Tag: Coca Cola

  • ಟ್ವಿಟ್ಟರ್‌ ಆಯ್ತು ಈಗ ಕೋಕಾ ಕೋಲಾ ಖರೀದಿಸುತ್ತೇನೆಂದ ಎಲಾನ್‌ ಮಸ್ಕ್

    ಟ್ವಿಟ್ಟರ್‌ ಆಯ್ತು ಈಗ ಕೋಕಾ ಕೋಲಾ ಖರೀದಿಸುತ್ತೇನೆಂದ ಎಲಾನ್‌ ಮಸ್ಕ್

    ವಾಷಿಂಗ್ಟನ್: ವಿಶ್ವದ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಟ್ವಿಟ್ಟರ್‌ ಖರೀದಿಸಿದ ನಂತರ ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್‌ ಮಸ್ಕ್‌ ಈಗ ಕೋಕಾ ಕೋಲಾ ಕಂಪನಿ ಮೇಲೆ ಕಣ್ಣಿಟ್ಟಿದ್ದಾರೆ.

    ಈ ಕುರಿತು ಟ್ವೀಟ್‌ ಮಾಡಿರುವ ಎಲಾನ್‌ ಮಸ್ಕ್‌, ಕೊಕೇನ್‌ ಅನ್ನು ಮತ್ತೆ ಹಾಕುವುದಕ್ಕಾಗಿ ಕೋಕಾ ಕೋಲಾವನ್ನು ಖರೀದಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 3.36 ಲಕ್ಷ ಕೋಟಿಗೆ ಟ್ವಿಟ್ಟರ್‌ ಡೀಲ್‌ ಮಾಡಿದ ಎಲಾನ್‌ ಮಸ್ಕ್‌

    ಆದರೆ ಎಲಾನ್‌ ಮಸ್ಕ್‌ ಅವರ ಈ ಹೇಳಿಕೆಯನ್ನು ನೆಟ್ಟಿಗರು ತಮಾಷೆಯಾಗಿ ಪರಿಗಣಿಸಿದ್ದಾರೆ. ಕೋಕಾ ಕೋಲಾ ಖರೀದಿ ಸಂಬಂಧ ಮಸ್ಕ್‌ ಮಾಡಿರುವ ಟ್ವೀಟ್‌ಗೆ ಹಲವರು ತಮಾಷೆಯಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ 3.36 ಲಕ್ಷ ಕೋಟಿ ರೂ.ಗೆ ಟ್ವಿಟ್ಟರ್‌ ಅನ್ನು ಎಲಾನ್‌ ಮಸ್ಕ್‌ ಖರೀದಿಸಿದ್ದಾರೆ. ಇದರ ಬೆನ್ನಲ್ಲೇ ಕೋಕಾ ಕೋಲಾ ಖರೀದಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಮಸ್ಕ್‌ಗೆ ಅಂಬಾನಿ ಸೆಡ್ಡು – ಜಿಯೋದಿಂದ ಬರಲಿದೆ ಸ್ಯಾಟಲೈಟ್ ಇಂಟರ್‌ನೆಟ್

    ಇದು 1894 ರಲ್ಲಿ 3.5 ಗ್ರಾಂ ಕೊಕೇನ್ ಅನ್ನು ಒಳಗೊಂಡಿರುವ ಕೋಕಾ-ಕೋಲಾದ ಸಾರ್ವಜನಿಕವಾಗಿ ಮಾರಾಟವಾದ ಮೊದಲ ಬಾಟಲಿಯಾಗಿದೆ. ಅದನ್ನು ಮರಳಿ ತನ್ನಿ ಎಂದು ಕೋಕಾ ಕೋಲಾದ ಚಿತ್ರವೊಂದನ್ನು ಹಾಕಿ ನೆಟ್ಟಿಗರೊಬ್ಬರು ತಮಾಷೆಯಾಗಿ ಟ್ವೀಟ್‌ ಮಾಡಿದ್ದಾರೆ.

    ನಿಮ್ಮ ಬಳಿ ಹಣ ಇದ್ದಾಗ, ನೀವು ಎಲ್ಲವನ್ನೂ ಖರೀದಿಸಬಹುದು. ನೀವು ಪ್ರೀತಿಯನ್ನು ಸಹ ಖರೀದಿಸಿದ್ದೀರಾ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. ಶಾಂಘೈಯನ್ನು ಖರೀದಿಸಿ.. ಈಗಲೇ ಖರೀದಿಸಿ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.‌

  • ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ

    ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ

    ಬುಡಾಪೆಸ್ಟ್: ಪೋರ್ಚುಗಲ್ ಫುಟ್‍ಬಾಲ್ ಟೀಂ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಟೇಬಲ್ ಮೇಲಿರಿಸಿದ್ದ ಕೊಕಾ ಕೋಲಾ ಬಾಟಲ್ ಗಳನ್ನು ಕೆಳಗೆ ಇರಿಸಿದ ಪರಿಣಾಮ ಕಂಪನಿ 29.34 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ.

    ಶೇರ್ ಮಾರುಕಟ್ಟೆಯಲ್ಲಿ ಕೊಕಾ ಕೋಲಾ ಕಂಪನಿಯ ಶೇರುಗಳ ಮುಖಬೆಲೆ 56.10 ಡಾಲರ್ ನಿಂದ 55.22 ಡಾಲರ್ ಗೆ ಇಳಿಕೆಯಾಗಿದೆ. ಅಂದ್ರೆ ಶೇ.1.6ರಷ್ಟು ಬೆಲೆ ಇಳಿದಿದೆ. ಸುದ್ದಿಗೋಷ್ಠಿ ವೇಳೆ ಟೇಬಲ್ ಮೇಲೆ ಕೊಕಾ ಬಾಟೆಲ್ ಗಳನ್ನು ಇರಿಸಲಾಗಿತ್ತು. ವೇದಿಕೆಯತ್ತ ಬರುತ್ತಲೇ ತಮ್ಮ ಮುಂದಿದ್ದ ಕೊಕಾ ಕೋಲಾ ಬಾಟೆಲ್ ಗಳನ್ನು ಕೆಳಗಿರಿಸಿ, ನೀರು ಕುಡಿಯಿರಿ ಎಂದು ಆ ಬಾಟೆಲ್ ಮುಂದಿಟ್ಟುಕೊಂಡರು.

    ಕೊಕಾ ಕೋಲಾ ಪ್ರಾಯೋಜಕತ್ವ: ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ ಕೊಕಾ ಕೋಲಾ ಮಾರ್ಕೆಟ್ ವ್ಯಾಲ್ಯೂ 242 ಕೋಟಿ ಅರಬ್ ಡಾಲರ್ ನಿಂದ 238 ಅರಬ್ ಡಾಲರ್ ಕೋಟಿಗೆ ತಲುಪಿದೆ. 11 ದೇಶಗಳಲ್ಲಿ ನಡೆಯುತ್ತಿರುವ ಯುಇಎಫ್‍ಎ ಯುರೋ ಕಪ್ ಗೆ ಕೊಕಾ ಕೋಲಾ ಪ್ರಾಯೋಜಕತ್ವ ಪಡೆದುಕೊಂಡಿದೆ.

    ಫಿಟ್ನೆಸ್ ಡಯಟ್: 36 ವರ್ಷದ ರೊನಾಲ್ಡೊ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನ ಅಳವಡಿಸಿಕೊಂಡಿದ್ದಾರೆ. ಫಿಟ್ನೆಸ್ ಗಾಗಿ ಯಾವುದೇ ರೀತಿಯ ಕೋಲ್ಡ್ ಡ್ರಿಂಕ್ ಮತ್ತು ಏರೆಟೆಡ್ ಡ್ರಿಂಕ್ ಗಳಿಂದ ದೂರ ಇರುತ್ತಾರೆ. ಭಾರತ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ವಿಷಯದಲ್ಲಿ ರೊನಾಲ್ಡೋ ಅವರನ್ನ ಫಾಲೋ ಮಾಡುತ್ತಾರೆ. ಕೊಹ್ಲಿ ಅಂತೆ ಹಲವು ಕ್ರೀಡಾಪಟುಗಳು ಫಿಟ್ನೆಸ್ ಗಾಗಿ ರೊನಾಲ್ಡೊ ಅವರನ್ನು ಅನುಸರಿಸುತ್ತಾರೆ.

    ಈ ಪೋರ್ಚುಗಲ್ ತಂಡವನ್ನು ಗ್ರೂಫ್ ಎಫ್ ನಲ್ಲಿರಿಸಲಾಗಿದೆ. ಪೋರ್ಚುಗಲ್ ಜೊತೆ ಜರ್ಮನಿ, ಫ್ರಾನ್ಸ್ ಮತ್ತು ಹಂಗರಿ ಸಹ ಇದೇ ಗ್ರೂಫ್ ನಲ್ಲಿವೆ. ಫ್ರಾನ್ಸ್ ಫಿಫಾ ವರ್ಲ್ಡ್  ಕಪ್ ಚಾಂಪಿಯನ್ ಆಗಿದೆ. ಜರ್ಮನಿ ಮೂರು ಬಾರಿ ಯುರೋ ಚಾಂಪಿಯನ್ ಆಗಿದೆ. 2016ರ ಯುರೋ ಕಪ್ ಫೈನಲ್ ನಲ್ಲಿ ಪೋರ್ಚುಗಲ್ ಎದರು ಫ್ರಾನ್ಸ್ ಸೋಲೊಪ್ಪಿಕೊಂಡಿತ್ತು.

  • ಕೋಲಾ, ಥಮ್ಸ್‌ ಅಪ್‌ ನಿಷೇಧಿಸಲು ಆಗ್ರಹಿಸಿದ ವ್ಯಕ್ತಿಗೆ 5 ಲಕ್ಷ ದಂಡ

    ಕೋಲಾ, ಥಮ್ಸ್‌ ಅಪ್‌ ನಿಷೇಧಿಸಲು ಆಗ್ರಹಿಸಿದ ವ್ಯಕ್ತಿಗೆ 5 ಲಕ್ಷ ದಂಡ

    ನವದೆಹಲಿ: ಕೋಕಾ-ಕೋಲಾ ಮತ್ತು ಥಮ್ಸ್‌ ಅಪ್‌ ಪಾನೀಯವನ್ನು ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್‌ 5 ಲಕ್ಷ ರೂ. ದಂಡವನ್ನು ವಿಧಿಸಿದೆ.

    ಉಮೇದ್‌ಸಿನ್ಹಾ ಎಂಬವರು ಕೋಕಾ-ಕೋಲಾ ಮತ್ತು ಥಮ್ಸ್‌ ಅಪ್‌ ಪಾನೀಯವನ್ನು ನಿಷೇಧಿಸುವಂತೆ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್‌, ಹೇಮಂತ್‌ ಗುಪ್ತಾ, ಅಜಯ್‌ ರಸ್ತೋಗಿ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

    ಈ ವೇಳೆ ಪಾನೀಯ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಸಾಕ್ಷ್ಯಗಳು ಪರಿಪೂರ್ಣವಾಗಿಲ್ಲ. ಅಷ್ಟೇ ಅಲ್ಲದೇ ಈ ಎರಡೂ ಬ್ರಾಂಡ್‌ ಗಳನ್ನು ಮಾತ್ರ ಗುರಿಯಾಗಿಸಿದ್ದು ಯಾಕೆ ಎಂದು ಪೀಠ ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸಿದೆ.

    ಪರಿಚ್ಚೇಧ 32ರ ಅಡಿ ಹಕ್ಕು ಇದೆ ಎಂದು ಎಲ್ಲ ವಿಚಾರಕ್ಕೂ ಪಿಐಎಲ್‌ ಸಲ್ಲಿಸುವುದು ಸರಿಯಲ್ಲ. ಯಾವುದೇ ತಾಂತ್ರಿಕ ಜ್ಞಾನ ಇಲ್ಲದೇ ಈ ರೀತಿಯ ಅರ್ಜಿ ಸಲ್ಲಿಸಿ ಕೋರ್ಟ್‌ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ 5 ಲಕ್ಷ ರೂ. ದಂಡವನ್ನು ವಿಧಿಸುತ್ತಿದ್ದೇವೆ. ಒಂದು ತಿಂಗಳ ಒಳಗಡೆ ದಂಡವನ್ನು ಸುಪ್ರೀಂ ಕೋರ್ಟ್‌ಗೆ ಪಾವತಿಸಬೇಕು ಎಂದು ಪೀಠ ಸೂಚಿಸಿದೆ.

    ಅರ್ಜಿದಾರರು ಕೋಕಾ-ಕೋಲಾ ಮತ್ತು ಥಮ್ಸ್‌ ಅಪ್‌ ಕಂಪನಿಗಳ ಪಾನೀಯ ಮಾರಾಟಕ್ಕೆ ಕೇಂದ್ರ ಸರ್ಕಾರ ನೀಡಿರುವ ವೈಜ್ಞಾನಿಕ ವರದಿಯನ್ನು ಸಲ್ಲಿಸುವಂತೆ ಕೋರ್ಟ್‌ ಆದೇಶಿಸಬೇಕೆಂದು ಮನವಿ ಮಾಡಿದ್ದರು.

  • ಮೈಂಡ್ ಟ್ರೀಯಲ್ಲಿ ಸಿದ್ಧಾರ್ಥ್ ಷೇರು ಎಷ್ಟಿತ್ತು? ಕೋಕಾ ಕೋಲಾ ಡೀಲ್ ಎಲ್ಲಿಯವರೆಗೆ ಬಂದಿತ್ತು? ಸಾಲ ಎಷ್ಟಿತ್ತು?

    ಮೈಂಡ್ ಟ್ರೀಯಲ್ಲಿ ಸಿದ್ಧಾರ್ಥ್ ಷೇರು ಎಷ್ಟಿತ್ತು? ಕೋಕಾ ಕೋಲಾ ಡೀಲ್ ಎಲ್ಲಿಯವರೆಗೆ ಬಂದಿತ್ತು? ಸಾಲ ಎಷ್ಟಿತ್ತು?

    ಬೆಂಗಳೂರು: ಕಾಫಿ ಡೇ ಮಾಲೀಕ ಸಿದ್ಧರ್ಥ್ ಅವರು ಮಂಗಳೂರು ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲವಾದರೂ ಅವರು ಸಾಲದ ಸುಳಿಗೆ ಸಿಲುಕಿ ಈ ನಿರ್ಧಾರ ತೆಗೆದುಕೊಂಡಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ.

    ಮಾಧ್ಯಮಗಳ ವರದಿ ಪ್ರಕಾರ 2019ರ ಮಾರ್ಚ್ ವೇಳೆ ಸಿದ್ಧಾರ್ಥ್ ಅವರು ಒಟ್ಟು 6,500 ಕೋಟಿ ರೂ. ಸಾಲದಲ್ಲಿದ್ದರು. ಈ ಸಾಲ ತೀರಿಸಲು ಮೈಂಡ್ ಟ್ರೀ ಕಂಪನಿಯಲ್ಲಿದ್ದ ಷೇರನ್ನು ಲಾರ್ಸನ್ ಆಂಡ್ ಟ್ಯಾಬ್ರೋ ಕಂಪನಿಗೆ ಮಾರಾಟ ಮಾಡಿದ್ದರು. ತನ್ನ ಬಳಿಯಿದ್ದ ಒಟ್ಟು ಶೇ.20.32 ಷೇರನ್ನು 3,200 ಕೋಟಿ ರೂ.ಗೆ ಮಾರಾಟ ಮಾಡಿ ಕೆಲ ಸಾಲವನ್ನು ತೀರಿಸಿದ್ದರು.

    ಮತ್ತಷ್ಟು ಸಾಲ ಬಾಕಿ ಇದ್ದ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಅವರು ತಮ್ಮ ಕನಸಿನ ‘ಕೆಫೆ ಕಾಫಿ ಡೇ’ಯನ್ನು ಬಹು ರಾಷ್ಟ್ರೀಯ ಕೋಕಾ ಕೋಲಾ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದರು. ಈಗಾಗಲೇ ಅಮೆರಿಕದಿಂದ ಕೋಕಾ ಕೋಲಾ ಅಧಿಕಾರಿಗಳು ಸಿದ್ಧಾರ್ಥ ಒಡೆತನದ ಕಂಪನಿಗೆ ಭೇಟಿ ನೀಡಿ ಖರೀದಿ ಸಂಬಂಧ ಮಾತುಕತೆ ನಡೆಸಿದ್ದರು.

    ಅಂದಾಜು 10 ಸಾವಿರ ಕೋಟಿ ರೂ.ಗೆ ತನ್ನ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಮಾತುಕತೆ ನಡೆದಿದ್ದರೂ ಇಲ್ಲಿಯವರೆಗೆ ಯಾವುದೂ ಅಂತಿಮವಾಗಿರಲಿಲ್ಲ. ಕಂಪನಿಯನ್ನು ಮಾರಾಟ ಮಾಡಿದರೂ, ಅದರಲ್ಲಿ ಒಂದಷ್ಟು ಪ್ರಮಾಣದ ಷೇರು ಉಳಿಸಿಕೊಳ್ಳಲು ಸಿದ್ಧಾರ್ಥ್ ಅವರು ಮುಂದಾಗಿದ್ದರು. ಇದು ಕೋಕಾ ಕೋಲಾಗೆ ತೊಡಕಾಗಿತ್ತು ಎಂದು ವರದಿಯಾಗಿತ್ತು.

    ಮೈಂಡ್ ಟ್ರೀ ಷೇರು ಎಷ್ಟಿತ್ತು?
    2011ರಲ್ಲಿ ಒಂದು ಷೇರಿಗೆ 87 ರೂ. ನೀಡಿ ಶೇ.6.95 ಅಥವಾ 28 ಲಕ್ಷ ಮೈಂಡ್ ಟ್ರೀ ಷೇರುಗಳನ್ನು 24.36 ಕೋಟಿ ರೂ. ನೀಡಿ ಸಿದ್ಧಾರ್ಥ್ ಖರೀದಿ ಮಾಡಿದ್ದರು. ಇದಾದ ನಂತರ 2012 ರಲ್ಲಿ ಒಂದು ಷೇರಿಗೆ 122.3 ರೂ. ನೀಡಿ ಶೇ.3.27 ಅಥವಾ 13.47 ಲಕ್ಷ ಷೇರುಗಳನ್ನು 122.33 ಕೋಟಿ ರೂ. ನೀಡಿ ಖರೀದಿಸಿದ್ದರು. 2017 ರಲ್ಲಿ ಶೇ. 0.23 ಅಥವಾ 4.41 ಷೇರುಗಳನ್ನು ಖರೀದಿಸಿದ್ದರು. ಒಂದು ಷೇರನ್ನು 529 ರೂ. ನೀಡಿ ಖರೀದಿಸಿದ್ದ ಪರಿಣಾಮ ಸಿದ್ಧಾರ್ಥ್ ಅವರು ಒಟ್ಟು ಮೈಂಡ್ ಟ್ರೀಯಲ್ಲಿ ಶೇ.19.94 ಪಾಲು ಷೇರನ್ನು ಹೊಂದಿದ್ದರು. ಈ ಮಧ್ಯೆ ಮೈಂಡ್ ಟ್ರೀ ಕಂಪನಿ ಬೋನಸ್ ರೂಪದಲ್ಲಿ ಸಿದ್ಧಾರ್ಥ್ ಅವರಿಗೆ ಷೇರುಗಳನ್ನು ನೀಡಿತ್ತು.

    2018ರಲ್ಲಿ ಸಿದ್ಧಾರ್ಥ್ ಅವರು ಮೈಂಡ್ ಟ್ರೀ ಕಂಪನಿಯಲ್ಲಿ ಒಟ್ಟು ಶೇ.20.41 ರಷ್ಟು ಷೇರುಗಳನ್ನು ಹೊಂದಿದ್ದರು. ಇದರಲ್ಲಿ ಶೇ.3.33 ಅಥವಾ 54.69 ಲಕ್ಷ ಷೇರುಗಳು ನೇರವಾಗಿ ಸಿದ್ಧಾರ್ಥ್ ಅವರ ಹೆಸರಿನಲ್ಲಿದ್ದರೆ ಶೇ.10.63 ಅಥವಾ 1.74 ಷೇರುಗಳು ಕಾಫಿ ಡೇ ಎಂಟರ್‍ಪ್ರೈಸ್ ಹೆಸರಿನಲ್ಲಿತ್ತು. ಉಳಿದ ಶೇ.6.45 ಷೇರುಗಳು ಅಥವಾ 1.05 ಕೋಟಿ ಷೇರುಗಳು ಕಾಫಿ ಡೇ ಟ್ರೇಡಿಂಗ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿತ್ತು.

    ಷೇರು ಬೆಲೆ ಇಳಿಕೆ: ವಿಜಿ ಸಿದ್ಧಾರ್ಥ್ ನಾಪತ್ತೆಯಾದ ಬೆನ್ನಲ್ಲೇ ಕೆಫೆ ಕಾಫಿ ಡೇ ಕಂಪನಿಯ ಷೇರು ಮೌಲ್ಯ ಶೇ.20ರಷ್ಟು ಇಳಿಕೆಯಾಗಿದೆ. 2018ರ ಸಪ್ಟೆಂಬರ್ ತಿಂಗಳಿನಲ್ಲಿ ಒಂದು ಷೇರಿನ ಮೌಲ್ಯ ಗರಿಷ್ಟ 325 ರೂ.ಗೆ ಏರಿಕೆಯಾಗಿದ್ದರೆ ಮಂಗಳವಾರ ಬೆಳಗ್ಗೆ 154.05 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ. ಸೋಮವಾರದ ಮುಕ್ತಾಯಕ್ಕೆ 192 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಷೇರು ಇಂದು 38 ರೂ.ಗೆ ಕುಸಿದಿದೆ.

    ಕೆಫೆ ಕಾಫಿ ಡೇ 2018ರ ಹಣಕಾಸು ವರ್ಷದಲ್ಲಿ 1,777 ಕೋಟಿ ರೂ. ಆದಾಯ ಗಳಿಸಿದ್ದರೆ, 2019ರ 1,814 ಕೋಟಿ ರೂ. ಆದಾಯ ಗಳಿಸಿತ್ತು. 2020ರ ಮಾರ್ಚ್ ವೇಳೆಗೆ 2,250 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಹಾಕಿಕೊಂಡಿತ್ತು.

    ದೇಶದೆಲ್ಲೆಡೆ ಒಟ್ಟು 1,752 ಕೆಫೆಗಳನ್ನು ಹೊಂದಿದ್ದ ಕಂಪನಿ ಒಟ್ಟು 60 ಸಾವಿರಕ್ಕೂ ಅಧಿಕ ಕಾಫಿ ವೆಂಡಿಂಗ್ ಮಷೀನ್‍ಗಳನ್ನು ಹೊಂದಿದೆ. ಭಾರತ ಅಲ್ಲದೆ ವಿಯೆನ್ನಾ, ಝೆಕ್ ರಿಪಬ್ಲಿಕ್, ಮಲೇಷ್ಯಾ, ನೇಪಾಳ ಮತ್ತು ಈಜಿಪ್ಟ್ ನಲ್ಲೂ ಕಂಪನಿ ವ್ಯವಹಾರ ನಡೆಸುತಿತ್ತು.

    https://www.youtube.com/watch?v=S8AvtIh5VB8

  • ಕೋಕಾ ಕೋಲಾ ಕುಡಿಯುವುದನ್ನು ಬಿಟ್ಟ ಕತೆ ಹೇಳಿದ ಸಿದ್ದರಾಮಯ್ಯ

    ಕೋಕಾ ಕೋಲಾ ಕುಡಿಯುವುದನ್ನು ಬಿಟ್ಟ ಕತೆ ಹೇಳಿದ ಸಿದ್ದರಾಮಯ್ಯ

    ಬೆಂಗಳೂರು: ಕೇಂದ್ರ ಮಾಜಿ ಸಚಿವ ದಿವಂಗತ ಜಾರ್ಜ್ ಫರ್ನಾಂಡಿಸ್ ಗೌರವಾರ್ಥ ಶಾಸಕರ ಭವನದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಾವು ಕೋಕಾ ಕೋಲಾ ಕುಡಿಯುವುದನ್ನು ಬಿಟ್ಟ ಕತೆ ಹೇಳಿದರು.

    ನಾನು ಮೈಸೂರಿನಲ್ಲಿ ಕಾನೂನು ಓದುತ್ತಿದ್ದಾಗ ಜಾರ್ಜ್ ಫರ್ನಾಂಡಿಸ್ ಅವರ ಪರಿಚಯವಾಯಿತು. ಜಾರ್ಜ್ ಫರ್ನಾಂಡಿಸ್ ಅವರ ನೇತೃತ್ವದಲ್ಲಿ ನಡೆದ ಅನೇಕ ಹೋರಾಟಗಳಲ್ಲಿ ನಾನು ಕೂಡ ಪಾಲ್ಗೊಂಡಿದ್ದೇನೆ. ಹೋರಾಟಗಳ ಮೂಲಕವೇ ಜಾರ್ಜ್ ರಾಷ್ಟ್ರೀಯ ನಾಯಕರಾಗಿ ಬೆಳೆದರು ಎಂದು ಸಿದ್ದರಾಮಯ್ಯ ಹೇಳಿದರು.

    ಕೋಕಾ ಕೋಲಾ ವಿರುದ್ಧ ಜಾರ್ಜ್ ಫರ್ನಾಂಡಿಸ್ ಬೃಹತ್ ಹೋರಾಟ ನಡೆಸಿದರು. ಅವರ ಹೋರಾಟದಿಂದ ನಾನು ಸ್ಫೂರ್ತಿಗೊಂಡೆ. ಅಂದಿನಿಂದ ನಾನು ಕೋಕಾ ಕೋಲಾ ಕುಡಿಯದೇ ಇರಲು ನಿರ್ಧರಿಸಿದೆ. ನನ್ನ ಈ ನಿರ್ಧಾರಕ್ಕೆ ಕಾರಣವೇ ಜಾರ್ಜ್ ಫರ್ನಾಂಡಿಸ್ ಎಂದು ತಿಳಿಸಿದರು.

    ಈ ವೇಳೆ ಜಾನ್ಸನ್ ಮಾರ್ಕೆಟ್ ಬಳಿ ಇರುವ ಫರ್ನಾಂಡಿಸ್ ನಿವಾಸದ ಸಮೀಪದ ರಸ್ತೆಯೊಂದಕ್ಕೆ ಜಾರ್ಜ್ ಫರ್ನಾಂಡಿಸ್ ಎಂದು ಹೆಸರಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

    ಸ್ಪೀಕರ್ ರಮೇಶದ ಕುಮಾರ್, ಶಾಸಕರಾದ ಕುಮಾರ್ ಬಂಗಾರಪ್ಪ, ಮಾಧುಸ್ವಾಮಿ ಅವರು ಜಾರ್ಜ್ ಫರ್ನಾಂಡಿಸ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಜಾರ್ಜ್ ಫರ್ನಾಂಡಿಸ್ ಸಹೋದರ ಮೈಕೆಲ್ ಫರ್ನಾಂಡಿಸ್ ಹಾಗೂ ಆಪ್ತರು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಂಬೆ ಜ್ಯೂಸ್ ಮಾಡೋ ವ್ಯಕ್ತಿಯಿಂದ ಕೋಕಾಕೋಲಾ ಸ್ಥಾಪನೆ: ಮೋದಿ ವಿರುದ್ಧ ಕಿಡಿಕಾರಲು ಹೋಗಿ ರಾಗಾ ಎಡವಟ್ಟು

    ನಿಂಬೆ ಜ್ಯೂಸ್ ಮಾಡೋ ವ್ಯಕ್ತಿಯಿಂದ ಕೋಕಾಕೋಲಾ ಸ್ಥಾಪನೆ: ಮೋದಿ ವಿರುದ್ಧ ಕಿಡಿಕಾರಲು ಹೋಗಿ ರಾಗಾ ಎಡವಟ್ಟು

    ನವದೆಹಲಿ: ಕೋಕಾ ಕೋಲಾ ಪಾನಿಯ ಕಂಪೆನಿ ಸ್ಥಾಪಕ ಮೊದಲು ನಿಂಬೆ ಹಣ್ಣಿನ ಜ್ಯೂಸ್ ಮಾರಾಟ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

    ನವದೆಹಲಿಯಲ್ಲಿ ಸೋಮವಾರ ಪಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋಕಾ ಕೋಲಾ ಕಂಪೆನಿಯನ್ನು ಆರಂಭಿಸಿದವರು ಯಾರು ಗೊತ್ತೆ? ನಾನು ಹೇಳುತ್ತೇನೆ ಕೇಳಿ. ಈ ಕಂಪೆನಿಯನ್ನು ಅಮೆರಿಕದ ನಿಂಬೆ ಹಣ್ಣಿನ ಜ್ಯೂಸ್ ಮಾಡೋ ವ್ಯಕ್ತಿ ಸ್ಥಾಪನೆ ಮಾಡಿದ್ದು, ಈ ವ್ಯಕ್ತಿಯ ಕೌಶಲ್ಯವನ್ನು ಗುರುತಿಸಿ ಹೆಚ್ಚಿನ ಆದ್ಯತೆ ನೀಡಲಾಯಿತು ಎಂದು ತಿಳಿಸಿದರು.

    https://twitter.com/SirJadejaaaa/status/1006172865299959808

    ಇದಾದ ಬಳಿಕ ಮ್ಯಾಕ್ ಡೊನಾಲ್ಡ್ ಕಂಪೆನಿ ಯಾರು ಸ್ಥಾಪನೆ ಮಾಡಿದ್ದು ಎಂದು ಸಹ ಪ್ರಶ್ನೆ ಮಾಡಿದ್ದು, ಈ ಕಂಪೆನಿ ಭಾರತದಲ್ಲಿ ಎಲ್ಲೆಡೆ ಕಾಣಸಿಗುತ್ತದೆ. ಒಬ್ಬರು ಡಾಬಾ ನಡೆಸುವ ವ್ಯಕ್ತಿ ಈ ಕಂಪೆನಿಯನ್ನು ಸ್ಥಾಪಿಸಿ ಈಗ ತಮ್ಮದೇ ಬ್ರಾಂಡ್ ಸೃಷ್ಟಿ ಮಾಡಿದ್ದಾರೆ. ಆದರೆ ಭಾರತದಲ್ಲಿ ಇಂತಹ ಒಬ್ಬ ವ್ಯಕ್ತಿಯನ್ನು ನೋಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

    ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಅವರು, ಮೋದಿ ಕೇವಲ ಉದ್ಯಮಿಗಳಿಗೆ ಮಾತ್ರ ಸಹಾಯ ಮಾಡುತ್ತಾರೆ. ಭಾರತೀಯ ಯುವಕರಲ್ಲಿ ಸಾಧನೆ ಮಾಡುವ ಶಕ್ತಿ, ಜ್ಞಾನ, ಸಾಮರ್ಥ್ಯವಿದ್ದರೂ ಸಹ ಬ್ಯಾಂಕ್ ಗಳು ಸಾಲ ನೀಡುವುದಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ರಾಹುಲ್ ಅವರು ಮೋದಿ ಅವರ ನಡೆಯನ್ನು ಟೀಕಿಸಲು ವಿದೇಶಿ ಸಂಸ್ಥೆಗಳ ಉದಾಹರಣೆ ನೀಡುವಾಗ ಎಡವಟ್ಟು ಮಾಡಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಈಗ ಟ್ರೋಲ್ ಆಗುತ್ತಿದ್ದಾರೆ.

    https://twitter.com/iamsubrata7/status/1006144359413080064?

    ಮೆಕ್‍ಡೊನಾಲ್ಡ್ಸ್ 1940 ರಲ್ಲಿ ರಿಚಾಡ್ಸ್ ಮತ್ತು ಮೌರಿಸ್ ಮ್ಯಾಕ್ ಡೊನಾಲ್ಡ್ ಎಂಬವರು ಜಂಟಿಯಾಗಿ ಕಂಪೆನಿಯನ್ನು ಸ್ಥಾಪನೆ ಮಾಡಿದ್ದರು. ಇದಕ್ಕೂ ಮುನ್ನ 1937 ರಲ್ಲಿ ಹಾಟ್ ಡಾಗ್ ಸ್ಟ್ಯಾಂಡ್ ಎಂದು ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪನೆ ಮಾಡಿದ್ದರು. ಸದ್ಯ ಈ ಸಂಸ್ಥೆ ಇಂದು ವಿಶ್ವದ ನೂರು ದೇಶಗಳಲ್ಲಿ ತನ್ನ ಕೇಂದ್ರಗಳನ್ನು ಸ್ಥಾಪಿಸಿದೆ. ಉಳಿದಂತೆ ಕೋಕಾ ಕೋಲಾ ಕಂಪೆನಿಯನ್ನು 1886 ರಲ್ಲಿ ಅಮೆರಿಕಾದ ಜಾನ್ ಪೆಂಬರ್ಟನ್ ಸ್ಥಾಪನೆ ಮಾಡಿದ್ದು, ಸೋಡಾ ಬಳಸಿ ಪಾನೀಯವನ್ನು ತಯಾರು ಮಾಡಿದ್ದರು.

    ಒಟ್ಟಾರೆ ಪ್ರಧಾನಿ ಮೋದಿ ಅವರು ದೇಶದ 15 ರಿಂದ 20 ರಷ್ಟಿರುವ ಉದ್ಯಮಿಗಳಿಗೆ ಮಾತ್ರ ಸಹಾಯ ಮಾಡುತ್ತಾರೆ ಎಂದು ಆರೋಪಿಸಲು ಹೋಗಿ ರಾಹುಲ್ ಗಾಂಧಿ ಎಡವಟ್ಟು ಮಾಡಿಕೊಂಡಿದ್ದಾರೆ. ರಾಹುಲ್ ಅವರ ಹೇಳಿಕೆ ಸರಿ ಎಂದು ಸಾಕ್ಷಿ ಸಮೇತ ನೀಡಲು ಕಾಂಗ್ರೆಸ್ ಐಟಿ ಸೆಲ್ ಸದಸ್ಯರೊಬ್ಬರು ವಿಕಿಪೀಡಿಯಾದಲ್ಲಿ ಕೋಕಾಕೋಲಾ ಸ್ಥಾಪಕರು ನಿಂಬೂ ಜ್ಯೂಸ್ ಮಾರಾಟ ಮಾಡುತ್ತಿದ್ದರು ಎಂದು ಎಡಿಟ್ ಮಾಡಿ ಸಿಕ್ಕಿಬಿದ್ದಿದ್ದಾರೆ. ವಿಕಿಪೀಡಿಯಾದಲ್ಲಿ ಅಪ್ ಡೇಟ್ ಆಗಿರುವ ವಿಚಾರವನ್ನು ಯಾರೇ ಎಡಿಟ್ ಮಾಡಿದ್ದರೂ ಅದು ಎಲ್ಲ ಸದಸ್ಯರಿಗೆ ತಿಳಿಯುತ್ತದೆ. ರಾಹುಲ್ ಭಾಷಣದ ಬಳಿಕ ಈ ಅಂಶವನ್ನು ಸೇರಿಸಿದ್ದಕ್ಕೆ ಕಾಂಗ್ರೆಸ್ ಐಟಿ ಸೆಲ್ ಮತ್ತು ರಾಹುಲ್ ಗಾಂಧಿ ವಿರುದ್ಧ ಫೋಟೋ ಸಮೇತ  #AccordingToRahulGandhi  ಎಂಬ ಟ್ಯಾಗ್ ಬಳಸಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದು, ಸದ್ಯಕ್ಕೆ ದೇಶದಲ್ಲಿ ಈ ಹ್ಯಾಶ್ ಟ್ಯಾಗ್ ನಂಬರ್ ಒನ್ ಟಾಪಿಕ್ ಆಗಿದೆ.

    ಈ ಹಿಂದೆ 2013 ರಲ್ಲಿಯೂ ರಾಹುಲ್ ಗಾಂಧಿ ದಲಿತರ ಕುರಿತ ಹೇಳಿಕೆವೊಂದನ್ನು ನೀಡಿ ಸ್ಪಷ್ಟಿಕರಣ ನೀಡಲು ಆಗದೇ ಎಡವಟ್ಟು ಮಾಡಿಕೊಂಡಿದ್ದರು. ಇದನ್ನು ಓದಿ: ಬಿಜೆಪಿ ವಿರುದ್ಧ ಕಿಡಿಕಾರಲು ಹೋಗಿ ಎಡವಟ್ಟು: ಕ್ಷಮೆ ಕೇಳಿದ ದಿಗ್ವಿಜಯ್ ಸಿಂಗ್

    https://twitter.com/sharadkumawat_/status/1006141062568542213?

    https://twitter.com/Shehzad_Ind/status/1006138337772462080?

  • ಕೋಕಾ ಕೋಲಾ ಫ್ರಿಡ್ಜ್ ನಲ್ಲಿಯ ಸಿಲಿಂಡರ್ ಸ್ಫೋಟ -ಇಬ್ಬರು ಮಕ್ಕಳ ಸಾವು

    ಕೋಕಾ ಕೋಲಾ ಫ್ರಿಡ್ಜ್ ನಲ್ಲಿಯ ಸಿಲಿಂಡರ್ ಸ್ಫೋಟ -ಇಬ್ಬರು ಮಕ್ಕಳ ಸಾವು

    ವಿಜಯಪುರ: ವಿಜಯಪುರ ತಾಲೂಕಿನ ಉತ್ನಾಳ ತೋಟದ ಮನೆಯೊಂದರಲ್ಲಿ ಕೋಕಾ ಕೋಲಾ ಫ್ರಿಡ್ಜ್ ನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.

    ಸಂಜೀವ ಕುಮಾರ್ ಹೂಗಾರ್ (11) ಹಾಗೂ ಪವನ ಪ್ರಕಾಶ್ ಹೂಗಾರ್ (5) ಮೃತ ದುರ್ದೈವಿಗಳು. ಫ್ರಿಡ್ಜ್ ನಲ್ಲಿರುವ ಸಿಲಿಂಡರ್ ನ ಗ್ಯಾಸ್ ಲೀಕ್ ಆಗಿದ್ದರಿಂದ ಸ್ಫೋಟವಾಗಿದೆ ಎಂದು ಪೊಲೀಸರು ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.

    ಸಿಲಿಂಡರ್ ಸ್ಫೋಟದ ತೀವ್ರತೆಗೆ ಮಕ್ಕಳಿಬ್ಬರ ದೇಹಗಳು ಛಿದ್ರ ಛಿದ್ರವಾಗಿವೆ. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.