Tag: Coimbatore

  • ಪತ್ನಿ ಜಗಳವಾಡಿದ್ದಕ್ಕೆ ಮಕ್ಕಳನ್ನೇ ಕೊಂದೇ ಬಿಟ್ಟ!

    ಪತ್ನಿ ಜಗಳವಾಡಿದ್ದಕ್ಕೆ ಮಕ್ಕಳನ್ನೇ ಕೊಂದೇ ಬಿಟ್ಟ!

    ಚೆನ್ನೈ: ಪತ್ನಿ ಜಗಳ ಮಾಡಿದಕ್ಕೆ ಇಬ್ಬರು ಮಕ್ಕಳನ್ನು ತಂದೆಯೇ ಉಸಿರುಗಟ್ಟಿಸಿ ಕೊಂದ ಮನಕಲಕುವ ಘಟನೆ ಗುರುವಾರ ರಾತ್ರಿ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ.

    ಹೇಮವರ್ಷಿಣಿ (15) ಹಾಗೂ ಶ್ರೀಜಾ (8) ಕೊಲೆಯಾದ ದುರ್ದೈವಿಗಳು. ಸಿಂಗನಲ್ಲೂರು ನಿವಾಸಿ ಪದ್ಮಾನಾಭನ್ ಎಂಬಾತ ಕೊಲೆ ಮಾಡಿರುವ ಪಾಪಿ ತಂದೆ. ಪದ್ಮಾನಾಭನ್ ಹಾಗೂ ಸೆಲ್ವಾರಾಣಿ ಮಧ್ಯೆ ಮನಸ್ತಾಪ ಉಂಟಾಗಿತ್ತು, ಆದರಿಂದ ಯಾವಾಗಲೂ ಅವರಿಬ್ಬರು ಜಗಳವಾಡುತ್ತಲೇ ಇದ್ದರು. ಆದರೆ ಗುರುವಾರ ರಾತ್ರಿಯ ಜಗಳ ತಾರಕಕ್ಕೇರಿದ ಪರಿಣಾಮ ಪತ್ನಿ ಮನೆ ಬಿಟ್ಟು ತನ್ನ ತವರಿಗೆ ಹೋಗಿದ್ದಾಳೆ. ಈ ವೇಳೆ ಪತ್ನಿ ಮೇಲಿನ ಕೋಪಕ್ಕೆ ಪದ್ಮಾನಾಭನ್ ತನ್ನಿಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಮರುದಿನ ಸೆಲ್ವಾರಾಣಿ ತನ್ನ ಮಕ್ಕಳು ತನ್ನೊಂಡನೆ ಕರೆದುಕೊಂಡು ಹೊಗಲು ಮನೆಗೆ ಬಂದಾಗ ಮಕ್ಕಳು ಸಾವನ್ನಪ್ಪಿದ್ದನ್ನು ಕಂಡು ಕಂಗಾಲಾಗಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದಾಗ ಮಕ್ಕಳನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

    ಘಟನೆ ಕುರಿತು ಆರೋಪಿ ಮೇಲೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಸಿಂಗನಲ್ಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯೊಳಗೆ ನುಗ್ಗಿ ಅಕ್ಕಿ ತಿಂದ ಕಾಡಾನೆ: ವಿಡಿಯೋ ವೈರಲ್

    ಮನೆಯೊಳಗೆ ನುಗ್ಗಿ ಅಕ್ಕಿ ತಿಂದ ಕಾಡಾನೆ: ವಿಡಿಯೋ ವೈರಲ್

    ಕೊಯಂಬತ್ತೂರು: ಕಾಡಾನೆಯೊಂದು ಮನೆಯೊಳಗ್ಗೆ ನುಗ್ಗಿ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ತಿಂದು ಹೋಗಿರುವ ದೃಶ್ಯವೊಂದು ತಮಿಳು ನಾಡಿನ ಕೊಯಂಬತ್ತೂರಿನ ತಡಗಂನಲ್ಲಿ ನಡೆದಿದೆ.

    ತಡಗಂನ ಮನೆಯೊಂದರಲ್ಲಿ ನುಗ್ಗಿ ಕಾಡಾನೆ ಅಕ್ಕಿ ಹಾಗೂ ಬ್ಯಾಗ್‍ನಲ್ಲಿದ್ದ ಧ್ಯಾನಗಳನ್ನು ಹುಡುಕುತ್ತಿರುವ ವಿಡಿಯೋ ವೈರಲ್ ಆಗಿದೆ. ಆನೆ ಮನೆಗೆ ನುಗ್ಗಿದ ಸಮಯದಲ್ಲಿ ಮನೆಯವರು ನಿದ್ರೆಯಲ್ಲಿದ್ದರು. ನಂತರ ಆನೆ ಹುಡುಕುತ್ತಿದ್ದಾಗ ಶಬ್ಧ ಕೇಳಿಸಿದ್ದರಿಂದ ಮನೆಯವರು ಎಚ್ಚರಗೊಂಡಿದ್ದಾರೆ.

    ಮನೆಯವರು ಎಚ್ಚರಗೊಂಡು ಏನು ಶಬ್ಧ ಎಂದು ನೋಡಲು ಹೋದಾಗ ಅಲ್ಲಿ ಕಾಡಾನೆ ಇರುವುದನ್ನು ನೋಡಿ ಗಾಬರಿಯಾಗಿದ್ದಾರೆ. ನಂತರ ಅಲ್ಲಿದ್ದ ಗ್ರಾಮಸ್ಥರು ಆ ಆನೆಯನ್ನು ಓಡಿಸಿದ್ದಾರೆ. ಸದ್ಯ ಕಾಡಾನೆ ಅಕ್ಕಿ ಹಾಗೂ ಧ್ಯಾನಗಳನ್ನು ತಿನ್ನುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    33 ಸೆಕೆಂಡ್‍ನ ಈ ವಿಡಿಯೋದಲ್ಲಿ ಆನೆ ತನ್ನ ಸೊಂಡಿಲನ್ನು ಬಳಸಿಕೊಂಡು ಮನೆಯಲ್ಲಿದ್ದ ಅಕ್ಕಿ ಹಾಗೂ ಆಹಾರ ಪದಾರ್ಥಗಳನ್ನು ಹುಡುಕಿ ಅದನ್ನು ತಿಂದಿದೆ. ನಂತರ ಮನೆಯವರನ್ನು ಕಂಡ ಆನೆ ಸ್ವಲ್ಪ ಸಮಯ ಮನೆಯಲ್ಲೇ ಇದ್ದು ಬಳಿಕ ಅಲ್ಲಿಂದ ಹೊರಟು ಹೋಗಿದೆ.

    ಕೊಯಂಬತ್ತೂರಿನಲ್ಲಿ ಆನೆ ಆಹಾರ ಹುಡುಕಿ ಕೊಂಡು ಮನೆಯೊಳಗೆ ನುಗ್ಗಿದ್ದು ಇದು ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಆನೆಗಳು ದಾಳಿ ನಡೆಸಿ ಈ ರೀತಿ ಮಾಡಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರು ಏರೋಸ್ಪೇಸ್‍ನಲ್ಲಿ ತಪ್ಪಿತು ದುರಂತ: ಎರಡು ಇಂಡಿಗೋ ವಿಮಾನಗಳು ಪಾರಾಗಿದ್ದು ಹೇಗೆ?

    ಬೆಂಗಳೂರು ಏರೋಸ್ಪೇಸ್‍ನಲ್ಲಿ ತಪ್ಪಿತು ದುರಂತ: ಎರಡು ಇಂಡಿಗೋ ವಿಮಾನಗಳು ಪಾರಾಗಿದ್ದು ಹೇಗೆ?

    ಬೆಂಗಳೂರು: ಹಾರಾಟದ ವೇಳೆ ಬೆಂಗಳೂರು ಏರೋಸ್ಪೇಸ್ ನಲ್ಲಿ ಎರಡು ವಿಮಾನಗಳ ಮಧ್ಯೆ ಸಂಭವಿಸಬಹುದಾಗಿದ್ದ ಡಿಕ್ಕಿ ಕೆಲವೇ ಅಂತರದಲ್ಲಿ ತಪ್ಪಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜುಲೈ 10 ರಂದು ಇಂಡಿಗೋ ಸಂಸ್ಥೆಯ ಎರಡು ವಿಮಾನಗಳು ಕೇವಲ 200 ಅಡಿ ಅಂತರದಲ್ಲಿ ಹಾರಾಟ ನಡೆಸಿತ್ತು. ಒಂದು ವೇಳೆ ಮುಖಾಮುಖಿ ಡಿಕ್ಕಿಯಾಗಿದ್ದರೆ ಹೈದರಾಬಾದಿಗೆ ಹೊರಟಿದ್ದ ವಿಮಾನದಲ್ಲಿದ್ದ 162 ಜನ ಹಾಗೂ ಹಾಗೂ ಕೊಚ್ಚಿಗೆ ತೆರಳುತ್ತಿದ್ದ ವಿಮಾನದಲ್ಲಿದ್ದ 166 ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು.

    ನಡೆದದ್ದು ಏನು?
    6ಇ-779 ಇಂಡಿಗೋ ವಿಮಾನವು ಕೊಯಮತ್ತೂರಿನಿಂದ ಹೈದ್ರಾಬಾದ್‍ಗೆ ಹೊರಟಿತ್ತು. ಅದೇ ಸಮಯದಲ್ಲಿ 6ಇ-6505 ವಿಮಾನವು ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತ್ತು. ಎರಡು ವಿಮಾನಗಳು ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆಯುವ ಸಂಭವವನ್ನು ಅರಿತ ಸಂಚಾರ ಡಿಕ್ಕಿ ತಪ್ಪಿಸುವ ವ್ಯವಸ್ಥೆ(ಟಿಸಿಎಎಸ್) ಎಚ್ಚರಿಕೆಯ ಸಿಗ್ನಲ್ ರವಾನಿಸಿದೆ. ಅಪಾಯದ ಸಿಗ್ನಲ್ ಬಂದ ಕೂಡಲೇ ವಿಮಾನಗಳ ಹಾರಾಟದ ಎತ್ತರವನ್ನು ಬದಲಾಯಿಸಲಾಗಿದೆ ಎಂದು ಇಂಡಿಗೋ ಏರ್ ಲೈನ್ಸ್ ಹೇಳಿದೆ.

    ಹೈದರಾಬಾದಿಗೆ ಹೊರಟಿದ್ದ ವಿಮಾನವು 36,000 ಅಡಿ ಅಂತರದಲ್ಲಿ ಹಾರಬೇಕಿದ್ದರೆ, ಕೊಚ್ಚಿಗೆ ಹೊರಟಿದ್ದ ವಿಮಾನ 28,000 ಅಡಿ ಎತ್ತರದಲ್ಲಿರಬೇಕಿತ್ತು. ಆದರೆ ಈ ವಿಮಾನಗಳು ಅನುಕ್ರಮವಾಗಿ 27,300 ಅಡಿ ಮತ್ತು 27,500 ಅಡಿ ಎತ್ತರದಲ್ಲಿ ಹಾರಾಟ ನಡೆಸುತಿತ್ತು. 8 ಕಿ.ಮೀ ದೂರದಲ್ಲಿದ್ದಾಗ ವಿಮಾನಗಳ ಕಾಕ್‍ಪಿಟ್ ಗೆ ಎಚ್ಚರಿಕೆ ಸಿಗ್ನಲ್ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಮಂಡಳಿ(ಎಎಐಬಿ) ತನಿಖೆ ಆರಂಭಿಸಿದೆ.

    ಏನಿದು ಟಿಸಿಎಎಸ್?
    ಹಾರಾಟದ ಸಂದರ್ಭದಲ್ಲಿ ಎರಡು ವಿಮಾನಗಳ ಮಧ್ಯೆ ಸಂಭವಿಸಬಹುದಾದ ಡಿಕ್ಕಿಯನ್ನು ತಪ್ಪಿಸಲು ಸಂಚಾರ ಡಿಕ್ಕಿ ತಪ್ಪಿಸುವ ವ್ಯವಸ್ಥೆ(ಟಿಸಿಎಎಸ್) ಬಳಸಲಾಗುತ್ತದೆ. ಕಡಿಮೆ ಅಂತರದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎರಡು ವಿಮಾನಗಳು ಹಾರಾಟ ನಡೆಸುತ್ತಿದ್ದರೆ ಟಿಸಿಎಎಸ್ ನಲ್ಲಿರುವ ಟ್ರಾನ್ಸ್ಪಾಂಡರ್ ಸಿಗ್ನಲ್‍ಗಳನ್ನು ಆಧಾರಿಸಿ ಕಾಕ್‍ಪಿಟ್ ನಲ್ಲಿ ಸ್ವಯಂಚಾಲಿತವಾಗಿ ಧ್ವನಿ ಸಂದೇಶ ನೀಡುತ್ತದೆ. ಎಚ್ಚರಿಕೆಯ ಸಂದೇಶ ಹೇಗಿರುತ್ತದೆ ಎಂದರೆ ಒಂದು ವಿಮಾನದ ಕಾಕ್‍ಪಿಟ್‍ಗೆ “ಮತ್ತಷ್ಟು ಎತ್ತರಕ್ಕೆ ಹೋಗಿ” ಎನ್ನುವ ಎಚ್ಚರಿಕೆ ನೀಡಿದರೆ ಇನ್ನೊಂದು ವಿಮಾನಕ್ಕೆ “ಎತ್ತರವನ್ನು ತಗ್ಗಿಸಿ” ಎನ್ನುವ ಧ್ವನಿ ಸಂದೇಶವನ್ನು ನೀಡುತ್ತದೆ. ಈ ಸಂದೇಶ ಅನುಸಾರ ಪೈಲಟ್‍ಗಳು ವಿಮಾನ ಎತ್ತರವನ್ನು ಏರಿಸಿ/ತಗ್ಗಿಸುವ ಮೂಲಕ ಡಿಕ್ಕಿಯನ್ನು ತಪ್ಪಿಸುತ್ತಾರೆ.

    ಪರಸ್ಪರ ಡಿಕ್ಕಿಯಾಗುವ ಬಗ್ಗೆ ಟಿಸಿಎಎಸ್ ಸಂದೇಶ ಮೊಳಗಿಸುವುದು ಇದೇ ಮೊದಲೆನಲ್ಲ. ಈ ಜನವರಿಯಲ್ಲಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ಪರಸ್ಪರ ಮುಖಾಮುಖಿಯಾಗಿತ್ತು.

  • 10 ಅಡಿ ಆಳದ ನೀರಿನ ಟ್ಯಾಂಕೊಳಗೆ ಬಿದ್ದ 1 ತಿಂಗ್ಳ ಆನೆಮರಿಯ ರಕ್ಷಣೆ

    10 ಅಡಿ ಆಳದ ನೀರಿನ ಟ್ಯಾಂಕೊಳಗೆ ಬಿದ್ದ 1 ತಿಂಗ್ಳ ಆನೆಮರಿಯ ರಕ್ಷಣೆ

    ಕೊಯಂಬತ್ತೂರು: ನೀರಿನ ಟ್ಯಾಂಕಿನೊಳಗೆ ಬಿದ್ದ ಮರಿಯಾನೆಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಆನೆಗಳ ಹಿಂಡಿನ ಜೊತೆ ಬಿಟ್ಟ ಘಟನೆ ನಡೆದಿದೆ.

    ಪೆರಿಯ ತಡಾಗಂನಲ್ಲಿರೋ ಶ್ರೀ ಲಲಿತಾಂಬಿಕ ದೇವಸ್ಥಾನದ ನೀರಿನ ಟ್ಯಾಂಕಿಗೆ ಮರಿಯಾನೆ ಗುರುವಾರ ಸಂಜೆ 4.30ರ ಸುಮಾರಿಗೆ ಬಿದ್ದು, ಒದ್ದಾಡಿದೆ. ಕೂಡಲೇ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.

    ನೀರು ಕುಡಿಯಲೆಂದು ಆನೆಗಳ ಹಿಂಡು ದೇವಸ್ಥಾನದ ಪಕ್ಕದಲ್ಲಿರುವ 10 ಅಡಿ ಆಳದ ಟ್ಯಾಂಕ್ ಬಳಿ ಬಂದಿವೆ. ಈ ವೇಳೆ ಹಿಂಡಿನಲ್ಲಿದ್ದ 1 ತಿಂಗಳ ಮರಿಯಾನೆಯೊಂದು ಟ್ಯಾಂಕೊಳಗೆ ಬಿದ್ದಿದೆ. ಕೂಡಲೇ ಇದನ್ನು ಗಮನಿಸಿದ ಉಳಿದ ಆನೆಗಳು ಮರಿಯನ್ನು ರಕ್ಷಿಸಲು ಪ್ರಯತ್ನಿಸಿ ವಿಫಲವಾಗಿವೆ.

    ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಗಸ್ತು ತಿರುಗುತ್ತಿದ್ದ ವೇಳೆ ಆನೆಗಳ ಹಿಂಡು ನೀರಿನ ಟ್ಯಾಂಕಿನ ಬಳಿ ಇರುವುದನ್ನು ಗಮನಿಸಿದ್ದಾರೆ. ಅಲ್ಲದೇ ಮರಿಯಾನೆಯೊಂದು ಟ್ಯಾಂಕೊಳಗೆ ಬಿದ್ದು, ಒದ್ದಾಡುತ್ತಿರುವುದು ತಿಳಿಯುತ್ತದೆ.

    ಕೂಡಲೇ ಎಚ್ಚೆತ್ತಕೊಂಡ ಅರಣ್ಯ ಇಲಾಖೆ, ಮರಿಯಾನೆಯನ್ನು ಕಾಪಾಡುವ ಸಲುವಾಗಿ ಆನೆಗಳ ಹಿಂಡನ್ನು ಅಲ್ಲಿಂದ ಓಡಿಸಲು ಪಟಾಕಿ ಹಚ್ಚಿದ್ದಾರೆ. ಭಯದಿಂದ ಆನೆಗಳು ಅಲ್ಲಿಂದ ತೆರಳಿದ ಬಳಿಕ ಅರ್ಥ್‍ಮೂವರ್ ಬಳಸಿ ಮರಿಯಾನೆಯನ್ನು ಮೇಲಕ್ಕೆತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ರಕ್ಷಿಸಿ ಆನೆಗಳ ಹಿಂಡಿನ ಜೊತೆ ಬಿಡಲಾಯಿತು ಎಂಬುದಾಗಿ ವರದಿಯಾಗಿದೆ.

  • ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ

    ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ

    ಚೆನ್ನೈ: ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಬಸ್ ಚಾಲಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಬಸ್ ಕೊಯಮತ್ತೂರಿನಿಂದ ಈರೋಡ್ ಕಡೆ ಸಂಚರಿಸುತ್ತಿತ್ತು. ಈ ಬಸ್ ನಲ್ಲಿ ಇದೇ ಮೊದಲ ಬಾರಿಗೆ ಬಸ್ ಚಾಲಕ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಗೂ ಐಎಸ್‍ಐ ಹೆಲ್ಮೆಟ್ ಕಡ್ಡಾಯ- ಮೈಸೂರು ಪೊಲೀಸ್ ಆಯುಕ್ತರಿಂದ ಸುತ್ತೋಲೆ

    ಹೆಲ್ಮೆಟ್ ಧರಿಸಲು ಕಾರಣವೇನು?
    ತಮಿಳುನಾಡು ಸಾರಿಗೆ ಇಲಾಖೆಯ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆ ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದಾಗಿ ಕೊಯಮತ್ತೂರು ಪ್ರಯಾಣಿಕರು ಬಸ್ ಗಾಗಿ ಕಾದು ಸುಸ್ತಾಗಿದ್ದರು. ಕೊನೆಗೊಂದು ಬಸ್ ಬಂತು. ಆ ಬಸ್ ನಲ್ಲಿ ಜನವಿಲ್ಲದ ಕಾರಣ ಪ್ರಯಾಣಿಕರು ಬೇಗ ಬೇಗ ಹತ್ತಿ ಸೀಟ್ ನಲ್ಲಿ ಕುಳಿತುಕೊಂಡ್ರು. ಇದನ್ನೂ ಓದಿ: ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಈ ವೇಳೆ ಬಸ್ ಚಾಲಕ ಹೆಲ್ಮೆಟ್ ಹಾಕಿರುವುದು ಕೆಲ ಮಂದಿಯ ಗಮನಕ್ಕೆ ಬಂದಿದೆ. ಕೂಡಲೇ ಅದರಲ್ಲೊಬ್ಬ ಪ್ರಯಾಣಿಕ ಚಾಲಕನ ಹತ್ತಿರ ಹೋಗಿ ಯಾಕೆ ಹೆಲ್ಮೆಟ್ ಧರಿಸಿದ್ದೀರಿ ಎಂದು ಕೇಳಿದ್ದಾನೆ. ಈ ವೇಳೆ ಚಾಲಕ ಸಾರಿಗೆ ನೌಕರರು ಎಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಮಾತ್ರ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾನು ಅವರಿಗೆ ಟಾರ್ಗೆಟ್ ಆಗಬಾರದೆಂದು, ನನ್ನ ರಕ್ಷಣೆಗೋಸ್ಕರ ನಾನು ಹೆಲ್ಮೆಟ್ ಹಾಕ್ಕೊಂಡು ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿದ್ದಾರೆ. ಚಾಲಕನ ಒಳ್ಳೆಯತನದ ಗುಣಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

     

    https://youtu.be/5-2to324ssU

  • 8 ಮದುವೆ ಮಾಡಿಕೊಂಡು 4.5 ಕೋಟಿ ರೂ. ವಂಚಿಸಿದ ಉದ್ಯಮಿ

    8 ಮದುವೆ ಮಾಡಿಕೊಂಡು 4.5 ಕೋಟಿ ರೂ. ವಂಚಿಸಿದ ಉದ್ಯಮಿ

    ಕೊಯಮತ್ತೂರು: ಸಾರಿಗೆ ಉದ್ಯಮಿಯೊಬ್ಬ ಎಂಟು ಮದುವೆಯಾಗಿ ಸುಮಾರು 4.5 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಚೆನ್ನೈನ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿರುವ ಇಂದಿರಾ ಗಾಂಧಿ ಎಂಬವರು ಈ ಕುರಿತು ದೂರು ನೀಡಿದ ಬಳಿಕ ಉದ್ಯಮಿಯ ನಿಜ ಬಣ್ಣ ಈಗ ಬೆಳಕಿಗೆ ಬಂದಿದೆ.

    ಇತ್ತೀಚೆಗಷ್ಟೇ 57 ವರ್ಷದ ಪುರುಷೋತ್ತಮ್ ಎಂಬಾತನನ್ನು ಇಂದಿರಾ ಗಾಂಧಿ ಎಂಬವರು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ಇಂದಿರಾ ತಮ್ಮ ಹೆಸರಿನಲ್ಲಿ ಚೆನ್ನೈನಲ್ಲಿರುವ ಬಂಗಲೆಯೊಂದನ್ನು ಮಾರಾಟ ಮಾಡಿ ಕೊಯಮತ್ತೂರ್ ನಲ್ಲಿ ಜೀವನ ಸಾಗಿಸುವ ಆಸೆಯನ್ನು ತಮ್ಮ ಪತಿ ಪುರುಷೋತ್ತಮ್ ಬಳಿ ಹಂಚಿಕೊಂಡಿದ್ದರು. ಆದರೆ ಮನೆ ಮಾರಾಟ ಮಾಡಿದ ಬಳಿಕ ಬಂದ 1.5 ಕೋಟಿ ಹಣದೊಂದಿಗೆ ಪುರುಷೋತ್ತಮ್ ಪರಾರಿಯಾಗಿದ್ದಾನೆ.

    ಈ ವಿಚಾರ ತಿಳಿದ ಇಂದಿರಾ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪುರುಷೋತ್ತಮ್ ಇತಿಹಾಸ ಕಂಡು ಬೆಚ್ಚಿಬಿದ್ದಿದ್ದಾರೆ. ಈತ ಇಂದಿರಾರನ್ನು ಮದುವೆಯಾಗುವುದಕ್ಕೂ ಮುನ್ನ ಮೂವರು ಮಹಿಳೆಯರನ್ನು ಮದುವೆಯಾಗಿದ್ದು, ಅಲ್ಲದೇ ಆತ ಮದುವೆಯಾಗಿದ್ದ ಇಂದಿರಾ ಅವರು ಸೇರಿ ಮೂವರು ಮಹಿಳೆಯರ ಬಳಿ ಒಟ್ಟಾರೆ 4.5 ಕೋಟಿ ಹಣ ವಂಚಿಸಿ ಪರಾರಿಯಾಗಿದ್ದಾನೆ. ಆದರೆ ಇಂದಿರಾ ಅವರನ್ನು ಮದುವೆಯಾದ ಬಳಿಕ ಮತ್ತೆ ಮೂರು ಮದುವೆಯಾಗಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದಕ್ಕೂ ಮುನ್ನ ಮದುವೆಯಾಗಿದ್ದ ಕುಮದವಳ್ಳಿ ಎಂಬ ಮಹಿಳೆ ದೂರಿನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪುರುಷೋತ್ತಮ್ ತನ್ನ ಆಸ್ತಿ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಈ ಆಸ್ತಿ ತನ್ನ ಹೆಸರಿಗೆ ಬಂದರೆ 17 ಕೋಟಿ ರೂ. ಬರುತ್ತದೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಹಣದ ಅಗತ್ಯವಿದೆ ಎಂದು ಹೇಳಿ ಕುಮದುವಳ್ಳಿ ಅವರ ಆಸ್ತಿಯನ್ನು ಮಾರಾಟ ಮಾಡಿ 3 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದ ಎಂದು ತಿಳಿಸಿದ್ದಾರೆ.

    ಪುರುಷೋತ್ತಮ್ ವೈವಾಹಿಕ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಸ್ಥೆ ನಡೆಸುತ್ತಿರುವ ಮೋಹನ್ ಹಾಗೂ ವಿಜಯ ಕುಮಾರಿ ಎಂಬವರ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾನೆ. ಈತನಿಂದ ಹಣ ಪಡೆದು ಸಂಸ್ಥೆ ಮಾಲೀಕರು ಈತನಿಗೆ ಹೆಚ್ಚು ಹಣ ಹೊಂದಿರುವ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಸುತ್ತಿದ್ದರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಪ್ರಸ್ತುತ ಇಂದಿರಾ ಹಾಗೂ ಮೂವರು ಮಹಿಳೆಯರು ನೀಡಿದ ದೂರಿನ ಮೇರೆಗೆ ಪುರುಷೋತ್ತಮ್ ವಿರುದ್ಧ ಕೊಯಮತ್ತೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪುರುಷೋತ್ತಮ್ ಹಲವು ಮದುವೆಗಳನ್ನು ಕಾನೂನಾತ್ಮಕವಾಗಿ ರಿಜಿಸ್ಟರ್ ಸಹ ಮಾಡಿಸಿದ್ದು, ಹೆಚ್ಚು ಶ್ರೀಮಂತ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಈತನ ಮೇಲೆ ಈಗಾಗಲೇ 18 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಕೊಯಮತ್ತೂರು ಪೂರ್ವ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಮಾಸುತಾ ಬೇಗಂ ಹೇಳಿದ್ದಾರೆ.

  • ಸಾವಿನಲ್ಲೂ 9 ಮಂದಿ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸಾರ್ಥಕತೆ ಮೆರೆದ ಮಹಿಳೆ

    ಸಾವಿನಲ್ಲೂ 9 ಮಂದಿ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸಾರ್ಥಕತೆ ಮೆರೆದ ಮಹಿಳೆ

    ಕೊಯಮತ್ತೂರು: ಮೆದುಳು ನಿಷ್ಕ್ರಿಯಗೊಂಡಿದ್ದ 56 ವರ್ಷದ ಮಹಿಳೆಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಕೊಯಮತ್ತೂರಿನ ಬ್ಯಾಂಕ್‍ವೊಂದರಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಮೃತಪಡುವ ಮೊದಲು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.

    ನವೆಂಬರ್ 30 ರಂದು ಇವರು ಆಫೀಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಸಹ ಉದ್ಯೋಗಿಗಳು ಕೂಡಲೇ ಇವರನ್ನು ಸಮೀಪದ ಕೆ.ಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯನ್ನು ಪರೀಕ್ಷೆ ಮಾಡಿದ ಬಳಿಕ ಅವರಿಗೆ ಅಧಿಕ ರಕ್ತ ಒತ್ತಡ, ಕಾರ್ಡಿಯೊ-ವ್ಯಾಸ್ಕೂಲರ್ (ಹೃದಯ-ರಕ್ತನಾಳದ ಸಮಸ್ಯೆ) ಮತ್ತು ಮೆದುಳಿನ ರಕ್ತ ಸ್ರಾವದಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ವೈದ್ಯರಿಗೆ ತಿಳಿಯಿತು.

    ಪರಿಣಿತ ವೈದ್ಯರ ತಂಡವೊಂದು ಭಾನುವಾರ ಆಕೆಯನ್ನ ಆಪರೇಷನ್ ಮಾಡಿ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆಯ ಮೆದುಳು ನಿಷ್ಕ್ರಿಯವಾಯಿತು. ಅಷ್ಟೇ ಅಲ್ಲದೇ ಮತ್ತೆ ಅದನ್ನು ಸರಿ ಮಾಡಲು ಸಾಧ್ಯವಾಗದಷ್ಟು ಹಾನಿಯಾಯಿತು ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಜಿ ಭಕ್ತವತ್ಸಲಂ ಹೇಳಿದರು.

    ವೈದ್ಯರು ಮತ್ತೆ ಎರಡು ಪರೀಕ್ಷೆಗಳನ್ನು ಮಾಡಿ ಸಂಜೆ ಹೊತ್ತಿಗೆ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ತಿಳಿಸಿದ್ದಾರೆ. ನಂತರ ಮಹಿಳೆಯ ಮಗ ಮತ್ತು ಮಗಳ ಇಬ್ಬರ ಅನುಮತಿಯನ್ನು ಪಡೆದು ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಆಸ್ಪತ್ರೆ ಪಡೆದುಕೊಂಡಿತು.

    ಮಹಿಳೆಯಿಂದ ಪಡೆದುಕೊಂಡ ಅಂಗಾಂಗಗಳನ್ನು, ತಮಿಳು ನಾಡಿನ ಟ್ರಾನ್ಸ್ ಪ್ಲಾಂಟ್ ಅಥಾರಿಟಿ, ಯಕೃತ್ತು, ಮತ್ತು ಒಂದು ಕಿಡ್ನಿ ಕೆ.ಜಿ. ಆಸ್ಪತ್ರೆಗೆ, ಮತ್ತೊಂದು ಕಿಡ್ನಿಯನ್ನು ಶ್ರೀ ರಾಮಕೃಷ್ಣ ಆಸ್ಪತ್ರೆಗೆ, ಕಣ್ಣುಗಳನ್ನು ಅರವಿಂದ್ ಕಣ್ಣಿನ ಆಸ್ಪತ್ರೆಗೆ, ಚರ್ಮ ಮತ್ತು ಎಲುಬುಗಳನ್ನು ಗಂಗಾ ಆಸ್ಪತ್ರೆ, ಹೃದಯ ಮತ್ತು ಶ್ವಾಸಕೋಶ ಫೊರ್ಟಿಸ್ ಆಸ್ಪತ್ರೆ/ಗ್ಲೋಬಲ್ ಆಸ್ಪತ್ರೆ ಹಸ್ತಾಂತರಿಸಲಾಗುವುದು. ಇದರಿಂದ 9 ಜನರ ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು ಭಕ್ತವತ್ಸಲಂ ಹೇಳಿದ್ದಾರೆ.

     

  • ಮರಿ ಜೊತೆ ರಾತ್ರಿ ಮನೆಗೆ ಎಂಟ್ರಿ ಕೊಟ್ಟ ಆನೆ: ವೈರಲ್ ವಿಡಿಯೋ

    ಮರಿ ಜೊತೆ ರಾತ್ರಿ ಮನೆಗೆ ಎಂಟ್ರಿ ಕೊಟ್ಟ ಆನೆ: ವೈರಲ್ ವಿಡಿಯೋ

    ಚೆನ್ನೈ: ಆನೆ ತನ್ನ ಮರಿ ಜೊತೆಗೆ ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ದೊಡ್ಡನಾಯಕನ ಪಾಳ್ಯದಲ್ಲಿ ನಡೆದಿದೆ.

    ಗುರುವಾರ ರಾತ್ರಿ 11.50ರ ವೇಳೆಗೆ ಮನೆಗೆ ನುಗ್ಗಿ ಆನೆ ಆಹಾರಕ್ಕಾಗಿ ಹುಡುಕಾಡಿದೆ. ಯಾವುದೇ ಆಹಾರ ಸಿಗದ ಕಾರಣ ಮನೆಯಿಂದ ಮರಳಿದೆ. ಆನೆ ಪ್ರವೇಶಿಸುತ್ತಿರುವ ದೃಶ್ಯಗಳು ಮನೆಯ ಸಮೀಪದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಆನೆ ಪ್ರವೇಶಿಸಿದ ದಾರಿಯಲ್ಲೆ ಕಾರು ಮತ್ತು ಎರಡು ಬೈಕ್ ಗಳು ನಿಂತುಕೊಂಡಿತ್ತು. ಆದರೆ ಈ ವಾಹನಗಳಿಗೆ ಯಾವುದೇ ಹಾನಿ ಮಾಡದೇ ಆನೆ ತೆರಳಿರುವುದು ವಿಶೇಷವಾಗಿದೆ.(ಇದನ್ನೂ ಓದಿ: ಆನೆ ಮುಂದೆ ಬಾಹುಬಲಿ ಸ್ಟಂಟ್ ಮಾಡಲು ಹೋಗಿ ಫುಟ್ ಬಾಲ್ ನಂತೆ ಗಾಳಿಯಲ್ಲಿ ಹಾರಿಬಿದ್ದ! ವಿಡಿಯೋ)

    ಸಾಧಾರಣವಾಗಿ ಆನೆಗಳು ಆಹಾರ ಹುಡುಕಿಕೊಂಡು ತಿರುಗಾಡುತ್ತಿರುತ್ತವೆ. ಆಹಾರ ಸಿಗದೇ ಇದ್ದಲ್ಲಿ ರೊಚ್ಚಿಗೆದ್ದು ಸ್ಥಳದಲ್ಲಿದ್ದ ವಸ್ತುಗಳಿಗೆ ಹಾನಿ ಮಾಡುತ್ತವೆ. ಈ ಪ್ರದೇಶ ಅರಣ್ಯದ ಸಮೀಪದಲ್ಲಿದ್ದು ಈ ಹಿಂದೆ ಆನೆಯನ್ನು ಪ್ರವೇಶಿಸಿ ಆಹಾರ ಸಿಗದೇ ಇದ್ದಾಗ ಮನೆಯ ಕಾಂಪೌಂಡನ್ನು ಧ್ವಂಸ ಮಾಡಿತ್ತು. ಇದನ್ನೂ ಓದಿ: ವ್ಯಕ್ತಿ ಸಿಗಲಿಲ್ಲ ಎಂದು ಕಾರಿನ ಮೇಲೆ ಆಕ್ರೋಶವನ್ನು ತೀರಿಸಿಕೊಂಡ ಬಂಡೀಪುರದ ಆನೆ