Tag: coffee day

  • ಸಿನಿಮಾವಾಗಲಿದೆ ಕಾಫಿ ಡೇ ಸಂಸ್ಥಾಪಕ, ಕಾಫಿ ಕಿಂಗ್ ಸಿದ್ಧಾರ್ಥ್ ಬಯೋಪಿಕ್

    ಸಿನಿಮಾವಾಗಲಿದೆ ಕಾಫಿ ಡೇ ಸಂಸ್ಥಾಪಕ, ಕಾಫಿ ಕಿಂಗ್ ಸಿದ್ಧಾರ್ಥ್ ಬಯೋಪಿಕ್

    ಕಾಫಿ ಉದ್ಯಮದಿಂದಲೇ ಹೆಚ್ಚು ಫೇಮಸ್ ಆಗಿದ್ದ, ಪ್ರತಿ ವರ್ಷವೂ 160 ಕೋಟಿ ಕಪ್ ಕಾಫಿ ಮಾರುತ್ತಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ, ಕಾಫಿ ಕಿಂಗ್ ಎಂದೇ ಫೇಮಸ್ ಆಗಿದ್ದ ವಿ.ಜಿ ಸಿದ್ಧಾರ್ಥ್ ಅವರ ಬಯೋಪಿಕ್ ಸದ್ಯದಲ್ಲೇ ಸೆಟ್ಟೇರಲಿದೆ. ಕಾಫಿ ಉದ್ಯಮಕ್ಕೆ ಒಂದು ಘನತೆ ತಂದುಕೊಟ್ಟು, ರಾಷ್ಟ್ರೀಯ ಹೆದ್ದಾರಿ 66ನೇ ಮಂಗಳೂರು ನಗರದಿಂದ ಉಳ್ಳಾಲ ಕಡೆಗೆ ಹೋಗುವ ಮಾರ್ಗದಲ್ಲಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿ, ಆನಂತರ ಶವವಾಗಿ ಸಿಕ್ಕ ಸಿದ್ಧಾರ್ಥ ಅವರ ಬದುಕು ಮತ್ತು ಸಾವಿನ ನಿಗೂಢತೆ ಹೀಗೆ ಎಲ್ಲ ವಿಷಯವನ್ನು ಇದು ಒಳಗೊಂಡಿರಲಿದೆ.

    ಸಿದ್ದಾರ್ಥ ಅವರ ಜೀವನವೇ ರೋಚಕ. ತಮ್ಮ 24ನೇ ವಯಸ್ಸಿನಲ್ಲೇ ಮುಂಬೈನಲ್ಲಿ ಪೋರ್ಟ್ಪೊಲಿಯೋ ಮ್ಯಾನೇಜ್ ಮೆಂಟ್ ತರಬೇತಿ ಪಡೆದರು. ನಂತರ ತಂದೆಯ ಸಹಾಯ ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿದರು. ಟ್ರೆಡಿಂಗ್, ಮ್ಯೂಚುಯಲ್ ಫಂಡ್ಸ್, ರಿಯಲ್ ಎಸ್ಟೇಟ್, ಸ್ಟಾರ್ಟ್ ಅಪ್ ಕಂಪೆನಿ, ಹೀಗೆ ಒಂದೊಂದೆ ಉದ್ಯಮ ಆರಂಭಿಸಿದರು. ಎಲ್ಲದರಲ್ಲೂ ಗೆಲುವು ಕಂಡರು.

    1993ರಲ್ಲಿ ಕಾಫಿ ಉದ್ಯಮಕ್ಕೆ ಕಾಲಿಟ್ಟ ಸಿದ್ಧಾರ್ಥ ಅವರು, ಮೊದ ಮೊದಲು ಕಾಫಿ ಬೀಜಗಳ ವ್ಯಾಪಾರ ಮತ್ತು ರಫ್ತು ಆರಂಭಿಸಿದರು. ಕಾಫಿ ಕ್ಯೂರಿಂಗ್ ಘಟಕವನ್ನೂ ಶುರು ಮಾಡಿದರು. 1948ರಲ್ಲಿ ಹ್ಯಾಮ್ ಬರ್ಗ್ ನ ಚಿಬೊದಲ್ಲಿ ಚಿಕ್ಕದೊಂದು ಮಳಿಗೆಯಲ್ಲಿ ಕಾಫಿ ಉದ್ಯಮ ಪ್ರಾರಂಭ ಮಾಡಿ, 1996ರಲ್ಲಿ ಕಾಫಿ ಡೇ ಶುರು ಮಾಡಿದರು. ಕೇವಲ ಐದೇ ಐದು ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕೆಫೆ ಕಾಡಿ ಡೇ ಸ್ಥಾಪಿಸಿ ಕಾಫಿ ಕಿಂಗ್ ಆದರು. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ನಂತರ ಹಲವು ಹಗರಣಗಳಲ್ಲಿ ಇವರ ಹೆಸರು ಕೇಳಿ ಬಂತು, ಅವುಗಳೇ ಇವರನ್ನು ಹೈರಾಣು ಮಾಡಿದವು. ಇವೆಲ್ಲವನ್ನೂ ಒಳಗೊಂಡಂತೆ ರುಕ್ಮಿನಿ ರಾವ್ ಮತ್ತು ದತ್ತ ಎನ್ನುವವರು ಜಂಟಿಯಾಗಿ ಸಿದ್ಧಾರ್ಥ ಕುರಿತು ಪುಸ್ತಕವೊಂದನ್ನು ಬರೆದಿದ್ದಾರೆ. ಆ ಪುಸ್ತಕವನ್ನು ಆಧರಿಸಿ ಟಿ ಸೀರಿಸ್ ಫಿಲ್ಮ್ಸ್ ಮತ್ತು ಕರ್ಮ ಮೀಡಿಯಾ ಎಂಟರ್ ಟ್ಮೇನೆಂಟ್ ಜಂಟಿಯಾಗಿ ಇವರ ಬಯೋಪಿಕ್ ಅನ್ನು ತೆರೆಗೆ ತರಲು ಹೊರಟಿದ್ದಾರೆ. ಸದ್ಯ ಸಿನಿಮಾ ಮಾಡಲು ಹಕ್ಕುಗಳನ್ನು ಪಡೆದಿದ್ದಾರೆ. ಸಿದ್ಧಾರ್ಥ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv

  • ರಾಜೀನಾಮೆ ನೀಡಲು ಸಿದ್ಧಾರ್ಥ್ ಅಣ್ಣನೇ ಗೈಡ್ ಮಾಡಿದ್ದು: ಅಣ್ಣಾಮಲೈ

    ರಾಜೀನಾಮೆ ನೀಡಲು ಸಿದ್ಧಾರ್ಥ್ ಅಣ್ಣನೇ ಗೈಡ್ ಮಾಡಿದ್ದು: ಅಣ್ಣಾಮಲೈ

    ಚಿಕ್ಕಮಗಳೂರು: ಹತ್ತು ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆಮೇಲೆ ಡಿಐಜಿ, ಐಜಿ ಆಗಿ ಎಸಿ ರೂಮಲ್ಲಿ ಕೂತು ಕೆಲಸ ಮಾಡುಲು ಆಸಕ್ತಿ ಇಲ್ಲ ಎಂದಾಗ, ಸಿದ್ಧಾರ್ಥ್ ಅಣ್ಣಾ ಮಾತ್ರ ಧೈರ್ಯವಾಗಿ ಹೇಳಿದ್ದು, ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು. ನನ್ನ ರಾಜೀನಾಮೆಯನ್ನ ನಾವಿಬ್ಬರೂ ಸೇರಿ ಡಿಸೈಡ್ ಮಾಡಿದ್ದು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕಾಫಿ ಡೇ ಮಾಲೀಕ ದಿ.ಸಿದ್ಧಾರ್ಥ್ ಹೆಗ್ಡೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಾಣದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ನಾನು ಸಿದ್ಧಾರ್ಥ್ ಹೆಗ್ಡೆ ಅವರ ಕೆಫೆ ಡೇ ಚೇಂಬರ್ ರೂಂನಲ್ಲಿ ಕೂತು ಮೂರೂವರೆ ಗಂಟೆ ಮಾತನಾಡಿದ್ದೆವು ಎಂದು ತಿಳಿಸಿದರು.

    ಎರಡು ಜನ ಕಾರ್ ಡೋರ್ ಓಪನ್ ಮಾಡಿ ಬಿಡುತ್ತಾರೆ. ನಾಲ್ಕು ಜನ ಸೆಲ್ಯೂಟ್ ಮಾಡುತ್ತಾರೆ. ನನಗೆ ಅದರಿಂದ ಸಂತೋಷವಿಲ್ಲ. ಕೃಷಿ ಮಾಡಬೇಕು, ಊರಿಗೆ ಹೋಗಬೇಕು. ಸಾಧಾರಣ ಮನುಷ್ಯನಂತೆ ಬದುಕಬೇಕು ಹಾಗೂ ಸಾಮಾನ್ಯ ಮನುಷ್ಯನ ಜೀವನವನ್ನ ಬದಲಾವಣೆ ಮಾಡಬೇಕೆಂಬ ಆಸೆ ಸರ್ ಎಂದು ಅವರಿಗೆ ಹೇಳಿದ್ದೆ. ಆಗ ಅವರು, ಧೈರ್ಯವಾಗಿ ಹೇಳಿದ್ದರು. ರಾಜೀನಾಮೆ ಕೊಡಿ ನಾನಿದ್ದೇನೆ ಎಂದಿದ್ದರು ಎಂದು ಸಿದ್ಧಾರ್ಥ್ ಹೆಗ್ಡೆಯವರನ್ನ ನೆನಪಿಸಿಕೊಂಡರು.

    ಯಾವ ಡೇಟ್‍ನಲ್ಲಿ ಪೇಪರ್ ಟೈಪ್ ಮಾಡಬೇಕು ಎಂದು ನಾವಿಬ್ಬರು ಡಿಸೈಡ್ ಮಾಡಿದ್ದೆವು. ರಾಜೀನಾಮೆ ಕೊಟ್ಟ ಬಳಿಕ ಬಾಂಬೆಯಿಂದ ಫೋನ್ ಮಾಡಿದ್ದರು. ಬಹಳ ಕಷ್ಟದ ಕೆಲಸ ಯಾರೂ ಮಾಡಲ್ಲ. ಜನ ನಿಮಗೆ ಮೂರ್ಖ ಎನ್ನಬಹುದು, ಫೂಲ್ ಎನ್ನಬಹುದು. ಆದರೆ ನನಗೆ ನಿಮ್ಮ ಉದ್ದೇಶ ಏನೆಂದು ಗೊತ್ತು ಎಂದಿದ್ದರು. ನಾನು ಏನು ಮಾಡಿದರು ಅವರು ಮೇಲಿಂದ ನೋಡುತ್ತಿದ್ದಾರೆ, ಅವರು ಯಾವಾಗಲು ನನ್ನೊಂದಿಗೆ ಇರುತ್ತಾರೆ. ನನಗೆ ಗೈಡ್ ಮಾಡಿದ್ದರು, ಮುಂದೆಯೂ ಅವರು ನನ್ನೊಂದಿಗೆ ನಿಂತು ಗೈಡ್ ಮಾಡುತ್ತಿರುತ್ತಾರೆ ಎಂದರು.

  • ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಚಿಕ್ಕಮಗಳೂರಲ್ಲಿ ಅನಾವರಣ

    ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಚಿಕ್ಕಮಗಳೂರಲ್ಲಿ ಅನಾವರಣ

    ಚಿಕ್ಕಮಗಳೂರು : ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆಗೆ ಶರಣಾದಾಗ ಇಡೀ ರಾಜ್ಯ ಕಂಬನಿ ಮಿಡಿದಿತ್ತು. ವಿಷಯ ಕೇಳಿ ಬೆಳೆಗಾರರಿಗೆ ಹಾಗೂ ಉದ್ಯಮಕ್ಕೆ ಸಿಡಿಲು ಬಡಿದಂತಾಗಿತ್ತು. ದೇಶದ ಕಾಫಿಗೆ ಅಂತರಾಷ್ಟ್ರಿಯ ಮಟ್ಟದ ಖ್ಯಾತಿ ತಂದಿದ್ದು ಸಿದ್ಧಾರ್ಥ್ ಹೆಗ್ಡೆ. ಲಕ್ಷಾಂತರ ಜನರಿಗೆ ಅನ್ನದಾತರಾಗಿದ್ದ ಅವರ ಅಗಲಿಕೆಯನ್ನ ಇಂದಿಗೂ ಜನಸಾಮಾನ್ಯರಿಗೆ ಅರಗಿಸಿಕೊಳ್ಳಲಾಗ್ತಿಲ್ಲ. ಕಾಫಿಯ ದರ ಏರಿಳಿತ ಕಂಡಾಗ ಸಿದ್ಧಾರ್ಥ್ ಹೆಗ್ಡೆ ಇರಬೇಕಿತ್ತು ಅನ್ನೋರು ಇಂದಿಗೂ ಸಾವಿರಾರು ಜನ. ವಿಧಿಲಿಖಿತ ಅವರಿಂದು ನಮ್ಮೊಂದಿಗಿಲ್ಲ. ಆದ್ರೆ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ರು ಮಾನಸಿಕವಾಗಿ ಪ್ರತಿಯೊಬ್ಬ ಕೂಲಿ ಕಾರ್ಮಿಕನ ಹೃದಯದಲ್ಲೂ ಚಿರಸ್ಥಾಯಿ. ಹಾಗಾಗಿಯೇ ಅವರ ನೆನಪಿಗಾಗಿ ವಿಶ್ವದ ಮೊದಲ ಜಿ.ವಿ.ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಕಾಫಿನಾಡಲ್ಲಿ ಅನಾವರಣಗೊಂಡಿದೆ.

    ಬದುಕಿದ್ದಾಗಲೇ ಸತ್ತಿರೋ ಕೊಟ್ಯಾಂತರ ಜನರ ಮಧ್ಯೆ, ಸತ್ತ ಮೇಲೂ ಬದುಕಿರೋರಲ್ಲಿ ಸಿದ್ಧಾರ್ಥ್ ಹೆಗ್ಡೆ ಕೂಡ ಒಬ್ರು. ಅವರ ಸರಳತೆ ಬೆರಗಾಗದವರೇ ಇಲ್ಲ. ಕಾಫಿಯ ಬಗ್ಗೆ ಅವರಿಗಿದ್ದ ಜ್ಞಾನ. ಕೊಡುತ್ತಿದ್ದ ಸಲಹೆಗಳನ್ನ ಕಾಫಿನಾಡಿನ ಜನ ಇಂದಿಗೂ ಮರೆತಿಲ್ಲ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಸಿಗೋಡು ಹಾಗೂ ದೇವಗೋಡು ಗ್ರಾಮಸ್ಥರು ತಮ್ಮೂರಿನ ಸರ್ಕಲ್ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಎಂದು ನಾಮಫಲಕ ನೆಟ್ಟು ನಾಮಕರಣ ಮಾಡಿಕೊಂಡಿದ್ದಾರೆ. ಸಿದ್ಧಾರ್ಥ್ ಹೆಗ್ಡೆ ಎಂದೇ ನಾಮಕರಣಗೊಂಡ ದೇಶದ ಮೊದಲ ವೃತ್ತ ಇದು. ಅವರಿಂದ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉಪಯೋಗವಾಗಿದೆ. ಅವರ ಮೇಲಿನ ಅಭಿಮಾನ, ಗೌರವಕ್ಕೆ ಕೊನೆ ಇಲ್ಲ. ಹಾಗಾಗಿ ಅವರ ಹೆಸರು ಶಾಶ್ವತವಾಗಿರಲೆಂದು ನಮ್ಮೂರಿನ ಸರ್ಕಲ್‍ಗೆ ಅವರ ಹೆಸರಿಟ್ಟಿದ್ದೇವೆ ಎಂದು ಕಾಫಿ ಬೆಳೆಗಾರರು ಹೇಳುತ್ತಾ ಭಾವುಕರಾಗುತ್ತಾರೆ. ಇದನ್ನೂ ಓದಿ:  ಯೋಧನಾಗುವ ಆಸೆ ಕಂಡಿದ್ದ ಸಿದ್ಧಾರ್ಥ್ ಕಾಫಿ ಕಿಂಗ್ ಆದ ಕಹಾನಿ

    ಪ್ರಿಯದರ್ಶಿನಿ ಎಸ್ಟೇಟ್ ಅಚ್ಚುಮೆಚ್ಚು : ಪ್ರಿಯದರ್ಶಿನಿ ಎಸ್ಟೇಟ್ ಅಂದ್ರೆ ಸಿದ್ಧಾರ್ಥ್ ಹೆಗ್ಡೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಯಾಕಂದ್ರೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೇತನಹಳ್ಳಿಯಲ್ಲಿದ್ದ ಅವರ ಸ್ವಂತ ತೋಟ ಬಿಟ್ಟು ಅವರೇ ಖರೀದಿಸಿದ ಮೊದಲ ತೋಟ ಅಂದ್ರೆ ಬಾಳೆಹೊನ್ನೂರು ಬಳಿಯ ಪ್ರಿಯದರ್ಶಿನಿ ಎಸ್ಟೇಟ್. ಅವರಿಗೆ ಈ ತೋಟದ ಮೇಲೆ ಒಲವು ಜಾಸ್ತಿ. ಇಲ್ಲಿ ತೋಟ ಮಾಡಿದಾಗ ಸ್ಥಳೀಯರ ಜೊತೆ ಸಾಮಾನ್ಯನಂತೆ ಬೆರೆಯುತ್ತಿದ್ದರು. ಸ್ಥಳೀಯ ನೂರಾರು ಜನರಿಗೆ ಕೆಲಸ ಕೊಟ್ಟಿದ್ದರು. ಕೂಲಿ ಜೊತೆ ಕೂಲಿಯಾಗೇ ಮಾತನಾಡುತ್ತಿದ್ದರು. ಸರಳತೆಗೆ ಮತ್ತೊಂದು ಹೆಸರೇ ಸಿದ್ಧಾರ್ಥ್ ಹೆಗ್ಡೆ. ಅವರಿಂದ ನಮಗೆ ಸಾಕಷ್ಟು ಸಹಾಯವಾಗಿದೆ. ಹಾಗಾಗಿ, ಅವರ ಋಣ ತೀರಿಸಲು ನಮ್ಮೂರಿನ ಸರ್ಕಲ್‍ಗೆ ಅವರ ಹೆಸರಿಟ್ಟಿದ್ದೇವೆ ಅನ್ನೋದು ಸ್ಥಳೀಯರ ಮಾತು. ಇದನ್ನೂ ಓದಿ: ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ

     

    ಸಹ್ಯಾದ್ರಿ ಬೆಳೆಗಾರರ ಸಂಘದ ಅಧ್ಯಕ್ಷ ರಂಗನಾಥ್ ನಾಮಫಲಕವನ್ನ ಅನಾವರಣಗೊಳಿಸಿದರು. ಉಪಾಧ್ಯಕ್ಷ ಕೆ.ಟಿ.ವೆಂಕಟೇಶ್ ಸ್ವಾಗತಿಸಿದರು. ಸಂಘದ ಕಾರ್ಯಕಾರಿಣಿ ನಿರ್ದೇಶಕ ಸಂತೋಷ್ ಅರೆನೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸೀಗೋಡು-ದೇವಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಕಾಫಿ ಬೆಳೆಗಾರರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ

  • ಚನ್ನಪಟ್ಟಣದ ಮುದುಗೆರೆಯಲ್ಲಿದೆ ಸಿದ್ಧಾರ್ಥರ ಅಚ್ಚುಮೆಚ್ಚಿನ ಕಾಫಿ ಡೇ

    ಚನ್ನಪಟ್ಟಣದ ಮುದುಗೆರೆಯಲ್ಲಿದೆ ಸಿದ್ಧಾರ್ಥರ ಅಚ್ಚುಮೆಚ್ಚಿನ ಕಾಫಿ ಡೇ

    ರಾಮನಗರ: ಖ್ಯಾತ ಉದ್ಯಮಿ ಹಾಗೂ ಮಾಜಿ ಸಿಎಂ ಎಸ್.ಎಂ ಕೃಷ್ಣರವರ ಅಳಿಯ ಸಿದ್ದಾರ್ಥ್ ಉಳ್ಳಾಲದ ನೇತ್ರಾವತಿ ನದಿಯ ಬ್ರಿಡ್ಜ್ ಬಳಿ ನಾಪತ್ತೆಯಾಗಿದ್ದು, ಅವರ ಒಡೆತನದ ಕಾಫಿ ಡೇಗಳ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ. ನಾಪತ್ತೆಯಾಗಿರುವ ಉದ್ಯಮಿ ಸಿದ್ಧಾರ್ಥರ ಅಚ್ಚುಮೆಚ್ಚಿನ ಕಾಫಿ ಡೇಗಳಲ್ಲಿ ಚನ್ನಪಟ್ಟಣ ತಾಲೂಕಿನ ಮುದುಗೆರೆ ಸಮೀಪದಲ್ಲಿನ ಕಾಫಿ ಡೇ ಕೂಡ ಒಂದಾಗಿತ್ತು.

    ಕಾಫಿ ಡೇ ಆರಂಭವಾದಾಗಿನಿಂದ ಇಂದಿನ ತನಕ ಸಾಕಷ್ಟು ಬಾರಿ ಉದ್ಯಮಿ ಸಿದ್ಧಾರ್ಥ್ ಅವರು ಈ ಕಾಫಿ ಡೇಗೆ ಭೇಟಿ ನೀಡಿದ್ದಾರೆ. ಅಲ್ಲದೇ ಬೆಂಗಳೂರಿನಿಂದ ಮೈಸೂರು ಇಲ್ಲವೇ ಮೈಸೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವ ವೇಳೆ ಈ ಕಾಫಿ ಡೇಗೆ ಭೇಟಿ ನೀಡಿ ಕೆಲ ಕಾಲ ಸಮಯ ಕಳೆಯುತ್ತಿದ್ದರು.

    ಇತ್ತೀಚೆಗೆ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರ ಸೋದರ ಎಸ್.ಎಂಶಂಕರ್ ನಿಧನದ ಹಾಗೂ ಅವರ ಪುಣ್ಯತಿಥಿಯ ದಿನ ಕೂಡ ಈ ಕಾಫಿ ಡೇಗೆ ಭೇಟಿ ನೀಡಿ ಕಾಫಿ ಕುಡಿದು ಕಾಫಿ ಡೇ ಸಿಬ್ಬಂದಿಯನ್ನು ಆತ್ಮೀಯವಾಗಿ ಮಾತನಾಡಿಸಿದ್ದರು.

    ತಮ್ಮ ಕುಟುಂಬದ ಜೊತೆ ಹೊರಗೆ ಹೋಗುವ ವೇಳೆಯೂ ಕೂಡ ತಪ್ಪದೇ ಈ ಕಾಫಿ ಡೇಗೆ ಭೇಟಿ ನೀಡುತ್ತಿದ್ದರು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಜೊತೆಗೆ ನಾಪತ್ತೆಯಾಗಿರುವ ತಮ್ಮ ಯಜಮಾನ ಸೇಫ್ ಆಗಿ ಬರಲಿ ಎಂದು ಹಾರೈಸುತ್ತಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾಗಿ ಸುಮಾರು 21 ಗಂಟೆಯಾದರೂ ಇನ್ನೂ ಪತ್ತೆಯಾಗಿಲ್ಲ. ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ಅನೇಕರು ಹುಡುಕಾಟ ಮಾಡುತ್ತಿದ್ದಾರೆ.

  • ಉದ್ಯಮಿ ಸಿದ್ಧಾರ್ಥ್ ನಾಪತ್ತೆ – ಸೇತುವೆಯಿಂದ ಹಾರಿದ್ದನ್ನು ಕಂಡ ಪ್ರತ್ಯಕ್ಷದರ್ಶಿ ಹೇಳಿದ್ದೇನು?

    ಉದ್ಯಮಿ ಸಿದ್ಧಾರ್ಥ್ ನಾಪತ್ತೆ – ಸೇತುವೆಯಿಂದ ಹಾರಿದ್ದನ್ನು ಕಂಡ ಪ್ರತ್ಯಕ್ಷದರ್ಶಿ ಹೇಳಿದ್ದೇನು?

    ಮಂಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನದ ಬೆನ್ನಲ್ಲೇ ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ಹೇಳಿಕೆ ಈಗ ಮಹತ್ವ ಪಡೆದುಕೊಂಡಿದೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸ್ಥಳೀಯ ವ್ಯಕ್ತಿ ಸೈಮನ್ ತಾವು ನೋಡಿದ ದೃಶ್ಯಗಳ ಬಗ್ಗೆ ವಿವರಿಸಿದ್ದಾರೆ.

    ಸೈಮನ್ ಹೇಳಿದ್ದೇನು?
    ಸೋಮವಾರ ಸಂಜೆ 5.30ರ ವೇಳೆಗೆ ನಾನು ನದಿ ಬಳಿ ಮೀನು ಹಿಡಿಯಲು ಹೋಗಿದ್ದೆ. ರಾತ್ರಿ 7.30ರ ವೇಳೆಗೆ ಸೇತುವೆ ಬಳಿ ಶಬ್ದ ಕೇಳಿ ಬಂತು. ತಕ್ಷಣ ನೋಡಿದ ಕೂಡಲೇ ವ್ಯಕ್ತಿಯೊಬ್ಬರು ನದಿಗೆ ಹಾರಿದ್ದು, ಅಲ್ಲಿಂದ ಸ್ವಲ್ಪ ದೂರ ಸಾಗಿದ್ದು ಕಂಡು ಬಂತು. ನಾನು 6ನೇ ಪಿಲ್ಲರ್ ಬಳಿ ಇದ್ದೆ, ಅವರು 8ನೇ ಪಿಲ್ಲರ್ ಬಳಿ ಹಾರಿದ್ದರು.

    ಕೂಡಲೇ ಅವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದೆ. ಒಬ್ಬನೇ ಇದ್ದ ಕಾರಣ ನನಗೆ ಅವರು ಸಿಗಲಿಲ್ಲ. ಆದ್ದರಿಂದ ನನ್ನ ಪ್ರಯತ್ನ ವಿಫಲವಾಯಿತು. ಮೋಟರ್ ಇಲ್ಲದ ದೋಣಿಯಲ್ಲಿ ತೆರಳಿದ್ದೆ. ಬೇಗ ಹೋಗುವ ಪ್ರಯತ್ನ ಸಾಧ್ಯವಾಗಲಿಲ್ಲ. ಅವರು ಯಾವ ರೀತಿ ಇದ್ದರು, ಯಾವ ಬಟ್ಟೆ ಧರಿಸಿದ್ದರು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಹಿಂದೆ ಇಂತಹದ್ದೆ ಸಂದರ್ಭದಲ್ಲಿ 6 ಮಂದಿಯನ್ನ ರಕ್ಷಣೆ ಮಾಡಿದ್ದೆ. ನಮಗೂ ಜೀವದ ಕುರಿತು ಆಸೆ ಇರುವುದರಿಂದ ನದಿಗೆ ಹಾರದೇ ದೋಣಿ ಮೂಲಕವೇ ಸಾಗುತ್ತೇವೆ. ಏಕೆಂದರೆ ನೀರಿನ ರಭಸ ಹೆಚ್ಚಾಗಿರುತ್ತದೆ.

    ಇದಕ್ಕೂ ಮುನ್ನ ಸಾಕಷ್ಟು ಮಂದಿ ಇಲ್ಲಿಯೇ ಬಂದು ಹಾರಿದ್ದರು. ಆದ್ದರಿಂದ ನಾನು ಸ್ಥಳೀಯವಾಗಿ ಮಾಹಿತಿ ನೀಡಿದ್ದೆ ಅಷ್ಟೇ. ಮಳೆ ಪ್ರಮಾಣ ಕಡಿಮೆ ಇರುವುದರಿಂದ ದೇಹ ಸಿಗುವ ಸಾಧ್ಯತೆ ಇದೆ. ಯಾವುದೇ ಮೃತ ದೇಹವಾದರೂ 24 ಗಂಟೆ ಬಳಿಕ ನೀರಿನಿಂದ ಮೇಲೆ ಬರುತ್ತದೆ. ಸಮುದ್ರಕ್ಕೆ ಕೊಚ್ಚಿ ಹೋಗುವ ಸಾಧ್ಯತೆ ಕಡಿಮೆ ಇದ್ದು, ನದಿಯಲ್ಲೇ ಸಿಗುವ ವಿಶ್ವಾಸ ಇದೆ. ಈ ಬಗ್ಗೆ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲರ ನಿರೀಕ್ಷೆ ಒಂದೇ ಇದೆ ಎಂದರು.

    https://www.youtube.com/watch?v=S8AvtIh5VB8

  • ಚಿಕ್ಕಮಗ್ಳೂರಲ್ಲೇ 50 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ನೀಡಿದ್ದರು ಸಿದ್ಧಾರ್ಥ್

    ಚಿಕ್ಕಮಗ್ಳೂರಲ್ಲೇ 50 ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ನೀಡಿದ್ದರು ಸಿದ್ಧಾರ್ಥ್

    ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ, ಉದ್ಯಮಿ ಸಿದ್ದಾರ್ಥ್ ನಾಪತ್ತೆಯಾಗಿ ಸುಮಾರು 15-16 ಗಂಟೆಯಾದ್ರೂ ಇನ್ನೂ ಯಾವುದೇ ಸುಳಿಯೂ ಪತ್ತೆಯಾಗಿಲ್ಲ. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪೊಲೀಸರು, ಅಗ್ನಿಶಾಮಕ ದಳದವರು ಸತತವಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

    ಸಿದ್ಧಾರ್ಥ್ ಅವರು ಒಬ್ಬ ಆಗರ್ಭ ಶ್ರಿಮಂತರಾಗಿದ್ದು, ಸಾವಿರಾರು ಜನರಿಗೆ ಕೆಲಸ ಕೊಟ್ಟಿದ್ದರು. ಸಿದ್ಧಾರ್ಥ್ ಅವರು ಚಿಕ್ಕಮಗಳೂರಿನಲ್ಲಿ ಅಂದಾಜು 25 ಸಾವಿರಕ್ಕೂ ಅಧಿಕ ಕಾಫಿ ಎಸ್ಟೇಟ್ ಮಾಲೀಕರಾಗಿದ್ದಾರೆ. ಜೊತೆಗೆ ಐಷಾರಾಮಿ ಸೆರಾಯ್ ಹೊಟೇಲ್ ಮಾಲೀಕರು ಆಗಿದ್ದಾರೆ. ಅಷ್ಟೇ ಅಲ್ಲದೆ ಅಂಬರ್ ವ್ಯಾಲಿ ರೆಸಿಡೆನ್ಸಿಯಲ್ ಸ್ಕೂಲ್ ಮಾಲೀಕರಾಗಿದ್ದಾರೆ.

    ಎಬಿಸಿ ಕಾಫಿ ಕ್ಯೂರಿಂಗ್ ಮಾಲೀಕರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಅಂದಾಜು 50 ಸಾವಿರಕ್ಕೂ ಅಧಿಕ ಜನರಿಗೆ ಕೆಲಸ ಕೊಟ್ಟಿದ್ದಾರೆ. ನೋಡಲು ತುಂಬಾ ಸರಳವಾಗಿರುತ್ತಿದ್ದ ಸಿದ್ದಾರ್ಥ್ ಅವರ ಸರಳ ಜೀವನ ಶೈಲಿ ಎಲ್ಲರನ್ನೂ ಬೆರಗುಗೊಳಿಸುತ್ತಿತ್ತು. ಕೋಟಿಗಳ ಒಡೆಯರಾಗಿದ್ದರು. ಸಿದ್ಧಾರ್ಥ್ ಅವರು ತುಂಬಾ ಸರಳವಾಗಿರುತ್ತಿದ್ದರು. ಹಣವಿದೆ ಎಂದು ದರ್ಪ ತೋರುತ್ತಿರಲಿಲ್ಲ.

    ತಮ್ಮ ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ್ ಅವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಎಬಿಸಿ ಕಾಫಿ ಕ್ಯೂರಿಂಗ್ ಕಂಪನಿಯನ್ನು ಬಂದ್ ಮಾಡಲಾಗಿದೆ. ಪ್ರತಿ ದಿನದಂತೆ ಸಿಬ್ಬಂದಿ ಇಂದು ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಕಂಪನಿಯನ್ನು ಬಂದ್ ಮಾಡಲಾಗಿದೆ.

  • ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

    ಕೆಫೆ ಕಾಫಿ ಡೇ ಮಾಲೀಕ, ಎಸ್‍ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ

    ಮಂಗಳೂರು/ಬೆಂಗಳೂರು: ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ್ ನಿನ್ನೆ ರಾತ್ರಿಯಿಂದ ದಿಢೀರ್ ಆಗಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದಾರೆ. ನೇತ್ರಾವತಿ ನದಿಗೆ ಹಾರಿರಬಹುದು ಎಂಬ ಶಂಕೆಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಘಟನೆಯ ವಿವರ: ವ್ಯವಹಾರ ನಿಮಿತ್ತ ಸಿದ್ಧಾರ್ಥ್ ಅವರು ತಮ್ಮ ಕಾರಿನಲ್ಲಿ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ. ಬಳಿಕ ಕಾರಿನಿಂದ ಇಳಿದು ಅವರು ಫೋನ್‍ನಲ್ಲಿ ಮಾತನಾಡುತ್ತಾ ಹೋಗಿದ್ದಾರೆ. ಆದರೆ ಅರ್ಧ ಗಂಟೆಯಾದರೂ ಸಿದ್ಧಾರ್ಥ್ ಅವರು ವಾಪಸ್ ಬರದೇ ಇದ್ದುದನ್ನು ಕಂಡು ಗಾಬರಿಯಾದ ಚಾಲಕ ಅವರಿಗೆ ಫೋನ್ ಮಾಡಿದ್ದಾನೆ. ಈ ವೇಳೆ ಅವರ ಫೋನ್ ಸ್ವಿಚ್ಡ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.

    ಕಾರು ಚಾಲಕ ತಕ್ಷಣ ಈ ವಿಚಾರವನ್ನು ಸಿದ್ಧಾರ್ಥ್ ಮನೆಯವರಿಗೆ ತಿಳಿಸಿದ್ದಾರೆ. ಸಿದ್ಧಾರ್ಥ್ ಅವರು ಕಾರಿನಿಂದ ಇಳಿದ ಜಪ್ಪಿನ ಮೊಗರು ಪ್ರದೇಶ ನೇತ್ರಾವತಿ ನದಿ ತಟದಲ್ಲೇ ಇರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಕಾರು ಚಾಲಕನಿಂದ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸಿದ್ಧಾರ್ಥ್ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

    ಇತ್ತ ಬೆಂಗಳೂರಿನಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಆತಂಕ ಮನೆ ಮಾಡಿದೆ. ಈ ಘಟನೆಯ ಬಗ್ಗೆ ಎಸ್.ಎಂ.ಕೃಷ್ಣ ಅವರ ನಿವಾಸದ ಬಳಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿಎಲ್ ಶಂಕರ್, ಕಾಫಿ ಡೇ ಉದ್ಯಮದ ಮಾಲೀಕರಾಗಿರುವ ಸಿದ್ಧಾರ್ಥ್ ಪ್ರಯಾಣ ಮಾಡುವ ವೇಳೆ ನಾಪತ್ತೆಯಾಗಿದ್ದಾರೆ. ಮಂಗಳೂರಿನ ಉಳ್ಳಾಲ ಸಮೀಪದಿಂದ ನಿನ್ನೆ ಸಂಜೆ 6 ಗಂಟೆಯಿಂದ ನಾಪತ್ತೆಯಾಗಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಶಾಸಕ ಯು.ಟಿ.ಖಾದರ್ ಅವರೂ ಹುಡುಕಾಟದಲ್ಲಿ ತೊಡಗಿದ್ದಾರೆ. ನಾಪತ್ತೆಗೂ ಮೊದಲು ಅವರು ಯಾರ ಜೊತೆ ಮಾತನಾಡಿದರು ಎಂಬುದು ತಿಳಿದಿಲ್ಲ. ಅವರ ಕಚೇರಿ ತೆರೆದ ಬಳಿಕ ಏನಾದರೂ ಮಾಹಿತಿ ಸಿಗಬಹುದು. ಯಾವುದೇ ತೊಂದರೆ ಆಗದೇ ವಾಪಸ್ ಸಿಗಲಿ ಎಂಬ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದರು.

    ಸಿದ್ಧಾರ್ಥ್ ನಮ್ಮ ಊರಿನವರು ಹಾಗೂ ದೊಡ್ಡ ಉದ್ಯಮಿ. ಅವರ ಕುಟುಂಬ ಆತಂಕದಲ್ಲಿದೆ. ಹಾಗಾಗಿ ನಾವು ನೋಡಲು ಬಂದಿದ್ದೇವೆ. ಯಾವುದೇ ಸಮಸ್ಯೆ ಬಂದರೂ ಅವರು ಎದುರಿಸುತ್ತಿದ್ದರು. ಪ್ರಕರಣ ತನಿಖಾ ಹಂತದಲ್ಲಿದ್ದು ತನಿಖೆ ಬಳಿಕ ಎಲ್ಲವೂ ವಿವರವಾಗಿ ತಿಳಿಯಲಿದೆ ಎಂದರು.

    ಸಿದ್ಧಾರ್ಥ್ ಯಾರು?: ದೇಶ ವಿದೇಶಗಳಲ್ಲಿ ಕೆಫೆ ಕಾಫಿ ಡೇ ಸ್ಥಾಪಿಸಿ ಪ್ರಖ್ಯಾತರಾದವರು. ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರ ಪುತ್ರಿಯನ್ನು ವಿವಾಹವಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ 12 ಸಾವಿರ ಎಕರೆ ಕಾಫಿ ಎಸ್ಟೇಟ್ ಹೊಂದಿದ್ದಾರೆ. ಮಂಗಳೂರಿನ ಸಾಫ್ಟ್‌ವೇರ್ ಕಂಪೆನಿಗಳಿಗೆ ಹೂಡಿಕೆ ಮಾಡಿದ್ದಾರೆ. ಷೇರು ಮಾರುಕಟ್ಟೆ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ.