Tag: CoBRA Unit

  • ನಕ್ಸಲರಿಂದ ಯೋಧನ ಫೋಟೋ ರಿಲೀಸ್ – ಮಾತುಕತೆಗೆ ಮಧ್ಯವರ್ತಿ ನೇಮಿಸುವಂತೆ ಪಟ್ಟು

    ನಕ್ಸಲರಿಂದ ಯೋಧನ ಫೋಟೋ ರಿಲೀಸ್ – ಮಾತುಕತೆಗೆ ಮಧ್ಯವರ್ತಿ ನೇಮಿಸುವಂತೆ ಪಟ್ಟು

    ರಾಯ್‍ಪುರ: ಕಳೆದ ವಾರ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಗೆ 22 ಯೋಧರು ಹುತಾತ್ಮರಾಗಿ, ಹಲವು ಯೋಧರು ನಾಪತ್ತೆಯಾಗಿದ್ದರು. ಇದೀಗ ನಾಪತ್ತೆಯಾಗಿದ್ದ ಕೋಬ್ರಾ ಯುನಿಟ್‍ನ ಯೋಧರೊಬ್ಬರ ಫೋಟೋ ಒಂದನ್ನು ನಕ್ಸಲ್ ಸಂಘಟನೆ ಬಿಡುಗಡೆ ಮಾಡಿದೆ.

    ಛತ್ತೀಸ್‍ಗಢದ ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಬಿಡುಬಿಟ್ಟಿರುವ ಕುರಿತು ಮಾಹಿತಿ ಕಲೆಹಾಕಿದ್ದ ನಕ್ಸಲ್ ನಿಗ್ರಹ ಪಡೆ ಸಿಆರ್‌ಪಿಎಫ್‌ ನೊಂದಿಗೆ ಜಂಟಿ ಕಾರ್ಯಾಚರಣೆಗೆ ನಡೆಸಿತ್ತು. ಸಿಆರ್‌ಪಿಎಫ್‌ ನ ಕೋಬ್ರಾ ತಂಡ ಮತ್ತು ಜಿಲ್ಲಾ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಾಚರಣೆಗಿಳಿದು, ನಕ್ಸಲರ ಅಡಗುತಾಣದ ಮೇಲೆ ದಾಳಿ ಮಾಡಿತ್ತು. ಬಳಿಕ ಈ ದಾಳಿಯಲ್ಲಿ 22 ಮಂದಿ ಯೋಧರು ಮೃತಪಟ್ಟು ಹಲವು ಯೋಧರು ನಾಪತ್ತೆಯಾಗಿದ್ದರು.

    ಭದ್ರತಾಪಡೆಗಳು ಹಾಗೂ ನಕ್ಸಲರ ನಡುವೆ ಒಟ್ಟು 4 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ 22 ಜನ ಯೋಧರು ಮೃತಪಟ್ಟು ಉಳಿದ ಯೋಧರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಸಂಘಟನೆಯೊಂದು ಇದೀಗ ಕೋಬ್ರಾ ಯುನಿಟ್‍ನ ಯೋಧರೊಬ್ಬರ ಫೋಟೋವನ್ನು ಕಳುಹಿಸಿ ಈ ಯೋಧ ನಮ್ಮ ವಶದಲ್ಲಿದ್ದಾನೆ ಎಂದು ಪತ್ರದ ಮೂಲಕ ತಿಳಿಸಿದೆ.

    ನಕ್ಸಲ್ ಸಂಘಟನೆ ಕಳುಹಿಸಿ ಕೊಟ್ಟಿರುವ ಪತ್ರದಲ್ಲಿ ಈ ಯೋಧನನ್ನು ಬಿಡುಗಡೆ ಮಾಡಬೇಕಾದರೆ ಮಾತುಕತೆ ನಡೆಸಲು ಮಧ್ಯವರ್ತಿಯನ್ನು ನೇಮಿಸುವಂತೆ ಸರ್ಕಾರಕ್ಕೆ ತಿಳಿಸಿದೆ. ನಕ್ಸಲ್ ಸಂಘಟನೆ ಈ ಪತ್ರವನ್ನು ಸ್ಥಳೀಯ ಪತ್ರಕರ್ತರ ಮೂಲಕ ಸರ್ಕಾರಕ್ಕೆ ತಲುಪಿಸಿದೆ. ಹೀಗಾಗಿ ಸರ್ಕಾರ ಅದೇ ಪತ್ರಕರ್ತರನ್ನು ಮಾತುಕತೆಗಾಗಿ ಮಧ್ಯವರ್ತಿಯಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಐಇಡಿ ಸ್ಫೋಟ ಕಮಾಂಡರ್ ಹುತಾತ್ಮ, 10 ಯೋಧರಿಗೆ ಗಂಭೀರ ಗಾಯ

    ಐಇಡಿ ಸ್ಫೋಟ ಕಮಾಂಡರ್ ಹುತಾತ್ಮ, 10 ಯೋಧರಿಗೆ ಗಂಭೀರ ಗಾಯ

    ರಾಯ್‍ಪುರ: ಛತ್ತಿಸ್‍ಗಡದಲ್ಲಿ ನಕ್ಸಲ್ ಉಪಟಳ ಹೆಚ್ಚುತ್ತಿದ್ದು, ಇಂದು ನಕ್ಸಲರು ನಡೆಸಿದ ಐಇಡಿ(ಸುಧಾರಿತ ಸ್ಫೋಟಕ) ಸ್ಫೋಟದಲ್ಲಿ ಸಿಆರ್ ಪಿಎಫ್ ಕೋಬ್ರಾ ಯುನಿಟ್‍ನ ಅಧಿಕಾರಿ ಹುತಾತ್ಮರಾಗಿದ್ದು, 10 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಛತ್ತಿಸ್‍ಗಡದ ಸುಕ್ಮಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ರಾತ್ರಿ 8.30ರ ಸುಮಾರಿಗೆ ಅರವ್ರಾಜ್ ಮೆಟ್ಟಾ ಬೆಟ್ಟದಲ್ಲಿನ ಅರಣ್ಯ ಪ್ರದೇಶದಲ್ಲಿ ಐಇಡಿ ಸ್ಫೋಟವಾಗಿದೆ. ಕೋಬ್ರಾ(ಕಮಾಂಡೋ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆ್ಯಕ್ಷನ್)ದ 206ನೇ ಬೆಟಾಲಿಯನ್ ತಂಡ ಹಾಗೂ ಪೊಲೀಸರು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಸ್ಫೋಟ ಸಂಭವಿಸಿದೆ.

    ಚಿಂತಗುಫ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಾಜ್ಯ ರಾಜಧಾನಿ ರಾಯ್‍ಪುರದಿಂದ 450 ಕಿ.ಮೀ.ದೂರದಲ್ಲಿ ಸ್ಫೋಟ ಸಂಭವಿಸಿದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಗುಂಡಿನ ಚಕಮಕಿ ನಡೆದಿಲ್ಲ. ಸಿಆರ್ ಪಿಎಫ್‍ನ ಅಗ್ರ ಘಟಕದ 10 ಕಮಾಂಡೋಗಳು ಗಾಯಗೊಂಡಿದ್ದು, ಅವರನ್ನು ರಾಯ್‍ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಿಸದೆ ಸಹಾಯಕ ಕಮಾಂಡರ್ ನಿತಿನ್.ಪಿ.ಭಲೇರಾವ್ ಹುತಾತ್ಮರಾಗಿದ್ದಾರೆ ಎಂದು ಪೊಲೀಸ್ ಇನ್‍ಸ್ಪೆಕ್ಟರ್ ಜನರಲ್(ಬಸ್ತಾರ್ ರೇಂಜ್) ಪಿ.ಸುಂದರ್ ರಾಜ್ ಮಾಹಿತಿ ನೀಡಿದ್ದಾರೆ.

    ಹುತಾತ್ಮರಾದ ಯೋಧ ಕೋಬ್ರಾದ 206ನೇ ಬೆಟಾಲಿನ್‍ನವರಾಗಿದ್ದು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯವರಾಗಿದ್ದಾರೆ. ಗಾಯಗೊಂಡ ಇತರ ಯೋಧರು ರಾಯ್‍ಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಐವರಿಗೆ ತೀವ್ರ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿತ್ತು  ಎಂದು ಅಧಿಕಾರಿಗಳು ತಿಳಿಸಿದ್ದಾರೆ.