Tag: Coimbatore

  • ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

    ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

    ತಿರುವನಂತಪುರಂ: ಇತ್ತೀಚೆಗೆ ಸ್ವಾನ, ದನ-ಕರುಗಳ ಹುಟ್ಟುಹಬ್ಬವನ್ನು ಆಚರಿಸುವುದು ಸಾಮಾನ್ಯವಾಗಿದೆ. ಅಲ್ಲದೆ ಕೆಲವೆಡೆ ಮೂಕ ಪ್ರಾಣಿಗಳ ಸೀಮಂತ ಕಾರ್ಯಕ್ರಮವನ್ನು ಕೂಡ ಮಾಡುತ್ತಾರೆ. ಅಂತೆಯೇ ಇದೀಗ ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಉದ್ಯಮಿಯೊಬ್ಬರು ಸುದ್ದಿಯಾಗಿದ್ದಾರೆ.

    ಹೌದು. ಕೊಯಂಬತ್ತೂರು ಮೂಲದ ಉಮಾ ಮಹೇಶ್ವರನ್ ಎಂಬ ಉದ್ಯಮಿ 2 ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಕ್ಷೀರ ಎಂಬ ಬೆಕ್ಕು 50 ದಿನದ ಗರ್ಭಿಣಿಯಾಗಿದ್ದರೆ, ಐರಿಶ್‍ಗೆ 35 ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಪೆಟ್ ಕ್ಲಿನಿಕ್ ನಲ್ಲಿಯೇ ಉದ್ಯಮಿ ಶುಭ ಕಾರ್ಯ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಶುವೈದ್ಯಾಧಿಕಾರಿ ವೇಣುಗೋಪಾಲ್ ಆಗಮಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕ ಮನೋಜ್ ತಿವಾರಿಗೆ ಕೊರೊನಾ ಪಾಸಿಟಿವ್

    ಈ ಸಂಬಂಧ ಮಾಧ್ಯಮದ ಜೊತೆಗೆ ಉಮಾಮಹೇಶ್ವರನ್ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸುವ ಸಲುವಾಗಿ ಸೀಮಂತ ಕಾರ್ಯಕ್ರಮ ಮಾಡುತ್ತೇವೆ. ಅಂತೆಯೇ ಇಂದು ನಮ್ಮ ಮುದ್ದಿನ ಬೆಕ್ಕುಗಳಾದ ಕ್ಷೀರ ಮತ್ತು ಐರಿಶ್‍ಗೆ ಅದೇ ರೀತಿ ಮಾಡಿದ್ದೇವೆ. ಈ ಮೂಲಕ ನಮ್ಮ ಕುಟುಂಬ ಹಾಗೂ ಗೆಳೆಯರು ಬೆಕ್ಕುಗಳು ಮತ್ತು ಬೆಕ್ಕಿನ ಮರಿಗಳ ಉತ್ತಮ ಆರೋಗ್ಯಕ್ಕಾಗಿ ಆಶಿಸಿರುವುದಾಗಿ ತಿಳಿಸಿದರು.

    ಇದೇ ವೇಳೆ ಈಗಾಗಲೇ ನಾವು ಬೆಕ್ಕುಗಳಿಗೆ ಆರೋಗ್ಯಕರವಾದ ಆಹಾರಗಳನ್ನು ನೀಡುತ್ತಿದ್ದೇವೆ. ಹಾಲು, ಚಿಕನ್ ಮುಂತಾದ ಪ್ರೊಟೀನ್‍ಯುಕ್ತ ಆಹಾರ ಪದಾರ್ಥಗಳನ್ನು ನೀಡುತ್ತಿರುವುದಾಗಿ ಉಮಾಮಹೇಶ್ವರನ್ ಹೇಳಿದರು.

  • ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ-  ತಾಯಿ, ಮರಿಯಾನೆಗಳು ಸಾವು

    ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ- ತಾಯಿ, ಮರಿಯಾನೆಗಳು ಸಾವು

    ಚೆನ್ನೈ: ಒಂದು ಹೆಣ್ಣಾನೆ ಅದರ ಎರಡು ಪುಟ್ಟ ಹೆಣ್ಣು ಮರಿಗಳು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ತಮಿಳುನಾಡು-ಕೇರಳದ ಗಡಿಯಾದ ನವಕ್ಕರೈ ಸಮೀಪದ ಮಾವುತ್ತಂಪತ್ತಿ ಗ್ರಾಮದ ಬಳಿ ನಡೆದಿದೆ.

    25 ವರ್ಷದ ಹೆಣ್ಣಾನೆ ಹಾಗೂ ಅದರ 12 ವರ್ಷದ ಎರಡು ಮರಿಗಳು ರೈಲು ಹಳಿ ದಾಟುತ್ತಿದ್ದಾಗ ಮಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮಡುಕ್ಕುರೈ ಬಳಿ ರಾತ್ರಿ 9ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ರೈಲು ಅತಿ ವೇಗವಾಗಿ ಚಲಿಸುತ್ತಿತ್ತು, ಡಿಕ್ಕಿ ರಭಸಕ್ಕೆ ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಸ್ಥಳಕ್ಕೆ ಕಾರ್ಯಾಚರಣೆ ತಂಡ ತೆರಳಿದೆ ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  ಬೆಳ್ಳಂಬೆಳಗ್ಗೆ ಮನೆಮುಂದೆ ಬಂದು ನಿಂತ ಒಂಟಿ ಸಲಗ

    ಮಂಗಳೂರು ಚೆನ್ನೈ  ಎಕ್ಸ್‌ಪ್ರೆಸ್‌ ರೈಲು ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಮಾರ್ಗವಾಗಿ ಚೆನ್ನೈಗೆ ತೆರಳುತ್ತದೆ. ಆನೆಗಳು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿದ್ದಾರೆ. ರಾತ್ರಿ ಕತ್ತಲಿದ್ದರೂ ಆನೆಯ ಮೃತದೇಹಗಳನ್ನು ಹಳಿಯ ಮೇಲಿಂದ ತೆಗೆಯಲಾಗಿದ್ದು, ಇಂದು  ಮರಣೋತ್ತರ ಪರೀಕ್ಷೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಘಟನೆಯ ಪ್ರಾಥಮಿಕ ತನಿಖೆ ನಡೆಸಲು ಜಿಲ್ಲಾ ಅರಣ್ಯಾಧಿಕಾರಿ ಟಿ.ಕೆ.ಅಶೋಕ್ ಕುಮಾರ್ ಸೇರಿ ಇಲಾಖೆಯ ಇತರ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ರೈಲಿನ ಲೋಕೋ ಪೈಲಟ್ ನೀಡಿದ ಮಾಹಿತಿ ಅನ್ವಯ ರೈಲ್ವೆ ಪೊಲೀಸರೂ ಕೂಡ ಸ್ಥಳಕ್ಕೆ ತೆರಳಿದ್ದಾರೆ.ಇದನ್ನೂ ಓದಿ: ಮೊದಲ ಬಾರಿಗೆ ಬೋನಿ ಕಪೂರ್ ನಿರ್ಮಾಣದಲ್ಲಿ ಜಾನ್ವಿ ನಟನೆ

  • ಟಾರ್ಗೆಟ್ ಇದ್ದಿದ್ದು ಪತ್ನಿ, ಮೃತಪಟ್ಟಿದ್ದು ಗರ್ಭಿಣಿ ಮಗಳು!

    ಟಾರ್ಗೆಟ್ ಇದ್ದಿದ್ದು ಪತ್ನಿ, ಮೃತಪಟ್ಟಿದ್ದು ಗರ್ಭಿಣಿ ಮಗಳು!

    ಕೊಯಂಬತ್ತೂರು: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದು, ಆದರೆ ಅದಕ್ಕೆ ಗರ್ಭಿಣಿ ಮಗಳು ಬಲಿಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕಿನ ಮದಯ್ಯ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ಆರೋಪಿಯನ್ನು ಅರುಣಾಚಲಂ(50) ಹಾಗೂ ಮೃತ ದುರ್ದೈವಿಯನ್ನು ವೆಂಕಟಲಕ್ಷ್ಮಿ ಎಂದು ಗುರುತಿಸಲಾಗಿದೆ. ವೆಂಕಟಲಕ್ಷ್ಮಿ 3 ತಿಂಗಳ ಗರ್ಭಿಣಿ. 4 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವೆಂಕಟಲಕ್ಷ್ಮಿ ಪತಿ ಶ್ರೀನಿವಾಸ್ ಜೊತೆ ಯುಗಾದಿ ಹಬ್ಬ ಆಚರಿಸಲು ತನ್ನ ತವರು ಮನೆಗೆ ಬಂದಿದ್ದಾಳೆ.

    ಅಂತೆಯೇ ಮನೆಯವರೆಲ್ಲರೂ ಯುಗಾದಿ ಹಬ್ಬವನ್ನು ಬಹಳ ಸಂಭ್ರಮ, ಸಡಗರದಿಂದಲೇ ಆಚರಿಸಿದ್ದರು. ಆದರೆ ವಿಪರೀತ ಮದ್ಯವ್ಯಸನಿಯಾಗಿರುವ ಅರುಣಾಚಲಂ ಹಬ್ಬದ ಸಡಗರ ಮರೆ ಮಾಚುವ ಮುನ್ನವೇ ಮನೆ ಮಂದಿಗೆ ಶಾಕ್ ನೀಡಿದ್ದಾನೆ.

    ಹಬ್ಬ ಆಚರಿಸಿದ ಮರುದಿನ ಅಂದರೆ ಬುಧವಾರ ಅರುಣಾಚಲಂ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದಿದ್ದಾನೆ. ಅಲ್ಲದೆ ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದಿದ್ದಾನೆ. ಈ ಜಗಳ ತಾರಕಕ್ಕೇರಿ ಪತ್ನಿಯನ್ನು ಕೊಲೆ ಮಾಡಲು ಹೋಗಿ ತನ್ನ ಮಗಳನ್ನೇ ಕೊಂದಿದ್ದಾನೆ.

    ಸದ್ಯ ಘಟನೆ ಸಂಬಂಧ ಆರೋಪಿ ತಲಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • 2.75 ಲಕ್ಷ ಚಿನ್ನ, 15 ಸಾವಿರ ರೂ. ಮೌಲ್ಯದ ಬೆಳ್ಳಿ ಬಳಸಿ ಮಾಸ್ಕ್ ತಯಾರಿಸಿದ ಅಕ್ಕಸಾಲಿಗ

    2.75 ಲಕ್ಷ ಚಿನ್ನ, 15 ಸಾವಿರ ರೂ. ಮೌಲ್ಯದ ಬೆಳ್ಳಿ ಬಳಸಿ ಮಾಸ್ಕ್ ತಯಾರಿಸಿದ ಅಕ್ಕಸಾಲಿಗ

    ಚೆನ್ನೈ: ಕೊರೊನಾ ಮಹಾಮಾರಿ ಬಂದ ಬಳಿಕ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಈ ಮಾಸ್ಕ್ ಬಳಕೆಯಲ್ಲೂ ಫ್ಯಾಶನ್ ಕಂಡುಕೊಳ್ಳಲಾಗಿದ್ದು, ಜನ ಚಿನ್ನ ಹಾಗೂ ಬೆಳ್ಳಿಯ ಮಾಸ್ಕ್ ಧರಿಸಿ ಸುದ್ದಿಯಾಗುತ್ತಿದ್ದಾರೆ. ಇದೇ ರೀತಿ ಕೊಯಂಬತ್ತೂರು ಮೂಲಕ ಅಕ್ಕಸಾಲಿಗರೊಬ್ಬರು ಇದೀಗ ಚಿನ್ನ ಹಾಗೂ ಬೆಳ್ಳಿ ಬಳಸಿ ಮಾಸ್ಕ್ ತಯಾರಿಸಿ ಸುದ್ದಿಯಾಗಿದ್ದಾರೆ.

    ಹೌದು. ಮೂಲತಃ ಅಕ್ಕಸಾಲಿಗರಾಗಿರುವ ರಾಧಾಕೃಷ್ಣನ್ ಸುಂದರಾಮ್ ಆಚಾರ್ಯರು 0.06 ಮಿಲಿಮೀಟರ್ ತೆಳುವಿರುವ ಚಿನ್ನ ಹಾಗೂ ಬೆಳ್ಳಿಯ ಎಳೆಗಳನ್ನು ಬಳಸಿ ಮಾಸ್ಕ್ ತಯಾರಿಸಿದ್ದಾರೆ. 2.75 ರೂ. ಮೌಲ್ಯದ 18 ಕ್ಯಾರೆಟ್ ಚಿನ್ನ ಹಾಗೂ 15 ಸಾವಿರ ರೂ. ಬೆಳ್ಳಿಯನ್ನು ಬಳಸಿ ಮಾಸ್ಕ್ ತಯಾರಿಸಿರುವುದಾಗಿ ರಾಧಾಕೃಷ್ಣ ತಿಳಿಸಿದ್ದಾರೆ.

    ತಯಾರಿಸಲು ಕಾರಣವೇನು?
    ದೇಶದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿಯ ಮಾಸ್ಕ್ ತಯಾರಿಸಿದ್ದೇನೆ. ಇಂತಹ ಮಾಸ್ಕ್ ಗಳನ್ನು ಸಾಮಾನ್ಯ ಜನ ಖರೀದಿಸಿ ಧರಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಆದರೆ ಶ್ರೀಮಂಂತರು ಮದುವೆ ಸಮಾರಂಭಗಳಲ್ಲಿ ಚಿನ್ನದ ಮಾಸ್ಕ್ ಬಳಸುತ್ತಾರೆ. ಈಗಾಗಲೇ ಉತ್ತರ ಭಾರತದಿಂದ ನನಗೆ 9 ಮಾಸ್ಕ್ ತಯಾರಿಸಿ ಕೊಡುವಂತೆ ಆರ್ಡರ್ ಬಂದಿದೆ ಎಂದು ರಾಧಾಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ: 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

    ಈ ಮಾಸ್ಕ್ ತಯಾರಿಸಲು ನಾನು 7 ದಿನ ತೆಗೆದುಕೊಂಡಿದ್ದೇನೆ. ನನಗೆ ಏನಾದರೂ ಹೊಸತು, ವಿಭಿನ್ನವಾಗಿ ಮಾಡುವುದೆಂದರೆ ತುಂಬಾನೆ ಖುಷಿ. ಆಭ ರಣ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಧಾಕೃಷ್ಣ ಅವರು ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟರು. ಆ ಬಳಿಕ ತಾನೇ ಚಿನ್ನದ ಎಳೆಗಳಿಂದ ಬೇರೆ ಬೇರೆ ಡಿಸೈನ್ ಗಳನ್ನು ಮಾಡಲು ಆರಂಭಿಸಿದ್ದಾರೆ. ಚಿನ್ನದ ಉಡುಪು, ಕೈ ಬ್ಯಾಗ್ ಹಾಗೂ ಛತ್ರಿ ಸೇರಿದಂತೆ ಅನೇಕ ವಸ್ತುಗಳನ್ನು ತಯಾರು ಮಾಡಿದ್ದರು. ಇದನ್ನೂ ಓದಿ: 3.5 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ಧರಿಸಿ ಗಮನಸೆಳೆದ ಉದ್ಯಮಿ!

  • 70 ವರ್ಷದ ಅಜ್ಜ, 7 ವರ್ಷದ ಮೊಮ್ಮಗಳು – 6 ದಿನ ರೇಪ್

    70 ವರ್ಷದ ಅಜ್ಜ, 7 ವರ್ಷದ ಮೊಮ್ಮಗಳು – 6 ದಿನ ರೇಪ್

    -ಮಗ್ಳು ಸೇಫ್ ಅಂತಾ ಅಜ್ಜನ ಬಳಿ ಬಿಡ್ತಿದ್ದ ಪೋಷಕರು
    -ಆರು ದಿನದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದೇಗೆ?

    ಚೆನ್ನೈ: 70 ವರ್ಷದ ಕಾಮುಕ ಅಜ್ಜನೊಬ್ಬ ಏಳು ವರ್ಷದ ಬಾಲಕಿಯನ್ನು ಅತ್ಯಾಚಾರಗೈದಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

    ಏನಿದು ಪ್ರಕರಣ?: ಸಂತ್ರಸ್ತ ಬಾಲಕಿ ಅಪ್ಪ-ಅಮ್ಮ ಹಾಗೂ ಅಣ್ಣನ ಜೊತೆಯಲ್ಲಿ ವಾಸವಾಗಿದ್ದಳು. ಬಾಲಕಿಯ ಪೋಷಕರು ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದು, ಪ್ರತಿನಿತ್ಯ ಮಗನನ್ನು ಕರೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಸೇಫ್ ಆಗಿರಲಿ ಎಂದು ಏಳು ವರ್ಷದ ಮಗಳನ್ನು ಅಜ್ಜನ ಬಳಿ ಬಿಡುತ್ತಿದ್ದರು. ಹೀಗೆ ಬೆಳಗ್ಗೆ ಹೋದ ಪೋಷಕರು ಸಂಜೆ ಮನೆಗೆ ಹಿಂದಿರುಗುತ್ತಿದ್ದರು.

    ಪುಟ್ಟ ಕಂದಮ್ಮನ ಮುದುಕನ ಕಾಮದ ಕಣ್ಣು: ಹೀಗೆ ಪ್ರತಿನಿತ್ಯ ತನ್ನ ಮನೆಯಲ್ಲಿರುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಮುದುಕನ ಕಣ್ಣು ಬಿದ್ದಿತ್ತು. ಜೂನ್ 26ರಂದು ಮುದುಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜೂನ್ 26ರಿಂದ ಜುಲೈ 2ರವರೆಗೆ ನಿರಂತರವಾಗಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

    ನಾನು ಅಜ್ಜನ ಬಳಿ ಹೋಗಲ್ಲ: ಈ ವಿಷಯ ತಿಳಿಯದ ಪೋಷಕರು ಮಗಳನ್ನು ಅಜ್ಜನ ಬಳಿ ಬಿಡಲು ಹೋಗುತ್ತಿದ್ದಾಗ ಬಾಲಕಿ ನಾನು ಅಜ್ಜನ ಬಳಿ ಹೋಗಲ್ಲ ಎಂದು ಹಠ ಹಿಡಿದಿದ್ದಾಳೆ. ಪೋಷಕರು ಮಗಳನ್ನ ವಿಚಾರಿಸಿದಾಗ ಬಾಲಕಿ ಎಲ್ಲ ವಿಷಯವನ್ನು ತಿಳಿಸಿದ್ದಾಳೆ. ಮಗಳ ಮಾತು ಕೇಳಿ ಗಾಬರಿಗೊಂಡು ಪೊಲೀಸರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ವೃದ್ಧನ ವಿರುದ್ಧ ದೂರು ದಾಖಲಿಸಿದ್ದಾರೆ.

    ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಮುದುಕನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದು, ತನಿಖೆ ಮುಂದುವರಿದಿದೆ.

  • ಬೆಂಗ್ಳೂರಿನಿಂದ ವಿಮಾನದಲ್ಲಿ ಕೊಯಮತ್ತೂರಿಗೆ ತೆರಳಿದ 6 ಮಂದಿಗೆ ಸೋಂಕು

    ಬೆಂಗ್ಳೂರಿನಿಂದ ವಿಮಾನದಲ್ಲಿ ಕೊಯಮತ್ತೂರಿಗೆ ತೆರಳಿದ 6 ಮಂದಿಗೆ ಸೋಂಕು

    ನವದೆಹಲಿ: ದೇಶದಲ್ಲಿ ದೇಶೀಯ ವಿಮಾನಯಾನ ಸೇವೆ ಪುನರಾರಂಭವಾದ ಬಳಿಕ ಕೋವಿಡ್-19 ಸೋಂಕಿಗೆ ತುತ್ತಾದ ಪ್ರಯಾಣಿಕರ ಸಂಖ್ಯೆ 23ಕ್ಕೇರಿದೆ.

    ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ 11 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿನಿಂದ ಕೊಯಮತ್ತೂರಿಗೆ ಮೇ 26 ರಂದು ಆಗಮಿಸಿದ್ದ ವಿಮಾನದಲ್ಲಿ ಆರು ಮಂದಿ, ದೆಹಲಿಯಿಂದ ಜಮ್ಮುವಿಗೆ ಮೇ 27 ರಂದು ಆಗಮಿಸಿದ್ದ ಮೂವರು, ದೆಹಲಿಯಿಂದ ಕೊಯಮತ್ತೂರಿಗೆ ಮೇ 27 ಮಂದಿಗೆ ಆಗಮಿಸಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿರುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದ ಮೂವರ ವರದಿಯಲ್ಲೂ ಕೊರೊನಾ ಪಾಸಿಟಿವ್ ಆಗಮಿಸಿತ್ತು. ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ವಿಮಾನಯಾನ ಸಂಸ್ಥೆ, ಎಲ್ಲಾ ಪ್ರಯಾಣಿಕರಿಗೂ ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಗ್ಲೌಸ್ ಧರಿಸಿಯೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಎಲ್ಲಾ ವಿಮಾನಗಳನ್ನು ಪ್ರಯಾಣಿಕರಿಗೆ ಸೇವೆ ನೀಡಿದ ಬಳಿಕ ತಪ್ಪದೇ ನಿರಂತರವಾಗಿ ಸ್ಯಾನಿಟೈಸ್ ಮಾಡಿ ಮರುಸೇವೆ ನೀಡಲಾಗುತ್ತಿದೆ. ಅಲ್ಲದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಗೆ 14 ದಿನಗಳ ಹೋ ಕ್ವಾರಂಟೈನ್ ಮಾಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಸರ್ಕಾರ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದಿದ್ದಾರೆ.

    ದೇಶೀಯ ವಿಮಾನಯಾನ ಆರಂಭವಾದ ಬಳಿಕ ಮೇ 26 ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿತ್ತು. ಇಂಡಿಗೋ ವಿಮಾನದಲ್ಲಿ ಚೆನ್ನೈನಿಂದ ಕೊಯಮತ್ತೂರಿಗೆ ಮೇ 25 ರಂದು ವ್ಯಕ್ತಿ ಪ್ರಯಾಣ ಮಾಡಿದ್ದ. ಆ ಬಳಿಕ ಮೇ 25 ರಂದು ದೆಹಲಿಯಿಂದ ಲೂದಿಯಾನಕ್ಕೆ ಅಲೈಯನ್ಸ್ ಏರ್ ವಿಮಾನ(91837)ದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಈ ಎರಡು ವಿಮಾನದಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಮೇ 27 ರಂದು ಸ್ಪೈಸ್ ಜೆಟ್ 8194 ವಿಮಾನದಲ್ಲಿ ಅಹಮಾಬಾದ್‍ನಿಂದ ದೆಹಲಿಗೆ ಹಾಗೂ ಮೇ 25 ರಂದು ಎಸ್‍ಜಿ 8152 ವಿಮಾನದಲ್ಲಿ ದೆಹಲಿಯಿಂದ ಗುವಾಹಟಿಗೆ ಪ್ರಯಾಣಿಸಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಇಂಡಿಗೋ 6ಇ 7214 ವಿಮಾನದಲಿ ಬೆಂಗಳೂರಿನಿಂದ ಮಧುರೈಗೆ ಆಗಮಿಸಿದ್ದ ರೋಗ ಲಕ್ಷಣಗಳು ಕಂಡುಬಾರದ ವ್ಯಕ್ತಿಯ ವರದಿ ಕೊರೊನಾ ಪಾಸಿಟಿವ್ ಆಗಮಿಸಿತ್ತು.

    ಟ್ರೂಜೆಟ್ ಏರ್ ಲೈನ್ಸ್ ವಿಮಾನದಲ್ಲಿ ಚೆನ್ನೈನಿಂದ ಸೇಲಂಗೆ ಮೇ 27 ರಂದು ಪ್ರಯಾಣಿಸಿದ್ದ 6 ಮಂದಿಗೂ ಕೊರೊನಾ ಕಂಡು ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಏರ್ ಪ್ಯಾಸೆಂಜರ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಿ ಸುಧಾಕರ ರೆಡ್ಡಿ, ಇದುವರೆಗೂ 23 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಎಲ್ಲಾ ಸುರಕ್ಷತಾ ವ್ಯವಸ್ಥೆ ಕೈಗೊಂಡ ಬಳಿಕವೂ ಪ್ರಕರಣಗಳು ಕಂಡು ಬಂದಿರುವುದು ದುರದೃಷ್ಟಕರ. ಇದು ನಮಗೆ ಮತ್ತೊಮ್ಮೆ ನಮ್ಮ ವ್ಯವಸ್ಥೆಯನ್ನು ಪುನರ್ ವಿಮರ್ಶೆ ಮಾಡಿ ಬದಲಾವಣೆ ತರುವ ಸಮಯ ಅನ್ನಿಸುತ್ತದೆ ಎಂದಿದ್ದಾರೆ.

    ಆರೋಗ್ಯ ಸೇತು ಮತ್ತು ಥರ್ಮಲ್ ಪರೀಕ್ಷೆಗಳು ಕೋವಿಡ್-19 ರೋಗಿಗಳನ್ನು ಗುರುತಿಸಲು ನಿರೀಕ್ಷಿತ ಸಹಕಾರಿ ಆಗಿಲ್ಲ ಎಂದು ಏರ್ ಇಂಡಿಯಾ ಮಾಜಿ ಕಾರ್ಯನಿರ್ವಾಹಕ ಜೀತಿಂದರ್ ಭಾರ್ಗವ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಮೊದಲ ನಾಲ್ಕು ದಿನಗಳ ಅವಧಿಯಲ್ಲಿ ಕಡಿಮೆ ಪ್ರಯಾಣಿಕರೊಂದಿಗೆ ವಿಮಾನಯಾನ ಆರಂಭವಾದರೂ ಕೋವಿಡ್ ಪ್ರಕರಣಗಳು ವರದಿಯಾಗಿರುವುದು ಮತ್ತಷ್ಟು ಪ್ರಯಾಣಿಕರು ವಿಮಾನ ಸಂಚಾರದಿಂದ ದೂರ ಉಳಿಯುವಂತೆ ಮಾಡಿದೆ. ಇದು ವಿಮಾನ ಪ್ರಯಾಣಿಕರ ಸಂಖ್ಯೆಯ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ. ಉಳಿದಂತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಗುರುವಾರ 50 ವಿಮಾನಗಳು 16 ನಗರಕ್ಕೆ ಸಂಚರಿಸಿದೆ. ಒಟ್ಟು 5,583 ಪ್ರಯಾಣಿಕರ ಪೈಕಿ 4,255 ಮಂದಿ ಪ್ರಯಾಣಿಸಿದ್ದಾರೆ.

  • ಮನೆಯಲ್ಲಿಟ್ಟಿದ್ದ 50 ಸಾವಿರ ರೂ. ಕಚ್ಚಿ ತಿಂದ ಇಲಿಗಳು: ರೈತ ಕಂಗಾಲು

    ಮನೆಯಲ್ಲಿಟ್ಟಿದ್ದ 50 ಸಾವಿರ ರೂ. ಕಚ್ಚಿ ತಿಂದ ಇಲಿಗಳು: ರೈತ ಕಂಗಾಲು

    ಚೆನ್ನೈ: ರೈತರೊಬ್ಬರು ಮನೆಯಲ್ಲಿಟ್ಟಿದ್ದ ಸುಮಾರು 50 ಸಾವಿರ ರೂ. ಹಣವನ್ನ ಇಲಿಗಳು ಕಚ್ಚಿ ತಿಂದು ಹಾನಿಗೊಳಿಸಿದ ಪರಿಣಾಮ ಅನ್ನದಾತ ಕಂಗಲಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ವೆಲಿಯಂಗಡು ಗ್ರಾಮದ ನಿವಾಸಿ, 56 ವರ್ಷದ ರಂಗರಾಜ್ ಕಂಗಾಲಾದ ರೈತ. ರಂಗರಾಜ್ ಅವರು ಬಾಳೆ ಬೆಳೆಗಾರರಾಗಿದ್ದು, ಉತ್ಪನ್ನದಿಂದ ಬಂದಿದ್ದ 500 ರೂ. ಹಾಗೂ 2,000 ರೂ. ಮುಖಬೆಲೆಯ 50,000 ರೂ. ಹಣವನ್ನು ಬ್ಯಾಗ್‍ನಲ್ಲಿ ಹಾಕಿ ಮನೆಯೊಳಗೆ ಇಟ್ಟಿದ್ದರು. ಆದರೆ ಇಲಿಗಳು ಹಣವನ್ನು ಕಚ್ಚಿ ತಿಂದು ಹಾಕಿವೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ರಂಗರಾಜ್ ಅವರು, ಜಮೀನಿನಲ್ಲಿ ಬೆಳೆದಿದ್ದ ಬಾಳೆ ಮಾರಿ ಹಣವನ್ನು ಪಡೆದಿದ್ದೆ. ಆದರೆ ಮನೆಯಲ್ಲಿ ಇಟ್ಟಿದ್ದಾಗ ಇಲಿಗಳು ಹಣವನ್ನು ಹಾನಿಮಾಡಿವೆ. ಹೀಗಾಗಿ ಸ್ಥಳೀಯ ಬ್ಯಾಂಕ್‍ಗಳಿಗೆ ಹೋಗಿ ಹಾನಿಯಾದ ನೋಟುಗಳನ್ನು ತೆಗೆದುಕೊಂಡು ಬೇರೆ ನೋಟುಗಳನ್ನು ಕೊಡುವಂತೆ ಮನವಿ ಮಾಡಿಕೊಂಡೆ. ಆದರೆ ಅವರು ಹಣ ಬದಲಾವಣೆಗೆ ನಿರಾರಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಈ ಸುದ್ದಿ ಬೆಳಕಿಗೆ ಬಂದ ಬೆನ್ನಲ್ಲೇ ಟ್ವಿಟ್ಟಿಗರೊಬ್ಬರು ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಟ್ವೀಟ್ ಮಾಡಿರುವ ರಿಷಿ ಬಾಗ್ರಿ ಅವರು, ದಯವಿಟ್ಟು ಈ ರೈತರ ಎಲ್ಲಾ ವಿವರವನ್ನು ನನಗೆ ಕಳುಹಿಸಿಕೊಡಿ. ನಾನು ಅವರಿಗೆ ಸಹಾಯ ಮಾಡಲು ಬಯದುತ್ತೇನೆ ಎಂದು ತಿಳಿಸಿದ್ದಾರೆ.

  • ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಪ್ಲಾಸ್ಟಿಕ್ ಜಾಗೃತಿ, ಗಿನ್ನಿಸ್ ದಾಖಲೆಗಾಗಿ ಜಗತ್ತಿನ ಅತಿ ದೊಡ್ಡ ಸೆಣಬಿನ ಚೀಲ ಹೊಲಿದ ಅಂಧರು

    ಚೆನ್ನೈ: ಗಿನ್ನಿಸ್ ದಾಖಲೆ ನಿರ್ಮಿಸಿ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ 9 ಜನ ಅಂಧರು ಕೇವಲ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲ’ವನ್ನು ಹೊಲಿಯುವ ಮೂಲಕ ಗಮನ ಸೆಳೆದಿದ್ದಾರೆ.

    ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ 9 ಅಂಧ ವಿದ್ಯಾರ್ಥಿಗಳು ಶುಕ್ರವಾರ ಈ ಚೀಲವನ್ನು ಹೊಲಿದಿದ್ದು, ಇವರಿಗೆ ತೃತೀಯಲಿಂಗಿಗಳ ಸಮುದಾಯದ ಸದಸ್ಯರು ಹಾಗೂ ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ದಾಖಲೆ ನಿರ್ಮಿಸಲು ಸಹಾಯ ಮಾಡಿದ್ದಾರೆ.

    ಈ ಕಾರ್ಯವನ್ನು ಸಂಘಟಿಸಿದ ಯುವ ಪ್ರತಿಷ್ಠಾನದ ಅಧ್ಯಕ್ಷೆ ಶಶಿಕಲಾ ಈ ಕುರಿತು ಮಾಹಿತಿ ನೀಡಿ, ಯುವ ಪ್ರತಿಷ್ಠಾನದ 9 ಜನ ಅಂಧರು ಹ್ಯಾಂಡಲ್ ಇಲ್ಲದೆ, ಕೇವಲ ಕೈಗಳಿಂದ 5 ಗಂಟೆಗಳಲ್ಲಿ 66 ಅಡಿ ಎತ್ತರ ಹಾಗೂ 33 ಅಡಿ ಅಗಲದ ‘ವಿಶ್ವದ ಅತಿ ದೊಡ್ಡ ಸೆಣಬಿನ ಚೀಲವನ್ನು’ ಹೊಲಿಯುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಿಸಲು ಹಾಗೂ ಇದಕ್ಕೆ ಪರ್ಯಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹೀಗಾಗಿ ಸೆಣಬಿನ ಚೀಲವನ್ನು ಹೊಲಿಯಲಾಗಿದೆ ಎಂದು ತಿಳಿಸಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ ನಂತರ, ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಸದಂತೆ ಕರೆ ನೀಡಿದ ಭಾಷಣದ ಅಂಶವನ್ನು ಶಶಿಕಲಾ ಉಲ್ಲೇಖಿಸಿದ್ದಾರೆ. ಅಲ್ಲದೆ, ನಾವು ಪ್ಲಾಸ್ಟಿಕ್ ವಿರುದ್ಧ ಹೋರಾಟ ಪ್ರಾರಂಭಿಸಬೇಕಿದೆ. ಹೀಗಾಗಿ ಸೆಣಬಿನ ಚೀಲವನ್ನು ಈ ಅಂಧರು ಹೊಲಿದಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ವಿಕಲಚೇತನರೂ ಸಹ ತಮ್ಮದೇ ಆದ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರಿಗೆ ವಿಶ್ವಾಸ ಹಾಗೂ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂಬುದನ್ನು ಸಾಬೀತು ಪಡಿಸುವುದು ಸಹ ಈ ಪ್ರಯತ್ನದ ಉದ್ದೇಶವಾಗಿದೆ ಎಂದರು.

  • ಓರ್ವ ವಿದ್ಯಾರ್ಥಿಗಾಗಿ ಪುನರಾರಂಭವಾಯ್ತು 76 ವರ್ಷದ ಹಳೆಯ ಶಾಲೆ

    ಓರ್ವ ವಿದ್ಯಾರ್ಥಿಗಾಗಿ ಪುನರಾರಂಭವಾಯ್ತು 76 ವರ್ಷದ ಹಳೆಯ ಶಾಲೆ

    ಕೊಯಂಬತ್ತೂರು: ಹತ್ತಾರು ವಿದ್ಯಾರ್ಥಿಗಳಿದ್ದರು ಅದೆಷ್ಟೋ ಶಾಲೆಗಳನ್ನು ಸರ್ಕಾರ ಮುಚ್ಚಿವೆ. ಆದರೆ ತಮಿಳುನಾಡಿದ ವಾಲ್‍ಪರೈನಲ್ಲಿರುವ ಚಿನ್ನಕಲ್ಲರ್ ನ 76 ವರ್ಷದ ಹಳೆದ ಶಾಲೆವೊಂದನ್ನು ಕೇವಲ ಒಂದೇ ಒಂದು ವಿದ್ಯಾರ್ಥಿಗಾಗಿ ಪುನರಾರಂಭಿಸಲಾಗಿದೆ.

    ಹೌದು. ಹತ್ತಾರು ಮಕ್ಕಳಿದ್ದರು ಮುಚ್ಚುವ ಈಗಿನ ಕಾಲದ ಶಾಲೆಗಳ ಮಧ್ಯೆ ಕೇವಲ ಒಂದು ವಿದ್ಯಾರ್ಥಿ ಶಾಲೆಯೊಂದು ಪುನರಾರಂಭವಾಗುವುದು ಎಲ್ಲೆಡೆ ಭಾರಿ ಸುದ್ದಿಯಾಗಿದೆ. 2017-18ರ ಶೈಕ್ಷಣಿಕ ವರ್ಷದಲ್ಲಿ ಒಂದು ಹುಡುಗಿಗೆ ಶಿಕ್ಷಣ ನೀಡಿದ ಬಳಿಕ ಈ ಶಾಲೆಗೆ ಮಕ್ಕಳು ದಾಖಲಾತಿ ಆಗದ ಕಾರಣಕ್ಕೆ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಈ ವರ್ಷ ಗ್ರಾಮದ ಟೀ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ರಾಜೇಶ್ವರಿ ಅವರು ತನ್ನ ಮಗನನ್ನು ಈ ವರ್ಷ ಶಾಲೆಗೆ ಸೇರಿಸಿದ್ದಾರೆ. ಶಿವ(6) ಓರ್ವನಿಗಾಗಿ ಈ ಶಾಲೆ ಸಿಬ್ಬಂದಿಗಳು ಮತ್ತೆ ಶಾಲೆ ಬಾಗಿಲು ತೆರೆದಿದ್ದಾರೆ.

    ಮನೆಯಿಂದ ನಾಲ್ಕು ಕಿ.ಮೀ ದೂರವಿರುವ ಪರಿಯಕಲ್ಲರ್ ಶಾಲೆಗೆ ಮಗನನ್ನು ಕಳುಹಿಸಲು ಕಷ್ಟವಾಗುತ್ತದೆ ಎಂದು ಮಹಿಳೆ ತಮ್ಮ ಮನೆಗೆ ಹತ್ತಿರವಿರುವ ಚಿನ್ನಕಲ್ಲರ್ ಶಾಲೆಯನ್ನು ಮತ್ತೆ ತನ್ನ ಮಗನಿಗಾಗಿ ತೆರೆಯುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ತಾಯಿಯ ಮನವಿಗೆ ಮಣಿದ ಶಿಕ್ಷಣ ಅಧಿಕಾರಿಗಳು, ಓರ್ವ ವಿದ್ಯಾರ್ಥಿಗಾಗಿ ಶಾಲೆಯನ್ನು ಮತ್ತೆ ಆರಂಭಿಸಿದ್ದಾರೆ.

    ಸದ್ಯ ಸೋಮವಾರದಂದು ಶಿವ 1ನೇ ತರಗತಿಗೆ ದಾಖಲಾತಿ ಪಡೆದಿದ್ದಾನೆ. ಮಗುವಿಗೆ ಅಗತ್ಯ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿಂದೆ ಇಲಾಖೆ ಶಾಲೆಯನ್ನು ಪುನರಾರಂಭಿಸಲು ವಿಶೇಷ ಪ್ರಯತ್ನಗಳನ್ನೂ ಮಾಡಿತ್ತು. ಆದರೆ ಶೂನ್ಯ ದಾಖಲಾತಿಯ ಕಾರಣ ಕಳೆದ ವರ್ಷ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಬೇರೊಂದು ಶಾಲೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ಪೆರಿಯಕಲ್ಲರ್ ಶಾಲೆ ಮುಖ್ಯ ಶಿಕ್ಷಕ ಶಕ್ತಿವೇಲ್ ಹೇಳಿದ್ದಾರೆ.

    1943ರಲ್ಲಿ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು ಹಾಗೂ ಸ್ಥಳೀಯ ಮಕ್ಕಳಿಗೆ ಶಿಕ್ಷಣ ನೀಡಲು ಈ ಶಾಲೆ ಆರಂಭಿಸಲಾಗಿತ್ತು. ಆಗ ಈ ಸ್ಥಳದಲ್ಲಿ 300ಕ್ಕೂ ಅಧಿಕ ಕಾರ್ಮಿಕರ ಕುಟುಂಬಗಳು ವಾಸವಾಗಿದ್ದವು. ಆದ್ದರಿಂದ 70 ವರ್ಷಗಳ ಕಾಲ ಶಾಲೆ ಸರಿಯಾಗಿ ನಡೆದಿತ್ತು. ಅಲ್ಲದೆ ಪ್ರತಿ ವರ್ಷ 50ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಆದರೆ ಕೆಲ ವರ್ಷಗಳಿಂದ ಕೂಲಿ ಕಾರ್ಮಿಕರು ವಲಸೆ ಹೋಗಲು ಆರಂಭಿಸಿದ ಬಳಿಕ ಶಾಲೆ ತನ್ನ ಅಸ್ತಿತ್ವ ಕಳೆದುಕೊಂಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

    ದಟ್ಟ ಅರಣ್ಯದಿಂದ ಕೂಡಿರುವ ಚಿನ್ನಕಲ್ಲರ್ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. 2017-18ರಲ್ಲಿ ದಾಖಲಾಗಿದ್ದ ಓರ್ವ ವಿದ್ಯಾರ್ಥಿನಿಗಾಗಿ ಅಧ್ಯಾಪಕ ಹಾಗೂ ಮುಖ್ಯ ಶಿಕ್ಷಕರನ್ನು ನೇಮಿಸಲಾಗಿತ್ತು. ಆ ಬಳಿಕ ಶಾಲೆಯ ಸುತ್ತಾಮುತ್ತಾ ಆನೆಗಳ ಹಾವಳಿ ಹೆಚ್ಚಾಗುತ್ತಿದಂತೆ ಮಕ್ಕಳು ಶಾಲೆಯತ್ತ ಬರಲು ಹೆದರಿದರು. ಶಾಲೆಯ ಗಾಜು, ಬಾಗಿಲುಗಳೂ ಆನೆ ದಾಳಿಗೆ ಹಾನಿಯಾಗಿದ್ದವು. ಅಲ್ಲದೆ ಪ್ರದೇಶದಲ್ಲಿ ಆನೆ ಸೇರಿ ಇನ್ನಿತರ ಪ್ರಾಣಿಗಳು ಇಲ್ಲಿ ವಾಸವಾಗಿದ್ದ ಜನರ ಮೇಲೆ ದಾಳಿ ಮಾಡುವ ಪ್ರಕರಣ ಹೆಚ್ಚಾಗುತ್ತಿದ್ದಂತೆ ಜನರು ಇಲ್ಲಿಂದ ವಲಸೆ ಹೋಗಲು ಶುರುಮಾಡಿದರು. ಹೀಗಾಗಿ ಸದ್ಯ ಈ ಪ್ರದೇಶದಲ್ಲಿ ಕೇವಲ 15 ಕುಟುಂಬಗಳು ಮಾತ್ರ ವಾಸವಾಗಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟರು.

    ಬಳಿಕ ಮಾತನಾಡುತ್ತ, ಇತ್ತೀಚಿಗೆ ಇಲ್ಲಿ ಆನೆ ದಾಳಿ ನಡೆಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಗ್ರಾಮಸ್ಥರಲ್ಲಿ ಇನ್ನೂ ಕಾಡು ಪ್ರಾಣಿಗಳ ಭಯ ಇದೆ. ಅಲ್ಲದೆ ಶಿವನನ್ನು ಪೆರಿಯಕಲ್ಲರ್ ಶಾಲೆಗೆ ಕಳಿಸುವ ಬಗ್ಗೆ ತಾಯಿಯ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಅವರು ಒಪ್ಪಿದರೆ ಈ ಶಾಲೆ ಮತ್ತೆ ಮುಚ್ಚಲಿದೆ ಎಂದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ದಾಳಿ ಮಾಡಿದ್ದು ನಿಜ, ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲ್ಸವಲ್ಲ: ಏರ್ ಚೀಫ್ ಮಾರ್ಷಲ್

    ದಾಳಿ ಮಾಡಿದ್ದು ನಿಜ, ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲ್ಸವಲ್ಲ: ಏರ್ ಚೀಫ್ ಮಾರ್ಷಲ್

    ಕೊಯಮತ್ತೂರು: ಬಾಲಕೋಟ್ ಮೇಲಿನ ಏರ್ ಸ್ಟ್ರೈಕ್ ನಡೆಸಿದ ಬಗ್ಗೆ ಎದ್ದ ಪ್ರಶ್ನೆಗಳಿಗೆ ವಾಯುಸೇವೆ ಮುಖ್ಯಸ್ಥ ಬಿ.ಎಸ್ ಧನೋವಾ ಕೊಯಮತ್ತೂರಲ್ಲಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.

    ಏರ್ ಸ್ಟ್ರೈಕ್ ನಡೆದ ಬಳಿಕ ಎಷ್ಟು ಉಗ್ರರು ಹತ್ಯೆಯಾಗಿದ್ದಾರೆ ಸಾಕ್ಷ್ಯ ನೀಡಿ ಎಂದಿದ್ದ ಪ್ರತಿಪಕ್ಷಗಳಿಗೆ ಉತ್ತರ ಎನ್ನುವಂತೆ ಬಿ. ಎಸ್ ಧನೋವಾ ಅವರು, ನೀಡಿದ್ದ ಗುರಿಗಳನ್ನು ವಾಯುಸೇನೆ ಹೊಡೆದು ಹಾಕಿದ್ದು ನಿಜ. ಆದರೆ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಕಾಡಿನಲ್ಲಿ ಬಾಂಬ್ ಹಾಕುವ ಅಗತ್ಯ ನಮಗೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

    ನಮಗೆ ಏನು ಗುರಿ ನೀಡಲಾಗಿತ್ತೋ ಆ ಗುರಿಯನ್ನು ಹೊಡೆದಿದ್ದೇವೆ. ಅರಣ್ಯದಲ್ಲಿ ಬಾಂಬ್ ಹಾಕಿದ್ದರೆ ಪಾಕಿಸ್ತಾನ ಯಾಕೆ ನಮ್ಮ ಮೇಲೆ ದಾಳಿ ನಡೆಸಬೇಕಿತ್ತು. ಅವರ ಪ್ರಧಾನಿ ಏಕೆ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಪ್ರಶ್ನಿಸಿದರು.

    ನೀಡಿದ್ದ ಗುರಿ ಸರಿಯಾಗಿ ದಾಳಿ ಮಾಡಿದ್ದೇವಾ ಇಲ್ಲವೋ ಎನ್ನುವುದು ಮಾತ್ರ ನಮ್ಮ ಕೆಲಸ. ಅದನ್ನು ಹೊರತು ಪಡಿಸಿ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಆ ಕೆಲಸ ಏನಿದ್ದರೂ ಸರ್ಕಾರ ಮಾಡುತ್ತದೆ ಎಂದರು.

    ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆ ಮಾತನಾಡಿ, ಅಭಿನಂದನ್ ಅವರ ಆರೋಗ್ಯ ಸ್ಥಿತಿ ನೋಡಿ ಅವರು ಮತ್ತೆ ಕೆಲಸಕ್ಕೆ ಹಾಜರಾಗಬಹುದಾ ಇಲ್ಲವಾ ಎಂಬುದು ತಿಳಿಯಲಿದೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ ಅವರು ಪೈಲಟ್ ಆಗಿ ಮುಂದುವರಿಯಬಹುದು ಎಂದು ಹೇಳಿದರು.

    ನಾವು ದಾಳಿಗೆ ಸಿದ್ಧರಾದಾಗ ಯಾವ ವಿಮಾನ ಬೇಕು ಯಾವುದು ಬೇಡ ಎನ್ನುವುದನ್ನು ಪ್ಲಾನ್ ಮಾಡುತ್ತೇವೆ. ಶತ್ರುಗಳು ನಮ್ಮ ಮೇಲೆ ಬಂದಾಗ ಯಾವ ವಿಮಾನವನ್ನು ಕಳುಹಿಸಬೇಕು ಎನ್ನುವುದನ್ನು ನಾವು ಪ್ಲಾನ್ ಮಾಡಲು ಸಾಧ್ಯವಿಲ್ಲ. ನಮ್ಮ ಬಳಿ ಇರುವ ಎಲ್ಲ ವಿಮಾನಗಳು ಶತ್ರುಗಳನ್ನು ನಾಶ ಮಾಡುವ ಸಾಮಥ್ರ್ಯವನ್ನು ಹೊಂದಿದೆ ಎಂದರು.

    ನಮ್ಮ ಮಿಗ್-21 ಜೆಟ್ ಯುದ್ಧ ವಿಮಾನ ಸಮರ್ಥವಾಗಿದೆ. ಮಿಗ್-21 ಅದ್ಭುತವಾದ ಏರ್‍ಕ್ರಾಫ್ಟ್. ಈ ಯುದ್ಧ ವಿಮಾನವನ್ನು ಅಪ್‍ಗ್ರೇಡ್ ಮಾಡಲಾಗಿದೆ. ಈ ವಿಮಾನದಲ್ಲಿ ಅದ್ಭುತವಾದ ರಡಾರ್ ಇದೆ ಹಾಗೂ ಏರ್ ಟು ಏರ್ ಮಿಸೈಲ್ ವೆಪನ್ ಸಿಸ್ಟಮ್ ಇದೆ ಎಂದು ತಿಳಿಸಿದ್ದಾರೆ.

    ಪ್ರಸ್ತುತ ಗಡಿಯಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉತ್ತರಿಸಿದರು.

    ನಮ್ಮ ವಿರುದ್ಧ ಮಾಡಿದ ದಾಳಿ ವೇಳೆ ಅವರು ಎಫ್ 16 ವಿಮಾನವನ್ನು ಬಳಸಿದ್ದಾರೆ. ಯಾಕೆಂದರೆ ಎಫ್ 16 ನಲ್ಲಿ ಬಳಸುವ ಎಎಂಆರ್‍ಎಎಎಂ ಕ್ಷಿಪಣಿ ನಮ್ಮ ಭೂ ಪ್ರದೇಶದಲ್ಲಿ ಬಿದ್ದಿದೆ. ಅವರ ಎಫ್ 16 ವಿಮಾನವನ್ನು ನಾವು ಹೊಡೆದು ಹಾಕಿದ್ದೇವೆ ಎಂದು ತಿಳಿಸಿದರು.

    ಅಮೆರಿಕ ಮತ್ತು ಪಾಕಿಸ್ತಾನ ಮಧ್ಯೆ ಯಾವ ರೀತಿಯ ಒಪ್ಪಂದ ನಡೆದಿದೆ ಎನ್ನುವುದು ಗೊತ್ತಿಲ್ಲ. ಬೇರೆ ದೇಶದ ವಿರುದ್ಧದ ಎಫ್ 16 ಬಳಕೆ ಮಾಡಬಾರದು ಎನ್ನುವ ಒಪ್ಪಂದ ಇದ್ದರೆ ಪಾಕಿಸ್ತಾನ ಉಲ್ಲಂಘನೆ ಮಾಡಿದೆ ಎಂದು ಹೇಳಬಹುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv