Tag: Coalition government dissolve

  • ಎಚ್‍ಡಿಕೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ: ಅಭಿಷೇಕ್ ಅಂಬರೀಷ್

    ಎಚ್‍ಡಿಕೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ: ಅಭಿಷೇಕ್ ಅಂಬರೀಷ್

    ಬೆಂಗಳೂರು: ಮಂಗಳವಾರ ಸಿಎಂ ಸ್ಥಾನಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿರುವ ಹಿನ್ನೆಲೆ ನಟ ಅಭಿಷೇಕ್ ಅಂಬರೀಶ್ ಅವರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 8ನೇ ತಿಂಗಳ ಪುಣ್ಯತಿಥಿಯಾಗಿದ್ದು, ಸುಮಲತಾ ಅನುಪಸ್ಥಿತಿಯಲ್ಲಿ ಅಭಿಷೇಕ್ ಅಂಬರೀಷ್ ಮತ್ತು ರಾಕ್‍ಲೈನ್ ವೆಂಕಟೇಶ್ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸಿದರು.

    ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸದ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಮತ್ತು ಮುಂದಿನ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಒಬ್ಬ ಸಂಸದೆಯ ಮಗನಾಗಿ ರಾಜಕೀಯದ ಬಗ್ಗೆ ಮಾತನಾಡಲು ನಮಗೆ ಅಧಿಕಾರವಿಲ್ಲ. ಆದರೆ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಈ ಬಗ್ಗೆ ನಾನು ಮಾತನಾಡಬಹುದು ಅಷ್ಟೇ. ಏನಾಗಿದೆ ಎನ್ನುವುದು ಮಾಧ್ಯಮಗಳ ಮೂಲಕ ಇಡೀ ರಾಜ್ಯವೇ ನೋಡಿದೆ. ಸರ್ಕಾರದಲ್ಲಿ ಬದಲಾವಣೆಯಾಗಿದೆ. ರಾಜ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಕೂಡ ಅಭಿವೃದ್ಧಿ ಆಗಲಿ, ರಾಜ್ಯ ಉದ್ಧಾರವಾಗಲಿ, ಒಳ್ಳೆಯ ಕೆಲಸವಾಗಲಿ ಎಂದು ನಾವು ಬೇಡಿಕೆ ಇಡುತ್ತೇವೆ ಎಂದರು.

    ಸಿಎಂ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಅಧಿಕಾರ ಶಾಶ್ವತವಲ್ಲ ಎಂದು ಎಲ್ಲರೂ ಹೇಳಿದ್ದಾರೆ. ರಾಜಕಾರಣಿಗಳೆಲ್ಲರೂ ಮಾತನಾಡಿದ್ದಾರೆ. ಇದು ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ನಾವು ಅವರಿಗೆ ಸಲಹೆ ನೀಡುವಷ್ಟು ದೊಡ್ಡವರು ಅಲ್ಲ. ಅವರು ಅಧಿಕಾರದಲ್ಲಿ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಒಳ್ಳೆಯದು ಎನ್ನುವ ಮನೋಭಾವವಿಲ್ಲ. ಅವರು ಅಧಿಕಾರದಲ್ಲಿದ್ದರೂ ಕೂಡ ನಮ್ಮ ತಾಯಿ ಅವರ ಜೊತೆ ಕೆಲಸ ಮಾಡಲು ತಯಾರಿದ್ದರು. ಈಗ ಬೇರೆ ಸರ್ಕಾರ ಬಂದಿದೆ. ಇವರ ಜೊತೆ ಕೂಡ ನಮ್ಮ ತಾಯಿ ಕೈ ಜೋಡಿಸಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

    ಮುಂದೆ ಯಾವ ಸರ್ಕಾರ ಬಂದರೂ ಆಗ ತಮ್ಮ ತಾಯಿ ಎಂಪಿ ಆಗಿದ್ದರೆ, ಅವರ ಜೊತೆಗೂಡಿ ಕೆಲಸ ಮಾಡುತ್ತಾರೆ. ಅಭಿವೃದ್ಧಿ ಕೆಲಸ ಆಗಬೇಕೆಂದರೆ ವಿರೋಧ ಪಕ್ಷ ಅಥವಾ ಆಡಳಿತ ಪಕ್ಷ ಯಾವುದಾದರೂ ಆಗಲಿ ನಾವು ಕೆಲಸ ಮಾಡಲೇಬೇಕು. ಯಾವುದೇ ಸರ್ಕಾರ ಬಂದರೂ ನಮ್ಮ ಜವಾಬ್ದಾರಿ ನಾವು ನಿಭಾಯಿಸಲು ತಯಾರಿದ್ದೇವೆ ಎಂದಿದ್ದಾರೆ.