗ್ರಾಮದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು, ಪ್ರತಿನಿತ್ಯ ತನ್ನ ಉಳಿತಾಯವನ್ನು ನಾಣ್ಯಗಳ ರೂಪದಲ್ಲಿಯೇ ಸಂಗ್ರಹ ಮಾಡುತ್ತಿದ್ದರು. ನ್ಯಾಯಾಲಯ ದಿಢೀರ್ ಅಂತಾ ಹಣ ಕೇಳಿದ್ದರಿಂದ ಯಾರು ಸಹ ನಾಣ್ಯಗಳ ಬದಲಾಗಿ ನೋಟುಗಳನ್ನು ನೀಡಲು ಹಿಂದೇಟು ಹಾಕಿದ್ದರು ಎಂದು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.

    ಜಕಾರ್ತದಲ್ಲಿ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ 7 ಲಕ್ಷ ರೂ. ಜೀವನಾಂಶದ ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿ ಸುದ್ದಿಯಾಗಿದ್ದರು. ಬರೋಬ್ಬರಿ 860 ಕೆ.ಜಿ. ತೂಕವುಳ್ಳ 12 ಮೂಟೆಗಳನ್ನು ನೀಡಲಾಗಿತ್ತು. `ನನ್ನ ಕಕ್ಷಿದಾರರನ್ನು ಅವಮಾನಿಸಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ’ ಎಂದು ವಿಚ್ಛೇದಿತ ಮಹಿಳೆಯ ಪರ ವಕೀಲ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡ್ವಿ ಸ್ಸುಲಾರ್ಟೊ ಪರ ವಕೀಲ, ನನ್ನ ಕಕ್ಷಿದಾರ ಕೆಳ ದರ್ಜೆಯ ನಾಗರಿಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತನ್ನ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದು, ಅವರೆಲ್ಲರೂ ಚಿಲ್ಲರೆ ಹಣ ನೀಡಿದ್ದರಿಂದ ಅದನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ ಎಂದಿದ್ದರು.

    ನಾನು ಬಡತನದಲ್ಲಿ ಇದ್ದೇನೆ ಎನ್ನುವಂತೆ ಅವಮಾನ ಮಾಡಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ ಎಂದು ವಿಚ್ಛೇದಿತ ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಚಿಲ್ಲರೆ ಹಣವನ್ನು ಏಣಿಕೆ ಮಾಡುವಂತೆ ನ್ಯಾಯಾಲಯವು ತನ್ನ ಸಿಬ್ಬಂದಿಗೆ ಸೂಚನೆ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ನಾಣ್ಯ: ಚಿಕಿತ್ಸೆ ನೀಡದೇ ಅಲೆದಾಡಿಸಿದ 4 ಆಸ್ಪತ್ರೆಗಳು!

    ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ನಾಣ್ಯ: ಚಿಕಿತ್ಸೆ ನೀಡದೇ ಅಲೆದಾಡಿಸಿದ 4 ಆಸ್ಪತ್ರೆಗಳು!

    ಕೋಲ್ಕತ್ತಾ:ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ನಾಣ್ಯ ನುಂಗಿದ್ದ 4 ವರ್ಷದ ಮಗುವೊಂದು ಪರದಾಡಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಗಂಗಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಶನಿವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯೊಳಗೆ ಆಟವಾಡುತ್ತಿದ್ದಾಗ 4 ವರ್ಷದ ಆಗ್ರ್ಯ ಬಿಸ್ವಾಸ್ ಏಕಾಏಕಿ 1 ರೂಪಾಯಿ ನಾಣ್ಯವನ್ನು ನುಂಗಿದ್ದಾನೆ. ನಾಣ್ಯ ಗಂಟಲಲ್ಲಿ ಸಿಕ್ಕಿಕೊಂಡು ಅಗ್ರ್ಯ ಜೋರಾಗಿ ಅಳುತ್ತಿದ್ದ. ಕೂಡಲೇ ಅವನನ್ನು ಪರೀಕ್ಷಿಸಿದಾಗ ನಾಣ್ಯ ನುಂಗಿರುವುದು ತಿಳಿಯಿತು ಎಂದು ಮಗುವಿನ ಅಜ್ಜ ದಿನೇಶ್ ಬಿಸ್ವಾಸ್ ತಿಳಿಸಿದ್ದಾರೆ.

    ಮಗುವನ್ನು 2 ಗಂಟೆಹೊತ್ತಿಗೆ ಹತ್ತಿರದ ಕಲ್ಯಾಣಿ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಜೆಎನ್‍ಎಂ ಆಸ್ಪತ್ರೆಯ ವೈದ್ಯರುಗಳಿಗೆ ತೋರಿಸಲಾಯಿತು. ಆದರೆ ಮಗುವನ್ನು ಪರೀಕ್ಷಿಸಿದ ಅವರು ನಮ್ಮ ಬಳಿ ಸರಿಯಾದ ಉಪಕರಣಗಳಿಲ್ಲ, ಮಗುವನ್ನು ಎನ್‍ಆರ್‍ಎಸ್ ಆಸ್ಪತ್ರೆ ಅಥವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೋರಿಸಿ ಎಂದು ಸಲಹೆ ನೀಡಿದರು. ನಾವು ಎನ್‍ಆರ್‍ಎಸ್ ಆಸ್ಪತ್ರೆ ತಲುಪಿದಾಗ ರಾತ್ರಿ 10 ಗಂಟೆಯಾಗಿತ್ತು, ಆದರೆ ಅಲ್ಲಿಯೂ ಸಹ ನಮಗೆ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲಿಂದ ನೇರವಾಗಿ ನಾವು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋದರೂ ವೈದ್ಯರು ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಹೇಳಿದರು.

    ಕೊನೆಗೆ ತಡರಾತ್ರಿ 2 ರ ಸುಮಾರಿಗೆ ಎಸ್‍ಎಸ್‍ಕೆಎಂ ಆಸ್ಪತ್ರೆಗೆ ಹೋದೆವು, ಕೂಡಲೇ ಅಲ್ಲಿನ ವೈದ್ಯರುಗಳು ಮಗುವನ್ನು ದಾಖಲಿಸಿಕೊಂಡು ಎಂಡೋಸ್ಕೋಪಿ ಮುಖಾಂತರ ನಾಣ್ಯವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆಗ್ರ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ನಾನು ಹಾಗೂ ನಮ್ಮ ಕುಟುಂಬವು ಎಸ್‍ಎಸ್‍ಕೆಎಂ ಆಸ್ಪತ್ರೆಯ ವೈದ್ಯರಾದ ಡಾ. ಅರುಣಭ ಸೇನಗುಪ್ತರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ನಮ್ಮ ಮೊಮ್ಮಗ ತಾಯಿ ಇಲ್ಲದ ತಬ್ಬಲಿ, ನಾನು, ನನ್ನ ಹೆಂಡತಿ ಹಾಗೂ ತಂದೆಯ ಆಶ್ರಯದಲ್ಲಿ ಅವನು ಬೆಳೆಯುತ್ತಿದ್ದಾನೆ ಎಂದು ತಿಳಿಸಿದರು.

    ನಾಣ್ಯನುಂಗಿದ್ದ ಮಗುವನ್ನು ಸತತ ನಾಲ್ಕು ಆಸ್ಪತ್ರೆಗಳನ್ನು ತಿರುಗಿ, ಕೊನೆಗೂ ಮಗುವನ್ನು ಉಳಿಸಿಕೊಳ್ಳುವಲ್ಲಿ ಪೋಷಕರು ಯಶಸ್ವಿಯಾಗಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಆಸ್ಪತ್ರೆಗಳು, ಕೇವಲ ಉಪಕರಣಗಳ ಕೊರತೆಯಿಂದ ಸಾಗಾಕಿರುವುದು ಶೋಚನೀಯ ಸಂಗತಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೆಟ್ರೋ ಪ್ರಯಾಣಿಕರಿಗೆ ಕಾಯಿನ್ ಬದಲು ಕಾಗದದ ಟಿಕೆಟ್ ಸಿಕ್ತು!

    ಮೆಟ್ರೋ ಪ್ರಯಾಣಿಕರಿಗೆ ಕಾಯಿನ್ ಬದಲು ಕಾಗದದ ಟಿಕೆಟ್ ಸಿಕ್ತು!

    ಬೆಂಗಳೂರು: ಬುಧವಾರ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿದ್ದರಿಂದ ಕಾಯಿನ್ ಬದಲು ಕಾಗದದ ಟಿಕೆಟ್ ವಿತರಿಸಲಾಗಿದೆ.

    ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ವಿಧಾನಸೌಧ ಮುಂದಿನ ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಜನ ಮೆಟ್ರೋ ರೈಲು ಪ್ರಯಾಣಕ್ಕೆ ಮುಗಿಬಿದ್ದಿದ್ದರು.

    ದಿಢೀರ್ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದರಿಂದ ಕಾಯಿನ್ ಕೊರತೆ ಎದುರಿಸುತ್ತಿದ್ದ ಸಿಬ್ಬಂದಿ ಕಾಗದದ ಟಿಕೆಟ್‍ಗೆ ಮೊರೆ ಹೋಗಿದ್ದರು.

    ಸಾಮಾನ್ಯವಾಗಿ ಸಂಜೆ 4ರಿಂದ 6 ರವರೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇದೇ ಸಮಯದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಧಾನ ಸೌಧಕ್ಕೆ ಬರಲು ರಸ್ತೆ ಸಂಚಾರ ಮಾರ್ಗ ಬದಲಾಗಿದ್ದು, ಅನಿವಾರ್ಯವಾಗಿ ಮೆಟ್ರೋ ಪ್ರಯಾಣಕ್ಕೆ ಜನರು ಮುಂದಾಗಿದ್ದರು. ಹೀಗಾಗಿ ಎಂ.ಜಿ.ರಸ್ತೆ, ವಿಧಾನಸೌಧ, ಕಬ್ಬನ್ ಪಾರ್ಕ್ ಸೇರಿದಂತೆ ಕೆಲವು ಮೆಟ್ರೊ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು.

  • ಆರ್‌ಬಿಐ ಬಿಡುಗಡೆ ಮಾಡಲಿದೆ 350 ರೂ. ಮೌಲ್ಯದ ನಾಣ್ಯ!

    ಆರ್‌ಬಿಐ ಬಿಡುಗಡೆ ಮಾಡಲಿದೆ 350 ರೂ. ಮೌಲ್ಯದ ನಾಣ್ಯ!

    ನವದೆಹಲಿ: ಸಿಖ್ ಧರ್ಮದ 10ನೇ ಗುರುವಾಗಿರುವ ಗುರು ಗೋಬಿಂದ್ ಸಿಂಗ್ ಅವರ 350ನೇ ಜನ್ಮ ವಾರ್ಷಿಕೋತ್ಸವದ ವಿಶೇಷ ಸೂಚಕವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) 350 ರೂ. ಮುಖಬೆಲೆಯ ವಿಶೇಷ ನಾಣ್ಯವನ್ನು ಹೊರ ತರುತ್ತಿದೆ.

    ಆರ್‌ಬಿಐ ನಾಣ್ಯದ ಕುರಿತು ವಿವರಣೆಗಳ ಬಗ್ಗೆ ಮಾಹಿತಿ ನೀಡಿದೆ. ನಾಣ್ಯದ ಸುತ್ತಳತೆ 44 ಮಿ.ಮೀ ಇದ್ದು, ಇದರ ತಯಾರಿಕೆಯಲ್ಲಿ ತವರ(05%), ತಾಮ್ರ(40%), ಬೆಳ್ಳಿ (50%), ಬಿಳಿ ಲೋಹ(5%) ಬಳಸಲಾಗಿದೆ ಎಂದು ತಿಳಿಸಿದೆ.

    ನಾಣ್ಯದ ಒಂದು ಮುಖ ಭಾಗದಲ್ಲಿ ಅಶೋಕ ಸ್ತಂಭದ ಚಿತ್ರವಿದ್ದು, ಅದರ ಕೆಳಗೆ ಸತ್ಯಮೇವ ಜಯತೆ ಘೋಷಣೆ, ಎಡ ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ `ಭಾರತ’ ಎಂದು ಹಾಗೂ ಬಲ ಭಾಗದಲ್ಲಿ ಇಂಗ್ಲೀಷ್ ಭಾಷೆಯಲ್ಲಿ `ಇಂಡಿಯಾ’ ಬರೆಯಲಾಗಿರುತ್ತದೆ. ಅಶೋಕ ಸ್ತಂಭದ ಕೆಳಗೆ ರೂಪಾಯಿ ಲಾಂಛನ ಹಾಗೂ ನಾಣ್ಯದ ಮೌಲ್ಯವನ್ನು ತಿಳಿಸುವ ‘350’ ಚಿಹ್ನೆ ಇರುತ್ತದೆ ಎಂದು ತಿಳಿಸಿದೆ.

    ನಾಣ್ಯದ ಮತ್ತೊಂದು ಭಾಗದಲ್ಲಿ “ತಕ್ತ ಶ್ರೀ ಹರಿಮಂದಿರ್ ಜಿ ಪಟ್ನ ಸಾಹಿಬ್” ಚಿತ್ರ. ಮೇಲ್ಭಾಗದಲ್ಲಿ “ಶ್ರೀ ಗುರು ಗೋಬಿಂದ್ ಸಿಂಗ್ ಜಿ ಅವರ 350 ನೇ ಪ್ರಕಾಶ ಉತ್ಸವ” ಎಂದು ದೇವನಾಗರಿ ಅಂಕಿ ಮತ್ತು ಕೆಳಗೆ ಇಂಗ್ಲೀಷ್ ನಲ್ಲಿ ಬರೆಯಲಾಗಿರುತ್ತದೆ. ಹಾಗೆಯೇ ಚಿತ್ರದ ಎಡ ಮತ್ತು ಬಲ ಭಾಗದಲ್ಲಿ `1666′, `2016′ ಎಂದು ನಮೂದಿಸಲಾಗಿರುತ್ತದೆ ಎಂದು ತಿಳಿಸಿದೆ.

    ಪ್ರಮುಖವಾಗಿ ನಾಣ್ಯ 34.65 ಗ್ರಾಂ ನಿಂದ 35.35 ಗ್ರಾಂ ತೂಕ ಹೊಂದಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಈ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

    1666 ಡಿಸೆಂಬರ್ 22ರಂದು ಪಾಟ್ನಾದಲ್ಲಿ ಜನಿಸಿದ್ದ ಗುರು ಗೋಬಿಂದ್ ಸಿಂಗ್ 1708 ಅಕ್ಟೋಬರ್ 8ರಂದು ಮಹಾರಾಷ್ಟ್ರದ ನಾಂದೇಡ್ ನಲ್ಲಿ ವಿಧಿವಶರಾಗಿದ್ದರು.

  • ಅಕ್ಕನಿಗಾಗಿ 62 ಸಾವಿರ ರೂ. ಚಿಲ್ಲರೆ  ಕೂಡಿಟ್ಟು ಸ್ಕೂಟಿ ಕೊಡಿಸಿದ ತಮ್ಮ

    ಅಕ್ಕನಿಗಾಗಿ 62 ಸಾವಿರ ರೂ. ಚಿಲ್ಲರೆ ಕೂಡಿಟ್ಟು ಸ್ಕೂಟಿ ಕೊಡಿಸಿದ ತಮ್ಮ

    ಉದಯ್‍ಪುರ: 13 ವರ್ಷದ ಸಹೋದರ ತನ್ನ ಪ್ರೀತಿಯ ಅಕ್ಕನಿಗೆ ಬರೋಬ್ಬರಿ 62 ಸಾವಿರ ರೂಪಾಯಿ ಚಿಲ್ಲರೆ ಹಣವನ್ನು ಉಳಿತಾಯ ಮಾಡಿ ಅದರಿಂದ ಒಂದು ಸ್ಕೂಟಿಯನ್ನು ಉಡುಗೊರೆ ನೀಡಿ ಸುದ್ದಿಯಾಗಿದ್ದಾನೆ.

    ಅಕ್ಟೋಬರ್ 19 ದೀಪಾವಳಿಯ ಸಂಭ್ರಮ. ಅಂದು ನಗರದ ಹೋಂಡಾ ಟೂ ವೀಲರ್ ಶೋ ರೂಮ್ ಬಾಗಿಲನ್ನು ಮುಚ್ಚುವ ಸಮಯವಾಗಿತ್ತು. ಈ ವೇಳೆ 13 ವರ್ಷದ ಯಶ್ ತನ್ನ ಸಹೋದರಿ ರೂಪಾಲ್ ಜೊತೆ ಶೋರೂಂ ಪ್ರವೇಶಿಸಿದ್ದಾನೆ.

    ಅಂಗಡಿಯ ಸಿಬ್ಬಂದಿ ಅವರಿಗೆ ಬೈಕ್‍ಗಳನ್ನು ತೋರಿಸಲು ಮುಂದಾಗಿದ್ದಾರೆ. ನಂತರ ಇಬ್ಬರು ತಮ್ಮ ಕೈಯಲ್ಲಿದ್ದ ಬ್ಯಾಗ್‍ನಿಂದ ಬರೋಬ್ಬರಿ 62 ಸಾವಿರ ರೂ. ಚಿಲ್ಲರೆ ನಾಣ್ಯವನ್ನು ನೀಡಿದ್ದಾರೆ. ಮೊದಲಿಗೆ ಮ್ಯಾನೇಜರ್ ಚಿಲ್ಲರೆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ನಂತರ ಯಶ್ ತಮ್ಮ ಕಥೆಯನ್ನು ಹೇಳಿಕೊಂಡ ಮೇಲೆ ಮ್ಯಾನೇಜರ್ ಒಪ್ಪಿಕೊಂಡು ಬೈಕ್ ನೀಡಿದ್ದಾರೆ.

    ಯಶ್ ತಂದೆ ಹಿಟ್ಟು ಗಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ. ಯಶ್ 8ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದು, ಇವನು ಮತ್ತು ಅಕ್ಕ ರೂಪಾಲ್ ಇಬ್ಬರೂ ತಮಗೆ ಕೊಡುವ ಪಾಕೆಟ್ ಹಣವನ್ನು ಕೂಡಿಡುತ್ತಾ ಬರುತ್ತಿದ್ದರು. ಕೆಲವು ಬಾರಿ ನೋಟು ಕೊಟ್ಟರೂ ಅದನ್ನು ನಾಣ್ಯವಾಗಿ ಬದಲಾಯಿಸಿಕೊಂಡು ಖರ್ಚು ಮಾಡಬಾರದು ಎಂದು ಉಳಿತಾಯ ಮಾಡುತ್ತಿದ್ದರು.

    ಹಲವಾರು ವರ್ಷಗಳಿಂದ ಉಳಿತಾಯ ಮಾಡಿದ ಹಣ 63 ಸಾವಿರ ತಲುಪಿತ್ತು. ಹೀಗಾಗಿ ಈ ದೀಪಾವಳಿಗೆ ತಂದೆ-ತಾಯಿಗೆ ಸರ್‍ಪ್ರೈಸ್ ಕೊಡಬೇಕೆಂದು ಶೋ ರೂಮ್‍ಗೆ ತಮ್ಮ ಜೊತೆ ಚಿಕ್ಕಪ್ಪನನ್ನು ಕರೆದುಕೊಂಡು ಹೋಗಿದ್ದರು.

    ಹೋಂಡಾ ಸಿಬ್ಬಂದಿ ಈ ನಾಣ್ಯಗಳನ್ನು ಎಣಿಸಲು ಸುಮಾರು ಎರಡುವರೆ ಗಂಟೆಗಳ ಸಮಯವನ್ನು ತೆಗೆದುಕೊಂಡಿದ್ದಾರೆ. ಕೆಲವರು ಅರ್ಧದಷ್ಟು ಚಿಲ್ಲರೆ ಹಣವನ್ನು ತಂದು ಕೊಟ್ಟಿದ್ದಾರೆ. ಈ ಹಿಂದೆ ಗರಿಷ್ಟ 29 ಸಾವಿರ ರೂ. ಚಿಲ್ಲರೆ ನಾಣ್ಯವನ್ನು ತಂದಿದ್ದರು. ಆದರೆ ಇದೇ ಮೊದಲ ಬಾರಿಗೆ ಚಿಲ್ಲರೆ ರೂಪದಲ್ಲಿ ಸಂಪೂರ್ಣ ಹಣವನ್ನು ಬಂದಿದೆ. ಇದೊಂದು ಭಾವನಾತ್ಮಕ ವಿಚಾರವಾಗಿದ್ದು, ಈ ಹಣವನ್ನು ಎಣಿಸಲು ನಮ್ಮ ಸಿಬ್ಬಂದಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.

    ರೂಪಾಲ್ ಮತ್ತು ಯಶ್ ಇಬ್ಬರು ತಾವು ಕೂಡಿಟ್ಟ ಹಣವನ್ನು ಒಂದು ಒಳ್ಳೆಯ ಕೆಲಸಕ್ಕಾಗಿ ಬಳಸಿದ್ದೇವೆ ಎಂದು ತುಂಬಾ ಸಂತೋಷ ಪಟ್ಟರು.

  • ಈ ಇಬ್ಬರು ಗಣ್ಯರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಶೀಘ್ರದಲ್ಲೇ 100 ರೂ. ನಾಣ್ಯ ಬಿಡುಗಡೆ

    ಈ ಇಬ್ಬರು ಗಣ್ಯರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಶೀಘ್ರದಲ್ಲೇ 100 ರೂ. ನಾಣ್ಯ ಬಿಡುಗಡೆ

    ನವದೆಹಲಿ: 2 ಸಾವಿರ ರೂ. ನೋಟು ತಂದ ಮೋದಿ ಸರ್ಕಾರ ಮೊನ್ನೆ ಮೊನ್ನೆಯಷ್ಟೇ 200 ರುಪಾಯಿ ನೋಟು ರಿಲೀಸ್ ಮಾಡಿತ್ತು. ಇದೀಗ 100 ರುಪಾಯಿ ಕಾಯಿನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

    ಶೀಘ್ರದಲ್ಲೇ ಈ 100 ರುಪಾಯಿ ಕಾಯಿನ್ ಹೊರತರಲು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ಹಾಗೂ ತಮಿಳುನಾಡಿನ ಮಾಜಿ ಸಿಎಂ ಡಾ. ಎಂಜಿ ರಾಮಚಂದ್ರನ್ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಜನ್ಮ ಶತಮಾನೋತ್ಸವದ ಸ್ಮರಣೆಗಾಗಿ 100 ರೂ. ಕಾಯಿನ್ ಬಿಡುಗಡೆ ಮಾಡಲಾಗ್ತಿದೆ. ಇದರ ಜೊತೆಗೆ ಈ ಇಬ್ಬರು ಗಣ್ಯ ವ್ಯಕ್ತಿಗಳ ಗೌರವಾರ್ಥವಾಗಿ ಹೊಸ 5 ರೂ. ಹಾಗೂ 10 ರೂ. ನಾಣ್ಯಗಳನ್ನು ಆರ್‍ಬಿಐ ವಿತರಿಸಲಿದೆ.

    ಮೊದಲನೇ ವಿನ್ಯಾಸದಲ್ಲಿ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭ ಹಾಗೂ ಅದರ ಕೆಳಗೆ ಸತ್ಯಮೇವ ಜಯತೇ ಎಂಬ ಬರಹ ಇರಲಿದೆ. ಎಡ ಬದಿಯಲ್ಲಿ ದೇನಾಗರಿ ಲಿಪಿಯಲ್ಲಿ ಭಾರತ್ ಎಂಬ ಮುದ್ರಣ ಹಾಗೂ ಬಲ ಬದಿಯಲ್ಲಿ ಇಂಡಿಯಾ ಎಂದು ಇಂಗ್ಲಿಷ್‍ನಲ್ಲಿ ಮುದ್ರಣ ಇರಲಿದೆ. ರೂಪಾಯಿ ಚಿಹ್ನೆ ಹಾಗೂ 100 ಮುಖಬೆಲೆಯ ಮುದ್ರಣವಿರಲಿದೆ.

    ನಾಣ್ಯದ ಮತ್ತೊಂದು ಬದಿಯಲ್ಲಿ ಮಧ್ಯಭಾಗದಲ್ಲಿ ಎಂಎಸ್ ಸುಬ್ಬಲಕ್ಷ್ಮೀ ಅವರ ಭಾವಚಿತ್ರವಿರಲಿದ್ದು, ಮೆಲ್ಭಾಗದಲ್ಲಿ ಡಾ ಎಂಎಸ್ ಸುಬ್ಬಲಕ್ಷ್ಮೀ ಎಂದು ದೇವನಾಗರಿ ಲಿಪಿಯಲ್ಲಿ ಮುದ್ರಿಸಲಾಗಿರುತ್ತದೆ. ಹಾಗೇ ಕೆಳಭಾಗದಲ್ಲಿ ಬರ್ತ್ ಸೆಂಟಿನರಿ ಆಫ್ ಸುಬ್ಬಲಕ್ಷ್ಮೀ ಎಂದು ಇಂಗ್ಲಿಷ್‍ನಲ್ಲಿ ಮುದ್ರಣವಿರಲಿದೆ. ಜೊತೆಗೆ 1916-2016 ಎಂದು ನಾಣ್ಯದ ಬಲಭಾಗದಲ್ಲಿ ಮುದ್ರಿಸಲಾಗಿರುತ್ತದೆ.

    ಎರಡನೇ ವಿನ್ಯಾಸದ ನಾಣ್ಯದಲ್ಲಿ ಮಧ್ಯಭಾಗದಲ್ಲಿ ಡಾ ಎಂಜಿ ರಾಮಚಂದ್ರನ್ ಅವರ ಭಾವಚಿತ್ರ, ಮೆಲ್ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಅವರ ಹೆಸರು ಹಾಗೂ ಕೆಳಭಾಗದಲ್ಲಿ ಇಂಗ್ಲಿಷ್‍ನಲ್ಲಿ ಡಾ. ಎಂಜಿ ರಾಮಚಂದ್ರನ್ ಬರ್ತ್ ಸೆಂಟಿನರಿ ಎಂಬ ಮುದ್ರಣ ಇರಲಿದೆ. ಜೊತೆಗೆ 1917-2017 ಎಂದು ಕೆಳಗೆ ಮುದ್ರಣವಾಗಿರಲಿದೆ.

    ನಾಣ್ಯದ ವ್ಯಾಸ(ಡಯಾಮೀಟರ್) 44 ಮಿಮೀ ಇರಲಿದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಹಾಗೂ 5% ಜಿಂಕ್‍ನಿಂದ ನಾಣ್ಯವನ್ನ ತಯಾರಿಸಲಾಗಿದೆ.

  • ಕೊಟ್ಟೂರಿನಲ್ಲಿ ನೆಲದಡಿ ದೊರೆತವು ಸ್ವಾತಂತ್ರ್ಯಪೂರ್ವದ 25 ಕೆಜಿ ನಾಣ್ಯಗಳು!

    ಕೊಟ್ಟೂರಿನಲ್ಲಿ ನೆಲದಡಿ ದೊರೆತವು ಸ್ವಾತಂತ್ರ್ಯಪೂರ್ವದ 25 ಕೆಜಿ ನಾಣ್ಯಗಳು!

    ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಮನೆಯೊಂದರ ನೆಲದಡಿಯಲ್ಲಿ 25 ಕಿಲೋಗೂ ಹೆಚ್ಚು ತೂಕದ ಸ್ವಾತಂತ್ರ್ಯ ಪೂರ್ವದ ತಾಮ್ರ, ಹಿತ್ತಾಳೆ ನಾಣ್ಯಗಳು ದೊರೆತಿವೆ.

    ಕೊಟ್ಟೂರಿನ ಗುರು ಬಸವೇಶ್ವರ ದೇವಸ್ಥಾನದ ಹತ್ತಿರದಲ್ಲಿನ ಗುತ್ತಿಗೆದಾರ ಕೀರ್ತಿಶೇಖರ್ ಅವರು ತಮ್ಮ ಹಳೇ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಮುಂದಾಗಿದ್ದಾರೆ. ಮೇಲ್ಛಾವಣಿ ಮತ್ತು ಗೋಡೆಗಳನ್ನು ಕೆಡವಿ ನೆಲಮಟ್ಟವನ್ನು ಅಗೆಯುವಾಗ ನಿನ್ನೆ ಸಂಜೆ ತಾಮ್ರದ ಕೊಡ ಒಂದು ಇರುವುದು ಪತ್ತೆಯಾಗಿದೆ. ತಕ್ಷಣ ಅವರು ಕೂಲಿಕಾರರನ್ನು ಕಳುಹಿಸಿದ್ದಾರೆ.

    ಇಂದು ಬೆಳಗಿನ ಜಾವದೊಳಗೆ ಅದನ್ನು ಅಗೆದು ಹೊರ ತೆಗೆದಿದ್ದು ಅದರಲ್ಲಿ 25 ಕಿಲೋಗೂ ಹೆಚ್ಚು ತೂಕದ ಕ್ರಿ.ಶ. 1930, 1936 ಮತ್ತು 1940 ಇಸವಿಯ ತಾಮ್ರ, ಹಿತ್ತಾಳೆ ನಾಣ್ಯಗಳು ದೊರೆತಿದ್ದು ಅವುಗಳ ಒಂದು ಬದಿಯಲ್ಲಿ ಜಾರ್ಜ್ 4 ಕಿಂಗ್ ಎಂಪೈರ್ ಎಂದು ಅಕ್ಷರದಲ್ಲಿದೆ. ಮತ್ತೊಂದು ಕಡೆ ಬ್ರಿಟಿಷ್ ರಾಜನ ಚಿತ್ರವಿದೆ. ಕೆಲವು ನಾಣ್ಯಗಳಿಗೆ ದಮ್ಮಡಿ ಎಂದು, ಎರಡು ಪೈಸೆ, ಒನ್ ಕ್ವಾರ್ಟರ್ ಆಣೆ ಎಂದು ಬರೆಯಲಾಗಿದೆ.

    ಜೊತೆಗೆ ಒಂದಿಷ್ಟು ಅನುಮಾನ!: ಕೇವಲ ಇಷ್ಟೇ ನಾಣ್ಯಗಳು ದೊರೆತಿವೆ ಎಂದು ಮನೆಯ ಮಾಲೀಕರು ಹೇಳುತ್ತಿದ್ದಾರೆ. ಆದರೆ ಇಲ್ಲಿನ ಜನ ನಿನ್ನೆ ಕೂಲಿಕಾರರನ್ನು ಕಳುಹಿಸಿ, ಯಾರನ್ನೂ ಕರೆಯದೆ ರಾತ್ರೋ ರಾತ್ರಿ ಅಗೆದು ತೆಗೆದಿರುವುದು, ಅನುಮಾನಕ್ಕೆ ಕಾರಣವಾಗಿದೆ. ಬೆಳ್ಳಿ ನಾಣ್ಯಗಳ ಕೊಡವೊಂದನ್ನು ಮರೆ ಮಾಚಿದ್ದಾರೆ ಎನ್ನುತ್ತಿದ್ದಾರೆ. ಸದ್ಯ ದೊರೆತಿರುವ ನಾಣ್ಯಗಳು ಮನೆಯ ಮಾಲೀಕರ ಬಳಿ ಇದ್ದು, ಅವುಗಳ ಬಳಕೆ ನಿಂತ ಮೇಲೆ ಹಿರಿಯರು ನೆಲದಲ್ಲಿ ಹೂತಿರಬೇಕು ಎಂದು ಸಹ ಹೇಳಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ.