ಹೈದರಾಬಾದ್: ಮಾಲೀಕನನ್ನು ಕೊಂದ ಹುಂಜವನ್ನು ಪೊಲೀಸರು ಕಸ್ಟಡಿಗೆ ಪಡೆದು ಕೋರ್ಟ್‍ಗೆ ಹಾಜರು ಪಡಿಸಲಿರುವ ವಿಚಿತ್ರ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ತನುಗುಲ್ಲಾ ಸತೀಶ್ ಎಂದು ಗುರುತಿಸಲಾಗಿದೆ. ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಲೋಥುನೂರು ಪ್ರದೇಶದಲ್ಲಿ ಎಲ್ಲಮ್ಮ ದೇವಾಲಯದ ಸಮೀಪ ಅಕ್ರಮವಾಗಿ ಹುಂಜಗಳ ಅಂಕವನ್ನು ನಡೆಸಲಾಗಿತ್ತು. ಈ ವೇಳೆ ನಡೆದ ಅವಘಡದಿಂದ ಸತೀಶ್ ಸಾವನ್ನಪ್ಪಿದ್ದನು.
ಹುಂಜ ಅಂಕದಲ್ಲಿ ಕಾದಾಡಿ ಆಯಾಸಗೊಂಡಿತ್ತು. ಈ ವೇಳೆ ಸತೀಶ್ ಹುಂಜವನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಆಗ ಹುಂಜದ ಕಾಲಿಗೆ ಕಟ್ಟಿದ್ದ ಚೂರಿ ತೊಡೆಗೆ ತಾಕಿ ಸತೀಶ್ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದನು.
ಈ ಸಂಬಂಧ ಅಂಕವನ್ನು ಆಯೋಜನೆ ಮಾಡಿದ್ದ ಆಯೋಜಕನನ್ನು ವಶಕ್ಕೆ ಪಡೆದಿದ್ದೇವೆ. ಹುಂಜವನ್ನು ಹಗ್ಗದಿಂದ ಠಾಣೆಯಲ್ಲಿ ಕಟ್ಟಿ ಹಾಕಲಾಗಿದೆ. ಅದಕ್ಕೆ ಬೇಕಾದ ಆಹಾರವನ್ನು ನೀಡುತ್ತಿದ್ದೇವೆ. ಹುಂಜವನ್ನು ಕೋರ್ಟ್‍ಗೆ ಹಾಜರು ಪಡಿಸುತ್ತೇವೆ ನ್ಯಾಯಾಧೀಶರು ಹೇಳಿದಂತೆ ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ಬೆಳಗಾವಿ: ಸಾಕು ನಾಯಿ, ಬೆಕ್ಕುಗಳ ಹುಟ್ಟುಹಬ್ಬ ಆಚರಿಸೋದನ್ನ ನೋಡಿರುತ್ತೇವೆ. ಇತ್ತೀಚೆಗೆ ಹಾವೇರಿಯಲ್ಲಿ ರೈತನೋರ್ವ ತನ್ನ ಎತ್ತಿಗೆ 25 ಕೆಜಿ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿದ್ದ. ಬೆಳಗಾವಿಯ ಕುಟುಂಬವೊಂದು ಮನೆಯಲ್ಲಿ ಸಾಕಿದ ಹುಂಜಗಳ ಹುಟ್ಟುಹಬ್ಬ ಆಚರಿಸಿದೆ.
ಮೇಘನಾ ಲಂಗರಖಂಡೆ ಹುಂಜಗಳ ಬರ್ತ್ ಡೇ ಆಚರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿವೆ. ಎರಡು ಹುಂಜಗಳಿಗೆ ಶೇರು ಮತ್ತು ವೀರು ಎಂದು ಹೆಸರಿಡಲಾಗಿದೆ. ಶೇರು ಮತ್ತು ವೀರುನ ಐದನೇ ಹುಟ್ಟುಹಬ್ಬವನ್ನ ಕುಟುಂಬಸ್ಥರು ಆಚರಿಸಿದ್ದಾರೆ.
ಶೇರು ಮತ್ತು ವೀರುವಿನ ಭಾವಚಿತ್ರವುಳ್ಳ ಫೋಟೋ ಕೇಕ್ ಮಾಡಿಸಲಾಗಿತ್ತು. ಇಬ್ಬರ ಬರ್ತ್ ಡೇಗೆ ಶುಭಕೋರುವ ದೊಡ್ಡ ಬ್ಯಾನರ್ ಸಹ ಮಾಡಿಸಲಾಗಿತ್ತು. ಶೇರು ಮತ್ತು ವೀರು ನಮ್ಮ ಮನೆಯ ಸದಸ್ಯರು ಆಗಿದ್ದಾರೆ. ನಮ್ಮ ಜೊತೆಯಲ್ಲಿಯೇ ಸದಾ ಇರುತ್ತೇವೆ. ಹಾಗಾಗಿ ಹುಟ್ಟುಹಬ್ಬ ಆಚರಣೆ ಮಾಡಿದ್ದೇವೆ ಎಂದು ಕುಟುಂಬ ಹೇಳಿದೆ.
ಉಡುಪಿ: ಕೋಳಿಯೊಂದು ಪದೇ ಪದೇ ಪಕ್ಕದ ಮನೆಗೆ ಹೋಗುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಬಡಿಗೆ ತೆಗೆದುಕೊಂಡು ಬಡಿದಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಉಳ್ಳೂರು ಇಂಥದ್ದೊಂದು ಗಲಾಟೆ ಸಾಕ್ಷಿಯಾಗಿದೆ. ರವಿರಾಜ್ ಶೆಟ್ಟಿ ಎಂಬಾತ ದೊಣ್ಣೆ ತೆಗೆದುಕೊಂಡು ವಾರಿಜಾ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾನೆ. ರವಿರಾಜ್ ಮನೆಯ ಕೋಳಿ ವಾರಿಜಾ ಅವರ ಅಂಗಳಕ್ಕೆ ಹೋಗಿದೆ. ಅದನ್ನು ವಾರಿಜ ಓಡಿಸಿದ್ದಾರೆ. ಅಲ್ಲದೆ ಕೋಳಿ ಪದೇಪದೇ ಬರುತ್ತದೆ ಎಂದು ವಾರಿಜಾ ಬೈದಿದ್ದಾರೆ. ಈ ವಿಚಾರ ರಂಪಾಟಕ್ಕೆ ಕಾರಣವಾಗಿದೆ.
ಮಾತಿಗೆ ಮಾತು ಬೆಳೆದು ಜಗಳ ಮಿತಿ ಮೀರಿ ದೊಣ್ಣೆ ತೆಗೆದುಕೊಂಡು ಮಹಿಳೆಯರ ರವಿರಾಜ್ ಹಲ್ಲೆ ಮಾಡಿದ್ದಾನೆ. ಮಹಿಳೆಯರನ್ನು ಎಳೆದಾಡಿ ಅವಾಚ್ಯವಾಗಿ ಬೈದಿದ್ದಾನೆ. ಆತನಿಗೆ ಮಹಿಳೆಯೊಬ್ಬರು ಬೆಂಬಲ ನೀಡಿದ್ದು, ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯ ಮೇಲೂ ಹಲ್ಲೆಯಾಗಿದೆ.
ಕೋಳಿ ಜಗಳದ ಹಿಂದೆ ಹಳೆಯ ವೈಷಮ್ಯ ಜಮೀನಿನ ತಗಾದೆ ಇರಬಹುದು ಎನ್ನಲಾಗಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಎರಡೂ ಕುಟುಂಬವನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆದು, ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ.
ರಾಯ್‍ಪುರ: ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಸಾರ್ವಜನಿಕರನ್ನು ಸುಲಿಗೆ ಮಾಡಲು ನಿಂತಿರುವ ಪ್ರಕರಣವೊಂದು ಛತ್ತೀಸ್‍ಗಢದಲ್ಲಿ ಬೆಳಕಿಗೆ ಬಂದಿದೆ.
ಜಗದಲ್‍ಪುರ ಜಿಲ್ಲೆಯ ಸಂಭಾಗ ವಿಭಾಗದ ಗ್ರಾಮವೊಂದರಲ್ಲಿ ಪೊಲೀಸರು ಬಡವರಿಂದ ಹಣ ಸುಲಿಗೆಗೆ ನಿಂತಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.
ಹೋಳಿ ಹಬ್ಬದ ಮೊದಲು ಬಡ ರೈತರೊಬ್ಬರು 35 ಹುಂಜ ಮತ್ತು ಕೋಳಿಗಳನ್ನು ತಮ್ಮ ಸೈಕಲ್ ಮೇಲೆ ಹಾಕಿಕೊಂಡು ಮಾರಲು ಸಂಭಾಗ ಮಾರುಕಟ್ಟೆ ಬರುತ್ತಿದ್ದರು. ಮಾರ್ಗ ಮಧ್ಯೆ ಇಂದ್ರಾವತಿ ನದಿಯ ಸೇತುವೆ ಬಳಿ ಪೊಲೀಸ್ ಅಧಿಕಾರಿಯೊಬ್ಬರು ಅಡ್ಡಗಟ್ಟಿ ಎಲ್ಲ ಹುಂಜ ಮತ್ತು ಕೋಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಹುಂಜಗಳನ್ನು ವಶಕ್ಕೆ ಪಡೆದಿದ್ದು ಯಾಕೆ?: ಪೊಲೀಸರು ತನ್ನ ಎಲ್ಲ ಕೋಳಿ ಮತ್ತು ಹುಂಜಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ರೈತ ಪ್ರಶ್ನೆ ಮಾಡಿದ್ದಾರೆ. ಕೋಳಿಗಳನ್ನು ಸೈಕಲ್ ನಲ್ಲಿ ತಲೆ ಕೆಳಗಾಗಿ ಕಟ್ಟಿಕೊಂಡು ಬಂದಿದ್ದರಿಂದ ವಶಕ್ಕೆ ಪಡೆಯಲಾಗಿದೆ ಅಂತಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ರೈತನನ್ನು ಸಹ ವಶಕ್ಕೆ ಪಡೆದ ಪೊಲೀಸ್ ಕೆಲಹೊತ್ತು ಠಾಣೆಯಲ್ಲಿ ಕೂರಿಸಿ, ಬರಿಗೈಯಲ್ಲಿ ಕಳುಹಿಸಿದ್ದಾರೆ.
ಹಣ ಕೊಡಲಿಲ್ಲ: ಸದ್ಯ ಮಾರುಕಟ್ಟೆ ಕೋಳಿ ಮಾಂಸಕ್ಕೆ 300 ರಿಂದ 350 ರೂ.ವರೆಗೆ ಸಿಗುತ್ತದೆ. ಪೊಲೀಸರು ತನ್ನ 35 ಕೋಳಿಗಳನ್ನು ವಶ ಪಡೆದಿರುವುದರಿಂದ ಅಂದಾಜು 15 ಸಾವಿರ ರೂ. ನಷ್ಟವಾಗಿದೆ. ಠಾಣೆಗೆ ಕೋಳಿಗಳನ್ನು ತರುತ್ತಿದ್ದಂತೆ ಎಲ್ಲ ಪೊಲೀಸ್ ಸಿಬ್ಬಂದಿ ಒಂದು, ಎರಡು ಲೆಕ್ಕದಂತೆ ಮನೆಗೆ ತೆಗೆದುಕೊಂಡು ಹೋದ್ರು. ಆದ್ರೆ ಒಬ್ಬರೂ ಹಣ ನೀಡಲಿಲ್ಲ ಅಂತಾ ರೈತ ಹೇಳಿಕೊಂಡಿದ್ದಾರೆ.
ಸ್ಥಳೀಯರ ಪ್ರಕಾರ, ಸಂಭಾಗನಲ್ಲಿ ಭಾನುವಾರದಂದು ನಡೆಯುವ ಸಂತೆಯಲ್ಲಿ ಇಂತಹ ಘಟನೆಗಳನ್ನು ಈ ಹಿಂದೆಯೂ ನಡೆದಿದೆ. ಪೊಲೀಸರು ಹಣ ನೀಡದೇ ಕೋಳಿಗಳನ್ನು ತೆಗೆದುಕೊಂಡು ಹೋಗಿ ಭರ್ಜರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಕೆಲವು ಬಾರಿ ಪೊಲೀಸರು ಜನರಿಂದ ಹಣ ಸಹ ವಸೂಲಿ ಮಾಡಿದ್ದಾರೆ ಅಂತಾ ಸಾರ್ವಜನಿಕರು ಆರೋಪಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ತರಹದ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ. ಒಂದು ವೇಳೆ ಯಾವುದೇ ಪೊಲೀಸ್ ಅಧಿಕಾರಿ ಜನರಿಂದ ಹಣ ವಸೂಲಿ ಮಾಡಿದ್ದರೆ ಸಂಬಂಧಪಟ್ಟ ಠಾಣೆಯಲ್ಲಿ ದೂರು ದಾಖಲಿಸಬಹುದು. ಇದೂವರೆಗೂ ಅಂತಹ ದೂರುಗಳು ದಾಖಲಾಗಿಲ್ಲ, ಆದ್ರೂ ಈ ಬಗ್ಗೆ ತನಿಖೆ ನಡೆಸಲಾಗುವುದು ಅಂತಾ ಕೋತವಾಲಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಖಾದೀರ್ ಖಾನ್ ತಿಳಿಸಿದ್ದಾರೆ.
ಬ್ಯಾಂಕಾಕ್: ದೈತ್ಯ ಹೆಬ್ಬಾವೊಂದು ಹುಂಜವನ್ನ ನುಂಗಿ ನಂತರ ಅದನ್ನ ಬಾಯಿಂದ ಹೊರಹಾಕುವ ಮೈ ಜುಮ್ಮೆನಿಸೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಥೈಲ್ಯಾಂಡಿನ ಪಾತುಮ್ ಥಾನಿ ಎಂಬಲ್ಲಿ ರೈತ ನುಟ್ ವಟ್ಟಾನಾ ಎಂಬವರು ತನ್ನ ಹಿತ್ತಲಿನಿಂದ ಎರಡು ಹುಂಜಗಳು ಕಾಣೆಯಾಗಿವೆಯಲ್ಲಾ ಅಂತ ತಲೆಕೆಡಿಸಿಕೊಂಡಿದ್ರು. ಮೊದಲಿಗೆ ಅವು ತಪ್ಪಿಸಿಕೊಂಡಿರಬಹುದು ಎಂದು ಊಹಿಸಿದ್ದರು. ಆದ್ರೆ ಛಾವಣಿ ಮೇಲೆ 15 ಅಡಿ ಉದ್ದದ ದೈತ್ಯ ಹೆಬ್ಬಾವೊಂದು ಹೊಟ್ಟೆ ಊದಿಸಿಕೊಂಡಿ ನೇತಾಡ್ತಿರೋದನ್ನ ಕಂಡು ದಂಗಾಗಿದ್ರು.
ನಂತರ ರೈತ ಉರಗ ರಕ್ಷಕರನ್ನ ಸಂಪರ್ಕಿಸಿ ಸ್ಥಳಕ್ಕೆ ಕರೆಸಿದ್ರು. ಉರಗ ತಜ್ಞರು ಬಂದು ಹಾವು ನುಂಗಿದ್ದ ಹುಂಜವನ್ನ ಹೊರಕ್ಕೆ ಉಗುಳುವಂತೆ ಮಾಡಿದ್ದಾರೆ. ಹಾವನ್ನ ನೆಲದ ಮೇಲೆ ಮಲಗಿಸಿ ರಾಡ್ ನಿಂದ ಆಗಾಗ ಸವರಿ ಹುಂಜವನ್ನ ಉಗುಳುವಂತೆ ಮಾಡಿದ್ದಾರೆ. ಮೊದಲಿಗೆ ಹಾವಿನ ಬಾಯಲ್ಲಿ ಹುಂಜದ ಕಾಲು ಮಾತ್ರ ಕಾಣುತ್ತದೆ. ಆದ್ರೆ ನಂತರ ಹಾವು ಬಾಯಗಲಿಸಿದಾಗ ಸತ್ತ ಹುಂಜದ ದೇಹ ಹೊರಬರೋದನ್ನ ವಿಡಿಯೋದಲ್ಲಿ ಕಾಣಬಹುದು.
ಈ ಘಟನೆ ಡಿಸೆಂಬರ್ 27ರಂದು ನಡೆದಿದ್ದು, ಕಾಣೆಯಾಗಿದ್ದ ಮತ್ತೊಂದು ಹುಂಜವೂ ಹತ್ತಿರದಲ್ಲೇ ಸತ್ತುಬಿದ್ದಿತ್ತು ಎಂದು ರೈತ ಹೇಳಿದ್ದಾರೆ.
ಹೆಬ್ಬಾವುಗಳು ಸಾಮಾನ್ಯವಾಗಿ ಇಷ್ಟು ಗಾತ್ರದ ಹುಂಜವನ್ನ ತಿಂದಾಗ ಅದು ಜೀರ್ಣವಾಗಲು 2 ವಾರ ಬೇಕಾಗುತ್ತದೆ. ಹಾವಿಗೆ ಯಾರೂ ತೊಂದರೆ ಮಾಡದಿದ್ದರೆ ಅದು ಕೆಲವು ವಾರಗಳ ಕಾಲ ಯಾವುದೇ ಆಹಾರವಿಲ್ಲದೆ ಬದುಕುತ್ತದೆ. ಆದ್ರೆ ಈ ಹಾವಿನಿಂದ ಹುಂಜವನ್ನ ಉಗುಳಿಸಿದ ಕಾರಣ ಅದು ಮತ್ತೆ ಆಹಾರ ಹುಡುಕಬೇಕಾಗುತ್ತದೆ.
ಹಾವಿನ ಬಾಯಿಂದ ಹುಂಜ ಉಗುಳಿಸಿದ ನಂತರ ಉರಗ ರಕ್ಷಕರು ಅದಕ್ಕೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ನೀಡಿ ನಂತರ ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಕೋಲಾರ: ಬುಸುಗುಟ್ಟಿದ ನಾಗರಹಾವನ್ನು ಸಲೀಸಾಗಿ ಹುಂಜ ನುಂಗಿದ ಘಟನೆಯೊಂದು ವಕ್ಕಲೇರಿ ಗ್ರಾಮದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
ಮಂಜುನಾಥ್ ಎಂಬುವವರ ಮನೆಯಲ್ಲಿರುವ ಹುಂಜ ಈ ಸಾಹಸ ಮಾಡಿದೆ. ಮನೆಯ ಹತ್ತಿರ ತಿರುಗಾಡುತ್ತಿದ್ದಾಗ ಅಲ್ಲಿ ನಾಗರಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ತನ್ನ ಮೇಲೆ ಬುಸುಗುಟ್ಟಿದ ನಾಗರಹಾವನ್ನು ಕಂಡು ಅದನ್ನು ಹಿಡಿಯಲು ಹುಂಜ ನಾಗರಹಾವಿನ ಜೊತೆ ಸೆಣಸಾಡಿದೆ.
ನಾಗರಹಾವು ಹಾಗೂ ಹುಂಜ ಸೆಣಸಾಡಿ ಕೊನೆಯಲ್ಲಿ ನಾಗರಹಾವುವನ್ನೇ ಸಲಿಸಾಗಿ ನುಂಗಿ ನೀರು ಕುಡಿದಿದೆ. ಹುಂಜ ಹಾಗೂ ನಾಗರಹಾವಿನ ನಡುವಿನ ಕಾಳಗದ ಭಯಾನಕ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.
ಬೆಂಗಳೂರು: ಸಾಕು ಪ್ರಾಣಿ ಅಂದ್ರೆ ಥಟ್ ಅಂತಾ ನೆನಪಾಗೋದು ಮುದ್ದಾದ ನಾಯಿಗಳು. ಆದರೆ ಇಲ್ಲೊಬ್ರು ತಮ್ಮ ಮನೆಯಲ್ಲಿ ನಾಯಿಗಿಂತ ಏನೂ ಕಮ್ಮಿ ಇಲ್ಲ ಅನ್ನೋ ಹಾಗೆ ಹುಂಜಗಳನ್ನ ಸಾಕಿದ್ದಾರೆ.
ಹೌದು. ಬಸವೇಶ್ವರ ನಗರದ ನಿವಾಸಿ ರೇಖಾ ಅವರು ತಮ್ಮ ಮನೆಯಲ್ಲಿ ಹುಂಜಗಳನ್ನು ಸಾಕಿದ್ದಾರೆ. ಬಾಲ್ ಬಿಸಾಕಿದ್ರೆ ಹೇಗೆ ನಾಯಿ ಅದನ್ನ ಹಿಡಿಯುತ್ತೋ ಹಾಗೆಯೇ ಈ ಹುಂಜಗಳು ಚೆಂಡನ್ನು ಹಿಡಿದು ತರುತ್ತವೆ. ಈ ಹುಂಜಗಳ ಮತ್ತೊಂದು ವಿಶೇಷವೆಂದ್ರೆ ಮನೆಯ ಗೇಟ್ ಸದ್ದಾದ್ರೆ ಕೂಗಿ, ಯಾರೋ ಬಂದಿದ್ದಾರೆ ಅನ್ನೋದನ್ನ ಮನೆಯವ್ರಿಗೆ ತಿಳಿಸುತ್ತವೆ. ಜೊತೆಗೆ ಮನೆಯವರು ಊಟ ತಿನ್ನಿಸಿದ್ರೆ ಮಾತ್ರ ಇವುಗಳು ತಿನ್ನುವುದು.
ಈ ಹುಂಜಗಳ ಜೊತೆ ಮನೆ ಮಕ್ಕಳೆಲ್ಲಾ ಸೇರಿ ಆಟವಾಡುತ್ತಾರೆ. ಈ ಮನೆಯ ಮಕ್ಕಳಿಗೆ ಹುಂಜಗಳ ಬೆಸ್ಟ್ ಫ್ರೆಂಡ್. ರೇಖಾ ಅವರು ಒಂದು ವರ್ಷದ ಹಿಂದೆ ಮಕ್ಕಳ ಬಲವಂತಕ್ಕೆ ಹುಂಜಗಳನ್ನ ತಂದಿದ್ದರು. ಹೆಚ್ಚು ದಿನ ಬದುಕಲ್ಲಾ ಅಂತಾ ತಿಳಿದಿದ್ದ ಹುಂಜಗಳು ಈಗ ಮನೆಯ ಸದಸ್ಯರಾಗಿವೆ.