Tag: Coffee estate

  • ಕಾಫಿ ತೋಟದ ಸೊಬಗಿಗೆ ಮಾರುಹೋದ ಬ್ಯಾಡ್ಮಿಂಟರ್ ತಾರೆ – ಪಿವಿ ಸಿಂಧುಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವಾಸೆ!

    ಕಾಫಿ ತೋಟದ ಸೊಬಗಿಗೆ ಮಾರುಹೋದ ಬ್ಯಾಡ್ಮಿಂಟರ್ ತಾರೆ – ಪಿವಿ ಸಿಂಧುಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವಾಸೆ!

    ಮಡಿಕೇರಿ: ಖ್ಯಾತ ಬ್ಯಾಡ್ಮಿಂಟರ್ ತಾರೆ (Badminton Player) ಪಿ.ವಿ.ಸಿಂಧು (PV Sindhu) ಇತ್ತೀಚೆಗೆ ಕರ್ನಾಟಕದ ಕಾಶ್ಮೀರ ಎಂದೇ ಕರೆಯುವ ಕೊಡಗಿಗೆ (Kodagu) ಭೇಟಿ ನೀಡಿದ್ದರು. ಈ ಬಳಿಕ ನನಗೆ ಕಾಫಿ ತೋಟ ಖರೀದಿಸುವ ಆಸೆ ಇದೆ ಎಂದು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

    ಹೌದು, ಇಂಥ ಆಸೆಗೆ ಕಾರಣವಾದದ್ದು ಇತ್ತೀಚಿಗೆ ಕೊಡಗಿಗೆ ಭೇಟಿ ನೀಡಿ ಇಲ್ಲಿನ ಕಾಫಿ ತೋಟದ ನಡುವೆ ಕೆಲವು ದಿನಗಳು ಕಾಲಕಳೆದ ನಂತರವಂತೆ. ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ತನ್ನ ಮೂಲ ರಾಜ್ಯವಾದ ತೆಲಂಗಾಣದಿಂದ (Telangana) ಕೊಡಗಿಗೆ ಪತಿ ಹಾಗೂ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಅಲ್ಲಿನ ಕಾಫಿ ತೋಟದ ನಡುವೆ ಕೆಲ ದಿನಗಳನ್ನು ಕಳೆದಿದ್ದರು. ಇದನ್ನೂ ಓದಿ: ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

    ಈ ಬಗ್ಗೆ ಎಕ್ಸ್‌ನಲ್ಲಿ ಸಂತೋಷ ಹಂಚಿಕೊಂಡಿರುವ ಸಿಂಧು, ಕನಸಿನಲ್ಲಿರುವಂತೆ ಕಂಗೊಳಿಸುತ್ತಿರುವ ಕಾಫಿ ತೋಟವೊಂದರಲ್ಲಿ ನಾನು ಕಾಫಿ ಸಿಪ್ ಮಾಡುತ್ತಿದ್ದೆ. ಮರಗಳಿಂದ ಸುತ್ತುವರಿದ, ಪಕ್ಷಿಗಳಿಂದ ಕೂಡಿರುವ ಈ ತೋಟ ನಿಜಕ್ಕೂ ಸುಂದರವಾಗಿದೆ. 14 ವನ್ಯಜೀವಿಗಳು, 800 ತಳಿಯ ಪಕ್ಷಿಗಳನ್ನೂ, ವಿವಿಧ ಜಾತಿಯ ಪುಷ್ಪ, ಸಸ್ಯಗಳು ಈ ತೋಟದಲ್ಲಿವೆ. ನನ್ನ ಪತಿ ದತ್ತ ಕೂಡಾ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಚಿಂತನೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ತಾನು ಯಾವ ತೋಟಕ್ಕೆ, ಯಾವ ಊರಿಗೆ ಬಂದಿದ್ದೇನೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಐತಿಹಾಸಿಕ ಕ್ಷಣ; ಯುನೆಸ್ಕೋದ ʻಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ʼಗೆ ಭಗವದ್ಗೀತೆ, ನಾಟ್ಯಶಾಸ್ತ್ರ ಸೇರ್ಪಡೆ

    ವಿಶ್ವ ಚಾಂಪಿಯನ್‌ಶಿಪ್, ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಿಂಧು, ಬ್ಯಾಡ್ಮಿಂಟನ್‌ನಲ್ಲಿ ವರ್ಲ್ಡ್ ರ‍್ಯಾಂಕಿಂಗ್ 2 ಸ್ಥಾನದಲ್ಲಿದ್ದಾರೆ. ಹೆಸರಾಂತ ಉದ್ಯಮಿ ವೆಂಕಟದತ್ತ ಸಾಯಿ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ವಿವಾಹವಾಗಿರುವ ಸಿಂಧು, ವಿಶ್ರಾಂತಿ ಬಯಸಿ ಪತಿಯೊಂದಿಗೆ ಕೊಡಗಿಗೆ ಬಂದಿದ್ದರು.

  • ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕಾರ್ಮಿಕರು ಸಾವು

    ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕಾರ್ಮಿಕರು ಸಾವು

    ಚಿಕ್ಕಮಗಳೂರು: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕಾರ್ಮಿಕರು ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸದ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿ ಗ್ರಾಮದಲ್ಲಿ ಶನಿವಾರ ನಡೆದಿದೆ.

    ತಮಿಳುನಾಡು ಮೂಲದ ಜ್ಯೋತಿ (28), ಮಾದಮ್ಮ(65), ಮಾರಿ (27) ಮೃತ ತೋಟದ ಕಾರ್ಮಿಕರು. ಮಾದಮ್ಮ ಹಾಗೂ ಜ್ಯೋತಿ ತಾಯಿ ಮಗಳಾಗಿದ್ದು, ಮಾರಿ ಸಂಬಂಧಿ ಎಂದು ತಿಳಿದು ಬಂದಿದೆ.

    ತಮಿಳುನಾಡಿನ ಸೇಲಂ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ತಾಲೂಕಿನ 14 ಕಾರ್ಮಿಕರು ಕಳೆದ ಕೆಲ ತಿಂಗಳ ಹಿಂದೆ ಜಿಲ್ಲೆಯ ಕಾಫಿತೋಟದಲ್ಲಿ ಕಾಫಿ ಕಟಾವು ಕೆಲಸಕ್ಕೆಂದು ವಲಸೆ ಬಂದಿದ್ದರು. ಕಳಸ ಪಟ್ಟಣದ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿ ಗಜೇಂದ್ರ ಅವರ ಕಾಫಿ ತೋಟದಲ್ಲಿ ಕೆಲ ತಿಂಗಳುಗಳಿಂದ ಕೆಲಸ ಮಾಡಿಕೊಂಡಿದ್ದ ಈ ಕಾರ್ಮಿಕರು ಲಾಕ್‍ಡೌನ್‍ನಿಂದ ತಮ್ಮ ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ತೋಟದ ಕೂಲಿ ಲೈನ್ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

    ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರ ಸಂಜೆ ಗುಡುಗು, ಸಿಡಿಲು, ಗಾಳಿ ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಹಿತ್ಲುಮಕ್ಕಿ ಗ್ರಾಮದ ಲೈನ್ ಮನೆಗಳ ಮುಂದೆ ನಿಂತಿದ್ದ ಮೂವರು ಮಹಿಳೆರಿಗೆ ಸಿಡಿಲು ಬಡಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕಾಳಿಂಗ ಸರ್ಪಕ್ಕೆ ಹಾವಾಡಿಗನ ಮೇಲೆ ಸಿಟ್ಟು

    ಕಾಳಿಂಗ ಸರ್ಪಕ್ಕೆ ಹಾವಾಡಿಗನ ಮೇಲೆ ಸಿಟ್ಟು

    ಚಿಕ್ಕಮಗಳೂರು: ಸೆರೆ ಸಿಕ್ಕ ಕಾಳಿಂಗ ಸರ್ಪ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಿಂತ ಹಾವಾಡಿಗನ ಮೇಲೆ ದಾಳಿ ಮಾಡಲು ಮುಂದಾಗಿ ಹತ್ತಾರು ಬಾರಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆಗೆ ಕಾಫಿನಾಡು ಸಾಕ್ಷಿಯಾಗಿದೆ.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಾಳುಕರಗುಂದ ಗ್ರಾಮದ ಜಾರ್ಜ್ ಎಂಬವರ ಕಾಫಿತೋಟದಲ್ಲಿ ಮೊಲ ಅಟ್ಟಿಸಿಕೊಂಡು ಬಂದ ಕಾಳಿಂಗ ಸರ್ಪ ಕಾಫಿತೋಟದಲ್ಲಿ ಬೀಡು ಬಿಟ್ಟಿದೆ. ಇದನ್ನು ನೋಡಿದ ಕೂಲಿ ಕಾರ್ಮಿಕರು ಭಯಗೊಂಡು ತೋಟದ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ತೋಟದ ಮಾಲೀಕ ಎನ್.ಆರ್.ಪುರದ ಉರಗ ತಜ್ಞ ಹರೀಂದ್ರ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕೆ ಬಂದ ಹರೀಂದ್ರ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಕಾಳಿಂಗ ಸರ್ಪವನ್ನು ಸೆರೆಹಿಡಿಯಲು ಯತ್ನಸಿದ್ದಾರೆ. ಆದರೆ ಕಾಳಿಂಗ ಸರ್ಪ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕಿಂತ ಹಾವಾಡಿಗ ರವೀಂದ್ರ ಮೇಲೆ ದಾಳಿಗೆ ಮುಂದಾಗಿದ್ದೇ ಹೆಚ್ಚು. ರವೀಂದ್ರ ಸೆರೆ ಹಿಡಿಯಲು ಬಾಲ ಹಿಡಿದು ಎಳೆಯುತ್ತಿದ್ದಂತೆ ಹತ್ತಾರು ಬಾರಿ ಅವರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿತು. ಆ ದೃಶ್ಯ ಮಾತ್ರ ನೋಡುಗರಿಗೆ ಎದೆ ಝಲ್ ಎನ್ನಿಸುವಂತ್ತಿತ್ತು.

    ಒಂದು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಸೆರೆಹಿಡಿದ 14 ಅಡಿ ಉದ್ದ ಹೆಣ್ಣು ಕಾಳಿಂಗ ಸರ್ಪವನ್ನು ಹರಿಂದ್ರ ಅವರುವ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಸೆರೆ ಹಿಡಿಯುವಾಗ ಕಾಳಿಂಗ ಸರ್ಪದ ಆರ್ಭಟ ಕಂಡ ತೋಟದ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ದುರಂತ ಸಂಭವಿಸಿ 10 ದಿನಗಳಾದರು ಸಂತ್ರಸ್ತರ ಕೇಂದ್ರದಲ್ಲೇ ಇರುವ ಸಾವಿರಾರು ನಿವಾಸಿಗಳು

    ದುರಂತ ಸಂಭವಿಸಿ 10 ದಿನಗಳಾದರು ಸಂತ್ರಸ್ತರ ಕೇಂದ್ರದಲ್ಲೇ ಇರುವ ಸಾವಿರಾರು ನಿವಾಸಿಗಳು

    ಮಂಗಳೂರು: ಕೊಡಗಿನ ಜೋಡುಪಾಲ, ಮದೆನಾಡಿನಲ್ಲಿ ದುರಂತ ಎದುರಾಗಿ ಹತ್ತು ದಿನ ಕಳೆದಿವೆ. ಆದರೂ ಅಲ್ಲಿನ ಮೂರು ಗ್ರಾಮಗಳ ಸಾವಿರಾರು ನಿವಾಸಿಗಳು ಇನ್ನು ಕಲ್ಲುಗುಂಡಿ, ಸಂಪಾಜೆಯಲ್ಲಿರುವ ಕೇಂದ್ರದಲ್ಲೇ ತಂಗಿದ್ದಾರೆ.

    ಈ ನಡುವೆ ತಮ್ಮ ತಮ್ಮ ಮನೆಗಳನ್ನು ನೋಡಿ ಹೋಗಲು ಬರುವ ಬಹುತೇಕ ನಿವಾಸಿಗಳು ಅಲ್ಲಿಂದ ಸಾಮಾಗ್ರಿಗಳನ್ನು ಹೊತ್ತು ಒಯ್ಯುತ್ತಿದ್ದಾರೆ. ಕೆಲವು ಮನೆಗಳಿಗೆ ಹಾನಿ ಆಗದಿದ್ದರೂ, ಇಲ್ಲಿ ಮತ್ತೆ ಮಳೆಯಾಗಿ ಭೂಕುಸಿತವಾದರೆ ಅಪಾಯ ಅನ್ನುವ ಭಾವನೆ ನಿವಾಸಿಗಳಲ್ಲಿದೆ. ಹೀಗಾಗಿ ಸರ್ಕಾರದಿಂದ ಸೂಕ್ತ ಜಾಗದಲ್ಲಿ ಪುನರ್ವಸತಿ ಮಾಡಿಕೊಟ್ಟರೆ ತಮ್ಮ ಮನೆಗಳನ್ನು ಬಿಟ್ಟು ಅಲ್ಲಿಗೆ ತೆರಳಲು ರೆಡಿಯಾಗಿದ್ದಾರೆ. ಅದಕ್ಕಾಗಿ ಸ್ವಯಂಸೇವಕರ ಜೊತೆಗೆ ಮನೆಗೆ ತೆರಳಿ, ಅಗತ್ಯ ವಸ್ತುಗಳನ್ನು ಮೂಟೆ ಕಟ್ಟಿ ಸಂತ್ರಸ್ತರ ಕೇಂದ್ರಕ್ಕೆ ಹೊತ್ತು ತರುತ್ತಿದ್ದಾರೆ.

    ಇತ್ತೀಚೆಗೆ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ತಜ್ಞರು ಸ್ಥಳ ಪರಿಶೀಲಿಸಿದ ಸಂದರ್ಭದಲ್ಲಿ ಜೋಡುಪಾಲ, ಮದೆನಾಡು, ಮಣ್ಣಂಗೇರಿ ಪ್ರದೇಶಗಳು ವಾಸಕ್ಕೆ ಯೋಗ್ಯವಲ್ಲ ಎಂದಿದ್ದರು. ಹೀಗಾಗಿ ದುರಂತದ ಭಯ ಸಂತ್ರಸ್ತರಲ್ಲಿ ಆವರಿಸಿದ್ದು, ಮತ್ತೆ ಬೆಟ್ಟಗಳ ಮಧ್ಯೆ ವಾಸ ಇರುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

    ಇನ್ನೊಂದೆಡೆ ಘಟ್ಟಗಳ ವ್ಯಾಪ್ತಿಯಲ್ಲಿ ಈಗಾಗಲೇ ಬಿರುಕು ಬಿಟ್ಟು ನಿಂತಿರುವ ಕಾರಣ, ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಮಾನವ ವಾಸ ತಕ್ಕುದಾಗಿಲ್ಲವಾದರೆ, ಬಡವರಿಗೆ ಪ್ರತ್ಯೇಕ ವಸತಿ ನಿರ್ಮಿಸಿ, ಅಲ್ಲಿರುವ ಕಾಫಿ ಎಸ್ಟೇಟ್‍ಗಳನ್ನು ವಶಕ್ಕೆ ತೆಗೆದುಕೊಳ್ಳುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 12 ಅಡಿ ಉದ್ದವಿರೋ ಬೃಹತ್ ಕಾಳಿಂಗ ಸರ್ಪ ಸೆರೆ

    12 ಅಡಿ ಉದ್ದವಿರೋ ಬೃಹತ್ ಕಾಳಿಂಗ ಸರ್ಪ ಸೆರೆ

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕು, ಕಳಸಾದ ಮರಕೋಡು ಗ್ರಾಮದ ಕಾಫಿ ಎಸ್ಟೇಟ್ ವೊಂದರಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅದನ್ನು ಸೆರೆ ಹಿಡಿದಿದ್ದಾರೆ.

    ಅರುಣ್ ಎಂಬವರ ಕಾಫಿ ಎಸ್ಟೇಟ್ ನಲ್ಲಿ ಬೀಡುಬಿಟ್ಟಿದ್ದ ಕಾಳಿಂಗ ಸರ್ಪ, ಕಳೆದ 3 ದಿನಗಳಿಂದಲೂ ಒಂದೇ ಜಾಗದಲ್ಲಿತ್ತು. ಹಾಗಾಗಿ ಅದನ್ನು ಸೆರೆ ಹಿಡಿಯಲು ಉರಗತಜ್ಞ ಅರ್ಜುನ್ ಅವರಿಗೆ ಮಾಹಿತಿ ರವಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಅವರು, ಕಾಳಿಂಗವನ್ನು ಸೆರೆ ಹಿಡಿದು ಕೆರೆಕಟ್ಟೆ ಅರಣ್ಯಕ್ಕೆ ಬಿಟ್ಟರು.

    ಈ ಕಾಳಿಂಗ ಸರ್ಪ ಸುಮಾರು 12 ಅಡಿ ಉದ್ದವಿದೆ ಎಂದು ಹೇಳಲಾಗಿದೆ.

  • ಕಾಡಾನೆ ದಾಳಿಯಿಂದ ಪಾರಾದ ತೋಟದ ಮಾಲೀಕ

    ಕಾಡಾನೆ ದಾಳಿಯಿಂದ ಪಾರಾದ ತೋಟದ ಮಾಲೀಕ

    ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದ ಕಾಫಿತೋಟದಲ್ಲಿ ಆನೆ ದಾಳಿಯಿಂದ ತೋಟದ ಮಾಲೀಕರೊಬ್ಬರು ಗಾಯಗೊಂಡಿದ್ದಾರೆ.

    ಎಂ.ಡಿ.ಯೋಗೇಶ್ ಆನೆ ದಾಳಿಯಿಂದ ಗಾಯಗೊಂಡ ಕಾಫಿ ತೋಟದ ಮಾಲೀಕ. ಕಾಫಿತೋಟದಲ್ಲಿ ಕೆಲಸ ಮಾಡುವಾಗ ಏಕಾಏಕಿ ಆನೆಗಳು ಯೋಗೇಶ್ ಮೇಲೆ ದಾಳಿ ಮಾಡಿವೆ. ಆನೆ ದಾಳಿಯಿಂದ ಸಣ್ಣ-ಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಫಿತೋಟದಲ್ಲಿಯೇ ಆನೆಗಳು ಬೀಡು ಬಿಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಂತಕಕ್ಕೊಳಗಾಗಿದ್ದಾರೆ.

    ಅಲ್ಲದೇ ಮಂಗಳವಾರದಂದೂ ಸಹ ಹಳೆಕೆರೆ ಗ್ರಾಮದ ಮಲ್ಲಿಗೆ ಎಸ್ಟೇಟ್ ನಲ್ಲಿ 4 ಮರಿಯಾನೆಗಳು ಸೇರಿದಂತೆ 20 ಕಾಡಾನೆಗಳು ಬೀಡು ಬಿಟ್ಟು, ಓರ್ವ ವ್ಯಕ್ತಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದವು.

  • ಕಾಫಿ ಎಸ್ಟೇಟ್‍ನಲ್ಲಿ ಬಾಲಕಿ ಅನುಮಾನಾಸ್ಪದ ಸಾವು

    ಚಿಕ್ಕಮಗಳೂರು: ಕಾಫಿ ಎಸ್ಟೇಟ್‍ನಲ್ಲಿ 13 ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದಲ್ಲಿ ನಡೆದಿದೆ.

    ವನಜಾಕ್ಷಿ (13) ಮೃತಪಟ್ಟ ಬಾಲಕಿ. ಕಳಸ ಸಮೀಪದ ಅಲಂದೂರು ಎಸ್ಟೇಟ್‍ನಲ್ಲಿ ಕಾಫಿ ಗಿಡಗಳಿಗೆ ಔಷಧಿ ಸಿಂಪಡಿಸುವ ವೇಳೆ ಸಾವನ್ನಪ್ಪಲಾಗಿದೆ ಎಂದು ತಿಳಿದು ಬಂದಿದೆ. ಬಾಲಕಿ ವನಜಾಕ್ಷಿ ಚಿತ್ರದುರ್ಗ ಮೂಲದವಳಾಗಿದ್ದು, ಸ್ಥಳೀಯರ ಜೊತೆ ಕಾಫಿ ಎಸ್ಟೇಟ್‍ಗೆ ಕೆಲಸಕ್ಕೆ ಬಂದಿದ್ದಳು.

    ಸ್ಥಳೀಯರು ಎಸ್ಟೇಟ್ ಮಾಲೀಕ ವೆಂಕಟೇಶ್ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿದ್ದಾರೆ. ಬಾಲಕಿಯ ಪಾಲಕರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಬಾಲಕಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಬಾಲಕಿಯ ಶವವನ್ನು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.