Tag: code of conduct

  • ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‍ನಿಂದ ದೂರು

    ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‍ನಿಂದ ದೂರು

    ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

    ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನೀವು ನಿಂತರೆ ಭಾರತೀಯರು. ಒಂದು ವೇಳೆ ಮೋದಿ ಅವರ ವಿರುದ್ಧ ನಿಂತರೆ ನೀವು ದೇಶ ವಿರೋಧಿಗಳು ಎಂದು ತೇಜಸ್ವಿ ಸೂರ್ಯ ಭಾಷಣ ಮಾಡಿದ್ದರು. ಕಾಂಗ್ರೆಸ್ ಈ ಹೇಳಿಕೆಯ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

    ಭಾಷಣದಲ್ಲಿ ಏನಿದೆ?
    ಕಳೆದ 60 ವರ್ಷಗಳಿಂದ ಪ್ರಜೆಗಳಲ್ಲಿರುವ ದೇಶಪ್ರೇಮವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಅವರು ದೇಶಪ್ರೇಮಿಗಳಾಗಿದ್ದರೆ ಭಾರತವನ್ನು ಬಡರಾಷ್ಟ್ರವನ್ನಾಗಿ ಇರಲು ಬಿಡುತ್ತಿರಲಿಲ್ಲ. ಆದರೆ ಈಗ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲರೂ ಒಂದಾಗಿ ನಿಂತಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ನಿಲ್ಲುವವರು ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಆಡಳಿತಕ್ಕೆ ಬಂದರೆ ಕಾಂಗ್ರೆಸ್ ಸರ್ಕಾರ ಮತ್ತೆ ಆಡಳಿತಕ್ಕೆ ಬರುವುದಿಲ್ಲ. ಮೋದಿ ಪರ ನೀವು ನಿಂತರೆ ಭಾರತೀಯರು. ಒಂದು ವೇಳೆ ಮೋದಿ ಅವರ ವಿರುದ್ಧ ನಿಂತರೆ ನೀವು ದೇಶ ವಿರೋಧಿಗಳು ಎಂದು ತೇಜಸ್ವಿ ಸೂರ್ಯ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಕುಟುಂಬ ರಾಜಕಾರಣದ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.

    https://twitter.com/Tejasvi_Surya/status/1108973963747614720

  • ನೀತಿ ಸಂಹಿತೆ ಅರಿವಿಲ್ಲದ ಅಧಿಕಾರಿಗಳಿಂದ ಗಣ್ಯ ವ್ಯಕ್ತಿಗಳಿಗೆ ಅಗೌರವ

    ನೀತಿ ಸಂಹಿತೆ ಅರಿವಿಲ್ಲದ ಅಧಿಕಾರಿಗಳಿಂದ ಗಣ್ಯ ವ್ಯಕ್ತಿಗಳಿಗೆ ಅಗೌರವ

    ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಅರಿವಿಲ್ಲದೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಕಚೇರಿಯಲ್ಲಿದ್ದ ಗಣ್ಯರ ಭಾವಚಿತ್ರವನ್ನು ತೆರವುಗೊಳಿಸಿದ ಘಟನೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.

    ಸೋಲದೇವನಹಳ್ಳಿಯ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ಪುರುಷರ ಭಾವಚಿತ್ರಗಳನ್ನು ಹಾಕಲಾಗಿತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅಧಿಕಾರಿಗಳು ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭಾವಚಿತ್ರಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

    ಚುನಾವಣೆ ನೀತಿ ಸಂಹಿತೆಯ ಬಗ್ಗೆ ಅಧಿಕಾರಿಗಳಿಗೆ ಅರಿವಿಲ್ಲ. ಹೀಗಾಗಿ ದೇಶದ ಮಹಾನ್ ವ್ಯಕ್ತಿಗಳಿಗೆ ಅಗೌರವ ತೋರಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೊಡಗಿನಲ್ಲಿ ಮದ್ವೆಗೆ ತಟ್ಟಿದ ಚುನಾವಣಾ ನೀತಿಸಂಹಿತೆ!

    ಕೊಡಗಿನಲ್ಲಿ ಮದ್ವೆಗೆ ತಟ್ಟಿದ ಚುನಾವಣಾ ನೀತಿಸಂಹಿತೆ!

    ಮಡಿಕೇರಿ: ತನ್ನ ಆಚಾರ, ವಿಚಾರ, ಪದ್ಧತಿ ಪರಂಪರೆಯಿಂದ ಪ್ರಸಿದ್ಧಯಾಗಿರುವ ಕೊಡಗಿನ ಜನತೆಯ ಮದುವೆ ಸಮಾರಂಭಕ್ಕೆ ನೀತಿಸಂಹಿತೆ ತಟ್ಟಿದೆ.

    ಸದ್ಯ ವಿವಾಹವಾಗಲು ಚೈತ್ರಕಾಲವಾಗಿರುವುದರಿಂದ ಜಿಲ್ಲೆಯಲ್ಲಿ ಮದುವೆಯ ಭರಾಟೆ ಜೋರಾಗಿದೆ. ಆದರೆ ಹೀಗೆ ನಡೆಯುತ್ತಿರುವ ಮದುವೆಗಳಿಗೆ ಒಂದು ರೀತಿಯ ಸಂಕಷ್ಟ ಎದುರಾಗಿದೆ. ಕೊಡಗಿನಲ್ಲಿ ಪ್ರತಿ ಮದುವೆ ಶುಭ ಸಮಾರಂಭಗಳಿಗೆ ಮದ್ಯಪಾನ ಮಾಡುವುದು ಇಲ್ಲಿನ ಸಂಸ್ಕೃತಿಯಲ್ಲಿ ಒಂದು ಭಾಗವೇ ಆಗಿ ಹೋಗಿದೆ. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಕೊಡಗಿನ ಜನರಿಗೆ ತಲೆನೋವಾಗಿ ಪರಿಣಮಿಸಿದೆ.

    ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಈಗಾಗಲೇ ಅಬಕಾರಿ ಇಲಾಖೆಯಿಂದ ಕಲ್ಯಾಣ ಮಂಟಪಗಳಿಗೆ ಲಿಖಿತ ನೋಟಿಸ್ ಜಾರಿಗೊಳಿಸಿದ್ದು, ಕಲ್ಯಾಣ ಮಂಟಪ ಅಥವಾ ಶುಭ ಸಮಾರಂಭ ಸ್ಥಳಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡದಂತೆಯೂ, ಮದ್ಯ ಸಂಗ್ರಹ ಮಾಡಿ ಇಟ್ಟುಕೊಳ್ಳದಂತೆಯೂ ನಿರ್ದೇಶಿಸಿದೆ. ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಕಿಕ್ಕೇರಿಸಿಕೊಳ್ಳುತ್ತಿದ್ದ ಮಂದಿ ಈ ನಿಯಮದಿಂದ ತುಂಬಾನೇ ಬೇಸರ ಮಾಡಿಕೊಳ್ಳುವಂತಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕ ವೀರಣ್ಣ ಹೇಳಿದ್ದಾರೆ.

    ಚುನಾವಣೆ ನೀತಿ ಸಂಹಿತೆ ನಡುವೆಯೂ ಮದ್ಯ ಬಳಕೆಗೆ ಅವಕಾಶ ಬೇಕು ಎಂದ್ರೆ ಒಂದು ದಿನಕ್ಕೆ 11,500ರೂ ಹಣ ಸಂದಾಯ ಮಾಡಿ ಪರವಾನಿಗೆ ಪಡೆಯಬೇಕು ಎಂದು ಆದೇಶ ಮಾಡಲಾಗಿದೆ. ಈ ಮೊತ್ತ ಸರ್ಕಾರಕ್ಕೆ ಜಮೆಯಾಗಲಿದ್ದು, ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಚುನಾವಣೆ ಘೋಷಣೆಗೆ ಮುನ್ನವೇ ಜಿಲ್ಲೆಯ ಅನೇಕ ಕಡೆಗಳಲ್ಲಿ ವಿವಾಹ ಸಮಾರಂಭಗಳು ನಿಶ್ಚಯ ಆಗಿವೆ.

    ಸಾಮಾನ್ಯವಾಗಿ ಮದುವೆಯ ಮುನ್ನ ದಿನವಾದ ಚಪ್ಪರ ಹಾಗೂ ಮದುವೆ ದಿನ ಮದ್ಯವನ್ನು ನೀಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಹೀಗಾಗಿ ಸದ್ಯ 2 ದಿನಕ್ಕೆ ಪರವಾನಿಗೆ ಬೇಕು ಅಂದ್ರೆ 23 ಸಾವಿರ ಹಣವನ್ನ ಅಬಕಾರಿ ಇಲಾಖೆಗೆ ಕಟ್ಟಬೇಕಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮದುವೆ ಮಂಟಪಗಳ ಬಾಡಿಗೆ ಹಾಗೂ ಇತರ ಖರ್ಚು ವೆಚ್ಚಗಳನ್ನು ಭರಿಸಿ ಶುಭ ಸಮಾರಂಭಗಳನ್ನು ನೆರವೇರಿಸಲು ಸಾಮಾನ್ಯ ಕುಟುಂಬಗಳು ಬವಣೆ ಪಡುತ್ತಿರುವಾಗ, ಹೆಚ್ಚುವರಿ ಸುಮಾರು 25 ಸಾವಿರ ಹಣವನ್ನ ಪಾವತಿಸುವುದು ನಮಗೆ ಕಷ್ಟವಾಗುತ್ತಿದೆ ಎಂದು ಸ್ಥಳೀಯ ನವೀನ್ ತಿಳಿಸಿದ್ದಾರೆ.

  • ರೋಗಿಗಳಿಗೆ ತಟ್ಟಿದ ಚುನಾವಣಾ ಬಿಸಿ- ಉಚಿತ ಚಿಕಿತ್ಸೆಗೆ ನೀತಿಸಂಹಿತೆ ಅಡ್ಡಿ

    ರೋಗಿಗಳಿಗೆ ತಟ್ಟಿದ ಚುನಾವಣಾ ಬಿಸಿ- ಉಚಿತ ಚಿಕಿತ್ಸೆಗೆ ನೀತಿಸಂಹಿತೆ ಅಡ್ಡಿ

    ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಚುನಾವಣಾ ಕಾವು ರಂಗೇರುತ್ತಾ ಇದೆ. ಮತ್ತೊಂದೆಡೆ ಹೊಸ ಯೋಜನೆ, ಹೊಸ ಕಾಮಗಾರಿಗೆ ನೀತಿ ಸಂಹಿತೆಯಿಂದಾಗಿ ಬ್ರೇಕ್ ಬಿದ್ದಿದೆ. ಇದರ ನಡುವೆ ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಕಣ್ಣೀರು ಹಾಕುತ್ತಾ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ.

    ಹೌದು. ಬಿಪಿಎಲ್ ಕಾರ್ಡ್ ಮತ್ತು ಆರೋಗ್ಯ ಭಾಗ್ಯ ಕಾರ್ಡನ್ನ ನಂಬಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ನೀತಿ ಸಂಹಿತೆಯಿಂದಾಗಿ ಚಿಕಿತ್ಸೆ ಸಿಗುತ್ತಿಲ್ಲ. ಕಳೆದ 20 ದಿನಗಳ ಹಿಂದೆ ಬಾಣಸವಾಡಿಯ ಚಂದ್ರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗಾಗಿ ಅಲ್ಲಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯವರೇನೋ ಶಸ್ತ್ರ ಚಿಕಿತ್ಸೆ ಮಾಡ್ತೀವಿ ಕಾರ್ಡ್ ಇದ್ಯಯಲ್ಲ ಎಂದು ಮೊದಲು ಭರವಸೆ ಕೊಟ್ಟಿದ್ದಾರೆ. ಆದ್ರೆ ಬಿಲ್ಲಿಂಗ್ ಟೈಂನಲ್ಲಿ ಆನ್‍ಲೈನ್‍ನಲ್ಲಿ ನೋಡಿದಾಗ ಬಿಪಿಎಲ್‍ಕಾರ್ಡ್‍ನಲ್ಲಿ ವ್ಯಕ್ತಿಯ ಹೆಸರು ನಾಪತ್ತೆಯಾಗಿದೆ. ಸರಿ ಇನ್ನೇನು ತಿದ್ದುಪಡಿ ಮಾಡಿಕೊಂಡು ಬರೋಣವೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ರೋಗಿಯ ಸಂಬಂಧಿಕರು ಹೋದ್ರೆ ಚುನಾವಣಾ ಸಂದರ್ಭದಲ್ಲಿ ಯಾವ ಲೋಪದೋಷವನ್ನು ಸರಿಮಾಡಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ರೋಗಿ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.


    ಅತ್ತ ಲಕ್ಷ ಲಕ್ಷ ಬಿಲ್ ಕಟ್ಟಲಾರದೇ ರೋಗಿಯ ಕಡೆಯವರು ಪರದಾಟ ಪಟ್ಟಿದ್ದಾರೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬಾರಜು ಇಲಾಖೆಯವರನ್ನು ಕೇಳಿದ್ರೆ, ನಾವು ನೀತಿಸಂಹಿತೆ ಮುಗಿದ ಮೇಲೆ ಪಡಿತರ ಚೀಟಿ ದೋಷವನ್ನು ಸರಿಪಡಿಸಬಹುದು. ಈ ಬಗ್ಗೆ ನೋಟಿಸ್ ಬೋರ್ಡ್ ಕೂಡ ಹಾಕಲಾಗಿದೆ ಎಂದು ಇಲಾಖೆಯ ಪೂರ್ವವಲಯ ಉಪ ನಿರ್ದೇಶಕ ನಾಗಭೂಷಣ್ ಹೇಳಿದ್ದಾರೆ.

    ರಾಜಕೀಯ ಆಸೆ ಆಮಿಷಗಳಿಗೆ ಬ್ರೇಕ್ ಹಾಕಲು ನೀತಿ ಸಂಹಿತೆ ಇದೆ. ಆದ್ರೆ ಕೆಲವೊಮ್ಮೆ ಈ ನಿಯಮಗಳು ಸಾಮಾನ್ಯ ಜನರಿಗೆ ಅದೆಷ್ಟು ತೊಂದರೆ ಕೊಡ್ತವೆ ಅನ್ನೋದಕ್ಕೆ ಈ ಘಟನೆಯೇ ನಿದರ್ಶನವಾಗಿದೆ.

  • ದಿನೇಶ್ ಅಮೀನ್ ಮಟ್ಟು ಸೇರಿದಂತೆ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸ್

    ದಿನೇಶ್ ಅಮೀನ್ ಮಟ್ಟು ಸೇರಿದಂತೆ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸ್

    ಉಡುಪಿ: ಸಹಬಾಳ್ವೆ ಸಂಘಟನೆ ನೇತೃತ್ವದಲ್ಲಿ ನಡೆದ ಸರ್ವ ಜನೋತ್ಸವ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಪ್ರಚಾರ ಮಾಡಿದ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸು ದಾಖಲಾಗಿದೆ.

    ಹಿಂದೂ ಧರ್ಮವನ್ನು ನಿಂದಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಸಹಬಾಳ್ವೆ ಅಧ್ಯಕ್ಷ ಸಹಿತ ಐವರ ಮೇಲೆ ಪ್ರಕರಣ ದಾಖಲಾಗಿದೆ. ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ, ಹಿರಿಯ ಪತ್ರಕರ್ತ-ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು, ದಲಿತ ಮುಖಂಡ ಇಂದೂಧರ ಹೊನ್ನಾಪುರ, ಜಿ.ಎನ್ ನಾಗರಾಜ್, ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಅವರ ಮೇಲೆ ಚುನಾವಣಾ ಆಯೋಗ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ಪ್ರಕರಣ ದಾಖಲು ಮಾಡಿಕೊಂಡಿದೆ. ಇದನ್ನೂ ಓದಿ:ಪ್ರಕಾಶ್ ರೈ ಮತ ವಿಭಜನೆಗೆ ಹೊರಟಿದ್ದಾರೆ: ದಿನೇಶ್ ಅಮಿನ್ ಮಟ್ಟು

    ಉಡುಪಿಯಲ್ಲಿ ನಡೆದ ಸರ್ವಜನೋತ್ಸವದಲ್ಲಿ ದಿನೇಶ್ ಅಮೀನ್ ಮಟ್ಟು ಮತ್ತು ಇತರರು ಮಾ. 17 ರಂದು ಕಲ್ಸಂಕದ ರಾಯಲ್ ಗಾರ್ಡನ್‍ನಲ್ಲಿ ನಡೆದ ಸಹಬಾಳ್ವೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು. ಚುನಾವಣಾ ಪ್ರಚಾರದ ಜೊತೆಗೆ ಧರ್ಮಗಳ ನಿಂದನೆ ಮಾಡಿದ್ದರು. ಪ್ರಧಾನಿ ಮೋದಿ, ಪೇಜಾವರಶ್ರೀ, ಪ್ರಕಾಶ್ ರೈ ಮೇಲೆ ವಾಗ್ದಾಳಿ ಮಾಡಿದ್ದರು. ಹಿಂದೂ ಧರ್ಮದ ಹೆಸರು ತೆಗೆದು ಟೀಕೆ ಮಾಡಿದ್ದರು.

    ಬಳಿಕ ಯಾರಿಗೆ ಮತಹಾಕಿ, ಯಾರಿಗೆ ಮತ ಹಾಕಬೇಡಿ ಎಂದು ಸಾರ್ವಜನಿಕರ ಮೇಲೆ ಒತ್ತಡ ಹೇರಿದ್ದರು. ಈ ಬಗ್ಗೆ ಚುನಾವಣಾ ವೀಕ್ಷಣಾಧಿಕಾರಿಗಳು ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನಾಟಕ ಕಂಪನಿಗಳಿಗೂ ತಟ್ಟಿತು ಲೋಕಸಭಾ ಚುನಾವಣೆಯ ಬಿಸಿ- ಹೀಗೆ ಆದ್ರೆ ಅನ್ನ ತಿನ್ನೋದು ಹೇಗೆ?

    ನಾಟಕ ಕಂಪನಿಗಳಿಗೂ ತಟ್ಟಿತು ಲೋಕಸಭಾ ಚುನಾವಣೆಯ ಬಿಸಿ- ಹೀಗೆ ಆದ್ರೆ ಅನ್ನ ತಿನ್ನೋದು ಹೇಗೆ?

    – ರಾತ್ರಿ ನಾಟಕ ಆಯೋಜಿಸದಂತೆ ಆಯೋಗದಿಂದ ಸೂಚನೆ
    – ನಾಟಕ ಮಾಡದೇ ಇದ್ದರೆ ನಾವು ಬದುಕೋದು ಹೇಗೆ – ಕಲಾವಿದರ ಪ್ರಶ್ನೆ

    ಬಳ್ಳಾರಿ: ಲೋಕಸಭಾ ಚುನಾವಣೆಯ ಬಿಸಿ ನಾಟಕ ಕಂಪನಿಗಳಿಗೂ ತಟ್ಟಿದೆ. ಕೂಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ನಿಮಿತ್ತ ಹಲವು ನಾಟಕ ಕಂಪನಿಗಳು ಪ್ರದರ್ಶನ ನೀಡುತ್ತಿವೆ. ಆದರೆ ಇದೀಗ ರಾತ್ರಿ 10 ಗಂಟೆಯ ನಂತರ ಶೋ ನಡೆಸದಂತೆ ಚುನಾವಣಾಧಿಕಾರಿಗಳು ತಾಕೀತು ಮಾಡಿರುವುದು ಬಡ ಕಲಾವಿದರ ಹೊಟ್ಟೆ ಮೇಲೆ ಹೊಡೆದಂತಾಗಿದೆ.

    ರಾತ್ರಿ ಶೋ ನಡೆದರೆ ಮಾತ್ರ ಬಡ ಕಲಾವಿದರಿಗೆ ದುಡಿಮೆ ಹೊಟ್ಟೆಗೆ ಅನ್ನವಾಗಿದೆ. ಹೀಗಾಗಿ ರಾಜ್ಯದ ಯಾವ ನಾಟಕ ಕಂಪನಿಗಳಿಗೆ ಇರದ ನಿಯಮ ಬಳ್ಳಾರಿಯ ಕೊಟ್ಟೂರು ಪಟ್ಟಣದಲ್ಲಿ ಇರುವ ಗುಬ್ಬಿ ನಾಟಕ ಕಂಪನಿಗಳಿಗೆ ಮಾತ್ರ ನೀತಿ ಸಂಹಿತೆ ಬಿಸಿನಾ ಎಂದು ಕಲಾವಿದರು ಪ್ರಶ್ನೆ ಮಾಡುತ್ತಿದ್ದಾರೆ.

    ಎಲ್ಲ ಜಿಲ್ಲೆಯಲ್ಲೂ ನಡೆಯುವಂತಹ ಜಾತ್ರೆಯಲ್ಲಿ ಕಲಾವಿದರು ನಾಟಕ ಪ್ರದರ್ಶನ ಮಾಡುತ್ತಾರೆ. ಹೀಗಾಗಿ ನಾಟಕ ಕಂಪನಿಗಳಿಗೆ ಜಾತ್ರೆಗಳೇ ಆದಾಯವಾಗಿವೆ. ಬಳ್ಳಾರಿಯ ಕೊಟ್ಟೂರು ಪಟ್ಟಣದಲ್ಲಿ ಎರಡು ನಾಟಕ ಕಂಪನಿಗಳು ಬೀಡುಬಿಟ್ಟಿವೆ. ಆದರೆ ಅಧಿಕಾರಿಗಳು ರಾತ್ರಿ ವೇಳೆ ಪ್ರದರ್ಶನ ಮಾಡಬಾರದು ಎಂದು ನೋಟಿಸ್ ಕೊಟ್ಟಿದ್ದಾರೆ. ಸಿನಿಮಾಗಳಿಗೆ ಇಲ್ಲದ ನೀತಿ ಸಂಹಿತೆ, ನಾಟಕ ಕಂಪನಿಗಳಿಗೆ ಏಕೆ ಎಂದು ಕಲಾವಿದರು ಪ್ರಶ್ನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ್ಯೋತಿಷಿಗಳಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ!

    ಜ್ಯೋತಿಷಿಗಳಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ!

    ಮಂಡ್ಯ: ಜ್ಯೋತಿಷ್ಯ ಮಂದಿರದ ಬೋರ್ಡ್ ನಲ್ಲಿ ಹಸ್ತದ ಚಿಹ್ನೆ ಇದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಬೋರ್ಡ್ ಗೆ ಪೇಪರ್ ಹಚ್ಚಿ ಮುಚ್ಚಿದ್ದಾರೆ.

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರದಿಂದ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಅಶೋಕ ನಗರದಲ್ಲಿರುವ ಜ್ಯೋತಿಷ್ಯ ಮಂದಿರದ ಬೋರ್ಡ್ ಗೆ ಅಧಿಕಾರಿಗಳು ಪೇಪರ್ ಹಚ್ಚಿ ಮುಚ್ಚಿದ್ದಾರೆ.

    ಸಾಮಾನ್ಯವಾಗಿ ಹಲವು ಜ್ಯೋತಿಷ್ಯ ಕೇಂದ್ರಗಳಲ್ಲಿ ನಿಮ್ಮ ಹಸ್ತವನ್ನು ನೋಡಿ ಜ್ಯೋತಿಷ್ಯ ಹೇಳುತ್ತೇವೆ ಅಂತ ಜ್ಯೋತಿಷಿಗಳು ಹಸ್ತದ ಚಿಹ್ನೆ ಇರುವ ಬೋರ್ಡ್ ಗಳನ್ನು ಹಾಕಿರುತ್ತಾರೆ. ಆದ್ರೆ ಈ ಹಸ್ತ ಕಾಂಗ್ರೆಸ್ ಪಕ್ಷದ ಚಿಹ್ನೆ ಕೂಡ ಆಗಿರುವುದರಿಂದ ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ.

    ಸದ್ಯ ಜಾರಿಯಲ್ಲಿರುವ ನೀತಿ ಸಂಹಿತೆ ಅವಧಿ ಮುಗಿಯುವವರೆಗೂ ಜ್ಯೋತಿಷಿ ಕೇಂದ್ರದ ಮುಂದೆ ಹಸ್ತ ಚಿಹ್ನೆ ಇರುವ ಬೋರ್ಡ್ ಹಾಕಬಾರದು ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಸದ, ಶಾಸಕ ತಲ್ವಾರ್ ಹಿಡಿದ ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್..!

    ಸಂಸದ, ಶಾಸಕ ತಲ್ವಾರ್ ಹಿಡಿದ ಫೋಟೋ ಫೇಸ್‍ಬುಕ್‍ಗೆ ಅಪ್ಲೋಡ್..!

    – ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಕಾರ್ಯಕರ್ತರು

    ಧಾರವಾಡ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದಾಗಲೇ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ್ ಬೆಲ್ಲದ ಅವರು ತಲ್ವಾರ್ ಹಿಡಿದ ಫೋಟೋವನ್ನು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ನೀತಿ ಸಂಹಿತೆ ನಿಯಮವನ್ನು ಉಲ್ಲಂಘಿಸಿದ್ದಾರೆ.

    ಪ್ರಹ್ಲಾದ್ ಜೋಶಿ ಮತ್ತು ಅರವಿಂದ ಬೆಲ್ಲದ ಕೈಯಲ್ಲಿ ತಲ್ವಾರ್ ಹಿಡಿದ ಫೋಟೋವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಆಯುಧ ಪ್ರದರ್ಶಿಸಬಾರದು. ಆಯುಧ ಹಿಡಿದ ಫೋಟೋ ಕೂಡ ಸಾರ್ವಜನಿಕವಾಗಿ ಹಂಚಿಕೊಳ್ಳೋದು ಕೂಡ ತಪ್ಪು. ಆದ್ರೆ ಬಿಜೆಪಿ ಕಾರ್ಯಕರ್ತ, ಜೋಶಿ ಹಾಗೂ ಬೆಲ್ಲದ ತಲ್ವಾರ್ ಹಿಡಿದ ಫೋಟೋ ಹಾಕಿ ಮತ್ತೊಮ್ಮೆ ನಾವೇ ಗೆಲ್ಲೋದು ಎಂದು ಪೋಸ್ಟ್ ಮಾಡಿದ್ದಾರೆ.

    ಶಕ್ತಿ ಧಾರವಾಡ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ, ಎರಡು ದಿನಗಳ ಹಿಂದೆ ಧಾರವಾಡದ ಅಶೋಕ ಹೊಟೇಲ್‍ಗೆ ಬಂದಾಗ ಜನಪ್ರತಿನಿಧಿಗಳು ತಲ್ವಾರ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದರು. ಅದೇ ಫೋಟೋವನ್ನು ನೀತಿ ಸಂಹಿತೆ ಜಾರಿಯಾದ ಬಳಿಕ ಕಾರ್ಯಕರ್ತ ಪೋಸ್ಟ್ ಮಾಡಿ ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘಿಸಿದ್ದಾರೆ.

    https://www.facebook.com/shakti.hiremath/posts/2113167555464960

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದುವೆ ಆಹ್ವಾನ ಪತ್ರಿಕೆಗೆ ತಟ್ಟಿತು ನೀತಿಸಂಹಿತೆ ಬಿಸಿ!

    ಮದುವೆ ಆಹ್ವಾನ ಪತ್ರಿಕೆಗೆ ತಟ್ಟಿತು ನೀತಿಸಂಹಿತೆ ಬಿಸಿ!

    ಯಾದಗಿರಿ: ಮದುವೆಯ ಆಮಂತ್ರಣ ಪತ್ರದ ಮೂಲಕ ಬಿಜೆಪಿ ಕಾರ್ಯಕರ್ತನೋರ್ವ ಪ್ರಚಾರ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡಿರುವ ಘಟನೆ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ನಡೆದಿದೆ.

    ಲೋಕಸಭೆ ಚುನಾವಣೆ ಹಿನ್ನೆಲೆ ಭಾನುವಾರದಿಂದ ನೀತಿಸಂಹಿತೆ ಜಾರಿಯಾಗಿದ್ದು, ಯಾದಗಿರಿಯ ಬಿಜೆಪಿ ಕಾರ್ಯಕರ್ತ ಬಸವರಾಜ `ಮತ್ತೊಮ್ಮೆ ಮೋದಿ’ ಅಂತ ಬರೆಸಿ, ಕೆಲ ಬಿಜೆಪಿ ನಾಯಕರ ಫೋಟೋವನ್ನೂ ಕೂಡ ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ ಪ್ರಿಂಟ್ ಹಾಕಿಸಿದ್ದರು. ಆದ್ರೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಈ ರೀತಿ ರಾಜಕೀಯ ಪಕ್ಷ ಪರವಾಗಿ ಪ್ರಚಾರ ಮಾಡುವಂತ ಮದುವೆ ಕಾರ್ಡ್ ಹಂಚುವಂತಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ:ರಾಜಕಾರಣಿಗಳ ಮೇಲೆ ಆಯೋಗದಿಂದ ಹೊಸ ಬ್ರಹ್ಮಾಸ್ತ್ರ..!

    ಕಳೆದ ಹದಿನೈದು ದಿನಗಳಿಂದ ಲಗ್ನ ಪತ್ರಿಕೆಗಳನ್ನು ಬಸವರಾಜ ಹಂಚುತ್ತಿದ್ದರು. ಆದರೆ ಭಾನುವಾರ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ, ಇಂದಿನಿಂದ ಲಗ್ನಪತ್ರಿಕೆ ಹಂಚಿಕೆ ಮಾಡದಿರುವಂತೆ ಚುನಾವಣಾ ಅಧಿಕಾರಿಗಳು ಬಸವರಾಜ ಅವರಿಗೆ ಸೂಚಿಸಿದ್ದಾರೆ. ಈಗಾಗಲೇ ಈ ಬಗ್ಗೆ ಪ್ರಾಥಮಿಕ ವರದಿ ತಯಾರಿಸಿರುವ ಆರ್‍ಓ ಅಧಿಕಾರಿ ಲಗ್ನಪತ್ರಿಕೆಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಪತ್ರಿಕೆ ಮುದ್ರಿಸಿದ ಮುದ್ರಣಾಲಯಕ್ಕೆ ಮುದ್ರಿತ ಪತ್ರಿಕೆಗಳ ಲೆಕ್ಕ ಕೂಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ:ಸೇನೆ, ಸೈನಿಕರ ಚಿತ್ರಗಳನ್ನು ಬಳಸುವಂತಿಲ್ಲ: ರಾಜಕೀಯ ಪಕ್ಷಗಳಿಗೆ ಆಯೋಗ ಎಚ್ಚರಿಕೆ

    ಇದೆ ಮಾರ್ಚ್ 24ಕ್ಕೆ ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಬಸವರಾಜ ಹಾಗೂ ಸಹೋದರ ಶರಣಬಸವ ಇಬ್ಬರ ಮದುವೆಗಳು ನಿಶ್ಚಯವಾಗಿದೆ. ಆದರಿಂದ ಬಿಜೆಪಿ ಕಾರ್ಯಕರ್ತ ಆಗಿರುವ ಬಸವರಾಜ ಮತ್ತೊಮ್ಮೆ ಮೋದಿ ಅಂತ ಪ್ರಿಂಟ್ ಮಾಡಿಸಿದ್ದ ತಮ್ಮ ಲಗ್ನಪತ್ರಿಕೆಯನ್ನು ಎಲ್ಲರಿಗೂ ಹಂಚುವ ಮೂಲಕ ಮದುವೆಯ ಆಮಂತ್ರಣದ ಜೊತೆಗೆ ಬಿಜೆಪಿ ಪರ ಪ್ರಚಾರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಆಮಂತ್ರಣದ ಮೇಲೆ ಸಾಲು ಸಾಲು ಬಿಜೆಪಿ ನಾಯಕರ ಫೋಟೋವನ್ನು ಕೂಡ ಹಾಕಿಸಿದ್ದರು. ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ನಾಯಕ ರಾಜುಗೌಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ್ ಭಾವಚಿತ್ರಗಳನ್ನ ಪ್ರಿಂಟ್ ಮಾಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್‍ಐಆರ್

    ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್‍ಐಆರ್

    ಉಡುಪಿ: ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಇದೀಗ ಸಚಿವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಆಸ್ಟ್ರೇಲಿಯಾ ದ ಗೋಲ್ಡ್ ಕೋಸ್ಟ್ ನಲ್ಲಿ ಭಾರತೀಯ ಕ್ರೀಡಾಪಟು ಗುರುರಾಜ್ ಪೂಜಾರಿ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚಿವ ಮಧ್ವರಾಜ್, ಗುರುರಾಜ್ ಗೆ ಕ್ರೀಡಾ ಇಲಾಖೆ 25 ಲಕ್ಷ ನಗದು ಮತ್ತು ಸರ್ಕಾರಿ ನೌಕರಿಯನ್ನು ರಾಜ್ಯ ಸರ್ಕಾರ ನೀಡುತ್ತದೆ ಎಂದಿದ್ದರು.  ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

    ಕಾಮನ್‍ವೆಲ್ತ್ ಗೇಮ್ಸ್ ಗೆ ತೆರಳುವ ಮುನ್ನವೇ ಪ್ರಶಸ್ತಿ ಬಗ್ಗೆ ಕ್ರೀಡಾನೀತಿಯಲ್ಲಿ ಉಲ್ಲೇಖವಾಗಿದೆ. ಇದು ಈಗ ಮಾಡುತ್ತಿರುವ ಘೋಷಣೆಯಲ್ಲ ಎಂದೂ ಕೂಡ ಸಚಿವರು ಅದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದರು. ಆದರೆ ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಸರಿಯಲ್ಲ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್‍ಗೆ ಸರ್ಕಾರಿ ಕೆಲಸ, 25 ಲಕ್ಷ ನಗದು ಬಹುಮಾನ- ಪ್ರಮೋದ್ ಮಧ್ವರಾಜ್

    ಕ್ರೀಡಾ ನೀತಿಯ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಆಗಿಲ್ಲ. ಹೀಗಾಗಿ ಮತದಾನ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಮತದಾರರನ್ನು ಓಲೈಸುವಂತಾಗುತ್ತದೆ ಅಲ್ಲದೇ ಆಮಿಷ ಒಡ್ಡುವಂತಾಗುತ್ತದೆ ಎಂದು ಆರೋಪಿಸಿ ಚುನಾವಣಾಧಿಕಾರಿಗಳು ಉಡುಪಿ ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದ್ದಾರೆ.