Tag: Coastal area

  • ಕರಾವಳಿ ಗರಿಷ್ಠ ತಾಪಮಾನ ಇಳಿಕೆ ಸಾಧ್ಯತೆ – ಹೀಟ್ ವೇವ್ ಅಲರ್ಟ್ ವಾಪಸ್

    ಕರಾವಳಿ ಗರಿಷ್ಠ ತಾಪಮಾನ ಇಳಿಕೆ ಸಾಧ್ಯತೆ – ಹೀಟ್ ವೇವ್ ಅಲರ್ಟ್ ವಾಪಸ್

    ಬೆಂಗಳೂರು: ಕರಾವಳಿಯಲ್ಲಿ ಇಂದಿನಿಂದ ಗರಿಷ್ಠ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‍ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ (Weather Bureau) ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ನೀಡಿದ್ದ ಬಿಸಿ ಗಾಳಿ ಎಚ್ಚರಿಕೆಯನ್ನು ಇಲಾಖೆ ಹಿಂಪಡೆದಿದೆ.

    ಕರಾವಳಿಯಲ್ಲಿ (Coastal Area) ಉಷ್ಣ ಅಲೆಯ ಪ್ರಭಾವ ಕಳೆದ ಎರಡು ದಿನದಿಂದ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಉಂಟಾಗುವ ಹೀಟ್ ವೇವ್ (Heatwave) ಆಗಿರದೆ, ತಾಪಮಾನದ ದಿಢೀರ್ ಏರಿಕೆಯ ಪರಿಣಾಮ ಎಂದು ಇಲಾಖೆ ಎಚ್ಚರಿಸಿತ್ತು. ಇದನ್ನೂ ಓದಿ: ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

     

    ಸಾಮಾನ್ಯವಾಗಿ ಏಪ್ರಿಲ್ -ಮೇ ತಿಂಗಳಲ್ಲಿ ಉಷ್ಣ ಅಲೆಯ ಪ್ರಮಾಣ ಹೆಚ್ಚಾಗಿ ತಾಪಮಾನ ಏರಿಕೆ ಕಾರಣವಾಗುತ್ತಿತ್ತು. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಒಂದು ತಿಂಗಳ ಮುಂಚೆಯೇ ಆ ವಾತಾವರಣ ಉಂಟಾಗಿ ಇಲಾಖೆ ಉಷ್ಣ ಅಲೆಯ ಅಲರ್ಟ್ ನೀಡಿತ್ತು. ಆದರೆ ಉಷ್ಣಾಂಶ ಎರಡು ದಿನಗಳಿಗೆ ಸೀಮಿತಗೊಂಡು ಕಡಿಮೆಯಾಗಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಉಷ್ಣ ಅಲೆಯ ಪರಿಣಾಮ ಶನಿವಾರ ಉಷ್ಣತೆಯ ಅನುಭವ ಹೆಚ್ಚಾಗಿತ್ತು. ಮಂಗಳೂರಿನಲ್ಲಿ (Mangaluru) ಗರಿಷ್ಠ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ (Celsius) ದಾಖಲಾಗಿದೆ. ಇದನ್ನೂ ಓದಿ: ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ- ಚಿಕಿತ್ಸೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು?

  • ಮುಂದಿನ 5 ದಿನವೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

    ಮುಂದಿನ 5 ದಿನವೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

    ಬೆಂಗಳೂರು: ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ ಮುಂದಿನ 5 ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಶುಕ್ರವಾರ ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಶನಿವಾರದಿಂದ 4 ದಿನಗಳವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಕರಾವಳಿ ಸಮುದ್ರ ತೀರದಲ್ಲಿ ಬಿರುಗಾಳಿ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪ್ರತಿ ಗಂಟೆಗೆ 45-55 ಕಿ.ಮೀ ವೇಗದಲ್ಲಿ, ಕೆಲವೊಮ್ಮೆ 65 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.

    ಉತ್ತರ ಒಳನಾಡಿನಲ್ಲೂ ಮುಂದಿನ 5 ದಿನ ಮಳೆ ಸಾಧ್ಯತೆಯಿದ್ದು, ಮುಂದಿನ 3 ದಿನ ಬೆಳಗಾವಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲೂ ಮುಂದಿನ 4 ದಿನ ಮಳೆ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ. ಇದನ್ನೂ ಓದಿ: ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

    ಹವಾಮಾನ ಇಲಾಖೆಯ ಮಳೆ ವರದಿಯ ಪ್ರಕಾರ ಕರಾವಳಿಯ 9 ಕಡೆ ಭಾರೀ ಮಳೆ ದಾಖಲಾಗಿದೆ. ಉತ್ತರ ಒಳನಾಡಿನ 2 ಕಡೆ ಭಾರೀ ಮಳೆ ವರದಿಯಾಗಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯ ನೋಟಾದಲ್ಲಿ 10 ಸೆ.ಮೀ, ಬೆಳಗಾವಿ ಜಿಲ್ಲೆಯ ಗುಂಜೆಯಲ್ಲಿ 7 ಸೆ.ಮೀ ಮಳೆ ದಾಖಲಾಗಿದೆ.

    ದಕ್ಷಿಣ ಒಳನಾಡಿನ 1 ಕಡೆ ಭಾರೀ ಮಳೆ ದಾಖಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 24 ಸೆ.ಮೀ ಮಳೆ ದಾಖಲಾಗಿದೆ. ದಕ್ಷಿಣ ಭಾರತದ 3 ಕಡೆ ಭಾರೀ ಮಳೆ ದಾಖಲಾಗಿದ್ದು, ಕೊಡಗು ಜಿಲ್ಲೆಯ ಭಾಗಮಂಡಲ 20 ಸೆ.ಮೀ, ಹಾಸನ ಜಿಲ್ಲೆಯ ಸಕಲೇಶಪುರ 13 ಸೆ.ಮೀ, ಕೊಡಗು ಜಿಲ್ಲೆಯ ಹುದಕೇರಿಯಲ್ಲಿ 12 ಸೆ.ಮೀ ಮಳೆ ದಾಖಲಾಗಿದೆ. ಇದನ್ನೂ ಓದಿ: ರಾಷ್ಟ್ರ ಮಟ್ಟದ ಗಾಳಿಪಟ ಉತ್ಸವ – ಬಾನಂಗಳದಲ್ಲಿ ಹಾರಲಿದೆ ಹರ್ಷ ಗಾಳಿಪಟ

    ಇಂದು ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ನಾಳೆ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಸನದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಎರಡು ದಿನ ಕರ್ನಾಟಕದಲ್ಲಿ ಮಹಾ ಮಳೆ – ಹವಾಮಾನ ಇಲಾಖೆಯಿಂದ ಎಚ್ಚರಿಕೆ

    ಎರಡು ದಿನ ಕರ್ನಾಟಕದಲ್ಲಿ ಮಹಾ ಮಳೆ – ಹವಾಮಾನ ಇಲಾಖೆಯಿಂದ ಎಚ್ಚರಿಕೆ

    ಬೆಂಗಳೂರು: ಮುಂದಿನ ಎರಡು ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಈಗಾಗಲೇ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ ಮತ್ತು ಬಳ್ಳಾರಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಮಹಾ ಮಳೆಗೆ ಹಲವಾರು ರಸ್ತೆಗಳು ಕೊಚ್ಚಿ ಹೋಗಿವೆ. ಸೇತುವೆಗಳು ಮುಳುಗಡೆಯಾಗಿವೆ. ಅಪಾರ ಪ್ರಮಾಣದ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇದರ ನಡುವೆ ಮತ್ತೆ ಮಹಾಮಳೆಯಾಗುವ ಸೂಚನೆಯನ್ನು ಇಲಾಖೆ ನೀಡಿದೆ.

    ನಾಳೆ ಮತ್ತು ನಾಡಿದ್ದು, ಕರ್ನಾಟಕದಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗ ಮತ್ತೆ ಕರಾವಳಿ ಭಾಗ, ಬಳ್ಳಾರಿ, ಧಾರವಾಡ ಮತ್ತು ಚಿಕ್ಕಮಗಳೂರಿನಲ್ಲಿ ಮಳೆಯಾಗಲಿದ್ದು, ಈ ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಈಗಾಗಲೇ ಸುರಿಯುತ್ತಿರುವ ಮಳೆಗೆ ಕಲಬುರಗಿಯ ಅಫಜಲಪುರ, ಆಳಂದ, ಚಿಂಚೋಳಿಯ ಹಲವು ಗ್ರಾಮಗಳು ಜಲಾವೃತವಾಗಿವೆ. ಕಾಳಗಿ ತಾಲೂಕಿನ ನೀಲಕಂಠೇಶ್ವರ ದೇಗುಲ ಮುಳುಗಿದೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಸಹ ಸಂಪೂರ್ಣ ಜಲಾವೃತವಾಗಿದೆ. ಕಾಗಿಣಾ ನದಿ ಅಪಾಯಮಟ್ಟ ಮೀರಿದೆ. ಕಲಬುರಗಿ-ಸೇಡಂ ರಸ್ತೆ ಸಂಚಾರ ಸ್ಥಗಿತವಾಗಿದೆ.

    ಅತ್ತ ಗಡಿಜಿಲ್ಲೆ ಬೀದರಿನ ಔರಾದ್, ಬಸವಕಲ್ಯಾಣ ತಾಲೂಕಿನ ಹಲವು ಗ್ರಾಮಗಳು ಜಲಾವೃತವಾಗಿವೆ. ಭಾಲ್ಕಿ ತಾಲೂಕಿನ ಜಮಖಂಡಿ ಗ್ರಾಮದ ಬಳಿ ಸೇತುವೆ ದಾಟುವಾಗ ಕೋಳಿ ಆಹಾರ ಸಾಗಿಸುತ್ತಿದ್ದ ಲಾರಿ ನೀರು ಪಾಲಾಗಿದೆ. ರಾಯಚೂರು ಜಿಲ್ಲೆ ಇಡಪನೂರು, ಮಿಡಗಲದಿನ್ನಿ ಗ್ರಾಮ ಮುಳುಗಡೆಯಾಗಿದೆ. ಸತತ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇತ್ತ ಯಾದಗಿರಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಮುಂಗಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಬಾಚ್ವಾರ ಗ್ರಾಮದ ಸಂಪರ್ಕ ಕಡಿತವಾಗಿದೆ.

  • ರಾಜ್ಯದ ಹಲವೆಡೆ ಮಳೆಯ ಸಿಂಚನ – ಬಿಸಿಲಿಗೆ ಬೆಂದಿದ್ದ ಭೂಮಿಗೆ ತಂಪೆರೆದ ವರುಣ

    ರಾಜ್ಯದ ಹಲವೆಡೆ ಮಳೆಯ ಸಿಂಚನ – ಬಿಸಿಲಿಗೆ ಬೆಂದಿದ್ದ ಭೂಮಿಗೆ ತಂಪೆರೆದ ವರುಣ

    – ಉಡುಪಿಯಲ್ಲಿ ಬೆಳಗಿನ ಜಾವದಿಂದ ಮಳೆ
    – ಕರಾವಳಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ
    – ಮೈಸೂರಿನಲ್ಲಿ ವರ್ಷದ ಮೊದಲ ಮಳೆ

    ಬೆಂಗಳೂರು: ಭಾನುವಾರ ರಾತ್ರಿ ಹಾಗೂ ಇಂದು ಮುಂಜಾನೆ ರಾಜ್ಯದ ಹಲವೆಡೆ ಮಳೆಯ ಸಿಂಚನವಾಗಿದೆ. ದಾವಣಗೆರೆ, ಉಡುಪಿ, ಮಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಸುರಿದ ಮಳೆ ಜನರ ಮೊಗದಲ್ಲಿ ಸಂತಸ ಮೂಡಿಸಿದೆ.

    ಕರಾವಳಿ ಜಿಲ್ಲೆ ಉಡುಪಿಯಲ್ಲಿ ವಾಡಿಕೆಯಂತೆ ಜೂನ್‍ನಲ್ಲಿ ಮಳೆಯಾಗುತ್ತದೆ. ಆದರೆ ಇದೀಗ ಅಕಾಲಿಕ ಮಳೆಯಾಗಿದ್ದು, ಮಾರ್ಚ್‍ನಲ್ಲೇ ವರ್ಷಧಾರೆ ಭೂಮಿಗೆ ಇಳಿದಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ರಣಬಿಸಿಲಿತ್ತು. ಹೀಗಾಗಿ ಭೂಮಿ ಕಾದು ಮೋಡ ನೀರಾಗಿದೆ. ಉಡುಪಿ ಜಿಲ್ಲೆಯ ಅಲ್ಲಲ್ಲಿ ಮಳೆರಾಯ ತಂಪೆರೆದಿದ್ದಾನೆ.

    ತಡರಾತ್ರಿ ಕೆಲವೆಡೆ ದಿಢೀರ್ ಮಳೆಯಾಗಿದ್ದು, ಮುಂಜಾನೆ ಕೂಡ ಮಳೆ ಮುಂದುವರಿದಿದೆ. ಬೆಳಗಿನ ಜಾವದಿಂದಲೂ ನಗರಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ. ದಿಢೀರ್ ಮಳೆ ಹೆದ್ದಾರಿ ಕೆಸರುಮಯವಾಗಿದ್ದು, ಹೊಸದಾಗಿ ನಿರ್ಮಾಣವಾದ ರಸ್ತೆಯ ಮಣ್ಣೆಲ್ಲ ಕೊಚ್ಚಿ ಹೋಗಿದೆ. ಸದ್ಯ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕುಂದಾಪುರ, ಕಾರ್ಕಳ, ಬೈಂದೂರು ವ್ಯಾಪ್ತಿಯ ಅಲ್ಲಲ್ಲಿ ಮಳೆಯಾಗಿದ್ದು, ನಗರವಾಸಿಗಳಿಗೆ ಮಳೆ ಖುಷಿಕೊಟ್ಟರೆ ಕೃಷಿಕರು, ಬೇಸಾಯಗಾರರಿಗೆ ಈ ಮಳೆ ಆತಂಕ ಮೂಡಿಸಿದೆ.

    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕೂಡ ಅಕಾಲಿಕ ಮಳೆಯಾಗಿದೆ. ಮುಂಜಾನೆ 4 ಗಂಟೆಯಿಂದ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಬೆಳ್ತಂಗಡಿ, ಕಡಬ, ಪುತ್ತೂರು ತಾಲೂಕು ಸೇರಿದಂತೆ ಮಂಗಳೂರಿನ ಹಲವೆಡೆ ವರುಣ ಮಳೆ ಸುರಿಸಿದ್ದಾನೆ. ಕಡಬ ತಾಲೂಕಿನ ರಾಮಕುಂಜ, ನೆಲ್ಯಾಡಿ, ಸವಣೂರು ಭಾಗದಲ್ಲಿ ಬಿರುಸಿನ ಮಳೆಯಾಗಿದ್ದು, ಮಂಗಳೂರು ನಗರ ಭಾಗದಲ್ಲಿ ತುಂತುರು ಮಳೆಯಾಗಿದೆ. ಇದರಿಂದ ಬಿಸಿಲಿನ ತಾಪಕ್ಕೆ ಬೆಂದಿದ್ದ ಇಳೆ ತಂಪಾಗಿದೆ.

    ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ವರುಣನ ಸಿಂಚನವಾಗಿದೆ. ಈ ವರ್ಷದ ಮೊದಲ ಮಳೆಗೆ ಇಳೆ ತಂಪಾಗಿದೆ. ಇದರಿಂದ ಅತಿಯಾದ ಧಗೆಯಿಂದ ಬಸವಳಿದಿದ್ದ ಜನರಿಗೆ ತಣ್ಣನೆಯ ಹಿತಾನುಭವವಾಗಿದೆ. ಇಂದು ಮುಂಜಾನೆ ಸುರಿದ ಮಳೆ ನಗರವಾಸಿಗಳ ಮೊಗದಲ್ಲಿ ಸಂತಸ ಮೂಡಿಸಿದೆ.

    ದಾವಣಗೆರೆ ಜಿಲ್ಲೆಯಲ್ಲಿಯೂ ವರ್ಷದ ಮೊದಲ ಮಳೆಯಾಗಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆ ಸುರಿದಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸೇರಿದಂತೆ ಹಲವೆಡೆ ವರುಣನ ಅಗಮನವಾಗಿದೆ. ಕಳೆದ 3 ತಿಂಗಳಿಂದ ಮಳೆ ವಿಶ್ರಾಂತಿ ನೀಡಿತ್ತು, ಆದರೆ ಈ ಸುರಿದ ವರ್ಷದ ಮೊದಲ ಮಳೆ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಕೆಲ ಭಾಗದಲ್ಲಿ ಜಮೀನುಗಳಲ್ಲಿ ಬೆಳೆಗಳ ಕಟಾವು ಮಾಡಲಾಗಿದ್ದು, ಎಲ್ಲಿ ಮಳೆ ಹೆಚ್ಚು ಸುರಿದು ಬೆಳೆ ಹಾಳಾಗುತ್ತದೋ ಎಂದು ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಸಾಧಾರಣ ಮಳೆಯಾದ ಕಾರಣ ರೈತರು ನಿಟ್ಟುಸಿರು ಬಿಟ್ಟಿದ್ದು, ಬಿಸಿಲ ತಾಪಕ್ಕೆ ಬೇಸತ್ತ ಜನರಿಗೆ ತಂಪಾದಂತಾಗಿದೆ. ಮಳೆಯಿಂದ ವಾತಾವರಣ ಕೂಡ ತಂಪಾಗಿದ್ದು, ಬೇಸಿಗೆ ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಸಂತಸವಾಗಿದೆ.

  • ಕ್ಯಾರ್, ಮಹಾ ನಂತರ ಕರುನಾಡಿಗೆ ಅಪ್ಪಳಿಸಲಿವೆ ಇನ್ನೆರಡು ಚಂಡಮಾರುತಗಳು

    ಕ್ಯಾರ್, ಮಹಾ ನಂತರ ಕರುನಾಡಿಗೆ ಅಪ್ಪಳಿಸಲಿವೆ ಇನ್ನೆರಡು ಚಂಡಮಾರುತಗಳು

    ಬೆಂಗಳೂರು: ಕ್ಯಾರ್, ಮಹಾ ಎರಡು ಚಂಡಮಾರುತದ ಅಬ್ಬರಕ್ಕೆ ಕರುನಾಡಿನ ಕರಾವಳಿ ಸೇರಿದಂತೆ ಬಹುತೇಕ ಭಾಗ ನಲುಗಿ ಹೋಗಿದೆ. ಈಗಾಗಲೇ ಮಹಾ ಅಬ್ಬರಕ್ಕೆ ಕರಾವಳಿ ಭಾಗದಲ್ಲಿ ಮಳೆ ಜೊತೆ ರಕ್ಕಸ ಅಲೆ ಸೃಷ್ಟಿಯಾಗಿದೆ. ಈ ಮಧ್ಯೆ ಇನ್ನೆರಡು ಚಂಡಮಾರುತದ ಎಚ್ಚರಿಕೆಯನ್ನು ಭೂಗರ್ಭ ವಿಜ್ಞಾನಿಗಳು ಕೊಟ್ಟಿದ್ದಾರೆ.

    ಕ್ಯಾರ್ ಚಂಡಮಾರುತದ ಹೊಡೆತ, ಮಹಾ ಚಂಡಮಾರುತದ ಘರ್ಜನೆ ಕರಾವಳಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ದಿನ ಹೈ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

    ಇದರ ನಡುವೆ ಇನ್ನೆರಡು ಸದ್ದಿಲ್ಲದೇ ಚಂಡಮಾರುತ ಬಂಗಾಳಕೊಲ್ಲಿಯ ಗರ್ಭದಲ್ಲಿ ಪುಟಿದೇಳಲು ತಯಾರಾಗಿದೆ. ಹೌದು ನವೆಂಬರ್ ತಿಂಗಳಲ್ಲಿ ಇನ್ನೆರಡು ಚಂಡಮಾರುತ ಫಾರ್ಮ್ ಆಗಲಿದ್ದು, ಮೊದಲ ವಾರದಲ್ಲಿಯೇ ಕರುನಾಡನ್ನು ಅಲ್ಲೋಲಕಲ್ಲೋಲ ಮಾಡುವ ಎಚ್ಚರಿಕೆಯನ್ನು ಭೂಗರ್ಭ ತಜ್ಞರು ಕೊಟ್ಟಿದ್ದಾರೆ.

    ಬಂಗಾಳಕೊಲ್ಲಿಯ ಸಾಗರದೊಳಗಿನ ಜ್ವಾಲಮುಖಿ ಸ್ಫೋಟದಿಂದ ಈ ಚಂಡಮಾರುತ ಸೃಷ್ಟಿಯಾಗಲಿದ್ದು ಜಲಪ್ರವಾಹ ತರುವ ಸಾಧ್ಯತೆ ಇದೆ. ಚಂಡಮಾರುತದ ಪರಿಣಾಮ ಬೆಂಗಳೂರು, ಮೈಸೂರು, ಕೋಲಾರ ರಾಮನಗರ ಭಾಗಕ್ಕೆ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ನವೆಂಬರ್ ತಿಂಗಳು ಚಿಲ್ಡ್ ವೆದರ್ ಇರುತ್ತೆ ಅಂತೆಲ್ಲ ಅಂದುಕೊಂಡಿದ್ದ ಕರುನಾಡಿಗೆ ಈಗ ಜಲರಕ್ಕಸನ ಕಾಟದ ಮುನ್ಸೂಚನೆ ಸಿಕ್ಕಿದ್ದು, ಭೀತಿಯ ವಾತವರಣ ಸೃಷ್ಟಿಯಾಗಿದೆ.

  • ಕರಾವಳಿಯಲ್ಲಿ ಶುರುವಾಗಿದೆ ಕ್ಯಾರ್ ಕಂಟಕ – ಉಡುಪಿಯಲ್ಲಿ ಮಳೆಗೆ ಮಹಿಳೆ ಬಲಿ

    ಕರಾವಳಿಯಲ್ಲಿ ಶುರುವಾಗಿದೆ ಕ್ಯಾರ್ ಕಂಟಕ – ಉಡುಪಿಯಲ್ಲಿ ಮಳೆಗೆ ಮಹಿಳೆ ಬಲಿ

    ಕಾರವಾರ/ ಉಡುಪಿ/ ಮಂಗಳೂರು: ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಕ್ಯಾರ್ ಚಂಡಮಾರುತದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.

    ಕಡಲ ತೀರ ಪ್ರದೇಶದಲ್ಲಿ ಬೃಹತ್ ಗಾತ್ರದ ಅಲೆಗಳು ನುಗ್ಗುತ್ತಿದ್ದು, ಕಡಲ ತೀರದಲ್ಲಿರುವ ಹಲವು ಮನೆಗಳಿಗೆ ನೀರು ನುಗ್ಗಿ ಜನರು ಒಂದೆಡೆ ಪರದಾಡುವಂತಾಗಿದ್ದರೆ, ಇನ್ನೊಂದೆಡೆ ಅಲೆಗಳ ಅಬ್ಬರಕ್ಕೆ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಉಡುಪಿಯಲ್ಲಿ ಮಳೆಗೆ ಮಹಿಳೆ ಬಲಿಯಾಗಿದ್ದಾರೆ. ಕುಂಜಾರುಗಿರಿ ಶಂಖತೀರ್ಥದಲ್ಲಿ ಸುಲೋಚನಾ(42) ಸಾವನ್ನಪ್ಪಿದ್ದಾರೆ. ಕುರ್ಕಾಲು ಗ್ರಾಮದ ಕುಂಜಾರುಗಿರಿ ಬಳಿ ಈ ಘಟನೆ ನಡೆದಿದ್ದು, ಹುಲ್ಲು ಕೊಯ್ಯಲು ಹೋಗಿದ್ದಾಗ ಆಯ ತಪ್ಪಿ ಮಹಿಳೆ ಹಳ್ಳಕ್ಕೆ ಬಿದ್ದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆ ಸಾರ್ವಜನಿಕರ ನೆರವಿನಿಂದ ಮಹಿಳೆಯ ಶವ ಪತ್ತೆಹಚ್ಚಲಾಗಿದೆ.

    ಚಂಡಮಾರುತ ಉತ್ತರ ಭಾಗಕ್ಕೆ ಚಲಿಸುತ್ತಿರುವ ಕಾರಣ ಅದರ ದೊಡ್ಡ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಭಾಗಕ್ಕೆ ತಟ್ಟಿಲ್ಲ. ಮಹಾರಾಷ್ಟ್ರ, ಗೋವಾ ಭಾಗದ ಕರಾವಳಿಗೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಕರಾವಳಿ ಮತ್ತು ಮಲೆನಾಡಿನಲ್ಲಿ ವೇಗದಲ್ಲಿ ಗಾಳಿ ಬೀಸಲಿದ್ದು ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.

    ಕ್ಯಾರ್ ಚಂಡಮಾರುತದ ಕೇಂದ್ರ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಿಂದ 240 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದ್ದು ಉತ್ತರ ಭಾಗದತ್ತ ಚಲಿಸುತ್ತಾ ಬಳಿಕ ಆಫ್ರಿಕಾ ಖಂಡದ ಒಮಾನ್ ದೇಶದತ್ತ ಚಲಿಸಲಿದೆ ಎಂದು ಹೇಳಿದೆ. ಹೀಗಾಗಿ ಸೈಕ್ಲೋನ್ ಎಫೆಕ್ಟ್ ಕರ್ನಾಟಕದ ಕರಾವಳಿಗೆ ಹೆಚ್ಚು ತಟ್ಟುವ ಸಾಧ್ಯತೆ ಕಡಿಮೆಯೆಂದೇ ಹೇಳಲಾಗುತ್ತಿದೆ. ಹೀಗಿದ್ದರೂ, ಮಂಗಳೂರಿನ ಆಸುಪಾಸಿನಲ್ಲಿ ಸಮುದ್ರ ಅಬ್ಬರಿಸತೊಡಗಿದೆ. ಉಳ್ಳಾಲದ ಸೋಮೇಶ್ವರ, ಮುಕ್ಕಚ್ಚೇರಿ, ಸುರತ್ಕಲ್ ಬಳಿಯಲ್ಲಿ ಕಡಲು ಭೋರ್ಗರೆದಿದ್ದು ತೀರ ನಿವಾಸಿಗಳನ್ನು ಆತಂಕಕ್ಕೆ ಈಡುಮಾಡಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲೆ, ಕಾಲೇಜಿಗೆ ಜಿಲ್ಲಾಧಿಕಾರಿ ರಜೆ ಸಾರಿದ್ದಾರೆ. ಅಲ್ಲದೆ, ಯಾವುದೇ ಕ್ಷಣದಲ್ಲಿ ಚಂಡಮಾರುತ ಅಪ್ಪಳಿಸಲಿದೆ ಎನ್ನುವ ಎಚ್ಚರಿಕೆ ನೀಡಿದ್ದ ಕಾರಣ ನೋಡಲ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.

    ಕಾರವಾರ ತಾಲೂಕಿನ ಮಾಜಾಳಿ, ದಾಂಡೇಭಾಗ್, ದೇವಭಾಗ್, ಡೋರ್ಲೆಭಾಗ್, ನಚಕಿನಭಾಗ್ ಸೇರಿದಂತೆ ಕಡಲ ತೀರ ಪ್ರದೇಶಕ್ಕೆ ನೀರು ನುಗ್ಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕಡಲ ತೀರದಲ್ಲಿ ನಿಲ್ಲಿಸಿದ ದೋಣಿಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಹಾನಿಯಾಗುತ್ತಿದ್ದು ಅಬ್ಬರ ಹೆಚ್ಚುತ್ತಲೇ ಇದ್ದ ಪರಿಣಾಮ ಜೆಸಿಬಿಗಳ ಮೂಲಕ ಬೋಟ್‍ಗಳನ್ನು ಬೇರೆಡೆ ಇರಿಸುವ ಕಾರ್ಯವನ್ನು ಕಡಲ ಮಕ್ಕಳು ಮಾಡುತ್ತಿದ್ದಾರೆ.

    ಕೇವಲ ಕಾರವಾರ ಮಾತ್ರವಲ್ಲದೇ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಂಬಾರ, ಕೇಣಿ, ಗಾಂವಕರ್ ವಾಡ, ಬೇಲೆಕೇರಿ, ಹಾರವಾಡ, ಕುಮಟಾ ತಾಲೂಕಿನ ಗೋಕರ್ಣ, ತದಡಿ, ಕುಡ್ಲೆ ಕಡಲ ತೀರ, ಮುರಡೇಶ್ವರದ ಕಡಲ ತೀರ ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಹುತೇಕ ತೀರ ಪ್ರದೇಶದಲ್ಲಿ ಜನರು ಪರದಾಡುತ್ತಿದ್ದಾರೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಸಹ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಚಂಡಮಾರುತ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿರುವುದರಿಂದ ಕಡಲ ಮಕ್ಕಳು ಆತಂಕ್ಕೆ ಒಳಗಾಗಿದ್ದು, ಈ ವರ್ಷ ಜೂನ್ ತಿಂಗಳಿನಿಂದಲೂ ಹವಾಮಾನ ವೈಪರಿತ್ಯದಿಂದ ಮೀನುಗಾರರು ಸರಿಯಾಗಿ ಮೀನುಗಾರಿಕೆಯೇ ಮಾಡದಂತಾಗಿದೆ.

    ವೇಗವಾಗಿ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಹಲವೆಡೆ ಮರಗಳು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಕಾರವಾರ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಇತ್ತ ಕಾಳಿ ನದಿ ನೀರು ಹೆಚ್ಚಾಗಿದ್ದರಿಂದ ಕದ್ರಾ ಜಲಾಶಯದಲ್ಲಿ 31 ಸಾವಿರ ಕ್ಯೂಸೆಕ್ ನೀರು ಜಲಾಶಯದಿಂದ ಹೊರಬಿಡಲಾಗಿದೆ. ಜಿಲ್ಲೆಯ ಕರಾವಳಿಯಲ್ಲಿ ಇನ್ನೂ ಎರಡು ದಿನಗಳ ಕಾಲ ಕ್ಯಾರ್ ಚಂಡಮಾರುತದ ಎಫೆಕ್ಟ್ ಇರಲಿದೆ ಎನ್ನಲಾಗಿದ್ದು ಜಿಲ್ಲಾಡಳಿತ ಸಹ ಜನರಿಗೆ ಸಮಸ್ಯೆ ಆಗದಂತೆ ಮುಂಜಾಗೃತ ಕ್ರಮ ಕೈಗೊಂಡಿದೆ.

  • ಅರಬ್ಬೀ ಸಮುದ್ರದಲ್ಲಿ ಎದ್ದಿದೆ ಕ್ಯಾರ್ ಚಂಡಮಾರುತ – ಮುಂದಿನ 24 ಗಂಟೆಗಳಲ್ಲಿ ಕರಾವಳಿಗೆ ತಟ್ಟಲಿದೆ ಸೈಕ್ಲೋನ್

    ಅರಬ್ಬೀ ಸಮುದ್ರದಲ್ಲಿ ಎದ್ದಿದೆ ಕ್ಯಾರ್ ಚಂಡಮಾರುತ – ಮುಂದಿನ 24 ಗಂಟೆಗಳಲ್ಲಿ ಕರಾವಳಿಗೆ ತಟ್ಟಲಿದೆ ಸೈಕ್ಲೋನ್

    ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ಕರಾವಳಿ, ಗೋವಾ ಮತ್ತು ಮಹಾರಾಷ್ಟ್ರ ಭಾಗದಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದ್ದು, ಎಲ್ಲ ಬಂದರುಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.

    ಅತ್ತ ಉತ್ತರ ಕರ್ನಾಟಕದ ಜನ ಮಳೆ, ಪ್ರವಾಹದಿಂದ ತತ್ತರಿಸಿರುವಾಗಲೇ ರಾಜ್ಯದ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದ ರತ್ನಗಿರಿಯಿಂದ 360 ಕಿಮೀ ದೂರದ ಅರಬ್ಬೀ ಸಮುದ್ರದ ಮಧ್ಯೆ ತೀವ್ರ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು, ಮಾರುತಗಳು ಸುಂಟರಗಾಳಿಯಾಗಿ ಮಾರ್ಪಡುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಈ ಮಾರುತಗಳು ದಕ್ಷಿಣದಿಂದ ಈಶಾನ್ಯ ಭಾಗ ಎಂದರೆ, ಕರ್ನಾಟಕದ ಕರಾವಳಿ ಮತ್ತು ಗೋವಾ ಭಾಗದತ್ತ ಬರುತ್ತಿದ್ದು, ತೀವ್ರ ಗಾಳಿ ಮತ್ತು ಮಳೆಯೊಂದಿಗೆ ಕರಾವಳಿಗೆ ಅಪ್ಪಳಿಸಲಿದೆ. ಮುಂದಿನ 24 ಗಂಟೆಗಳಲ್ಲಿ ಯಾವುದೇ ಕ್ಷಣದಲ್ಲಿ ಈ ಮಾರುತಗಳ ಹೊಡೆತ ಕರಾವಳಿಗೆ ತಟ್ಟಲಿದೆ ಎನ್ನುವ ಎಚ್ಚರಿಕೆ ನೀಡಲಾಗಿದೆ.

    ಯಾವುದೇ ಕ್ಷಣದಲ್ಲಿ ಮಲಯ ಮಾರುತಗಳು ಸುಂಟರ ಗಾಳಿಯೊಂದಿಗೆ ಕರಾವಳಿ ಭಾಗಕ್ಕೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಎಲ್ಲ ಬಂದರುಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಜೊತೆಗೆ ಮೀನುಗಾರಿಕೆ ಮತ್ತು ಹಡಗುಗಳ ಸಂಚಾರವನ್ನೂ ನಿರ್ಬಂಧಿಸಲಾಗಿದೆ. ಜೊತೆಗೆ ಕಡಲಿನ ಅಲೆಗಳು 3ರಿಂದ 4 ಮೀಟರ್ ಎತ್ತರಕ್ಕೆ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದ್ದು, ಯಾರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕರ್ನಾಟಕ, ಗೋವಾ ಪ್ರದೇಶದಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಕಾಣಿಸಿಕೊಳ್ಳುವ ಬಗ್ಗೆಯೂ ಮುನ್ನೆಚ್ಚರಿಕೆ ನೀಡಲಾಗಿದೆ.

    ಈಗಾಗಲೇ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಆಯಾ ಭಾಗದ ಜಿಲ್ಲಾಡಳಿತಗಳು ತೀವ್ರ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಹವಾಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ತಂಡವು ಸೂಚನೆ ನೀಡಿದೆ.

  • ಬಿಸ್ಕೆಟ್ ಎಸೆದಿದ್ದನ್ನೇ ವಿವಾದ ಮಾಡಿದವರು ಹೇಗೆ ಪ್ರವಾಹ ನಿಭಾಯಿಸುತ್ತಾರೋ ನೋಡಬೇಕಿದೆ – ರೇವಣ್ಣ

    ಬಿಸ್ಕೆಟ್ ಎಸೆದಿದ್ದನ್ನೇ ವಿವಾದ ಮಾಡಿದವರು ಹೇಗೆ ಪ್ರವಾಹ ನಿಭಾಯಿಸುತ್ತಾರೋ ನೋಡಬೇಕಿದೆ – ರೇವಣ್ಣ

    ನವದೆಹಲಿ: ದೂರದಲ್ಲಿದ್ದ ಜನರಿಗೆ ನಾನು ಬಿಸ್ಕೆಟ್ ಎಸೆದಿದ್ದನ್ನು ವಿವಾದ ಮಾಡಿದ್ದರು. ಇದೀಗ ಅವರು ಹೇಗೆ ಪ್ರವಾಹ ಪರಿಸ್ಥಿತಿ ನಿಭಾಯಿಸುತ್ತಾರೋ ಕಾದು ನೋಡೋಣ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಹರಿಹಾಯ್ದಿದ್ದಾರೆ.

    ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರವಾಹ ಪರಿಸ್ಥಿತಿ ಎದುರಿಸಲು ಕೂಡಲೇ ಸರ್ಕಾರ ಕಾರ್ಯ ಪ್ರವೃತ್ತವಾಗಬೇಕು. ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಇದನ್ನು ಹೊರತು ಪಡಿಸಿ ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆ ಭಾಗದ ಜನರೇ ಈ ಕುರಿತು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

    ಕಳೆದ ಬಾರಿ ಮಡಿಕೇರಿ ಭಾಗದಲ್ಲಿ ಪ್ರವಾಹ ಉಂಟಾದಾಗ ದೂರದಲ್ಲಿ ಇದ್ದ ಜನರಿಗೆ ನಾನು ಬಿಸ್ಕೆಟ್ ಎಸೆದಿದ್ದನ್ನೇ ವಿವಾದ ಮಾಡಿದ್ದರು. ನಾನು ಇದೀಗ ಆ ರೀತಿಯ ವಿವಾದ ಮಾಡಲು ಹೋಗುವುದಿಲ್ಲ. ಸಂಪುಟ ರಚನೆ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಸಂಪುಟ ರಚನೆ ಮಾಡುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

    ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಸಚಿವ ಸಂಪುಟದ ಕುರಿತು ನಿರ್ಧರಿಸಲಿದೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಆಡಿದ ಮಾತಿಗೆ ತಕ್ಕಂತೆ ನಡೆದುಕೊಳ್ಳಲಿ. ಸರ್ಕಾರದಲ್ಲಿ ಕುಮಾರಸ್ವಾಮಿಯವರು ಉಳಿಸಿರುವ ಹಣದಲ್ಲೇ ಪ್ರವಾಹ ಪರಿಸ್ಥಿತಿ ನಿಭಾಯಿಸಲಿ ಎಂದು ಸಲಹೆ ನೀಡಿದರು.

  • ಕರಾವಳಿಯಲ್ಲೂ ಮಂಗನ ಕಾಯಿಲೆ ಭೀತಿ – ಮೃತ ಮಂಗಗಳ ಕಳೇಬರ ಪತ್ತೆ

    ಕರಾವಳಿಯಲ್ಲೂ ಮಂಗನ ಕಾಯಿಲೆ ಭೀತಿ – ಮೃತ ಮಂಗಗಳ ಕಳೇಬರ ಪತ್ತೆ

    ಉಡುಪಿ: ಶಿವಮೊಗ್ಗ ಜಿಲ್ಲೆಯಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಂಗನ ಕಾಯಿಲೆ ಈಗ ಕರಾವಳಿ ಭಾಗಕ್ಕೂ ಹಬ್ಬಿರುವ ಭೀತಿ ವ್ಯಕ್ತವಾಗಿದ್ದು, ಶಿವಮೊಗ್ಗ ಜಿಲ್ಲೆಗೆ ತಾಗಿಕೊಂಡಿರುವ ಗ್ರಾಮಗಳಲ್ಲಿ ಮೃತ ಮಂಗಗಳ ಶವ ಪತ್ತೆಯಾಗಿದೆ.

    ಜಿಲ್ಲೆಯ ಶಿರೂರು ಮೇಲ್ಪಂಕ್ತಿ ಎಂಬಲ್ಲಿ ಎರಡು ಮಂಗಗಳ ಶವ ದೊರೆತಿದೆ. ಸಿದ್ದಾಪುರ ಕಾಡಲ್ಲಿ ಈವರೆಗೆ 9 ಮತ್ತು ಹಳ್ಳಿಹೊಳೆಯಲ್ಲಿ 2 ಮಂಗನ ಕಳೇಬರ ಪತ್ತೆಯಾಗಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಆರೋಗ್ಯ ಅಧಿಕಾರಿಗಳು ಮೃತ ಕೋತಿಯ ದೇಹದ ಕೆಲವು ಭಾಗಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಓದಿ: ಸಾವಿನ ಜ್ವರಕ್ಕೆ ಬೆಚ್ಚಿಬಿದ್ದ ಮಲೆನಾಡು ಮಂದಿ- 7 ಜನರ ಸಾವಿನ ಬಳಿಕ ಎಚ್ಚೆತ್ತ ಸರ್ಕಾರ..!

    ಕಿವಿಯಲ್ಲಿ ರಕ್ತಸ್ರಾವವಾಗಿ ಮೃತಪಟ್ಟ ರೀತಿಯಲ್ಲಿ ಕೆಲ ಮಂಗಗಳ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವರದಿ ಬಳಿಕ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ಮಂಗಗಳನ್ನು ದಹಿಸಲಾಗಿದೆ.

    ಶಿವಮೊಗ್ಗದಲ್ಲಿ ಈಗಾಗಲೇ 7 ಜನರನ್ನು ಬಲಿ ಪಡೆದಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ಆರೋಗ್ಯ ಅಧಿಕಾರಿಗಳು ಶ್ರಮವಹಿಸುತ್ತಿದ್ದಾರೆ. ಇತ್ತ ಕರಾವಳಿ ಭಾಗದಲ್ಲೂ ಮಂಗಗಳು ಅನುಮಾನಸ್ಪದವಾಗಿ ಮೃತ ಪಟ್ಟಿರುವುದು ಸ್ಥಳೀಯರ ಅಂತಕಕ್ಕೆ ಕಾರಣವಾಗಿದೆ.  ಇದನ್ನು ಓದಿ:ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv