Tag: Coast

  • Rain Alert | ರಾಜ್ಯದಲ್ಲಿ ಮುಂದುವರೆಯಲಿದೆ ಮಳೆ – ಮಲೆನಾಡು, ಕರಾವಳಿಗೆ ಆರೆಂಜ್ ಅಲರ್ಟ್

    Rain Alert | ರಾಜ್ಯದಲ್ಲಿ ಮುಂದುವರೆಯಲಿದೆ ಮಳೆ – ಮಲೆನಾಡು, ಕರಾವಳಿಗೆ ಆರೆಂಜ್ ಅಲರ್ಟ್

    ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದು, ಮುಂದಿನ ಒಂದು ವಾರಗಳ ಕಾಲ ಮಳೆಯಾಗುವ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 5 ಜಿಲ್ಲೆಗಳಿಗೆ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಉಳಿದ 24 ಜಿಲ್ಲೆಗಳಲ್ಲಿಯೂ ಸಾಧಾರಾಣ ಮಳೆಯಾಗುವ ಸಾಧ್ಯತೆ ಇದೆ.

    ದಕ್ಷಿಣ ಒಳನಾಡು ಭಾಗದಲ್ಲೂ ಮಳೆಯಾಗಲಿದ್ದು, ಚಿಕ್ಕಮಗಳೂರು, ಕೊಡಗು, ಮತ್ತು ಹಾಸನ ಜಿಲ್ಲೆಗೆ ಆರೆಂಜ್​ ಅಲರ್ಟ್​ ಹಾಗೂ ಕರಾವಳಿಯ ಉಡುಪಿ, ದಕ್ಷಿಣ ಕನ್ನಡಕ್ಕೂ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮುನ್ನೆಚ್ಚರಿಕೆಯಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ನಿರೀಕ್ಷೆ ಇದೆ. ತಮಿಳುನಾಡು, ಪುದುಚೇರಿ, ಕಾರಕಲೈನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಆಂಧ್ರಪ್ರದೇಶ, ಕರಾವಳಿ ಕರ್ನಾಟಕ, ಅಂಡಮಾನ್- ನಿಕೋಬಾರ್, ಕೇರಳ, ಲಕ್ಷದ್ವೀಪ, ಒಡಿಶಾ ರಾಜ್ಯಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ.

  • ಕರಾವಳಿಯಲ್ಲಿ ದೈವ ಕಾರ್ಣಿಕ ಹೋರಾಟ – ಕಾಂತೇರಿ ಧೂಮಾವತಿ ದೈವ ಪೂಜೆಗೆ ತಡೆ

    ಕರಾವಳಿಯಲ್ಲಿ ದೈವ ಕಾರ್ಣಿಕ ಹೋರಾಟ – ಕಾಂತೇರಿ ಧೂಮಾವತಿ ದೈವ ಪೂಜೆಗೆ ತಡೆ

    – ದೈವ ನಿಂದಿಸಿ, ಅವಮಾನಿಸಿದ್ರಾ ಅಧಿಕಾರಿಗಳು

    ಮಂಗಳೂರು: ಎಂಎಸ್‌ಇಝಡ್‌ಗಾಗಿ ಕಳೆದ 19 ವರ್ಷಗಳ ಹಿಂದೆ ಸಾವಿರಾರು ಎಕರೆ ಕೃಷಿ ಭೂಮಿ, ಮಠ, ಮಂದಿರ, ಮಸೀದಿ, ಚರ್ಚ್‌ ಎಲ್ಲವೂ ನಾಶವಾಗಿತ್ತು. ಆದರೆ, 800 ವರ್ಷಗಳ ಇತಿಹಾಸ ಇರುವ ಆ ಒಂದು ದೈವಸ್ಥಾನವನ್ನು ಸ್ಥಳಾಂತರಿಸಲು ಯಾರಿಗೂ ಸಾಧ್ಯವಾಗಿಲ್ಲ. ಅಂದಿನಿಂದ ಇಂದಿನವರೆಗೂ ಆ ದೈವಸ್ಥಾನ ಎಂಎಸ್‌ಇಝಡ್‌ನ ಆವರಣದೊಳಗೆ ಉಳಿದುಕೊಂಡು ಆರಾಧನೆಗೊಳ್ಳುತ್ತಿತ್ತು. ಇದೀಗ ಆ ದೈವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗದಂತೆ ಅಧಿಕಾರಿಗಳು ತಡೆಯೊಡ್ಡಿದ್ದಾರೆ.

    ತುಳುನಾಡಿನಲ್ಲಿ ದೈವಗಳು ತಮ್ಮ ಇರುವಿಕೆ ಹಾಗೂ ಕಾರ್ಣಿಕವನ್ನು ಆಗ್ಗಾಗ್ಗೆ ತೋರಿಸುತ್ತಲೇ ಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳೂರು ವಿಶೇಷ ಆರ್ಥಿಕ ವಲಯದ ಆವರಣದಲ್ಲಿ ಕಳೆದ 19 ವರ್ಷಗಳಿಂದ ಆರಾಧನೆಗೊಳ್ಳುತ್ತಿರುವ ನೆಲ್ಲಿದಡಿಗುತ್ತು ಶ್ರೀ ಕಾಂತೇರಿ ಧೂಮಾವತಿ ದೈವ ಇದೆ.

    2006ರಲ್ಲಿ ಮಂಗಳೂರು ಹೊರವಲಯ ಬಜಪೆ ಸಮೀಪ ಸುಮಾರು ಎರಡೂವರೆ ಸಾವಿರ ಎಕರೆ ಭೂಮಿಯನ್ನು ಎಂಇಝಢ್‌ಗಾಗಿ ಭೂಸ್ವಾಧೀನ ಮಾಡಲಾಗಿತ್ತು. ಸಾವಿರಾರು ಎಕರೆ ಕೃಷಿ ಭೂಮಿ ಸೇರಿ ಮನೆ, ಮಠ, ಮಂದಿರ, ಮಸೀದಿ, ಚರ್ಚ್ ಧ್ವಂಸ ಮಾಡಿ ಜನರನ್ನು, ದೈವ-ದೇವರನ್ನು ಸ್ಥಳಾಂತರ ಮಾಡಿ ಕೈಗಾರಿಕಾ ವಲಯವನ್ನು ಸ್ಥಾಪಿಸಲಾಗಿತ್ತು. ಆದರೆ, ಅಲ್ಲೇ ಇದ್ದ ನೆಲ್ಲಿದಡಿಗುತ್ತು ಶ್ರೀಕಾಂತೇರಿ ಧೂಮಾವತಿ ದೈವಸ್ಥಾನವನ್ನು ಮಾತ್ರ ಧ್ವಂಸ ಮಾಡಲು, ಸ್ಥಳಾಂತರ ಮಾಡಲು ಯಾರಿಗೂ ಸಾಧ್ಯವಾಗಿಲ್ಲ. ಅದನ್ನು ಮುಟ್ಟಲು ಬಂದಾಗ ದೈವದ ಶಕ್ತಿಯಿಂದಲೇ ದೈವದ ಭೂಮಿ ಹಾಗೂ ದೈವ ಅಲ್ಲೇ ಉಳಿದಿತ್ತು. ಇಡೀ ಊರಿಗೆ ಊರನ್ನೇ ಒಕ್ಕಲೆಬ್ಬಿಸಿದರೂ ಈ ಕಾಂತೇರಿ ಧೂಮಾವತಿ ದೈವವನ್ನು ಒಕ್ಕಲೆಬ್ಬಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೈಗಾರಿಕಾ ಪ್ರದೇಶದ ಒಳಗೇ ಉಳಿದುಕೊಂಡ ದೈವದ ಪೂಜೆ, ಉತ್ಸವ, ನೇಮೋತ್ಸವ ಮಾಡಲಾಗ್ತಿತ್ತು. ಕಳೆದ 19 ವರ್ಷದಿಂದಲೂ ಅನುಮತಿ ಪಡೆದು ದೈವಾರಾಧನೆ ಮಾಡಲಾಗುತ್ತಿತ್ತು. ಆದರೆ, ಇದೀಗ ಅದಕ್ಕೂ ಅಧಿಕಾರಿಗಳು ತಡೆಯೊಡ್ಡಿದ್ದು, ದೈವ ಭಕ್ತರನ್ನು ರೊಚ್ಚಿಗೆಬ್ಬಿಸಿದೆ.

    ಪ್ರತಿ ತಿಂಗಳ ಸಂಕ್ರಮಣದಂದು ದೈವದ ಪೂಜೆ ಮಾಡಲು ನೆಲ್ಲಿದಡಿಗುತ್ತಿನ ಕುಟುಂಬಸ್ಥರು ಎಂಎಸ್‌ಇಝಡ್‌ನಿಂದ ಒಳ ಹೋಗುವ ಅನುಮತಿ ಪಡೆಯುತ್ತಿದ್ದರು. ನೇಮೋತ್ಸವ ನಡೆಯುವಾಗಲೂ ಅನುಮತಿ ಪಡೆದು ನಡೆಸುತ್ತಿದ್ದರು. ಅಧಿಕಾರಿ, ಸಿಬ್ಬಂದಿ ಕೂಡ ಭಾಗಿಯಾಗುತ್ತಿದ್ದರು. ಕಳೆದ 19 ವರ್ಷದಿಂದ ಇದು ನಡೆಯುತ್ತಿದ್ದರೂ, ಇದೀಗ ಬಂದ ಅಧಿಕಾರಿಗಳು ಆರ್ಥಿಕ ವಲಯದ ಆವರಣಕ್ಕೆ ಪ್ರವೇಶ ನೀಡಲು ನಿರಾಕರಿಸಿದ್ದಾರೆ. ಕಳೆದ ಸಂಕ್ರಮಣದಲ್ಲಿ ದೈವಾರಾಧನೆಗೆ ಅಡ್ಡಿಪಡಿಸಿದ್ದಾರೆ. ಇದು ತುಳುನಾಡಿನ ದೈವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

  • ಮುಂದುವರಿದ ವರುಣನ ಆರ್ಭಟ – ಮಹಿಳೆ ಸೇರಿ ನಾಲ್ವರ ಬಲಿ

    ಮುಂದುವರಿದ ವರುಣನ ಆರ್ಭಟ – ಮಹಿಳೆ ಸೇರಿ ನಾಲ್ವರ ಬಲಿ

    ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಆರ್ಭಟ ದಿನದಿಂದ ದಿನಕ್ಕೆ ಒಂದೊಂದೇ ಜಿಲ್ಲೆಗೆ ವ್ಯಾಪಿಸುತ್ತಿದೆ. ಕರಾವಳಿಯಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು ನದಿಯಲ್ಲಿ ಮಹಿಳೆ ಒಬ್ಬರು ಬಿದ್ದು ಮೃತಪಟ್ಟಿದ್ದಾರೆ.

    ಬೆಳ್ತಂಗಡಿಯ ಶಿರ್ಲಾಲಿನಲ್ಲಿ ತುಂಬಿ ಹರಿಯುತ್ತಿದ್ದ ಹೊಳೆಗೆ ಬಿದ್ದು ರೇವತಿ (50) ಸಾವನ್ನಪ್ಪಿದ್ದಾರೆ. ಕೊಡಗಿನಲ್ಲಿ ಸೋಮವಾರಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಕೊಂಬೆ ಬಿದ್ದು, 67 ವರ್ಷದ ಪಿ.ಸಿ ಅಹ್ಮದ್ ಕುಟ್ಟಿ ಹಾಜಿ ಮೃತರಾದ್ರೆ, ಕುಶಾಲನಗರದ ಗುಮ್ಮನಕೊಲ್ಲಿಯ ಕಾವೇರಿ ನದಿಯಲ್ಲಿ ಮೈಸೂರು ಮೂಲದ ರಮೇಶ್ ಎಂಬವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಾಸನದ ಸಕಲೇಶಪುರ ತಾಲೂಕಿನ ಕಳಲೇ ಗ್ರಾಮದಲ್ಲಿ ಪುಟ್ಟಯ್ಯ (60) ಎಂಬರ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಮಂಗಳೂರಿನ ಕಾರ್ ಸ್ಟ್ರೀಟ್‍ನಲ್ಲಿ ಗಾಳಿ ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದು, ಹಳೇ ಕಟ್ಟಡ ಕುಸಿದು ಬಿದ್ದಿದೆ. ಬಿರುಗಾಳಿ ಜೊತೆಗೆ ಕಡಲಿನ ರೌದ್ರ ನರ್ತನ ಜೋರಾಗಿದ್ದು, ಸಮುದ್ರ ಬದಿಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಭಾರೀ ಮಳೆಯಾಗಿದ್ದು, ನಗರವೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 153.4 ಮಿಲಿ ಮೀಟರ್ ಮಳೆಯಾಗಿದೆ. ಇದೇ ವೇಳೆ ಭಟ್ಕಳದ ಶಿರಾಲಿ ಅಳವೆಕೋಡಿ ಭಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದೆ.

    ಚಿಕ್ಕಮಗಳೂರಿನಲ್ಲಿ ಕಳೆದ 48 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿದ್ದು, ಮೂಡಿಗೆರೆ, ಕಳಸದಲ್ಲಿ ಭಾಗದಲ್ಲಿ ಭಾರೀ ಜನರು ಸಮಸ್ಯೆ ಎದುರಿಸಿದ್ದಾರೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ಕುಂಬೂರಿನಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅಂಗನವಾಡಿಯ ಕಾಂಪೌಂಡ್ ಮೇಲೆ ಮರ ಬಿದ್ದು ಜಖಂ ಗೊಂಡಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಇಂದು ಸಂಜೆ ವೇಳೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದ ಪರಿಣಾಮ ನಗರದ ವಿವಿಧೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ.

    ಮುಂಗಾರು ಮಳೆ ಶಿವಮೊಗ್ಗ ಜಿಲ್ಲೆಯನ್ನು ದಟ್ಟವಾಗಿ ಆಕ್ರಮಿಸುತ್ತಿದ್ದು, ತೀರ್ಥಹಳ್ಳಿ ತಾಲೂಕು ಹೊರಬೈಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಪುಟ್ಟ ಸೇತುವೆ ಕೊಚ್ಚಿ ಹೋಗಿದೆ. ಸತತ ಮಳೆಯಿಂದ ಶಿವಮೊಗ್ಗ ಸೇರಿ, ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲಿನ ಕೆರೆ-ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ, ವರದ, ಶರಾವತಿ ನದಿಗಳಲ್ಲಿ ಕ್ರಮೇಣ ನೀರು ತುಂಬುತ್ತಿವೆ. ಕಳೆದ ನಾಲ್ಕು ದಿನಗಳಲ್ಲಿ ಸರಾಸರಿ 58 ಮಿಲಿ ಮೀಟರ್ ಮಳೆ ಶಿವಮೊಗ್ಗ ಜಿಲ್ಲೆಯಲ್ಲಿ ಆಗಿದೆ. ತೀರ್ಥಹಳ್ಳಿಯಲ್ಲಿ 64, ಹೊಸನಗರದಲ್ಲಿ 85, ಸಾಗರದಲ್ಲಿ 80 ಮಿಲಿ ಮೀಟರ್ ಮಳೆಯಾಗಿದೆ.

    ಬೆಂಗಳೂರಿನಲ್ಲಿ ಇನ್ನೂ ಮೂರು ದಿನಗಳ ಕಾಲ ಮೋಡ ಕವಿದ ವಾತಾವರಣ ಮತ್ತು ಹಗುರವಾದ ಸಾಧಾರಣ ಮಳೆ ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೂರು ದಿನ ಭಾರೀ ಮಳೆ ಕುರಿತು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    https://www.youtube.com/watch?v=2NCzafRx74I

    https://www.youtube.com/watch?v=N1bhCcCelos