Tag: Coconut water

  • ಎಳನೀರು ಕೀಳುತ್ತಿದ್ದಾಗ ವಿದ್ಯುತ್ ಶಾಕ್- ವ್ಯಕ್ತಿ ಸಾವು

    ಎಳನೀರು ಕೀಳುತ್ತಿದ್ದಾಗ ವಿದ್ಯುತ್ ಶಾಕ್- ವ್ಯಕ್ತಿ ಸಾವು

    ಹಾಸನ: ತೆಂಗಿನ ಮರದಿಂದ ಎಳನೀರು ಕೀಳುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಭಾನುವಾರ ಮಧ್ಯಾಹ್ನ ಆಲೂರು ತಾಲೂಕಿನ ಪಾಳ್ಯ ಹೋಬಳಿ ಬಾಳಿಕೊಪ್ಪಲು (ಕಾಮತಿ ಹತ್ತಿರ) ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಾಜಣ್ಣ ಅವರ ಪುತ್ರ ಧರಣಿ (39) ಮೃತ ವ್ಯಕ್ತಿ. ಬಿಕ್ಕೋಡು ರಸ್ತೆಯಲ್ಲಿರುವ ಕಾಮತಿಕೂಡಿಗೆ ಗ್ರಾಮದಲ್ಲಿ ರಸಗೊಬ್ಬರದ ಅಂಗಡಿಯನ್ನು ತೆರೆದು ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದರು.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಬಂದಿದ್ದು, ಮನೆಯ ಪಕ್ಕದಲ್ಲಿದ್ದ ತೆಂಗಿನ ಮರದಲ್ಲಿ ಎಳನೀರು ಕೀಳಲು ಮುಂದಾದ ವೇಳೆ ಮರದ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎಳನೀರು ಸೇವನೆ ಸರ್ವ ರೋಗಕ್ಕೂ ಮದ್ದು

    ಎಳನೀರು ಸೇವನೆ ಸರ್ವ ರೋಗಕ್ಕೂ ಮದ್ದು

    ನೈಸರ್ಗಿಕ ಪಾನೀಯವಾಗಿರುವ ಎಳನೀರು ಸರ್ವರೋಗಕ್ಕೆ ಮದ್ದು ಎನ್ನುವುದು ತಿಳಿದಿರುವ ವಿಷಯವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುತ್ತದೆ. ಎಳನೀರು ಎಂಬುದು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಎಳನೀರಿನ ಸೇವನೆಯಿಂದ ಯಾವೆಲ್ಲ ಆರೋಗ್ಯಕರವಾದ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಿ.

    ಎಳನೀರಿನ ಉಪಯೋಗ:
    * ಎಳನೀರಿನಲ್ಲಿರುವ ವಿವಿಧ ಖನಿಜ, ಲವಣ ಮತ್ತು ಸಕ್ಕರೆಯ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇರುವುದರಿಂದಲೇ ಇದೊಂದು ಅಮೃತಸಮಾನವಾದ ಪಾನೀಯವಾಗಿದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್‍ನ್ನು ಹೆಚ್ಚಿಸುತ್ತದೆ.

    * ಎಳನೀರು ಸೇವನೆಯಿಂದ ಕ್ಯಾನ್ಸರ್ ಜನಕ ಕಣಗಳಿಗೆ ವಿರೋಧ ಒಡ್ಡುವುದರಿಂದ ದೇಹವನ್ನು ಕ್ಯಾನ್ಸರ್ ನಿಂದ ತಡೆಯುತ್ತದೆ. ಎಳನೀರಿನ ಇನ್ನೊಂದು ಉತ್ತಮ ಗುಣವೆಂದರೆ ದೇಹದೊಳಗಿನ ರಕ್ತ ಹೆಪ್ಪುಗಟ್ಟದಂತೆ ತಡೆಯುವುದು.

    * ಎಳನೀರಿನಲ್ಲಿರುವ ಪೋಟ್ಯಾಷಿಯಂ ಪ್ರಮಾಣ ಇರುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಉರಿ ಮೂತ್ರದ ಸಮಸ್ಯೆಯನ್ನು ನಿವಾರಿಸುತ್ತದೆ.

    * ಎಳನೀರಿನಲ್ಲಿರುವ ಪೋಲಿಕ್ ಆಮ್ಲ, ಫಾಸ್ಪೇಟೇಸ್, ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ ಪಾಲಿಮರೇಸಸ್ ಮೊದಲಾದ ಕಿಣ್ವಗಳು ವಿವಿಧ ರೀತಿಯ ಆಹಾರಗಳು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತವೆ.

    *ಬಿಸಿಲಿನಲ್ಲಿ ಚರ್ಮ ಹೆಚ್ಚಿನ ನೀರನ್ನು ಕಳೆದುಕೊಳ್ಳುವುದರಿಂದ ಒಣಗುತ್ತದೆ. ಎಳನೀರನ್ನು ಹತ್ತಿಯಲ್ಲಿ ಮುಳುಗಿಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಕಳೆದುಕೊಂಡಿದ್ದ ತೇವಾಂಶವನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತದೆ.

    * ಇಂದಿನ ದಿನಗಳಲ್ಲಿ ಎಲ್ಲರಿಗೂ ಕಾಡುವ ಸಮಸ್ಯೆ ಎಂದರೆ ತಲೆನೋವು. ತಲೆನೋವಿನ ಸಮಸ್ಯೆ ಇರುವವರು ದಿನನಿತ್ಯ ಎಳನೀರು ಕುಡಿಯುವುದು ಉತ್ತಮ ಎಂದು ಹಿರಿಯರು ಹೇಳುತ್ತಾರೆ.

  • ಬೇಸಿಗೆ ಮುನ್ನವೇ ಎಳನೀರಿಗೆ ಬೇಡಿಕೆ – ಕೇರಳದ ಎಳನೀರು ಮಾರಾಟ

    ಬೇಸಿಗೆ ಮುನ್ನವೇ ಎಳನೀರಿಗೆ ಬೇಡಿಕೆ – ಕೇರಳದ ಎಳನೀರು ಮಾರಾಟ

    -ಕಾಯಿ ಮೇಲ್ಮೈನ ಬಣ್ಣದಲ್ಲೂ ವ್ಯತ್ಯಾಸ

    ಕೊಪ್ಪಳ: ಎಳನೀರು ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೆ 2 ಎರಡು ಎಳನೀರು ಸೇವಿಸುವಂತೆ ವೈದ್ಯರ ಸಲಹೆ ಮೇರೆಗೆ ಬೆಳಗ್ಗೆ ಅಥವಾ ಸಂಜೆ ವಾಯು ವಿಹಾರಕ್ಕೆ ಬರುವವರು ಎಳನೀರು ಸೇವಿಸುವುದು ಕಡ್ಡಾಯ ಮಾಡಿಕೊಂಡಿದ್ದಾರೆ. ಇದರಿಂದ ಬೇಸಿಗೆ ಮುನ್ನವೇ ಎಳನೀರು ಗಗನಕ್ಕೇರಿದ್ದು, 35ರಿಂದ 40ರೂ.ಗಳಿಗೆ ಮಾರಾಟವಾಗುತ್ತಿವೆ.

    ಜಿಲ್ಲೆಯಲ್ಲಿ ತೆಂಗಿನ ಗಿಡಗಳು ನುಸಿ ರೋಗಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಿಂದ ವ್ಯಾಪಾರಿಗಳು ನಿರೀಕ್ಷಿಸಿದಷ್ಟು ಎಳನೀರು ಕಾಯಿ ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮದ್ದೂರು, ಗುಬ್ಬಿ, ತುಮಕೂರುಗಳಿಂದ ಎಳನೀರುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲಿಂದಲೂ ಬೇಡಿಕೆಗೆ ತಕ್ಕಂತೆ ಬಾರದಿದ್ದರಿಂದ ಕೇರಳದ ಮೊರೆ ಹೋಗಿದ್ದು, ದುಬಾರಿಯಾದರೂ ಆಮದು ಮಾಡಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಒಬ್ಬರೇ ದಲ್ಲಾಳಿಯಿದ್ದರು. ಆದರೆ ಬೇಡಿಕೆ ಹೆಚ್ಚುತ್ತಿದ್ದಂತೆ ದಲ್ಲಾಳಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ.

    ವಿಭಿನ್ನ:
    ರಾಜ್ಯದ ಎಳನೀರಿನಂತೆ ಕೇರಳದ ಎಳನೀರು ಕಾಯಿಗಳಿಲ್ಲ. ಕಾಯಿ ಮೇಲ್ಮೈನ ಬಣ್ಣದಲ್ಲೂ ವ್ಯತ್ಯಾಸವಿದ್ದು, ಹಳದಿ ಬಣ್ಣವಿದೆ. ರುಚಿಯಲ್ಲಿ ವಗರಾಗಿದ್ದು, ಗಾತ್ರದಲ್ಲೂ ಸಾಮಾನ್ಯ ಅಳತೆಯಲ್ಲಿದೆ. ನೀರಿದ್ದು, ಕೊಬ್ಬರಿಯಿಲ್ಲ. ಕರಾವಳಿ ತೀರದ ಎಳನೀರು ಕಾಯಿಗಳು ಬರುತ್ತಿದ್ದು, ವ್ಯಾಪಾರಿಗಳಿಗೆ ಪ್ರತಿ ಕಾಯಿಗೆ 28 ರೂ.ಗಳಿಗೆ ದೊರೆಯುತ್ತಿದೆ. ಮದ್ದೂರಿನ ಕಾಯಿಗಳ ದರ ಕಡಿಮೆಯಿದ್ದು, ಗಾತ್ರದಲ್ಲಿ ದೊಡ್ಡದಿವೆ. ನೀರು ಮತ್ತು ಕೊಬ್ಬರಿ ಹೊಂದಿರುವ ಕಾಯಿಗಳಿಗೆ ಇತ್ತೀಚಿನ ದಿನಗಳಲ್ಲಿ ನೀರಿಕ್ಷಿಸಿದಷ್ಟು ಜಿಲ್ಲೆಗೆ ಬರುತ್ತಿಲ್ಲ. ಅನಿವಾರ್ಯವಾಗಿ ಕೇರಳದ ಕಾಯಿಗಳನ್ನು ಪಡೆಯುವ ಸ್ಥಿತಿ ಬಂದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೊಸ ಬಗೆಯ ಎಳನೀರು ಕಾಯಿಗಳ ಮೇಲೆ ಗ್ರಾಹಕರ ಆಸಕ್ತಿ ಹೆಚ್ಚಿದ್ದು, ವ್ಯಾಪಾರದಲ್ಲಿ ಏರಿಕೆಯಾಗಿದೆ.

    ಆತಂಕ:
    ಬೇಸಿಗೆ ಮುನ್ನವೇ ಎಳನೀರು ಕಾಯಿಗಳ ದರ ದುಪ್ಪಟ್ಟ ಹೆಚ್ಚಿರುವುದು ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ವರ್ಷ 20ರೂ.ಗಳಿಂದ 25ರೂ.ವರಿಗೂ ಎಳನೀರು ಮಾರಾಟವಾಗಿದ್ದವು. ದುಬಾರಿ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಚಳಿಗಾಲದಲ್ಲಿ 40ರೂ.ದರವಿದ್ದು, ಬೇಸಿಗೆಗೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ. ಶಾಪಿಂಗ್ ಮಾಲ್‍ನಲ್ಲೂ ಎಳನೀರು ಮಾರಾಟ ಮಾಡಲಾಗುತ್ತಿದ್ದು, ಸಂಸ್ಕರಿಸಿದ ಎಳನೀರು ಪ್ಯಾಕೇಟ್‍ಗಳು ಇನ್ನೂ ಬಂದಿಲ್ಲ. ಕೇರಳದ ಎಳನೀರನ್ನು ನಾಲ್ಕೈದು ದಿನಗಳಿಗೆ ಮಾತ್ರ ಸಂಗ್ರಹಿಸಿಡಲು ಸಾಧ್ಯವಿದೆ. ಹೀಗಾಗಿ ಬಹುದಿನಗಳವರಿಗೂ ಶೇಖರಿಸಿಡುವ ಸಂಸ್ಕರಿಸಿದ ಪ್ಯಾಕೇಟ್‍ಗಳು ಬರುವುದು ಉತ್ತಮ ಎನ್ನುತ್ತಾರೆ.

  • ಸರ್ವರೋಗಕ್ಕೂ ಪನ್ನೀರು ಎಳನೀರು

    ಸರ್ವರೋಗಕ್ಕೂ ಪನ್ನೀರು ಎಳನೀರು

    ಬೇಸಿಗೆ ಬಿಸಿಲಿಗೆ ಎನಾದರೂ ತಂಪು ಪಾನೀಯ ಕುಡಿಯೋಕೆ ಸಿಕ್ರೆ ಸಾಕಪ್ಪ ಅಂತ ಬಹಳಷ್ಟು ಮಂದಿ ಕೂಲ್ ಡ್ರಿಂಕ್ಸ್ ಮೊರೆ ಹೋಗ್ತಾರೆ. ಫ್ರಿಡ್ಜನಲ್ಲಿ ಇಟ್ಟ ಐಸ್ ಬಳಸುವ ತಂಪಾದ ಪಾನೀಯಗಳನ್ನು ಕುಡಿದ ಕ್ಷಣ ಹಾಯಾಗಿ ಅನಿಸುತ್ತೆ. ಆದರೆ ನೀವು ಕುಡಿಯುವ ಕೂಲ್ ಡ್ರಿಂಕ್ಸ್ ನಿಂದ ಆರೋಗ್ಯಕ್ಕೆ ಎಷ್ಟು ಹಾನಿ ಅಂತ ಯೋಚಿಸೊಲ್ಲ. ಸುಮ್ಮನೆ ಕೆಮಿಕಲ್ ಮಿಶ್ರಿತ, ತುಂಬಾ ದಿನಗಳಿಂದ ಸ್ಟೋರ್ ಮಾಡಿಡುವ ಪಾನೀಯಗಳನ್ನು ಕುಡಿಯುವ ಬದಲು ಆರೋಗ್ಯಕ್ಕೆ ಹಿತವಾದ ಎಳನೀರನ್ನು ಕುಡಿಯಿರಿ. ಕೆಲವರಿಗೆ ಎಳನೀರಿನ ವಿಶೇಷತೆ ಗೊತ್ತಿರಲ್ಲ. ಯಾಕೆ ಎಳನೀರು ಆರೋಗ್ಯಕ್ಕೆ ಸ್ನೇಹಿ ಎಂಬ ವಿಚಾರವು ತಿಳಿದಿರಲ್ಲ.

    ಅದಕ್ಕೆ ನಾವು ಎಳನೀರು ಯಾಕೆ ಕುಡಿಬೇಕು? ಅದರ ಮಹತ್ವ ಏನು? ಇದರ ಉಪಯೋಗವೇನು ಅಂತ ನಿಮಗೆ ತಿಳಿಸುತ್ತೇವೆ. ನೋಡೋಕೆ ಗಾತ್ರದಲ್ಲಿ ಕೊಂಚ ಚಿಕ್ಕ ದೊಡ್ಡದಾಗಿರಬಹುದಷ್ಟೇ ಆದ್ರೆ ಎಳನೀರು ಪ್ರತಿ ಊರಿನಲ್ಲಿಯೂ ಬಹುತೇಕ ವರ್ಷವಿಡಿ ದೊರೆಯುತ್ತದೆ. ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ಸಬಲಗೊಳ್ಳುತ್ತದೆ. ಎಳನೀರಿನ ಉಪಯೋಗ ಕೇವಲ ಕುಡಿಯುವುದಕ್ಕಲ್ಲ, ಸರಿಯಾಗಿ ಬಳಸಿದರೆ ದೇಹದ ಹೊರಭಾಗಗಳಾದ ಚರ್ಮ ಮತ್ತು ಕೂದಲ ಆರೈಕೆಗೂ ಒಳ್ಳೆಯದು.

    ಏಳನೀರ ಉಪಯೋಗಗಳೇನು?

    ದೇಹಕ್ಕೆ ಬೇಕಾದ ಬಹುತೇಕ ನೀರಿನ ಅಗತ್ಯತೆಗಳನ್ನು ಪೂರೈಸುತ್ತದೆ:
    ಎಳನೀರು ಒಂದು ಜೀವಾಮೃತ. ಇದರಲ್ಲಿರುವ ವಿವಿಧ ಖನಿಜ, ಲವಣ ಮತ್ತು ಸಕ್ಕರೆಯ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ದೈಹಿಕ ಚಟುವಟಿಕೆಗಳಿಗೆ ಈ ನೀರು ಅತ್ಯಂತ ಸಮರ್ಪಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವುದರಿಂದ ಶರೀರ ತನ್ನ ಚಟುವಟಿಕೆಗಳನ್ನು ಹೆಚ್ಚು ಸಮಯ ನಿರ್ವಹಿಸುವುದಕ್ಕೆ ಸಹಾಯ ಮಾಡುತ್ತದೆ. ಹೆಚ್ಚಿನ ದೈಹಿಕ ಶ್ರಮವುಳ್ಳ ಕೆಲಸಕ್ಕೆ ಪ್ರತಿದಿನ ಒಂದಾದರೂ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ.

    ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ:
    ಎಳನೀರಿನಲ್ಲಿ ಫೋಲಿಕ್ ಆ್ಯಸಿಡ್, ಫಾಸ್ಪೇಟೇಸ್, ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ ಪಾಲಿಮರೇಸಸ್ ಮೊದಲಾದ ಕಿಣ್ವಗಳು ಇದೆ. ಇವುಗಳು ವಿವಿಧ ರೀತಿಯ ಆಹಾರಗಳು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತವೆ. ಇದರಿಂದ ಆಹಾರಗಳ ಉತ್ತಮ ಅಂಶಗಳು ದೇಹಕ್ಕೆ ಸುಲಭವಾಗಿ ಲಭ್ಯವಾಗಿ ಆರೋಗ್ಯ ವೃದ್ಧಿಸುತ್ತದೆ.

    ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ:
    ಎಳನೀರಿನಲ್ಲಿ ವಿವಿಧ ಪೌಷ್ಠಿಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಸೋಡಿಯಂ ಇದ್ದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಕ್ಲೋರೈಡ್ ಇವೆ. ಆದರಿಂದ ದೇಹಕ್ಕೆ ಶಕ್ತಿ ಒಮ್ಮೆಲೇ ಬಿಡುಗಡೆಯಾಗದೇ ನಿಧಾನಕ್ಕೆ ಶಕ್ತಿ ಪೂರೈಸುತ್ತಾ ಹೋಗುತ್ತದೆ. ಇದೇ ಕಾರಣದಿಂದ ಇಡೀ ದಿನ ದೈಹಿಕ ಕೆಲಸವನ್ನು ಹೆಚ್ಚಿನ ಆಯಾಸವಿಲ್ಲದೇ ನಿರ್ವಹಿಸಲು ಸಾಧ್ಯವಾಗುತ್ತದೆ.

    ಮೂಳೆಗಳು ಗಟ್ಟಿಗೊಳ್ಳುತ್ತವೆ:
    ಹಾಲಿನ ಮೂಲಕ ಅತ್ಯಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ದೊರಕುತ್ತದೆ. ಆದರೆ ಎಳನೀರು ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ನೀಡುತ್ತದೆ. ಈ ಮೂಲಕ ಮೂಳೆಗಳು ದೃಢವಾಗುವ ಜೊತೆಗೇ ಸ್ನಾಯು ಮತ್ತು ಅಂಗಾಂಶಗಳೂ ಉತ್ತಮಗೊಳ್ಳುತ್ತವೆ.

    ಮಧುಮೇಹವನ್ನು ನಿಯಂತ್ರಿಸುತ್ತದೆ:
    ಎಳನೀರಿನಲ್ಲಿ ಸಕ್ಕರೆ ಕಡಿಮೆ ಪ್ರಮಾಣದಲ್ಲಿರುವುದರಿಂದ ಮಧುಮೇಹಿಗಳೂ (ವೈದ್ಯರ ಸಲಹೆ ಮೇರೆಗೆ) ನಿಗದಿತ ಪ್ರಮಾಣದಲ್ಲಿ ಎಳನೀರು ಸೇವಿಸಬಹುದು. ಇದರಿಂದ ರಕ್ತಸಂಚಾರ ಉತ್ತಮಗೊಳ್ಳುವುದರಿಂದ ನಿಧಾನಕ್ಕೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

    ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ:
    ಚರ್ಮದ ಆರೈಕೆಗೆ ದೇಹದ ಒಳಗಿನಿಂದಲೇ ಹೆಚ್ಚಿನ ನೀರಿನ ಪೂರೈಕೆ ಆಗಬೇಕು. ಆಗ ಮಾತ್ರ ತ್ವಚೆಯ ಅಂದ ಚಂದ ವೃದ್ಧಿಯಾಗುತ್ತದೆ. ಎಳನೀರಿನ ಸೇವನೆಯಿಂದ ಚರ್ಮಕ್ಕೆ ಅವಶ್ಯವಾದ ನೀರು ಲಭ್ಯವಾಗುವ ಮೂಲಕ ಚರ್ಮಕ್ಕೆ ಒಳಗಿನಿಂದ ಪೋಷಣೆ ನೀಡುತ್ತದೆ. ಆಗ ಚರ್ಮ ಕಾಂತಿಯುಕ್ತವಾಗುತ್ತದೆ. ಒಣಗಿದ ಮತ್ತು ಬಿಳಿಚಿದ ಚರ್ಮವೂ ನಿಧಾನಕ್ಕೆ ಸೆಳೆತ ಪಡೆದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

    ಕೂದಲು ಉದುರುವುದನ್ನು ತಡೆಯುತ್ತದೆ:
    ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಇದರಿಂದ ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತವೆ ಮತ್ತು ಉತ್ತಮ ಗುಣಮಟ್ಟದ ಕೂದಲು ಬೆಳೆಯಲು ನೆರವಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗಿ ಕೂದಲ ಹೊಳಪು ಹೆಚ್ಚುತ್ತದೆ. ಎಳನೀರಿನಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಈ ಪೋಷಕಾಂಶಗಳು ಕೂದಲಿಗೆ ಹೊಳಪು ನೀಡುವಲ್ಲಿ ಮತ್ತು ಸಾಫ್ಟ್ ಮಾಡುವಲ್ಲಿ ಉಪಯುಕ್ತವಾಗಿದೆ.

    ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ:
    ಒಂದು ವೇಳೆ ಯೂರಿಕ್ ಆ್ಯಸಿಡ್ ಅಥವಾ ಸಿಸ್ಟೈನ್ (uric acid or cystine) ಎಂಬ ಲವಣದಿಂದ ಮೂತ್ರದಲ್ಲಿ ಕಲ್ಲು ಉಂಟಾಗಿದ್ದರೆ ಅದಕ್ಕೆ ಎಳನೀರಿಗಿಂತ ಉತ್ತಮವಾದ ಔಷದಿ ಇನ್ನೊಂದಿಲ್ಲ. ಏಕೆಂದರೆ ಎಳನೀರಿನಲ್ಲಿರುವ ಪೊಟ್ಯಾಶಿಯಂ ಈ ಲವಣಗಳನ್ನು ಕರಗಿಸಿಕೊಂಡು ಮೂತ್ರಪಿಂಡಗಳನ್ನು ಕಲ್ಲುಗಳಿಂದ ಮುಕ್ತಿಗೊಳಿಸುತ್ತದೆ.

    ಎಳನೀರಿನಲ್ಲಿರುವ ಈ ನೈಸರ್ಗಿಕ ಪೌಷ್ಠಿಕಾಂಶಗಳು ದುಬಾರಿ ಪಾನೀಯಗಳಲ್ಲಿ ಸಿಗುವುದಿಲ್ಲ. ಅಲ್ಲದೆ ದೇಹದ ಆರೋಗ್ಯವನ್ನು ವೃದ್ದಿಸಿಕೊಳ್ಳಲು ಎಳನೀರು ಎಷ್ಟು ಉಪಯುಕ್ತ ಅಂತ ನಿಮಗೆ ಗೊತ್ತಾಗಿದೆ ಅಲ್ವ. ಹಾನಿಕಾರಕ ಕೂಲ್ ಡ್ರಿಂಕ್ಸ್‍ಗಳನ್ನು ಬಿಟ್ಟು ಈಗಲಾದರೂ ಆರೋಗ್ಯಕ್ಕೆ ಹಿತವಾದ ಎಳನೀರು ಕುಡಿಯಿರಿ ಉತ್ತಮ ಆರೋಗ್ಯವನ್ನು ಪಡೆಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲ್ಟಿಫ್ಲೆಕ್ಸ್, ಥಿಯೇಟರ್‍ಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್- ಎಳನೀರು ಮಾರಲು ಸರ್ಕಾರ ಆದೇಶ

    ಮಲ್ಟಿಫ್ಲೆಕ್ಸ್, ಥಿಯೇಟರ್‍ಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್- ಎಳನೀರು ಮಾರಲು ಸರ್ಕಾರ ಆದೇಶ

    ಮೈಸೂರು: ಜಿಲ್ಲೆಯ ಎಲ್ಲಾ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ ಥಿಯೇಟರ್ ಗಳಲ್ಲಿ ಕೂಲ್ ಡ್ರಿಂಕ್ಸ್ ಮಾರಾಟವನ್ನು ಮೈಸೂರು ಜಿಲ್ಲಾಡಳಿತ ಬಂದ್ ಮಾಡಿದೆ.

    ಬರಗಾಲದ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯಿಂದ ಎಲ್ಲಾ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ ಥಿಯೇಟರ್ ಗಳಲ್ಲಿ ಕಡ್ಡಾಯವಾಗಿ ಎಳನೀರು ಮಾರಾಟ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶಿಸಿದ್ದಾರೆ.

    ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಈ ಕುರಿತು ತೋಟಗಾರಿಕೆ ಸಚಿವರಿಗೆ ಪತ್ರವನ್ನು ಬರೆದಿದ್ದರು. ಈ ನಿಟ್ಟಿನಲ್ಲಿ ತೋಟಗಾರಿಕೆ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಎಲ್ಲಾ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ ಥಿಯೇಟರ್ ಗಳಲ್ಲಿ ಎಳನೀರು ಮಾರಾಟ ಮಾಡಲು ಕ್ರಮ ವಹಿಸುವಂತೆ ಪತ್ರದಲ್ಲಿ ಬರೆಯಲಾಗಿತ್ತು.

    ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿಗಳು ಆದೇಶ ಜಾರಿ ಮಾಡಿದ್ದು, ಮೈಸೂರು ಚಲನಚಿತ್ರ ಮಂದಿರಗಳ ಒಕ್ಕೂಟದ ಅಧ್ಯಕ್ಷರಿಗೆ ಈ ಕುರಿತು ಆದೇಶ ಪತ್ರ ರವಾನಿಸಿದ್ದಾರೆ.