Tag: Cockroach Sudhi

  • ಹೀರೋ ಆದ ಕಾಕ್ರೋಚ್ ಸುಧಿ: ಚೈಲ್ಡು ಸಿನಿಮಾದಲ್ಲಿ ವಿಭಿನ್ನ ಪ್ರಯತ್ನ

    ಹೀರೋ ಆದ ಕಾಕ್ರೋಚ್ ಸುಧಿ: ಚೈಲ್ಡು ಸಿನಿಮಾದಲ್ಲಿ ವಿಭಿನ್ನ ಪ್ರಯತ್ನ

    ಮಲ ಫಿಲಂಸ್ ಲಾಂಛನದಲ್ಲಿ ಚಂದ್ರಶೇಖರ್ ಕೆ ಅವರು ನಿರ್ಮಿಸುತ್ತಿರುವ, ಹಫ್ತಾ ಚಿತ್ರದ ಖ್ಯಾತಿಯ ಪ್ರಕಾಶ್ ಹೆಬ್ಬಾಳ್ ನಿರ್ದೇಶಿಸುತ್ತಿರುವ ಹಾಗೂ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ಕಾಕ್ರೋಚ್ ಸುಧಿ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ ‘ಚೈಲ್ಡು’. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆಯನ್ನು ಸಮಾಜ ಸೇವಕರಾದ ಕಿರಣ್ ರೆಡ್ಡಿ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಹಫ್ತಾ ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಚಿತ್ರವಿದು. ಆಕ್ಷನ್, ಕಾಮಿಡಿ, ಸೆಂಟಿಮೆಂಟ್, ಲವ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳನ್ನೊಳಗೊಂಡಿರುವ ಚಿತ್ರವಿದು. ಇಂದಿನಿಂದಲೇ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ. ತಾರಾ ಅನುರಾಧ, ಅಶ್ವಿನ್ ಹಾಸನ್, ವಲ್ಲಭ್, ಉದಯ್ ಪ್ರಸನ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿರುತ್ತಾರೆ. ರಂಗಾಯಣ ರಘು ಅವರ ಜೊತೆಗೂ ಮಾತುಕತೆ ನಡೆಯುತ್ತಿದೆ. ಸುಧಿ ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಪ್ರಕಾಶ್ ಹೆಬ್ಬಾಳ್ ತಿಳಿಸಿದರು.

    ಇದು ನಾನು ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರ. ನಿರ್ದೇಶಕ ಪ್ರಕಾಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಅದಕ್ಕಿಂತ ನೀವು ಈ ಚಿತ್ರದ ನಾಯಕ ಅಂತ ಹೇಳಿದ್ದು ಖುಷಿಯಾಯಿತು. ನನಗೆ ತಕ್ಕಂತಹ ಕಥೆಯನ್ನು ನಿರ್ದೇಶಕರು ಮಾಡಿದ್ದಾರೆ. ರೌಡಿಸಂ ಚಿತ್ರವಾದರೂ, ಲವ್ ಕೂಡ ಇರುತ್ತದೆ. ನನ್ನ ಲುಕ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ ನಟ ಕಾಕ್ರೋಜ್ ಸುಧಿ, ತಮ್ಮ ಬೆಳವಣಿಗೆಗೆ ಕಾರಣರಾದ ಮಾಧ್ಯಮದವರಿಗೆ ಧನ್ಯವಾದ ಹೇಳಿದರು.

    ಛಾಯಾಗ್ರಾಹಕ ಸಿದ್ದು ಕೆಂಚನಹಳ್ಳಿ, ಕಲಾವಿದರಾದ ಅಶ್ವಿನ್ ಹಾಸನ್, ವಲ್ಲಭ್ ಹಾಗೂ ಉದಯ್ ಪ್ರಸನ್ನ ಮುಂತಾದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ಡಾಟರ್ ಆಫ್ ಪಾರ್ವತಮ್ಮ ಮತ್ತು ಟಗರು ಕಾಕ್ರೋಚ್!

    ಡಾಟರ್ ಆಫ್ ಪಾರ್ವತಮ್ಮ ಮತ್ತು ಟಗರು ಕಾಕ್ರೋಚ್!

    ಬೆಂಗಳೂರು: ದಿಶಾ ಎಂಟರ್ ಪ್ರೈಸಸ್ ಬ್ಯಾನರ್ ಮೂಲಕ ಕೆ ಎಂ ಶಶಿಧರ್ ನಿರ್ಮಾಣ ಮಾಡಿರೋ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಇದೇ ತಿಂಗಳ 24ರಂದು ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಶಂಕರ್ ಜೆ ನಿರ್ದೇಶನದ ಈ ಚೊಚ್ಚಲ ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿಯಾಗಿ ಖಡಕ್ ಅಧಿಕಾರಿಯಾಗಿ ನಟಿಸಿದ್ದಾರೆ. ಪ್ರತೀ ಪಾತ್ರಗಳನ್ನೂ ಕೂಡಾ ನೆನಪಿಟ್ಟುಕೊಳ್ಳುವಂತೆಯೇ ರೂಪಿಸಿರೋ ನಿರ್ದೇಶಕರು ಆ ಪಾತ್ರಗಳಿಗೆ ತಕ್ಕುದಾದ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

    ಟಗರು ಚಿತ್ರದಲ್ಲಿ ಕಾಕ್ರೋಚ್ ಎಂಬ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದಿರೋ ಸುಧಿ ಅವರೂ ಕೂಡಾ ಈ ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಟಗರು ಚಿತ್ರಕ್ಕೂ ಮುಂಚೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಕಾಕ್ರೋಚ್ ಪಾತ್ರದಿಂದಲೇ ಮುನ್ನೆಲೆಗೆ ಬಂದಿರೋ ಸುಧಿ ಪಾತ್ರ ಹೇಗಿದೆ ಎಂಬಂಥಾ ಕುತೂಹಲ ಎಲ್ಲರಲ್ಲಿಯೂ ಇದೆ. ಆದರೆ ಚಿತ್ರತಂಡ ಅದನ್ನು ಗೌಪ್ಯವಾಗಿಟ್ಟಿದೆ.

    ಅಷ್ಟಕ್ಕೂ ಈ ಚಿತ್ರದಲ್ಲಿ ಸುಧಿ ಕಾಕ್ರೋಚ್ ಪಾತ್ರದಂಥಾದ್ದೇ ಶೇಡಿನಲ್ಲಿ ಕಾಣಿಸಿಕೊಂಡಿದ್ದಾರಾ ಎಂಬುದೂ ನಿಖರವಾಗಿ ಯಾರಿಗೂ ತಿಳಿದಿಲ್ಲ. ವಿಲನ್ ರೋಲಲ್ಲಿಯೇ ನಟಿಸಿದ್ದಾರಾ ಎಂಬುದನ್ನೂ ಚಿತ್ರತಂಡ ಹೇಳಿಕೊಂಡಿಲ್ಲ. ಆದರೆ ಕಾಕ್ರೋಚ್ ಮೂಲಕ ಫೇಮಸ್ ಆಗಿರೋ ಸುಧಿ ಅವರಿಗೆ ಈ ಚಿತ್ರದಲ್ಲಿಯೂ ವಿಶೇಷವಾದ ಪಾತ್ರವೇ ಸಿಕ್ಕಿದೆ. ಅದೇನೆಂಬುದು ಇದೇ ತಿಂಗಳ 24ರಂದು ಗೊತ್ತಾಗಲಿದೆ.

    ಕಾಕ್ರೋಚ್ ಖ್ಯಾತಿಯ ಸುಧಿ ಮಾತ್ರವಲ್ಲದೇ ಅದ್ಧೂರಿ ತಾರಾಗಣ ಈ ಚಿತ್ರದಲ್ಲಿದೆ. ಸೂರಜ್ ಗೌಡ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದರೆ, ತರಂಗ ವಿಶ್ವ, ಶ್ರೀಧರ್ ಮುಂತಾದವರೂ ನಟಿಸಿದ್ದಾರೆ. ತಾಯಿ ಮಗಳ ಸೆಂಟಿಮೆಂಟ್, ಒಂದು ರೋಚಕ ಕ್ರೈಂ ಥ್ರಿಲ್ಲರ್ ಕಥೆ ಹೊಂದಿರೋ ಈ ಸಿನಿಮಾ ಈಗಾಗಲೇ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿದೆ. ಇದೊಂದು ಭಿನ್ನ ಜಾಡಿನ ಪಕ್ಕಾ ಕಮರ್ಶಿಯಲ್ ಶೈಲಿಯ ಚಿತ್ರ. ಇದರ ಅಸಲೀ ರೋಚಕತೆ ಏನೆಂಬುದು ಇಷ್ಟರಲ್ಲಿಯೇ ಜಾಹೀರಾಗಲಿದೆ.