Tag: CM Yedyurappa

  • ಎರಡು ವರ್ಷದಿಂದ ಪ್ರಶಸ್ತಿ ಸ್ವೀಕರಿಸಲು ಕಾಯ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ

    ಎರಡು ವರ್ಷದಿಂದ ಪ್ರಶಸ್ತಿ ಸ್ವೀಕರಿಸಲು ಕಾಯ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ

    ಮೈಸೂರು: ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಶಸ್ತಿ ಕೊಡಲು ಸಿಎಂ ಯಡಿಯೂರಪ್ಪ ಅವರಿಗೆ ಸಮಯ ಸಿಗುತ್ತಿಲ್ಲ. ಹಾಗಾಗಿ ಪ್ರಶಸ್ತಿ ಸ್ವೀಕರಿಸಲು ಎರಡು ವರ್ಷದಿಂದ ಸಿಬ್ಬಂದಿ ಕಾಯುತ್ತಿದ್ದಾರೆ.

    ಪೊಲೀಸ್ ಇಲಾಖೆ ಮಾದರಿಯಲ್ಲಿ ಅರಣ್ಯ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ನೀಡಲಾಗುತ್ತದೆ. ಇದಕ್ಕಾಗಿ ಪ್ರಶಸ್ತಿ ಪಟ್ಟಿ ಕೂಡ ಪ್ರಕಟವಾಗಿದೆ. 2017ರಲ್ಲಿ ಸರ್ಕಾರದಿಂದ ಅರಣ್ಯ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ಕೊಡಲು ನಿರ್ಧಾರ ಮಾಡಲಾಗಿತ್ತು.

    2018ರಲ್ಲಿ 25 ಸಿಬ್ಬಂದಿಗೆ ಪ್ರಶಸ್ತಿ ನೀಡುವುದಾಗಿ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಪ್ರತಿ ವರ್ಷ ಮಾರ್ಚ್ 21 ವಿಶ್ವ ಅರಣ್ಯ ದಿನದಂದು ಪದಕ ವಿತರಿಸುವುದಾಗಿ ನಿರ್ಧರಿಸಲಾಗಿತ್ತು. ಆದರೆ 2018ರಲ್ಲಿ ಮಾರ್ಚ್ ನಿಂದ ಸೆಪ್ಟೆಂಬರ್ ಗೆ ಈ ಕಾರ್ಯಕ್ರಮ ಮುಂದೂಡಲಾಗಿತ್ತು. ಮತ್ತೆ ಸೆಪ್ಟೆಂಬರ್ ನಿಂದ ಮುಂದೂಡಲಾಗಿತ್ತು.

    ಇದೀಗ 2019ರ ಪಟ್ಟಿ ಕೂಡ ಪ್ರಕಟವಾಗಿ ನವೆಂಬರ್ ಬಂದರು ಪದಕ ಮಾತ್ರ ವಿತರಣೆ ಆಗಿಲ್ಲ. ಅರಣ್ಯ ಇಲಾಖೆಗೆ ಪ್ರಶಸ್ತಿ ಕೊಡಲು ಸಿಎಂಗೆ ಇಷ್ಟೊಂದು ನಿರುತ್ಸಾಹವೆ ಅಥವಾ ಸಮಯವೇ ಸಿಗುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.

  • ಪ್ರವಾಹ ಸಂತ್ರಸ್ತರಿಗೆ ನಟ ಪುನೀತ್‍ರಿಂದ 5 ಲಕ್ಷ ರೂ. ನೆರವು

    ಪ್ರವಾಹ ಸಂತ್ರಸ್ತರಿಗೆ ನಟ ಪುನೀತ್‍ರಿಂದ 5 ಲಕ್ಷ ರೂ. ನೆರವು

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಂದು ಪ್ರವಾಹ ಸಂತ್ರಸ್ತರಿಗಾಗಿ ಸಿಎಂ ಪರಿಹಾರ ನಿಧಿಗೆ 5 ಲಕ್ಷ ರೂ. ನೆರವು ನೀಡಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಅವರು ಸಂತ್ರಸ್ತರಿಗಾಗಿ 5 ಲಕ್ಷ ರೂ. ಚೆಕ್ ನೀಡಿದ್ದಾರೆ. ಬಳಿಕ ಯಡಿಯೂರಪ್ಪ ಅವರು ಪುನೀತ್ ರಾಜ್‍ಕುಮರ್ ಅವರಿಗೆ ಬಿಳ್ಕೊಟ್ಟರು.

    ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪುನೀತ್ ಅವರು, “ಚೆಕ್ ಕೊಡಲು ಎಂದು ಸಿಎಂ ನಿವಾಸಕ್ಕೆ ಬಂದಿದ್ದೇನೆ. ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಬಂದು ಹೇಳಿದ ಮೇಲೆ ಎಲ್ಲ ಕಡೆ ಅಭಿಮಾನಿಗಳು ಹಾಗೂ ಜನರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇದನ್ನು ನೋಡಿ ತುಂಬಾ ಖುಷಿ ಆಗುತ್ತಿದೆ. ಆದರೂ ಈಗ ಆಗಿರುವಂತಹ ನಷ್ಟಗಳನ್ನು ಪರಿಹಾರಕ್ಕೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಇದಕ್ಕಾಗಿ ಹಾಕಿಕೊಂಡಿದ್ದೇವೆ” ಎಂದರು.

    ರಿಯಲ್ ಸ್ಟಾರ್ ಉಪೇಂದ್ರ ಅವರು ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಸಹಾಯಧನ ನೀಡಿದ್ದರು. ಈ ಬಗ್ಗೆ ಉಪೇಂದ್ರ ಅವರು ತಮ್ಮ ಟ್ವಿಟ್ಟರಿನಲ್ಲಿ, “ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡುತ್ತಿದ್ದೇನೆ. ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದರು.